ಸೋಲಿನ ಮೂಲ ಮಂತ್ರ

7

ಸೋಲಿನ ಮೂಲ ಮಂತ್ರ

ಗುರುರಾಜ ಕರ್ಜಗಿ
Published:
Updated:

ಒಂದಾನೊಂದು ಕಾಲದಲ್ಲಿ ಒಂದು ಪ್ರಚಂಡವಾದ ದುಷ್ಟಶಕ್ತಿ ತನ್ನ ಸಂಗಾತಿಗಳನ್ನೆಲ್ಲ ಒಂದೆಡೆಗೆ ಕರೆಯಿತು. ಅವೆಲ್ಲ ಅತ್ಯುತ್ಸಾಹದಿಂದ ಬಂದು ಸೇರಿದವು. ಕೆಟ್ಟ ಕೆಲಸ ಮಾಡುವುದೇ ಅವುಗಳಿಗೆ ಸಂತೋಷವಲ್ಲವೇ. ದುಷ್ಟಶಕ್ತಿ ಹೇಳಿತು,  `ಅಲ್ಲೊಂದಿಷ್ಟು ಅನ್ಯಾಯ, ಇಲ್ಲೊಂದಿಷ್ಟು ಕೋಲಾಹಲ. ಮತ್ತೊಂದೆಡೆಗೆ ಸ್ವಲ್ಪ ಅತ್ಯಾಚಾರಗಳು ನಡೆಯುತ್ತಲೇ ಇವೆ. ಈ ಸಣ್ಣ ಪುಟ್ಟ ಕೆಲಸಗಳನ್ನು ಮಾಡಿ ಮಾಡಿ ನನಗೆ ಬೇಜಾರು ಬಂದು ಹೋಗಿದೆ. ಈಗ ದೊಡ್ಡ ಕಾರ್ಯವನ್ನೇ ಮಾಡಿ ಇಡೀ ಪ್ರಪಂಚವನ್ನೇ ನಿರ್ನಾಮ ಮಾಡಬೇಕು ಎಂದುಕೊಂಡಿದ್ದೇನೆ. ಅದಕ್ಕೆ ನಿಮ್ಮೆಲ್ಲರ ಸಹಕಾರ ಬೇಕು. ತಾವೆಲ್ಲ ತಮ್ಮ ಸಂಪೂರ್ಣ ಸಾಮರ್ಥ್ಯ ಬಳಸಿ ಕೆಲಸ ಮಾಡಬೇಕು'. ಸಣ್ಣ ಪುಟ್ಟ ದುಷ್ಟಶಕ್ತಿಗಳೆಲ್ಲ ಜೈಕಾರ ಹಾಕಿದವು. `ಈಗ ನೀವು ಪ್ರತಿಯೊಬ್ಬರೂ ಏನೇನು ಮಾಡಬಲ್ಲಿರಿ ಎಂಬುದನ್ನು ಹೇಳಿ'  ಎಂದು ಕೇಳಿತು ಪ್ರಚಂಡ ದುಷ್ಟಶಕ್ತಿ. ಮೊದಲು ನುಗ್ಗಿ ಬಂದದ್ದೇ ಕೋಪ. ಅದು ಹೇಳಿತು, `ನನಗೆ ಅಪ್ಪಣೆ ಕೊಟ್ಟು ನೋಡಿ, ಈ ಪ್ರಪಂಚವನ್ನು ಹೇಗೆ ಉರಿಸಿಬಿಡುತ್ತೇನೆ. ತಂದೆ-ಮಕ್ಕಳ ನಡುವೆ, ಅಣ್ಣ-ತಮ್ಮಂದಿರ ನಡುವೆ, ರಾಜ್ಯ-ರಾಜ್ಯಗಳ ನಡುವೆ ಸಿಟ್ಟಿನ ಬೆಂಕಿ ಹಚ್ಚಿಬಿಟ್ಟು ಎಲ್ಲರನ್ನೂ ಭಸ್ಮ ಮಾಡುತ್ತೇನೆ'. ಆದಾದ ನಂತರ ಕಾಮ ಬಂದಿತು.  `ಒಡೆಯಾ, ನನಗಿಂತ ಕೆಟ್ಟ ವಿನಾಶಕರು ಬೇಕೇ ನಿನಗೆ? ಕ್ಷಣಾರ್ಧದಲ್ಲಿ ನಾನು ಮನುಷ್ಯರನ್ನು ಪಶುಗಳನ್ನಾಗಿ ಮಾಡುತ್ತೇನೆ. ಪ್ರೇಮವನ್ನು ಹೊಸಕಿ ಹಾಕಿಬಿಡುತ್ತೇನೆ. ದೊಡ್ಡ ದೊಡ್ಡ ಸಂತರೆಂದು ಹೆಸರಾದವರ ಮನಸ್ಸನ್ನು ಕೆಡಿಸಿಬಿಡುತ್ತೇನೆ' ಎಂದಿತು. ಅದರ ಹಿಂದೆಯೇ ಬಂದಿತು ಲೋಭ. ಅದರ ಮತ್ತೊಂದು ಹೆಸರು ದುರಾಸೆ. ಅದು ತನ್ನ ಹೆಗ್ಗಳಿಕೆಯನ್ನು ಹೇಳಿಕೊಂಡಿತು. `ನನ್ನ ಶಕ್ತಿ ತಮಗೇ ಗೊತ್ತು. ಒಂದು ವೇಳೆ ನನ್ನ ಅತ್ಯಂತ ಪ್ರಬಲ ಅಸ್ತ್ರವಾದ ಅನಿಯಂತ್ರಿತ ಅಪೇಕ್ಷೆಗಳನ್ನು ಮನುಷ್ಯರ ಮನಸ್ಸಿನಲ್ಲಿ ತುಂಬಿಬಿಟ್ಟರೆ ಎಲ್ಲರೂ ರಾಕ್ಷಸರೇ ಅಗುತ್ತಾರೆ. ಪ್ರಪಂಚವನ್ನು ಅವರೇ ಹಾಳು ಮಾಡಿಬಿಡುತ್ತಾರೆ'  ಎಂದು ಹೇಳಿ ಗೋಣು ಕೊಂಕಿಸಿತು.

ಅನಂತರ ಸರದಿಯ ಪ್ರಕಾರ ಇತರ ಶಕ್ತಿಗಳು ಬಂದವು. ಜೂಜು, ಕುಡಿತ, ಆಲಸ್ಯ, ದ್ವೇಷ, ಅಸೂಯೆಗಳೂ ಬಂದು ಬಡಾಯಿ ಕೊಚ್ಚಿಕೊಂಡವು. ದುಷ್ಟಶಕ್ತಿಗೆ ತನ್ನ ಸಂಗಾತಿಗಳ ಶಕ್ತಿಕಂಡು ಹೆಮ್ಮೆಯಾಯಿತು. ಮೂಲೆಯಲ್ಲಿ ಇನ್ನೊಂದು ಪುಟ್ಟ ಶಕ್ತಿ ಕುಳಿತದ್ದು ಕಣ್ಣಿಗೆ ಬಿತ್ತು. `ನೀನು ಯಾರಯ್ಯೊ? ನೀನೇನು ಮಾಡಬಲ್ಲೆ'?  ಪ್ರಚಂಡ ದುಷ್ಟಶಕ್ತಿ ಕೇಳಿತು. ಪುಟ್ಟ ದುಷ್ಟಶಕ್ತಿ ಮುಂದೆ ಬಂದು ಹೇಳಿತು,  `ಸ್ವಾಮಿ ನಾನು ನೋಡಲು ಹಾಗಿದ್ದೇನೆ. ಆದರೆ, ಅಸಾಮಾನ್ಯ ಕಾರ್ಯ ಮಾಡಬಲ್ಲೆ. ನಾನು ಜನರ ಮನಸ್ಸಿನಲ್ಲಿ ಭಕ್ತಿ ಭಾವನೆ ಮೂಡಿಸಬಲ್ಲೆ. ಅವರ ಮನದಲ್ಲಿ ಸದಾಚಾರದ ಲಾಭದ ತಿಳುವಳಿಕೆ ನೀಡುತ್ತೇನೆ. ಪ್ರಾಮಾಣಿಕರಾಗಿರುವುದು ಹೇಗೆ, ಧೈರ್ಯದಿಂದ ಬಾಳುವುದು ಹೇಗೆ ಎಂಬುದನ್ನು ಜನರಿಗೆ ಮನದಟ್ಟು ಮಾಡಿಕೊಡಬಲ್ಲೆ'.ಪ್ರಚಂಡ ದುಷ್ಟಶಕ್ತಿಗೆ ಆಘಾತವಾಯಿತು,  `ಏನು ಹೇಳುತ್ತಿದ್ದೀ ನೀನು? ನಾವು ಮಾಡಬಯಸಿದ್ದೇನು, ನೀನು ಹೇಳುವುದೇನು'  ಎಂದು ಬಡಬಡಿಸಿತು. ಪುಟ್ಟ ದುಷ್ಟಶಕ್ತಿ ನಕ್ಕು ಹೇಳಿತು,  `ನಾನು ಹೇಳುವುದನ್ನು ಪೂರ್ತಿ ಕೇಳಿಸಿಕೊಳ್ಳಿ. ನಾನು ಜನರಿಗೆ ಎಲ್ಲ ಒಳ್ಳೆಯ ವಿಚಾರಗಳ್ನು ಹೇಳಿ ನಂತರ ಅದನ್ನು ತಕ್ಷಣ ಮಾಡುವ ಅವಶ್ಯಕತೆ ಇಲ್ಲವೆಂದು ಮನವರಿಕೆ ಮಾಡುತ್ತೇನೆ. ನಾಳೆ ಮಾಡಿದರಾಯಿತು, ಮುಂದಿನ ವಾರ ಮಾಡಿದರಾಯಿತು. ಅದಕ್ಕೇನು ಅವಸರ? ಎಂದು ತೀರ್ಮಾನಿಸುವಂತೆ ಮಾಡುತ್ತೇನೆ, ನನ್ನ ಗುಣವೇ ಅದು. ಮುಂದಕ್ಕೆ ಹಾಕುವುದು, ಕಾಲ ತಳ್ಳುವುದು, ನಿಧಾನಿಸುವುದು ಇವೆಲ್ಲ ನನ್ನ ಹೆಸರುಗಳೇ'.ಪ್ರಚಂಡ ದುಷ್ಟಶಕ್ತಿಗೆ ಅತೀವ ಸಂತೋಷವಾಗಿ,  `ನೀನೇ ಕಣಯ್ಯ ಸರಿಯಾದ ಶಕ್ತಿ ಪ್ರಪಂಚವನ್ನು ಹಾಳುಮಾಡಲು. ಜನರು ಒಳ್ಳೆಯದನ್ನೇ ಮಾತನಾಡುತ್ತಾರೆ ಆದರೆ ಯಾವುದನ್ನೂ ಮಾಡುವುದಿಲ್ಲ'  ಎಂದಿತು. ಹೀಗೆ ನಿಧಾನಿಸುವ, ತೀರ್ಮಾನಗೈಯದೇ ಮುಂದೂಡುವ ಸ್ವಭಾವವೇ ಬಹುದೊಡ್ಡ ದೋಷ. ನೀವು ಯಾವುದೋ ಕಾರ್ಯದಲ್ಲಿ ಸೋಲಲೇಬೇಕೆಂದು ತೀರ್ಮಾನ ಮಾಡಿದ್ದರೆ ಮತ್ತೇನೂ ಮಾಡಬೇಕಿಲ್ಲ, ಕೆಲಸವನ್ನು ಮುಂದೂಡುತ್ತ ಬಂದರೆ ಸಾಕು. ಅದಕ್ಕೇ ಹಿರಿಯರು ಹೇಳಿದರು,  `ನಾಳೆ ಮಾಡುವುದನ್ನು ಇಂದೇ ಮಾಡು, ಇಂದು ಮಾಡುವುದನ್ನು ಈಗಲೇ ಮಾಡು'. ಅದುವೇ ಯಶಸ್ಸಿನ ಸೂತ್ರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry