ಸ್ತನ್ಯಪಾನದ ಸವಾಲುಗಳು ಮತ್ತು ಸ್ಟೆಲ್ಲಾ ಎನ್ನುವ ಅನನ್ಯ ತಾಯಿ

ಸೋಮವಾರ, ಮೇ 20, 2019
30 °C

ಸ್ತನ್ಯಪಾನದ ಸವಾಲುಗಳು ಮತ್ತು ಸ್ಟೆಲ್ಲಾ ಎನ್ನುವ ಅನನ್ಯ ತಾಯಿ

ಡಾ. ಆಶಾ ಬೆನಕಪ್ಪ
Published:
Updated:
ಸ್ತನ್ಯಪಾನದ ಸವಾಲುಗಳು ಮತ್ತು ಸ್ಟೆಲ್ಲಾ ಎನ್ನುವ ಅನನ್ಯ ತಾಯಿ

ಪ್ರತಿ ವರ್ಷದ `ವಿಶ್ವ ಸ್ತನ್ಯಪಾನ ಸಪ್ತಾಹ~ದ ಸಂದರ್ಭದಲ್ಲಿಯೂ ನಾನು ಸ್ಟೆಲ್ಲಾ (ಹೆಸರು ಬದಲಿಸಲಾಗಿದೆ) ಅವರನ್ನು ನೆನಪಿಸಿಕೊಳ್ಳುತ್ತೇನೆ. 2001ರಲ್ಲಿ ನಾನು ಆಹಾರ ಮತ್ತು ಪೌಷ್ಠಿಕಾಂಶ ಮಂಡಳಿಯ ರೇಮಾ ರಾಧಾಕೃಷ್ಣನ್ ಅವರ ಜೊತೆಗೂಡಿ ಆ ಸಪ್ತಾಹಕ್ಕಾಗಿ ಸ್ತನ್ಯಪಾನದ ಪರವಾದ ವಿಚಾರ ಮಂಡನೆ ಮತ್ತು ಜಾಗೃತಿ ಕಾರ್ಯಕ್ರಮದ ಆಯೋಜನೆಯಲ್ಲಿ ನಿರತಳಾಗಿದ್ದೆ. `ಮಾಹಿತಿಯುಗದಲ್ಲಿ ಸ್ತನ್ಯಪಾನ~  ಕಾರ್ಯಕ್ರಮದ ವಿಷಯವಾಗಿತ್ತು.ಜುಲೈ ಕೊನೆಯ ವಾರದಲ್ಲಿ ವಾಣಿ ವಿಲಾಸ ಆಸ್ಪತ್ರೆಯ ನವಜಾತ ಮಕ್ಕಳ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸಿಸ್ಟರ್ ಎಲಿಜಬೆತ್, ಮಹಿಳೆಯೊಬ್ಬರು ನನ್ನನ್ನು ನೋಡಲೇಬೇಕೆಂದು ಒಂದೇ ಸಮನೆ ಹಟ ಮಾಡುತ್ತಿದ್ದಾರೆಂದೂ ಆಕೆಯ ಹೆಸರು ಸ್ಟೆಲ್ಲಾ ಎಂದೂ ತಿಳಿಸಿದರು.

 

ಕೋರಮಂಗಲದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದ ಉದ್ಘಾಟನೆ ನೆರವೇರಿದ ತಕ್ಷಣ ನಾನು ಆ ಮಹಿಳೆಯನ್ನು ಭೇಟಿ ಮಾಡಲು ವಾಣಿ ವಿಲಾಸಕ್ಕೆ ಹಿಂದಿರುಗಿದೆ. ತಿಳಿ ನೀಲಿ ಬಣ್ಣದ ನೈಟಿಯಲ್ಲಿದ್ದ ತುಂಬು ಗರ್ಭಿಣಿಯನ್ನು ನೋಡಿದ ಕೂಡಲೇ ನನ್ನ ಹೃದಯ ಕರಗಿತು.ನನ್ನನ್ನು ಭೇಟಿ ಮಾಡುವ ಸಲುವಾಗಿಯೇ ಆಕೆ ಹಲವಾರು ಬಾರಿ ಅಲ್ಲಿಗೆ ಬಂದಿದ್ದರು. ಆಕೆಗೆ ನಾನು ಕ್ಷಮೆ ಕೋರಿ, ಭಾರತೀಯ ಸ್ತನ್ಯಪಾನ ಪ್ರಚಾರ ಜಾಲದ ನಗರ ಉಪ ಸಂಯೋಜಕಿಯಾಗಿ ನನ್ನ ಜವಾಬ್ದಾರಿಗಳನ್ನು ವಿವರಿಸಿದೆ. ನನ್ನಲ್ಲಿದ್ದ ಅಳುಕನ್ನು ಹೋಗಲಾಡಿಸಿಕೊಳ್ಳಲು ಪ್ರಯತ್ನಿಸಿದೆ. ಏಕೆಂದರೆ ನನಗಾಗಿ ಯಾರಾದರೂ ಕಾಯುವಂತಾಗುವುದನ್ನು ನಾನು ಇಷ್ಟಪಡುವುದಿಲ್ಲ.ಉಡುಪಿನ ಕಾರ್ಖಾನೆಯೊಂದರಲ್ಲಿ ಉದ್ಯೋಗಿಯಾಗಿದ್ದ ಸ್ಟೆಲ್ಲಾ ಇಂಗ್ಲಿಷ್‌ನಲ್ಲಿ ಮಾತನಾಡುತ್ತಿದ್ದರು. ತಂದೆತಾಯಿ ನೋಡಿದ ಹುಡುಗನನ್ನು ಆಕೆ ಸಂತೋಷದಿಂದ ಮದುವೆಯಾಗಿದ್ದರು.

 

`ಎದೆಹಾಲು ಉಣಿಸುವುದು ನಿಮ್ಮ ಹಕ್ಕು~ ವಿಚಾರದ ಬಗ್ಗೆ ನಾನು ನೀಡಿದ್ದ ಉಪನ್ಯಾಸವೊಂದರಿಂದ ಪ್ರಭಾವಿತಳಾಗಿದ್ದ ಆಕೆ, ಮಗು ಜನಿಸುವ ಮೊದಲೇ ಎದೆಹಾಲು ಉಣಿಸುವುದರ ಬಗ್ಗೆ ದೃಢನಿಶ್ಚಯ ಮಾಡಿಕೊಂಡಿದ್ದರು.ಸ್ತನ್ಯಪಾನ ಸಪ್ತಾಹ ಮುಗಿದ ನಂತರವೂ ಆಕೆ ನನ್ನ ಮಾತುಗಳನ್ನು ಮೆಲುಕು ಹಾಕುತ್ತಿದ್ದರು. 2000 ಇಸವಿಯ ಮಧ್ಯಭಾಗದಲ್ಲಿ ಸ್ಟೆಲ್ಲಾ ಗರ್ಭಿಣಿಯಾದರು. ಆಕೆಯ ಸಂತೋಷಕ್ಕೆ ಪಾರವೇ ಇರಲಿಲ್ಲ. ಆರು ತಿಂಗಳ ಗರ್ಭಿಣಿಯಾದಾಗ ಎದೆಹಾಲು ಕುಡಿಸುವ ಕ್ರಮದ ಬಗ್ಗೆ ಎಲ್ಲಾ ವಿವರ ತಿಳಿದುಕೊಳ್ಳುವ ಸಲುವಾಗಿ ನನ್ನನ್ನು ಭೇಟಿ ಮಾಡಲು ತೀರ್ಮಾನಿಸಿದ್ದರು.ಎದೆಹಾಲಿನ ಬಗ್ಗೆ ಪ್ರಸವಪೂರ್ವ ಕೌನ್ಸೆಲಿಂಗ್‌ಗೆ ಬಂದ ಕೆಲವೇ ಮಹಿಳೆಯರಲ್ಲಿ ಆಕೆ ಕೂಡ ಒಬ್ಬರು. ಗರ್ಭಾವಸ್ಥೆಯ 8-9ನೇ ತಿಂಗಳಲ್ಲಿ ಮೊದಲ ಭೇಟಿ. ತನ್ನ ಹಾಗೂ ಮಗುವಿನ ಆರೋಗ್ಯ, ಪೌಷ್ಠಿಕತೆ ಮತ್ತು ಆರೈಕೆಯ ಬಗ್ಗೆ ಈ ಸಮಯದಲ್ಲಿ ನಾವು ಕೂಲಂಕಷ ಮಾಹಿತಿ ನೀಡುತ್ತೇವೆ. ಮಗು ಹುಟ್ಟಿದ ಒಂದು ಗಂಟೆಯೊಳಗೆ ಎದೆಹಾಲು ಕುಡಿಸಬೇಕು ಎನ್ನುವುದನ್ನು ಸ್ಪಷ್ಟಪಡಿಸಲಾಗುತ್ತದೆ.ಪ್ರತಿ ಗರ್ಭಿಣಿ ಸ್ತ್ರೀಯರೂ ಪ್ರಸವದ ನೂರು ದಿನಕ್ಕೆ ಮುಂಚಿನಿಂದ ಹಾಗೂ ಪ್ರಸವದ ನಂತರದ ನೂರು ದಿನ ಕಬ್ಬಿಣ ಹಾಗೂ ಕ್ಯಾಲ್ಷಿಯಂಯುಕ್ತ ಮಾತ್ರೆಗಳನ್ನು ಸೇವಿಸಬೇಕು.

ಗರ್ಭಾವಸ್ಥೆಯಲ್ಲಿ ಮಹಿಳೆ  ಹೆಚ್ಚುವರಿ 350 ಕ್ಯಾಲರಿಗಳನ್ನು (ಬೆಳಗಿನ ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟವಲ್ಲದೆ ಸಂಜೆ ವೇಳೆಯಲ್ಲಿ ಲಘು ಆಹಾರ) ಮತ್ತು ಹೆರಿಗೆಯಾದ ಮೊದಲ ಆರು ತಿಂಗಳು ಹೆಚ್ಚುವರಿ 500 ಕ್ಯಾಲರಿಯುಕ್ತ ಆಹಾರ ಸೇವಿಸಬೇಕು.

 

ಗರ್ಭಿಣಿಯನ್ನು ಸಂತೋಷವಾಗಿರಿಸಲು ಮತ್ತು ಆಕೆಯಲ್ಲಿ ಆತ್ಮವಿಶ್ವಾಸ ತುಂಬಲು ಸೀಮಂತ ಮಾಡುವ ನಾವು ಆಕೆಯ ಪೋಷಣೆಗೆ ಆದ್ಯತೆ ನೀಡುವ ವಿಷಯದಲ್ಲಿ ವಿಜ್ಞಾನ ಮತ್ತು ನಮ್ಮ ಸಂಸ್ಕೃತಿಯ ಮೂಲಕ ಹೆಚ್ಚಿನ ಒತ್ತಡವನ್ನೂ ಹಾಕುತ್ತೇವೆ. ಎದೆಹಾಲು ನೀಡುವ ಸಂದರ್ಭದಲ್ಲಿ ತಾಯಿಯಲ್ಲಿ ಆತ್ಮವಿಶ್ವಾಸ ಬೆಳೆಸುವುದು ಅತ್ಯಗತ್ಯ.ಏಕೆಂದರೆ ಅದರಿಂದ ನಿಶ್ಚಲವಾಗಿರುವ ಹಾರ್ಮೋನನ್ನು (ಆಕ್ಸಿಟೋಸಿನ್) ಉದ್ದೀಪನಗೊಳಿಸಿ ಮಗುವಿನ ಬಾಯಿಗೆ ಸರಾಗವಾಗಿ ಹಾಲು ಹರಿಯುವಂತೆ ಮಾಡುತ್ತದೆ. ತಾಯಿ ಹಾಗೂ ಮಗು ಆತ್ಮವಿಶ್ವಾಸ ಹಾಗೂ ಸೌಖ್ಯದಿಂದ ಇರುವಷ್ಟೂ ಎದೆಹಾಲು ಉಣಿಸುವುದು ಹೆಚ್ಚು ಯಶಸ್ವಿಯಾಗುತ್ತದೆ.ಪ್ರಸವದ ಅವಧಿಯ ಕೊನೆಯ ಒಂದು ಗಂಟೆ ನಿರ್ಣಾಯಕ ಅವಧಿ. ನೋವು ಸಹಿಸಿಕೊಂಡು ಮಹಿಳೆ ನರಳುವಾಗ ಕ್ಯಾಟೆಕೊಲಮೈನ್ ಎಂಬ ಹಾರ್ಮೋನುಗಳು ಉತ್ಪಾದನೆಯಾಗುತ್ತವೆ. ಮಗುವಿನೊಳಗೆ ಸೇರಿಕೊಳ್ಳುವ ಅವು ಸುಮಾರು ನಾಲ್ಕು ಗಂಟೆ ಎಚ್ಚರವಾಗಿದ್ದು ಕ್ರಿಯಾಶೀಲವಾಗಿರುತ್ತವೆ.

 

ಹೀಗಾಗಿ `ದ್ರವ ರೂಪದ ಚಿನ್ನವನ್ನು ಸೇವಿಸುವ ಸುವರ್ಣ ಸಮಯ~ವಾದ ಮೊದಲ ಒಂದು ಗಂಟೆಯಲ್ಲಿ ಮಗುವಿನಲ್ಲಿ ಬಹು ಸಾಮರ್ಥ್ಯದ ಅಂಶಗಳುಳ್ಳ ದಪ್ಪನೆಯ ಎದೆಹಾಲನ್ನು ಹೀರಿಕೊಳ್ಳಲು ಅಗತ್ಯವಾದ ಶಕ್ತಿ ಇರುತ್ತದೆ, ನಿಸರ್ಗದ ನಿಯಮಗಳು ಪ್ರಶ್ನಾತೀತ.

 

ಗರ್ಭಾವಸ್ಥೆಯ ಕೊನೆಯ ಮೂರು ತಿಂಗಳ ಅವಧಿಯಲ್ಲಿ ಮೊಲೆತೊಟ್ಟು ಮತ್ತು ಅದರ ಸುತ್ತಲಿನ ಭಾಗ ಕಪ್ಪಗಾಗಿ ಮಗುವನ್ನು ತನ್ನ ಪೌಷ್ಠಿಕಾಂಶದ ಮೂಲ ಸ್ಥಳದತ್ತ ಸೆಳೆಯುತ್ತದೆ. ಆಗ ಹೊಕ್ಕಳು ಬಳ್ಳಿ ಸುಮಾರು 18 ಇಂಚುಗಳಷ್ಟು ಉದ್ದವಿರುತ್ತದೆ (ಜನನ ಕೇಂದ್ರ ಭಾಗದಿಂದ ಎದೆಯವರೆಗಿನ ಅಂತರದಷ್ಟು). ವಿಜ್ಞಾನ ಮತ್ತು ನಿಸರ್ಗ ಎರಡೂ ಮಗು ಹುಟ್ಟಿದ ಕೂಡಲೇ ಅದಕ್ಕೆ ಎದೆಹಾಲು ಕುಡಿಸುವುದನ್ನು ಬಯಸುತ್ತದೆ.ಮಗು ಹಾಲು ಹೀರಿಕೊಳ್ಳಲು ಪ್ರಾರಂಭಿಸುತ್ತಿದ್ದಂತೆ ಆಕ್ಸಿಟೋಸಿನ್ ಬಿಗಿದುಕೊಂಡಿರುವ ಗರ್ಭಕೋಶವನ್ನು ಸಡಿಲಗೊಳಿಸಿ, ಜರಾಯುವನ್ನು (ಪ್ಲಾಸೆಂಟಾ) ಹೊರಹಾಕುತ್ತದೆ ಮತ್ತು ಹೆರಿಗೆಯ ನಂತರದ ರಕ್ತಸ್ರಾವವನ್ನು (ಹೆಚ್ಚಿನ ಮಹಿಳೆಯರು ಈ ಸಮಸ್ಯೆಗೆ ತುತ್ತಾಗುತ್ತಾರೆ) ತಡೆಗಟ್ಟುತ್ತದೆ.

 

ತಾಯಿ ಮತ್ತು ಮಗುವಿನ ಚರ್ಮದ ಪರಸ್ಪರ ಸಂಪರ್ಕ ಸ್ಪರ್ಶದ ಉಷ್ಣತೆಯನ್ನು ಒದಗಿಸುತ್ತದೆ ಹಾಗೂ ತಾಯಿಯ ಉಪಯುಕ್ತ ಬ್ಯಾಕ್ಟೀರಿಯಾ (ಸಹಜೀವಿಗಳು) ಮಗುವಿನ ಚರ್ಮದೊಳಗೆ ಸೇರಿಕೊಂಡು ಪರಿಸರದ (ಆಸ್ಪತ್ರೆ/ಮನೆ) ಹಾನಿಕಾರಕ ಬ್ಯಾಕ್ಟೀರಿಯಾಗಳಿಂದ ಮಗುವನ್ನು ರಕ್ಷಿಸುತ್ತವೆ. ಚರ್ಮದ ಈ ಬಗೆಯ ಸಂಪರ್ಕದ ಆತ್ಮೀಯತೆ ಮಗುವಿನ ಮೆದುಳಿನ ಬೆಳವಣಿಗೆಗೂ ಸಹಕಾರಿ.ಗರ್ಭಿಣಿಯ ಆದ್ಯತೆಯ ಪೌಷ್ಠಿಕತೆ ಸಮರ್ಪಕವಾಗಿ ಪ್ರಾರಂಭವಾದ ದಿನಗಳಿಂದ ಮಗುವಿನ ಮೆದುಳು ಶೇ 73ರಷ್ಟು ಗರ್ಭದಲ್ಲಿಯೇ ಬೆಳವಣಿಗೆಯಾಗಿರುತ್ತದೆ.

ಪೌಷ್ಠಿಕಾಂಶ, ಅದರಲ್ಲೂ ವಿಶೇಷವಾಗಿ ಶೈಶವಾವಸ್ಥೆಯಿಂದ ಎದೆಹಾಲು ಉಣಿಸುವುದು ಅತಿಮುಖ್ಯ.ಇದು ಮುಂದಿನ ಮೂರು ವರ್ಷದವರೆಗೆ ಮಗುವಿನ ಮೆದುಳಿನ ಬೆಳವಣಿಗೆಗೆ ಕಾರಣವಾಗುತ್ತದೆ. ಈ ಬೆಳವಣಿಗೆಯನ್ನು ರಂಗೋಲಿ ಬಿಡಿಸುವ ಕೌಶಲ್ಯದಂತೆ ವಿವರಿಸುವುದು ಆಸಕ್ತಿದಾಯಕ ಎನಿಸುತ್ತದೆ. ಆಗತಾನೆ ಜನಿಸಿದ ಮಗುವಿನ ಮೆದುಳು ರಂಗೋಲಿಯ ಚುಕ್ಕಿಗಳಂತೆ.ಒಮ್ಮೆ ಮಗುವನ್ನು ಎದೆಗೆ ಇರಿಸಿಕೊಳ್ಳುವುದು, ತಾಯಿಯ ತೋಳಲ್ಲಿ ಇರಿಸಿಕೊಳ್ಳುವುದು ಮತ್ತು ಪ್ರೀತಿಯಿಂದ ನೇವರಿಸುವುದು ರಂಗೋಲಿಯ ಚುಕ್ಕಿಗಳನ್ನು ಒಂದಕ್ಕೊಂದು ಜೋಡಿಸಿ ವಿನ್ಯಾಸ ಪೂರ್ಣಗೊಳಿಸುವಂತೆ ಮೆದುಳಿನ ವಿವಿಧ ಕೋಶಗಳ ನಡುವೆ ಸಂಪರ್ಕ ಕಲ್ಪಿಸುತ್ತದೆ.

 

ಹೀಗಾಗಿಯೇ ಚೆನ್ನಾಗಿ ಎದೆಹಾಲು ಉಣಿಸಿದ ಮಕ್ಕಳು ಬುದ್ದಿವಂತರಾಗುವುದು. ಸ್ಟೆಲ್ಲಾ ನನ್ನ ಮಾತುಗಳನ್ನೆಲ್ಲಾ ಬರೆದಿಟ್ಟುಕೊಂಡು, ನಾನು ಹೇಳಿದ್ದನ್ನೆಲ್ಲಾ ಅನುಸರಿಸಲು ಸಿದ್ಧಳಾಗಿದ್ದರು.ಆಗಸ್ಟ್ 2011ರಂದು ಆಸ್ಪತ್ರೆಗೆ ನನ್ನನ್ನು ಭೇಟಿ ಮಾಡಲು ತುಂಬು ಗರ್ಭಿಣಿಯೊಬ್ಬರು ಬಂದರು. ಅವರನ್ನು ನನಗೆ ಗುರುತು ಹಿಡಿಯಲು ಸಾಧ್ಯವಾಗಲಿಲ್ಲ. ಈ ವ್ಯಕ್ತಿ ಯಾರಿರಬಹುದೆಂದು ಆಶ್ಚರ್ಯದಿಂದ ಕೆಲಕಾಲ ದಿಟ್ಟಿಸಿ ನೋಡಿದೆ. ಖಾಸಗಿಯಾಗಿ ಮಾತನಾಡಬೇಕೆಂದು ಆಕೆ ಕೋರಿದಾಗ, ವೈದ್ಯರುಗಳ ಕರ್ತವ್ಯ ಕೋಣೆಗೆ ಕರೆದುಕೊಂಡು ಹೋದೆ.ಆಕೆ ಇದ್ದಕ್ಕಿದ್ದಂತೆ ಅಳತೊಡಗಿದರು. ನಾನು  ಮುಟ್ಟಿ ಸಮಾಧಾನ ಮಾಡಲು ಹೊರಟರೆ ಬೆಚ್ಚಿ ಹಿಂದಕ್ಕೆ ಸರಿಯುತ್ತಿದ್ದರು. ಎಷ್ಟು ಸಾಧ್ಯವೋ ಅಷ್ಟು ಅಳಲಿ ಎಂದು ಸುಮ್ಮನಾದೆ.ನನ್ನ ತಾಳ್ಮೆಯ ಮಿತಿಯೂ ಮೀರುತ್ತಿದ್ದಾಗ, ಆಕೆ ಕಟ್ಟಿಕೊಂಡಿದ್ದ ಸ್ಕಾರ್ಫ್ ಅನ್ನು ಬಿಚ್ಚಿದಳು. ಆಕೆಯ ಗುರುತು ಹಿಡಿದಾಗ ಅತಿಯಾದ ಸಂಕಟ ಮತ್ತು ನೋವಿನಿಂದ ಕೆಲಕಾಲ ಕಂಪಿಸಿದೆ. ನನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವುದು ತುಂಬಾ ಕಷ್ಟವಾಯಿತು.

 

ಆಕೆ ತನ್ನ ತಾಯ್ತನದ ಬಗ್ಗೆ ಸಂಭ್ರಮದಿಂದ ಹಾಗೂ ಮಗು ಹುಟ್ಟುತ್ತಿದ್ದಂತೆ ಅದಕ್ಕೆ ಎದೆಹಾಲು ಕುಡಿಸುವ ಕ್ಷಣಕ್ಕಾಗಿ ಎದುರು ನೋಡುತ್ತಿದ್ದ ಸುಂದರಿ ಸ್ಟೆಲ್ಲಾ! ಆಗತಾನೆ ಸುಟ್ಟಿದ್ದ ಆಕೆಯ ಮುಖವನ್ನು ನಾನು ಗುರುತು ಹಿಡಿಯದವಳಾಗಿದ್ದೆ. ಆಕೆಯ ಎದೆಯೂ ಸುಟ್ಟುಹೋಗಿತ್ತು! ಆದರೆ ಸ್ಟೆಲ್ಲಾ ತನ್ನ ಸುಟ್ಟುಹೋದ ಮುಖದ ಬಗ್ಗೆ ಚಿಂತಿಸುತ್ತಿರಲಿಲ್ಲ.

 

ಆದರೆ ಹಾಲುಣಿಸಬೇಕಾದ ಎದೆ? ವರದಕ್ಷಿಣೆ ಕಿರುಕುಳ ನೀಡಿದ್ದ ಸ್ಟೆಲ್ಲಾಳ ಪತಿ ಸೀಮೆಎಣ್ಣೆ ಎರಚಿ ಬೆಂಕಿ ಹಚ್ಚಿದ್ದ. ಅದೃಷ್ಟವಷಾತ್ ಆಕೆ ಪ್ರಾಣಾಪಾಯದಿಂದ ಬಚಾವಾಗಿದ್ದರು. ಚಿತ್ತೋನ್ಮಾದಗೊಂಡಿದ್ದ ಆಕೆ ಇನ್ನೂ ಹಸಿಯಾಗಿದ್ದ ಸುಟ್ಟಗಾಯಗಳ ನೋವನ್ನು ಸಹಿಸಿಕೊಳ್ಳುತ್ತಿದ್ದರು.ನನ್ನನ್ನು ಭೇಟಿ ಮಾಡಿ `ಎದೆಹಾಲಿನ ಚಮತ್ಕಾರ~ ಮುಂದೆಯೂ ಸಾಧ್ಯವಾಗುವುದೇ ಎಂಬುದನ್ನು ತಿಳಿಯಲು ಬಂದಿದ್ದರು. “ಮುಂದೇನು ಡಾಕ್ಟರ್? ನನ್ನ ಮಗುವಿಗೆ ಒಬ್ಬ ತಾಯಿ ಮಾತ್ರ ಮಾಡಲು ಸಾಧ್ಯವಾಗುವಂಥ ಎದೆಹಾಲು ಉಣಿಸಲು ಸಹಾಯ ಮಾಡಿ” ಎಂದು ಗೋಗೆರೆದರು. ನಾನು ಆಕೆಯ ಸುಟ್ಟ ಎದೆಗಳನ್ನು ನೋಡುತ್ತಾ, ನನ್ನ ಮಾತುಗಳಿಂದ ಅತಿಯಾಗಿ ಪ್ರಭಾವಿತಳಾಗಿದ್ದ ಈ ಮಹಿಳೆಗೆ ಏನು ಮಾಡಲು ಸಾಧ್ಯ ಎಂದು ಚಿಂತಿಸುತ್ತಿದ್ದೆ.ನನ್ನ ಸಲಹೆಗಳನ್ನು ಪಡೆದಿದ್ದ ಆಕೆ ಬೇರೆ ಮಹಿಳೆಯಿಂದ ಎದೆಹಾಲು ಕೊಡಿಸಲು ಮುಂದಾಗುತ್ತಿರಲಿಲ್ಲ. “ಸ್ಟೆಲ್ಲಾ, ಇನ್ನೂ ಎರಡು ವಾರವಿದೆ. ದೇವರು ನಮಗೆ ಸಹಾಯ ಮಾಡುತ್ತಾನೆ” ಎಂದು ಸಮಾಧಾನ ಮಾಡಿದೆ.

 

ಒತ್ತಡದ ಕಾರಣವಿರಬೇಕು, ಒಂದು ವಾರದಲ್ಲಿಯೇ ಪ್ರಸವದ ನೋವಿನಿಂದ ಸ್ಟೆಲ್ಲಾ ದಾಖಲಾದರು. ಪ್ರಸವದ ಸಮಯದಲ್ಲಿ ಆಕೆಯ ದೇಹದ ಯಾವ ಭಾಗವನ್ನು ಸ್ಪರ್ಶಿಸಿದರೂ ಗುಲಾಬಿ ಬಣ್ಣದ ಚರ್ಮದ ಅಡಿಯಲ್ಲಿ ಸುಲಿದಿಟ್ಟಂಥ ಹಸಿ ಚರ್ಮ ಎದ್ದು ಕಾಣುತ್ತಿತ್ತು. ಇದೆಲ್ಲವುದರ ಹೊರತಾಗಿಯೂ, ನಾವು ಮಗುವನ್ನು ಎದೆಗೆ ಇರಿಸುವಲ್ಲಿ ಯಶಸ್ವಿಯಾದೆವು.ಉತ್ತಮ ಬೆಳವಣಿಗೆಯಾಗಿದ್ದ ಆರೋಗ್ಯವಂತ ಗಂಡು ಮಗು ಹಾಲು ಹೀರಲು ಪ್ರಾರಂಭಿಸುತ್ತಿದ್ದಂತೆ, ದೃಢಮನಸ್ಕ ತಾಯಿಯ ಸುಟ್ಟ ಎದೆಯಿಂದಲೂ ಹಾಲು ಸರಾಗವಾಗಿ ಹರಿಯಿತು. ಸ್ಟೆಲ್ಲಾಳ ಆನಂದಕ್ಕೆ ತಡೆಯೇ ಇರಲಿಲ್ಲ. ನನ್ನ ನೆನಪಿನಲ್ಲಿ ಆಕೆ ಶಾಶ್ವತವಾಗಿ ಉಳಿದರು.ಹುಟ್ಟಿದ ಒಂದು ಗಂಟೆಯೊಳಗೆ ಮಗುವನ್ನು ಎದೆಗೆ ಇರಿಸಬೇಕು. ಮುಂದಿನ ಆರು ತಿಂಗಳವರೆಗೂ ಕೇವಲ ಎದೆಹಾಲು (ಎದೆಹಾಲಿನ ಹೊರತು ಇತರೆ ಆಹಾರ ಅಥವಾ ನೀರು ಇಲ್ಲ) ನೀಡಬೇಕು. ಆರು ತಿಂಗಳು ತುಂಬಿದ ಬಳಿಕ ಮನೆಯಲ್ಲಿಯೇ ಮಾಡಿದ ನಿರ್ದಿಷ್ಟ ಆಹಾರ ತಿನ್ನಿಸುವುದರ ಜೊತೆಗೆ ಎರಡು ವರ್ಷದವರೆಗೆ ಎದೆಹಾಲುಣಿಸುವುದು ಮುಂದುವರಿಸಬೇಕು.

 

ಮಗು ದಿನದ 24 ಗಂಟೆಯಲ್ಲಿ ಆರು ಬಾರಿ ಮೂತ್ರವಿಸರ್ಜನೆ ಮಾಡಿದರೆ ಎದೆಹಾಲು ಸಮರ್ಪಕವಾಗಿ ದೊರೆತಿದೆ ಎಂದು ಅರ್ಥ. ಮೊದಲ ಆರು ತಿಂಗಳಲ್ಲಿ ಮಗು ನಾನೂರರಿಂದ ಐದುನೂರು ಗ್ರಾಂ ತೂಕ ಹೆಚ್ಚಬೇಕು- ಸ್ಟೆಲ್ಲಾ ನನ್ನ ಎಲ್ಲಾ ಸಲಹೆಗಳನ್ನೂ ಚಾಚೂತಪ್ಪದೆ ತಮ್ಮ ಮಗುವಿನ ಹಾಲುಣಿಸುವ ನಿಟ್ಟಿನಲ್ಲಿ ಪಾಲಿಸಿದರು.ಆಕೆಯ ಮಗನಿಗೆ ಮೂರು ವರ್ಷ ತುಂಬುವವರೆಗೂ ನಿರಂತರವಾಗಿ ಮೂರು ವರ್ಷ ಸ್ಟೆಲ್ಲಾರನ್ನು ನೋಡುತ್ತಿದ್ದೆ. ಆಕೆಯ ಕಥೆಯ ಜೊತೆಗೆ ಛಾಯಾಚಿತ್ರಗಳನ್ನೂ ಹಂಚಿಕೊಳ್ಳಲು ಅನುಮತಿ ಪಡೆದಿದ್ದೆ. ಈ ಛಾಯಾಚಿತ್ರ 2009ರ ವಿಶ್ವ ಸ್ತನ್ಯಪಾನ ಸಪ್ತಾಹದ ಸ್ಪರ್ಧೆಯಲ್ಲಿ ಪ್ರಶಸ್ತಿ ಗೆದ್ದುಕೊಂಡಿತು.

 

ಜನರು ಯುದ್ಧ, ಪ್ರವಾಹ, ಬರ ಮತ್ತು ಭೂಕಂಪದ ಕುರಿತು ಮಾತನಾಡುತ್ತಿದ್ದಾಗ ನಾವು ಆಯ್ದುಕೊಂಡಿದ್ದ ವಿಷಯ `ತುರ್ತು ಸಂದರ್ಭದಲ್ಲಿ ಸ್ತನ್ಯಪಾನ~. ಅಡಿಶೀರ್ಷಿಕೆಯೊಂದಿಗೆ ನಾನು ಜನರಿಗೆ ಸವಾಲು ಹಾಕಿದ್ದೆ- `ಎದೆಹಾಲು ಉಣಿಸುವುದರಲ್ಲಿ ಪ್ರತಿದಿನದ ವಿಪತ್ತಾಗಿ ಆಂತರಿಕ ಹಿಂಸಾಚಾರ~.ಆರೋಗ್ಯವಂತ ಮಹಿಳೆಯರು ಮಗುವಿಗೆ ಎದೆಯನ್ನೇ ಸ್ಪರ್ಶಿಸದಿರುವುದು ಮತ್ತು ಮಾರ್ಗದರ್ಶನ ಹಾಗೂ ಸ್ಫೂರ್ತಿಯ ಕೊರತೆಯಿಂದಾಗಿ ಆರೋಗ್ಯವಂತ ಮಕ್ಕಳಿಗೆ ಎದೆಹಾಲು ಸಿಗದೆ ಇರುವುದು- ಇಂಥ ಸಂದರ್ಭಗಳನ್ನು ಅರಗಿಸಿಕೊಳ್ಳುವುದು ನನಗೆ ತುಂಬಾ ಕಷ್ಟ.ಎದೆಹಾಲು ಇತ್ತೀಚಿನ ದಿನಗಳಲ್ಲಿ ಹಲವು ಸವಾಲುಗಳನ್ನು ಎದುರಿಸುತ್ತಿದೆ. ಮಾರುಕಟ್ಟೆಯ ಮಾರಾಟದ ತಂತ್ರವಾದ ಮಾನವ ನಿರ್ಮಿತ ಕೃತಕ ಹಾಲು ತಾಯಿ (ನೈಸರ್ಗಿಕ) ಹಾಲಿಗಿಂತಲೂ ಶ್ರೇಷ್ಠ ಎಂಬ ನಂಬಿಕೆಯನ್ನು ಜನರಲ್ಲಿ ಮೂಡಿಸಿದೆ. ನಿಧಾನ ಮತ್ತು ದೃಢವಾಗಿ ನಮ್ಮ ಯುವ ಜನಾಂಗ ಈ ಉತ್ಪನ್ನಗಳ ಗಾಳಕ್ಕೆ ಸಿಲುಕಿಕೊಳ್ಳುತ್ತಿದೆ.ಎದೆಹಾಲು ಮನುಕುಲವನ್ನು ಸಾರ್ವತ್ರಿಕಗೊಳಿಸಿದೆ. ಒಬ್ಬ ಬಡಮಹಿಳೆಯ ಎದೆಹಾಲು, ಶ್ರೀಮಂತ ಮಹಿಳೆಯಲ್ಲಿ ಇರುವಂತಹ ಪೌಷ್ಠಿಕಾಂಶಗಳನ್ನೇ ಒಳಗೊಂಡಿರುತ್ತದೆ. ಅದರಲ್ಲಿ ಭೇದವಿಲ್ಲ- ಎದೆಹಾಲು ನಮ್ಮೆಲ್ಲರನ್ನೂ ಸಮಾನರನ್ನಾಗಿಸಿದೆ.2012ರ ವಿಶ್ವ ಸ್ತನ್ಯಪಾನ ಸಪ್ತಾಹದ ಚಟುವಟಿಕೆಗಳ ಕುರಿತು ಶುಭಾಶಯ ತಿಳಿಸಲು ನನ್ನ ಹಳೆಯ ವಿದ್ಯಾರ್ಥಿಯೊಬ್ಬರು ಕರೆಮಾಡಿದ್ದರು. ಈ ವರ್ಷದ ವಿಷಯ `ಭೂತವನ್ನು ತಿಳಿದುಕೊಳ್ಳುವುದು ಮತ್ತು ಭವಿಷ್ಯದ ಬಗ್ಗೆ ಯೋಜನೆ ರೂಪಿಸುವುದು~.

ಅವುಗಳನ್ನು ವಿವರಿಸುವ ಮೊದಲೇ ಆಕೆ ಹೇಳಿದ್ದು “ಮೇಡಂ, ದೊಡ್ಡ ಆಸ್ಪತ್ರೆಗಳಲ್ಲಿ ನಿಮ್ಮ ಉತ್ಸಾಹಿ ವಿದ್ಯಾರ್ಥಿಗಳನ್ನು ಕೆಲಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಏಕೆಂದರೆ ನಾವು ನಿಮ್ಮಂತೆ ಎದೆಹಾಲಿನ ಬಗ್ಗೆ ತಿಳಿವಳಿಕೆ ಮೂಡಿಸುತ್ತೇವೆ. ಅವರು ಹೇಳುವುದಿಷ್ಟು, ನಾವು ನಮ್ಮ ಲಾಭವನ್ನು ಕಳೆದುಕೊಳ್ಳುತ್ತಿದ್ದೇವೆ”.`ಎದೆ ಮತ್ತು ಮಗುವಿನ ನಡುವೆ ವ್ಯವಹಾರ~ದ ಕುರಿತ ಅನುಭವದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಈ ಕಾರ್ಯಕ್ರಮವನ್ನು ಆಯೋಜಿಸಿದ್ದ 2001ರ ಜನವರಿಯಲ್ಲಿಯೇ ಸ್ಟೆಲ್ಲಾ ನನ್ನನ್ನು ಭೇಟಿ ಮಾಡಿದ್ದು ಕಾಕತಾಳೀಯ.

 

ಮಗುವಿಗೆ ಎದೆಹಾಲುಣಿಸುವ ಪ್ರಕೃತಿ ನಿಯಮ, ತಾಯಿಯ ಕರ್ತವ್ಯ ಹಾಗೂ ಮಗುವಿನ ಜನ್ಮಸಿದ್ಧ ಹಕ್ಕು- ಕುರಿತು ಜಾಗೃತಿ ಮೂಡಿಸುವ ನನ್ನ ಸುಮಾರು 30 ವರ್ಷದ ಸಂಘರ್ಷಮಯ ಹೋರಾಟವಿದು. ಈ ನನ್ನ ಧ್ಯೇಯ ಮತ್ತು ಹೋರಾಟದ ಮನೋಭಾವ ನಿಧಾನವಾಗಿ ನನ್ನನ್ನು ಏಕಾಂಗಿಯಾಗಿ ಬಿಟ್ಟು ಜಾರಿಕೊಳ್ಳುತ್ತಿವೆ ಮತ್ತು ಆ ಕುರಿತ ನನ್ನ ಭ್ರಮೆಯನ್ನು ಹೋಗಲಾಡಿಸುತ್ತಿದೆ. 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry