ಸ್ಟೀವ್ ಜಾಬ್ಸ್: ಅತ್ಯದ್ಭುತ ಯಶಸ್ವಿ ಉದ್ಯಮಿ

7

ಸ್ಟೀವ್ ಜಾಬ್ಸ್: ಅತ್ಯದ್ಭುತ ಯಶಸ್ವಿ ಉದ್ಯಮಿ

ಡಿ. ಮರಳೀಧರ
Published:
Updated:

ಡಿಜಿಟಲ್ ಲೋಕದ ನಿಜವಾದ ದಂತಕತೆಯಾಗಿದ್ದ, ಸಂಶೋಧಕ, ಕುಶಲ ತಂತ್ರಜ್ಞ, ಮಾದರಿ ಮತ್ತು ಯಶಸ್ವಿ ಉದ್ಯಮಿ- ಹೀಗೆ ಆಧುನಿಕ ಜಗತ್ತಿನ ಎಲ್ಲವೂ ಆಗಿದ್ದ  ಆ್ಯಪಲ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಸ್ಟೀವ್ ಜಾಬ್ಸ್ (56) ಈಗ ನಮ್ಮಂದಿಗೆ ಇಲ್ಲ. ಎಲ್ಲ ಪ್ರತಿಕೂಲಗಳನ್ನು ಮೆಟ್ಟಿ ನಿಂತಿದ್ದ ಅವರಿಂದ ಕ್ಯಾನ್ಸರ್ ಕಾಯಿಲೆ ವಿರುದ್ಧದ ಹೋರಾಟದಲ್ಲಿ ಮಾತ್ರ ಜವರಾಯನನ್ನು ಜಯಿಸಲು ಸಾಧ್ಯವಾಗಲಿಲ್ಲ. ಅವರ ಸಾವು, ಉದ್ಯಮ ಜಗತ್ತಿಗೆ ದೊಡ್ಡ ನಷ್ಟ ಎನ್ನುವುದರಲ್ಲಿ ಇನಿತೂ ಸಂದೇಹ ಇಲ್ಲ.`ಫಾರ್ಚೂನ್~ ನಿಯತಕಾಲಿಕೆಯು ಇವರನ್ನು `ದಶಕದ ಸಿಇಒ~ ಎಂದು 2009ರಲ್ಲಿಯೇ ಗುರುತಿಸಿತ್ತು. 1997ರಲ್ಲಿ ಆ್ಯಪಲ್ ಸಂಸ್ಥೆಗೆ ಮರಳಿ ಅದರ ಚುಕ್ಕಾಣಿ ಹಿಡಿದು ಮುನ್ನಡೆಸಿ ಅದ್ಭುತ ಎನ್ನುವ ಬಗೆಯಲ್ಲಿ ಸಂಸ್ಥೆಯ ವರಮಾನ ಹೆಚ್ಚಿಸುವಲ್ಲಿ ಸಫಲವಾಗಿರುವುದಕ್ಕೆ ಈ ಗೌರವ ನೀಡಲಾಗಿತ್ತು.ನಾವೆಲ್ಲ ಸದ್ಯಕ್ಕೆ ಬಳಸುವ ಭರಪೂರ ಮಾಹಿತಿ ಹರಿವು, ಆಲಿಸುವ ಸಂಗೀತ, ಫೋನ್ ಮೂಲಕ ನಡೆಸುವ ಸಂವಹನ ಸೇರಿದಂತೆ ಹಲವಾರು ಕ್ಷೇತ್ರಗಳ ನೋಟವನ್ನೇ ಆಮೂಲಾಗ್ರವಾಗಿ ಬದಲಾಯಿಸಿದ ವಿಶಿಷ್ಟ ವ್ಯಕ್ತಿತ್ವ ಸ್ಟೀವ್ ಜಾಬ್ಸ್ ಅವರದ್ದಾಗಿತ್ತು.ಐಟ್ಯೂನ್ಸ್, ಐಪಾಡ್‌ಗಳ ಸಂಗೀತ ಉದ್ಯಮವಾಗಲಿ, ಕ್ರಾಂತಿಕಾರಿ ಸ್ವರೂಪದ ಐಫೋನ್ ಮೂಲಕ ಮೊಬೈಲ್ ಫೋನ್ ಉದ್ಯಮ, ಐಪಾಡ್ ಅಥವಾ ಮ್ಯಾಕ್‌ಬುಕ್ ಏರ್, ಮ್ಯಾಕ್‌ಬುಕ್ ಪ್ರೊ ಮತ್ತು ಟ್ಯಾಬ್ಲೆಟ್ ಪಿಸಿ (ಪುಟ್ಟ ಕಂಪ್ಯೂಟರ್) ಒಳಗೊಂಡಂತೆ ಕಂಪ್ಯೂಟರ್ ವಲಯದಲ್ಲಿನ ವಿಸ್ಮಯಕಾರಿ ಬದಲಾವಣೆಗಳನ್ನು ಜಾಬ್ಸ್ ಅವರು ಕೇವಲ 14 ವರ್ಷಗಳಲ್ಲಿ ಸಾಧ್ಯಮಾಡಿ ತೋರಿಸಿರುವುದು ಅಚ್ಚರಿದಾಯಕ ಸಾಧನೆಯೇ ಸರಿ.

ತಾವೇ ಸ್ಥಾಪಿಸಿದ್ದ ಸಂಸ್ಥೆಯಿಂದ ಇವರನ್ನು ಸಂಸ್ಥೆಯ ಆಡಳಿತ ಮಂಡಳಿಯು ಹೊರ ಹಾಕಿತ್ತು. ಆದರೆ, 1997ರಲ್ಲಿ ಇವರು ಮತ್ತೆ ಸಂಸ್ಥೆಗೆ ಮರಳಿದ ನಂತರ ಹಿಂತಿರುಗಿ ನೋಡಲೇ ಇಲ್ಲ.ಮಾತೃಸಂಸ್ಥೆಗೆ ಮರಳಿದ ನಂತರ ಅವರು ಸಾಧಿಸಿದ ಸಾಧನೆಯು `ಸಿಇಒ~ನೊಬ್ಬ ಗೈದ ಸಾರ್ವಕಾಲಿಕ ದಾಖಲೆ ಎಂದೇ ಪರಿಗಣಿಸಲಾಗುತ್ತಿದೆ. ಸ್ಟೀವ್ ಜಾಬ್ಸ್, ಸ್ಟೀವ್ ವಾಜ್ನಿಯಾಕ್ ಜತೆ ಸೇರಿ 1976ರಲ್ಲಿ ಆ್ಯಪಲ್ ಕಂಪ್ಯೂಟರ್ಸ್‌ ಸ್ಥಾಪಿಸಿದ್ದರು. 1984ರಲ್ಲಿ ಅವರು, ವಾಣಿಜ್ಯ ವಹಿವಾಟಿನ ದೃಷ್ಟಿಯಿಂದ ಯಶಸ್ವಿಯಾದ ವಿಶ್ವದ ಮೊಟ್ಟ ಮೊದಲ ಕಂಪ್ಯೂಟರ್ ಮ್ಯಾಕಿಂತೋಷ್‌ಅನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು. ಆದರೆ, ಮರು ವರ್ಷವೇ ಅವರು ತಾವೇ ಸ್ಥಾಪಿಸಿದ್ದ ಸಂಸ್ಥೆಯಿಂದ ದುರದೃಷ್ಟವಶಾತ್ ಹೊರ ಬೀಳಬೇಕಾಯಿತು. ಆ್ಯಪಲ್ ಸಂಸ್ಥೆಯ ಆಡಳಿತ ಮಂಡಳಿಯೇ ಇವರನ್ನು ಹೊರ ಹಾಕಿತು. ಆ ವರ್ಷದ ಕೊನೆಯ್ಲ್ಲಲಿ ಜಾಬ್ಸ್, ಹೊಸ ಸಂಸ್ಥೆ ನೆಕ್ಸ್ಟ್ ಕಂಪ್ಯೂಟರ್ ಸಂಸ್ಥೆ ಸ್ಥಾಪಿಸಿದರು.2005ರಲ್ಲಿ ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾನಿಲಯದ ಪದವೀಧರ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುವಾಗ, 1984ರಲ್ಲಿ ತಮ್ಮನ್ನು ಆ್ಯಪಲ್ ಸಂಸ್ಥೆಯಿಂದ ಹೊರ ಹಾಕಿದ್ದನ್ನು ಮತ್ತು ಅದರಿಂದ ತಮ್ಮ ಬದುಕಿನಲ್ಲಿ ಆದ ಮಹತ್ವದ ಬದಲಾವಣೆಗಳನ್ನು ಸ್ಮರಿಸಿಕೊಂಡಿದ್ದರು. ಆ್ಯಪಲ್ ಸಂಸ್ಥೆಯಿಂದ ಹೊರ ನಡೆದದ್ದು ತಮ್ಮ ಬದುಕಿನಲ್ಲಿನ ಅತ್ಯಂತ ಮಹತ್ವದ ತಿರುವು ಎಂದೂ ಬಣ್ಣಿಸಿದ್ದರು. `ಯಶಸ್ಸಿನ ಭಾರಕ್ಕೆ ನಲುಗಿದ್ದ ನನಗೆ ಮತ್ತೆ ಹೊಸ ಬದುಕು ಆರಂಭಿಸುವ ಸವಾಲು ಎದುರಾಗಿತ್ತು. ನಾನು ಇಡುವ ಪ್ರತಿಯೊಂದು ಹೆಜ್ಜೆಯ ಬಗ್ಗೆಯೂ ನನಗೆ ಹೆಚ್ಚು ಖಚಿತತೆ ಇದ್ದಿರಲಿಲ್ಲ. ಪ್ರತಿ ಹಂತದಲ್ಲಿಯೂ ಅನಿಶ್ಚಿತತೆ ಕಾಡುತ್ತಿತ್ತು. ಇದರಿಂದಾಗಿಯೇ ನನ್ನ ಬದುಕಿನ ಅತ್ಯಂತ ಸೃಜನಶೀಲ ಘಟ್ಟಕ್ಕೆ ನಾನು ಸ್ವತಂತ್ರವಾಗಿ ಪ್ರವೇಶಿಸಲು ಸಾಧ್ಯವಾಗಿತ್ತು. ಒಂದು ವೇಳೆ ನನ್ನನ್ನು ಹೊರಹಾಕಿರದಿದ್ದರೆ ನನ್ನ ಬದುಕು ಇಂತಹ ತಿರುವು ಪಡೆಯುತ್ತಿರಲಿಲ್ಲ. ರೋಗಿಯೊಬ್ಬನಿಗೆ ಪರಿಣಾಮಗಳ ಅರಿವಿಲ್ಲದೇ ಭಯ- ಆತಂಕದಿಂದಲೇ ಕೊಡಮಾಡುವ ಔಷಧಿ ಅದಾಗಿತ್ತು. ಆದರೆ, ಕಾಯಿಲೆಪೀಡಿತನಿಗೆ ಈ ಮದ್ದು ನಿಜವಾಗಿಯೂ ಜೀವರಕ್ಷಕವಾಗಿತ್ತು~ ಎಂದು ಜಾಬ್ಸ್ ತಮ್ಮ ಅಂತರಂಗ ಬಿಚ್ಚಿಟ್ಟಿದ್ದರು.ತಮ್ಮ ಬದುಕಿನ ಅಜ್ಞಾತವಾಸದಿಂದ ಮರಳಿ ಬಂದ ಸ್ಟೀವ್ ಜಾಬ್ಸ್ ಪಾಲಿಗೆ ಈ ಮದ್ದು ನಿಜವಾಗಿಯೂ ಅತ್ಯುತ್ತಮ ಔಷಧಿಯಾಗಿತ್ತು. ಅದರ ಫಲವಾಗಿಯೇ ನಾವೆಲ್ಲ ಈಗ ತುಂಬ ಪ್ರೀತಿಸುವ ಡಿಜಿಟಲ್ ಸಾಧನಗಳಾದ ಐಟ್ಯೂನ್ಸ್, ಐಫೋನ್, ಐಪಾಡ್, ಮ್ಯಾಕ್ಸ್ ಮುಂತಾದವುಗಳನ್ನು ವಿಶ್ವಕ್ಕೆ ಕೊಡುಗೆಯಾಗಿ ನೀಡಲು ಅವರಿಂದ ಸಾಧ್ಯವಾಗಿತ್ತು.ಗಮನ ಮತ್ತು ಸರಳತೆ- ಆ್ಯಪಲ್‌ನ ಎರಡು ಮಹತ್ವದ  ಮಂತ್ರಗಳಾಗಿವೆ ಎಂದೂ ಜಾಬ್ಸ್ ಘೋಷಿಸಿದ್ದರು. ಕಠಿಣ ಮತ್ತು ಸಂಕೀರ್ಣಮಯ ಡಿಜಿಟಲ್ ಸಾಧನಗಳ ಸರಳ ವಿನ್ಯಾಸದ ಹಿಂದಿರುವ ಗುಟ್ಟಿನ ಬಗ್ಗೆಯೂ ಮಾತನಾಡಿದ್ದರು. `ನೀವು ಕಠಿಣವಾಗಿ ಪರಿಶ್ರಮಪಟ್ಟರೆ ನಿಮ್ಮ ಚಿಂತನೆ ಖಂಡಿತವಾಗಿಯೂ ಸರಳ ರೂಪದಲ್ಲಿ ಸಾಕಾರಗೊಳ್ಳುತ್ತದೆ~ ಎಂದಿದ್ದರು. ವಿನ್ಯಾಸಗಳ ಸರಳತೆಯು ಇವರು ರೂಪಿಸಿದ ಐಫೋನ್ ಮತ್ತು ಐಪಾಡ್‌ಗಳಲ್ಲಿಯೂ ಪ್ರತಿಫಲನಗೊಳ್ಳುತ್ತದೆ.ಸ್ಟೀವ್ ಜಾಬ್ಸ್, ವಿನ್ಯಾಸ ಮಾಂತ್ರಿಕ ಎಂದೇ ಅನೇಕರು ಪರಿಗಣಿಸುತ್ತಾರೆ. ಆದರೆ, ನಿಜವಾಗಿಯೂ ಅವರೊಬ್ಬ ಸಹಜ ಸ್ವಭಾವದ ಯಶಸ್ವಿ ಉದ್ಯಮಿ ಮತ್ತು ವಹಿವಾಟು ಮಾಂತ್ರಿಕ ಕೂಡ ಆಗಿದ್ದರು. ಆ್ಯಪಲ್ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿದ ಕ್ರಾಂತಿಕಾರಿ ಸಾಧನಗಳ ಹಿಂದಿನ ಪ್ರೇರಕ ಶಕ್ತಿ ಆಗಿರುವುದರ ಜತೆಗೆ,  ನಿರಂತರವಾಗಿ ವರಮಾನವು ಹರಿದು ಬರುವಂತಹ ವ್ಯವಸ್ಥೆ ರೂಪಿಸಿದ ವ್ಯವಹಾರ ಚತುರತೆಯೂ ಅವರಿಗಿತ್ತು.ಇದಕ್ಕೆ ಇನ್ನಷ್ಟು ವಿವರಣೆ ನೀಡುವುದಾದರೆ, ಆ್ಯಪಲ್ ಸಂಸ್ಥೆಯು ಫೋನ್, ಟ್ಯಾಬ್ಲೆಟ್, ಕಂಪ್ಯೂಟರ್ ಮತ್ತಿತರ ಹಾರ್ಡ್‌ವೇರ್‌ಗಳನ್ನು ಮಾರಾಟ ಮಾಡಿದಾಗ ಹಣ ಗಳಿಸುತ್ತದೆ. ಫೋನ್ ಅಥವಾ ಟ್ಯಾಬ್ಲೆಟ್ ಖರೀದಿಸಿದ ನಂತರ, ಅದರಲ್ಲಿ ವಿಭಿನ್ನ ಸೌಲಭ್ಯಗಳನ್ನು ಬಳಸಿಕೊಳ್ಳಲು ಪ್ರತಿಯೊಬ್ಬರೂ ತಮಗಿಷ್ಟವಾದ ಮತ್ತು ಬೇಕಾದ ಸಾಫ್ಟ್‌ವೇರ್‌ಗಳನ್ನು (ಡೌನ್‌ಲೋಡ್) ಅಳವಡಿಸಿಕೊಳ್ಳುತ್ತಾರೆ. ಸುದ್ದಿ, ಕ್ರೀಡೆ, ಕ್ರಿಕೆಟ್, ವಹಿವಾಟು, ಪ್ರವಾಸ, ಧಾರ್ಮಿಕ ಮತ್ತಿತರ ವೈವಿಧ್ಯಮಯ ಅಪ್ಲಿಕೇಷನ್ಸ್‌ಗಳನ್ನು (ಸಾಫ್ಟ್‌ವೇರ್) ಬಳಸಲು ಇಷ್ಟಪಡುತ್ತಾರೆ. ಇಂತಹ ಅಪ್ಲಿಕೇಷನ್ಸ್‌ಗಳಿಗಾಗಿ ಗ್ರಾಹಕರು ಪಾವತಿಸುವ ಹಣದಲ್ಲಿ  ಆ್ಯಪಲ್ ಸಂಸ್ಥೆಯು ಶೇ  30ರಷ್ಟು ಶುಲ್ಕ ಪಡೆಯುತ್ತದೆ ಎನ್ನುವುದು ಬಹುತೇಕರಿಗೆ ಗೊತ್ತಿಲ್ಲ.ವಿಶ್ವದಾದ್ಯಂತ ಲಕ್ಷಾಂತರ ಗ್ರಾಹಕರು 10 ಕೋಟಿ ಡಾಲರ್‌ಗಳಷ್ಟು ಮೊತ್ತದ ಅಪ್ಲಿಕೇಷನ್ಸ್‌ಗಳನ್ನು ತಮ್ಮ ಡಿಜಿಟಲ್ ಸಾಧನಗಳಲ್ಲಿ ಅಳವಡಿಸಿಕೊಂಡರೆ, ಅದರಲ್ಲಿ 3 ಕೋಟಿ ಡಾಲರ್‌ಗಳಷ್ಟು ವರಮಾನವು ಆ್ಯಪಲ್ ಸಂಸ್ಥೆಗೆ ಹರಿದು ಹೋಗಿರುತ್ತದೆ. ಹೊಸ ಹೊಸ ಅಪ್ಲಿಕೇಷನ್ ಅಭಿವೃದ್ಧಿಪಡಿಸಿ ಮಾರುಕಟ್ಟೆಗೆ ಪರಿಚಯಿಸುತ್ತಿದ್ದಂತೆ ಅದಕ್ಕೆ ಹೊಸ ಹೊಸ ಗ್ರಾಹಕರು ಹುಟ್ಟಿಕೊಳ್ಳುತ್ತಲೇ ಇರುತ್ತಾರೆ. ಒಬ್ಬನೇ ಒಬ್ಬ ಗ್ರಾಹಕನಿಂದಲೂ ನಿರಂತರವಾಗಿ ವರಮಾನ ಹರಿದು ಬರುವಂತಹ ವ್ಯವಸ್ಥೆ ರೂಪಿಸಿರುವುದೂ ಜಾಬ್ಸ್ ಅವರ ಉದ್ಯಮಶೀಲತೆಗೆ ಸಾಕ್ಷಿಯಾಗಿದೆ.ಸ್ಟೀವ್ ಜಾಬ್ಸ್, ಅದ್ಭುತವಾದ ಸಾಫ್ಟ್‌ವೇರ್ ಸಂಸ್ಥೆಯ ವಿಶಾಲ ಸಾಮ್ರಾಜ್ಯ ಕಟ್ಟಿ ಹೋಗಿದ್ದಾರೆ. ಮಾರುಕಟ್ಟೆಯ ಬಂಡವಾಳ ಮೌಲ್ಯದ ಲೆಕ್ಕದಲ್ಲಿಯೂ ಆ್ಯಪಲ್ ಅತ್ಯಂತ ಮೌಲ್ಯಯುತ ಸಂಸ್ಥೆಯಾಗಿದೆ. 360 ಶತಕೋಟಿ ಡಾಲರ್‌ಗಳಷ್ಟು (18,00,000 ಕೋಟಿ ರೂಪಾಯಿ) ಸಂಪತ್ತಿನ ಸಂಸ್ಥೆಯ ಹಣಕಾಸು ಪರಿಸ್ಥಿತಿಯೂ ಅತ್ಯುತ್ಕೃಷ್ಟವಾಗಿದೆ. 70 ಶತಕೋಟಿ ಡಾಲರ್‌ಗಳಷ್ಟು (3,50,000 ಕೋಟಿ ರೂಪಾಯಿ) ನಗದು ಹಣ ಸಂಸ್ಥೆಯ ಬಳಿ ಇದೆ. ಇದನ್ನು ಇತರ ಸಂಸ್ಥೆಗಳ ಸ್ವಾಧೀನ ಮತ್ತು ಲಾಭಾಂಶ ವಿತರಣೆ ಮತ್ತಿತರ ಉದ್ದೇಶಕ್ಕೆ ಬಳಸಲಿದೆ.ಎಲ್ಲಕ್ಕಿಂತ ಹೆಚ್ಚಾಗಿ ಜಾಬ್ಸ್ ಸುತ್ತ ಇದ್ದ ಉದ್ಯಮಶೀಲತೆಯ ಪ್ರಭಾವಳಿಯು ಇತರರ ಪಾಲಿಗೆ ನಿರಂತರವಾಗಿ ಸ್ಪೂರ್ತಿದಾಯಕವಾಗಿದೆ. ಅಪ್ಲಿಕೇಷನ್ಸ್‌ಗಳನ್ನು ಅಭಿವೃದ್ಧಿಪಡಿಸುವವರ ಪಾಲಿಗೂ ಹೆಚ್ಚು ಹೆಚ್ಚು ಅವಕಾಶಗಳನ್ನು ಸೃಷ್ಟಿಸುವ ರೀತಿಯಲ್ಲಿಯೇ ಆ್ಯಪಲ್‌ನ ಉದ್ಯಮ - ವಹಿವಾಟು ಮಾದರಿ ರೂಪಿಸಲಾಗಿದೆ.ಐಫೋನ್, ಐಪಾಡ್ ಮತ್ತಿತರ ಡಿಜಿಟಲ್ ಸಾಧನಗಳ ಕಾರ್ಯನಿರ್ವಹಣಾ ವ್ಯವಸ್ಥೆಯಲ್ಲಿ ಬಳಸುವ ಅಪ್ಲಿಕೇಷನ್ಸ್‌ಗಳ ವಿನ್ಯಾಸ, ಅಭಿವೃದ್ಧಿ ಮತ್ತು ಅವುಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ನೂರಾರು ಸಂಸ್ಥೆಗಳು ಮತ್ತು ಸಾವಿರಾರು ತಂತ್ರಜ್ಞರು ದುಡಿಯುತ್ತಿದ್ದಾರೆ. ಇಂತಹ ಹಲವಾರು ಸಂಸ್ಥೆಗಳು ಈಗಾಗಲೇ ಲಕ್ಷಾಂತರ ಡಾಲರ್‌ಗಳ ವರಮಾನ ಗಳಿಸಿದ್ದು ಮುಂದೆಯೂ ವಹಿವಾಟು ವೃದ್ಧಿಸುವ ಹಾದಿಯಲ್ಲಿವೆ.ಸ್ಟೀವ್ ಜಾಬ್ಸ್, ಅಪ್ಲಿಕೇಷನ್ಸ್‌ಗಳ `ಆ್ಯಪಲ್ ಸ್ಟೋರ್~ ವೇದಿಕೆ ಸಿದ್ಧಪಡಿಸಿರದಿದ್ದರೆ, ಐಫೋನ್, ಐಪಾಡ್‌ಗಳ ಗ್ರಾಹಕರು ಬೇರೆ, ಬೇರೆ ಸಂಸ್ಥೆಗಳ ಅಪ್ಲಿಕೇಷನ್ಸ್‌ಗಳನ್ನು ತಮ್ಮ ಸ್ಮಾರ್ಟ್ (ಚುರುಕಿನ) ಸಾಧನಗಳಲ್ಲಿ  ಅಳವಡಿಸಿಕೊಳ್ಳುವಂತಹ ಮತ್ತು ಅದರಿಂದ ಆ್ಯಪಲ್ ಸೇರಿದಂತೆ ಉಳಿದ ಸಂಸ್ಥೆಗಳಿಗೂ ನಿರಂತರವಾಗಿ ವರಮಾನ ಹರಿದು ಬರುವಂತಹ ವಿಶಿಷ್ಟ ಬಗೆಯ ವಹಿವಾಟಿನ ಮಾದರಿಯೇ ರೂಪುಗೊಳ್ಳುತ್ತಿರಲಿಲ್ಲ.ಸ್ಟೀವ್ ಜಾಬ್ಸ್, ಸಮಕಾಲೀನ ಅತ್ಯದ್ಭುತ ಉದ್ಯಮಿ, ಸಂಶೋಧಕ ಮತ್ತು ಚಿಂತಕರಲ್ಲಿ ಒಬ್ಬರಾಗಿದ್ದರು ಎನ್ನುವುದರಲ್ಲಿ ಯಾವುದೇ ಅನುಮಾನವೇ ಇಲ್ಲ. ಅವರು ಸುಂದರ ಡಿಜಿಟಲ್ ಸಾಧನಗಳನ್ನು ರೂಪಿಸಿರುವುದರ ಜತೆಗೆ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಉದ್ಯಮದಲ್ಲಿ ಭಾರಿ ಪರಿವರ್ತನೆಯನ್ನೂ ತಂದ್ದ್ದಿದರು. ವಿಶ್ವದ ಅತ್ಯಂತ ಮೌಲ್ಯಯುತ ಸಂಸ್ಥೆ ಕಟ್ಟಿ ಬೆಳೆಸಿದ ಹೆಗ್ಗಳಿಕೆಯೂ ಅವರದ್ದು. ತಮ್ಮ ಕೆಲಸ ಮತ್ತು ಚಿಂತನೆಗಳಿಂದ ಹೊಸ ಹೊಸ ಉದ್ಯಮಿಗಳು, ಸಂಶೋಧಕರು ಸೃಷ್ಟಿಯಾಗಲು ಕಾರಣರಾಗಿದ್ದಾರೆ. ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸ್ಪೂತಿದಾಯಕರಾಗಿದ್ದಾರೆ.ಅವರೊಬ್ಬ ಸದಾಕಾಲ ಸ್ಮರಣೀಯ ಮತ್ತು ಗೌರವಾದರಕ್ಕೆ ಅರ್ಹ ವ್ಯಕ್ತಿ.  ಎಲ್ಲೆಡೆ ಜನಮನ್ನಣೆಗೆ ಪಾತ್ರವಾಗಿರುವ ಜಾಬ್ಸ್ ಅವರ ಹೇಳಿಕೆ ಮತ್ತು ಸಲಹೆಗಳನ್ನು ಇಲ್ಲಿ ಉಲ್ಲೇಖಿಸದೇ ಹೋದರೆ ಈ ಲೇಖನ ಪೂರ್ಣಗೊಳ್ಳಲಾರದು. ಎರಡು ಮಹತ್ವದ ಹೇಳಿಕೆಗಳನ್ನು ಮಾತ್ರ ಇಲ್ಲಿ ಪ್ರಸ್ತಾಪಿಸಿರುವೆ.`ನಿಮ್ಮ ಸಮಯ ಸೀಮಿತವಾಗಿದೆ. ಅದಕ್ಕಾಗಿ ಇತರರ ಬದುಕಿಗಾಗಿ ನಿಮ್ಮ ವೇಳೆ  ವ್ಯರ್ಥಗೊಳಿಸಬೇಡಿ. ಇತರರ ಚಿಂತನೆಯ ಫಲವಾಗಿರುವ ತತ್ವ - ಸಿದ್ಧಾಂತಗಳ ಬಲೆಯಲ್ಲಿ ಸಿಲುಕಬೇಡಿ. ಅನ್ಯರ ಅಭಿಪ್ರಾಯಗಳ ಪ್ರಭಾವಕ್ಕೆ ನಿಮ್ಮ ಒಳದನಿಯು ಸಿಲುಕದಂತೆ ನೋಡಿಕೊಳ್ಳಿ. ಎಲ್ಲಕ್ಕಿಂತ ಮುಖ್ಯವಾಗಿ ನಿಮ್ಮ ಒಳ ಅರಿವು ಮತ್ತು ಹೃದಯದ ಮಾತಿನಂತೆ ನಡೆದುಕೊಳ್ಳುವ ಧೈರ್ಯ ಪ್ರದರ್ಶಿಸಿ...~`ಅತ್ಯಂತ ಶ್ರೀಮಂತ ವ್ಯಕ್ತಿಯಾಗಿ ಸಮಾಧಿಯಲ್ಲಿ ಚಿರನಿದ್ರೆಗೆ ಜಾರುವುದನ್ನು ನಾನು ಖಂಡಿತವಾಗಿಯೂ ಇಷ್ಟಪಡುವುದಿಲ್ಲ. ಪ್ರತಿ ದಿನ ರಾತ್ರಿ ನಿದ್ದೆಗೆ ಜಾರುವಾಗ ಇಂದು ಅದ್ಭುತವಾದ ಕೆಲಸ ಮಾಡಿರುವೆ ಎನ್ನುವ ಸಂತೃಪ್ತ ಭಾವವೇ ನನಗೆ ಹೆಚ್ಚು ಇಷ್ಟ...~

(ನಿಮ್ಮ ಅನಿಸಿಕೆಗಳನ್ನು ತಿಳಿಸಿ: ಛಿಜಿಠಿಜಛ್ಛಿಛಿಛಿಚಿಚ್ಚಃಟ್ಟಚ್ಜಚ್ಞಜಿ.್ಚಟ.ಜ್ಞಿ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry