ಮಂಗಳವಾರ, ಮೇ 18, 2021
24 °C

ಸೇನಾ ಮಾಹಿತಿ ಸೋರಿಕೆ ಅಪರಾಧವಲ್ಲ...

ಕುಲದೀಪ ನಯ್ಯರ್ Updated:

ಅಕ್ಷರ ಗಾತ್ರ : | |

ದೆಹಲಿಯತ್ತ ಸೇನೆಯ 800 ತುಕಡಿಗಳು ಸಾಗುತ್ತಿವೆ ಎಂಬುದಾಗಿ ಮಾಹಿತಿ ನೀಡಿದ ಇಂಡಿಯನ್ ಎಕ್ಸ್‌ಪ್ರೆಸ್ ಪತ್ರಿಕೆಯು ತನ್ನದೊಂದು ವರದಿಯಲ್ಲಿ ಸೇನಾದಂಗೆಯ ಸಾಧ್ಯತೆಗಳ ಬಗ್ಗೆ ಬರೆಯಿತು.ಅದೇನೇ ಇರಲಿ, ಇಂತಹದ್ದೊಂದು ವರದಿಯ ಬಗ್ಗೆ ನಾನೇನೂ ಹೇಳುವುದಿಲ್ಲ. ಆ ವರದಿಯ ಸುದ್ದಿ ಮೂಲದ ಬಗ್ಗೆ ನನಗೆ ಯಾವುದೇ ಅರಿವಿಲ್ಲ. ಆದರೆ ಸೇನಾ ಮುಖ್ಯಸ್ಥ ವಿ.ಕೆ.ಸಿಂಗ್ ಅವರು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಬರೆದ ಪತ್ರದಲ್ಲಿದ್ದ ಮಾಹಿತಿಗಳು ಹೇಗೆ ಸೋರಿಕೆಯಾಯಿತು ಎಂಬ ಬಗ್ಗೆ ನನಗೆ ಕುತೂಹಲವಿದೆ.

 

ನಮ್ಮ ರಕ್ಷಣಾ ವ್ಯವಸ್ಥೆಯಲ್ಲಿರುವ ದೌರ್ಬಲ್ಯಗಳ ಬಗ್ಗೆ ಮತ್ತು ನಮ್ಮಲ್ಲಿರುವ ಅತ್ಯಾಧುನಿಕವಲ್ಲದ ಶಸ್ತ್ರಾಸ್ತ್ರಗಳ ಕುರಿತು ಸೇನಾ ಮುಖ್ಯಸ್ಥರು ಕೆಲವು ವಾಸ್ತವಾಂಶಗಳನ್ನು ಆ ಪತ್ರದಲ್ಲಿ ಬರೆದಿದ್ದರು.ಆ ಪತ್ರದಲ್ಲಿ ಪ್ರಸ್ತಾಪವಾಗಿರುವ ಸೇನೆಯ ಕುಂದುಕೊರತೆಗಳ ಬಗ್ಗೆ ಗಂಭೀರವಾಗಿ ಯೋಚಿಸಬೇಕಾದ ಸರ್ಕಾರ, ಆ ಪತ್ರದ ಮಾಹಿತಿಗಳು  ಹೇಗೆ ಸೋರಿಕೆಯಾದವು ಎಂಬ ಬಗ್ಗೆಯೇ ಹೆಚ್ಚು ತಲೆಕೆಡಿಸಿಕೊಂಡಿರುವುದು ಮಾತ್ರ ವಿಪರ್ಯಾಸವೇ ಹೌದು.ಸೇನೆ ಒಂದು ರೀತಿಯಲ್ಲಿ ಪವಿತ್ರ ಹಸುವಿದ್ದಂತೆ. ಸೇನೆಯ ಬಗ್ಗೆ ಸಾಮಾನ್ಯವಾಗಿ ಮಾಧ್ಯಮಗಳೇ ಅಗಲಿ, ರಾಜಕೀಯ ಪಕ್ಷಗಳೇ ಆಗಲಿ, ಟೀಕೆಗಳನ್ನು ಮಾಡುವುದಿಲ್ಲ. ಆ ರೀತಿ ಮಾಡುವುದು ದೇಶದ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡಂತೆಯೇ ಎಂಬ ಭಾವನೆಯೂ ನಮ್ಮೆಲ್ಲರ ನಡುವೆ ಇದೆ.ಹೀಗಾಗಿ ಸೇನೆಯ ಒಳಗಿರುವ ಹುಳುಕುಗಳು ಗೊತ್ತಾಗುವುದೇ ಇಲ್ಲ. ಕನಿಷ್ಠ ಮಟ್ಟದ ಟೀಕೆ ಕೂಡಾ ಸೇನೆಯ ನೈತಿಕತೆಯನ್ನು ಕುಂದಿಸುತ್ತದೇನೋ ಎಂಬ ನಂಬಿಕೆ ನಮ್ಮೆಲ್ಲರದು. ಇಂತಹ ಪರಿಸ್ಥಿತಿಯಲ್ಲಿ `ಮಾಧ್ಯಮ ಕುಟುಂಬ~ದ ಸದಸ್ಯರೊಬ್ಬರು ಸೇನಾ ಮುಖ್ಯಸ್ಥರು ಬರೆದ ಪತ್ರವೊಂದರ ನಿಖರ ಮಾಹಿತಿಗಳನ್ನು ಬಹಿರಂಗಗೊಳಸಿದ್ದಾರೆಂದರೆ ಇದು ನನ್ನ `ಕುಟುಂಬ~ದ ಬಗ್ಗೆ ಹೆಮ್ಮೆ ಪಡುವಂತಹ ಸಂಗತಿಯೇ ಆಗಿದೆ.ಮಾಧ್ಯಮದ ವ್ಯಕ್ತಿ ಎಂದರೆ ಜನರಿಗೆ ಮಾಹಿತಿಗಳನ್ನು ಒದಗಿಸುವವನು. ಜತೆಗೆ ತೆರೆಯ ಮರೆಯಲ್ಲಿ ನಡೆಯುವ ಸಂಗತಿಗಳನ್ನು ಜನರಿಗೆ ತಲುಪಿಸುವ ಜವಾಬ್ದಾರಿಯನ್ನೂ ಹೊಂದಿದ್ದಾನೆ. ಸರ್ಕಾರ ತಾನು ನಡೆಸುವ ಕೆಲವು ರಹಸ್ಯ ಚಟುವಟಿಕೆಗಳ ಸಾಕ್ಷ್ಯಾಧಾರಗಳು ಸಾರ್ವಜನಿಕರಿಗೆ ಸಿಗುವಂತಾಗುವುದನ್ನು ಇಷ್ಟಪಡುವುದಿಲ್ಲ ಎಂಬುದು ನಿಜ.ಅದರ ಅರ್ಥ, ಅಂತಹ ಸಂಗತಿಗಳನ್ನು, ಸಾಕ್ಷ್ಯಾಧಾರಗಳನ್ನು ಬಯಲುಗೊಳಿಸಿದ್ದಕ್ಕಾಗಿ ಸಂಬಂಧಪಟ್ಟ ಪತ್ರಕರ್ತರನ್ನು ಶಿಕ್ಷಿಸಬೇಕೆಂದೇನಿಲ್ಲ. ಮುಕ್ತ ಸಮಾಜದಲ್ಲಿ ಮಾಹಿತಿಗಳೂ ಮುಕ್ತವಾಗಿರಲೇಬೇಕು. ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಕೂಡಾ ಇದನ್ನೇ ಬಯಸಿದ್ದರು. `ಮಾಧ್ಯಮಕ್ಕೆ ಸಂಪೂರ್ಣ ಸ್ವಾತಂತ್ರ್ಯ ನೀಡುವುದರಿಂದ ಕೆಲವೊಮ್ಮೆ ಅದರ ದುರುಪಯೋಗ ನಡೆದು ಅಪಾಯಗಳುಂಟಾಗುವ ಕಲ್ಪನೆಗಳು ನನಗಿದ್ದರೂ ನಾನು ಮಾಧ್ಯಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇರಬೇಕೆಂದೇ ಬಯಸುತ್ತೇನೆ~ ಎಂದು ಅವರು ಪ್ರತಿಪಾದಿಸಿದ್ದರು.ಅದೇನೇ ಇರಲಿ, ಪ್ರಸಕ್ತ ರಕ್ಷಣಾ ಸಚಿವ ಎ.ಕೆ.ಆಂಟನಿ ಮತ್ತು ವಿ.ಕೆ.ಸಿಂಗ್ ಅವರ ನಡುವಣ ವಿವಾದ, ವಾಗ್ವಾದಗಳೆಲ್ಲವೂ ನಾಗರಿಕ ಸೇವಾ ವಲಯದವರು ಮತ್ತು ಸೇನಾ ವಲಯಗಳ ನಡುವಣ ಚರ್ಚೆಯ ಸಂಗತಿಗಳೇ ಆಗಿಬಿಟ್ಟಿವೆ. ವಿಶೇಷವೆಂದರೆ ಸೇನೆಯ ಬಹುತೇಕ ನಿವೃತ್ತ ಉನ್ನತಾಧಿಕಾರಿಗಳೆಲ್ಲರೂ ವಿ.ಕೆ.ಸಿಂಗ್ ಪರ ನಿಂತರೆ, ನಾಗರಿಕ ಸೇವಾ ವಲಯದವರು ಆಂಟನಿ ಪರ ಮಾತನಾಡಿದ್ದಾರೆ.ಕೊನೆಗೆ ವಾದವಿವಾದಗಳು ಸೇನೆ ಮತ್ತು ನಾಗರಿಕ ಸೇವೆ ವಿಭಾಗದವರ ನಡುವಣ ಕಿತ್ತಾಟ ಎಂಬಂತೆ ಬಿಂಬಿಸಲ್ಪಟ್ಟಿವೆ. ಇದು ಸರಿಯಲ್ಲ. ಸೇನಾ ಮುಖ್ಯಸ್ಥರೊಬ್ಬರ ನಿಲುವು ಮತ್ತು ಅದಕ್ಕೆ ರಕ್ಷಣಾ ಸಚಿವರ ಭಿನ್ನಾಭಿಪ್ರಾಯವೇ ಇಲ್ಲಿರುವ ಮುಖ್ಯ ಸಂಗತಿಯಾಗಿದೆ.ಈ ವಿಷಯಕ್ಕೆ ಸಂಬಂಧಿಸಿದಂತೆ ಎರಡೂ ಕಡೆಯವರು ಸಮರ್ಪಕವಾಗಿ ನಿಭಾಯಿಸಿಲ್ಲ ಎನ್ನುವುದೂ ನಿಜ. ಇದನ್ನು ನೋಡಿದರೆ ಎರಡೂ ಕಡೆಯವರು ಪರಸ್ಪರ ಒಬ್ಬರ ಮೇಲೊಬ್ಬರು ಕೆಸರು ಎರಚಾಟದಲ್ಲಿ ತೊಡಗಿರುವಂತೆ ಕಾಣಿಸುತ್ತದೆ. ಒಂದು ಪ್ರಜಾಪ್ರಭುತ್ವ ವ್ಯವಸ್ಥೆಯ ಘನತೆಯನ್ನು ಎತ್ತಿ ಹಿಡಿಯುವ ರೀತಿಯಲ್ಲಿ ಈ ಪ್ರಕರಣ ಇಲ್ಲ ಎಂದು ಕೆಲವು ಹಿರಿಯ ಸೇನಾಧಿಕಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.ಇದೀಗ ನಾನು ಸೇನಾ ಮುಖ್ಯಸ್ಥರ ವಯೋಮಿತಿ ವಿವಾದದ ಕುರಿತು ಚರ್ಚಿಸಲು ಇಚ್ಛಿಸುವುದಿಲ್ಲ. ನಾನೀಗ ಭ್ರಷ್ಟಾಚಾರ ಮತ್ತು ಕಳಪೆ ಸಲಕರಣೆ, ಶಸ್ತ್ರಾಸ್ತ್ರಗಳ ಬಗ್ಗೆಯಷ್ಟೇ ಚರ್ಚಿಸಲು ಬಯಸುತ್ತೇನೆ. ವಿ.ಕೆ.ಸಿಂಗ್ ನೀಡಿರುವ ಹೇಳಿಕೆಯೊಂದರಲ್ಲಿ `ನಿವೃತ್ತ ಸೇನಾಧಿಕಾರಿಯೊಬ್ಬರು ನನ್ನನ್ನು ಸಂಪರ್ಕಿಸಿ ಸೇನೆಗೆ ಒಂದಷ್ಟು ಟ್ರಕ್‌ಗಳನ್ನು ಖರೀದಿಸುವುದಕ್ಕೆ ಸಂಬಂಧಿಸಿ ಚರ್ಚಿಸಿದರು.

 

ಅವರೇ ಹೇಳಿದ ಕಂಪೆನಿಯ ಟ್ರಕ್‌ಗಳನ್ನು ಖರೀದಿಸಿದರೆ 14 ಕೋಟಿ ರೂಪಾಯಿಗಳನ್ನು ನೀಡುವುದಾಗಿ ಆಮಿಷ ಒಡ್ಡಿದ್ದರು. ಆದರೆ ಆ ಟ್ರಕ್ಕುಗಳು ಸೇನೆಯ ಅಗತ್ಯಗಳನ್ನು ಪೂರೈಸುವಂತಹ ಗುಣಮಟ್ಟದ್ದಾಗಿರಲಿಲ್ಲ~ ಎಂದಿದ್ದಾರೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸೇನಾ ಮುಖ್ಯಸ್ಥರು ಇಂತಹ ವಿಧಾನದಲ್ಲಿ ದೂರು ಸಲ್ಲಿಸಬೇಕಿತ್ತು, ಅಂತಹ ವಿಧಾನದಲ್ಲಿ ಅವರು ತನಿಖೆ ನಡೆಸಬೇಕಿತ್ತು ಎಂಬ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಇವೆಲ್ಲವೂ ಕೂಡಾ ಪ್ರಕರಣವನ್ನು ದಿಕ್ಕು ತಪ್ಪಿಸುವಂತಹದೇ ಆಗಿವೆ. ಅದೇನೇ ಇದ್ದರೂ, ಸೇನಾ ಮುಖ್ಯಸ್ಥರು ಈ ಕುರಿತು ತಮ್ಮ ಗಮನಕ್ಕೆ ತಂದ ಒಡನೆಯೇ ರಕ್ಷಣಾ ಸಚಿವರು ಈ ಬಗ್ಗೆ ಕಾರ್ಯಪ್ರವತ್ತರಾಗಬೇಕಿತ್ತು.ಈ ಬಗ್ಗೆ ಸಿಬಿಐಗೆ ಲಿಖಿತ ದೂರು ನೀಡುವುದು ಇತ್ಯಾದಿಗಳೆಲ್ಲಾ ಅಧಿಕಾರಿಶಾಹಿ ನಡವಳಿಕೆಗಳಾಗಿವೆ. ಸೇನಾ ಮುಖ್ಯಸ್ಥರು ಈಗ ಇದನ್ನೇ ಮಾಡಿರುವುದು. ಸೇನೆಗಿಂತ ಅಧಿಕಾರಿಶಾಹಿಯೇ ಪ್ರಬಲ ಎಂಬುದು ಇದರಿಂದ ಗೊತ್ತಾಗುತ್ತದೆ. ಇಂತಹ ಬಾಲಿಶ ಚಟುವಟಿಕೆಗಳಲ್ಲೇ ಅಧಿಕಾರಿಶಾಹಿ ದಶಕಗಳಿಂದಲೂ ತೊಡಗಿಕೊಂಡೇ ಬಂದಿದೆ.ರಕ್ಷಣಾ ಸಚಿವಾಲಯ ಮತ್ತು ಸೇನಾ ಕೇಂದ್ರಗಳಲ್ಲಿ ಕೆಲಸ ಮಾಡುವವರು ಸೇನೆಗೇ ಸೇರಿರಲಿ, ನಾಗರಿಕ ಸೇವೆಯ ಸಿಬ್ಬಂದಿ ವಿಭಾಗಕ್ಕೆ ಸೇರಿದವರೇ ಆಗಿರಲಿ ಎಲ್ಲರೂ ಸರ್ಕಾರಿ ನೌಕರರು ತಾನೆ. ಈ ಎರಡೂ ವರ್ಗಗಳ ನಡುವಣ ಪರಸ್ಪರ ಅಸಹನೆ, ಅಸಹಕಾರಗಳು ಇನ್ನಿಲ್ಲದ ಸಮಸ್ಯೆಗಳಿಗೂ ಕಾರಣವಾಗಿವೆ.ಒಂದು ಗುಂಪು ಇನ್ನೊಂದು ಗುಂಪಿನ ಮೇಲೆ ಕೆಂಡ ಕಾರುವ ಪ್ರವೃತ್ತಿಯೇ ದೇಶಕ್ಕೆ ಕೆಡುಕುಂಟು ಮಾಡಲು ಸಾಧ್ಯವಿದೆ. ಎರಡೂ ಕಡೆಯವರೂ ಒಂದೇ ದೋಣಿಯಲ್ಲಿ ಸಾಗುತ್ತಿರುವವರು. ಎರಡೂ ಕಡೆ ಗುದ್ದಾಟ, ಏರುಪೇರುಗಳಿಂದ ಸೇನೆಗೂ ಒಳ್ಳೆಯದಾಗುವುದಿಲ್ಲ.ಎರಡೂ ವರ್ಗಗಳ ನಡುವೆ ಸಣ್ಣಪುಟ್ಟ ಅಸಮಾಧಾನಗಳೇ ದೊಡ್ಡದಾಗಿ ಪ್ರತಿಷ್ಠೆಯ ಕಣಗಳಾಗಿ ಪರಿವರ್ತನೆಗೊಂಡಿರುವುದೇ ಹೆಚ್ಚು. ಹೀಗಾಗಿ ಕೆಲವೊಮ್ಮೆ ಶಸ್ತ್ರಾಸ್ತ್ರಗಳ ಸರಬರಾಜಿನಲ್ಲೂ ವ್ಯತ್ಯಯವಾಗಿದ್ದೂ ಉಂಟು.ಚೀನಾ ವಿರುದ್ಧ 1962ರಲ್ಲಿ ನಡೆದಿದ್ದ ಯುದ್ಧದಲ್ಲಿ ಭಾರತೀಯ ಯೋಧರು ಕಳಪೆ ಶಸ್ತ್ರಾಸ್ತ್ರ ಸಲಕರಣೆಗಳನ್ನು ಬಳಸಿದ್ದರಿಂದ ಸೋಲು ಅನುಭವಿಸಬೇಕಾಯಿತು ಎನ್ನುವ ಮಾತಿದೆ. ಹಲವು ವರ್ಷಗಳ ಹಿಂದೆಯೇ ಗುಜರಿಗೆ ಎಸೆಯಬೇಕಿದ್ದ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡೇ ಯೋಧರು ಸಮರ ಭೂಮಿಗೆ ಇಳಿದಿದ್ದರು ! ಅಂದು ಪ್ರಧಾನಿ ನೆಹರು ಅವರಿಗೆ ಆ ಸಂಗತಿಗಳಾವುದೂ ಗೊತ್ತಾಗಿರಲಿಲ್ಲ.

 

ಇಂದು ಪ್ರಧಾನಿ ಮನಮೋಹನ್ ಸಿಂಗ್ ಅವರೂ ಇಂತಹ ವಿಷಯಗಳಿಗೆ ಸಂಬಂಧಿಸಿದಂತೆ ಕತ್ತಲಲ್ಲೇ ಇದ್ದಾರೆ. ಇಂತಹದ್ದೊಂದು ವಾಸ್ತವದ ಮೇಲೆ ಪ್ರಧಾನಿಯವರ ಗಮನ ಸೆಳೆಯುವ ದಿಸೆಯಲ್ಲಿ ಸೇನಾ ಮುಖ್ಯಸ್ಥರ ಪತ್ರ ಮಹತ್ವಪೂರ್ಣವೇ ಹೌದು. ಈ ಪತ್ರದಲ್ಲಿ `ಸೇನೆಯ ಬಹು ಮುಖ್ಯ ಘಟಕವಾದ ಆರ್ಟಿಲರಿಯು ದುರ್ಬಲವಾಗಿದೆ.

 

ಟ್ಯಾಂಕುಗಳಿಗೆ ಬಳಸುವ ಮದ್ದುಗುಂಡುಗಳೂ ಕಳಪೆ, ಇನ್‌ಫ್ಯಾಂಟ್ರಿ ವಿಭಾಗದಲ್ಲಂತೂ ಅವಧಿ ಮೀರಿದ ಮತ್ತು ಓಬಿರಾಯನ ಕಾಲದ ಶಸ್ತ್ರಾಸ್ತ್ರಗಳೇ ತುಂಬಿ ಕೊಂಡಿವೆ~ ಇತ್ಯಾದಿ ಕುತೂಹಲಕಾರಿ ಅಂಶಗಳನ್ನು ಹೇಳಲಾಗಿದೆ.ಸೇನಾ ಮುಖ್ಯಸ್ಥರು ಪ್ರಧಾನಿಯವರಿಗೆ ಬರೆದಿರುವ ಪತ್ರವು ಬಹಳ ಕುತೂಹಲಕಾರಿ ಮತ್ತು ಆತಂಕದ ಸಂಗತಿಗಳನ್ನು ಬಯಲುಗೊಳಿಸಿದೆ. ಸೇನೆ ಸಜ್ಜುಗೊಂಡಿಲ್ಲದಿರುವುದೇ ಸರ್ಕಾರಕ್ಕೆ ಆತಂಕದ ವಿಷಯವಾಗಿ ಕಾಡಬೇಕೇ ಹೊರತು, ಇಂತಹ ಅಂಶಗಳನ್ನು ಒಳಗೊಂಡಿರುವ ಪತ್ರದ ಮಾಹಿತಿಗಳು ಬಯಲುಗೊಂಡಿರುವುದಲ್ಲ.

            (ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.