ಶನಿವಾರ, ಮೇ 8, 2021
24 °C

ಸೈಕೋಪಾತ್‌ಗಳ ಸರ್ವವ್ಯಾಪಿ ರಾಜಕಾರಣ!

ನಟರಾಜ್ ಹುಳಿಯಾರ್ Updated:

ಅಕ್ಷರ ಗಾತ್ರ : | |

ಸೈಕೋಪಾತ್‌ಗಳ ಸರ್ವವ್ಯಾಪಿ ರಾಜಕಾರಣ!

ಈ ಸಲ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿಯಾಗಿರುವ ಡೊನಾಲ್ಡ್ ಟ್ರಂಪ್ ಹಿಟ್ಲರ್‌ಗಿಂತ ಮಿಗಿಲಾದ ಮನೋವಿಕೃತಿಯ ಲಕ್ಷಣಗಳನ್ನು (ಸೈಕೋಪಾತಿಕ್ ಟ್ರೈಟ್ಸ್) ಹೊಂದಿದ್ದಾರೆ ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಮನೋವಿಶ್ಲೇಷಕ ಕೆವಿನ್ ಡಟ್ಟನ್ ಪ್ರಕಟಿಸಿದ್ದಾರೆ.ಅವರ ಪಟ್ಟಿಯಲ್ಲಿ189 ಅಂಕ ಪಡೆದ ಸದ್ದಾಂ ಹುಸೇನ್ ಮೊದಲ ಸ್ಥಾನದಲ್ಲಿದ್ದಾರೆ. ಎರಡನೆಯ ಸ್ಥಾನದಲ್ಲಿರುವ ಟ್ರಂಪ್‌ಗೆ 171 ಹಾಗೂ ಮೂರನೆಯ ಸ್ಥಾನದಲ್ಲಿರುವ ಹಿಟ್ಲರ್‌ಗೆ 169 ಅಂಕ! ಈ ಫಲಿತಾಂಶ ತಲುಪಲು ಬಳಸಿದ ಮಾನದಂಡಗಳು ಹಾಗೂ ಅಂಕಪಟ್ಟಿಯನ್ನೂ ಡಟ್ಟನ್ ಕೊಟ್ಟಿದ್ದಾರೆ.ಕಳೆದ ಕೆಲವು ವರ್ಷಗಳಿಂದ ಡಟ್ಟನ್ ಹಲವು ಚಾರಿತ್ರಿಕ ನಾಯಕರ ಅಧಿಕೃತ ಜೀವನ ಚರಿತ್ರಕಾರರ ಜೊತೆ ಚರ್ಚಿಸಿ, ಈ ನಾಯಕರ ಕೆಲಬಗೆಯ ಗುಣಲಕ್ಷಣಗಳನ್ನು ಗ್ರಹಿಸಲೆತ್ನಿಸಿದ್ದಾರೆ. ಸೈಕೋಪಾತಿಕ್ ಪರ್ಸನಾಲಿಟಿ ಇನ್ವೆಂಟರಿ-ರಿವೈಸ್ಡ್ (ಪಿಪಿಐ-ಆರ್) ಮನೋಅಳತೆಯ ಸಾಧನಗಳನ್ನು ಬಳಸಿರುವ ಡಟ್ಟನ್, ಮುನ್ನುಗ್ಗಿ ಗೆಲ್ಲಲು ಹೊರಡುವ ನಾಯಕರಲ್ಲಿ ಕಾಣಬರುವ ಸೈಕೋಪಾತಿಕ್ ಗುಣಗಳನ್ನು ವಿಶ್ಲೇಷಿಸಿದ್ದಾರೆ.ಮನೋವಿಜ್ಞಾನದ ಪ್ರಕಾರ, ಸೈಕೋಪಾತ್‌ಗಳೆಂದರೆ: ಸುಳ್ಳು ಹೇಳುವ ಕಾಯಿಲೆಯುಳ್ಳವರು, ತಮ್ಮನ್ನು ತಾವು ಅತಿ ಗಣ್ಯರೆಂದು ತಿಳಿದವರು, ಮನಸ್ಸಿಗೆ ಬಂದದ್ದು ಮಾಡುವವರು, ತಮ್ಮ ವರ್ತನೆಗಳನ್ನು ನಿಯಂತ್ರಿಸಿಕೊಳ್ಳದವರು ಹಾಗೂ ತಮ್ಮ ವರ್ತನೆಯ ಪರಿಣಾಮಗಳ ಹೊಣೆ ಹೊರಲು ನಿರಾಕರಿಸುವವರು, ತಮ್ಮ ವಿನಾಶಕಾರಿ ಕೃತ್ಯಗಳ ಬಗ್ಗೆ ವಿಷಾದವಿಲ್ಲದವರು, ಎಲ್ಲವನ್ನೂ ತಮಗೆ ಬೇಕಾದಂತೆ ಬಳಸಿಕೊಳ್ಳುವವರು, ಅಳುಕಿಲ್ಲದೆ ದಬ್ಬಾಳಿಕೆ ನಡೆಸುವವರು…ಇತ್ಯಾದಿ. ಈ ಗುಣಗಳು ಯಾರಲ್ಲಿ ಬೇಕಾದರೂ ಇರಬಹುದು ಅಥವಾ ಸುಳಿಯುತ್ತಿರಬಹುದು.ಆದರೆ ಇವು ಅತಿಯಾಗಿ, ರೋಗಗಳಾದಾಗ ‘ಸೈಕೋಪಾತ್’ ಹುಟ್ಟುತ್ತಾನೆ. ಆದರೆ ಜೋಸೆಫ್ ಡನ್ ಪ್ರಕಾರ, ಈ ಸೈಕೋಪಾತ್‌ಗಳು ನೀವು ಸಿನಿಮಾದಲ್ಲಿ ನೋಡಿರುವಂತೆ ಮುಖ ಕಿವುಚಿದ ಕ್ರೂರಿಗಳಂತೇನೂ ಇರುವುದಿಲ್ಲ; ಠಾಕುಠೀಕಾಗಿ, ಸಭ್ಯವಾಗಿಯೂ ಕಾಣುತ್ತಿರುತ್ತಾರೆ!ಮೊನ್ನೆ ಡಟ್ಟನ್ ನಾಯಕತ್ವ ಪರೀಕ್ಷೆಯಲ್ಲಿ ಬಳಸಿರುವ ಕೆಲವು ಮಾನದಂಡಗಳು ಸೈಕೋಪಾತ್‌ಗಳಲ್ಲೂ ಇರಬಲ್ಲವು: ಸಾಮಾಜಿಕ ಪ್ರಭಾವ, ನಿರ್ಭಯತೆ, ಕಠಿಣಹೃದಯ, ಅಹಂಕಾರ, ನಿರ್ದಯತೆ, ಆತ್ಮವಿಶ್ವಾಸ, ಆಕರ್ಷಕ ವ್ಯಕ್ತಿತ್ವ, ಅಪ್ರಾಮಾಣಿಕತೆ, ಆತ್ಮಸಾಕ್ಷಿ-ಅನುಕಂಪಗಳ ಕೊರತೆ, ತನ್ನೊಳಗಿನ ದೋಷಗಳು ತನ್ನಲ್ಲಿಲ್ಲ, ತನ್ನ ಹೊರಗಿವೆ ಎಂದುಕೊಳ್ಳುವುದು, ಕುಟಿಲವಾದ ಅತಿಸ್ವಾರ್ಥ, ಸುಮ್ಮನೆ ಎಲ್ಲದಕ್ಕೂ ಸಡ್ಡು ಹೊಡೆಯುವುದು, ಮಾನಸಿಕ ಒತ್ತಡದ ನಿರೋಧಕ ಶಕ್ತಿ ಮೊದಲಾದವು.ಡಟ್ಟನ್ ಪ್ರಕಾರ ‘ಈ ಲಕ್ಷಣಗಳಲ್ಲಿ ನಿರ್ಭಯತೆ ಹಾಗೂ ಮಾನಸಿಕ ಒತ್ತಡ ನಿರೋಧಕ ಶಕ್ತಿಗಳು ಸಕಾರಾತ್ಮಕ ಗುಣಗಳಾಗಿರಬಹುದು; ಹಾಗೆಯೇ, ಕಠಿಣಹೃದಯಿಯಾಗಿರುವುದು ಒಳ್ಳೆಯ ನಾಯಕರನ್ನೂ, ಕೆಟ್ಟ ನಾಯಕರನ್ನೂ ಸೃಷ್ಟಿ ಮಾಡಬಲ್ಲದು; ಆದರೆ ಅನ್ಯದೋಷಾರೋಪಣೆ ಅಥವಾ ಭವಿಷ್ಯದ ಬಗ್ಗೆ ಕಾಳಜಿ ಇಲ್ಲದಿರುವುದು ಕೆಟ್ಟನಾಯಕರನ್ನಷ್ಟೇ ಸೃಷ್ಟಿಸುತ್ತದೆ’.ಮೇಲೆ ಕೊಟ್ಟಿರುವ ‘ಅನೇಕ ಲಕ್ಷಣಗಳ ಮಿಶ್ರಣವೂ ನಾಯಕನ ಯಶಸ್ಸನ್ನು ನಿರ್ಧರಿಸುತ್ತದೆ’ ಎನ್ನುತ್ತಾರೆ ಡಟ್ಟನ್. ಉದಾಹರಣೆಗೆ, ‘ನಿರ್ಭಯತೆ, ಕಠಿಣ ಹೃದಯ, ಪ್ರಭಾವಶಾಲಿಯಾಗಿರುವುದು- ಇವುಗಳಲ್ಲಿ ಹೆಚ್ಚು ಅಂಕ ಪಡೆದವನು ನಿರ್ಲಿಪ್ತ ತೀರ್ಮಾನಗಳನ್ನು ತಳೆಯುವ ನಾಯಕನಾಗಬಹುದು.ಆದರೆ ಈ ಗುಣಗಳ ಜೊತೆಗೇ, ಇತರರ ಮೇಲೆ ತಪ್ಪು ಹೊರಿಸುವ ಚಾಳಿ ಹೆಚ್ಚು ಇದ್ದರೆ ಅಂಥವನು ಜನಾಂಗಹತ್ಯೆಯಲ್ಲಿ ತೊಡಗುವ ರಣಪಿಶಾಚಿಯಾಗಬಲ್ಲ’. ಹಾಗೆಯೇ, ‘ಸೈಕೋಪತಿಯ ನೆಗೆಟಿವ್ ಗುಣಗಳಾದ ಸ್ವಕೇಂದ್ರಿತತೆ, ಹಿಂದುಮುಂದು ನೋಡದೆ ಮುನ್ನುಗ್ಗುವುದು, ಅನುಕಂಪ ಇಲ್ಲದಿರುವುದು- ಈ ಲಕ್ಷಣಗಳು ಅತಿಯಾಗಿರುವ ನಾಯಕರು ಅಧಿಕಾರ ಪಡೆದಾಗ ಯಶಸ್ವಿಯಾಗುವುದಿಲ್ಲ ಎಂದೂ ಈ ವಿಶ್ಲೇಷಣೆ ಹೇಳುತ್ತದೆ.ಡಟ್ಟನ್ ಈಗ ಅಮೆರಿಕದ ಚುನಾವಣೆಯ ಕಣದಲ್ಲಿರುವ ನಾಲ್ವರು ಅಭ್ಯರ್ಥಿಗಳನ್ನೂ ಪಿಪಿಐ-ಆರ್ ಪರೀಕ್ಷೆಗೆ ಒಳಪಡಿಸಿದ್ದಾರೆ; ಅವರ ಜೊತೆಗೆ ಚರಿತ್ರೆಯ ಹಲವು ನಾಯಕರನ್ನೂ ಹೋಲಿಕೆಗಾಗಿ ತಂದಿದ್ದಾರೆ. ಈ ಪಟ್ಟಿಯಲ್ಲಿ ಜೀಸಸ್, ಅಬ್ರಹಾಂ ಲಿಂಕನ್, ಗಾಂಧೀಜಿ ಕೂಡ ಇದ್ದಾರೆ. ಲಿಂಕನ್ ಹಾಗೂ ಗಾಂಧೀಜಿ ಕೊನೆಯ ಎರಡು ಸ್ಥಾನದಲ್ಲಿದ್ದಾರೆ.ಗಾಂಧೀಜಿ ಈ ‘ನಾಯಕಸ್ಪರ್ಧೆ’ಯಲ್ಲಿ ಅತಿ ಕಡಿಮೆ ಅಂಕ ಪಡೆದಿರುವುದರಿಂದ, ಅವರು ಈ ಪಟ್ಟಿಯಲ್ಲಿ ಎತ್ತರದ ಸ್ಥಾನಗಳನ್ನು ಪಡೆದಿರುವ ‘ಹುಚ್ಚು ನಾಯಕ’ರ ಜೊತೆ ಸ್ಪರ್ಧೆಯಲ್ಲಿಲ್ಲ ಅನ್ನುವುದು ಸಂತೋಷದ ವಿಷಯ.ಟ್ರಂಪ್ ಕುರಿತಂತೆ ಈ ಮನೋವಿಶ್ಲೇಷಕ ಅಂಶಗಳು ಹೊರಬರುವ ಮೊದಲೇ, ಕಳೆದ ಮೇ ತಿಂಗಳಲ್ಲೇ, ಎರಡು ಸಂದರ್ಶನಗಳಲ್ಲಿ ‘ಟ್ರಂಪ್ ಇಡೀ ಮಾನವಕುಲಕ್ಕೇ ಕಂಟಕ’ ಎಂದು ನಮ್ಮ ಕಾಲದ ಶ್ರೇಷ್ಠ ಚಿಂತಕ ನೋಮ್ ಚಾಮ್‌ಸ್ಕಿ ಹೇಳಿದ್ದರು.‘ಈ ಟ್ರಂಪ್‌ಗೆ ತಾನು ಏನು ಯೋಚಿಸುತ್ತಿದ್ದೇನೆ ಎಂಬುದೇ ಗೊತ್ತಿದ್ದಂತಿಲ್ಲ. ತಲೆಗೆ ಬಂದಂತೆ ಮಾತಾಡುತ್ತಾರೆ. ಇದ್ದಕ್ಕಿದ್ದಂತೆ ‘ಹವಾಮಾನ ಬದಲಾವಣೆ ಆಗೋಲ್ಲ. ಅದನ್ನೆಲ್ಲ ಮರೆತುಬಿಡಿ’ ಎನ್ನುತ್ತಾರೆ. ಅವರು ಹೇಳುವ ಮಾತುಗಳಲ್ಲಿ ಕೆಲವು ತೀರಾ ಹುಚ್ಚುಹುಚ್ಚಾಗಿವೆ.ಆದರೆ ಅಮೆರಿಕ ಅತ್ಯಂತ ಶಕ್ತಿಶಾಲಿ ಪ್ರಭುತ್ವವಾದ್ದರಿಂದ ಟ್ರಂಪ್ ತಾನು ಹೇಳುತ್ತಿರುವುದನ್ನೆಲ್ಲಾ ನಿಜಕ್ಕೂ ನಂಬಿ ಹೇಳುತ್ತಿದ್ದರೆ ಮಾನವಕುಲ ಗ್ಯಾರಂಟಿ ಅಪಾಯದಲ್ಲಿದೆ ಎನ್ನಿಸುತ್ತದೆ’.ಕಳೆದ ವರ್ಷ ಪ್ಯಾರಿಸ್ ಮೇಲೆ ಭಯೋತ್ಪಾದಕರ ದಾಳಿ ನಡೆದಾಗ ಟ್ರಂಪ್ ‘ಮುಸ್ಲಿಮರನ್ನೆಲ್ಲ ನಮ್ಮ ದೇಶದಿಂದ ಹೊರಗಿಡೋಣ, ನಮ್ಮ ದೇಶದ ಸುತ್ತ ಒಂದು ಗೋಡೆ ಕಟ್ಟೋಣ; ಅಥವಾ ಮೆಕ್ಸಿಕೊ ದೇಶಕ್ಕೆ ಹೇಳಿ ಅಮೆರಿಕ ಸಂಯುಕ್ತ ಸಂಸ್ಥಾನಕ್ಕೆ ಯಾರೂ ಬರದಂತೆ ಗೋಡೆ ಕಟ್ಟಿಸೋಣ’ ಎಂದಿದ್ದನ್ನು ನೆನಪಿಸುತ್ತಾ ಚಾಮ್‌ಸ್ಕಿ ಹೇಳುತ್ತಾರೆ:‘ಜಗತ್ತನ್ನು ನಾಶ ಮಾಡುವಂಥ ಬಟನ್ನಿನ ಮೇಲೆ ಬೆರಳಿರಿಸಬಲ್ಲ, ಜಗತ್ತಿನ ಮೇಲೆ ಭಾರೀ ಪರಿಣಾಮ ಬೀರಬಲ್ಲ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲ ಭಯಂಕರ ಮನುಷ್ಯನೊಬ್ಬನ ಕೈಗೆ ಅಧಿಕಾರ ಸಿಗುವ ಸಾಧ್ಯತೆಯೇ ಭಯ ಹುಟ್ಟಿಸುತ್ತದೆ’. ‘ಟ್ರಂಪ್ ಮತ್ತು ಹಿಲರಿ ಕ್ಲಿಂಟನ್- ಈ ಇಬ್ಬರ ನಡುವೆ ವೋಟು ಹಾಕಬೇಕಾಗಿ ಬಂದರೆ ಏನು ಮಾಡುತ್ತೀರಿ?’ ಎಂಬ ಪ್ರಶ್ನೆಗೆ ಚಾಮ್‌ಸ್ಕಿ  ಖಚಿತವಾಗಿ ಹೇಳುತ್ತಾರೆ:‘ಟ್ರಂಪ್‌ಗೆ ವಿರುದ್ಧವಾಗಿ, ಅಂದರೆ ಹಿಲರಿಗೇ ವೋಟು ಹಾಕುತ್ತೇನೆ’. ಆದರೆ ಹಿಲರಿಯವರ ಬಗೆಗಾಗಲೀ, ಡೆಮಾಕ್ರೆಟಿಕ್ ಪಕ್ಷದ ಬಗೆಗಾಗಲೀ ಚಾಮ್‌ಸ್ಕಿಗೆ ವಿಶೇಷ ಒಲವೇನೂ ಇಲ್ಲ. ಚಾಮ್‌ಸ್ಕಿಯವರ ವಸ್ತುನಿಷ್ಠ ವಿಶ್ಲೇಷಣೆಯಷ್ಟೇ ಅಲ್ಲದೆ, ರಿಪಬ್ಲಿಕನ್ ನ್ಯಾಷನಲ್ ಸೆಕ್ಯುರಿಟಿ ಕಮ್ಯುನಿಟಿಯ ಸದಸ್ಯರೂ  ಟ್ರಂಪ್ ಅಮೆರಿಕಕ್ಕೆ ಮಾರಕ ಎಂದು ಹೇಳಿಕೆ ಕೊಟ್ಟಿದ್ದು ಕೂಡ ನೆನಪಾಗುತ್ತದೆ.ಇಂಥ ಚರ್ಚೆಗಳ ನಡುವೆ ಡಟ್ಟನ್ ವಿಶ್ಲೇಷಣೆಯ ಪಟ್ಟಿ ಅಮೆರಿಕದ ಅಭ್ಯರ್ಥಿಗಳ ಚರ್ಚೆಗೆ ಇನ್ನೊಂದು ಆಯಾಮ ಕೊಟ್ಟಿದೆ. ಆದರೂ ‘ನಿರ್ಭಯತೆ’ ಎಂಬ ಒಂದು ಮಾನದಂಡದಡಿಯಲ್ಲಿ ಈ ಮನೋಪರೀಕ್ಷೆ ಕೊಟ್ಟಿರುವ ಅಂಕಗಳನ್ನು ನೋಡಿದರೆ, ಈ ಥರದ ವ್ಯಕ್ತಿತ್ವಪರೀಕ್ಷೆಗಳು ಎಷ್ಟು ಅಸಂಗತ ಎನ್ನಿಸಿಬಿಡುತ್ತದೆ.ಉದಾಹರಣೆಗೆ, ‘ನಿರ್ಭಯತೆ’ಯ ಮಾನದಂಡದಡಿಯಲ್ಲಿ ಸದ್ದಾಂ ಹುಸೇನ್‌ಗೆ 27 ಅಂಕ; ಚರ್ಚಿಲ್‌ಗೆ 25 ಅಂಕ. ಆದರೆ ಚರ್ಚಿಲ್ಲರನ್ನೂ, ಕ್ರೂರ ವಸಾಹತುಶಾಹಿಯನ್ನೂ ಆಯುಧವಿಲ್ಲದೆ ಎದುರಿಸಿದ ಗಾಂಧೀಜಿಗೆ 13 ಅಂಕ. ಏಸುವಿಗೆ 18 ಅಂಕ! ಪರಮಹೇಡಿಗಳು ಅತಿಧೀರರಂತೆ ವರ್ತಿಸುವುದನ್ನು ಕುರಿತು ಮನೋವಿಜ್ಞಾನದ ಪ್ರಾಥಮಿಕ ಪಾಠಗಳು ಹೇಳುತ್ತವೆ.ಸರ್ವರಕ್ಷಣೆಯುಳ್ಳ ಸರ್ವಾಧಿಕಾರಿಯ ‘ನಿರ್ಭಯತೆ’ಗೂ, ಸಾವಿನ ಭಯವಿಲ್ಲದೆ, ಯಾವ ಆಯುಧವೂ ಇಲ್ಲದೆ ಸಾಮ್ರಾಜ್ಯಶಾಹಿಯನ್ನು ವಿರೋಧಿಸಿ ನಿಂತ ಗಾಂಧೀಜಿಯ  ನಿರ್ಭಯತೆಗೂ ವ್ಯತ್ಯಾಸವಿಲ್ಲವೆ?ಡಟ್ಟನ್ನರ ಅಳತೆಗೋಲುಗಳ ಬಗ್ಗೆ ಇಂಥ ಪ್ರಶ್ನೆಗಳನ್ನು ಎತ್ತುವುದು ಸಾಧ್ಯವಿದೆ. ಆದರೂ ಅವರ ಪಟ್ಟಿಯ ಪ್ರಕಾರ ಹಿಟ್ಲರನನ್ನೂ, ಅಮೆರಿಕದ ಕ್ರೌರ್ಯವೂ ಸೇರಿ ಸೃಷ್ಟಿಯಾದ ಸದ್ದಾಂ ಹುಸೇನರನ್ನೂ ಮೀರಿಸಿರುವ ಟ್ರಂಪ್, ಕೆಲವು ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ಆಗಾಗ್ಗೆ ಹಿಲರಿಗೆ ಸಮಸಮನಾಗಿ ಕಾಣುತ್ತಿರುವುದು ಹೇಗೆ?ಹಾಗಾದರೆ, ಅಮೆರಿಕನ್ ಮತದಾರರ ಚಿತ್ತದಲ್ಲೇ ಮೂಲದೋಷವಿರುವಂತಿದೆ; ಅಥವಾ ಇದು ಸಮೀಕ್ಷಾ ರಾಜಕಾರಣದ ಯೋಜಿತ ಸಂಚಿರುವಂತೆ ಕಾಣುತ್ತದೆ. ಹಾಗೆ ನೋಡಿದರೆ, ಅಮೆರಿಕನ್ ಅಧ್ಯಕ್ಷೀಯ ಚುನಾವಣೆಗಳಲ್ಲಿ ಗೆದ್ದ ಹಲವರಲ್ಲಿ ‘ಸೈಕೋಪಾತಿಕ್ ಕಠಿಣತೆ’ ಇರುವುದನ್ನು 2012ರ ಮನೋವಿಶ್ಲೇಷಣಾತ್ಮಕ ಅಧ್ಯಯನವೊಂದು ತೋರಿಸಿತ್ತು.ಈ ಅಧ್ಯಯನ ಜಾರ್ಜ್ ಬುಷ್ ತನಕದ 42 ಅಧ್ಯಕ್ಷರನ್ನು ಒಳಗೊಂಡಿತ್ತು. ಅಂದರೆ ಈ ‘ಸೈಕೋಪಾತಿಕ್ ಕಠಿಣತೆ’ ಅಮೆರಿಕದ ಮೆಜಾರಿಟಿ ಮತದಾರರು ಒಪ್ಪಿರುವ ಗುಣವೂ ಆಗಿದೆ ಎಂಬುದನ್ನೂ ಇದು ತೋರಿಸುತ್ತಿದೆಯಲ್ಲವೆ? ಮೇಲುನೋಟಕ್ಕೆ ಹುಂಬನಂತೆ ಬಡಬಡಿಸುವ, ಚೀರುವ ಟ್ರಂಪ್ ಅವರ ಚುನಾವಣಾ ಸಲಹಾತಂಡ, ಹಿಂದಿನ ಹಲವಾರು ಅಧ್ಯಕ್ಷರ ಗೆಲುವಿನ ಚರಿತ್ರೆಯ ಆಧಾರದ ಮೇಲೆ ಈ ‘ಟಫ್ ಲೀಡರ್’, ‘ಹುಚ್ಚು ಲೀಡರ್’ ಮಾದರಿಯನ್ನು ರೂಪಿಸಿರಬಹುದಲ್ಲವೆ?ಟ್ರಂಪ್ ಕೆಲವು ವಿಷಯದಲ್ಲಿ ಸದ್ದಾಂ ಹುಸೇನ್‌ಗಿಂತ ‘ಟಫ್’ ಎಂಬ ಮನೋ ವಿಶ್ಲೇಷಣೆಯ ಫಲಿತಾಂಶ ಕೆಲವು ಅಮೆರಿಕನ್ನರ ಮನಸ್ಸಿನಲ್ಲಿ ಆರಾಧನೆಯನ್ನೂ ಹುಟ್ಟುಹಾಕಿರಬಹುದು! ‘ಏನಾದರೂ ಟ್ರಂಪ್ ಗೆಲ್ಲುವುದಿಲ್ಲ, ಬಿಡಿ’ ಎಂದು ಅಮೆರಿಕದ ಹಿಂದಿನ ಅಧ್ಯಕ್ಷೀಯ ಚುನಾವಣೆಗಳನ್ನು ಅಲ್ಲೇ ಇದ್ದು ನೋಡಿರುವ ರವಿಕೃಷ್ಣಾರೆಡ್ಡಿ ಖಚಿತವಾಗಿ ಹೇಳುತ್ತಾರೆ.ಇದೆಲ್ಲ ದೂರದ ದೇಶವೊಂದರ ರಾಜಕಾರಣಿಗಳನ್ನು ಕುರಿತ ವಿಶ್ಲೇಷಣೆ ಎಂದು ನೀವು ತಿಳಿಯಬೇಕಿಲ್ಲ. ಈ ಅಧ್ಯಯನಗಳನ್ನು ನೋಡುತ್ತಿರುವಂತೆ ಈ ಸೈಕೋಪಾತ್ ಗುಣಗಳು ಇಂಡಿಯಾದ ಅನೇಕ ರಾಜಕಾರಣಿಗಳಲ್ಲಿ ಹೇರಳವಾಗಿವೆ ಎನ್ನುವುದು ನಮಗೆ ತಕ್ಷಣ ಹೊಳೆಯುತ್ತದೆ.ಮೇಲೆ ಚರ್ಚಿಸಿದ ಅನೇಕ ದುರ್ಗುಣಗಳು ತಮ್ಮ ಹೀನಕೆಲಸಗಳಿಗಾಗಿ ಎಂದೂ ವಿಷಾದ ವ್ಯಕ್ತಪಡಿಸದ ಇಲ್ಲಿನ ‘ದಿಟ್ಟ’ನಾಯಕರನ್ನೂ ಒಳಗೊಂಡಂತೆ ಹಲವರಿಗೆ ಅನ್ವಯವಾಗುತ್ತವೆ. ಡಟ್ಟನ್ನರ ಪಟ್ಟಿಯ ಪರಿಕಲ್ಪನೆಗಳನ್ನು ಸರಳ ಭಾಷೆಯಲ್ಲಿ ನನಗೆ ವಿವರಿಸಿದ ಮನೋವಿಜ್ಞಾನದ ಪ್ರೊಫೆಸರ್ ಎಂ.ಶ್ರೀಧರಮೂರ್ತಿ, ಇಂಡಿಯಾದ ಚಿಂತನೆಯಲ್ಲಿರುವ ‘ದಶ ಮದ’ಗಳನ್ನು ನೆನಪಿಸಿದರು:ಕುಲ ಮದ, ಛಲ ಮದ, ಧನ ಮದ, ರೂಪ ಮದ, ಯೌವ್ವನ ಮದ, ವಿದ್ಯಾ ಮದ, ರಾಜ್ಯ ಮದ, ತಪೋಮದ, ಅಧಿಕಾರ ಮದ ಹಾಗೂ ಉದ್ಯೋಗ ಮದ. ಪಶ್ಚಿಮದ ಮಾನದಂಡಗಳ ಜೊತೆಗೇ ಈ ಮದಗಳ ದೇಶೀಮಾನದಂಡಗಳನ್ನೂ ಇಟ್ಟುಕೊಂಡು ಇಂಡಿಯಾದ ಮನೋವಿಶ್ಲೇಷಕರು ಇಲ್ಲಿನ ನಾಯಕರ ವ್ಯಕ್ತಿತ್ವಪರೀಕ್ಷೆಯನ್ನೂ ಮಾಡುವ ಪ್ರಾಮಾಣಿಕತೆ ತೋರಿದರೆ ದೇಶಕ್ಕೆ ಉಪಕಾರವಾಗಬಲ್ಲದು.ಕೊನೆಟಿಪ್ಪಣಿ: ರಾಜಕಾರಣಿ  v/s ಮನೋವಿಜ್ಞಾನಿ!

ಮನೋವಿಜ್ಞಾನದ ಯಾವುದೇ ಅಳತೆಗೋಲುಗಳಿಗೆ ಸವಾಲಾಗಬಲ್ಲ ಕಿಲಾಡಿ ರಾಜಕಾರಣಿಗಳು ಇಂಡಿಯಾದಲ್ಲೂ ಇತರ ದೇಶಗಳಲ್ಲೂ ಇದ್ದಾರೆ! ನಮ್ಮ ಕಣ್ಣೆದುರಿನ ಅನೇಕ ರಾಜಕಾರಣಿಗಳು ಎರಡು ನಾಲಗೆಯಲ್ಲಿ, ಊಸರವಳ್ಳಿತನದಲ್ಲಿ ಮೊದಲ ಸ್ಥಾನದಲ್ಲಿರುವುದರಿಂದ ಪಶ್ಚಿಮದ ಈ ವೈಜ್ಞಾನಿಕ ಮಾನದಂಡಗಳ ಮೂಲಕವಾಗಲೀ, ದೇಶೀ ದಶ ಮದಗಳ ಪರೀಕ್ಷೆಯ ಮೂಲಕವಾಗಲೀ ಅವರ ವ್ಯಕ್ತಿತ್ವಪರೀಕ್ಷೆ ನಡೆಯಬಲ್ಲದೇ ಎಂಬ ಅನುಮಾನ ಹುಟ್ಟುತ್ತದೆ!ಯಾಕೆಂದರೆ, ಅನೇಕ ಸಾರ್ವಜನಿಕ ವ್ಯಕ್ತಿಗಳ ಒಳ ಮಾತುಗಳು, ಖಾಸಗಿ ಮಾತುಗಳು ಹಾಗೂ ಅವರ ಸಾರ್ವಜನಿಕ ನಡೆನುಡಿಗಳ ನಡುವೆ ಅಪಾರ ಅಂತರವಿರುತ್ತದೆ.ಇದೀಗ ಕರ್ನಾಟಕ ರಾಜಕೀಯ ರಂಗಭೂಮಿಯ ಮೇಲೆ ಪುಕ್ಕಟೆ ಮನರಂಜನೆ ನೀಡುತ್ತಿರುವ ಈಶ್ವರಪ್ಪ-ಯಡಿಯೂರಪ್ಪ ಜುಗಲ್ ಬಂದಿಯನ್ನೇ ನೋಡಿ. ಇವರು ಆಡುವ ಮಾತುಗಳ ಆಧಾರದ ಮೇಲೆ ಮನೋವಿಶ್ಲೇಷಕನೊಬ್ಬ ತನ್ನ ನಿಖರ ಮಾನದಂಡಗಳನ್ನು ಬಳಸಿ ಇವರ ವ್ಯಕ್ತಿತ್ವಗಳನ್ನು ವಿಶ್ಲೇಷಿಸುವ ಹೊತ್ತಿಗಾಗಲೇ, ಈ ಇಬ್ಬರೂ ಕೈಕೈ ಹಿಡಿದುಕೊಂಡು ‘ಕ್ಷಮಿಸಿ! ಇದು ಗಂಡಹೆಂಡಿರ ಜಗಳ!’ ಎಂದು ಮುಗುಳ್ನಗುತ್ತಾ ಕ್ಯಾಮೆರಾಗಳೆದುರು ನಿಂತಿರುತ್ತಾರೆ.ತಮ್ಮ ಮನಸ್ಸಿನಲ್ಲಿರುವುದಕ್ಕೆ ಸಂಪೂರ್ಣ ವಿರುದ್ಧವಾದ ಮಾತನ್ನಾಡುವ, ಹಿಪೋಕ್ರಸಿಯ ನವಮಾದರಿಗಳನ್ನೇ ನಿರ್ಮಿಸಬಲ್ಲ ರಾಜಕಾರಣಿಗಳ ವರ್ತನೆಗಳನ್ನು ವಿಶ್ಲೇಷಿಸಲು ಮನೋವಿಶ್ಲೇಷಕರು ಇನ್ನಷ್ಟು ಸೂಕ್ಷ್ಮ ಮಾನದಂಡಗಳನ್ನು ರೂಪಿಸಬೇಕಾಗುತ್ತದೇನೋ!

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.