ಬುಧವಾರ, ಮೇ 25, 2022
31 °C

ಸೈತಾನನ ಕಾರ್ಖಾನೆ

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಬ್ಬ ತರುಣ, ಗುರುಗಳ ಕಡೆಗೆ ಹೋದ, ಅವರ ಉಪನ್ಯಾಸವನ್ನು ಕೇಳಿದ. ಪ್ರತಿದಿನ ತಪ್ಪದೇ ಸಾಯಂಕಾಲ ಆಶ್ರಮಕ್ಕೆ ಹೋಗಿ ಪ್ರವಚನಗಳನ್ನು ಕೇಳಿದ. ಒಂದು ತಿಂಗಳಾದ ಮೇಲೆ ಅವರನ್ನು ಬೇರೆಯಾಗಿ ಭೆಟ್ಟಿಯಾಗಿ ಹೇಳಿದ, ‘ಗುರುಗಳೇ, ನಿಮ್ಮ ಉಪನ್ಯಾಸಗಳು ಅದ್ಭುತ, ನನ್ನ ಮನಸ್ಸಿಗೆ ಹಿಡಿಸುತ್ತವೆ. ಆದರೆ ಉಪನ್ಯಾಸ ಮುಗಿದ ಮೇಲೆ ಹೊರಗೆ ಹೋದೊಡನೆ ಮನಸ್ಸು ಮತ್ತೆ ತನ್ನ ಮಂಗತನವನ್ನು ಪ್ರಾರಂಭಿಸುತ್ತದೆ. ಆಕರ್ಷಣೆಗಳತ್ತ ಸೆಳೆಯುತ್ತದೆ. ನೀವು ಯಾವುದನ್ನು ಬೇಡವೆಂದು ಹೇಳಿದ್ದಿರೋ ಆ ಕಡೆಗೇ ಬಿಡದೇ ಓಡುತ್ತದೆ. ಎಷ್ಟೆಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗುತ್ತಿಲ್ಲ’ ಎಂದ. ಅವನ ಕೊರಗು ಕಂಡು ಗುರುಗಳಿಗೆ ಕನಿಕರ ಬಂದಿತು.ಅವರು ಅವನನ್ನು ಕುಳ್ಳಿರಿಸಿಕೊಂಡು ಕೆಲವು ವಿಧಿವಿಧಾನಗಳನ್ನು ನೀಡಿದರು, ಪ್ರಾಣಾಯಾಮವನ್ನು ಬೋಧಿಸಿದರು. ಈ ವಿಧಾನಗಳನ್ನು ಕೆಲವು ದಿನ ತಪ್ಪದೇ ಆಚರಿಸಲು ತಿಳಿಸಿದರು. ಆತ ಪ್ರಾಮಾಣಿಕವಾಗಿ ಪ್ರಯತ್ನಮಾಡಿ ಅವರು ತಿಳಿಸಿದ ದಿನ ಮತ್ತೆ ಮರಳಿ ಬಂದು ಅವರನ್ನು ಕಂಡ. ಅವನ ಮುಖದಲ್ಲಿ ಯಾವ ಕಳೆಯೂ ಇರಲಿಲ್ಲ. ‘ಸ್ವಾಮಿ, ನೀವು ಹೇಳಿದ ಎಲ್ಲ ವಿಧಿಗಳನ್ನು, ವ್ರತಗಳನ್ನು ಮಾಡಿದೆ. ಆದರೆ ಯಾವ ಪ್ರಯೋಜನವೂ ಆಗಲಿಲ್ಲ. ಮನಸ್ಸು ಬರೀ ವಿಷಯ ಸುಖವನ್ನೇ, ಕೀಳುಮಟ್ಟದ ಸಂತೋಷವನ್ನೇ ಬಯಸುತ್ತದೆ. ಏನು ಮಾಡಲಿ?’ ಎಂದು ಕೇಳಿದ.ಒಂದು ಕ್ಷಣ ಚಿಂತಿಸಿ ಗುರುಗಳು ಹೇಳಿದರು, ‘ನಾಳೆ ಬೆಳಿಗ್ಗೆ ಎಂಟು ಗಂಟೆಗೆ ನಮ್ಮ ಮನೆಗೆ ಬಂದುಬಿಡು, ಏನಾದರೂ ಯೋಜನೆ ಮಾಡೋಣ.’ ತರುಣ ಅವರು ಹೇಳಿದ ಸಮಯಕ್ಕೆ ಸರಿಯಾಗಿ ಗುರುಗಳ ಮನೆ ತಲುಪಿದ. ಅವರು ಅವನಿಗಾಗಿಯೇ ಕಾಯುತ್ತಿದ್ದರು. ‘ಬಂದೆಯಾ ಬಾ’ ಎಂದು ಅವನನ್ನು ಒಂದು ಕೊಠಡಿಗೆ ಕರೆದೊಯ್ದರು. ಅಲ್ಲಿ ನಾಲ್ಕು ಗೋಡೆಗಳಿಗೆ ಹೊಂದಿಕೊಂಡಂತೆ ಪುಸ್ತಕದ ಕಪಾಟುಗಳು. ಅವುಗಳ ತುಂಬ ತರತರಹದ ಪುಸ್ತಕಗಳು. ಅವುಗಳಲ್ಲಿ ಮೊದಲನೇ ಕಪಾಟನ್ನು ತೋರಿಸಿ ಗುರುಗಳು ಹೇಳಿದರು, ‘ನೋಡು, ಈ ಕೆಲಸವನ್ನು ಅತ್ಯಂತ ಜವಾಬ್ದಾರಿಯಿಂದ ಮಾಡಬೇಕು. ಸ್ವಲ್ಪ ಹೆಚ್ಚು ಕಡಿಮೆಯಾದರೂ ನನಗೆ ತುಂಬ ತೊಂದರೆಯಾಗುತ್ತದೆ. ನೀನು ಒಂದೊಂದೇ ಪುಸ್ತಕವನ್ನು ನಿಧಾನವಾಗಿ ಹೊರತೆಗೆದು ಈ ಬಟ್ಟೆಯಿಂದ ಅದನ್ನು ಹಗುರಾಗಿ ಆದರೆ ತುಂಬ ಶುದ್ಧವಾಗುವಂತೆ ಒರೆಸಬೇಕು. ಜಾಗ್ರತೆ, ನಾನು ಪುಸ್ತಕಗಳ ನಡುವೆ ಅಲ್ಲಲ್ಲಿ ಗುರುತಿನ ಕಾಗದಗಳನ್ನು ಇಟ್ಟಿರುತ್ತೇನೆ, ಅವು ಕೆಳಗೆ ಬೀಳಬಾರದು. ಕೆಳಗೆ ಬಿದ್ದರೆ ನನಗೆ ಉಪನ್ಯಾಸಕ್ಕೆ ಬಹಳ ತೊಂದರೆಯಾಗುತ್ತದೆ. ಪುಸ್ತಕವನ್ನು ಮರಳಿ ಅದೇ ಜಾಗದಲ್ಲಿಡಬೇಕು. ಇಡುವ ಮೊದಲು ಕಪಾಟಿನ ಆ ಸ್ಥಳವನ್ನು ಶುದ್ಧ ಮಾಡಬೇಕು. ನಾನು ಇಲ್ಲೇ ಮೂಲೆಯಲ್ಲಿ ಕುಳಿತು ಓದುತ್ತಿರುತ್ತೇನೆ. ನೀನು ಸದ್ದು ಮಾಡುತ್ತಿದ್ದರೆ ನಾನು ಓದುವುದು ಹೇಗೆ? ಆದ್ದರಿಂದ ಸದ್ದು ಮಾಡದೇ, ಜಾಗ್ರತೆಯಿಂದ, ಕೆಲಸ ಮಾಡಬೇಕು. ಕೆಲಸ ಬೇಗವೂ ಆಗಬೇಕು. ಒಂದೇ ಕಪಾಟಿಗೆ ನೀನು ಇಡೀ ದಿನ ತೆಗೆದುಕೊಂಡರೆ ಹೇಗೆ?’ ಹುಡುಗ ಗೋಣು ಅಲ್ಲಾಡಿಸಿ ಕೆಲಸ ಪ್ರಾರಂಭಿಸಿದ.ಮೊದಮೊದಲು ತುಂಬ ಕಷ್ಟ ಎನ್ನಿಸಿತು. ಪುಸ್ತಕವನ್ನು ಮೆಲ್ಲನೇ ತೆಗೆಯಬೇಕು, ಕಪಾಟಿನ ಸ್ಥಳವನ್ನು ಒರೆಸಬೇಕು, ಪುಸ್ತಕವನ್ನು ನಿಧಾನವಾಗಿ ಶುದ್ಧಮಾಡಬೇಕು, ಒಳಗಿನ ಹಾಳೆಗಳು ಬೀಳದಂತೆ ನೋಡಿಕೊಂಡು ಮತ್ತೆ ಅದೇ ಸ್ಥಾನದಲ್ಲಿಡಬೇಕು. ಕೆಲವು ಪುಸ್ತಕಗಳೋ ಜೀರ್ಣಾವಸ್ಥೆಗೆ ಬಂದಿವೆ. ಇದನ್ನು ಮಾಡುವಾಗ ಸ್ವಲ್ಪವೂ ಸದ್ದಾಗಬಾರದು.ತರುಣ ಹಲ್ಲುಕಚ್ಚಿ ತುದಿಗಾಲ ಮೇಲೆ ನಡೆಯುತ್ತಾ ಕೆಲಸ ನಡೆಸಿದ. ಮಧ್ಯಾಹ್ನದ ಹೊತ್ತಿಗೆ ಒಂದು ಕಪಾಟಿನ ಕೆಲಸ ಮುಗಿಯಿತು. ಗುರುಗಳು ಬಂದು ಕೆಲಸ ನೋಡಿ ಮೆಚ್ಚಿದರು. ‘ಭಲೇ ಕೆಲಸ ಚೆನ್ನಾಗಿ ಮಾಡಿದ್ದೀಯಾ ಇದನ್ನು ಮಾಡುವಾಗ ಮನಸ್ಸು ಬೇರೆ ಏನನ್ನಾದರೂ ಚಿಂತಿಸುತ್ತಿತ್ತೇ?’ ಎಂದು ಕೇಳಿದರು. ‘ಎಲ್ಲಿ ಗುರುಗಳೇ ಒಂದು ಕ್ಷಣವೂ ಪುರುಸೊತ್ತಿಲ್ಲ. ನನ್ನ ಮನಸ್ಸೆಲ್ಲ ಕೆಲಸದಲ್ಲೇ ತೊಡಗಿತ್ತಲ್ಲ, ಬೇರೆ ಯಾವ ವಿಚಾರವೂ ಬರಲಿಲ್ಲ’ ಎಂದ ತರುಣ. ಆಗ ಗುರುಗಳು ಹೇಳಿದರು, ‘ಇದೇ ಮನಸ್ಸನ್ನು ‘ವಿಷಯ’ಗಳಿಂದ ದೂರ ಇಡುವ ಬಗೆ ಯಾವುದಾದರೂ ಒಂದು ಉತ್ತಮ ಕಾರ್ಯವನ್ನು ಗುರುತಿಸು. ಅದರಲ್ಲೇ ನಿನ್ನ ಮನಸ್ಸನ್ನು ಕೇಂದ್ರೀಕರಿಸಿ, ಸರ್ವಶಕ್ತಿಯನ್ನು ಅದಕ್ಕೇ ಮುಡಿಪಾಗಿಡು. ಆಗ ಮನಸ್ಸು ಬೇರೆ ಕಡೆಗೆ ತಿರುಗದೇ ಸಾಧನೆ ಸಾಧ್ಯವಾಗುತ್ತದೆ. ಕೆಲಸವಿಲ್ಲದ ಮನಸ್ಸು ಸೈತಾನನ ಕಾರ್ಖಾನೆ’ ಎಂದರು.ಅದಕ್ಕೇ ಮಂಕುತಿಮ್ಮ ಹೇಳುತ್ತಾನೆ. ಘನತತ್ವವೊಂದಕ್ಕೆ ದಿನರಾತ್ರಿ ಮನಸೋತು, ನೆನೆಯದು ಇನ್ನೊಂದನು, ಎಲ್ಲವನೂ ನೀಡುತ. ಅದರ ಅನುಸಂಧಿಯಲಿ ಜೀವಭಾರವನು ಮರೆಯುವುದು ಹನುಮಂತನುಪದೇಶ ಮಂಕುತಿಮ್ಮ, ಘನವಾದ ತತ್ವಕ್ಕೆ ಮನಸ್ಸನ್ನು ಸಂಪೂರ್ಣವಾಗಿ ತೆತ್ತು ಪ್ರಯತ್ನಿಸಿದರೆ ಸಾಧನೆಯಾಗುವುದಲ್ಲದೇ ಮನಸ್ಸು ಕೂಡ ನಿಯಂತ್ರಣದಲ್ಲಿರುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.