ಸೋಲು ಗೆಲುವುಗಳ ಮೂಸೆಯೊಳಗಿನ ವಾಸ್ತವ

7

ಸೋಲು ಗೆಲುವುಗಳ ಮೂಸೆಯೊಳಗಿನ ವಾಸ್ತವ

ಕುಲದೀಪ ನಯ್ಯರ್
Published:
Updated:
ಸೋಲು ಗೆಲುವುಗಳ ಮೂಸೆಯೊಳಗಿನ ವಾಸ್ತವ

ಎರಡು ರಾಜ್ಯಗಳಲ್ಲಿ ಈಚೆಗೆ ನಡೆದ ಚುನಾವಣೆಯ ಫಲಿತಾಂಶ ನಿರೀಕ್ಷಿತವೇ ಹೌದು. ಮೊದಲ ಮತ ಚಲಾವಣೆಯಾಗುವ ಮೊದಲೇ ಗುಜರಾತ್‌ನಲ್ಲಿ ಬಿಜೆಪಿ ಮತ್ತು ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಬಹುಮತ ಗಳಿಸುತ್ತದೆ ಎಂದು ಹೇಳಬಹುದಿತ್ತು. ಚುನಾವಣಾಪೂರ್ವ ಸಮೀಕ್ಷೆಗಳಲ್ಲಿ ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ 145 ಸ್ಥಾನಗಳನ್ನು ಗಳಿಸಬಹುದೆಂದು ಹೇಳಲಾಗುತಿತ್ತು. ಮೋದಿ ಸಮೀಕ್ಷೆಗಳನ್ನು ನೋಡಿಯೇ ಸಂಭ್ರಮಿಸುತ್ತಿದ್ದರು ಕೂಡಾ. ಆದರೆ ಆ ಸಂಖ್ಯೆಯನ್ನು ತಲುಪಲಾಗಲಿಲ್ಲ. ನಿಜ. ಆದರೆ ಅವರ ಬಹುಮತಕ್ಕೆ ಕೊರತೆಯಂತೂ ಆಗಲಿಲ್ಲ.ಕಾಂಗ್ರೆಸ್ ಪಕ್ಷ ಗುಜರಾತ್‌ನಲ್ಲಿ ಹಿಂದಿನ ಸಲಕ್ಕಿಂತ ನಾಲ್ಕೈದು ಸ್ಥಾನಗಳನ್ನು ಹೆಚ್ಚು ಗೆದ್ದಿರುವುದು ಗಮನಾರ್ಹ ಸಂಗತಿ ಏನಲ್ಲ. ಎರಡು ಅವಧಿಗೆ ಅಧಿಕಾರ ನಡೆಸಿರುವ ಪಕ್ಷವೊಂದರಿಂದ ಬೇಸತ್ತು ಸಹಜವಾಗಿಯೇ ಬದಲಾವಣೆ ಬಯಸುವ ಜನರು ಇದ್ದೆೀ ಇರುತ್ತಾರಲ್ಲಾ. ಅಂತಹ ಪ್ರತಿಕೂಲ ಅಂಶಗಳು ಮತ್ತು ಹಿಂದೆ ಬಿಜೆಪಿಯ ಪ್ರಮುಖ ನಾಯಕರಾಗಿದ್ದ ಕೇಶುಭಾಯ್ ಪಟೇಲ್ ಅವರ ಬಂಡಾಯ... ಇತ್ಯಾದಿಗಳ ಲಾಭವನ್ನು ಕಾಂಗ್ರೆಸ್ ಪಡೆದುಕೊಳ್ಳಲು ಸಾಧ್ಯವಿತ್ತು ಎಂಬ ಹಿನ್ನೆಲೆಯಲ್ಲಿ ಯೋಚಿಸಿದಾಗ ಕಾಂಗ್ರೆಸ್‌ನ ಸಾಧನೆ ಏನೇನೂ ಅಲ್ಲ ಎನಿಸುತ್ತದೆ. ಗುಜರಾತ್‌ನಲ್ಲಿ ಕಾಂಗ್ರೆಸ್‌ನ ಹಿರಿಯ ಮುಖಂಡರು ಚುನಾವಣಾ ಪ್ರಚಾರ ನಡೆಸಿದ್ದರು. ಮುಸ್ಲಿಮರ ಮತ್ತು ಬುಡಕಟ್ಟು ಜನಾಂಗದವರ ಓಟು ಬ್ಯಾಂಕಿನ ಮೇಲೆ ಹಿಡಿತ ಸಾಧಿಸಿದ್ದೆೀವೆಂದು ಕಾಂಗ್ರೆಸ್ ನಂಬಿಕೊಂಡಿತ್ತು. ಆದರೂ 182 ಸದಸ್ಯ ಬಲದ ವಿಧಾನಸಭೆಯಲ್ಲಿ ಮೋದಿ ನಿಚ್ಚಳ ಬಹುಮತ ಸಾಧಿಸುವುದನ್ನು ತಡೆಯಲಾಗಲಿಲ್ಲ.ಹಿಮಾಚಲ ಪ್ರದೇಶಕ್ಕೆ ಸಂಬಂಧಿಸಿದಂತೆ ಹೇಳುವುದಿದ್ದರೆ ಭ್ರಷ್ಟಾಚಾರದ ಪ್ರಕರಣಗಳು ಬಿಜೆಪಿಗೆ ಪ್ರತಿಕೂಲವಾಗಿ ಪರಿಣಮಿಸಿದ್ದಂತೂ ನಿಜ. ಅಲ್ಲಿ ಮುಖ್ಯಮಂತ್ರಿಯಾಗಿದ್ದ ಪ್ರೇಮಕುಮಾರ್ ಧುಮಾಲ್ ಅವರ ಸುತ್ತಲೂ ಕೆಲವು ಹಗರಣಗಳು ಸುತ್ತಿಕೊಂಡಿದ್ದವಾದರೂ, ಅವರ ಆಡಳಿತದ ಬಗ್ಗೆ ಉತ್ತಮ ಅಭಿಪ್ರಾಯ ಕೇಳಿ ಬಂದಿತ್ತು. ಅದೇನೆ ಇದ್ದರೂ, ಹಿಮಾಚಲ ಪ್ರದೇಶದ ರಾಜಕಾರಣವು ತಮಿಳುನಾಡಿನ ಸ್ವರೂಪ ಪಡೆದುಕೊಳ್ಳುತ್ತಿರುವಂತೆನಿಸುತ್ತದೆ. ತಮಿಳುನಾಡಿನಲ್ಲಿ ಒಂದು ಅವಧಿಗೆ ಡಿಎಂಕೆ ಅಧಿಕಾರದ ಗದ್ದುಗೆ ಏರಿದರೆ, ಇನ್ನೊಂದು ಅವಧಿಗೆ ಎಐಎಡಿಎಂಕೆ ಅಧಿಕಾರದ ಕೀಲಿಕೈ ಪಡೆಯುತ್ತದೆ. ಇದೀಗ ಹಿಮಾಚಲದ್ಲ್ಲಲಿಯೂ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿತ್ತು. ನಂತರ ಬಿಜೆಪಿ ಗದ್ದುಗೆ ಏರಿತು. ಇದೀಗ ಮತ್ತೆ ಕಾಂಗ್ರೆಸ್ ಅಧಿಕಾರದ ಪಟ್ಟಕ್ಕೇರಿದೆ.

ನರೇಂದ್ರ ಮೋದಿಯವರನ್ನು ಆಯ್ಕೆ ಮಾಡುವ ಮೂಲಕ ಗುಜರಾತ್‌ನ ಮತದಾರರು ಭಾರತದ ಇತರ ರಾಜ್ಯಗಳಿಗೆ ಯಾವ ಸಂದೇಶ ನೀಡಿರಬಹುದು ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ನಿಜಕ್ಕೂ ನಾನು ಸೋತಿದ್ದೆೀನೆ. ಅದು ಮೋದಿಯ ಜಯ. ಇಪ್ಪತ್ತೊಂದನೇ ಶತಮಾನದ ಯೋಚನೆಗಿಂತಾ ಭಿನ್ನವಾಗಿದೆ ಆತನ ಚಿಂತನೆ ಎನ್ನುವುದನ್ನು ಬಹುತೇಕ ಮಂದಿ ಒಪ್ಪುತ್ತಾರೆ. ಜನಾಭಿಪ್ರಾಯವೇ ಪ್ರಜಾಸತ್ತೆಯ ಮೂಲಧಾತು. ಇಲ್ಲಿ ಕಾನೂನಿನ ಎದುರು ಎಲ್ಲಾ ವರ್ಗದ ಜನರೂ ಒಂದೇ. ಯಾವುದೇ ಧರ್ಮ, ಜಾತಿ ಇರಬಹುದು ಪ್ರಜಾಪ್ರಭುತ್ವ ವ್ಯವಸ್ಥೆಯ ಅಡಿಯಲ್ಲಿ ಎಲ್ಲರೂ ಸಮಾನರು ತಾನೆ. ಆದರೆ ಮೋದಿ ಇಂತಹ ಮೌಲ್ಯಗಳ ಬಗ್ಗೆ ತಲೆಕೆಡಿಸಿಕೊಂಡವರಲ್ಲ. ಅವುಗಳನ್ನು ಗಂಭೀರವಾಗಿ ಕಂಡವರೂ ಅಲ್ಲ.ಗುಜರಾತ್‌ನಲ್ಲಿ ಮಧ್ಯಮ ವರ್ಗದ ಮತದಾರರ ಸಂಖ್ಯೆ ಬಲು ದೊಡ್ಡದು. ಈ ವರ್ಗ ಯಾವತ್ತೂ ತನ್ನ ಅಗತ್ಯಗಳ ಬಗ್ಗೆಯಷ್ಟೇ ಗಮನ ಕೊಡುತ್ತದೆ. ತನ್ನ ಗಳಿಕೆಗೆ ಅನುಕೂಲವಾಗುವಂತಹ ವ್ಯವಸ್ಥೆಯನ್ನು ಹೆಚ್ಚು ಮೆಚ್ಚಿಕೊಳ್ಳುತ್ತದೆ. ಈ ವರ್ಗ ಆಡಳಿತಗಾರರ ವಿರುದ್ಧ ತಿರುಗಿ ಬೀಳುವುದೇ ಇರಲಿ, ಪ್ರಶ್ನಿಸುವುದನ್ನೂ ಮಾಡುವುದಿಲ್ಲ. ತನ್ನ ಪಾಡಿಗೆ ತಾನಿದ್ದು ಬಿಡುತ್ತದೆ. ಈ ವರ್ಗಕ್ಕೆ ಮೋದಿ ಮುಸ್ಲಿಂ ವಿರೋಧಿಯಾದರೆಷ್ಟು ಬಿಟ್ಟರೆಷ್ಟು. ಮೋದಿ ಸರ್ವಾಧಿಕಾರಿಯಾಗಿ ಪ್ರಜಾಸತ್ತೆಯ ಮೌಲ್ಯಗಳನ್ನು ಗಾಳಿಗೆ ತೂರಿದರೂ ಈ ವರ್ಗ ಚಕಾರವೆತ್ತುವುದಿಲ್ಲ. ಹಿಂದೆ ಇಂದಿರಾ ಗಾಂಧಿ ಸರ್ವಾಧಿಕಾರಿ ಧೋರಣೆಯಿಂದ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಕಾಲಕಸವನ್ನಾಗಿಸಿದಂತೆ ಮೋದಿ ಎದ್ದು ನಿಂತರೂ ಈ ವರ್ಗಕ್ಕೆ ವಾಸ್ತವದ ಅರಿವಾಗುವುದೇ ಇಲ್ಲ.ಬಿಜೆಪಿಯ ಬಗ್ಗೆ ಅಥವಾ ನರೇಂದ್ರ ಮೋದಿಯವರ ಯಶಸ್ಸಿನ ಕುರಿತು ನನಗೆ ಯಾವುದೇ ಅಸೂಯೆ ಇಲ್ಲ. ಆದರೆ ನಾವು ಕಟ್ಟಲು ಹೊರಟಿರುವ ಕನಸಿನ ಭಾರತ ಇದೇ ಏನು ಎಂಬ ಪ್ರಶ್ನೆ ನನ್ನನ್ನು ಕಾಡತೊಡಗಿದೆ. ಮಹಾತ್ಮಾ ಗಾಂಧೀಜಿಯವರು ತಮ್ಮ ಹೋರಾಟದ ಉದ್ದಕ್ಕೂ ಹಿಂದೂ ಮುಸ್ಲಿಮರು ಈ ನಾಡಿನ ಎರಡು ಕಣ್ಣುಗಳು ಎನ್ನುತ್ತಲೇ ಇದ್ದರು. ಸ್ವತಃ ಗುಜರಾತಿಯಾಗಿದ್ದ ಗಾಂಧೀಜಿಯವರು ಅಹಮದಾಬಾದ್‌ನ ಬೀದಿಗಳಲ್ಲಿ ಖಾದಿಯನ್ನು ಮಾರಾಟ ಮಾಡುತ್ತಾ ನಡೆದಿದ್ದರು. ಅಹಿಂಸೆ, ಮಾನವತೆ, ಪ್ರೀತಿಯ ಸಂದೇಶವನ್ನು ಅಂದು ಅವರು ಅಲ್ಲಿ ಬಿತ್ತಿದ್ದರು. ಆದರೆ ಅದೇ ರಸ್ತೆಗಳಲ್ಲಿ ಸರಿಯಾಗಿ ಒಂದು ದಶಕದ ಹಿಂದೆ ಕೊಲೆಗಡುಕರು, ಲೂಟಿಕೋರರು ರಾಜಾರೋಷವಾಗಿ ಓಡಾಡುತ್ತಾ ದಾಂದಲೆ ನಡೆಸಿದ್ದನ್ನು ನಾವು ಮರೆಯುವುದೆಂತು. ಹಿಂದೆ ಅಲ್ಲಿ ಬ್ರಿಟಿಷರು ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದ ಚಳವಳಿಗಾರರ ಮೇಲೆ ಲಾಠಿಪ್ರಹಾರ ನಡೆಸಿದ್ದರು. ಆದರೆ ಮೋದಿಯ ಅಧಿಕಾರಾವಧಿಯಲ್ಲಿ ಪೊಲೀಸರೇ ಮತಾಂಧರಂತೆ ಕ್ರೂರವಾಗಿ ವರ್ತಿಸಿದ್ದರು.ಮೋದಿಯ ಮಾರ್ಗದರ್ಶನದಲ್ಲಿಯೇ ಹಿಂದುತ್ವವಾದಿಗಳು ಜನಾಂಗೀಯ ಕಲಹಕ್ಕೆ ಒತ್ತು ನೀಡಿ ಒಂದು ಕೋಮಿನ ಜನರನ್ನು ಆ ಪ್ರದೇಶದಿಂದಲೇ ಓಡಿಸುವ ನಿಟ್ಟಿನಲ್ಲಿ ಪ್ರಯತ್ನಗಳು ನಡೆದುದನ್ನು ಗುಜರಾತ್ ಕಂಡಿದೆ. ಪರಿಸ್ಥಿತಿ ಹೀಗಿರುವಾಗ ಈ ದೇಶದ ಸುಮಾರು 17 ಕೋಟಿ ಮುಸ್ಲಿಮರು ಗುಜರಾತಿನಲ್ಲಿ ನಡೆದ ಮೋದಿಯ ಚುನಾವಣಾ ಪ್ರಕ್ರಿಯೆಯನ್ನು ಕೇವಲ ಪ್ರಾಂತೀಯ ಸಂಕುಚಿತ ಹೆಜ್ಜೆ ಎಂದಷ್ಟೇ ತಿಳಿದುಕೊಳ್ಳಲು ಸಾಧ್ಯವೇ. ಕೋಮು ವಿಷಯಗಳಿಗೆ ಸಂಬಂಧಿಸಿದಂತೆ ಗಾಂಧೀಜಿಯವರಿಗೆ ಅವರದೇ ಆದ ಸ್ಪಷ್ಟತೆಗಳಿದ್ದವು. ಅವು ಮಾನವತೆಯ ಬೇರುಗಳನ್ನು ಹೊಂದಿದ್ದವು. ಹೀಗಾಗಿ ಹಿಂದೂ ಮತಾಂಧನೊಬ್ಬನ ಗುಂಡೇಟಿಗೆ ಅವರು ತಮ್ಮ ಜೀವವನ್ನು ಬಲಿಕೊಡಬೇಕಾಯಿತು. ಮೋದಿ ತನ್ನ ಚುನಾವಣಾ ಪ್ರಚಾರದ ವೇಳೆ ಮುಸ್ಲಿಮರ ಹೆಸರೆತ್ತಿ ಏನನ್ನೂ ಹೇಳಲಿಲ್ಲ. ಆದರೆ ಮತದಾನಕ್ಕೆ ಎರಡು ದಿನವಿದೆ ಎನ್ನುವಾಗ ಭಾರತ-ಪಾಕ್ ಗಡಿಗೆ ಸಂಬಂಧಿಸಿದಂತೆ ಸರ್ ಕ್ರೀಕ್ ವಿವಾದವನ್ನು ಪ್ರಸ್ತಾಪಿಸಿ ಪಾಕಿಸ್ತಾನದ ವಿರುದ್ಧ ಕಿಡಿಕಾರಿದರು. ಆ ಮೂಲಕ ಪಾಕ್ ವಿರೋಧಿ ಮನಸ್ಸುಗಳಲ್ಲಿನ ಬೆಂಕಿಗೆ ಇನ್ನಷ್ಟೂ ತುಪ್ಪ ಸುರಿದರು!ಅರಬ್ಬಿ ಕಡಲಿನ ಅಂಚಿನಲ್ಲಿರುವ ಸರ್ ಕ್ರೀಕ್ ಚಾಚುತಪ್ಪಲು ಪ್ರದೇಶವನ್ನು ಪಾಕಿಸ್ತಾನಕ್ಕೆ ಒಪ್ಪಿಸಬಾರದು ಎಂದು ಮನವಿ ಮಾಡುವ ಪತ್ರವನ್ನು ಬರೆದ ಮೋದಿಯವರು ಅದನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ರವಾನಿಸಿದರು. ಗುಜರಾತ್ ಚುನಾವಣೆಯ ಸಂದರ್ಭದಲ್ಲಿಯೇ ಪಾಕಿಸ್ತಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು ದೆಹಲಿಗೆ ಭೇಟಿ ನೀಡಿದ್ದೊಂದು ಕಾಕತಾಳೀಯ. ಆದರೆ ಮೋದಿಯವರು ಈ ಭೇಟಿಗೂ ಸರ್‌ಕ್ರೀಕ್ ವಿವಾದಕ್ಕೂ ಸಂಬಂಧ ಕಲ್ಪಿಸಿ ಜನಮನದಲ್ಲಿ ಅನುಮಾನದ ಅಲೆ ಹಬ್ಬುವಂತೆ ಮಾಡಿಬಿಟ್ಟಿದ್ದರು. ಆದರೆ ಆ ಕ್ಷಣದಲ್ಲಿಯೇ ಪ್ರಧಾನಿ ಮನಮೋಹನ್ ಸಿಂಗ್ ಅವರು ಪ್ರತಿಕ್ರಿಯಿಸಿ ಸರ್‌ಕ್ರೀಕ್ ವಿವಾದದ ಬಗ್ಗೆ ಯಾವುದೇ ಮಾತುಕತೆ ಇಲ್ಲವೇ ಇಲ್ಲ ಎಂದು ಸ್ಪಷ್ಟ ಪಡಿಸಿದರು. ಹಣಕಾಸು ಸಚಿವ ಪಿ.ಚಿದಂಬರಂ ಮಾತನಾಡಿ ಮೋದಿಯವರ ಈ ಪ್ರಸ್ತಾಪವೇ ಹಾಸ್ಯಾಸ್ಪದ ಮತ್ತು ಕಪೋಲಕಲ್ಪಿತ ಎಂದರು. ಆದರೆ ಚುನಾವಣೆಯ ಸಂದರ್ಭದಲ್ಲಿಯೇ ಮೋದಿ ನೀಡಿದ್ದ ಆ ಹೇಳಿಕೆ ಪರಿಣಾಮವನ್ನಂತೂ ಬೀರಿತು. `ಬೇಲಿಯ ಮೇಲೆ ಕುಳಿತ್ತಿದ್ದ' ಮತದಾರರು ಸರ್ ಕ್ರೀಕ್ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಮೋದಿಯ ಪರ ಒಲವು ತೋರಿಸಿಬಿಟ್ಟರು. ಮೋದಿ ಚುನಾವಣಾ ವೇಳೆ ನಡೆಸಿದ ಇಂತಹ ತಂತ್ರಗಳ ಬಗ್ಗೆ ಚುನಾವಣಾ ಆಯೋಗವು ಗಮನ ಹರಿಸಬೇಕು.ಗುಜರಾತಿನಲ್ಲಿ ತಾವು ಮಾಡಿರುವ ಅಭಿವೃದ್ಧಿಯ ಕಾರಣದಿಂದಲೇ ತಾವು ಗೆದ್ದಿರುವುದಾಗಿ ಮುಖ್ಯಮಂತ್ರಿ ಮೋದಿ ಪದೇ ಪದೇ ಹೇಳಿ ಕೊಳ್ಳುತ್ತಿದ್ದಾರೆ. ಇದು ಯಾವ ತೆರನಾದ ಅಭಿವೃದ್ಧಿ ಎನ್ನುವುದೇ ನನಗೆ ಗೊತ್ತಾಗುತ್ತಿಲ್ಲ. ಮುಸ್ಲಿಮರು ದಿನದಿಂದ ದಿನಕ್ಕೆ ಬಡವರಾಗುತ್ತಿದ್ದಾರೆ. ಹಿಂದೆಲ್ಲಾ ನಡೆದಿರುವ ಕೋಮುಗಲಭೆಯಲ್ಲಿ ಅಪಾರ ಹಾನಿಯಾದವರಿಗೆ ಇವತ್ತಿಗೂ ಪುನರ್‌ವಸತಿ ಕಲ್ಪಿಸಿಲ್ಲ. ಮುಸ್ಲಿಮರು ಇರುವ ಪ್ರದೇಶಗಳಲ್ಲಿ ರಸ್ತೆಗಳು ಸರಿಯಾಗಿಲ್ಲ. ಕುಡಿಯುವ ನೀರಿನ ಸೌಲಭ್ಯ ಉತ್ತಮವಾಗಿಲ್ಲ. ಆದಿವಾಸಿಗಳನ್ನು ಕೂಡಾ ಮೂಲೆಗುಂಪು ಮಾಡಲಾಗಿದೆ. ಬುಡಕಟ್ಟು ಜನರಿಗೆ ಸರ್ಕಾರದ ಸೌಲಭ್ಯಗಳು ತಲುಪಿರುವುದು ಅಷ್ಟರಲ್ಲಿಯೇ ಇದೆ. ಇದು ಅಭಿವೃದ್ಧಿಯೇ?ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿರುವ ಮಧ್ಯಮ ವರ್ಗವೇ ಮೋದಿ ಸರ್ಕಾರದಿಂದ ಹೆಚ್ಚಿನ ಲಾಭ ಪಡೆದಿದೆ. ಹೀಗಾಗಿ ಮೋದಿ ನೇತೃತ್ವದ ಬಿಜೆಪಿಗೆ ಈ ವರ್ಗ ಸಾರಾಸಗಟಾಗಿ ಮತ ಚಲಾಯಿಸಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಹಿಮಾಚಲ ಪ್ರದೇಶದ ಪರಿಸ್ಥಿತಿ ಇದಕ್ಕಿಂತ ಭಿನ್ನ. ಅಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಮಧ್ಯಮ ವರ್ಗವೇ ಪ್ರೇಮಕುಮಾರ್ ಧುಮಾಲ್ ಅವರನ್ನು ಅಧಿಕಾರದಿಂದ ಹೊರಗಟ್ಟಿತು. ಮಧ್ಯಮ ವರ್ಗ ಈ ರೀತಿ ನಡೆದುಕೊಂಡಿರುವುದು ಆರೋಗ್ಯಕರ ಲಕ್ಷಣವೇ ಆಗಿದೆ. ಆದರೆ ಈ ವರ್ಗ ತನ್ನ ಪ್ರಾದೇಶಿಕ ಮನಸ್ಥಿತಿಯಿಂದ ಹೊರಬರದಿರುವುದೊಂದು ವಿಪರ್ಯಾಸ. ಹಿಮಾಚಲ ಪ್ರದೇಶದಲ್ಲಿ ಪಂಜಾಬಿಗಳು ಮತ್ತು ಮೂಲ ನಿವಾಸಿಗಳ ನಡುವಣ `ಅಂತರ' ಅಲ್ಲಿನ ರಾಜಕಾರಣದಲ್ಲಿ ಸಾಕಷ್ಟು ಪ್ರಭಾವ ಬೀರಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ.ಹಿಮಾಚಲದಲ್ಲಿ ಧುಮಾಲ್ ಸೋಲು ಬಿಜೆಪಿ ಹೈಕಮಾಂಡ್‌ನಲ್ಲಿ ಒಂದು ಸಣ್ಣ ಘಟನೆಯಷ್ಟೇ. ಆದರೆ ಮೋದಿಯ ಗೆಲುವು ಆ ಪಕ್ಷದಲ್ಲಿಯೇ ವಿಭಿನ್ನ ಕಿರಿಕಿರಿಗೆ ಕಾರಣವಾಗಬಹುದು. ಇದೀಗ ಗುಜರಾತ್‌ನ ಎಲ್ಲೆಂದರಲ್ಲಿ ಕಂಡು ಬರುತ್ತಿರುವ ಭಿತ್ತಿಚಿತ್ರಗಳೇ ಇದಕ್ಕೆ ಸ್ಪಷ್ಟ ನಿದರ್ಶನ. `ಗುಜರಾತಿನ ಹುಲಿ ಮುಂದೆ ಭಾರತದ ಹುಲಿಯಾಗಲಿದೆ' ಎಂಬ ಘೋಷಣೆಗಳ ಭಿತ್ತಿಚಿತ್ರಗಳು ಹೈಕಮಾಂಡ್‌ನಲ್ಲಿ ಸಂಚಲನ ಉಂಟು ಮಾಡಿರುವುದಂತೂ ನಿಜ. ಮೋದಿ ರಾಷ್ಟ್ರೀಯ ರಾಜಕಾರಣಕ್ಕೆ ಪ್ರವೇಶಿಸುವುದು ಬಿಜೆಪಿಯ ಹಲವು ಹಿರಿಯ ನಾಯಕರಿಗೆ ಇಷ್ಟವೇ ಇಲ್ಲ. ಕೆಲವು ಸಮಯದ ಹಿಂದೆ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿಯವರು ನನ್ನೊಡನೆ ಮಾತನಾಡುತ್ತಾ `ಬಿಜೆಪಿಯಲ್ಲಿ ಪ್ರಧಾನಿ ಪಟ್ಟದ ಆಕಾಂಕ್ಷಿಗಳ ಪಟ್ಟಿ ಬಲು ದೊಡ್ಡದಿದೆ' ಎಂದಿದ್ದು ನನಗಿನ್ನೂ ನೆನಪಿದೆ. ಮೋದಿ ಮತ್ತು ಗಡ್ಕರಿ ಪರಸ್ಪರ ಮುಖ ನೋಡಲಾರದಷ್ಟು ಕಡುವಿರೋಧಿಗಳು ಎಂಬುದು ಎಲ್ಲರಿಗೂ ಗೊತ್ತಿರುವಂತಹದ್ದೆೀ ಆಗಿದೆ. ಕೊನೆಗೆ ಅಂತಿಮ ತೀರ್ಮಾನ ಆರ್‌ಎಸ್‌ಎಸ್‌ದೇ ಎನ್ನುವುದು ನಿಜ ಬಿಡಿ.ಬಿಜೆಪಿ ನೇತೃತ್ವದ ಎನ್‌ಡಿಎ ನಲ್ಲಿರುವ ಕೆಲವು ಮಿತ್ರಪಕ್ಷಗಳ ಮುಖಂಡರಿಗೆ ಮೋದಿಯ ರಾಜಕಾರಣದ ಪರಿ ಮತ್ತು ಮುಸ್ಲಿಂ ವಿರೋಧಿ ಚಿಂತನೆಗಳು ಇಷ್ಟವಾಗುವುದಿಲ್ಲ ಎನ್ನುವುದೂ ವಾಸ್ತವ. ಈ ಹಿನ್ನೆಲೆಯಲ್ಲಿಯೇ ಎನ್‌ಡಿಎನ ಪ್ರಭಾವಿ ಮುಖಂಡ ಹಾಗೂ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿಕೆ ವಾದವಿವಾದಕ್ಕೆ ಗ್ರಾಸ ಒದಗಿಸುವಂತಹದ್ದಾಗಿದೆ. ಎನ್‌ಡಿಎಯಿಂದ ಪ್ರಧಾನಿ ಸ್ಥಾನಕ್ಕೆ ಅಭ್ಯರ್ಥಿ ಎಂದು ಬಿಂಬಿಸಲ್ಪಡುವವರು ಎನ್‌ಡಿಎಯ ಎಲ್ಲಾ ಮಿತ್ರಪಕ್ಷಗಳ ಒಮ್ಮತ ಪಡೆದಿರಬೇಕು ಎಂದು ನಿತೀಶ್ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ನೋಡಿದರೆ ರಾಷ್ಟ್ರದ ಅತ್ಯುನ್ನತ ಪದವಿಗೆ ಏರುವ ದಿಸೆಯಲ್ಲಿ ಮೋದಿಗೆ ಹೆಚ್ಚಿನ ಬೆಂಬಲ ಸಿಗುವುದು ಅನುಮಾನವೇ.ಗುಜರಾತ್ ಮತ್ತು ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶವು ಮುಂದಿನ ವರ್ಷದ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರತಿಫಲನಗೊಳ್ಳಬಹುದು ಎನ್ನುವಂತಿಲ್ಲ. ಆ ರೀತಿ ನಂಬಬೇಕಿಲ್ಲ. ಬಿಜೆಪಿ ಆಡಳಿತದಲ್ಲಿರುವ ರಾಜ್ಯಗಳು 2014ರ ಚುನಾವಣೆಯಲ್ಲಿ ತಮ್ಮ ಪಕ್ಷದ ಸದಸ್ಯರನ್ನೇ ದೊಡ್ಡ ಸಂಖ್ಯೆಯಲ್ಲಿ ಆರಿಸಿ ಸಂಸತ್ತಿಗೆ ಕಳುಹಿಸುತ್ತವೆ ಎನ್ನುವಂತೆಯೇ ಇಲ್ಲ. ಅದೇನೇ ಇರಬಹುದು, ಮತದಾರರ ಎದುರು ಕಾಂಗ್ರೆಸ್ ಮತ್ತು ಬಿಜೆಪಿಯೇ ನಿಂತಿದ್ದು, ಇನ್ನೊಂದು ಪರ್ಯಾಯ ಶಕ್ತಿ ದೊಡ್ಡದಾಗಿ ಕಂಡು ಬರದಿರುವುದೊಂದು ವಿಷಾದದ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿಯೇ ಈ ದೇಶದ ವಿವಿಧ ಜನಾಂದೋಲನಗಳ ಮುಖಂಡರು ಒಂದೇ ವೇದಿಕೆಯ ಮೇಲೆ ನಿಲ್ಲಬೇಕಿದೆ. ಕಾಂಗ್ರೆಸ್ ಮತ್ತು ಬಿಜೆಪಿಗಳ ದುರಾಡಳಿತ ಮತ್ತು ಭ್ರಷ್ಟಾಚಾರ ವ್ಯವಸ್ಥೆಯಿಂದ ಈ ನಾಡನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಪರ್ಯಾಯ ಶಕ್ತಿಯೊಂದು ರೂಪುಗೊಳ್ಳಲೇಬೇಕಾಗಿದೆ.


 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry