ಸೇನೆಯ ವೃತ್ತಿಪರತೆ ಮತ್ತು ಮಾನವ ಗುರಾಣಿ

7

ಸೇನೆಯ ವೃತ್ತಿಪರತೆ ಮತ್ತು ಮಾನವ ಗುರಾಣಿ

ಶೇಖರ್‌ ಗುಪ್ತ
Published:
Updated:
ಸೇನೆಯ ವೃತ್ತಿಪರತೆ ಮತ್ತು ಮಾನವ ಗುರಾಣಿ

ಬ್ರಿಗೇಡಿಯರ್‌ ಜನರಲ್‌ ರೆಗಿನಾಲ್ಡ್‌ ಡಾಯರ್‌, ಬ್ರಿಟಿಷ್‌ ಪ್ರಜೆಯಾಗಿದ್ದರೂ ಭಾರತದ ಸೇನೆಯ ಉನ್ನತ  ಅಧಿಕಾರಿಯಾಗಿದ್ದವರು. ಬೈಸಾಕಿ ಆಚರಿಸಲು ಸೇರಿದ್ದ, ಶಾಂತಿಯಿಂದ ಇದ್ದ ಜನಸಮೂಹದ ಮೇಲೆ ಗುಂಡಿನ ಮಳೆಗರೆಯಲು 50 ಸೈನಿಕರಿಗೆ ಡಾಯರ್‌ ಆದೇಶಿಸಿದ್ದರಿಂದ 396 ಜನರು ಹತರಾಗಿದ್ದರು, ಸಾವಿರಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಭಾರತೀಯ ಸೇನೆಯ ಸೈನಿಕರು ತಮ್ಮದೇ ದೇಶಬಾಂಧವರ ವಿರುದ್ಧ ಗುಂಡಿನ ದಾಳಿ ನಡೆಸಿದ ಹೇಯ ಕೃತ್ಯ ಅದಾಗಿತ್ತು.

25 ವರ್ಷಗಳಲ್ಲಿ ಇದೇ ಸೇನೆಯು ಸಣ್ಣ ಪ್ರಮಾಣದ, ಏಕಪಕ್ಷೀಯ ಐತಿಹಾಸಿಕ ಯುದ್ಧದಲ್ಲಿ ಎರಡೂ ಕಡೆಗಳಲ್ಲಿ ಹೋರಾಟ ನಡೆಸಿತ್ತು. ಮಿತ್ರ ಪಡೆಗಳ ಜತೆಗಿನ ಸಮರದಲ್ಲಿ ಸೆರೆ ಸಿಕ್ಕಿದ್ದ ಯುದ್ಧ ಕೈದಿಗಳನ್ನು ಒಳಗೊಂಡಿದ್ದ ಸುಭಾಷ್‌ಚಂದ್ರ ಬೋಸ್‌ ಅವರ ಇಂಡಿಯನ್‌ ನ್ಯಾಷನಲ್‌ ಆರ್ಮಿ ಜತೆಗೆ ಭಾರತದ ಸೇನೆ ಹೋರಾಡಿತ್ತು. ಬ್ರಿಟಿಷ್‌ ಕಮಾಂಡರ್‌ನ ನೇತೃತ್ವದಲ್ಲಿ ತಮ್ಮದೇ ಸೋದರರ ವಿರುದ್ಧ ಸೈನಿಕರು ಹೋರಾಡಿದ್ದರು.

ಎರಡೂ ಕಡೆಯ ಸೈನಿಕರು ತಮ್ಮ ಕಮಾಂಡರ್‌ನ ವಿಶ್ವಾಸಕ್ಕೆ ಎರವಾಗದ ರೀತಿಯಲ್ಲಿ ನಿಷ್ಠೆಯಿಂದಲೇ ಹೋರಾಡಿದ್ದರು. ಈ ಯುದ್ಧ ನಡೆದ ಕೇವಲ ಮೂರು ವರ್ಷಗಳಲ್ಲಿ 1947–48ರಲ್ಲಿ ಇದೇ ಸೇನೆಯು ಕಾಶ್ಮೀರದಲ್ಲಿ ದೇಶದ ಭೂಪ್ರದೇಶ ರಕ್ಷಿಸಿಕೊಳ್ಳುವ ಯುದ್ಧದಲ್ಲಿ ಭಾಗಿಯಾಗಿತ್ತು. ಈ ಸಂದರ್ಭದಲ್ಲಿ ತಮ್ಮವರನ್ನೇ ಕೊಲ್ಲುವ ಅಹಿತಕರ ಕೃತ್ಯದಲ್ಲಿ ಭಾಗಿಯಾಗಬೇಕಾಗಿತ್ತು.

ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕು, ಹೊಸದಾಗಿ ಸ್ವಾತಂತ್ರ್ಯ ಪಡೆದ ದೇಶದ ಪರವಾಗಿ ಮೊದಲ ಬಾರಿಗೆ ಯುದ್ಧ ನಡೆದಾಗ ಬ್ರಿಟನ್ನಿನ ಜನರಲ್‌ ರಾಬರ್ಟ್‌ ಲಾಕ್ಹರ್ಟ್‌, ಭಾರತದ ಸೇನೆಯ ಮುಖ್ಯಸ್ಥರಾಗಿದ್ದರು. ಕಾಶ್ಮೀರದಲ್ಲಿ ಕದನ ವಿರಾಮ ಜಾರಿಗೆ ಬಂದ ನಂತರ  ಭಾರತದ ಸೇನೆಯ ಮೊದಲ ಮುಖ್ಯಸ್ಥರಾಗಿ ಚೀಫ್‌ ಜನರಲ್‌ ಕೆ. ಎಂ. ಕಾರ್ಯಪ್ಪ ಅವರು 1949ರಲ್ಲಿ ಅಧಿಕಾರ ವಹಿಸಿಕೊಂಡಿದ್ದರು.

ವಸಾಹತುಶಾಹಿ ಭಾರತದ ಸೇನೆಯು ಆರಂಭದಲ್ಲಿ ಎರಡು ಭಾಗಗಳಾಗಿ ವಿಭಜನೆಗೊಂಡಿತ್ತು. ಬಾಂಗ್ಲಾದೇಶ ಅಸ್ತಿತ್ವಕ್ಕೆ ಬರುತ್ತಿದ್ದಂತೆ ಮೂರು ಭಾಗಗಳಾಗಿತ್ತು. ಪಾಕಿಸ್ತಾನ ಸೇನೆಯು ದಶಕಗಳ ಕಾಲ ಅಧಿಕಾರದ ಮೇಲೆ ತನ್ನ ಪರೋಕ್ಷ ನಿಯಂತ್ರಣವನ್ನು ಬಿಗಿಗೊಳಿಸಿತ್ತು.

ಸೇನಾ ಕ್ರಾಂತಿ ಹೆಸರಿನಲ್ಲಿ ನಾಗರಿಕ ಸರ್ಕಾರವನ್ನು ಪದಚ್ಯುತಿಗೊಳಿಸಿ ಕೆಟ್ಟ ಹೆಸರು ಗಳಿಸಿಕೊಂಡಿತ್ತು. ಆದರೆ, ಸೇನೆ ನಡೆಸಿದ ಪ್ರತಿಯೊಂದು ರಕ್ತರಹಿತ ಕ್ರಾಂತಿಯೂ ಜನಮನ್ನಣೆಗೆ ಪಾತ್ರವಾಗಿತ್ತು. ಇನ್ನೊಂದೆಡೆ, ಬಾಂಗ್ಲಾ ದೇಶ ಸೇನೆಯು ಆಧುನಿಕತೆ ಮೈಗೂಡಿಸಿಕೊಂಡು, ವೃತ್ತಿಪರತೆಯ ಪ್ರಬುದ್ಧತೆಯ ಜತೆಗೆ ರಾಜಕೀಯಕ್ಕೆ ಹೊರತಾದ ಶಕ್ತಿಯಾಗಿ ಬೆಳೆದಿದೆ.

ಸ್ವಾತಂತ್ರ್ಯಾನಂತರ ಭಾರತದಲ್ಲಿ, ಸೇನೆಯು  ರಾಜಕೀಯದಿಂದ ದೂರ ಉಳಿದಿದೆ. ನಿಜವಾದ ಅರ್ಥದಲ್ಲಿ ರಾಜಕೀಯಕ್ಕೆ ಹೊರತಾದ, ಜಾತ್ಯತೀತ ಮತ್ತು ಉದಾರ ಮನೋಭಾವದ ಸೇನೆಯಾಗಿ ಬೆಳೆದು, ರಾಜಕೀಯದ ಪ್ರಭುತ್ವವನ್ನು ಗೌರವಿಸುತ್ತಲೇ ಬಂದಿದೆ.

ವಸಾಹತುಶಾಹಿ ಮತ್ತು ಎರಡನೆ ಮಹಾಯುದ್ಧ  ಕೊನೆಗೊಂಡ ನಂತರದ ದಿನಗಳಲ್ಲಿ ಆಫ್ರಿಕಾ, ಪಶ್ಚಿಮ ಏಷ್ಯಾ, ಲ್ಯಾಟಿನ್‌ ಅಮೆರಿಕ, ಪೂರ್ವ ಏಷ್ಯಾ ಮತ್ತು ದಕ್ಷಿಣ ಏಷ್ಯಾ ಹೊರತುಪಡಿಸಿದ ದೇಶಗಳಲ್ಲಿನ ಸೇನಾಪಡೆಗಳ ಕಾರ್ಯ ವೈಖರಿಯು ಅಧ್ಯಯನಕ್ಕೆ ಸೂಕ್ತ ಸರಕಾಗಿದೆ.

ಈ ಎಲ್ಲ ದೇಶಗಳ ಸೇನೆಗಳು ರಾಜಕೀಯದಿಂದ ದೂರ ಉಳಿದಿರುವ ಮತ್ತು ಸಂವಿಧಾನದ ಅನ್ವಯ ಅಧಿಕಾರ ವಹಿಸಿಕೊಂಡ ಸರ್ಕಾರದ ಆದೇಶಗಳನ್ನು ಪಾಲಿಸಿದ ನಿದರ್ಶನಗಳು ತುಂಬ ಕಡಿಮೆ. ಆದರೆ, ಭಾರತದ ಸೇನೆಯು ರಾಜಕೀಯದಿಂದ ಅಂತರ ಕಾಯ್ದುಕೊಂಡಿತ್ತು. 

ಬ್ರಿಟಿಷರು  ದೇಶ ಬಿಟ್ಟು ಹೊರ ನಡೆದ ನಂತರದ ದಿನಗಳಲ್ಲಿ ಭಾರತೀಯ ಸೇನೆಗೆ ಸಂಬಂಧಿಸಿದಂತೆ ವ್ಯಾಪಕ ಅಧ್ಯಯನಗಳು  ನಡೆದಿವೆ.

ದಾಖಲೆಗಳನ್ನು ಸಂಗ್ರಹಿಸಿ ಇಡಲಾಗಿದೆ. ಸೇನಾ ವ್ಯವಹಾರಗಳಿಗೆ ಸಂಬಂಧಿಸಿದ ವಿದ್ವಾಂಸರು ಮತ್ತು ಇತಿಹಾಸ ತಜ್ಞರು ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿದ್ದಾರೆ.1962ರ ಯುದ್ಧದಲ್ಲಿನ ಸೋಲಿನ ಕುರಿತ ವಿದ್ಯಮಾನಗಳನ್ನು ಅತ್ಯುತ್ತಮವಾಗಿ ದಾಖಲಿಸಿ ಇಡಲಾಗಿದೆ. ಸೇನೆಯಲ್ಲಿ ಬರವಣಿಗೆಗೆ ಬದ್ಧರಾದ ಅನೇಕರು ಇದ್ದರು. ಅವರೆಲ್ಲ ಬ್ರಿಟಿಷರಿಂದ ಸೇನಾ ಸಾಹಸಗಳನ್ನು ಕಥೆಗಳ ರೂಪದಲ್ಲಿ ಹೇಳುವುದನ್ನು ಕಲಿತು ಅದನ್ನು ಅಕ್ಷರರೂಪಕ್ಕೆ ಇಳಿಸಿದ್ದರು.

ಆದರೆ, ಕ್ರಮೇಣ ನಮ್ಮ ಸೇನಾ ಸಾಹಿತ್ಯದ ಪ್ರಮಾಣ ಮತ್ತು ವಿದ್ವಾಂಸರ ಸಂಖ್ಯೆ ಕ್ಷೀಣಿಸತೊಡಗಿತು.  ಲೆಫ್ಟಿನಂಟ್‌ ಜನರಲ್‌ ಹರಬಕ್ಷ ಸಿಂಗ್‌ ಅವರ ‘ವಾರ್‌ ಡಿಸ್ಪ್ಯಾಚಸ್‌’ ಮತ್ತು ಏರ್‌ ಚೀಫ್‌ ಮಾರ್ಷಲ್‌ ಪಿ. ಸಿ. ಲಾಲ್‌ ಅವರ ‘ಮೈ ಇಯರ್ಸ್‌ ವಿತ್‌ ಐಎಎಫ್‌’ ಪುಸ್ತಕವು 1971ರಲ್ಲಿ ನಡೆದ ಯುದ್ಧದ ಸಂದರ್ಭದಲ್ಲಿನ ವೈಮಾನಿಕ ದಾಳಿ ಕುರಿತ ದಾಖಲೆಯಾಗಿದೆ. ಈ ಪುಸ್ತಕವು ಯುದ್ಧದ ಘಟನಾವಳಿಗಳನ್ನು ದಾಖಲಿಸಿರುವುದರ ಜತೆಗೆ,  ಭಾರತದ ಸೇನೆಯು ಸರ್ಕಾರದ ಜತೆ ಬಾಂಧವ್ಯ ರೂಪಿಸಿಕೊಂಡು ಬಂದ ಬಗೆ ಮತ್ತು ಅದರ ಚಿಂತನಾ ಕ್ರಮವನ್ನೂ  ಹೇಳುವ ಅಪರೂಪದ ಕೃತಿಯಾಗಿದೆ.

ಸ್ಟೀಫನ್‌ ಕೊಹೆನ್‌ ಅವರ, ‘ದಿ ಇಂಡಿಯನ್‌ ಆರ್ಮಿ’ ಮತ್ತು ‘ದಿ ಪಾಕಿಸ್ತಾನ ಆರ್ಮಿ’ ಕೃತಿಗಳು ಎರಡೂ ಸೇನೆಗಳು ಭಿನ್ನ ನೆಲೆಯಲ್ಲಿ ಬೆಳೆದು ಬಂದಿರುವುದನ್ನು ತಿಳಿದುಕೊಳ್ಳಲು ನೆರವಾಗುತ್ತಿವೆ.

ಪಂಜಾಬ್‌ ಮುಖ್ಯಮಂತ್ರಿ ಅಮರಿಂದರ್‌ ಸಿಂಗ್‌ ಬರೆದಿರುವ ನಾಲ್ಕು ಗ್ರಂಥಗಳು ಸೇನಾ ಇತಿಹಾಸಕಾರ ದಾಖಲಿಸಿದ ಅತ್ಯುತ್ತಮ ಕೃತಿಗಳಾಗಿವೆ.

ಇವೆಲ್ಲಕ್ಕಿಂತ ಹೆಚ್ಚಾಗಿ ಇತ್ತೀಚಿನ ಸೇನಾಯೇತರ ವಿದ್ವಾಂಸರ ಕೃತಿಗಳು ಕೂಡ ಭಾರತದ ಸೇನೆಯ ಹೆಚ್ಚುಗಾರಿಕೆಯ ಚಿತ್ರಣವನ್ನು ನೀಡುತ್ತವೆ.

ಯಾಲೆ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ ಸ್ಟೀವನ್‌ ವಿಲ್ಕಿನ್ಸನ್‌ ಅವರ ‘ಆರ್ಮಿ ಆ್ಯಂಡ್‌ ನೇಷನ್‌’, ಸ್ವಾತಂತ್ರ್ಯ ಸಿಗುವ ಮುಂಚಿನ ದಿನಗಳಲ್ಲಿ ನಡೆದ ಎರಡು ಮಹಾ ಯುದ್ಧಗಳ ನಡುವಣ ಅವಧಿಯಲ್ಲಿ ಸೇನೆ ಕಂಡ ಬದಲಾವಣೆ ಕುರಿತು ಶ್ರೀನಾಥ ರಾಘವನ್‌ ಅವರ ಕೃತಿ, ‘ಇಂಡಿಯಾಸ್‌ ವಾರ್‌’ ಮತ್ತು ಜಾರ್ಜ್‌ಟೌನ್‌ ವಿಶ್ವವಿದ್ಯಾನಿಲಯದ ವಿದ್ವಾಂಸ ಸಿ. ಕ್ರಿಸ್ಟೀನ್‌ ಫೇರ್ಸ್‌ ಅವರ ‘ಫೈಟಿಂಗ್‌ ಟು ದಿ ಎಂಡ್‌: ದಿ ಪಾಕಿಸ್ತಾನಿ ಆರ್ಮಿಸ್‌ ವೇ ಆಫ್‌ ವಾರ್‌’  ಕುರಿತ ಕೃತಿಗಳು ಮಹತ್ವದ್ದಾಗಿವೆ.

ನಾನು ಇಲ್ಲಿ ಕೆಲ ಸಂಗತಿಗಳನ್ನು ಉದ್ದೇಶಪೂರ್ವಕವಾಗಿ ಪುನರಾವರ್ತನೆ ಮಾಡಿರುವೆ. ಸಾಮಾಜಿಕ ಮತ್ತು ಸೇನಾ ದೃಷ್ಟಿಕೋನ

ದಿಂದ ತುಂಬ ಆಸಕ್ತಿದಾಯಕವಾಗಿರುವ ಭಾರತದ ಸೇನೆ ಕುರಿತು ಸಮಗ್ರ ಅಧ್ಯಯನದ ಯಾವುದೇ ಗ್ರಂಥವು ನನಗೆ ಪುಸ್ತಕ ಭಂಡಾರದಲ್ಲಿ ಇದುವರೆಗೂ ಸಿಕ್ಕಿಲ್ಲ.

ಭಾರತದ ಸಾಮಾಜಿಕ ವಿದ್ವಾಂಸರು ಮತ್ತು ರಾಜಕೀಯ ವ್ಯವಸ್ಥೆಯು ತಮ್ಮ ಚಿಂತನಾ ಕ್ರಮದಿಂದ ಸೇನೆಯನ್ನು ಹೊರಗೆ ಇಟ್ಟಿವೆ. ನಿವೃತ್ತ ಸೇನಾ ಅಧಿಕಾರಿ ರಾಘವನ್‌ ಅವರು ಕೂಡ ಇದೇ ಧೋರಣೆ ತಳೆದಿದ್ದಾರೆ. ಸೇನೆಯು ತನ್ನ ಕಂಟೋನ್‌ಮೆಂಟ್‌ಗಳಲ್ಲಿಯೇ ಉಳಿದು ಕರ್ತವ್ಯ ನಿಭಾಯಿಸಲಿ ಎನ್ನುವವರೇ ಹೆಚ್ಚಾಗಿದ್ದಾರೆ.

ಭಾರತದ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು  ಬಲಪಡಿಸುವ, ಒಕ್ಕೂಟ ವ್ಯವಸ್ಥೆಗೆ ಒಳಪಡಿಸುವ ಮತ್ತು ಉದಾರೀಕರಣಗೊಳಿಸುವಲ್ಲಿನ ಅದರ ಐತಿಹಾಸಿಕ ಪಾತ್ರದ ಕುರಿತು ಶ್ಲಾಘನೆಯ ಮಾತೇ ಕೇಳಿ ಬರುವುದಿಲ್ಲ. ಸೇನೆಯಿಂದ ಇಂತಹ ಅಂತರ ಕಾಯ್ದುಕೊಳ್ಳುವ ಬೌದ್ಧಿಕ ಬೇರ್ಪಡುವಿಕೆಯ ಕಾರಣಕ್ಕೆ ಅದರ ಬಗ್ಗೆ ಭಯಭಕ್ತಿ ಭಾವನೆಗೆ ಹಾದಿ ಮಾಡಿಕೊಟ್ಟಿದೆ. ಇದೇ ಕಾರಣಕ್ಕೆ ರಾವತ್‌ ಅವರನ್ನು ಡಾಯರ್‌ಗೆ ಹೋಲಿಸುವ ಕ್ಷಮಿಸಲಾರದ ತಪ್ಪು ನಿರ್ಧಾರಕ್ಕೆ ಕೆಲವರು ಬಂದಿದ್ದಾರೆ.

ಸೇನೆಯನ್ನು ಅಧಿಕಾರ ಮತ್ತು ರಾಜಕೀಯದಿಂದ ದೂರ ಇರಿಸುವಲ್ಲಿ ಭಾರತವು ಸಫಲವಾಗಿರುವುದನ್ನು ತಿಳಿದುಕೊಳ್ಳಬೇಕೆಂದರೆ ಪ್ರೊ. ವಿಲ್ಕಿನ್ಸನ್‌ ಅವರ ಗ್ರಂಥವನ್ನು ಓದಬೇಕು. ಕಾರ್ಯಪ್ಪ ಅವರಿಂದ ಹಿಡಿದು ಮಾಣೆಕ್‌ಷಾ ಅವರವರೆಗೆ ಮತ್ತು ನಂತರದ ದಿನಗಳಲ್ಲಿ  ಸೇನಾ ಮುಖ್ಯಸ್ಥರು ಮತ್ತು ರಾಜಕಾರಣಿಗಳು ದಶಕಗಳ ಕಾಲ ಜತೆಯಾಗಿ ಕೆಲಸ ಮಾಡಿ ಸೇನೆಯ ಸಾಮಾಜಿಕ ಮತ್ತು ಜನಾಂಗೀಯ ಸ್ವರೂಪವು ವೈವಿಧ್ಯಮಯ ಆಗಿರುವಂತೆ ಮಾಡಿರುವುದನ್ನು ವಿಲ್ಕಿನ್ಸನ್‌ ಅವರು ತಮ್ಮ ಕೃತಿಯಲ್ಲಿ ವಿವರಿಸಿದ್ದಾರೆ. ಕೆಲ ಜನಾಂಗಗಳ ಪ್ರಾಬಲ್ಯ ತಗ್ಗಿಸಿ, ಸೇನಾ ನೇಮಕಾತಿಯಲ್ಲಿ ರಾಜ್ಯಗಳ ಜನಸಂಖ್ಯೆ ಆಧರಿಸಿ ಮೀಸಲು ನಿಗದಿಪಡಿಸಿರುವುದರ ಬಗ್ಗೆ ಆ ಕೃತಿಯಲ್ಲಿ ವಿವರಗಳಿವೆ.

ರಕ್ಷಣಾ ಸಚಿವರಾಗಿದ್ದ ಜಗಜೀವನ್‌ ರಾಂ ಅವರು ಹೆಚ್ಚು ದಲಿತರು ಸೇನೆಗೆ ಸೇರುವಂತೆ ಮಾಡಲು ಒಲವು ಹೊಂದಿರುವುದರ ಬಗ್ಗೆಯೂ ವಿಲ್ಕಿನ್ಸನ್‌, ಕೆಲ ಉಪಯುಕ್ತ ಮಾಹಿತಿಯನ್ನೂ ಹಂಚಿಕೊಂಡಿದ್ದಾರೆ. ಈ ಸಂಗತಿಯನ್ನು ಸೂಕ್ತವಾಗಿ ನಿಭಾಯಿಸಲು ಮತ್ತು ಸಚಿವರಿಗೆ ಏನು ಉತ್ತರ ನೀಡಬೇಕು ಎನ್ನುವುದರ ಕುರಿತು ಮಾಣೆಕ್‌ ಷಾ ಅವರು ಲೆ. ಜ.ಎಸ್‌.ಕೆ. ಸಿನ್ಹಾ ಅವರಿಗೆ ಬರೆದ ಪತ್ರದ ಕುರಿತೂ ಅವರು ಉಲ್ಲೇಖಿಸಿದ್ದಾರೆ.

ನಾಗರಿಕ ಸಮಾಜದಿಂದ ದೂರ ಇರುವಂತೆ ಮಾಡುವಲ್ಲಿ ಸೇನೆ   ಮನವೊಲಿಸುವಲ್ಲಿ ಸಫಲವಾಗಿದ್ದರೂ, ತೀವ್ರ ಸ್ವರೂಪದ ಗಲಭೆ, ದಂಗೆಯ ಸಂದರ್ಭಗಳಲ್ಲಿ ಪೊಲೀಸರಿಗೆ ನೆರವಾಗಲು ಸರ್ಕಾರವು ಸೇನೆಯ ನೆರವು ಕೋರುತ್ತಲೇ ಬಂದಿದೆ. ಮ್ಯಾಜಿಸ್ಟ್ರೇಟ್‌ ಆದೇಶದಡಿ ಕೆಲಸ ಮಾಡುವ ಮತ್ತು ಕೆಲ ಕೋಮುಗಲಭೆಗಳಂತಹ ಸಂದರ್ಭಗಳಲ್ಲಿ  ಸೇನಾ ಪಡೆಗಳ ವಿಶೇಷ ಅಧಿಕಾರ ಕಾಯ್ದೆಯಡಿ ಸೇನೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತ ಬಂದಿದೆ. ಈ ಎರಡೂ ಸಂದರ್ಭಗಳನ್ನು ಉಲ್ಲೇಖಿಸುವಾಗ ಜನರಲ್‌ ಡಾಯರ್‌ ನೆನಪಾಗುತ್ತಾನೆ.

ಜಲಿಯನ್‌ವಾಲಾಬಾಗ್‌ನ ಹತ್ಯಾಕಾಂಡದ ಬಗ್ಗೆ ಡಾಯರ್‌ನ ಸಮರ್ಥನೆಗಳೇನೇ ಇರಲಿ, ಬ್ರಿಟಿಷ್‌ ಸರ್ಕಾರವು ಆತನ ನಿಲುವನ್ನು ಬೆಂಬಲಿಸಿರಲಿಲ್ಲ. ಸೇನೆಯಲ್ಲಿ ಸುಧಾರಣೆ ತರಲು ಒತ್ತಡವೂ ಹೆಚ್ಚಿತ್ತು. ವಿನ್‌ಸ್ಟನ್‌ ಚರ್ಚಿಲ್‌ ಅವರೇ ಇದಕ್ಕೆ ಮುಂದಾಳತ್ವ ವಹಿಸಿದ್ದರು.  ಇದೇ ಕಾರಣಕ್ಕೆ, ನಾಗರಿಕರನ್ನು ನಿಯಂತ್ರಿಸಲು ಅಂದಿನ ಭಾರತದ ಸೇನೆಗೆ ಸಂಬಂಧಿಸಿದಂತೆ ಹೊಸ ಶಿಷ್ಟಾಚಾರಗಳನ್ನು ರೂಪಿಸಲಾಗಿತ್ತು.

ಗುಂಪಿನತ್ತ ಗುಂಡು ಹಾರಿಸುವ ಸಂದರ್ಭ ಎದುರಾದಾಗ, ಸ್ಥಳದಲ್ಲಿ ಮ್ಯಾಜಿಸ್ಟ್ರೇಟ್ ಉಪಸ್ಥಿತರಿದ್ದು ಲಿಖಿತ ರೂಪದಲ್ಲಿ  ಆದೇಶ ನೀಡುವುದನ್ನು ಕಡ್ಡಾಯ ಮಾಡಲಾಗಿತ್ತು. ಈಗಲೂ ಗಲಭೆ ನಿಯಂತ್ರಿಸಲು ಸೇನೆಯನ್ನು ಕರೆಸಿದರೂ ಈ ನಿಯಮ ಜಾರಿಯಲ್ಲಿ ಇದೆ.

ಕ್ವಿಟ್‌ ಇಂಡಿಯಾ ಚಳವಳಿ ಸಂದರ್ಭದಲ್ಲಿನ ಚಳವಳಿಯನ್ನು ಹತ್ತಿಕ್ಕಲು ಬ್ರಿಟಿಷ್‌ ಸರ್ಕಾರ ವಿಫಲವಾದಾಗ, ಸೇನೆಯನ್ನು ಇನ್ನಷ್ಟು ಸಕ್ರಿಯವಾಗಿ ಬಳಸಿಕೊಳ್ಳಲು ಮತ್ತು ಅದಕ್ಕೆ ಹೆಚ್ಚಿನ ಅಧಿಕಾರ ನೀಡಲು  ಸೇನಾ ಪಡೆಗಳ ವಿಶೇಷ ಅಧಿಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ಸೇನೆಗೆ ವ್ಯಾಪಕ ಅಧಿಕಾರ ನೀಡುವ ಸದ್ಯಕ್ಕೆ ಜಾರಿಯಲ್ಲಿ ಇರುವ ‘ಎಎಫ್‌ಎಸ್‌ಪಿಎ’ದ ಮೂಲ ಈ ಸುಗ್ರೀವಾಜ್ಞೆಯೇ ಆಗಿದೆ.

ದಂಗೆ ಮತ್ತು ನಾಗರಿಕ ಚಳವಳಿಗಳನ್ನು ನಾಲ್ಕು ದಶಕಗಳಿಂದ ವರದಿ ಮಾಡುತ್ತಿರುವ ನನ್ನ ನೆನಪಿನ ಪ್ರಕಾರ, ಸೇನೆಯು ಜನಸಮೂಹದ ಮೇಲೆ ಗುಂಡು ಹಾರಿಸಿದ, ನರಹತ್ಯೆ ಮಾಡಿದ ಒಂದೇ ಒಂದು ನಿದರ್ಶನವಿಲ್ಲ. ಸುವರ್ಣ ಮಂದಿರದ ಮೇಲೆ ನಡೆದ ‘ಆಪರೇಷನ್‌ ಬ್ಲ್ಯೂಸ್ಟಾರ್‌’ ಕಾರ್ಯಾಚರಣೆ ಬೇರೆಯದು. ಆ ಸಂದರ್ಭದಲ್ಲಿ 149 ಸೈನಿಕರೂ ಮೃತರಾಗಿದ್ದರು.

1990ರಲ್ಲಿನ ಕಾಶ್ಮೀರದ ಗವಾಕಡಲ್‌ ಘಟನೆಯಲ್ಲಿ ಸೇನೆಯ ಪಾತ್ರ ಇದ್ದಿರಲಿಲ್ಲ. ಅರೆ ಸೇನಾಪಡೆಗಳು ಆ ಕಾರ್ಯಾಚರಣೆ ನಡೆಸಿದ್ದವು. ಮಾನವ ಹಕ್ಕುಗಳ ಉಲ್ಲಂಘನೆ, ನಕಲಿ ಎನ್‌ಕೌಂಟರ್‌, ಕೆಲ ಅತ್ಯಾಚಾರ ಪ್ರಕರಣಗಳನ್ನು   ಸೇನೆಯು ಸಹನೆಯಿಂದಲೇ ನಿರ್ವಹಿಸಿ ತಪ್ಪಿತಸ್ಥರನ್ನು ಶಿಕ್ಷಿಸಿದೆ.

ಇವೆಲ್ಲವು ದಂಗೆಗಳನ್ನು ಹತ್ತಿಕ್ಕಲ್ಲು ಬಂಡುಕೋರರ ವಿರುದ್ಧ ಎಸಗಿದ ದೌರ್ಜನ್ಯಗಳಾಗಿವೆ.  ಕೋಪೊದ್ರಿಕ್ತ ಜನಸಮೂಹದ ಮೇಲೆ ಸೇನೆಯು ಯಾವತ್ತೂ ಗುಂಡು ಹಾರಿಸಿಲ್ಲ. ಸೇನೆಯ ಉಪಸ್ಥಿತಿ ಕಾಣುತ್ತಿದ್ದಂತೆ ದುಷ್ಕರ್ಮಿಗಳು ಓಡಿ ಹೋಗುತ್ತಾರೆ. ಸೇನೆಯು ಯಾರಲ್ಲೂ ಭೇದಭಾವ ತೋರದೇ ಬಗ್ಗುಬಡಿಯುತ್ತದೆ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತು.

ಕೋಮು ಗಲಭೆಗಳು ಕೇವಲ ಸೇನೆಯ ಫ್ಲ್ಯಾಗ್‌ ಮಾರ್ಚ್‌ನಿಂದ ನಿಯಂತ್ರಣಕ್ಕೆ ಬರಲಾರವು. 1984ರಲ್ಲಿ ದೆಹಲಿ ಮತ್ತು 2002ರಲ್ಲಿ ಗುಜರಾತ್‌ನಲ್ಲಿ ನಡೆದ ಗಲಭೆ ಸಂದರ್ಭಗಳಲ್ಲೂ ಸೇನೆಯು ಗುಂಡು ಹಾರಿಸಿರಲಿಲ್ಲ. ಸೇನಾ ತುಕಡಿಗಳನ್ನು ಕಾಣುತ್ತಿದ್ದಂತೆಯೇ ಗಲಭೆಕೋರರು ಓಡಿ ಹೋಗಿದ್ದರು. ಈ ಎರಡೂ ಸಂದರ್ಭಗಳಲ್ಲಿ ಗಲಭೆ ಹೆಚ್ಚಲು ಸೇನೆಯನ್ನು ತಡವಾಗಿ ಕರೆಸಿದ್ದೇ ಮುಖ್ಯ ಕಾರಣವಾಗಿತ್ತು.

ಕಾಶ್ಮೀರದಲ್ಲಿಯೂ ಇದೇ ಪರಿಸ್ಥಿತಿ ಇದೆ. ಈ ಹಿಂದೆ ಯಾವತ್ತೂ ಜನಸಮೂಹವು ಸೇನೆಗೆ ಸವಾಲು ಒಡ್ಡಿರಲಿಲ್ಲ. ಜನರ ವಿರುದ್ಧ ಸೆಣಸಲು  ಸೇನೆಯನ್ನು ಕರೆಸಿದ ನಿದರ್ಶನಗಳಿಲ್ಲ. ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಲು ಹೋದಾಗ ಸ್ಥಳೀಯರು ಈಗ ಅವರಿಗೆ ಅಡ್ಡಿಪಡಿಸುತ್ತಿದ್ದಾರೆ. ಕಲ್ಲು ತೂರಾಟ ನಡೆಸುವ ಜನರು, ಸೇನೆಯು ಉಗ್ರರನ್ನು ಸುತ್ತುವರೆದಾಗ ಮಾನವ ಗುರಾಣಿಯಂತೆ ಅಡ್ಡಿಪಡಿಸುತ್ತಿರುವುದು ಹೊಸ ಬೆಳವಣಿಗೆಯಾಗಿದೆ.

ಈ ಹೊಸ ಬಗೆಯ ಸವಾಲು ಎದುರಿಸಲು ಸೇನೆಯು ಹೊಸ ಕಾರ್ಯತಂತ್ರ ಹೆಣೆದಿದೆ. ಅದು ಕೂಡ ಮಾನವ ಗುರಾಣಿಯಾಗಿ ಸ್ಥಳೀಯ ಯುವಕನನ್ನು ಬಳಸಿರುವುದು ಈಗ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ ಗುಂಪಿನ ಮೇಲೆ ಸೇನೆ ಗುಂಡು ಹಾರಿಸಬೇಕಾಗಿತ್ತೇ. ಹಾಗೆ ಮಾಡುವುದೇ ಸರಿಯಾಗಿದ್ದರೆ, ಅದರಿಂದಾಗುವ ಪರಿಣಾಮಗಳೇನು? ಎನ್ನುವ ಪ್ರಶ್ನೆಗಳೂ ಇಲ್ಲಿ ಉದ್ಭವಿಸುತ್ತವೆ.

ಭೂಸೇನಾ ಮುಖ್ಯಸ್ಥ ಬಿಪಿನ್‌ ರಾವತ್ ಅವರು ಸೇನಾ ಕ್ರಮ ಸಮರ್ಥಿಸಿಕೊಂಡು ಗಟ್ಟಿಯಾಗಿ ಮಾತನಾಡುವುದರ ಬದಲಿಗೆ ಕೆಲಮಟ್ಟಿಗೆ ಸಂಯಮ ತೋರಬೇಕಾಗಿತ್ತು. ರಾವತ್ ಇಲ್ಲವೆ ಮೇಜರ್‌ ಎಲ್‌. ಗೊಗೊಯ್‌ ಅವರ ದೃಷ್ಟಿಕೋನದಿಂದಲೂ ನಾವು ಈ ಘಟನೆಯನ್ನು ನೋಡಬೇಕಾಗುತ್ತದೆ.

ಇಂತಹ ಹೊಸ ಸವಾಲುಗಳನ್ನು ಎದುರಿಸಲು ಸೇನೆಯು ಹೊಸ ಕಾರ್ಯತಂತ್ರ ರೂಪಿಸುವ ಅಗತ್ಯ ಇದೆ. ಸೇನಾ ತುಕಡಿಗಳ ವಾಹನದ ಮುಂಭಾಗದಲ್ಲಿ ಕಾಶ್ಮೀರದ ಜನರನ್ನು ಕಟ್ಟಿ ಮಾನವ ಗುರಾಣಿಯನ್ನಾಗಿ ಬಳಸುವ ಅಥವಾ ಡಾಯರ್‌ನ ಶೈಲಿಯಲ್ಲಿ ನೂರಾರು ಜನರನ್ನು ಕೊಲ್ಲುವ ಧೋರಣೆ ಅನುಸರಿಸುವ ಅಗತ್ಯ ಇಲ್ಲ. ಇದೇ ಕಾರಣಕ್ಕೆ, ರಾವತ್ ಮತ್ತು ಡಾಯರ್‌ ಮಧ್ಯೆ ಹೋಲಿಕೆ ಮಾಡುವುದು ತಿರಸ್ಕಾರಕ್ಕೆ ಅರ್ಹವಾಗಿದೆ.

(ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ.ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry