ಸ್ತ್ರೀವಾದ ಮತ್ತು ಶ್ರೀರಾಮ

7

ಸ್ತ್ರೀವಾದ ಮತ್ತು ಶ್ರೀರಾಮ

ಪ್ರಸನ್ನ
Published:
Updated:
ಸ್ತ್ರೀವಾದ ಮತ್ತು ಶ್ರೀರಾಮ

ರಾಮಾಯಣದ ಮೂರೂ ಪಾತ್ರಗಳು ಮೂರು ರೂಪಕಗಳು. ರಾಮನು ಪುರುಷ ಗುಣಕ್ಕೆ ರೂಪಕನಾದರೆ ರಾವಣನು ರಾಕ್ಷಸ ಗುಣಕ್ಕೆ, ಸೀತೆಯು ಪ್ರಕೃತಿ ಗುಣಕ್ಕೆ ರೂಪಕಳು. ಮೊದಲಿನ ಇಬ್ಬರು ಗಂಡಸರು. ಪುರುಷ ಗುಣ ಹಾಗೂ ರಾಕ್ಷಸ ಗುಣ ಹೆಚ್ಚಾಗಿ ಗಂಡು ಗುಣಗಳಾದರೆ, ಪ್ರಕೃತಿ ಗುಣವು ಹೆಚ್ಚಾಗಿ ಹೆಣ್ಣು ಗುಣ. ಪುರುಷ ಗುಣವು ಸಭ್ಯತೆಯನ್ನು, ಪ್ರಕೃತಿ ಗುಣವು ಸಹಜತೆಯನ್ನು ಪ್ರತಿನಿಧಿಸುತ್ತವೆ. ರಾಮಾಯಣವು ಇವೆರಡರ ನಡುವಿನ ಸಮತೋಲನವನ್ನು ಬಯಸುತ್ತದೆ. ಅರ್ಥಾತ್ ಗಂಡಸು ಹಾಗೂ ಹೆಂಗಸಿನ ನಡುವೆ, ನಾಗರೀಕತೆಗಳು ಹಾಗೂ ಸುತ್ತಣ ಕಾಡುಗಳ ನಡುವೆ, ಮನುಷ್ಯ ಪ್ರಾಣಿ ಹಾಗೂ ಕಾಡು ಪ್ರಾಣಿಗಳ ನಡುವೆ, ಸುಲಭ ಜೀವಿಗಳು ಹಾಗೂ ಶ್ರಮ ಜೀವಿಗಳ ನಡುವೆ, ಜಾತಿ ಜಾತಿಗಳ ನಡುವೆ ಸಮತೋಲನವಿರಬೇಕು; ಮೇಲು ಕೀಳಿನ ಭಾವನೆ ಇರಬಾರದು, ಪರಸ್ಪರರನ್ನು ಹಿಂಸಿಸಬಾರದು, ಪರಸ್ಪರರಿಗೆ ಪೂರಕವಾಗಿರಬೇಕು ಎಂದು ರಾಮಾಯಣ ಬಯಸುತ್ತದೆ.

ಇದು ಬಯಕೆ ಮಾತ್ರ. ವಾಸ್ತವತೆ ಬೇರೆಯೇ ಇರುತ್ತದೆ. ಉದಾಹರಣೆಗೆ, ಇಂದಿನ ಚಾರಿತ್ರಿಕ ಸಂದರ್ಭದಲ್ಲಿ ಅರ್ಥಾತ್ ಯಂತ್ರ ನಾಗರೀಕತೆಯಲ್ಲಿ ಭಿನ್ನತೆ ಅತಿರೇಕ ತಲುಪಿದೆ. ಸ್ಫೋಟಕ ಸಂದರ್ಭವಾಗಿದೆ ಇಂದಿನದು. ಹಾಗೆಂದೇ ಎಲ್ಲರೂ ಇಂದು ರಾಮನಾಮ ಜಪಿಸುತ್ತಿರುವುದು. ರಾಮಾಯಣವು ಕೇವಲ ಆಶಯವೊಂದರ ಮೇಲೆ ನಿರ್ಮಿಸಲಾದ ಪೊಳ್ಳು ಸ್ಥಾವರವಾಗಿದ್ದಿದ್ದರೆ ಯಾರೂ ಜಪಿಸುತ್ತಿದ್ದಿಲ್ಲ ರಾಮನಾಮವನ್ನು. ವಾಲ್ಮೀಕಿ ಮಹಾಕವಿಗೆ ವಾಸ್ತವತೆಯ ಅರಿವಿದೆ. ಅರ್ಥಾತ್ ಅಪೂರ್ಣತೆಯ ಅರಿವಿದೆ. ಹಾಗೆಂದೇ ಹಟಹಿಡಿದು ರಾಮಾಯಣವನ್ನು ಮನುಷ್ಯ ಕತೆಯಾಗಿ, ರಚಿಸಿರುತ್ತಾರೆ ವಾಲ್ಮೀಕಿಗಳು.

ರಾಮಾಯಣದಲ್ಲಿ ರಾಮ, ಲಕ್ಷ್ಮಣ, ಸೀತೆ, ಆಂಜನೇಯ, ರಾವಣ, ದಶರಥ, ಕೈಕೇಯಿ, ಮಂಥರೆ, ಭರತ ಇತ್ಯಾದಿ ಎಲ್ಲರೂ ಮನುಷ್ಯರು. ಮರ್ಯಾದಾ ಪುರುಷೋತ್ತಮನಾಗಿ ಚಿತ್ರಿತನಾಗುವ ರಾಮ ಮನುಷ್ಯ. ಕಾಡಿನ ಹೂವಿನಷ್ಟೇ ಸಹಜಳೂ ಸುಂದರಳೂ ಆಗಿ ಚಿತ್ರಿತಳಾಗುವ ಸೀತೆ ಮನುಷ್ಯಳು. ನಿಗ್ರಹದ ಗುಣಕ್ಕೆ ರೂಪಕನಾಗಿ ಚಿತ್ರಿತನಾಗುವ ಆಂಜನೇಯ ಮನುಷ್ಯ. ನಿಗ್ರಹವಿರದ ಕಾರಣಕ್ಕಾಗಿ ನಾಶಹೊಂದುವ ರಾವಣ ಮನುಷ್ಯ. ರಾಮನ ತಪ್ಪುಗಳು ತಪ್ಪುಗಳೇ ಸರಿ. ರಾಮಾಯಣದ ಮೂಲಕ ವಾಲ್ಮೀಕಿಗಳು ಮಾನವ ಮಿತಿ ಸೂಚಿಸುತ್ತಾರೆ. ಮಿತಿಯೊಳಗೇ ಉಳಿದು ಮಹತ್ತನ್ನು ಸಾಧಿಸಲು ಹೆಣಗುವ ಪಾತ್ರಗಳನ್ನು ರಚಿಸಿ ಗೆಲ್ಲುತ್ತಾರೆ. ರಾಮಾಯಣವನ್ನು ಕೇವಲ ದೇವರ ಕತೆಯಾಗಿ ಓದಿದಾಗ ಓದುಗನಿಗೆ ಈ ಯಾವ ಮಿತಿಗಳೂ ಅನುಭವಕ್ಕೆ ಬರುವುದಿಲ್ಲ.

ಸಹಜ ಗುಣಕ್ಕೆ ಒಳಿತು ಕೆಡುಕುಗಳಿಲ್ಲ. ಮೇಲು ಕೀಳುಗಳೂ ಇಲ್ಲ. ಇದೆಲ್ಲ ಇಲ್ಲದಿರುವುದೇ ಸಹಜತೆ. ಸೀತೆ ಸಹಜಳು. ಆಕೆಯ ಅಪ್ರತಿಮ ಸೌಂದರ್ಯ ಹಾಗೂ ಅಪ್ರತಿಮ ಕ್ಷಮಾಗುಣ ಇರುವುದು ಅವಳ ಸಹಜತೆಯಲ್ಲಿ. ಕಾಡಿನ ಹೂವಿನಷ್ಟು ಸಹಜಳು ಅವಳು, ಸುಂದರಳು ಅವಳು. ಇನ್ನು ಕ್ಷಮಾಗುಣ. ಎಷ್ಟೇ ತುಳಿದರೂ, ಎಷ್ಟೇ ಹಿಂಸಿಸಿದರೂ, ಕ್ಷಮಿಸಬಲ್ಲ ಭೂಮಿಯ ಗುಣವದು. ಭೂಮಿ ಸೀತೆಯ ತಾಯಿ.

ಇಷ್ಟು ಸಂಗತಿ ಸುಲಭವಾಗಿ ತಿಳಿದು ಬಿಡುತ್ತದೆ. ಸುಲಭವಾಗಿ ತಿಳಿಯಲಾರದ್ದು ಪ್ರಕೃತಿ ಹಾಗೂ ಪುರುಷ ಗುಣಗಳ ಸಂಬಂಧ. ಈ ಸಂಬಂಧದ ಬಗ್ಗೆ ರಾಮಾಯಣ ಅಸಾಧಾರಣ ತಿಳಿವಳಿಕೆ ನೀಡುತ್ತದೆ. ಪುರುಷವು ಪ್ರಕೃತಿಯನ್ನು ಅನಿವಾರ್ಯವಾಗಿ ಹಿಂಸಿಸುತ್ತದೆ ಎಂದು ರಾಮಾಯಣ ಹೇಳುತ್ತದೆ. ನಾಗರೀಕತೆಗಳು ಕಾಡನ್ನು ಕಡಿದು ಹಿಂಸಿಸಿದರೆ, ದಾಂಪತ್ಯಗಳು ಹೆಣ್ಣನ್ನು ಹದ್ದುಬಸ್ತಿನಲ್ಲಿಟ್ಟು ಹಿಂಸಿಸುತ್ತದೆ. ಇದೊಂದು ಸಭ್ಯ ಹಿಂಸೆ. ರಾಮನ ಹಿಂಸೆ. ವಾಲ್ಮೀ ಕಿರಾಮನನ್ನು ಕಟಕಟೆಯಲ್ಲಿ ನಿಲ್ಲಿಸುತ್ತಾನೆ. ಹಾಗಿದ್ದರೆ, ರಾಮಮರ್ಯಾದಾ ಪುರುಷೋತ್ತಮನಲ್ಲವೆ? ಖಂಡಿತಾ ಹೌದು. ವಾಲ್ಮೀಕಿಯ ಪ್ರಕಾರ ಸಭ್ಯ ಗಂಡಸು ಸಾಧ್ಯವಾದಷ್ಟೂ ಸಹಜವಾಗಿರಲು ಪ್ರಯತ್ನಿಸಬೇಕು. ಆಗ ಆತನ ದೈವತ್ವ, ಅರ್ಥಾತ್ ಅರಿವು, ಆತನ ಸಹಾಯಕ್ಕೆ ಬಂದರೂ ಬಂದೀತು.

ಸೀತೆಯ ತೌರುಮನೆ ಮಿಥಿಲೆ. ಅದು ಬಿಹಾರದ ಉತ್ತರ ದಿಕ್ಕಿನಲ್ಲಿದೆ. ಗಂಡನ ಮನೆ ಅಯೋಧ್ಯೆ. ಅದು ಉತ್ತರ ಪ್ರದೇಶದ ಪೂರ್ವ ದಿಕ್ಕಿನಲ್ಲಿದೆ. ಎರಡೂ ರಾಜ್ಯಗಳು ಅಕ್ಕಪಕ್ಕದಲ್ಲಿವೆ. ಆದರೂ ಮಿಥಿಲೆಯ ಮಂದಿ ತಮ್ಮ ಮನೆಮಗಳನ್ನು ಅಯೋಧ್ಯೆಯ ಗಂಡಿಗೆ ಮದುವೆ ಮಾಡಿಕೊಡಲು ಹಿಂದು ಮುಂದು ನೋಡುತ್ತಾರೆ. ರಾಮನ ಜೊತೆಗಿನ ದಾಂಪತ್ಯದಲ್ಲಿ ಮನೆಮಗಳಾದ ಸೀತೆ ಪಟ್ಟ ಪಾಡನ್ನು ಮರೆತಿಲ್ಲ ಮಿಥಿಲೆಯ ಮಂದಿ. ಶತ ಶತಮಾನಗಳೇ ಕಳೆ

ದರೂ ಮರೆತಿಲ್ಲ. ಹಾಗೆಂದು ರಾಮನ ಬಗ್ಗೆ ಅಗೌರವವೇನೂ ಇಲ್ಲ ಅವರಿಗೆ. ಮಿಥಿಲೆಯ ತುಂಬ ಸೀತಾರಾಮ ಮಂದಿರಗಳಿವೆ.

ರಾಮನ ಬದುಕಿನ ಕೆಲವು ಪ್ರಸಂಗಗಳನ್ನು ವಿಶ್ಲೇಷಣೆ ಮಾಡಬೇಕಾಗಿ ಬಂದಾಗ ರಾಮಭಕ್ತರಾದ ಸಂಸ್ಕೃತ ವಿದ್ವಾಂಸರೂ ಸಹ ತಡಬಡಾಯಿಸುತ್ತಾರೆ. ಉದಾಹರಣೆಗೆ ರಾವಣನ ಅವಸಾನದ ನಂತರದಲ್ಲಿ ಲಂಕಾ ನಗರಿಯಲ್ಲಿ ತುಂಬಿದ ಸಭೆಗೆ ಸೀತೆಯನ್ನು ಕರೆಸಿ, ನಿಲ್ಲಿಸಿ, ಕೀಳು ಮಾತನ್ನಾಡಿ ಅವಮಾನಿಸಿದ ರಾಮನ ನಡತೆಯನ್ನು ತಣ್ಣಗೆ ಕುಳಿತು ವಿವರಿಸಲಾರರು ವಿದ್ವಾಂಸರು. ಅಥವಾ ಆನಂತರದಲ್ಲಿ ಸೀತೆ ತೀವ್ರ ಹತಾಶೆಯಿಂದ ಅಗ್ನಿಪರೀಕ್ಷೆಗೆ ಮುಂದಾದಾಗ ಹೆಂಡತಿಯನ್ನು ತಡೆಯದೆ ಮುಖ ಊದಿಸಿಕೊಂಡು ನಿಂತ ಗಂಡ ರಾಮನ ನಡತೆಯನ್ನು ಸುಲಭವಾಗಿ ವಿವರಿಸಲಾರರು ಅವರು.

ನಿಷ್ಠುರವಾದ ವಾಸ್ತವತೆಯಿಂದ ವಾಲ್ಮೀಕಿ ಈ ಪ್ರಸಂಗವನ್ನು ಚಿತ್ರಿಸುತ್ತಾರೆ. ‘ಹೆಣ್ಣು ಜಿಂಕೆಯಂತೆ ಬೆದರಿ ಕಣ್ಣೀರು ಸುರಿಸುತ್ತ ತನ್ನೆದುರಿಗೆ ನಿಂತಿದ್ದ ಸೀತೆಯನ್ನು ಕಂಡು ರಾಮನ ಸಿಟ್ಟು, ಬೆಂಕಿಗೆ ತುಪ್ಪ ಸುರಿದಂತೆ, ಮತ್ತಷ್ಟು ಏರಿಕೆಯಾಯ್ತು!... ಕುತೂಹಲಿಗಳಾದ ವಾನರರು ಹಾಗೂ ರಾಕ್ಷಸರು ಸುತ್ತಲೂ ಕಿಕ್ಕಿರಿದು ನೆರೆದಿದ್ದರು!... ಹೀಗೆ ಅಸಹ್ಯಕರ ಗಂಡುಗುಂಪಿನ ನಡುವೆ ತೀವ್ರ ಮುಜುಗರ ಅನುಭವಿಸುತ್ತ ಒಂಟಿಯಾಗಿ ನಿಂತಿದ್ದ ಸೀತೆಯನ್ನು ಉದ್ದೇಶಿಸಿ ಹುಬ್ಬುಗಂಟಿಕ್ಕಿಕೊಂಡು ಬಿರುನುಡಿಗಳನ್ನಾಡಿದನು ರಾಮ,’ ಎನ್ನುತ್ತಾರೆ ವಾಲ್ಮೀಕಿ. ‘ಎಲೆ ಸೀತೆ! ಶತ್ರುವಿನ ದೆಸೆಯಿಂದಾಗಿ ನನಗೆ ಪ್ರಾಪ್ತವಾಗಿದ್ದ ತಿರಸ್ಕಾರವನ್ನು ತೊಡೆದುಹಾಕಿದೆ!... ವಂಶದ ಘನತೆಯನ್ನು ಸಂರಕ್ಷಿಸಿಕೊಳ್ಳಲಿಕ್ಕೆಂದು ಏನೆಲ್ಲ ಮಾಡಬೇಕಿತ್ತೋ ಅದೆಲ್ಲವನ್ನೂ ಮಾಡಿದೆ!... ಸಂದೇಹಾಸ್ಪದ ನಡತೆಯುಳ್ಳವಳು ನೀನು, ನೇತ್ರರೋಗ ಉಳ್ಳವನ ಮುಂದೆ ಪ್ರಜ್ವಲಿಸುವ ದೀಪ ನಿಂತಂತೆ ನಿಂತು ತೊಂದರೆಕೊಡುತ್ತಿದ್ದೀಯ!... ನಿನ್ನಿಂದ ನನಗೇನೂ ಆಗಬೇಕಾದದ್ದಿಲ್ಲ!... ಇಷ್ಟ ಬಂದಲ್ಲಿಗೆ ಹೋಗು!... ರಾವಣನ ತೊಡೆಯಿಂದ ಜಾರಿಬಿದ್ದಿರುವ ನೀನು, ಲಕ್ಷ್ಮಣ ಭರತ ಸುಗ್ರೀವ ವಿಭೀಷಣ ಇತ್ಯಾದಿ ಯಾವುದೇ ಗಂಡಸಿನ ಜೊತೆಗೆ ಬೇಕಿದ್ದರೂ ಹೋಗು!... ನಿನ್ನನ್ನು ಬಿಡುಗಡೆಗೊಳಿಸುತ್ತಿದ್ದೇನೆ!,’ ಎನ್ನುತ್ತಾನೆ ರಾಮ. ಸೀತೆ ಬೆಂಕಿಗೆ ಹಾರಿಕೊಳ್ಳುತ್ತಾಳೆ.

ಸ್ವಾತಂತ್ರ್ಯ ಹೋರಾಟಗಾರರೂ ಸಂಸ್ಕೃತ ಪಂಡಿತರೂ ಆಗಿದ್ದ ರೈಟ್ ರೆವೆರೆಂಡ್ ಶ್ರೀನಿವಾಸ ಶಾಸ್ತ್ರಿಗಳು ಈ ಪ್ರಸಂಗದ ಬಗ್ಗೆ ಮಾತನಾಡುತ್ತ, ‘ಏನು ಹೇಳಲಿ! ರಾವಣನ ಸಾವಿನೊಂದಿಗೆ ರಾಮನಲ್ಲಿದ್ದ ದೈವತ್ವವು, ತೊರೆದು ಹೋಗಿದ್ದಿರಬೇಕಷ್ಟೆ’ ಎಂದು ನಿಡುಸುಯ್ಯುತ್ತಾರೆ. ಮದರಾಸಿನ ಮೈಲಾಪುರದ ಸುಸಂಸ್ಕೃತ ಬ್ರಾಹ್ಮಣ ಪ್ರದೇಶದಲ್ಲಿ, ಕಳೆದ ಶತಮಾನದ ಆರಂಭದಲ್ಲಿ, ರಾಮಭಕ್ತರನ್ನು ಉದ್ದೇಶಿಸಿ ಶಾಸ್ತ್ರಿಗಳು ಆಡಿದ ಮಾತಿದು

ರಾಮನನ್ನು ಒಬ್ಬ ಮಾನವನನ್ನಾಗಿ ಚಿತ್ರಿಸಿದ್ದಾನೆ ವಾಲ್ಮೀಕಿ ಎಂದು ಬಲವಾಗಿ ನಂಬಿದ್ದರು ಶ್ರೀನಿವಾಸ ಶಾಸ್ತ್ರಿಗಳು. ಆದರೆ ಈಗಿನವರು ಹಾಗೆ ತಿಳಿದಿಲ್ಲ. ರಾಮ ಪರಮಾತ್ಮ, ಪರಮಾತ್ಮನ ಲೀಲೆ ಈ ಪ್ರಸಂಗ ಎಂದು ತೇಲಿಸಿ ಬಿಡುತ್ತಾರೆ ಹೆಚ್ಚಿನವರು. ದೇವರೇ ಬೇರೆ ಮನುಷ್ಯನೇ ಬೇರೆ ಎಂಬ ಸರಳೀಕೃತವಾದ, ಇಂತಹ ವಿವರಣೆಗಳಿಂದ ಸಮಕಾಲೀನ ಬದುಕಿಗೆ ಹೆಚ್ಚಿನ ಮಾರ್ಗದರ್ಶನ ಸಿಕ್ಕಲಾರದು. ಉದಾಹರಣೆಗೆ, ಇಂದಿನ ಒಬ್ಬ ಗಂಡ ರಾಮನಂತೆಯೇ ನಡೆದುಕೊಂಡಾಗ, ಇಂದಿನ ಒಬ್ಬ ಹೆಂಡತಿ ಅಸಹಾಯಕಳಾಗಿ ಅಗ್ನಿಪ್ರವೇಶ ಮಾಡಿದಾಗ ದೇವರು ವಿಮಾನದಲ್ಲಿಳಿದು ಬಂದು ಅವಳನ್ನು ಬೆಂಕಿಯಿಂದೆತ್ತಿ ನಿಲ್ಲಿಸುವುದಿಲ್ಲ. ದೇವರು ಇಲ್ಲ ಎಂದು ಹಟ ಮಾಡುತ್ತಿಲ್ಲ ನಾನು. ದೇವರು ಬರುವುದೇ ಆದರೆ ಸಹನೆಯ ರೂಪದಲ್ಲಿ ಗಂಡನ ಹೃದಯದಲ್ಲಿ ಅವತರಿಸಿ ಬರುತ್ತಾನೆ ಎಂದಷ್ಟೇ ಹೇಳುತ್ತಿದ್ದೇನೆ ನಾನು. ದೇವರೆಂದರೆ ಮನುಷ್ಯನ ಒಳದನಿ, ಸಮಾಜದ ಒಳದನಿ.

ಅಗ್ನಿಪರೀಕ್ಷೆಯಲ್ಲಿ ಪರ್ಯವಸಾನ ಹೊಂದುವ ರಾಮಾಯಣದ ಪ್ರಸಂಗವು ವಾಲ್ಮೀಕಿ ಎದುರಿಸುವ ಅತ್ಯಂತ ಕ್ಲಿಷ್ಟಕರ ಪ್ರಸಂಗ ಎಂಬುದರಲ್ಲಿ ಅನುಮಾನವೇ ಇಲ್ಲ. ತಾನೇ ಕಟ್ಟಿ ನಿಲ್ಲಿಸಿದ ಸಭ್ಯತೆಯೊಂದು ತನ್ನ ಕಣ್ಣೆದುರಿಗೇ ಕಳಚಿ ಬೀಳುವ ಸಾಧ್ಯತೆ ಎದುರಾಗುತ್ತದೆ ಕವಿಗೆ. ಆಗ, ಮನುಷ್ಯ ಪ್ರಯತ್ನದ ಹರಿಕಾರನಾದ ಕವಿ ದೈವದ ಸಹಾಯ ಯಾಚಿಸುತ್ತಾನೆ. ಇದು ಕವಿಯ ಸೋಲೇ? ಅಲ್ಲ. ಇಡಿಯ ಪ್ರಸಂಗವನ್ನೇ ಮುಚ್ಚಿ ಹಾಕಿ ಬಿಡಬಹುದಿತ್ತು ಕವಿ. ವಾಸ್ತವ ಮಿತಿಯನ್ನು ಒಪ್ಪಿಕೊಳ್ಳುತ್ತಾನೆ ವಾಲ್ಮೀಕಿ.

ಪುರುಷ ಗುಣದ ಸಮಗ್ರ ವಿಮರ್ಶೆ ಮಾಡಬೇಕಿದೆ ವಾಲ್ಮೀಕಿಗೆ. ಏನಿದು ಪುರುಷ ಗುಣವೆಂದರೆ? ಪುರುಷವೆಂಬುದು ಮೂಲತಃ ಒಂದು ಸಾಮಾಜಿಕ ಗುಣವಾಗಿದೆ. ಅದೇ ಅದರ ಸಮಸ್ಯೆ ಕೂಡಾ. ಪುರುಷವೆಂಬುದು ಒಂದು ಪಾತ್ರ, ನಾಟಕದ ಪಾತ್ರವಿದ್ದಂತೆ! ಅಭಿನಯಿಸಿ ಅಭಿನಯಿಸಿ ಪಾತ್ರದ ಅಹಂಕಾರವು ನಟನ ಕಣಕಣಗಳಲ್ಲಿ ಇಳಿದುಬಿಡುವಂತೆ, ಗಂಡಸಿನ ಕಣಕಣಗಳಲ್ಲಿ ಇಳಿದು ಬಿಟ್ಟಿರುತ್ತದೆ ಪುರುಷ ಅಹಂಕಾರ. ತಾನೊಬ್ಬ ದೊರೆ, ತಾನೊಬ್ಬ ಸನ್ಯಾಸಿ, ತಾನೊಬ್ಬ ತಂದೆ, ತಾನೊಬ್ಬ ಸಭ್ಯ... ಪ್ರಪಂಚವನ್ನು ತಲೆಯ ಮೇಲೆ ಹೊತ್ತು ತಿರುಗುತ್ತಿರುವ ಹರ್ಕ್ಯೂಲೆಸ್  ತಾನು... ಎಂಬಿತ್ಯಾದಿ ಅಹಂಕಾರಗಳು ಅಡಗಿರುತ್ತವೆ ಪುರುಷ ಹೃದಯದಲ್ಲಿ. ರಾವಣನ ಸಾವಿನ ನಂತರದಲ್ಲಿ ತುಂಬಿದ ಸಭೆಯಲ್ಲಿ ರಾಮನನ್ನು ಕಾಡಿದ್ದು ಇದೇ ಅವಗು

ಣವೇ ಸರಿ. ಕಪಿಗಳು, ರಾಕ್ಷಸರು, ನಾಟಕದ ಪ್ರೇಕ್ಷಕರಂತೆ, ಸಾವಿರ ಸಾವಿರ ಸಂಖ್ಯೆಯಲ್ಲಿ ನೆರೆದಿದ್ದಾಗ, ಅವರೆಲ್ಲರೂ ಗಂಡಸರೇ ಆಗಿದ್ದಾಗ, ರಾವಣನ ತೊಡೆಯಿಂದ ಜಾರಿಬಿದ್ದಿರುವ ಹೆಂಗಸೊಬ್ಬಳನ್ನು ಅದು ಹೇಗೆ ತಾನೇ ಸ್ವೀಕರಿಸಿಯಾನು ಈ ಮರ್ಯಾದಾ ಪುರುಷೋತ್ತಮ! ‘ನೋಡಿಯೇ ಬಿಡುತ್ತೇವೆ’, ಎಂದು ನಿಂತಿರುತ್ತದೆ ಪುರುಷ ಸಮಾಜ! ಅಂತಹ ಪರಿಸ್ಥಿತಿಯಲ್ಲಿಟ್ಟು ರಾಮನನ್ನು ಪರೀಕ್ಷಿಸುತ್ತಾನೆ ವಾಲ್ಮೀಕಿ. ರಾಮ ಸೋಲುತ್ತಾನೆ. ಕೆಟ್ಟ ನಟನಂತಾಡುತ್ತಾನೆ.

ಅಮೃತಶಿಲೆಯಲ್ಲಿ ಕಡೆದಿರುವ ಮೂರ್ತಿಯಲ್ಲ ವಾಲ್ಮೀಕಿಯ ರಾಮ; ಬಿಳುಪಾದ ನುಣುಪಾದ ಪ್ರಶ್ನಾತೀತವಾದ, ಆದರೆ ಜೀವರಹಿತವಾದ, ಮೂರ್ತಿಯಲ್ಲ. ಆತನೊಬ್ಬ ಜೀವಂತ ಮನುಷ್ಯ. ಗ್ರಾಮೀಣ ಬಡವರು ರೈತರು ಕುಶಲಕರ್ಮಿಗಳು, ಒಟ್ಟಾರೆಯಾಗಿ ‘ಮಿಥಿಲೆಯ ಮಂದಿ’ ರಾಮನ ಮಾನವೀಯ ಗುಣಗಳನ್ನು ಗುರುತಿಸಬಲ್ಲವರಾಗಿದ್ದರು. ಅವರ ಸೀತಾರಾಮ ಮಂದಿರಗಳು ಮಾನವೀಯತೆಯ ಸರಳ ನೆಲೆಗಳಾಗಿದ್ದವು. ಈಗ ಎಲ್ಲ ಬದಲಾಗಿದೆ.

ನಾವು, ಯಂತ್ರ ನಾಗರೀಕರು, ಅಮೃತಶಿಲೆಯ ಮೂರ್ತಿಯ ನಿರ್ಮಾಣ ಮಾಡಲಿಕ್ಕೆ ಹೊರಟಿದ್ದೇವೆ. ಹೆಣ್ಣು ಹಾಗೂ ಪ್ರಕೃತಿ ಎರಡನ್ನೂ ಭೋಗದ ವಸ್ತುವಾಗಿಸಿರುವ ಈ ರಾಕ್ಷಸ ವ್ಯವಸ್ಥೆಯ ವಿರುದ್ಧ ಯುದ್ಧ ಹೂಡಲಾರದೆ ಸಾಬರು, ಸಿಂಗರು, ಕ್ರೈಸ್ತರು ಎಂಬಿತ್ಯಾದಿ, ಇತರರನ್ನು ಶತ್ರುಗಳನ್ನಾಗಿ ರಾಮನೆದುರಿಗೆ ನಿಲ್ಲಿಸತೊಡಗಿದ್ದೇವೆ. ಆಧುನಿಕವಾದದ್ದೆಲ್ಲವೂ ತಿರಸ್ಕಾರ ಯೋಗ್ಯವಾದದ್ದು ಎಂಬ ಉದ್ಧಟ ಮೌಢ್ಯ ಬೇರೆ ಕಾಡುತ್ತಿದೆ ನಮಗೆ. ಮೌಢ್ಯವೇ ನಮ್ಮ ಅಹಂಕಾರ. ಮೌಢ್ಯವನ್ನು ಕೇವಲ ಒಂದು ತಲೆಯಲ್ಲಿ ಧರಿಸದೆ, ರಾವಣನಂತೆ ಹತ್ತು ತಲೆಯಲ್ಲಿ ಧರಿಸಿ ಮೆರೆಯುತ್ತಿದ್ದೇವೆ. ನಮ್ಮ ಹೆಂಗಸರೂ ಕಡಿಮೆಯೇನಿಲ್ಲ. ಹೆಚ್ಚಿನವರು, ಕೈಕೇಯಿತನವನ್ನು ಕರಗತ ಮಾಡಿಕೊಂಡಿರುವ ಕಲಾವಿದೆಯರೇ ಆಗಿದ್ದಾರೆ. ‘ಸಭ್ಯ’ ಹಿಂಸೆ ನಮ್ಮೆಲ್ಲರಲ್ಲೂ ಅಡಗಿ ಕುಳಿತಿದೆ.

ಆಧುನಿಕ ಪುರುಷರಲ್ಲಿ ಸಹ ಅನೇಕ ಸಭ್ಯ ಪುರುಷರನ್ನು ಕಂಡಿದ್ದೇನೆ ನಾನು. ಹಿಂದೂಗಳಲ್ಲಿ, ಮುಸಲ್ಮಾನರಲ್ಲಿ, ಪಾಶ್ಚಿಮಾತ್ಯರಲ್ಲಿ ಎಲ್ಲರಲ್ಲೂ ಸಭ್ಯತೆಯ ಪ್ರತಿರೂಪಗಳನ್ನು ಕಂಡಿದ್ದೇನೆ, ಕಂಡು ಬೆರಗು ಪಟ್ಟಿದ್ದೇನೆ. ಹಟ ಹಿಡಿದು ಇಪ್ಪತ್ತೊಂದನೆಯ ಶತಮಾನಕ್ಕೆ ಸಭ್ಯತೆಯನ್ನು ಬಗ್ಗಿಸಿ ಹೊಂದಿಸುತ್ತಿರುವ ಮಹನೀಯರು ಇವರು. ಸ್ತ್ರೀವಾದ ಕೂಡ ಸಾಕಷ್ಟು ದೂರ ಬಂದಿದೆ. ಇಬ್ಸನ್ನನ ನಾಟಕ ‘ಎ ಡಾಲ್ಸ್ ಹೌಸ್‌’ನ ನೋರಾಳಂತೆ ‘ಸೀತೆಯರು ದಾಂಪತ್ಯ

ದಿಂದ ಪ್ರತಿಭಟಿಸಿ ಹೊರನಡೆಯಬೇಕಿತ್ತು’ ಎಂದು ಅಬ್ಬರಿಸುತ್ತಿದ್ದ ಸ್ತ್ರೀವಾದ ಇಂದು ಮಾಗಿದೆ. ದಾಂಪತ್ಯದ ಅಗತ್ಯವನ್ನು ಮನಗಂಡಿದೆ. ಮಕ್ಕಳ ಸಲುವಾಗಿ ಮನಗಂಡಿದೆ.

ರಾಮಾಯಣದ ಮೂಲ ಆಶಯ ಇತ್ತ ಆಧುನಿಕವೂ ಆಗಿದೆ ಅತ್ತ ಪಾರಂಪರಿಕವೂ ಆಗಿದೆ. ಸಮಸ್ಯೆಯಿರುವುದು ಸರಳೀಕರಿಸಿದ ರಾಮಭಕ್ತಿಯ ರಾಜಕಾರಣದಲ್ಲಿ. ಈ ರಾಜಕಾರಣವನ್ನು ನಾವೆಲ್ಲರೂ ಮಾಡುತ್ತಲಿದ್ದೇವೆ. ಸುಲಭವಾಗಿ ತಿರಸ್ಕರಿಸುವವರೂ ಮಾಡುತ್ತಿದ್ದೇವೆ, ಸುಲಭವಾಗಿ ಹೊತ್ತು ತಿರುಗುತ್ತಿರುವವರೂ ಮಾಡುತ್ತಿದ್ದೇವೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry