ಸೋಮವಾರ, ಜೂನ್ 21, 2021
24 °C

ಸೈಬರ್ ಸುಳ್ಳಿಗೆ ಸಾಮಾಜಿಕ ನಿಯಂತ್ರಣ ಸಾಧ್ಯವೇ?

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಸೈಬರ್ ಸುಳ್ಳಿಗೆ ಸಾಮಾಜಿಕ ನಿಯಂತ್ರಣ ಸಾಧ್ಯವೇ?

ಏಪ್ರಿಲ್ ತಿಂಗಳ ಕೊನೆಯ ವಾರದಲ್ಲಿ ‘ಸುಳ್ಳು ಸುದ್ದಿ, ಕಡಿಮೆ ಗುಣಮಟ್ಟದ ಮಾಹಿತಿ ಮತ್ತು ಆಧಾರ ರಹಿತವಾಗಿ ಒಳಸಂಚಿನ ಸಂಶಯಗಳ ಪ್ರಸರಣ’ ತಡೆಯಲು ಕೆಲವು ತಾಂತ್ರಿಕ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಗೂಗಲ್ ಘೋಷಿಸಿತು. ಇದಾಗಿ ಮೂರು ತಿಂಗಳು ಕಳೆಯುವ ಹೊತ್ತಿಗೆ ಈ ಕ್ರಮಗಳ ಫಲಿತಾಂಶಗಳೂ ಹೊರಬಿದ್ದಿವೆ. ವರ್ಲ್ಡ್ ಸೋಷಿಯಲಿಸ್ಟ್ ವೆಬ್‌ಸೈಟ್‌ನ ವರದಿ ಹೇಳುತ್ತಿರುವಂತೆ ಅಮ್ನೆಸ್ಟಿ ಇಂಟರ್ ನ್ಯಾಷನಲ್, ಕೌಂಟರ್ ಪಂಚ್, ಆಲ್ಟರ್ ನೆಟ್ ನಂಥ ಯುದ್ಧ ವಿರೋಧಿ, ಮಾನವ ಹಕ್ಕು ಪರ ಮತ್ತು ಎಡಪಂಥೀಯ ವಿಚಾರಧಾರೆಗಳತ್ತ ಒಲವು ತೋರುವ ವೆಬ್‌ಸೈಟ್ ಗಳ ಸಂದರ್ಶಕರ ಸಂಖ್ಯೆಯಲ್ಲಿ ಗಮನಾರ್ಹ ಪ್ರಮಾಣದಲ್ಲಿ ಕಡಿಮೆಯಾಗಿದೆ. ಇದಕ್ಕೆ ಮುಖ್ಯ ಕಾರಣ ಈ ವೆಬ್‌ಸೈಟ್‌ಗಳಲ್ಲಿರುವ ಅನೇಕ ಸಂಗತಿಗಳು ಗೂಗಲ್ ಬಳಸಿ ಹುಡುಕುವವರಿಗೆ ಸುಲಭ ಲಭ್ಯವಲ್ಲ.

ಗೂಗಲ್ ನ ಕ್ರಮದಿಂದ ಕೆಲ ಮಟ್ಟಿಗೆ ಸುಳ್ಳು ಸುದ್ದಿಯ ಪ್ರಸರಣವೂ ಕಡಿಮೆಯಾಗಿರಬಹುದು. ಯುದ್ಧ, ಆಯುಧ ವ್ಯಾಪಾರ, ಷೇರು ಮಾರುಕಟ್ಟೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಮುಖ್ಯವಾಹಿನಿಗಿಂತ ಭಿನ್ನವಾದ ನಿಲುವು ತಳೆಯುವ ಮಾಧ್ಯಮಗಳಿಗೂ ದೊಡ್ಡ ಪೆಟ್ಟು ಬಿದ್ದಿದೆ. ‘ಮಂತ್ಲೀ ರಿವ್ಯೂ’ ಪತ್ರಿಕೆ ಗೂಗಲ್‌ನ ತಾಂತ್ರಿಕ ಕ್ರಮಗಳನ್ನು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಹಲ್ಲೆ ಎಂದು ಕರೆದಿದೆ. ಇನ್ನು ಕೆಲವು ವಿಶ್ಲೇಷಕರು ಇದನ್ನು ಸೈಬರ್ ಜಗತ್ತಿನಲ್ಲಿ ಅಭಿವ್ಯಕ್ತಿಯ ವಿವಿಧತೆಯನ್ನು ಹತ್ತಿಕ್ಕುವ ಕ್ರಮ ಎಂದು ವಿವರಿಸಿದ್ದಾರೆ.

ಸೈಬರ್ ಜಗತ್ತಿನಲ್ಲಿ ಅಭಿವ್ಯಕ್ತಿಯ ವಿವಿಧತೆಗೆ ಅವಕಾಶವಿರಬೇಕು ಎಂಬುದರಲ್ಲಿ ಸಂಶಯವಿಲ್ಲ. ಸತ್ಯಕ್ಕೆ ಅನೇಕ ಮುಖಗಳಿರಬಹುದು ಹಾಗೆಯೇ ಒಂದು ಘಟನೆ ನಿರ್ದಿಷ್ಟ ಸಂದರ್ಭದಲ್ಲಿ ನಿರ್ದಿಷ್ಟ ಆಯಾಮವನ್ನು ಪಡೆದುಕೊಳ್ಳುತ್ತದೆ ಎಂಬುದೂ ನಿಜವೇ. ಇಡೀ ಜಗತ್ತಿನ ಮಾಹಿತಿಯನ್ನು ವಿಭಾಗಿಸಿ, ಜೋಡಿಸಿ, ಶೋಧಿಸಿ ಜನರ ಮುಂದಿಡುವ ಜವಾಬ್ದಾರಿಯನ್ನು ತನಗೆ ತಾನೇ ಹೊರಿಸಿಕೊಂಡಿರುವ ಗೂಗಲ್‌ನ ಮಟ್ಟಿಗೆ ಅಂತರ್ಜಾಲದಲ್ಲಿ ಲಭ್ಯವಿರುವ ಎಲ್ಲವೂ ಕೇವಲ ದತ್ತಾಂಶ. ಇದನ್ನು ಶೋಧಿಸಿ ಬಳಕೆದಾರನಿಗೆ ಕ್ಷಣಾರ್ಧದಲ್ಲಿ ಒದಗಿಸುವುದರ ಬಗ್ಗೆಯಷ್ಟೇ ಅ ದು ಚಿಂತಿಸುತ್ತದೆ. ಅದರ ಮಟ್ಟಿಗೆ ಇದೊಂದು ಸಾಧಾರಣ ತಾಂತ್ರಿಕ ಪ್ರಕ್ರಿಯೆಯಷ್ಟೇ ಆಗಿತ್ತು. ಇದನ್ನು ಸಂಕೀರ್ಣಗೊಳಿಸಿದ್ದು ತಂತ್ರಜ್ಞಾನದ ಹೊಸ ಸಾಧ್ಯತೆಗಳು.

ವೆಬ್ 2.0 ತಂತ್ರಜ್ಞಾನ ಕೇವಲ ಸಾಂಸ್ಥಿಕ ರೂಪದಲ್ಲಷ್ಟೇ ಸಾಧ್ಯವಿದ್ದ ‘ಸಮೂಹ ಸಂವಹನ’ ಪರಿಕಲ್ಪನೆಯನ್ನು ವ್ಯಕ್ತಿಯ ಮಟ್ಟಕ್ಕೆ ಇಳಿಸಿತು. ವ್ಯಕ್ತಿ ತನ್ನ ಬ್ಲಾಗ್, ಸಾಮಾಜಿಕ ಮಾಧ್ಯಮ ಖಾತೆಗಳ ಮೂಲಕ ದೊಡ್ಡದೊಂದು ಸಮೂಹದೊಂದಿಗೆ ಸಂವಹನ ನಡೆಸುವ ಸಾಧ್ಯತೆ ಅನಾವರಣಗೊಂಡಿತು. ಚಾಕು ಬಳಸಿ ತರಕಾರಿ ಕತ್ತರಿಸಲು ಸಾಧ್ಯವಿರುವಂತೆಯೇ ಕೊಲೆಯನ್ನು ಮಾಡಲೂ ಸಾಧ್ಯ. ವೆಬ್. 2.0 ಕೂಡಾ ಹಲವು ನಕಾರಾತ್ಮಕ ಸಾಧ್ಯತೆಗಳನ್ನು ಒಳಗೊಂಡಿತ್ತು. ಇದು ಸ್ವತಂತ್ರ ಅಭಿವ್ಯಕ್ತಿ (Free speech) ಮತ್ತು ಹಗೆ ನುಡಿ (Hate speech) ನಡುವಣ ಅಂತರವನ್ನು ಇನ್ನಿಲ್ಲದಂತೆ ಕಡಿಮೆ ಮಾಡಿಬಿಟ್ಟಿತು.

ಮುಕ್ತ ವೇದಿಕೆಗಳ ಒಳಗೆ ನಿಧಾನವಾಗಿ ಒಂದು ಸಮತೋಲನ ಸೃಷ್ಟಿಯಾಗುತ್ತದೆ. ಸುಳ್ಳು ಮಾಹಿತಿಗಳು, ಅರೆ ಬರೆ ಮಾಹಿತಿಗಳು ಹರಿದಾಡಿದರೂ ಅವುಗಳನ್ನು ದುರ್ಬಲಗೊಳಿಸುವುದಕ್ಕೆ ಅಗತ್ಯವಿರುವ ವಾಸ್ತವಿಕ ಮಾಹಿತಿಗಳೂ ಸೈಬರ್ ಜಗತ್ತಿನಲ್ಲಿಯೇ ಹುಟ್ಟಿಕೊಳ್ಳುತ್ತದೆ ಎಂಬ ಸಿದ್ಧಾಂತವನ್ನು ಗೂಗಲ್ ಸೇರಿದಂತೆ ಮುಕ್ತ ಮಾಹಿತಿಯ ಪ್ರತಿಪಾದಕರೆಲ್ಲರೂ ನಂಬಿದ್ದರು. ವಿಕಿಪೀಡಿಯಾದಂಥ ಪ್ರಯೋಗವೂ ಕೂಡಾ ಇದನ್ನೇ ಸಮರ್ಥಿಸುತ್ತಿತ್ತು. ವೃತ್ತಿಪರ ಸಂಪಾದಕರು ರೂಪಿಸಿದ ವಿಶ್ವಕೋಶಕ್ಕೆ ಯಾವುದೇ ರೀತಿಯಲ್ಲಿಯೂ ವಿಕಿಪೀಡಿಯಾ ಕಡಿಮೆಯಲ್ಲ. ಈ ಉದಾಹರಣೆಯನ್ನು ಇಡೀ ಸೈಬರ್ ಜಗತ್ತಿಗೆ ಅನ್ವಯಿಸಲು ಸಾಧ್ಯವಾಗುವುದಿಲ್ಲ.ವಿಕಿಪೀಡಿಯಾಕ್ಕೆ ಎಲ್ಲರೂ ಮಾಹಿತಿ ಸೇರಿಸಬಹುದು ಎಂಬುದು ನಿಜ. ಇದರಲ್ಲಿ ಸುಳ್ಳು ಮಾಹಿತಿಯಿದ್ದರೆ ಅದನ್ನು ಅಲ್ಲಿಯೇ ಸರಿಪಡಿಸಲು, ಹಾಗೆಯೇ ಖಂಡಿಸಲು ಸಾಧ್ಯವಿದೆ. ‘ನಿರ್ದಿಷ್ಟ ದೃಷ್ಟಿಕೋನ’ ಎಂಬ ಕಾರಣಕ್ಕಾಗಿಯೇ ಇಲ್ಲಿ ನೂರಾರು ಪುಟಗಳಷ್ಟು ದೀರ್ಘವಾಗಿರುವ ಚರ್ಚೆಗಳೂ ನಡೆಯುತ್ತವೆ. ಆದರೆ ಇಡೀ ಸೈಬರ್ ಜಗತ್ತಿನಲ್ಲಿರುವ ಮಾಹಿತಿ ಈ ಬಗೆಯ ಪರಿಶೀಲನೆಗೆ ಒಳಪಡುವುದಿಲ್ಲ. ಈ ಕಾರಣದಿಂದಾಗಿಯೇ ಸುಳ್ಳು ಸುದ್ದಿಯನ್ನು ನಿಜವೆಂಬಂತೆ ಹರಡಲು ಸಾಧ್ಯವಾಗುತ್ತದೆ. ವಿಕಿಪೀಡಿಯಾಕ್ಕೆ ಮಾಹಿತಿಯನ್ನು ಹುಡುಕಿ ಬರುವವರ ಹಿನ್ನೆಲೆ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿಯನ್ನು ಹಂಚಿಕೊಳ್ಳುವವರ ಹಿನ್ನೆಲೆಗಳು ಭಿನ್ನ. ವಿಕಿಪೀಡಿಯಾದ ಬಳಕೆದಾರರೂ ನಿರ್ದಿಷ್ಟ ಮಾಹಿತಿಯನ್ನು ಹುಡುಕುತ್ತಿರುತ್ತಾರೆ.

ಸಾಮಾಜಿಕ ಜಾಲತಾಣಗಳನ್ನು ಬಳಸುವವರು ತಮ್ಮ ಗೆಳೆಯರ ಬಳಗದಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಅಥವಾ ಮಾಹಿತಿಯನ್ನು ಇನ್ನಷ್ಟು ಗೆಳೆಯರೊಂದಿಗೆ ಹಂಚಿಕೊಳ್ಳುತ್ತಾರೆ ಅಷ್ಟೇ. ಮಾಹಿತಿ ಅವರ ಮನಸ್ಸಿಗೆ ನಿಜ ಅನ್ನಿಸಿದರೆ ಸಾಕಾಗುತ್ತದೆ. ಅಥವಾ ಸೈದ್ಧಾಂತಿಕ ಒಲವನ್ನು ಬಲಪಡಿಸುವಂತಿದ್ದರೆ ಸಾಕಾಗುತ್ತದೆ. ಸುದ್ದಿ ವಿಶ್ವಾಸಾರ್ಹ ಮೂಲದಿಂದ ಬಂದಿದೆಯೇ ಇಲ್ಲವೇ ಎಂಬುದನ್ನು ಅವರು ಗಮನಿಸಲು ಹೋಗುವುದಿಲ್ಲ.

ಇತ್ತೀಚೆಗೆ ಸುದ್ದಿ ಮಾಡಿದ ಚಂಡೀಗಢ ಹಿಂಬಾಲಿಸುವಿಕೆ ಪ್ರಕರಣದ ಸುತ್ತ ನಡೆದ ಚರ್ಚೆಯನ್ನು ಇದಕ್ಕೆ ಉದಾಹರಣೆಯಾಗಿ ಪರಿಗಣಿಸಬಹುದು. ಐಎಎಸ್ ಅಧಿಕಾರಿಯೊಬ್ಬರ ಪುತ್ರಿ ವರ್ಣಿಕಾ ಅವರನ್ನು ಬಿಜೆಪಿಯ ಹರಿಯಾಣದ ಬಿಜೆಪಿ ನಾಯಕ ಸುಭಾಷ್ ಬರಾಲ ಅವರ ಪುತ್ರ ವಿಕಾಸ್ ಬರಾಲ ಹಿಂಬಾಲಿಸಿ ಕಾಟಕೊಟ್ಟಿದ್ದು ಮಾಧ್ಯಮಗಳಲ್ಲಿ ವರದಿಯಾಯಿತು. ವಿಕಾಸ್ ವಿರುದ್ಧ ವರ್ಣಿಕಾ ದೂರು ದಾಖಲಿಸಿದ್ದರು. ಇದರ ಹಿಂದೆಯೇ ಸುಪ್ರೀಂಕೋರ್ಟ್ ವಕೀಲ ಪ್ರಶಾಂತ್ ಪಿ ಉಮ್ರಾವ್  ‘ಐಎಎಸ್ ಅಧಿಕಾರಿಯ ಪುತ್ರಿ ವಿಕಾಸ್ ಬರಾಲ ಜೊತೆ’ ಎಂಬ ಹೇಳಿಕೆಯೊಂದಿಗೆ ಒಂದು ಫೋಟೋವನ್ನು ಟ್ವೀಟ್ ಮಾಡಿದ್ದರು. ಈ ಚಿತ್ರದಲ್ಲಿ ವಿಕಾಸ್ ಬರಾಲ ಇರಲಿಲ್ಲ. ಅವರಿಗೆ ವಿಕಾಸ್ ಬರಾಲ ಯಾರೆಂದೂ ಗೊತ್ತಿರಲಿಲ್ಲ. ‘ನ್ಯೂಸ್ ಲಾಂಡ್ರಿ’ ಜಾಲತಾಣದ ಜೊತೆಗಿನ ಮಾತುಕತೆ ವೇಳೆ ಪ್ರಶಾಂತ್ ಈ ಅಂಶವನ್ನು ಒಪ್ಪಿಕೊಂಡಿದ್ದಾರೆ. ಆದರೆ ಹೀಗೊಂದು ಫೋಟೋವನ್ನು ಟ್ವೀಟ್ ಮಾಡುವುದಕ್ಕೆ ಅವರಿಗೆ ಯಾವ ಅಳುಕೂ ಇರಲಿಲ್ಲ. ಅಷ್ಟೇಕೆ ತಪ್ಪೆಂದು ತಿಳಿದ ನಂತರ ಅವರಿಗೆ ವಿಷಾದವೂ ಇರಲಿಲ್ಲ. ಈ ಫೋಟೋ 2600 ಬಾರಿ ರೀಟ್ವೀಟ್ ಅಥವಾ ಮರು ಹಂಚಿಕೆಯಾಗಿದೆ. ಹಲವಾರು ಫೇಸ್‌ಬುಕ್ ಪೋಸ್ಟ್‌ಗಳಲ್ಲಿ ಹರಡಿ ಹಿಂಬಾಲಿಸುವಿಕೆಯ ಬಲಿಪಶುವಿನ ಚಾರಿತ್ರ್ಯ ಹನನ ನಡೆದಿದೆ. ಬಿಜೆಪಿಯನ್ನು ಬೆಂಬಲಿಸುವ ಅನೇಕ ವೆಬ್‌ಸೈಟುಗಳಲ್ಲಿಯೂ ‘ವಿಕಾಸ್ ಬರಾಲ ಜೊತೆ ವರ್ಣಿಕಾ’ ಎಂಬ ಸುದ್ದಿಯೂ ಪ್ರಕಟವಾಯಿತು.

ಗೂಗಲ್  ಈ ಸಮಸ್ಯೆಗೆ ಒಂದು ತಂತ್ರಜ್ಞಾನದ ಪರಿಹಾರ ಕಂಡುಕೊಳ್ಳಲು ಹೊರಟರೆ ಏನಾಗಬಹುದು? ಅಮೆರಿಕದಲ್ಲಿ ಸಂಭವಿಸಿದ್ದೇ ಭಾರತದಲ್ಲಿಯೂ ಸಂಭವಿಸಬಹುದು. ಬಿಜೆಪಿ, ಆರ್ ಎಸ್ ಎಸ್ ಅಥವಾ ಸಂಘಪರಿವಾರದ ಸಂಘಟನೆಗಳ ಜೊತೆಗೆ ಸಂಬಂಧ ಕಲ್ಪಿಸಬಹುದಾದ ಸುದ್ದಿಗಳೆಲ್ಲವೂ ಗೂಗಲ್ ಸರ್ಚ್ ಫಲಿತಾಂಶದ ಎರಡು ಅಥವಾ ಮೂರನೇ ಪುಟಕ್ಕೆ ಸರಿದು ಬಿಡಬಹುದು. ವಿಚಾರದ ವಿವಿಧತೆಯನ್ನು, ಸುದ್ದಿಯ ಭಿನ್ನ ಆಯಾಮಗಳನ್ನು ತಿಳಿಸುವ ಹಕ್ಕನ್ನು ಕಿತ್ತುಕೊಳ್ಳಲಾಗಿದೆ ಎಂಬ ಕೂಗು ಇಲ್ಲಿಯೂ ಕೇಳಿಬರಬಹುದು.ಸೈಬರ್ ಜಗತ್ತನ್ನು ಬಾಧಿಸುತ್ತಿರುವ ಸುಳ್ಳು ಸುದ್ದಿ, ಸುಳ್ಳು ಮಾಹಿತಿಯ ರೋಗಕ್ಕೆ ತಂತ್ರಜ್ಞಾನ ಅಥವಾ ಕಾನೂನಿನಲ್ಲಿ ಮದ್ದಿಲ್ಲ. ಈಗಾಗಲೇ ಸುಳ್ಳು ಮಾಹಿತಿ ಅಥವಾ ವದಂತಿಗಳನ್ನು ಹರಡುವವರ ವಿರುದ್ಧ ಕ್ರಮ ಕೈಗೊಳ್ಳಲು ಅಗತ್ಯವಿರುವ ಕಾನೂನುಗಳಿವೆ. ಇವುಗಳನ್ನು ನಿರ್ದಿಷ್ಟ ಪ್ರಕರಣಗಳಿಗೆ ಅನ್ವಯಿಸುವುದೇ ಒಂದು ಸವಾಲು. ಏಕೆಂದರೆ ಸುಳ್ಳು ಸುದ್ದಿಗಳ ಹರಡುವಿಕೆ ಎಷ್ಟು ವೇಗದಲ್ಲಿ ಸಂಭವಿಸುತ್ತದೆಯೆಂದರೆ ಅದರ ಮೂಲವನ್ನು ಕಂಡುಕೊಳ್ಳುವುದೇ ಕಷ್ಟ. ತಾಂತ್ರಿಕವಾಗಿ ಇದು ಸಾಧ್ಯವಿದೆಯಾದರೂ ಸುಳ್ಳು ಸುದ್ದಿಗಳ ಪ್ರಮಾಣ ಎಷ್ಟು ದೊಡ್ಡದಿದೆಯೆಂದರೆ ಈ ಪ್ರಕರಣಗಳನ್ನು ನಿರ್ವಹಿಸುವುದಕ್ಕಾಗಿಯೇ ಒಂದು ಇಲಾಖೆಯೇ ಬೇಕಾಗಬಹುದೇನೋ.

ಇನ್ನು ಸದ್ಯ ಲಭ್ಯವಿರುವ ತಾಂತ್ರಿಕ ಪರಿಹಾರಗಳಿಗೆಲ್ಲಾ ಹಲವು ಮಿತಿಗಳಿವೆ. ಕೃತಕ ಬುದ್ಧಿಮತ್ತೆಯಂಥ ತಂತ್ರಜ್ಞಾನಗಳನ್ನು ಬಳಸಿ ಸುಳ್ಳು ಸುದ್ದಿಗಳ ಶೋಧನೆಯಲ್ಲಿ ತೊಡಗಬಹುದು. ಆದರೆ ಅದು ಅನೇಕ ನಿಜ ಸುದ್ದಿಗಳಿಗೇ ಮಾರಕವಾಗಿ ಪರಿಣಮಿಸಿಬಿಡುವ ಅಪಾಯವಿದೆ. ಗೂಗಲ್‌ನ ಹೊಸ ಸರ್ಚ್ ಅಲ್ಗಾರಿದಂ ಅಮೆರಿಕದ ಯುದ್ಧ ವಿರೋಧಿ, ಮಾನವ ಹಕ್ಕು ಪರ ವೆಬ್ ಸೈಟ್ ಗಳನ್ನೆಲ್ಲಾ ಸುಳ್ಳು ಸುದ್ದಿ ಸೈಟುಗಳನ್ನಾಗಿ ಪರಿವರ್ತಿಸಿದಂತಾಗಿಬಿಡುತ್ತದೆ. ಇನ್ನು ಉಳಿದಿರುವ ಏಕೈಕ ಮಾರ್ಗ. ಸಾಮಾಜಿಕ ನಿಯಂತ್ರಣ. ಸೈದ್ಧಾಂತಿಕ ಒಲವು ಮತ್ತು ನಿಲುವುಗಳನ್ನು ಮೀರಿ ಸತ್ಯವನ್ನು ಗುರುತಿಸುವ ಮನಃಸ್ಥಿತಿಯೊಂದನ್ನು ನಾವೆಲ್ಲರೂ ರೂಢಿಸಿಕೊಳ್ಳಬೇಕಾಗಿದೆ.

ಯಾರೋ ಕಳುಹಿಸಿದ ವಾಟ್ಸ್ ಆಪ್ ಸಂದೇಶ ಅಥವಾ ನ್ಯೂಸ್ ಫೀಡ್ ನಲ್ಲಿ ಕಂಡ ಫೇಸ್ ಬುಕ್ ಪೋಸ್ಟ್ ಅನ್ನು ಮರು ಹಂಚಿಕೆ ಮಾಡುವ ಮೊದಲು ಅರೆ ಕ್ಷಣ ಆಲೋಚಿಸುವ ಮನಸ್ಸು ನಮ್ಮದಾಯಿತು ಎಂದರೆ ಈ ಸಾಮಾಜಿಕ ನಿಯಂತ್ರಣ ಸಾಧ್ಯವಾಗುತ್ತದೆ. ಕೇವಲ ವದಂತಿಯನ್ನಷ್ಟೇ ಮುಂದಿಟ್ಟುಕೊಂಡು ಕೊಲೆಗೂ ಮುಂದಾಗುವ ಗುಂಪುಗಳೂ ಇರುವ ಸಮಾಜದಲ್ಲಿ ಇದು ಸಾಧ್ಯವೇ ಎಂಬುದಷ್ಟೇ ನಮ್ಮ ಮುಂದಿರುವ ಪ್ರಶ್ನೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.