ಸೋಲೊ–2

7

ಸೋಲೊ–2

Published:
Updated:
ಸೋಲೊ–2

ಕಾಡುನಾಯಿಗಳ ಗೂಡನ್ನು ಪತ್ತೆ ಹಚ್ಚಿದಾಗ ಅತ್ಯಂತ ದಾರುಣ ದೃಶ್ಯವೊಂದು ನಮಗೆದುರಾಗಿತ್ತು. ಗೂಡಿನ ಬಾಯಿಯಲ್ಲಿ ಮಲಗಿದ್ದ ಗುಂಪಿನ ನಾಯಕ ತನ್ನ ಬದುಕಿನ ಅಂತಿಮ ಕ್ಷಣಗಳಲ್ಲಿತ್ತು. ತಿಂಗಳು ದಾಟದ ಮರಿಗಳು ಗೂಡಿನೊಳಗೆ ಮಣ್ಣಾಗಿ ಹೋಗಿದ್ದವು. ಇಡೀ ಗುಂಪು ನಾಶವಾಗಿತ್ತು. ಅಚ್ಚರಿ ಎಂದರೆ, ಅದೇ ಗುಂಪಿನ ಎಳೆಯ ಪ್ರಾಯದ ಗಂಡುನಾಯಿಯೊಂದು ಬದುಕುಳಿದಿರುವ ಸಂಗತಿ ತಿಂಗಳ ಬಳಿಕ ಅರಿವಿಗೆಬಂತು. ಆ ಕಾಡುನಾಯಿಯನ್ನು ‘ಸೋಲೊ’ ಎಂದು ಕರೆದೆವು. ‘ಸೋಲೊ’ ಚಿಕ್ಕವಯಸ್ಸಿನಲ್ಲೇ ಒಬ್ಬಂಟಿಯಾಗಿ ಅನೇಕ ಸವಾಲುಗಳನ್ನೆದುರಿಸಿ ಬದುಕುಳಿದಿದ್ದಷ್ಟೇ ಅಲ್ಲ, ನೆರೆಯ ಗುಂಪಿನಿಂದ ಸಂಗಾತಿಯೊಬ್ಬಳನ್ನು ಹಾರಿಸಿಕೊಂಡು ಬರುವಲ್ಲೂ ಯಶಸ್ವಿಯಾಗಿತ್ತು.

ಗಾತ್ರದಲ್ಲಿ ಸಣ್ಣದಾದ ಈ ಕಾಡುನಾಯಿಗಳು ತಮಗಿಂತ ಪ್ರಬಲರಾದ ಹುಲಿ–ಚಿರತೆಗಳೊಂದಿಗೆ ಸ್ಪರ್ಧಿಸಿ ಬದುಕು ಸಾಗಿಸಬೇಕಿರುವುದರಿಂದ ಅವು ಗುಂಪಿನಲ್ಲಿ ಬದುಕುವುದು ಅನಿವಾರ್ಯ. ‘ಪ್ರತಿಯೊಬ್ಬರ ಶಕ್ತಿ ಅಡಗಿರುವುದು ಗುಂಪಿನಲ್ಲಿ, ಆದರೆ ಗುಂಪಿನ ಸಾಮರ್ಥ್ಯವಿರುವುದು ಪ್ರತಿ ಸದಸ್ಯರಲ್ಲಿ’ ಎಂಬ ಸೂಕ್ತಿಯಂತೆ.

ಪ್ರತಿ ಕಾಡುನಾಯಿಗಳ ಗುಂಪಿನಲ್ಲಿ, ಪ್ರಬಲವಾದ ಜೋಡಿಯೊಂದು ಇಡೀ ತಂಡವನ್ನು ನಿಯಂತ್ರಿಸುತ್ತವೆ. ಮತ್ತು ಸಂತಾನೋತ್ಪತ್ತಿಯ ಹಕ್ಕು ಕೂಡ ಈ ಜೋಡಿಯದ್ದಷ್ಟೆ. ಗುಂಪಿನಲ್ಲಿರುವ ಉಳಿದ ಎಲ್ಲಾ ಸದಸ್ಯರಿಗೆ ಆಹಾರ ಮತ್ತು ರಕ್ಷಣೆ ದೊರಕುತ್ತದೆ. ಅಲ್ಲದೆ, ಬೇಟೆಯ ಕೌಶಲ್ಯಗಳನ್ನು, ಬದುಕುಳಿಯುವ ತಂತ್ರಗಳನ್ನು ಕೂಡ ಗುಂಪು ಅವುಗಳಿಗೆ ಕಲಿಸಿಕೊಡುತ್ತದೆ. ಆದರೆ ಇಲ್ಲಿ ತಂಡದ ಉಳಿದ ಸದಸ್ಯರಾರಿಗೂ ಸಂತಾನಾಭಿವೃದ್ಧಿಯ ಅವಕಾಶವಿಲ್ಲ. ಈ ವ್ಯವಸ್ಥೆಯಿಂದಾಗಿ, ವಯಸ್ಸಿಗೆ ಬಂದ ಮರಿಗಳು ತಮ್ಮದೇ ಕುಟುಂಬ ಕಟ್ಟುವ, ಸಾಮ್ರಾಜ್ಯ ಸ್ಥಾಪಿಸುವ ಸಹಜ ತವಕದಿಂದ ಗುಂಪಿನಿಂದ ಹೊರನಡೆಯುವುದು ಸಾಮಾನ್ಯ. ಗುಂಪಿನಿಂದ ಹೊರನಡೆಯುವ ಅಥವ ಗುಂಪಿನಲ್ಲೇ ಉಳಿದು ಸೂಕ್ತ ಅವಕಾಶಕ್ಕಾಗಿ ಕಾಯುವ ತೀರ್ಮಾನಗಳು, ಅವುಗಳ ಜೀವನದ ಅತಿ ಮುಖ್ಯ ಘಟ್ಟ. ಈ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ, ಗುಂಪಿನ ನಾಯಕ ಮತ್ತು ನಾಯಕಿಯರೊಡನೆ ಅವುಗಳಿಗಿರುವ ಜೈವಿಕ ಸಂಬಂಧ ಹಾಗೂ ತಂಡದಲ್ಲಿ ಅವುಗಳಿಗಿರುವ ಸ್ಥಾನಮಾನ ಮುಖ್ಯಪಾತ್ರ ವಹಿಸುತ್ತವೆ.

ಹೀಗೆ, ಗುಂಪಿನಿಂದ ಹೊರನಡೆದ ಕಾಡುನಾಯಿಯೊಂದು ಕಾಡಿನಲ್ಲಿ ಏಕಾಂಗಿಯಾಗಿ ಬದುಕು ಸಾಗಿಸುವುದು ಮಾತ್ರ ಒಂದು ದುಸ್ಸಾಹಸವೇ ಸರಿ. ಆದರೆ, ‘ಸೋಲೊ’ ತನ್ನ ಚಿಕ್ಕ ವಯಸ್ಸಿನಲ್ಲೇ ಅನಿವಾರ್ಯವಾಗಿ ಈ ಸಂಕಷ್ಟದ ಸನ್ನಿವೇಶದಲ್ಲಿ ಸಿಕ್ಕಿಹಾಕಿಕೊಂಡಿತ್ತು. ಎಳೆಯ ವಯಸ್ಸಿನ ಅದರ ಸಂಗಾತಿಗೆ ಕೂಡ ಅಷ್ಟೇನೂ ಅನುಭವವಿರಲಿಲ್ಲ. ಹಾಗಾಗಿ ಬಹಳ ಕಷ್ಟದ, ಸವಾಲಿನ ಅಧ್ಯಾಯಗಳು ಅವುಗಳ ಮುಂದಿದ್ದವು. ಈ ಹಿನ್ನೆಲೆಯಲ್ಲಿ, ಅವು ಹೆಚ್ಚಿನ ಸಮಯವನ್ನು ಸೋಲೊನ ಪೂರ್ವಜರಿಂದ ಬಳುವಳಿಯಾಗಿ ಪಡೆದಿದ್ದ ವಲಯದಲ್ಲೇ ಕಳೆಯತೊಡಗಿದ್ದವು. ಜೊತೆಗೆ, ಹೆಚ್ಚಾಗಿ ಕಾಡಿನ ರಸ್ತೆಯ ಮಗ್ಗುಲಲ್ಲೇ ವಿಶ್ರಮಿಸುತ್ತಿದ್ದವು. ಬಹುಶಃ ಸುರಕ್ಷತೆಯ ದೃಷ್ಟಿಯಿಂದ ಇರಬಹುದು.

ಕೆಲವೇ ತಿಂಗಳಲ್ಲಿ ಸೋಲೊನ ಸಂಗಾತಿ ಗರ್ಭಿಣಿಯಾಗಿದ್ದನ್ನು ಗಮನಿಸಿದೆವು. ಆಗ, ಮರಿ ಮಾಡಲು ಸೋಲೊ ಯಾವ ಸ್ಥಳವನ್ನು ಆಯ್ಕೆಮಾಡಿಕೊಳ್ಳಬಹುದೆಂಬ ಕುತೂಹಲ ನಮಗಿತ್ತು. ಏಕೆಂದರೆ, ಅದರ ಪೂರ್ವಜರು ಬಳಸುತ್ತಿದ್ದ ಗುಡ್ಡಗಳು ಮೇಲ್ನೋಟಕ್ಕೆ ಸುರಕ್ಷಿತವಾಗಿ ಕಂಡರು, ಅವು ಹುಲಿಗಳ ಅಲೆದಾಟದಿಂದ ಮುಕ್ತವಾಗಿರಲಿಲ್ಲ. ಹಾಗಾಗಿ, ಗುಂಪಿನ ಬೆಂಬಲವಿಲ್ಲದ ಸೋಲೊ ಅಲ್ಲಿ ನೆಲೆಸುವುದು ನಮಗೆ ಅಪಾಯಕಾರಿಯಂತೆ ಕಂಡಿತ್ತು.

ಆದರೆ, ನಮ್ಮ ಲೆಕ್ಕಾಚಾರಗಳನ್ನೆಲ್ಲ ಹುಸಿಗೊಳಿಸಿ, ಮರಿಮಾಡಲು ತನ್ನ ಪೂರ್ವಜರು ಬಳಸುತ್ತಿದ್ದ ಗುಡ್ಡವನ್ನೇ ಸೋಲೊ ಆಯ್ಕೆಮಾಡಿಕೊಂಡಿತು.

ಮರಿಮಾಡುವ ಅವಧಿಯಲ್ಲಿ ಕಾಡುನಾಯಿಗಳ ಚಲನವಲನಗಳ ಬಗ್ಗೆ ನಿಗಾ ಇರಿಸುವುದೇ ಕಷ್ಟ. ವಾರದಲ್ಲಿ ಒಂದೆರಡು ಬಾರಿ ಅವುಗಳನ್ನು ಕಾಣಲು ಸಾಧ್ಯವಾದರೂ ನಾವು ಅದೃಷ್ಟಶಾಲಿಗಳೆಂದೇ ತಿಳಿಯುತ್ತಿದ್ದೆವು. ಕಾರಣವಿಷ್ಟೆ – ಸೂರ್ಯ ಉದಯಿಸುವ ಮುನ್ನವೇ ಅವುಗಳ ಕಾರ್ಯಚಟುವಟಿಕೆಗಳೆಲ್ಲ ಮುಗಿದು, ಗೂಡಿದ್ದ ಗುಡ್ಡದಲ್ಲಿ ಹೊಕ್ಕು ಮರೆಯಾಗಿಬಿಡುತ್ತಿದ್ದವು. ಪರೀಕ್ಷಿಸಲು ಗೂಡಿನ ಬಳಿ ಸರಿದರೆ ಅವುಗಳಿಗೆ ತೊಂದರೆಯಾಗುತ್ತದೆಂದು ನಾವು ಹತ್ತಿರ ಹೋಗುತ್ತಿರಲಿಲ್ಲ.

ವಾರಗಳೇ ಕಳೆದವು. ಒಂದು ದಿನ ಸೋಲೊ ಬೇಟೆಯಲ್ಲಿ ತೊಡಗಿತ್ತು. ಆದರೆ, ಅದರ ಸಂಗಾತಿ ಜೊತೆಗಿರಲಿಲ್ಲ. ಆಕೆ ಮರಿಮಾಡಿರಬಹುದೇ? ಎಂದು ನಾವು ಕೌತುಕರಾದೆವು. ಸೋಲೊಗೆ ಆ ದಿನ ಬೇಟೆ ಸಾಧ್ಯವಾಗಲಿಲ್ಲ. ಅದು ನೇರವಾಗಿ ಗೂಡಿನತ್ತ ತೆರಳುತ್ತೆಂದು ನಮಗೆ ಖಚಿತವಾಗಿ ತಿಳಿದಿತ್ತು. ಹಾಗಾಗಿ ನಾವು ಗುಡ್ಡದತ್ತ ಓಡಿದೆವು. ಅದು ಯಾವ ಪೊಟರೆಯನ್ನು ಪ್ರವೇಶಿಸಬಹುದೆಂಬುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ದಾರಿಯಲ್ಲಿದ್ದ ಬೇರೆ ಬೇರೆ ಮರಗಳನ್ನೇರಿ ಕುಳಿತೆವು. ಸೋಲೊ ಗೂಡಿನ ಬಳಿ ಹೋಗುತ್ತಿದ್ದಂತೆ, ಹಸಿದಿದ್ದ ತಾಯಿ ಆಹಾರಕ್ಕಾಗಿ ಬೇಡುತ್ತಿದ್ದ ಸದ್ದು ಮಾತ್ರ ಕೇಳಿಬಂತು. ಮರಿಗಳಿಗೆ ಜನ್ಮವಿತ್ತಿದ್ದ ಆಕೆ ಆಯಾಸಗೊಂಡು ಹಸಿದಿದ್ದಿರಬಹುದು. ಆದರೆ ಸೋಲೊ ಸಹ ಏನನ್ನೂ ತಿಂದಿರಲಿಲ್ಲ.

ಮಧುಚಂದ್ರ ಮುಗಿದಿತ್ತು. ಸಂಕಷ್ಟದ ದಿನಗಳು ಆಗಷ್ಟೆ ಶುರುವಾಗಿದ್ದವು...

ಆದರೆ, ಸೋಲೊ ಕ್ರಮೇಣ ಪ್ರಬುದ್ಧಗೊಳ್ಳುತ್ತ, ಹಲವಾರು ಹೊಸ ತಂತ್ರಗಳನ್ನು ಮೈಗೂಡಿಸಿಕೊಳ್ಳುತ್ತಾ ಸಾಗಿತ್ತು. ಅಚ್ಚರಿಗೊಳಿಸುವಂತೆ ಆಹಾರ ಸಂಪಾದಿಸುತ್ತಾ ಮರಿಗಳನ್ನು ಉಳಿಸಿಕೊಳ್ಳುವಲ್ಲಿ ಸಫಲವಾಗಿತ್ತು. ಶಿಕಾರಿಯಲ್ಲಿ ಸಂಗಾತಿ ಸಹ ಸೋಲೊನ ನೆರವಿಗಿರುತ್ತಿದ್ದಳು. ಬೇಟೆಯನ್ನು ಪರಿಣಾಮಕಾರಿಯಾಗಿ ಕೆಡವಲು ಜೊತೆ ಜೊತೆಯಾಗಿ ಪಾಲ್ಗೊಳ್ಳುವುದು ಅಗತ್ಯವಾಗಿತ್ತು. ಹಾಗಾಗದಿದ್ದಲ್ಲಿ ಮರಿಗಳ ಹಸಿವನ್ನು ತಣಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಪ್ರಯತ್ನದಲ್ಲಿ ಶಿಕಾರಿಗೆ ಹೋಗುವಾಗ, ಅಸಹಾಯಕ ಮರಿಗಳನ್ನು ಮಾತ್ರ ಗೂಡಿನಲ್ಲಿ ಬಿಟ್ಟುಹೋಗುವುದು ಅವುಗಳಿಗೆ ಅನಿವಾರ್ಯವಾಗಿತ್ತು. ಹಾಗಾಗಿ, ಏನಾದರೂ ಯಡವಟ್ಟಾಗುವ ಸಾಧ್ಯತೆಗಳು ಕೂಡ ಹೆಚ್ಚಾಗಿದ್ದವು.

ಆಗ, ಮರಿಗಳಿಗೆ ಸುಮಾರು ಒಂದೂವರೆ ತಿಂಗಳಾಗಿತ್ತು. ಬೆಳೆಯುತ್ತಿದ್ದ ಆ ಮರಿಗಳನ್ನು ನಾವಿನ್ನೂ ಕಂಡಿರಲಿಲ್ಲ. ಗೂಡಿದ್ದ ಸ್ಥಳವನ್ನು ಅಂದಾಜಿಸಿದ್ದರೂ ಖಚಿತವಾಗಿ ಅದು ಎಲ್ಲಿದೆ ಎಂಬ ತಿಳಿವಳಿಕೆ ಕೂಡ ನಮಗಿರಲಿಲ್ಲ. ಇದನ್ನು ಖಚಿತಪಡಿಸಿಕೊಳ್ಳುವ ಯತ್ನದಲ್ಲಿ ಮರದ ಮೇಲೆ ಕುಳಿತು ಒಮ್ಮೆ ಕಣ್ಣಾಡಿಸುತ್ತಿದ್ದಾಗ, ಇದ್ದಕಿದ್ದಂತೆ ಗುಡ್ಡದ ನೆತ್ತಿಯಲ್ಲಿ ದೊಡ್ಡದೊಂದು ಪ್ರಾಣಿ ಓಡಿದಂತಾಯಿತು. ಬೆಂಕಿಯ ಉಂಡೆಯಂತಿದ್ದ ಸಣ್ಣ ಪ್ರಾಣಿಯೊಂದು ಅದರ ಬೆನ್ನತ್ತಿತ್ತು. ಅಲ್ಲಿ ನಡೆಯುತ್ತಿರುವುದೇನೆಂದು ಸ್ಪಷ್ಟವಾದಾಗ ನಮಗೆ ರೋಮಾಂಚನವಾಗಿತ್ತು.

ಸೋಲೊ ದೊಡ್ಡ ಚಿರತೆಯೊಂದನ್ನು ಬೆನ್ನಟ್ಟಿತ್ತು. ಓಡುತ್ತಿದ್ದ ಚಿರತೆ ಸಣ್ಣ ನೆಲ್ಲಿಮರವೊಂದರ ಮೇಲೆ ಜಿಗಿದು, ನೆಲದಿಂದ ಕೇವಲ ಹತ್ತು ಅಡಿ ಎತ್ತರದಲ್ಲಿದ್ದ ರೆಂಬೆಯೊಂದರ ಮೇಲೇರಿ ಹೇಗೋ ಜೋಲಾಡುತ್ತಾ ಕುಳಿತುಕೊಂಡಿತು. ಒಂದೆರಡು ಸೆಕೆಂಡುಗಳಲ್ಲಿ, ನೆಲ್ಲಿಮರದ ಬುಡದ ಪೊದರುಗಳಿಂದ, ಚಿರತೆ ಕುಳಿತಿದ್ದ ರೆಂಬೆಯತ್ತ ಸೋಲೊ ಚಿಮ್ಮಿ ಹಾರಿಬಿದ್ದದ್ದು ಕಂಡಿತು. ಬೈನಾಕುಲರ್‌ನಲ್ಲಿ ಇನ್ನಷ್ಟು ವಿವರವಾಗಿ ಗಮನಿಸಿದಾಗ ಸೋಲೊ ಹಾರಿದಾಗಲೆಲ್ಲ ಚಿರತೆ ತನ್ನ ಉದ್ದನೆಯ ಬಾಲವನ್ನು ಮೇಲೆಳೆದುಕೊಳ್ಳುತ್ತಾ, ದಂತಗಳನ್ನು ಪ್ರದರ್ಶಿಸುತ್ತಾ ಗುರುಗುಡುತ್ತಿತ್ತು. ನಂತರ ಮರದಿಂದ ಹಾರಿದ ಚಿರತೆ ವೇಗವಾಗಿ ಓಡಿತು. ಸೋಲೊ ಅದನ್ನು ಹಿಂಬಾಲಿಸಿತ್ತು. ಕೆಲವೇ ಕ್ಷಣಗಳಲ್ಲಿ ಅವರೆಡೂ ಕಾಡಿನಲ್ಲಿ ಕಣ್ಮರೆಯಾದವು.

ಮರುದಿನ ಗುಡ್ಡದ ಬಳಿ ಹೋದಾಗ ಅಲ್ಲಿ ಸೋಲೊ ದಂಪತಿಗಳ ಸುಳಿವೇ ಇರಲಿಲ್ಲ. ಎಚ್ಚರಿಕೆಯಿಂದ ಸುತ್ತಲೂ ನೋಡಿದೆವು. ಅಲ್ಲಿ ಯಾವ ಕುರುಹುಗಳೂ ಸಿಗಲಿಲ್ಲ.

ಹಲವು ದಿನಗಳ ಹುಡುಕಾಟಕದ ಬಳಿಕ, ಸೋಲೊನ ಗೂಡಿದ್ದ ಗುಡ್ಡದಿಂದ ಬಹುದೂರದಲ್ಲಿ ಎರಡು ಕಾಡುನಾಯಿಗಳನ್ನು ಕಂಡೆವು. ಅವುಗಳೊಡನೆ ಎರಡು ಬಹಳ ಪುಟ್ಟ ಮರಿಗಳಿದ್ದವು. ಅದು ತೀರಾ ವಿಚಿತ್ರವೆನಿಸಿತು. ಸಾಮಾನ್ಯವಾಗಿ ಕಾಡುನಾಯಿಗಳು ಎಂದೂ ಅಷ್ಟು ಪುಟ್ಟ ಮರಿಗಳನ್ನು ತಮ್ಮೊಂದಿಗೆ ಕರೆತರುವುದೇ ಇಲ್ಲ. ಏನಿದ್ದರೂ, ಮರಿಗಳಿಗೆ ಎಪ್ಪತ್ತು–ಎಂಬತ್ತು ದಿನಗಳು ತುಂಬಿದ ಬಳಿಕವೇ ಗೂಡಿನಿಂದ ಹೊರತರುತ್ತವೆ.

ನಮ್ಮನ್ನು ಕಂಡಾಕ್ಷಣ ಆ ಕಾಡುನಾಯಿಗಳು ಗುತ್ತಿಯಲ್ಲಿ ಮರೆಯಾದವು. ನಮ್ಮೆಲ್ಲಾ ಅನುಭವಗಳನ್ನು ಬಳಸಿ, ಹುಡುಕಾಡಿ, ಸಂಜೆಯ ಹೊತ್ತಿಗೆ ಅವುಗಳನ್ನು ಮತ್ತೆ ಪತ್ತೆ ಹಚ್ಚಿದೆವು.

ತುಸು ಹೊತ್ತಿನಲ್ಲಿ ಅವು ಸೋಲೊ ದಂಪತಿಗಳೆಂದು ಮನವರಿಕೆಯಾಯಿತು. ಮೊದಲಿಗೆ ಸೋಲೊನನ್ನು ಗುರುತು ಹಿಡಿಯಲೇ ಸಾಧ್ಯವಾಗಲಿಲ್ಲ. ಅದು ತೀವ್ರವಾಗಿ ಬಳಲಿದ್ದಂತೆ ಕಂಡಿತು. ಅದರ ಮೈಮೇಲೆ ಗಂಭೀರ ಸ್ವರೂಪದ ಗಾಯಗಳಾಗಿದ್ದವು. ಹಿಂಬದಿಯಲ್ಲಿ ಚರ್ಮ ಬಟ್ಟೆಯಂತೆ ಹರಿದು ಜೋತಾಡುತ್ತಿತ್ತು. ಮೈಮೇಲೆ, ಮುಖದ ಮೇಲೆ ಪರಚಿದ್ದ ಗಾಯಗಳಿದ್ದವು. ನಾವು ಅಂದು ನೋಡಿದ ಚಿರತೆಯೇ ಹಲ್ಲೆ ಮಾಡಿತ್ತೇನೋ, ತಿಳಿಯಲಿಲ್ಲ.

ನಮಗೆ ಆತಂಕವಾಯಿತು. ಚಿರತೆಗಳ ಪಂಜದ ಹೊಡೆತಕ್ಕೆ ಸಿಕ್ಕ ಸಾಕುಪ್ರಾಣಿಗಳು ಬದುಕುಳಿಯುವುದೇ ಕಡಿಮೆ. ಈ ಹಿನ್ನೆಲೆಯಲ್ಲಿ ಸೋಲೊ ಬದುಕುಳಿಯಬಹುದೇ? ಎಂಬ ಚಿಂತೆ ಕಾಡಿತ್ತು. ಜೊತೆಗೆ, ಎರಡು ಮರಿಗಳು ಮಾತ್ರ ಅಲ್ಲಿದ್ದವು. ಉಳಿದ ಐದಾರು ಮರಿಗಳು ಪ್ರಾಯಶಃ ಸತ್ತು ಹೋಗಿದ್ದಿರಬಹುದು.

ನಮಗಿದು ಹೊಸದೇನೂ ಆಗಿರಲಿಲ್ಲ. ಅನುಭವವಿಲ್ಲದ ಹೊಸ ಜೋಡಿಗಳು, ಗುಂಪಿನ ನೆರವಿಲ್ಲದೆ, ಬೆಂಬಲವಿಲ್ಲದೆ ಕುಟುಂಬ ಕಟ್ಟುವ ಪ್ರಯತ್ನ ಸುಲಭವಲ್ಲವೆಂದು ನಮಗೆ ಚೆನ್ನಾಗಿ ತಿಳಿದಿತ್ತು. ಪ್ರಕೃತಿಯ ಆಯ್ಕೆ ಒಂದು ನಿರಂತರ ಅಗ್ನಿಪರೀಕ್ಷೆ. ಆ ನಿರ್ಣಾಯಕ ಪರೀಕ್ಷೆಯಲ್ಲಿ ಬದುಕುಳಿಯುವವು ಕೆಲವು ಮಾತ್ರ.

ಇದಾದ ಮೂರು ವಾರಗಳ ಕಾಲ ನಮ್ಮ ಹುಡುಕಾಟ ನಿರಂತರವಾಗಿ ಸಾಗಿತ್ತು. ಆದರೆ ಸೋಲೊ ಬದುಕಿರುವ ಯಾವ ಸೂಚನೆಗಳೂ ಸಿಗಲಿಲ್ಲ. ವರ್ಷದ ಮೊದಲ ಮಳೆ ಕಾಡನ್ನು ತೋಯ್ದು ವಾರ ಕಳೆದಿತ್ತು. ಬೆತ್ತಲಾಗಿ ನಿಂತಿದ್ದ ಮರಗಿಡಗಳ ರೆಂಬೆಕೊಂಬೆಗಳಲ್ಲಿ ಬಣ್ಣದ ಚಿಗುರುಗಳು ಅಂಕುರಿಸಿದ್ದವು. ವರ್ಷಗಳ ಕಾಲ ಭೂಮಿಯಲ್ಲಿ ಅಡಗಿದ್ದ ಜೀರುಂಡೆ ಮರಿಗಳು ರೆಕ್ಕೆ ಕಟ್ಟಿಕೊಂಡು ಹೊರಬಂದಿದ್ದವು. ಸಂಗಾತಿಗಳನ್ನು ಓಲೈಸುವ ಹಕ್ಕಿಗಳ ಹಾಡು ಮುಗಿಲು ಮುಟ್ಟಿತ್ತು. ಬೇಸಿಗೆಯ ಬವಣೆಯಲ್ಲಿ ನಿಸ್ತೇಜವಾಗಿದ್ದ ಕಾಡಿನಲ್ಲಿ ಜೀವಸಂಚಾರವಾಗಿತ್ತು. ಆಗೊಂದು ದಿನ, ಇದ್ದಕ್ಕಿದ್ದಂತೆ ಸೋಲೊ ಮತ್ತು ಅದರ ಸಂಗಾತಿ ಪ್ರತ್ಯಕ್ಷಗೊಂಡವು. ನಮ್ಮ ಆಶ್ಚರ್ಯ ಸಂತೋಷಗಳಿಗೆ ಪಾರವೇ ಇರಲಿಲ್ಲ.

ಆ ಇಡೀ ದಿನ ಅವುಗಳೊಂದಿಗೇ ಕಳೆದೆವು. ಉಳಿದಿದ್ದ ಎರಡು ಮರಿಗಳನ್ನೂ ಅವು ಕಳೆದುಕೊಂಡಿರುವ ವಿಷಯ ಮನದಟ್ಟಾಯಿತು. ಆದರೆ ಈ ಎಲ್ಲಾ ಸಂಕಷ್ಟಗಳ ನಡುವೆ, ಭರವಸೆ ಮೂಡಿಸುವಂತೆ ಸೋಲೊನ ಗಾಯಗಳೆಲ್ಲ ಗುಣಮುಖವಾಗುತ್ತಿದ್ದವು.

ಅನಂತರದ ದಿನಗಳಲ್ಲಿ ಸೋಲೊ ದಂಪತಿಗಳು ತಮ್ಮ ಚಟುವಟಿಕೆಯನ್ನು ಕಾಡಿನ ನಿರ್ದಿಷ್ಟವಲಯಕ್ಕೆ ಸೀಮಿತಗೊಳಿಸಿಕೊಂಡವು. ಅವುಗಳ ಆತ್ಮವಿಶ್ವಾಸ ಹೆಚ್ಚಿದ್ದಂತೆ ಕಂಡಿತು. ಆದರೆ ವಿಶ್ವಾಸ ಮತ್ತು ಅತಿ ವಿಶ್ವಾಸಗಳ ನಡುವೆ ಇರುವ ಅಂತರ ಅತ್ಯಲ್ಪ. ವಿಶ್ವಾಸ ಎಲ್ಲೆ ಮೀರಿದಾಗ, ಅದೇ ಮೃತ್ಯುವಿನತ್ತ ಕರೆದೊಯ್ಯುವ ದಾರಿಯಾಗಬಹುದು.

ಮತ್ತೊಂದು ಮಧ್ಯಾಹ್ನ ಸೋಲೊ ದಂಪತಿಗಳಿಂದ ಸುಮಾರು ನೂರು ಅಡಿ ದೂರದಲ್ಲಿ ಕುಳಿತಿದ್ದೆವು. ಮರದ ನೆರಳಿನಲ್ಲಿ ಅವು ವಿಶ್ರಮಿಸಿದ್ದವು. ಇದ್ದಕ್ಕಿದ್ದಂತೆ, ಇಡೀ ಕಾಡಿಗೆ ಕಾಡೇ ಕೆಂಪಾಗಿ ಹೋದಂತೆ ಕಂಡಿತು. ಆಕಸ್ಮಿಕವಾಗಿ ಎಲ್ಲಿಂದಲೋ ಬಂದ ಲೆಕ್ಕವಿಲ್ಲದಷ್ಟು ಕಾಡುನಾಯಿಗಳ ನಡುವೆ ಸೋಲೊ ಮತ್ತು ಅದರ ಸಂಗಾತಿ ಸಿಕ್ಕಿಬಿದ್ದವು. ನೆರೆಯ ಕಾಡಿನಲ್ಲಿ ನೆಲೆಸಿದ್ದ ಮತ್ತೊಂದು ಗುಂಪು ಯಾವ ಸುಳಿವೂ ನೀಡದೆ ಆಕ್ರಮಣ ನಡೆಸಿತ್ತು. ನಾನಾ ಬಗೆಯ ಸದ್ದುಗಳು ಎಲ್ಲಾ ದಿಕ್ಕುಗಳಿಂದ ಮೂಡುತ್ತಿದ್ದವು. ಕೆಲವು ಸದ್ದುಗಳು ಕುತ್ತಿಗೆ ಹಿಸುಕಿದಂತೆ ಕೇಳಿಬರುತ್ತಿತ್ತು. ಭೀಕರವಾಗಿದ್ದ ಆ ಘಟನೆ ಒಂದೆರಡು ನಿಮಿಷಗಳಲ್ಲಿ ಮುಗಿದುಹೋಯಿತು. ಆ ಗದ್ದಲದಲ್ಲಿ ಸೋಲೊ ಮತ್ತು ಅದರ ಸಂಗಾತಿ ಎತ್ತ ಹೋದವೆಂದು ಗೊತ್ತಾಗಲಿಲ್ಲ.

ತಾಸಿನ ಬಳಿಕ ಮತ್ತೆ ಸೋಲೊನನ್ನು ಪತ್ತೆ ಹಚ್ಚಿದಾಗ ಅದು ಒಂಟಿಯಾಗಿ ನಿಂತು ಸೀಟಿಹಾಕುತ್ತಾ ಸಂಗಾತಿಗಾಗಿ ಹುಡುಕುತ್ತಿತ್ತು. ಬಳಿಕ, ಸಂಜೆಯ ವೇಳೆಗೆ, ತಾನು ಹಿಂದೆ ಗೂಡು ಮಾಡಿದ್ದ ಗುಡ್ಡದತ್ತ ಅದು ಸಾಗುತ್ತಿದ್ದುದ್ದನ್ನು ಗಮನಿಸಿದೆವು. ನಂತರ ಅದರ ಸಂಗಾತಿಯನ್ನು ಕಾಡಿನ ಬೇರೊಂದು ಭಾಗದಲ್ಲಿ ಪತ್ತೆಮಾಡಿದೆವು. ಆಕೆ ಸಹ ಅದೇ ಗುಡ್ಡದ ದಿಕ್ಕಿಗೆ ಸಾಗಿದ್ದಳು. ಬಹುಶಃ ಇದು ಅನಿರೀಕ್ಷಿತವಾಗಿ ಎದುರಾಗುವ ಇಂತಹ ಸನ್ನಿವೇಶಗಳಲ್ಲಿ ಮತ್ತೆ ಒಂದಾಗುವ ತಂತ್ರವಿರಬಹುದು.

ವಿಚಿತ್ರವೆಂದರೆ ಇದೇ ನಡವಳಿಕೆಯನ್ನು ವೀರಪ್ಪನ್ ಗುಂಪಿನಲ್ಲಿ ನಾವು ಗಮನಿಸಿದ್ದೆವು. ಆರಂಭದಲ್ಲಿ ಕಿರಿಯರೂ ಸೇರಿದಂತೆ ತಂಡದ ಎಲ್ಲರಿಗೂ ಇಳಿಬಿದ್ದಿದ್ದ ಹೊಟ್ಟೆಯಿದ್ದುದನ್ನು ಕಂಡು ಆಶ್ಚರ್ಯವಾಗಿತ್ತು. ಅವರೆಲ್ಲಾ ಒಳ್ಳೆಯ ಮೈಕಟ್ಟನ್ನು ಹೊಂದಿರಬಹುದೆಂದು, ಪಾದರಸದಂತೆ ಚುರುಕಾಗಿ ಓಡಾಡಬಲ್ಲರೆಂದು ಭಾವಿಸಿದ್ದ ನಮಗೆ ನಿರಾಶೆಯಾಗಿತ್ತು. ಸ್ವಲ್ಪ ಸಮಯದ ನಂತರ ಅದು ಬೊಜ್ಜು ತುಂಬಿದ ಹೊಟ್ಟೆಯಲ್ಲವೆಂದು, ಅಂಗಿಯ ಒಳಭಾಗದಲ್ಲಿ ಏನನ್ನೋ ಅಡಗಿಸಿ ಇಟ್ಟುಕೊಂಡಿರುವರೆಂದು ತಿಳಿಯಿತು. ಆಕಸ್ಮಿಕವಾಗಿ, ಪೊಲೀಸರ ಕಾರ್ಯಚರಣೆಗೆ ಸಿಕ್ಕು ಒಮ್ಮಿಂದೊಮ್ಮೆಗೆ ದಿಕ್ಕುದೆಸೆಯಿಲ್ಲದೆ ಪರಾರಿಯಾಗುವ ಸಂದರ್ಭಗಳು ಎದುರಾದಲ್ಲಿ, ಮುಂದಿನ ಏಳೆಂಟು ದಿನಗಳ ಕಾಲ ಬದುಕುಳಿಯಲು ಅವಶ್ಯವಿರುವ ಸಾಮಗ್ರಿಗಳನಷ್ಟೇ ಆ ಚೀಲದಲ್ಲಿ ಇಟ್ಟಿರುತ್ತಿದ್ದರು. ಇದನ್ನು ಅವರು ಕಂಡುಕೊಂಡದ್ದು ಅನುಭವಗಳಿಂದ. ಆ ಸಾಮಗ್ರಿಗಳು ಜೀವದ ಪೆಟ್ಟಿಗೆಯಂತೆ ಕೆಲಸಮಾಡುತ್ತಿದ್ದವು. ಈ ಯೋಜನೆಯಿಂದ ಅವರು ಮೊದಲೇ ಗೊತ್ತುಪಡಿಸಿಕೊಂಡಿರುವ ನಿರ್ದಿಷ್ಟ ಸ್ಥಳವನ್ನು ಮರುತಲುಪಲು ನೆರವಾಗುತ್ತಿತ್ತೇನೋ. ಇದು ನಾವು ಸರಳೀಕರಿಸಿ ಹೇಳುವಷ್ಟು ಸುಲಭದ ಕೆಲಸವಲ್ಲ. ಏಕೆಂದರೆ ಕಾಡಿನಲ್ಲಿ ನೀವು ಹಾದಿತಪ್ಪಿದಾಗ ಯಾವ ದಿಕ್ಕಿನಲ್ಲಿದ್ದೇವೆಂಬ ಅರಿವೇ ಇರುವುದಿಲ್ಲ. ಇವೆಲ್ಲ ಅನೇಕ ವರ್ಷಗಳಲ್ಲಿ ಕಲಿತ ಬದುಕುಳಿಯುವ ಅಪೂರ್ವ ವಿದ್ಯೆಗಳು. ಕಾಡುನಾಯಿಗಳಲ್ಲೂ ಬಹುಶಃ ಇದೇ ಕಾರ್ಯವಿಧಾನ ವಿಕಾಸ ಹೊಂದಿರಬಹುದು.

ಸತತವಾಗಿ ಎದುರಾಗುತ್ತಿದ್ದ ಇಂತಹ ಗಂಡಾಂತರಗಳಿಂದ ಸೋಲೊ ಇನ್ನಷ್ಟು ಪರಿಪಕ್ವತೆಯನ್ನು ಮೈಗೂಡಿಸಿಕೊಳ್ಳುತ್ತಾ ಸಾಗಿತ್ತು.

ಅನೇಕ ಬಾರಿ ನಾವು ಸೋಲೊ ಬೇಟೆಯಲ್ಲಿ ತೊಡಗಿದ್ದನ್ನು, ಬೇಟೆಯಾಡಿದ್ದ ಬಲಿಯನ್ನು ಕಬಳಿಸುವುದನ್ನು ನೋಡಿದ್ದೆವು. ಆದರೆ ಅದು ಬೇಟೆಯಾಡಿದ್ದನ್ನು ನಾವೆಂದು ಕಂಡಿರಲಿಲ್ಲ. ಕಾಲಾಂತರದಿಂದ, ಕಾಡುನಾಯಿಗಳು ಹಿಡಿದ ಬೇಟೆಯನ್ನು ಮನುಷ್ಯ ಕದ್ದೊಯ್ಯುತ್ತಿದ್ದ ಕಾರಣದಿಂದಾಗಿ, ಅವು ಮನುಷ್ಯನ ಇರುವಿಕೆಯನ್ನು ಗಮನಿಸಿದಾಕ್ಷಣ ಬೇಟೆಯಾಡುವುದನ್ನು ಮಧ್ಯದಲ್ಲೇ ನಿಲ್ಲಿಸಿ ಜಾಗ ಖಾಲಿ ಮಾಡುವುದನ್ನು ರೂಢಿ ಮಾಡಿಕೊಂಡಿದ್ದವು.

ಆದರೆ ನಾವು ಸೋಲೊನನ್ನು ಹಿಂಬಾಲಿಸುತ್ತಾ ಹದಿನೆಂಟು ತಿಂಗಳೇ ಕಳೆದಿತ್ತು. ಎಷ್ಟೋ ಬಾರಿ ಅದು ತನ್ನ ಬೇಟೆಯನ್ನು ಭಕ್ಷಿಸುತ್ತಿರುವಾಗ ನಾವು ಅನತಿ ದೂರದಲ್ಲಿರುತ್ತಿದ್ದೆವು. ಹಾಗಾಗಿ ಕನಿಷ್ಠ, ಅದರ ಬೇಟೆಯನ್ನು ಕಿತ್ತುಕೊಳ್ಳಲು ನಾವು ಅಲ್ಲಿಗೆ ಬಂದಿಲ್ಲವೆಂದು ಅದು ಅರಿತಿರಬೇಕೆಂದು ಬಯಸುತ್ತಿದ್ದೆವು. ಆದರೆ ಸೋಲೊ ಮಾತ್ರ ನಮ್ಮನ್ನು ನಂಬಲು ತಯಾರಿರಲಿಲ್ಲ.

ಇನ್ನೊಂದು ವರ್ಷ ಕಳೆದಿತ್ತು. ಮತ್ತೊಮ್ಮೆ ಚಳಿಗಾಲ ಆಗಮಿಸಿತ್ತು. ಸೋಲೊ ದಂಪತಿಗಳು ಮತ್ತೆ ಮರಿಮಾಡಲು ಸಿದ್ಧತೆ ನಡೆಸಿದ್ದವು. ಆದರೆ ತಪ್ಪಿಸಿಕೊಳ್ಳಲಾಗದ ಯಾವುದೋ ಕೆಲಸದಿಂದಾಗಿ ನಾವು ಐದು ತಿಂಗಳ ಅವಧಿಗೆ ಬೇರೊಂದು ಕಾಡಿನಲ್ಲಿ ನೆಲೆಸಬೇಕಾಯಿತು.

ಮತ್ತೆ ಮರಳಿದಾಗ ಸೋಲೊ ದಂಪತಿಗಳು ಏನು ಮಾಡುತ್ತಿರಬಹುದೆಂಬ ಕುತೂಹಲ ಕಾಡಿತ್ತು. ಅವು ನಿಗದಿತವಾಗಿ ಮರಿಮಾಡುವ ಸ್ಥಳದಲ್ಲಿ ಯಾವ ಕಾಡುನಾಯಿಗಳ ಸುಳಿವೂ ಇರಲಿಲ್ಲ. ಅಲ್ಲಿ ಬಿದ್ದಿದ್ದ ಲದ್ದಿಗಳು ಸಹ ಬಹಳ ಹಳೆಯದಾಗಿದ್ದವು. ಅನೇಕ ದಿನಗಳು ಉರುಳಿದವು. ಆದರೆ ಅವುಗಳ ಕುರುಹೇ ಸಿಗಲಿಲ್ಲ. ಮತ್ತೇನೋ ನಡೆಯಬಾರದ ಘಟನೆ ನಡೆದಿರುವ ಆತಂಕ ನಮ್ಮನ್ನು ಕಾಡತೊಡಗಿತು.

ಅದೊಂದು ಮುಂಜಾನೆ, ಜೀಪಿನ ರಸ್ತೆಯಲ್ಲಿ ಸಾಗುವಾಗ, ಪೊದೆಯೊಂದರಿಂದ ಒಂದು ಕಾಡುನಾಯಿ ಹೊರಬಂತು. ನಮ್ಮತ್ತ ದೃಷ್ಟಿಸುತ್ತಾ ನಿಂತ ಆ ಹೆಣ್ಣು ಕಾಡುನಾಯಿ ಒಂದೆರಡು ನಿಮಿಷಗಳ ಬಳಿಕ ಪೊದೆಯತ್ತ ಹಿಂದಿರುಗಿ ನೋಡಿತು. ಮತ್ತೆ ದೀರ್ಘ ಸಮಯ ನಮ್ಮನ್ನೇ ನೋಡುತ್ತಾ ನಿಂತಿತು. ಅದು ವಯಸ್ಸಾದಂತೆ ಹಾಗೂ ದಣಿದಂತೆ ಕಂಡಿತು. ಆದರೆ ಆಕೆ ಸೋಲೊನ ಸಂಗಾತಿಯೆಂದು ಗುರುತಿಸಲು ಹೆಚ್ಚು ಸಮಯ ಹಿಡಿಯಲಿಲ್ಲ. ಆಕೆ ಮತ್ತೆ ಹಿಂದಿರುಗಿ ಪೊದರಿನತ್ತ ನೋಡಿದಳು. ಆಕೆ ಏನನ್ನೋ ಹೇಳಿದಂತೆ ಭಾಸವಾಯಿತು. ಕೆಲವೇ ಸೆಕೆಂಡುಗಳಲ್ಲಿ ಗೋಲಿಗಳು ಉರುಳಿದಂತೆ ಹಲವಾರು ಪುಟ್ಟ ಪುಟ್ಟ ಮರಿಗಳು ಪೊದೆಯಿಂದ ಹೊರಬಂದವು. ನಮ್ಮ ಜೀಪನ್ನು ನೋಡಿ, ಬೆಚ್ಚಿ, ಕ್ಷಣಮಾತ್ರದಲ್ಲಿ ಹಿಂದಿರುಗಿ ಓಡಿ ಗಿಡಗಂಟೆಗಳಲ್ಲಿ ಮರೆಯಾದವು. ಆದರೆ, ಆಕೆ ಮಾತ್ರ ರಸ್ತೆಯ ಮಗ್ಗುಲಿನ ಹುಲ್ಲಿನ ಮೇಲೆ ಶಾಂತವಾಗಿ ವಿಶ್ರಮಿಸಿದಳು. ತಾಯಿ ಪ್ರಶಾಂತವಾಗಿರುವುದನ್ನು ಕಂಡ ಮರಿಗಳು ಹಿಂಜರಿಕೆಯಿಂದ ಮೆಲ್ಲಗೆ ಒಂದೊಂದೇ ಹೊರಬಂದು ಆಕೆಯ ಬೆನ್ನ ಹಿಂದೆ ಗುಂಪು ಕಟ್ಟಿ ನಿಂತವು. ಅಲ್ಲಿ ಒಟ್ಟು ಏಳು ಮರಿಗಳಿದ್ದವು. ಬಹಳ ಹೊತ್ತಿನ ನಂತರ, ಮತ್ತೊಂದು ಮರಿ ಹೊರ ಬಂತು. ಅವು ಸುಮಾರು ನಾಲ್ಕು ತಿಂಗಳ ಮರಿಗಳಂತೆ ಕಾಣುತ್ತಿದ್ದವು.

ಆ ದಿನಗಳಲ್ಲಿ ಕಾಡುನಾಯಿಗಳು ವಾಹನಗಳಿಗೆ ಇನ್ನೂ ಒಗ್ಗಿಕೊಂಡಿರಲಿಲ್ಲ. ಅವು ಸಣ್ಣ ಮರಿಗಳನ್ನು ಮನುಷ್ಯರ ಕಣ್ಣಿಗೆ ಬೀಳದಂತೆ ಎಚ್ಚರಿಕೆಯಿಂದ ಬೆಳೆಸುವ ವಾಡಿಕೆಯಿತ್ತು.

ವಾಸನೆಯಿಂದಲೋ ಅಥವಾ ದೃಷ್ಟಿಯಿಂದಲೋ, ಒಟ್ಟಿನಲ್ಲಿ ಆಕೆ ನಮ್ಮ ಗುರುತು ಹಿಡಿದಿದ್ದಳು. ಅದಂತೂ ಖಚಿತ. ಆ ಕ್ಷಣ ನಮ್ಮಲ್ಲಿ ಒಂದು ರೀತಿಯ ಸಾರ್ಥಕ ಭಾವನೆ ಮೂಡಿತ್ತು. ಇದು ಕಾಡುನಾಯಿಗಳೊಂದಿಗಿನ ನಮ್ಮ ದೀರ್ಘ ಒಡನಾಟದಲ್ಲಿ ಖಂಡಿತವಾಗಿ ಒಂದು ಅವಿಸ್ಮರಣೀಯ ಕ್ಷಣ.

ಈ ವೃತ್ತಾಂತದ ವೇಳೆ ಸೋಲೊ ಅಲ್ಲಿರಲಿಲ್ಲ. ಅದು ಬೇಟೆಗೆ ತೆರಳಿರುವುದನ್ನು ಆಲ್ಲಿಯ ಸನ್ನಿವೇಶವೇ ವಿವರಿಸುತ್ತಿತ್ತು. ಸ್ವಲ್ಪ ಸಮಯದ ಬಳಿಕೆ ಆಕೆ ಏನನ್ನೋ ದೃಷ್ಟಿಸಿ ಒಂದೇ ದಿಕ್ಕಿನತ್ತ ಗಮನಹರಿಸಿದಳು. ನಂತರ ಸೀಟಿ ಊದಿದ ಸದ್ದಾಯಿತು. ಕಿವಿಗಳನ್ನು ಅರಳಿಸಿ ಸದ್ದು ಬಂದ ದಿಕ್ಕಿನತ್ತ ಓಡಿದಳು. ಎಂಟೂ ಮರಿಗಳು ಆಕೆಯನ್ನು ಹಿಂಬಾಲಿಸಿದವು. ನಾವು ಸಹ ಆ ಜಾಡಿನಲ್ಲಿ ಸಾಗಿದೆವು. ಬಹುಶಃ ಸೋಲೊ ಬೇಟೆಯಾಡಿತ್ತು. ತನ್ನ ಪರಿವಾರವನ್ನು ಊಟದತ್ತ ಕರೆದೊಯ್ಯುವ ಅವಸರದಲ್ಲಿತ್ತು. ಸಂಭ್ರಮವೋ ಸಂಭ್ರಮ. ಮರಿಗಳು ಅಪ್ಪನ ಬಾಯಿ ಮತ್ತು ಮುಖವನ್ನೆಲ್ಲ ಒಂದೇ ಸಮನೆ ನೆಕ್ಕುತ್ತಿದ್ದವು. ವಾಸನೆ ಹಿಡಿದ ತಾಯಿ, ನೇರವಾಗಿ ಬೇಟೆಯ ಬಳಿಗೆ ಓಡಿದಳು. ಸೋಲೊ ದೂರದಲಿದ್ದ ನಮ್ಮ ಜೀಪನ್ನು ಗಮನಿಸಿ, ಹತ್ತಾರು ಹೆಜ್ಜೆ ಓಡಿ ಬಂದು ನಿಂತಿತು. ನಮ್ಮ ಇರುವಿಕೆ ಅದಕ್ಕೆ ಖಂಡಿತವಾಗಿ ಇಷ್ಟವಾಗಲಿಲ್ಲ. ಮತ್ತೆ ಹಿಂದಿರುಗಿ ಮರಿಗಳನ್ನು ಪೊದೆ ಸಂದಿಯಲ್ಲಿದ್ದ ಬೇಟೆಯತ್ತ ಕರೆದೊಯ್ದಿತು. ಬಳಿಕ ವಾಪಸಾಗಿ, ಪಹರೆ ಕಾಯುವಂತೆ ನಮ್ಮನ್ನು ಎಚ್ಚರಿಕೆಯಿಂದ ಗಮನಿಸುತ್ತಾ ನಿಂತಿತು.

ಪುಟ್ಟ ಮರಿಗಳು ಆಹಾರವನ್ನು ತಿನ್ನುತ್ತಿರುವಾಗ, ಹತ್ತಿರದಲ್ಲಿ ಬೇರೆ ಯಾವುದೋ ಬೇಟೆಗಾರ ಪ್ರಾಣಿಯ ವಾಸನೆ ಸಿಕ್ಕರೆ, ಕಾಡುನಾಯಿಗಳು ಹೀಗೆ ವರ್ತಿಸುವುದು ಸಹಜ. ಸೋಲೊ ನಮ್ಮನ್ನು ಬೇಟೆಗಾರರಾಗಿಯೋ ಅಥವಾ ವೈರಿಯಾಗಿಯೋ ಪರಿಗಣಿಸಿತ್ತೇ? ನಮಗೆ ತಿಳಿಯಲಿಲ್ಲ.

ಆದರೆ, ‘ನೀವು ಕೂಡ ಮನುಷ್ಯರೆ, ನಾನು ನಿಮ್ಮನ್ನು ನಂಬುವುದಿಲ್ಲ’ವೆಂದು, ಸೋಲೊ ಮತ್ತೆ ಮತ್ತೆ ನೆನಪಿಸುತ್ತಿದ್ದಂತೆ ಕಂಡಿತ್ತು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 1

  Angry