ಮಂಗಳವಾರ, ಜೂನ್ 28, 2022
27 °C

ಸೈಬರ್ ಸ್ವಾತಂತ್ರ್ಯ ಘೋಷಣೆಯ ಎರಡು ದಶಕ

ಎನ್.ಎ.ಎಂ. ಇಸ್ಮಾಯಿಲ್ Updated:

ಅಕ್ಷರ ಗಾತ್ರ : | |

ಸೈಬರ್ ಸ್ವಾತಂತ್ರ್ಯ ಘೋಷಣೆಯ ಎರಡು ದಶಕ ‘ಕೈಗಾರಿಕಾ ಜಗತ್ತಿನ ಸರ್ಕಾರಗಳೇ, ಮಾಂಸ ಮತ್ತು ಉಕ್ಕಿನಿಂದ ರೂಪುಗೊಂಡ ಜುಗುಪ್ಸೆ ಹುಟ್ಟಿಸುವ ಆಕಾರವುಳ್ಳ ದೈತ್ಯರೇ, ನಾನು ಮನಸ್ಸಿನ ಹೊಸ ಮನೆಯಾದ ಸೈಬರಾಕಾಶದಿಂದ ಬಂದಿರುವೆ. ಭೂತಕಾಲಕ್ಕೆ ಸೇರಿದ ನೀವು ನಮ್ಮನ್ನು ನಮ್ಮಷ್ಟಕ್ಕೇ ಬಿಟ್ಟುಬಿಡಿ ಎಂದು ಭವಿಷ್ಯದ ಪರವಾಗಿ ಕೇಳುತ್ತಿದ್ದೇನೆ. ನಿಮಗೆ ನಮ್ಮ ಮಧ್ಯೆ ಸ್ಥಳವಿಲ್ಲ. ನಿಮ್ಮ ಸಾರ್ವಭೌಮತ್ವದ ವ್ಯಾಪ್ತಿ ನಾವು ಒಟ್ಟುಗೂಡುವ ಪ್ರದೇಶವನ್ನು ಒಳಗೊಂಡಿಲ್ಲ’ ಸೈಬರ್‌ಜಗತ್ತಿನ ಸ್ವಾತಂತ್ರ್ಯದ ಘೋಷಣೆಯ ಭಾಗವಾಗಿ ಜಾನ್ ಪೆರಿ ಬರ್ಲೋ ಈ ಮಾತುಗಳನ್ನು ಬರೆದು ಈಗ ಇಪ್ಪತ್ತು ವರ್ಷಗಳು ಉರುಳಿದವು.ಈ ಎರಡು ದಶಕಗಳ ಅವಧಿಯಲ್ಲಿ ಸೈಬರ್ ಜಗತ್ತಿನಲ್ಲಿ ಏನೇನೋ ಸಂಭವಿಸಿತು. ಸರಿಯಾಗಿ ಹತ್ತು ವರ್ಷಗಳ ಹಿಂದೆ ಜಾನ್ ಪೆರಿ ಬರ್ಲೋ ಬರೆದ ಘೋಷಣೆ ನಿಜವೇ ಆಗಿಬಿಡುತ್ತದೆ ಎಂಬ ಭಾವ ಹುಟ್ಟಿಸುವ ವೆಬ್ 2.0 ಪರಿಕಲ್ಪನೆ ಹುಟ್ಟಿತು. 2006ರಲ್ಲಿ ‘ಟೈಮ್’ ಪತ್ರಿಕೆ ವರ್ಷದ ವ್ಯಕ್ತಿಯನ್ನಾಗಿ ಆರಿಸಿದ್ದು ‘ನಿಮ್ಮನ್ನು’. ‘You, Yes you. You control the information Age. Welcome to your world’ಎಂಬ ಶೀರ್ಷಿಕೆಯೊಂದಿಗೆ ಹೊರಬಂದ ‘ಟೈಮ್’ ಪತ್ರಿಕೆ ಸಂಭ್ರಮಿಸಿದ್ದು ಸಾಮಾನ್ಯ ಜನತೆಯ ಕಾಣಿಕೆಯನ್ನು. ಯೂಟ್ಯೂಬ್, ಫೇಸ್‌ಬುಕ್, ಮೈಸ್ಪೇಸ್‌ನಂಥ ಹತ್ತಾರು ವೆಬ್ 2.0 ತಂತ್ರಜ್ಞಾನ ಬಳಸುವ ಜಾಲತಾಣಗಳಲ್ಲಿ ಬರೆಯುವ, ಚಿತ್ರಗಳನ್ನೂ ವಿಡಿಯೋಗಳನ್ನು ತುಂಬಿಸುತ್ತಿದ್ದ ನೆಟಿಝನ್‌ಗಳನ್ನು ವರ್ಷದ ವ್ಯಕ್ತಿಯಾಗಿಸಿತು.ಬಹುಶಃ ವೆಬ್ 2.0 ಎಂಬ ಓರೇಲಿ ಮುಂದಿಟ್ಟ ಪರಿಕಲ್ಪನೆ ನಿಜಕ್ಕೂ ಜನಪ್ರಿಯವಾದ ಕ್ಷಣ ಇದು. ಅಂತರ್ಜಾಲವನ್ನು ನಿಯಂತ್ರಿಸುವವರು ಬಳಕೆದಾರರು ಎಂಬುದನ್ನು ಬಹುತೇಕ ಎಲ್ಲರೂ ನಂಬಿದ ದಿನಗಳವು. ಅದಾಗಿ ಈಗ ಹತ್ತು ವರ್ಷ ತುಂಬುತ್ತಾ ಬಂದಿದೆ. ಅಂತರ್ಜಾಲವನ್ನು ಜನರು ನಿಯಂತ್ರಿಸುತ್ತಿದ್ದಾರೆಯೇ ಎಂಬ ಪ್ರಶ್ನೆಯನ್ನು ಮತ್ತೆ ಮತ್ತೆ ಕೇಳಲಾಗುತ್ತಿದೆ.ಈಗ ನಮ್ಮ ಮುಂದಿರುವ ಉತ್ತರ ಬಹಳ ಸಂಕೀರ್ಣವಾದುದು. ಇಪ್ಪತ್ತು ವರ್ಷಗಳ ಹಿಂದೆ ಜಾನ್ ಪೆರಿ ಬರ್ಲೋ ಬರೆದ ಸೈಬರ್ ಸ್ವಾತಂತ್ರ್ಯದ ಘೋಷಣೆಯೀಗ ಅತಿ ಆದರ್ಶವಾದದಂತೆ ಕಾಣಿಸುತ್ತಿದೆ. ಬರ್ಲೋ ಹೇಳಿದಂತೆ ಭೂತಕಾಲದ ದೈತ್ಯರಷ್ಟೇ ಸೈಬರ್ ಪ್ರಪಂಚವನ್ನು ನಿಯಂತ್ರಿಸುತ್ತಿಲ್ಲ. ಈ ದೈತ್ಯರನ್ನೇ ನಿಯಂತ್ರಿಸಬಲ್ಲ ಹೊಸ ದೈತ್ಯರು ಭವಿಷ್ಯದ ಮೇಲಿನ ಅಧಿಕಾರವನ್ನು ಖಾತರಿಪಡಿಸಿಕೊಳ್ಳುವ ದಾರಿಯಲ್ಲಿ ಮುಂದುವರಿಯುತ್ತಿದ್ದಾರೆ.ವೆಬ್ 2.0 ಪರಿಕಲ್ಪನೆಗೆ ಹತ್ತು ವರ್ಷ ತುಂಬಿತು ಎಂಬುದೇ ನಮಗೆ ಮುಖ್ಯವಾಗಲಿಲ್ಲ. ಕ್ಷಣ ಕ್ಷಣಕ್ಕೂ ಬದಲಾಗುವ ಈ ಸೈಬರ್ ಪ್ರಪಂಚದಲ್ಲಿ ಒಂದು ದಶಕ ಎಂಬುದು ಒಂದು ಯುಗದಷ್ಟು ದೊಡ್ಡ ಅವಧಿ. ಇ-ಮೇಲ್ ಜನ ಸಾಮಾನ್ಯರಿಗೆ ದೊರೆತ ಕಾಲದಲ್ಲಿ ಪ್ರಪಂಚಾದ್ಯಂತ ಹರಿದಾಡಿದ್ದ ಬರ್ಲೋ ಬರೆದ ಸೈಬರ್ ಸ್ವಾತಂತ್ರ್ಯ ಘೋಷಣೆಯ ಪಠ್ಯವೀಗ ಗೂಗಲಿಸಿದರೆ ಲಭ್ಯವಿದೆ. ಹೀಗೊಂದು ಆದರ್ಶ ಬರೇ ಎರಡು ದಶಕಗಳ ಹಿಂದಷ್ಟೇ ನಮ್ಮೆದುರು ಇತ್ತು ಎಂಬುದು ಆ ಕಾಲದಲ್ಲಿ ಘೋಷಣೆಯನ್ನು ಓದಿದವರಿಗೂ ಮರೆತು ಹೋಗಿಬಿಟ್ಟಿದೆ. ಈ ವಿಸ್ಮೃತಿಯೊಳಗೆ ಏನೆಲ್ಲಾ ಅಡಗಿದೆ ಎಂದು ಹುಡುಕಿದರೆ ಕೆಲವು ಆಶ್ಚರ್ಯಕರವೆನಿಸುವಂಥ ಸಂಗತಿಗಳು ನಮ್ಮೆದುರು ಅನಾವರಣಗೊಳ್ಳುತ್ತವೆ. ಇದರಲ್ಲಿ ಬಹಳ ಮುಖ್ಯವಾದುದು ‘ವಿದ್ಯುನ್ಮಾನ ಪ್ರತಿಭಟನೆ’ಯ ಪರಿಕಲ್ಪನೆ.ಎಲೆಕ್ಟ್ರಾನಿಕ್ ಸಿವಿಲ್ ಡಿಸ್‌ಒಬಿಡಿಯನ್ಸ್ ಎಂಬ ಪರಿಕಲ್ಪನೆ ಜನ್ಮತಳೆದಾಗ ಅದನ್ನು ಅಪರಾಧವೆಂಬಂತೆ ಪರಿಗಣಿಸಿರಲಿಲ್ಲ. ಸಾರ್ವಜನಿಕ ಸ್ಥಳವೊಂದರಲ್ಲಿ ಧರಣಿ ಕುಳಿತುಕೊಳ್ಳುವ ಅಥವಾ ಕಾನೂನು ಭಂಗದ ಮೂಲಕ ಪ್ರತಿಭಟನೆ ನಡೆಸುವಂಥ ಒಂದು ಕ್ರಿಯೆಯನ್ನಾಗಿ ಪರಿಗಣಿಸಲಾಗಿತ್ತು. 2001ರಲ್ಲಿ ಇಂಥದ್ದೊಂದು ಪ್ರತಿಭಟನೆಯೂ ನಡೆಯಿತು. ಯಾವುದೇ ಸಾಫ್ಟ್‌ವೇರ್ ಬಳಸದೆ ಲಿಬರ್ಟಾಡ್ ಎಂಬ ಗುಂಪು ಲುಫ್ತಾನ್ಸಾ ಎಂಬ ಜರ್ಮನ್ ವಿಮಾನಯಾನ ಸಂಸ್ಥೆಯ ವಿರುದ್ಧ ಪ್ರತಿಭಟಿಸುವುದಕ್ಕೆ ಕರೆ ಕೊಟ್ಟಿತು.ಜರ್ಮನಿಯಲ್ಲಿ ಆಶ್ರಯ ಕೋರಿದ ವಿದೇಶಿಯರನ್ನು ಹೊರಗೆ ಹಾಕುವುದಕ್ಕೆ ಲುಫ್ತಾನ್ಸಾ ಸಹಕಾರ ನೀಡಿದ್ದನ್ನು ಪ್ರತಿಭಟಿಸುವ ಈ ಯೋಜನೆಯಲ್ಲಿ ಧರಣಿ ಇದ್ದಂತೆಯೇ ವಿದ್ಯುನ್ಮಾನ ಧರಣಿಯೂ ಇತ್ತು. 2001ರ ಜೂನ್ 20ರಂದು ಬೆಳಿಗ್ಗೆ ಹತ್ತು ಗಂಟೆಯ ವೇಳೆಗೆ ಸಾವಿರಾರು ಜನರು ಏಕಕಾಲದಲ್ಲಿ ಲುಫ್ತಾನ್ಸಾದ ವೆಬ್‌ಸೈಟ್‌ಗೆ ಭೇಟಿ ಕೊಟ್ಟರು. ಸೈಟ್ ಈ ಸಂಖ್ಯೆಯನ್ನು ನಿರ್ವಹಿಸಿತು. ಅದರಿಂದ ದೊಡ್ಡ ತೊಂದರೆಯೇನೂ ಆಗಲಿಲ್ಲ ಎಂದು ಆಗ ಮಾಧ್ಯಮಗಳು ವರದಿ ಮಾಡಿದ್ದವು.ಲುಫ್ತಾನ್ಸಾ ಕಚೇರಿಯೆದುರು ಹತ್ತಾರು ಮಂದಿ ಕುಳಿತು ಧರಣಿ ಮಾಡುವಷ್ಟು ದೊಡ್ಡ ಪರಿಣಾಮವನ್ನೂ ಈ ಪ್ರತಿಭಟನೆ ಮಾಡಲಿಲ್ಲ ಎಂಬುದು ವಾಸ್ತವ. ಇದಕ್ಕೆ ಇದ್ದ ಪರಿಹಾರವೆಂದರೆ ಸಾಫ್ಟ್‌ವೇರ್ ಬಳಸಿ ಲಕ್ಷಾಂತರ ಸಂದೇಶಗಳನ್ನು ಕಳುಹಿಸಿ ವೆಬ್‌ಸೈಟ್ ಸ್ಥಗಿತಗೊಳ್ಳುವಂತೆ ಮಾಡುವುದು. ಡಿಓಎಸ್ ದಾಳಿ ಎಂದು ಕರೆಯಲಾಗುವ ಈ ತಂತ್ರವನ್ನು ಬಳಸುವುದನ್ನು ಆ ಕಾಲದ ಸೈಬರ್ ಆದರ್ಶವಾದಿಗಳ ವಿರೋಧವೂ ಇತ್ತು ಎಂಬುದಿಲ್ಲಿ ಗಮನಾರ್ಹ.ಇದರ ನಂತರ ವಿದ್ಯುನ್ಮಾನ ಪ್ರತಿಭಟನೆಗಳ ಸಾಧ್ಯತೆಯ ಬಗ್ಗೆ ಭರವಸೆ ಮೂಡಿಸಿದ್ದು ಅರಬ್ ವಸಂತ. ಟ್ವಿಟ್ಟರ್, ಫೇಸ್‌ಬುಕ್ ಮತ್ತು ಯೂಟ್ಯೂಬ್‌ಗಳಲ್ಲೇ ಒಂದು ಕ್ರಾಂತಿ ಸಾಧ್ಯ ಎನ್ನುವಷ್ಟರ ಮಟ್ಟಿಗಿನ ಸಂಶೋಧನಾ ಸಾಹಿತ್ಯವೂ ಈ ಕಾಲದಲ್ಲಿ ರಚನೆಯಾಯಿತು. ಒಂದು ಬಗೆಯಲ್ಲಿ ಇದುವೇ ಭಾರತವೂ ಸೇರಿದಂತೆ ಅನೇಕ ದೇಶಗಳಲ್ಲಿ ಚುನಾವಣಾ ಪ್ರಚಾರದ ಸಾಧನವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೂ ಕಾರಣವಾಯಿತು. ಕಳೆದ ಲೋಕಸಭಾ ಚುನಾವಣೆಯಂತೂ ಎಲ್ಲಾ ಅರ್ಥದಲ್ಲಿಯೂ ಸೋಷಿಯಲ್ ಮೀಡಿಯಾದ ವಿಜೃಂಭಣೆಯ ಚುನಾವಣೆಯಾಗಿತ್ತು.ಆದರೆ ವೆಬ್ 2.0 ಪರಿಕಲ್ಪನೆಗೆ ಒಂದು ದಶಕ ತುಂಬುತ್ತಿರುವ ಹೊತ್ತಿನಲ್ಲಿ ಈ ಎಲ್ಲಾ ಬೆಳವಣಿಗೆಗಳನ್ನು ಹಿಂದುರುಗಿ ನೋಡಿದಾಗ ನಾವು ಸೈಬರ್ ಸ್ವಾತಂತ್ರ್ಯದ ಹಾದಿಯಲ್ಲಿ ಮುಂದಿಟ್ಟ ಹೆಜ್ಜೆಗಳಷ್ಟೇ ಪ್ರಮಾಣದಲ್ಲಿ ಹಿಂದಕ್ಕೂ ಸಾಗಿದ್ದೇವೆ ಎಂಬ ವಾಸ್ತವದ ಅರಿವಾಗುತ್ತದೆ. ಸ್ಲ್ಯಾಕ್ಟಿವಿಸಂ ಎಂಬ ಪದ ಹುಟ್ಟಿದ್ದು ಈ ಕಾಲದಲ್ಲೇ ಎಂಬುದನ್ನು ನೋಡಿದರೆ ಹಿಂದಿಟ್ಟ ಹೆಜ್ಜೆಗಳೆಂಥವು ಎಂಬುದೂ ತಿಳಿಯುತ್ತದೆ.Slacktivism ಎಂಬ ಇಂಗ್ಲಿಷ್ ಪದವನ್ನು ಕನ್ನಡದ ಒಂದು ಪದದಲ್ಲಿ ಹಿಡಿದಿಡಲು ಸಾಧ್ಯವಿಲ್ಲವೇನೋ. ಹೆಚ್ಚೆಂದರೆ ಹುಸಿ ಹೋರಾಟ ಎನ್ನಬಹುದು. ನಿರ್ದಿಷ್ಟ ಹೋರಾಟವೊಂದರ ಭಾಗವಾಗಿ ರೂಪುಗೊಂಡಿರುವ ಫೇಸ್‌ಬುಕ್ ಪುಟವನ್ನು ಲೈಕ್ ಮಾಡುವುದು ಅಥವಾ ಈ ಸಂಬಂಧ ರೂಪಿಸಲಾಗಿರುವ ಆನ್‌ಲೈನ್ ಮನವಿ ಪತ್ರವೊಂದಕ್ಕೆ ಸಹಿ ಹಾಕುವುದಕ್ಕೆ ಸೀಮಿತವಾಗುವ ಹೋರಾಟವನ್ನು ಸ್ಲ್ಯಾಕ್ಟಿವಿಸಂ ಎನ್ನುತ್ತಾರೆ.ಮೊಬೈಲ್ ಪರದೆಯಲ್ಲಿ ಪ್ರತ್ಯಕ್ಷವಾಗುವ ಫೇಸ್‌ಬುಕ್ ಪುಟದಲ್ಲಿ ಲೈಕ್ ಒತ್ತುವುದಕ್ಕೆ ಸೀಮಿತವಾಗುವ ಈ ಹೋರಾಟದ ಹಾದಿಯನ್ನು ನಿರ್ಧರಿಸುವುದು ಹೋರಾಟದ ಮುಂಚೂಣಿಯಲ್ಲಿರುವ ನಾಯಕರಲ್ಲ. ಹೋರಾಟಕ್ಕೆ ಆನ್‌ಲೈನ್ ವೇದಿಕೆಗಳನ್ನು ಒದಗಿಸುವ ಕಂಪೆನಿಗಳು. ಅವರ ಮಟ್ಟಿಗೆ ಜನರು ನಡೆಸುವ ಹೋರಾಟ ಅವರ ವೇದಿಕೆಯಲ್ಲಿ ಹೆಚ್ಚು ಜಾಹೀರಾತುಗಳನ್ನು ತಲುಪಿಸಲು ದೊರೆಯುವ ಅವಕಾಶ ಮಾತ್ರ.ಎಲ್ಲದಕ್ಕಿಂತ ಹೆಚ್ಚಾಗಿ ಈ ಕಂಪೆನಿಗಳು ಯಾವುದೇ ರಾಷ್ಟ್ರೀಯ ಪ್ರಭುತ್ವದ ವಿರುದ್ಧ ಸಾಗಿ ತಮ್ಮ ಮಾರುಕಟ್ಟೆಯನ್ನು ಕಳೆದುಕೊಳ್ಳಲು ಸಿದ್ಧರಿರುವುದಿಲ್ಲ. ಅದಕ್ಕಿಂತ ಹೆಚ್ಚಾಗಿ ‘ಕಾನೂನು ಪಾಲನೆ’ಯ ನೆಪದಲ್ಲಿ ಪ್ರತಿಭಟನಾಕಾರರ ಮಾಹಿತಿಯನ್ನು ಪ್ರಭುತ್ವದೊಂದಿಗೆ ಹಂಚಿಕೊಳ್ಳಲು ಹಿಂದೆಗೆಯುವುದಿಲ್ಲ. ಅರಬ್‌ ವಸಂತ ಅರಳಿದ್ದು ಟ್ಯುನಿಷಿಯಾದಲ್ಲಿ ಮಾತ್ರ. ಉಳಿದೆಲ್ಲೆಡೆಯೂ ಅದರ ಪರಿಣಾಮ ನಕಾರಾತ್ಮಕವೇ ಆಗಿತ್ತು.ಎಲ್ಲದಕ್ಕಿಂತ ದೊಡ್ಡ ತಮಾಷೆಯೆಂದರೆ ಅತಿಹೆಚ್ಚು ಶೋಷಣೆ ಇರುವ ಸೌದಿ ಅರೇಬಿಯಾಕ್ಕೆ ಅರಬ್ ವಸಂತ ತಲುಪಲೇ ಇಲ್ಲ. ಟ್ವಿಟ್ಟರ್ ಕ್ರಾಂತಿಯ ಕಟು ಟೀಕಾಕಾರನಾದ ಎವ್ಗೆನಿ ಮೊರೊಜೊವ್ ಹೇಳುವಂತೆ ಇದಕ್ಕೆ ಕಾರಣವಾದದ್ದು ಇಂಟರ್ನೆಟ್ ವೇದಿಕೆಗಳ ಕೇಂದ್ರೀಕೃತ ಸ್ವರೂಪ. ಕ್ರಾಂತಿಯ ಸಾಧ್ಯತೆಯನ್ನೇ ಮೊಟಕುಗೊಳಿಸುವಂಥ ಪ್ರಭುತ್ವದ ಕ್ರಮಗಳು ಈಗ ಮೊದಲಿಗಿಂತ ಸುಲಭವಾಗಿತ್ತು. ಕಾನೂನಿನ ಖಡ್ಗವನ್ನು ಹೊರಸೆಳೆದರೆ ಕ್ರಾಂತಿಕಾರಿಗಳ ವಿಳಾಸ ಪ್ರಭುತ್ವದ ಮುಂದೆ ಅನಾವರಣಗೊಳ್ಳುತ್ತಿತ್ತು.ಇದು ಹೇಗಿರಬಹುದು ಎಂಬುದನ್ನು ಜಗತ್ತಿನೆದುರು ತೆರೆದಿಟ್ಟದ್ದು ಸ್ನೋಡೆನ್ ಬಹಿರಂಗ ಪಡಿಸಿದ ಆನ್‌ಲೈನ್ ಗೂಢಚರ್ಯೆಯ ಮಾದರಿಗಳು. ಸರ್ಕಾರಗಳು ಹಿಂದಿನಂತೆ ತಮ್ಮ ವಿರೋಧಿಗಳ ಸಂವಹನವನ್ನು ತಡೆಯಲು ಪ್ರಯತ್ನಿಸುವುದಿಲ್ಲ. ಸಂವಹವನ್ನು ಗುಟ್ಟಾಗಿ ಆಲಿಸಿ ಕ್ರಮಕೈಗೊಳ್ಳಲು ಮುಂದಾಗುತ್ತವೆ. ಹತ್ತು ವರ್ಷಗಳ ಹಿಂದೆ ಯಾವುದೆಲ್ಲಾ ಮುಕ್ತ ಅಭಿವ್ಯಕ್ತಿಯ ಮಾರ್ಗಗಳಂತೆ ಕಾಣುತ್ತಿದ್ದವೋ ಅವೆಲ್ಲವೂ ಈಗ ಸರ್ಕಾರಿ ಗೂಢಚರ್ಯೆಯನ್ನು ಸುಲಭಗೊಳಿಸುವ ಮಾರ್ಗಗಳಾಗಿ ಬಿಟ್ಟಿವೆ.ಈ ಎಲ್ಲಾ ಮಿತಿಗಳ ಮಧ್ಯೆಯೂ ಸೈಬರ್ ಆದರ್ಶವಾದಿಗಳ ಕನಸುಗ ಳಿನ್ನೂ ಮುರುಟಿಲ್ಲ. ತಮ್ಮ ವೈಯಕ್ತಿಕ ಸ್ವಾತಂತ್ರ್ಯವನ್ನೆಲ್ಲಾ ಕಳೆದುಕೊಂಡರೂ ಜಗತ್ತಿಗೆ ಸತ್ಯಗಳನ್ನು ತೆರೆದಿಟ್ಟ ಜ್ಯೂಲಿಯನ್ ಅಸ್ಸಾಂಜ್, ಎಡ್ವರ್ಡ್ ಸ್ನೋಡೆನ್, ಗುಟ್ಟಾಗಿಟ್ಟ ಬ್ಯಾಂಕ್ ಖಾತೆಗಳ ವಿವರಗಳನ್ನು ಬಯಲು ಮಾಡಲು ಹೊರಡುವ ಒಂಟಿ ಹೋರಾಟಗಾರರಿದ್ದಾರೆ. ಪ್ರತಿಯೊಬ್ಬ ಅಪರಾಧಿಯೂ ಒಂದಲ್ಲಾ ಒಂದು ಸುಳಿವನ್ನು ಬಿಟ್ಟಿರುತ್ತಾನೆ ಎಂಬಂತೆಯೇ ಎಲ್ಲಾ ಬಾಗಿಲುಗಳು ಮುಚ್ಚಿ ಹೋದನಂತರವೂ ಪಾರಾಗುವ ಮಾರ್ಗವೊಂದು ಉಳಿದೇ ಇರುತ್ತದೆ ಎಂಬ ಭರವಸೆಯನ್ನು ಸೈಬರ್ ಲೋಕ ಇಲ್ಲಿಯ ತನಕವೂ ಕಾಪಾಡಿಕೊಂಡು ಬಂದಿದೆ. ಬಹುಶಃ ಪ್ರಭುತ್ವಗಳಲ್ಲಿ ಭಯ ಹುಟ್ಟಿಸುತ್ತಿರುವುದೂ ಜನಸಾಮಾನ್ಯರಲ್ಲಿ ಆಶಾವಾದವನ್ನು ಉಳಿಸಿರುವುದೂ ಇದೇ ಭರವಸೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.