ಸೋನಿಯಾ, ಮೋದಿ ವಂದಿಮಾಗಧರ ನಡುವೆ...

ಬುಧವಾರ, ಜೂಲೈ 17, 2019
25 °C

ಸೋನಿಯಾ, ಮೋದಿ ವಂದಿಮಾಗಧರ ನಡುವೆ...

ರಾಮಚಂದ್ರ ಗುಹಾ
Published:
Updated:

ತಾನು ಸೃಷ್ಟಿಸಿಕೊಳ್ಳುವ ಶತ್ರುಗಳ ಮೂಲಕ ಒಬ್ಬ ಲೇಖಕನನ್ನು ಗುರುತಿಸಲಾಗುತ್ತದೆ ಎನ್ನಲಾಗುತ್ತದೆ. ಈ ವಾರದ ಆರಂಭದಲ್ಲಿ, ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವೆಬ್‌ಸೈಟ್‌ನಲ್ಲಿ ಹಾಕಲಾಗಿದ್ದ ನನ್ನ ಕುರಿತ ಟೀಕೆಗಳು ನನ್ನ ಗಮನಕ್ಕೆ ಬಂದವು. `ರಾಮಚಂದ್ರ ಗುಹಾ ಅವರ ನಿರ್ವೀರ್ಯ ಆಕ್ರೋಶ~ ಎಂದು ಮೋದಿಯವರ ವೆಬ್‌ಸೈಟ್ ಪ್ರತಿಪಾದಿಸಿತ್ತು.`ದೊಡ್ಡಸ್ತಿಕೆ ದಾಸಯ್ಯನ ಬರಿದಾದ ಬೌದ್ಧಿಕತೆಯ ಉದಾಹರಣೆ ಇದು. ತನ್ನದೇ ಶ್ರಮ, ಕಲಿಕೆ ಹಾಗೂ ಪಟ್ಟಿನ ಉಳಿಯೇಟುಗಳಿಂದ ದೊಡ್ಡದನ್ನು ಸಾಧಿಸುವವರನ್ನು ಸ್ವಲ್ಪವೂ ಸಹಿಸದಂತಹವರು. ಆದರೆ ರಾಮಚಂದ್ರಗುಹಾ ಅವರು 40 ವರ್ಷಗಳಿಗೂ ಹೆಚ್ಚು ಕಾಲ ವಂಶಪಾರಂಪರ್ಯ ಆಳ್ವಿಕೆಯ ಇತಿಹಾಸದ ಬರವಣಿಗೆಯ ನಂತರವೂ ಇದ್ದಲ್ಲೇ ಇದ್ದಾರೆ; ನರೇಂದ್ರ ಮೋದಿ ಎತ್ತರಕ್ಕೇರುವುದು ಮುಂದುವರಿಸಿದ್ದಾರೆ. ಇದರಿಂದಾಗಿಯೇ ಮೋದಿಯವರು ಆಡಳಿತ, ಆರ್ಥಿಕತೆ, ಪರಿಸರ, ಕೈಗಾರಿಕೆ, ಮೂಲ ಸೌಕರ್ಯ, ಸೌರ ಇಂಧನ, ಐಟಿ ಹಾಗೂ ಪ್ರವಾಸೋದ್ಯಮ ಸೇರಿದಂತೆ ಹೆಚ್ಚು ವೈವಿಧ್ಯದ ವಿಚಾರಗಳ ಬಗ್ಗೆ ಮಾತನಾಡಬಲ್ಲರು. ಹಾಗೆಯೇ ಇವಕ್ಕೆ ಸಂಬಂಧಿಸಿದ ಒಳ್ಳೆಯ ನೀತಿಗಳನ್ನೂ ಅನುಷ್ಠಾನಗೊಳಿಸಬಲ್ಲರು. ಆದರೆ ಗುಹಾ ಅವರು 10, ಜನಪಥ್‌ನ ಗೋಡೆಗಳಾಚೆ ನೋಡಲಾರರು. http://www.narendramodi.in/thewillofthepeoplealwaystriumphs/accessed 9th July 2012

ಈ ಪ್ಯಾರಾದಲ್ಲಿ ಅನೇಕ ಕೊಂಕು ನುಡಿಗಳು, ಅರ್ಧ ಸತ್ಯಗಳು ಹಾಗೂ ಪೂರ್ತಿ ಸುಳ್ಳುಗಳೂ ಇವೆ. ಮೊದಲನೆಯದಾಗಿ ಬಹಳ ಮೂಲಭೂತ ತಪ್ಪು ನನ್ನ ಸ್ವವಿವರಗಳ ವಿಚಾರದಲ್ಲೇ ನುಸುಳಿದೆ. ಮೋದಿ ವೆಬ್‌ಸೈಟ್‌ನಲ್ಲಿ ನನ್ನ ವೃತ್ತಿಯ ಅನುಭವವನ್ನು ಉತ್ಪ್ರೇಕ್ಷಿಸಲಾಗಿದೆ. ನಾನು ಕೇವಲ 25 ವರ್ಷಗಳಿಂದ ಇತಿಹಾಸಕಾರನಾಗಿದ್ದೇನೆ. ಅದರ್ಲ್ಲಲೂ ಕಳೆದ 10 ವರ್ಷಗಳಿಂದ ಮಾತ್ರ ರಾಜಕೀಯ ಇತಿಹಾಸಕಾರನಾಗಿದ್ದೇನೆ.ಮತ್ತೂ ಮುಖ್ಯವಾದುದೆಂದರೆ, ನಾನು ಒಂದೇ ಕೋಣೆಯಲ್ಲಿ ಎಂದೂ ಜೊತೆಗಿಲ್ಲದವರನ್ನೆಲ್ಲಾ ನನ್ನ ಸ್ನೇಹಿತರೆಂದು ಈ ವೆಬ್‌ಸೈಟ್‌ನಲ್ಲಿ ಹೆಸರಿಸಲಾಗಿದೆ. ಅವರೇನಾದರೂ ನನ್ನ ಬರಹಗಳನ್ನು ಓದಿದ್ದರೆ ನನ್ನನ್ನು ಅವರ ಶತ್ರುವಾಗಿಯೇ ಪರಿಗಣಿಸುತ್ತಿದ್ದದ್ದು ಹೌದು. ನಾನೆಂದೂ 10, ಜನಪಥ್ ಪ್ರವೇಶಿಸಿಲ್ಲ. ಅಥವಾ ಆ ಬಂಗಲೆಯೊಳಗಿರುವ ಯಾರನ್ನೂ ಭೇಟಿಯಾಗಿಲ್ಲ. ಬದಲಿಗೆ, ಕಳೆದ ಅನೇಕ ವರ್ಷಗಳಿಂದ ನಾನು ಬರೆದಿರುವ ಪುಸ್ತಕಗಳು ಹಾಗೂ ಲೇಖನಗಳಲ್ಲಿ ಕಾಂಗ್ರೆಸ್ ಪಕ್ಷದ ಪ್ರಥಮ ಕುಟುಂಬದ ಸಾರ್ವಜನಿಕ ಪಾತ್ರವನ್ನು ಆಗಾಗ್ಗೆ ಟೀಕಿಸಿದ್ದೇನೆ. ಅತ್ಯಂತ ಕ್ರಿಯಾಶೀಲವಾದಂತಹ ರಾಜ್ಯ ಹಾಗೂ ಜಿಲ್ಲಾ ಘಟಕಗಳನ್ನು ರಾಷ್ಟ್ರಾದ್ಯಂತ ಹೊಂದಿದ್ದ ಪಕ್ಷವನ್ನು ತನ್ನದೇ ವಿಸ್ತರಣೆಯಾಗಿ ಪರಿವರ್ತಿಸಿಕೊಂಡ ಇಂದಿರಾಗಾಂಧಿ ಕ್ರಮದ ಬಗ್ಗೆ ವಿಷಾದ ತೋರಿದ್ದೇನೆ. ಸ್ಪರ್ಧಾತ್ಮಕತೆ ಅಥವಾ ಪ್ರಾಮಾಣಿಕತೆ ಎಂಬುದಕ್ಕಿಂತ ವೈಯಕ್ತಿಕ ನಿಷ್ಠೆ ಮೇಲೆ ಅಧಿಕಾರಿಗಳನ್ನು ನೇಮಕ ಮಾಡಲು ರಾಜಕಾರಣಿಗಳಿಗೆ ಅವಕಾಶ ನೀಡಿ ಹೇಗೆ ಇಂದಿರಾ ಗಾಂಧಿಯವರು ಸಾರ್ವಜನಿಕ ಸಂಸ್ಥೆಗಳನ್ನು ನಾಶಪಡಿಸಿದರು ಎಂಬ ಬಗೆಗೂ ನಾನು ಬರೆದಿದ್ದೇನೆ. ರಾಜೀವ್ ಗಾಂಧಿಯವರ ಪ್ರಧಾನಿ ಪದವಿಯ ಬಗೆಗೂ ವಿಮರ್ಶಾತ್ಮಕ ನೋಟವನ್ನೇ ತೋರಿದ್ದೇನೆ. ಮುಸ್ಲಿಂ ಹಾಗೂ ಹಿಂದೂ ಮತಾಂಧರಿಗೆ ಅವರ ಸಹಾಯಹಸ್ತ, ಎರಡು ದಶಕಗಳ ನಾಗರಿಕ ಸಂಘರ್ಷ ತೀವ್ರವಾಗುವುದಕ್ಕೆ ಹೇಗೆ ಸಹಾಯವಾಯಿತು ಎಂಬುದನ್ನು ನಾನು ಎತ್ತಿ ತೋರಿದ್ದೇನೆ.ತೀರಾ ಇತ್ತೀಚೆಗೆ, ಎರಡನೇ ಶ್ರೀಮತಿ ಗಾಂಧಿ ಹೇಗೆ ತನ್ನ ಪಕ್ಷ ಹಾಗೂ ಸರ್ಕಾರದಲ್ಲಿ ಭಟ್ಟಂಗಿತನದ ಸಂಸ್ಕೃತಿಯನ್ನು ವಿಸ್ತರಿಸಿದ್ದಾರೆ ಎಂಬುದರ ಬಗ್ಗೆ ಬರೆದಿದ್ದೆ. ಸಾರ್ವಜನಿಕ ಹಣದ ಭಾರಿ ಮೊತ್ತವನ್ನು ರಾಜೀವ್ ಹಾಗೂ ಇಂದಿರಾಗಾಂಧಿಯವರ  ಜಾಹಿರಾತು ಹಾಗೂ ಸ್ಮಾರಕಗಳಿಗೇ ಖರ್ಚು ಮಾಡಲು (ಅಥವಾ ಹಾಳುಮಾಡಲು) ಹೇಗೆ ಅವರು ಉತ್ತೇಜಿಸಿದ್ದರು ಎಂಬ ಬಗ್ಗೆ ಬರೆದಿದ್ದೆ.ಇಂದಿರಾ ಗಾಂಧಿಯವರು ಆರಂಭಿಸಿ ನಂತರ ಅವರ ಉತ್ತರಾಧಿಕಾರಿಗಳು ಮುಂದುವರಿಸಿರುವಂತಹ ವಂಶವಾಹಿ ಆಡಳಿತ ಹಾಗೂ ಭಟ್ಟಂಗಿತನದ ಸಂಸ್ಕೃತಿ, ರಾಜಕಾರಣ ಹಾಗೂ ಸಾರ್ವಜನಿಕ ಬದುಕಿನ ಮೇಲೆ ಬೀರಿದ ಹಾನಿಕಾರಕ ಪರಿಣಾಮಗಳನ್ನು ವಿವರಿಸುವ ಅನೇಕ ವೃತ್ತಪತ್ರಿಕೆ ಅಂಕಣಗಳನ್ನು ಕಳೆದ ದಶಕದಲ್ಲಿ ನಾನು ಬರೆದ್ದ್ದಿದೇನೆ. ಅದೇ ಅವಧಿಯಲ್ಲೇ, 2002ರ ಗಲಭೆಗಳು ಹಾಗೂ ಅದರ ನಂತರದ ಪರಿಣಾಮಗಳನ್ನು ನರೇಂದ್ರ ಮೋದಿಯವರು ನಿರ್ವಹಿಸಿದ  (ಅಥವಾ ಹಾಳುಗೆಡವಿದ) ಕುರಿತೂ ಅನೇಕ ಲೇಖನಗಳನ್ನು ಬರೆದಿದ್ದೆ. ಜೊತೆಗೆ ಮಹಾತ್ಮ ಗಾಂಧಿ ಹೆಸರಲ್ಲಿ ಮೋದಿ ನಡೆಸಿದ ವಾಸ್ತು ಶಿಲ್ಪ ವಿಕೃತತೆಗಳ ಬಗೆಗೂ ಒಂದು ಅಂಕಣದಲ್ಲಿ ಬರೆದಿದ್ದೆ.ಕಾಂಗ್ರೆಸ್ ಪಕ್ಷದ ಪ್ರಥಮ ಕುಟುಂಬದ ಬಗ್ಗೆ ನನ್ನ ಸರಿಯಾದ ನಿಲುವಿನ ಬಗ್ಗೆ ತಮಗೆ ಗೊತ್ತಿಲ್ಲವೆಂದು ಮೋದಿಯವರ ವೆಬ್‌ಸೈಟ್ ಮ್ಯಾನೇಜರ್‌ಗಳು ಪ್ರತಿಪಾದಿಸಬಹುದು. ಆದರೆ ಪ್ರಥಮ ಕುಟುಂಬದ ವಂದಿಮಾಗಧರಿಗೆ ಮಾತ್ರ ಇದು ಚೆನ್ನಾಗಿಯೇ ಗೊತ್ತಿದೆ.ಇದನ್ನು ತಮ್ಮ ದೊರೆಗಳಿಗೆ ಅವರುಗಳು ಸರಿಯಾಗಿಯೇ ಮುಟ್ಟಿಸಿದ್ದಾರೆ. 2008 ಹಾಗೂ 2009ರಲ್ಲಿ ನೆಹರೂ ಸ್ಮಾರಕ ವಸ್ತುಸಂಗ್ರಹಾಲಯ ಹಾಗೂ ಗ್ರಂಥಾಲಯ (ಎನ್‌ಎಂಎಂಎಲ್)ದ ಸ್ವರೂಪವನ್ನು ಮರಳಿ ತರುವ ಪ್ರಚಾರಾಂದೋಲನದಲ್ಲಿ ನಾನು ಭಾಗಿಯಾಗಿದ್ದೆ. ಹಸ್ತಪ್ರತಿಗಳು ಹಾಗೂ ಹಳೆಯ ದಾಖಲೆಗಳನ್ನು ಹೊಂದಿರುವಂತಹ ಶ್ರೇಷ್ಠ ಹಾಗೂ ವೃತ್ತಿಪರವಾಗಿ ನಡೆಸಲಾಗುವ ಭಂಡಾರ ಎನ್‌ಎಂಎಂಎಲ್. ಆದರೆ ಆ ಸಂದರ್ಭದಲ್ಲಿ ಅದು ಸಾಂಸ್ಥಿಕ ನಿಯಮಾವಳಿಗಳು ಹಾಗೂ ಬೌದ್ಧಿಕ ಕೆಲಸಗಳಿಗೆ ಕಿಂಚಿತ್ತೂ ಬೆಲೆ ನೀಡದ ಸ್ವಾರ್ಥಿಗಳ ಕೂಟದ ನಿಯಂತ್ರಣದಲ್ಲಿತ್ತು. ತನ್ನನ್ನು ತಾನು ರಕ್ಷಿಸಿಕೊಳ್ಳಲು ಆಗ ಈ ಎನ್‌ಎಂಎಂಎಲ್ ತಂಡ ಪ್ರಥಮ ಕುಟುಂಬದ ವೈಭವೀಕರಣದ ಪ್ರಚಾರಕ್ಕಿಳಿಯಿತು. ಕ್ಯಾಂಪಸ್ ಪೂರ್ತಿ ಜವಾಹರಲಾಲ್ ನೆಹರೂ ಹಾಗೂ ಇಂದಿರಾರ ನುಡಿಮುತ್ತುಗಳು ಹಾಗೂ ಛಾಯಾಚಿತ್ರಗಳನ್ನು ಅಂಟಿಸುವುದಲ್ಲದೆ ಗ್ರಂಥಾಲಯದ ಸೆಮಿನಾರ್ ಕೊಠಡಿಯನ್ನು ರಾಹುಲ್ ಗಾಂಧಿ ಹಾಗೂ ಅವರ ಯುವ ಕಾಂಗ್ರೆಸ್‌ಗೆ ಬಿಟ್ಟುಕೊಡಲಾಯಿತು.ನಾನು ಭಾಗಿಯಾಗಿದ್ದ ಈ ಪ್ರಚಾರಾಂದೋಲನದಲ್ಲಿ ಭಾರತದ ಬಹುಮುಖ್ಯ ಇತಿಹಾಸಕಾರರು, ಸಮಾಜವಿಜ್ಞಾನಿಗಳು ಹಾಗೂ ರಾಜಕೀಯ ವಿಜ್ಞಾನಿಗಳು ಪಾಲ್ಗೊಂಡಿದ್ದರು.  ಸ್ವಾರ್ಥಸಾಧಕರಾದ ವಂದಿಮಾಗಧರಿಂದ ಎನ್‌ಎಂಎಂಎಲ್ ಅನ್ನು ಮುಕ್ತಗೊಳಿಸಿ ವೃತ್ತಿಪರ ಹಾಗೂ ಸ್ವತಂತ್ರ ಮನದ ಇತಿಹಾಸಕಾರರಿಗೆ ಅದನ್ನು ಹಿಂದಿರುಗಿಸುವ ಉದ್ದೇಶ ಈ ಆಂದೋಲನದ್ದಾಗಿತ್ತು.ಈ ಪ್ರಚಾರಾಂದೋಲನದ ಪ್ರಭಾವ ಕುಗ್ಗಿಸಲು ಆಗ ಎನ್‌ಎಂಎಂಎಲ್ ಆಡಳಿತ ನಡೆಸುತ್ತಿದ್ದ ಸ್ವಾರ್ಥಿಗಳಕೂಟ, ನನ್ನ ಪುಸ್ತಕ `ಇಂಡಿಯಾ ಆಫ್ಟರ್ ಗಾಂಧಿ~ಯಲ್ಲಿ ನಾನು ಹೇಗೆ  1984ರ ದೆಹಲಿಯಲ್ಲಿ ನಡೆದ ಸಿಖ್ಖರ ಹತ್ಯಾಕಾಂಡ ಹಾಗೂ 2002ರಲ್ಲಿ ಗುಜರಾತ್‌ನಲ್ಲಿ ಮುಸ್ಲಿಮರ ವಿರುದ್ಧ ನಡೆದ ಹತ್ಯಾಕಾಂಡದ ನಡುವಿನ  ಎದ್ದುಕಾಣುವ ಸಮಾನಾಂತರ ಅಂಶಗಳನ್ನು ದಾಖಲಿಸಿದ್ದೇನೆ ಎಂಬ ವಿವರಗಳನ್ನು ಪ್ರಧಾನಿ ಹಾಗೂ ಅವರ ಪಕ್ಷದ ಅಧ್ಯಕ್ಷೆಗೆ ಕಳಿಸಿತ್ತು. ಈ ಎರಡೂ ಸಂದರ್ಭಗಳಲ್ಲಿ ಹೇಗೆ ಈ ಗುಂಪುಗಳನ್ನು ಆಡಳಿತ ಪಕ್ಷದ ರಾಜಕಾರಣಿಗಳು ನಿರ್ದೇಶಿಸುತ್ತಿದ್ದರು ಹಾಗೂ ಹೇಗೆ ಆಡಳಿತದ ಉಸ್ತುವಾರಿ (ಕ್ರಮವಾಗಿ ರಾಜೀವ್‌ಗಾಂಧಿ ಹಾಗೂ ನರೇಂದ್ರ ಮೋದಿ) ವಹಿಸಿದ್ದ ವ್ಯಕ್ತಿಗಳು ಹಿಂಸೆಯನ್ನು ಸಮರ್ಥಿಸಿಕೊಂಡು ನಾಚಿಕೆಗೆಟ್ಟ ಹೇಳಿಕೆಗಳನ್ನು ನೀಡಿದ್ದರೆಂಬುದನ್ನೂ ನಾನು ಬರೆದಿದ್ದೆ. ಆ ನಂತರ ಇದನ್ನು ಹೇಳಿದ್ದೆ: `ಕಡೆಗಂತೂ ಈ ಹೋಲಿಕೆ ಹೆಚ್ಚು ಮಹತ್ತರವಾದದ್ದು ಹಾಗೆಯೇ  ಹತಾಶೆ ಮೂಡಿಸುವಂತಹದ್ದು. ತಾವೇ ಉಸ್ತುವಾರಿ ವಹಿಸಿ ಮಾನ್ಯತೆ ನೀಡಿದ ಹಿಂಸಾಚಾರಗಳಿಂದ ಎರಡೂ ಪಕ್ಷಗಳು ಹಾಗೂ ಅದರ ನಾಯಕರುಗಳು ಚುನಾವಣಾ ಲಾಭಗಳನ್ನೂ ಪಡೆದುಕೊಂಡರು~.ಈ ವಿಚಾರಗಳ ಬಗ್ಗೆ ಗಮನ ಸೆಳೆದು, ಡಾ ಸಿಂಗ್ ಹಾಗೂ ಸೋನಿಯಾ ಗಾಂಧಿಗೆ ಕಾಂಗ್ರೆಸ್ ವಂದಿಮಾಗಧರು ಹೀಗೆ ಬರೆದಿದ್ದರು: `ಹಿಂಸಾಚಾರವನ್ನು ಸಮರ್ಥಿಸಿದುದಾಗಿ ಮಾತ್ರವಲ್ಲ (ಅವರ ಆ ನಾಚಿಕೆಗೆಟ್ಟ ಹೇಳಿಕೆಯ ಮೂಲಕ), ಅದನ್ನು `ನೋಡಿಕೊಂಡಿದ್ದರು~ ಎಂದರೆ ಅದರ `ಮೇಲುಸ್ತುವಾರಿ~ಯನ್ನೂ ವಹಿಸಿದ್ದರು ಎಂದು ರಾಜೀವ್‌ಗಾಂಧಿಯ ವಿರುದ್ಧ (ಗುಹಾ ಅವರು) ಆರೋಪ ಹೊರಿಸಿದ್ದಾರೆ. ರಾಜೀವ್‌ಗಾಂಧಿಯವರ ಕೆಟ್ಟ ಟೀಕಾಕಾರರೂ ಇಂತಹ ಆರೋಪಗಳನ್ನು ಎಂದೂ ಮಾಡಿಲ್ಲ~ .ಸೋನಿಯಾ ಗಾಂಧಿ ಇಷ್ಟ ಪಡದಿರುವ ರಾಜಕಾರಣಿ ನರೇಂದ್ರಮೋದಿ ಎಂಬುದು ಈ ಪತ್ರ ಬರೆದವರಿಗೆ ಗೊತ್ತಿತ್ತು. ಇತಿಹಾಸಕಾರನಾಗಿ ನಾನು ಬರೆದ ಪ್ರತಿ ಪದವನ್ನೂ ಸಮರ್ಥಿಸಿಕೊಳ್ಳಬಲ್ಲೆ. ಆದರೆ ಕುಟುಂಬದ ವಂದಿಮಾಗಧರ ದೃಷ್ಟಿಕೋನದಿಂದ, ತಮ್ಮ ಪ್ರೀತಿಪಾತ್ರರು ಹಾಗೂ ತಾವು ಆರಾಧಿಸುವ ರಾಜೀವ್‌ಜಿಯನ್ನು ಮೋದಿ ಜೊತೆ ಹೋಲಿಸುವುದು ಎಂದರೆ ಅವರಿಗೆ ಸಹಜವಾಗಿ ಎಲ್ಲ ಗಡಿಗಳನ್ನೂ ಮೀರಿದ ಅನಪೇಕ್ಷಣೀಯ ವರ್ತನೆ.ನಿಜ ಹೇಳಬೇಕೆಂದರೆ, ಈ ಅಂಕಣದ ಓದುಗರು ಬಹುಶಃ ಕಾಂಗ್ರೆಸ್ ಪಕ್ಷದ ಪ್ರಥಮ ಕುಟುಂಬದ ಬಗೆಗಿನ ನನ್ನ ನಿಯಮಿತ ಟೀಕೆಗಳನ್ನು ಓದಿ ಓದಿ ಸುಸ್ತಾಗಿರಬೇಕು. ಈ ಸಂಬಂಧದಲ್ಲಿ ನನ್ನ ವಿಚಾರಗಳು ಹಾಗೂ ಸಂಪರ್ಕಗಳ ಬಗ್ಗೆ  ಮೋದಿಯವರ ವೆಬ್‌ಸೈಟ್ ಮ್ಯಾನೇಜರ್‌ಗಳು ಏಕೆ ತಿರುಚಿದ ವ್ಯಾಖ್ಯಾನಗಳನ್ನು ನೀಡುತ್ತಿದ್ದಾರೆ? ಇದಕ್ಕೆ ಇರಬಹುದಾದ ಮೂರು ಕಾರಣಗಳು:ಮೊದಲನೆಯದು, ವ್ಯಂಗ್ಯೋಕ್ತಿಗಳು ಹಾಗೂ ಸುಳ್ಳುಗಳು ಅಂತರ್ಜಾಲದಲ್ಲಿ ಇಂದು ರಾರಾಜಿಸುತ್ತಿವೆ. ಬೇಕೆಂದೇ ಮಾಡುವ ಅಥವಾ ಗೊತ್ತಿಲ್ಲದೆ ಆಗುವ ತಪ್ಪುಗಳನ್ನು ನಿಯಂತ್ರಿಸಲು   ಸ್ವಯಂನಿಯಂತ್ರಣದ ವಿಧಾನಗಳೇ ಇಲ್ಲ.  ಎರಡನೆಯದು, ಕಪ್ಪು - ಬಿಳುಪಿನ ಹೊರತಾಗಿ ಬೇರೆ ರೀತಿಯಾಗಿ ಚಿಂತಿಸಲು ಉಗ್ರ ಸಿದ್ಧಾಂತವಾದಿಗಳಿಗೆ ಸಾಧ್ಯವಾಗುವುದಿಲ್ಲ. ತಮ್ಮ ಸಿದ್ಧಾಂತ ಅಥವಾ ರಾಜಕೀಯ ಆಚರಣೆಗಳ ಟೀಕಾಕಾರರು, ಪ್ರತಿಸ್ಪರ್ಧಿ ರಾಜಕೀಯ ಬಣಗಳ  ಸಹಚರರು ಅಥವಾ ವಕ್ತಾರರಾಗಿಯೇ ಇದ್ದಿರಬೇಕು ಎಂಬ ನಂಬಿಕೆ ಅವರದಾಗಿರುತ್ತದೆ. ಹಿಂದೂತ್ವ ಹಾಗೂ ಧಾರ್ಮಿಕ ಬಣವಾದದ ವಿರುದ್ಧ ನಾನು ನಿರಂತರವಾಗಿ ನಿಂತಿರುವುದರಿಂದ, ಮತ್ತು ಅನೇಕ ಸಂದರ್ಭಗಳಲ್ಲಿ ಮೋದಿ ನೀತಿಗಳ ವಿರುದ್ಧವೂ ತಪ್ಪುಗಳನ್ನು ಕಂಡಿರುವುದರಿಂದ, ನಾನು ಕಾಂಗ್ರೆಸ್ ಪಕ್ಷ ಹಾಗೂ ಅದರ ಸದ್ಯದ ನಾಯಕತ್ವದ ಅನುಯಾಯಿ ಎಂದೇ ಗುಜರಾತ್ ಮುಖ್ಯಮಂತ್ರಿಗಳ ಅನುಚರರು ಭಾವಿಸುತ್ತಾರೆ.ಮೂರನೆಯದಾಗಿ ಇಂದಿರಾ, ರಾಜೀವ್ ಹಾಗೂ ಸೋನಿಯಾ ಗಾಂಧಿ ಅವರ ರಾಜಕೀಯ ಶೈಲಿಗಳ ಬಗ್ಗೆ ನನಗೆ ನನ್ನದೇ ಭಿನ್ನ ಅಭಿಪ್ರಾಯಗಳಿದ್ದರೂ ಒಟ್ಟಾರೆಯಾಗಿ ನಾನು ಜವಾಹರಲಾಲ್ ನೆಹರೂ ಅವರ ಅಭಿಮಾನಿ. ನೆಹರೂ ಅವರ ವಂಶಜರಿಂದ ನೆಹರೂ ಅವರ ಪರಂಪರೆಯನ್ನು ತೀವ್ರವಾಗಿ ಪ್ರತ್ಯೇಕಗೊಳಿಸಬೇಕು. ತಮ್ಮ ಮಗಳು, ತಮ್ಮ ನಂತರ ಪ್ರಧಾನಿ ಗದ್ದುಗೆಗೇರುತ್ತಾರೆ ಎಂಬ ಭರವಸೆ ಅಥವಾ ಆಶಯ ಸ್ವತಃ ನೆಹರೂ ಅವರಿಗೇ ಇರಲಿಲ್ಲ. `ವಂಶಪಾರಂಪರ್ಯ ರಾಜಕಾರಣ~ ಎಂಬುದು ಪೂರ್ಣವಾಗಿ ಇಂದಿರಾಗಾಂಧಿಯವರ ಕೊಡುಗೆ. ಈ ವ್ಯತ್ಯಾಸ ಅರಿಯದೆ ಹಿಂದೂತ್ವವಾದಿಗಳು ವಿಪರೀತಾರ್ಥ ಕಲ್ಪಿಸುತ್ತಿದ್ದಾರೆ. ನೆಹರೂ ಬಗ್ಗೆ ಕೆಲವೊಮ್ಮೆ ಮೆಚ್ಚುಗೆಯ ನುಡಿಗಳಾಡಿರುವ ಲೇಖಕ 10, ಜನಪಥ್‌ಗೆ ಸದಾ ಭೇಟಿ ನೀಡುವ ಚಾಳಿಯವನಾಗಿರಲೇ ಬೇಕೆಂಬ ಊಹೆ ಅವರದು.ನನ್ನ ದೃಷ್ಟಿಯಲ್ಲಿ ಇಪ್ಪತ್ತನೇ ಶತಮಾನದ ಮಹತ್ವದ ಭಾರತೀಯರಲ್ಲಿ ಮಹಾತ್ಮಾ ಗಾಂಧಿ ಹಾಗೂ ರವೀಂದ್ರ ನಾಥ ಟ್ಯಾಗೋರ್ ಸೇರುತ್ತಾರೆ. ನಂತರದ `ಪಂಚಮೇಳ~ದಲ್ಲಿ ನೆಹರೂ, ಬಿ. ಆರ್. ಅಂಬೇಡ್ಕರ್, ವಲ್ಲಭಭಾಯಿ ಪಟೇಲ್, ಸಿ. ರಾಜಗೋಪಾಲಾಚಾರಿ ಹಾಗೂ ಕಮಲಾದೇವಿ ಚಟ್ಟೋಪಾಧ್ಯಾಯ ಸೇರುತ್ತಾರೆ. ಮುನ್ನೋಟಗಳಿದ್ದ ಈ ದಾರ್ಶನಿಕರು ಬಹು ಪಕ್ಷಗಳ ರಾಜಕೀಯ ವ್ಯವಸ್ಥೆಯ ಅಸ್ತಿಭಾರ ಹಾಕಿದರು. ಭಾಷಾ ಹಾಗೂ ಧಾರ್ಮಿಕ ಬಹುತ್ವವನ್ನು ಉತ್ತೇಜಿಸಿದರು. ಜಾತಿ ಹಾಗೂ ಲಿಂಗದ ಶ್ರೇಣೀಕೃತ ವ್ಯವಸ್ಥೆ ವಿರುದ್ಧ ಹೋರಾಡಿದರು. ಜೊತೆಗೆ ಬೇರೆ ವಿಧದಲ್ಲಿ ರಾಷ್ಟ್ರ ಹಾಗೂ ಪ್ರಜಾಸತ್ತೆಯಾಗಿ ಭಾರತ ಹೆಚ್ಚು ನೋವುಗಳಿಲ್ಲದೆ ರಕ್ತಪಾತಗಳಿಲ್ಲದೆ ರೂಪಾಂತರಗೊಳ್ಳಲು ಸಹಕರಿಸಿದರು.ಜವಾಹರಲಾಲ್ ನೆಹರೂ ಹಾಗೂ ಸೋನಿಯಾ ಗಾಂಧಿ ನಡುವಣ ಅಂತರ ಅಸಾಧಾರಣವಾದುದು. ಹಾಗೆಯೇ ಮಹಾತ್ಮ ಗಾಂಧಿ ಹಾಗೂ ನರೇಂದ್ರ ಮೋದಿ ಮಧ್ಯದ ಅಂತರವೂ. ಈ ವಿಚಾರಗಳನ್ನು ಅಕ್ಷರಗಳಲ್ಲಿ ಹೇಳಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಹಾಗೂ ಗುಜರಾತ್ ಮುಖ್ಯಮಂತ್ರಿಗಳ ವಂದಿ ಮಾಗಧರ ಮಧ್ಯೆ ನಾನು ಈಗ ಅಪಖ್ಯಾತಿ ಗಳಿಸಿಕೊಂಡಿದ್ದೇನೆ ಎನಿಸುತ್ತದೆ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry