ಸ್ಮಾರ್ಟ್ ಟಿ.ವಿ.ಯ ಸ್ಮಾರ್ಟ್ ಗುಣಗಳು

7

ಸ್ಮಾರ್ಟ್ ಟಿ.ವಿ.ಯ ಸ್ಮಾರ್ಟ್ ಗುಣಗಳು

ಯು.ಬಿ. ಪವನಜ
Published:
Updated:
ಸ್ಮಾರ್ಟ್ ಟಿ.ವಿ.ಯ ಸ್ಮಾರ್ಟ್ ಗುಣಗಳು

ಸಾಮಾನ್ಯವಾಗಿ ಎಲ್ಲರ ಮನೆಗಳಲ್ಲಿರುವ ಟಿ.ವಿ. ಎಂಬ ಮೂರ್ಖರ ಪೆಟ್ಟಿಗೆಯ ಬಳಕೆಯನ್ನು ಸ್ವಲ್ಪ ಪರಿಶೀಲಿಸಿ ನೊಡಿ. ಅದರಲ್ಲಿ ಏನೇನು ಮಾಡುತ್ತೀರಾ? ಇದೆಂತಹ ಪ್ರಶ್ನೆ? ಟಿ.ವಿ.ಯಲ್ಲಿ ಏನೇನು ಮಾಡಲು ಸಾಧ್ಯ, ಟಿ.ವಿ. ಕಾರ್ಯಕ್ರಮಗಳನ್ನು ನೋಡುವುದು ಹೊರತುಪಡಿಸಿ? ಅಬ್ಬಬ್ಬ ಎಂದರೆ ಡಿವಿಡಿ ಪ್ಲೇಯರ್‌ಗೆ ಜೋಡಿಸಿ ಸಿನಿಮಾ ನೋಡುತ್ತೇವೆ ಅಷ್ಟೆ, ಎಂಬ ಉತ್ತರ ಬರುತ್ತದೆ ತಾನೆ?

ಇತ್ತೀಚೆಗೆ ಯಾವತ್ತಾದರೂ ಒಂದು ಹೊಸ ಟಿ.ವಿ. ಕೊಳ್ಳೋಣ ಎನಿಸಿ ಅಂಗಡಿಗೆ ಹೋಗಿದ್ದೀರಾ? ಹಾಗಿದ್ದಲ್ಲಿ ನಿಮ್ಮ ಕಿವಿಗೆ ಖಂಡಿತವಾಗಿಯೂ ಈ ಸ್ಮಾರ್ಟ್ ಟಿ.ವಿ. ಎಂಬ ಪದ ಬಿದ್ದಿರುತ್ತದೆ. ಅಂಗಡಿಯಾತ ಖಂಡಿತ ಕೇಳುವ ಪ್ರಶ್ನೆ ಹೀಗಿರುತ್ತದೆ. ಯಾವ ಟಿ.ವಿ. ಕೊಡಲಿ? ಪ್ಲಾಸ್ಮ್, ಎಲ್‌ಸಿಡಿ, ಎಲ್‌ಇಡಿ, ಯಾವುದು ಕೊಡಲಿ? ನಿಮಗೆ ಸ್ಮಾರ್ಟ್ ಟಿ.ವಿ. ಬೇಕಾ? . ಈ ಪ್ರಶ್ನೆಯಲ್ಲಿ ಮೊದಲ ಮೂರು ಏನು ಎಂದು ಈಗಾಗಲೆ ನಾವು ತಿಳಿದಿದ್ದೇವೆ. ಏನಿದು ಸ್ಮಾರ್ಟ್‌ಟಿ.ವಿ.?ಸ್ಮಾರ್ಟ್‌ಫೋನ್‌ಗಳ ಬಗ್ಗೆ ನಾವು ಈಗಾಗಲೆ ತುಂಬ ತಿಳಿದುಕೊಂಡಿದ್ದೇವೆ. ಈ ಸ್ಮಾರ್ಟ್‌ಟಿ.ವಿ.ಗಳೂ ಸ್ಮಾರ್ಟ್‌ಫೋನ್‌ಗಳಂತೆಯೇ. ಇವುಗಳ ಮುಖ್ಯ ಗುಣವೈಶಿಷ್ಟ್ಯಗಳು -ಅಂತರಜಾಲ ಸಂಪರ್ಕ, ಅಂತರಜಾಲ ವೀಕ್ಷಣೆ, ಯುಟ್ಯೂಬ್ ಮತ್ತು ಅಂತಹುದೇ ಅಂತರಜಾಲಾಧಾರಿತ ವಿಡಿಯೋ ಚಾನೆಲ್‌ಗಳ ವೀಕ್ಷಣೆ, ಮನೆಯ ಗಣಕ ಜಾಲಕ್ಕೆ ಸೇರ್ಪಡೆ, ಸ್ಮಾರ್ಟ್‌ಫೋನ್‌ಗಳಲ್ಲಿರುವಂತೆಯೇ ಹಲವು ಕಿರುತಂತ್ರಾಂಶಗಳು (apps), ಇತ್ಯಾದಿ. ಈ ಟಿ.ವಿ.ಗಳು ಪ್ರತಿಸ್ಪಂದನಾತ್ಮಕವಾಗಿರುತ್ತವೆ interactive). ಸ್ಮಾರ್ಟ್ ಟಿ.ವಿ.ಗೂ ಪ್ಲಾಸ್ಮ, ಎಲ್‌ಸಿಡಿ, ಎಲ್‌ಇಡಿ ಟಿ.ವಿ.ಗಳಿಗೆ ಇರುವ ವ್ಯತ್ಯಾಸವೇನು ಎಂದು ಕೇಳಿದರೆ ಉತ್ತರ ಸರಳ. ಈ ಮೂರೂ ನಮೂನೆಯ ಟಿ.ವಿ.ಗಳಲ್ಲಿ ಸ್ಮಾರ್ಟ್ ಟಿ.ವಿ.ಗಳು ದೊರೆಯುತ್ತವೆ. ಅಂದರೆ ಎಲ್ಲ ಆಧುನಿಕ ಟಿ.ವಿ.ಗಳೂ ಸ್ಮಾರ್ಟ್ ಆಗಬಹುದು.ಸ್ಮಾರ್ಟ್ ಟಿ.ವಿ.ಗಳ ಒಂದು ಪ್ರಮುಖ ಲಕ್ಷಣ ಕಿರುತಂತ್ರಾಂಶಗಳು (ಆಪ್). ತಂತ್ರಾಂಶ ತಯಾರಕರುಗಳಿಗೆ ಈ ಕಿರುತಂತ್ರಾಂಶ ತಯಾರಿ ಒಂದು ದೊಡ್ಡ ಅವಕಾಶವಾಗಲಿದೆ. ಸ್ಮಾರ್ಟ್ ಟಿ.ವಿ. ಕೊಳ್ಳುವಾಗ ಅದರಲ್ಲಿ ಕೆಲವು ಕಿರುತಂತ್ರಾಂಶಗಳು ಅಡಕವಾಗಿರುತ್ತವೆ. ಸ್ಮಾರ್ಟ್‌ಫೋನ್‌ಗಳಲ್ಲಿರುವಂತೆಯೇ ಈ ಟಿ.ವಿ.ಗಳಲ್ಲೂ ಆಗಾಗ ತಂತ್ರಾಂಶವನ್ನು ಅಂತರಜಾಲದ ಮೂಲಕ ನವೀಕರಿಸಿಕೊಳ್ಳಬಹುದು. ಆಗ ಇನ್ನಷ್ಟು ಹೊಸ ಕಿರುತಂತ್ರಾಂಶಗಳು ಸೇರ್ಪಡೆಯಾಗುತ್ತವೆ. ಕಿರುತಂತ್ರಾಂಶಗಳಿಗೆ ಕೆಲವು ಉದಾಹರಣೆಗಳು -ಯುಟ್ಯೂಬ್ ವೀಕ್ಷಣೆಗೆ, ಡಿವಿಡಿ ಬಾಡಿಗೆಗೆ ಪಡೆಯಲು, ಇತ್ತೀಚಿನ ಸುದ್ದಿ ಓದಲು, ಅಂತರಜಾಲ ಮೂಲಕ ಪ್ರಸಾರವಾಗುವ ಟಿ.ವಿ. ಕಾರ್ಯಕ್ರಮ ಮತ್ತು ವಿಡಿಯೋ ಚಾನೆಲ್‌ಗಳನ್ನು ವೀಕ್ಷಿಸಲು, ಆಟಗಳು, ಇಮೇಲ್ ಓದಲು, ಜಾಲತಾಣ ವೀಕ್ಷಣೆಗೆ, ಇತ್ಯಾದಿ.ತುಂಬ ಜನಪ್ರಿಯವಾಗಿರುವ ಕಿರುತಂತ್ರಾಂಶ ಎಂದರೆ ಯುಟ್ಯೂಬ್ ಆಪ್. ಈ ಕಿರುತಂತ್ರಾಂಶ ಬಳಸಿ ಯುಟ್ಯೂಬ್ ವಿಡಿಯೋಗಳನ್ನು ಹಲವು ರೆಸೊಲೂಶನ್‌ಗಳಲ್ಲಿ ವೀಕ್ಷಿಸಬಹುದು. ಹೈಡೆಫಿನಿಶನ್‌ನಲ್ಲಿ ನೋಡಿದರೆ ಉತ್ತಮ ಅನುಭವ ಆಗುತ್ತದೆ. ಆದರೆ ಗಮನಿಸಿ -ಹೈಡೆಫಿನಿಶನ್ ವಿಡಿಯೋಗೆ ಹೆಚ್ಚಿನ ಅಂತರಜಾಲ ಬ್ಯಾಂಡ್‌ವಿಡ್ತ್ ಬೇಕು.ಸ್ಮಾರ್ಟ್‌ಟಿ.ವಿ. ಎಂದರೆ ಡಿಎಲ್‌ಎನ್‌ಎ ಇರುವುದು ಅಗತ್ಯ. ಡಿಎಲ್‌ಎನ್‌ಎ (DLNA - Digital Living Network Alliance)  ಎಂದರೆ ಮನೆಗಳಲ್ಲಿ ಬಳಸುವ ಮನರಂಜನೆಯ ಉಪಕರಣಗಳನ್ನು ಮತ್ತು ಗಣಕಗಳನ್ನು ಒಂದು ಶಿಷ್ಟ ಜಾಲದಲ್ಲಿ ಬೆಸೆಯಲು ಸ್ಥಾಪಿಸಿರುವ ಸಂಸ್ಥೆ. ಇದು ಇದಕ್ಕೆ ಸಂಬಂಧಿತ ಶಿಷ್ಟತೆಗಳನ್ನು ತಯಾರಿಸುತ್ತದೆ. ಸ್ಮಾರ್ಟ್ ಟಿ.ವಿ.ಗಳು ಡಿಎಲ್‌ಎನ್‌ಎ ಪ್ರಮಾಣಪತ್ರ ಪಡೆದಿರುತ್ತವೆ. ಅದಿಲ್ಲದಿದ್ದಲ್ಲಿ ಅವುಗಳು ಎಲ್ಲ ಕೆಲಸಗಳನ್ನು ಸರಿಯಾಗಿ ಮಾಡುತ್ತವೆ ಎಂಬುದು ಅನುಮಾನ.www.dlna.orgಜಾಲತಾಣದಲ್ಲಿ ಡಿಎಲ್‌ಎನ್‌ಎ ಶಿಷ್ಟತೆ ಬಗ್ಗೆ ವಿವರಗಳು ದೊರೆಯುತ್ತವೆ. ಹಲವಾರು ಉದಾಹರಣೆಗಳೂ ಇವೆ. ಯಾವ ಯಾವ ಕಂಪೆನಿಯ ಯಾವ ಯಾವ ಉಪಕರಣಗಳು ಡಿಎಲ್‌ಎನ್‌ಎ ಪ್ರಮಾಣಪತ್ರ ಪಡೆದಿವೆ ಎಂಬ ಯಾದಿಯೂ ಇದೆ. ಸ್ಮಾರ್ಟ್‌ಟಿ.ವಿ. ಕೊಳ್ಳಲು ಆಲೋಚಿಸುತ್ತಿದ್ದಲ್ಲಿ ಈ ಜಾಲತಾಣಕ್ಕೆ ಭೇಟಿ ನೀಡಿ ಯಾವ ಯಾವ ಟಿ.ವಿ.ಗಳು ಪ್ರಮಾಣಪತ್ರ ಪಡೆದಿವೆ ಎಂದು ಪರಿಶೀಲಿಸಲು ಮರೆಯಬೇಡಿ. ನಿಮ್ಮಲ್ಲಿ ಸ್ಮಾರ್ಟ್‌ಫೋನ್ ಇದ್ದಲ್ಲಿ ಅದಕ್ಕೆ ಸೂಕ್ತ ಕಿರುತಂತ್ರಾಂಶ ಕೂಡ ಲಭ್ಯ. ಅದನ್ನು ಬಳಸಿ ಅಂಗಡಿಯಲ್ಲಿ ಟಿ.ವಿ.ಯ ಮಾದರಿ ಸಂಖ್ಯೆ ಊಡಿಸಿ ಪರಿಶೀಲಿಸಬಹುದು.ಸ್ಮಾರ್ಟ್ ಟಿ.ವಿ.ಯನ್ನು ಸ್ಮಾರ್ಟ್ ಆಗಿ ಬಳಸಲು ನಿಮ್ಮ ಮನೆಯಲ್ಲಿ ಗಣಕಜಾಲ ಮತ್ತು ಅಂತರಜಾಲ ಸಂಪರ್ಕ ಅಗತ್ಯ. ಸ್ಮಾರ್ಟ್ ಟಿ.ವಿ.ಯಲ್ಲಿ ಗಣಕಜಾಲಕ್ಕೆ ಸೇರಿಸಲು ಇಥರ್‌ನೆಟ್ (ethernet) ಕಿಂಡಿ (ಪೋರ್ಟ್) ಇರುತ್ತದೆ. ಇಥರ್‌ನೆಟ್ ಕೇಬಲ್ ಮೂಲಕ ನಿಮ್ಮ ಗಣಕಜಾಲದ ಹಬ್‌ಗೆ ಜೋಡಿಸಬಹುದು. ನಂತರ ಗಣಕದಲ್ಲಿ ಸಂಗ್ರಹವಾಗಿರುವ ವಿಡಿಯೋ, ಸಿನಿಮಾ, ಸಂಗೀತ, ಫೋಟೊಗಳನ್ನೆಲ್ಲ ಟಿ.ವಿ.ಯಲ್ಲಿ ವೀಕ್ಷಿಸಬಹುದು. ಅಂತರಜಾಲ ವೀಕ್ಷಣೆಯನ್ನೂ ಮಾಡಬಹುದು. ಸಾಮಾನ್ಯವಾಗಿ ಎಲ್ಲ ಸ್ಮಾರ್ಟ್ ಟಿ.ವಿ.ಗಳಲ್ಲಿ ಯುಎಸ್‌ಬಿ ಕಿಂಡಿ ಇರುತ್ತದೆ.ಕೆಲವು ಟಿ.ವಿ.ಗಳಿಗೆ ಯುಎಸ್‌ಬಿ ಕೀಲಿಮಣೆಯನ್ನೂ ಜೋಡಿಸಬಹುದು. ಈ ಕೀಲಿಮಣೆ ಬಳಸಿ ಅಂತರಜಾಲ ವೀಕ್ಷಣೆ, ಇಮೇಲ್ ಎಲ್ಲ ಮಾಡಬಹುದು. ಕೆಲವು ಟಿ.ವಿ.ಗಳು ವೈಫೈ ಸಿದ್ಧವಾಗಿರುತ್ತವೆ (WiFi ready). ಅಂತಹವುಗಳಿಗೆ ವೈಫೈ ಡಾಂಗಲ್ ಅನ್ನು ಪ್ರತ್ಯೇಕ ಹಣಕೊಟ್ಟು ಕೊಂಡುಕೊಂಡು ಜೋಡಿಸಬಹುದು. ಕೆಲವು ಸ್ಮಾರ್ಟ್‌ಟಿ.ವಿ.ಗಳಲ್ಲಿ ವೈಫೈ ಸೌಲಭ್ಯ ಅದರಲ್ಲೇ ಅಡಕವಾಗಿರುತ್ತದೆ. ಅಂತಹವುಗಳಿಗೆ ವೈಫೈ ಡಾಂಗಲ್ ಅಗತ್ಯವಿಲ್ಲ.ಟಿ.ವಿ.ಯನ್ನು ಮನೆಯ ಗಣಕ ಜಾಲಕ್ಕೆ ವೈಫೈ ಮೂಲಕ (ನಿಸ್ತಂತು) ಜೋಡಿಸಬಹುದು. ಆಗ ಇಥರ್‌ನೆಟ್ ಕೇಬಲ್ ಅಗತ್ಯವಿಲ್ಲ. ಇತ್ತೀಚೆಗೆ ವೈಫೈ ಸೌಲಭ್ಯ ಇರುವ ಹಾರ್ಡ್‌ಡಿಸ್ಕ್ ಮಾರುಕಟ್ಟೆಯಲ್ಲಿ ದೊರೆಯುತ್ತದೆ. ಇದರಲ್ಲೂ ಸಿನಿಮಾ ತುಂಬಿಸಿ ಟಿ.ವಿ. ಮೂಲಕ (ವೈಫೈ ಇದ್ದಲ್ಲಿ) ನೋಡಬಹುದು. ಇತ್ತೀಚಿನ ಸ್ಮಾರ್ಟ್ ಫೋನ್‌ಗಳಲ್ಲೂ ಡಿಎಲ್‌ಎನ್‌ಎ ಇರುತ್ತದೆ. ಅಂತಹ ಫೋನ್‌ಗಳಲ್ಲಿ ಇರುವ ಸಿನಿಮಾ, ವಿಡಿಯೋ, ಸಂಗೀತ, ಚಿತ್ರ, ಇತ್ಯಾದಿಗಳನ್ನು ಟಿ.ವಿ. ಮೂಲಕ ನೋಡಬಹುದು. ಸ್ಮಾರ್ಟ್ ಅಲ್ಲದ ಟಿ.ವಿ.ಗಳಲ್ಲೂ ಯುಎಸ್‌ಬಿ ಕಿಂಡಿ ಇದ್ದಲ್ಲಿ ಸಿನಿಮಾ, ವಿಡಿಯೋ, ಚಿತ್ರಗಳನ್ನು ಯುಸ್‌ಬಿ ಡ್ರೈವ್‌ನಲ್ಲಿ ಹಾಕಿ ಅದನ್ನು ಜೋಡಿಸಿ ನೋಡಬಹುದು.ಸ್ಮಾರ್ಟ್‌ಟಿ.ವಿ. ಕೊಳ್ಳುವುದು ಹೇಗೆ?

ಸ್ಮಾರ್ಟ್‌ಟಿ.ವಿ. ಕೊಳ್ಳಲು ಯಾವೆಲ್ಲ ಮಾನದಂಡಗಳನ್ನು ಗಮನಿಸಬೇಕು? ಟಿ.ವಿ.ಯಲ್ಲಿ ಎಷ್ಟು ನಮೂನೆಯ ಸಂಪರ್ಕಗಳಿವೆ, ಯಾವೆಲ್ಲ ವಿಡಿಯೋಗಳನ್ನು ಪ್ಲೇ ಮಾಡುತ್ತದೆ, ಯುಎಸ್‌ಬಿ ಕಿಂಡಿ ಮತ್ತು ಎಚ್‌ಡಿಎಂಐ ಇದೆಯೇ ಇಲ್ಲವೇ, ಇಥರ್‌ನೆಟ್ ಕಿಂಡಿ ಇದೆಯೇ, ವೈಫೈ ಸವಲತ್ತು ಟಿ.ವಿ.ಯಲ್ಲೇ ಅಡಕವಾಗಿದೆಯೇ ಅಥವಾ ಅದಕ್ಕೆ ಪ್ರತ್ಯೇಕ ಡಾಂಗಲ್ ಸೇರಿಸಬೇಕಾಗಿದೆಯೇ (ಗಮನಿಸಿ, ಕೆಲವು ಸ್ಮಾರ್ಟ್‌ಟಿ.ವಿ.ಗಳು ವೈಫೈ ಸಿದ್ಧ ಇರುವುದಿಲ್ಲ), ಪೂರ್ತಿ ಹೈಡೆಫಿನಿಶನ್ (full HD  )ಇದೆಯೇ (ಕೆಲವೊಮ್ಮ ಅರ್ಧ ಹೈಡೆಫಿನಿಶನ್ ಇರುತ್ತದೆ), ಇತ್ಯಾದಿ. ಈಗಾಗಲೆ ತಿಳಿಸಿದಂತೆ ಸ್ಮಾರ್ಟ್‌ಟಿ.ವಿ.ಗಳು ಪ್ಲಾಸ್ಮ, ಎಲ್‌ಸಿಡಿ ಅಥವಾ ಎಲ್‌ಇಡಿ -ಯಾವುದೂ ಆಗಿರಬಹುದು. ಅವುಗಳ ಹೋಲಿಕೆಯನ್ನು ಹಿಂದಿನ ಸಂಚಿಕೆಗಳಲ್ಲಿ ವಿವರಿಸಿ ಆಗಿದೆ.ಗ್ಯಾಜೆಟ್ ಸಲಹೆ

ಸಂಜಯ ಬಾಬು ಅವರ ಪ್ರಶ್ನೆ: ವಿಂಡೋಸ್7 ಲ್ಯಾಪ್‌ಟಾಪ್ ಕೊಂಡುಕೊಂಡು ಅದನ್ನು ವಿಂಡೋಸ್8ಕ್ಕೆ ನವೀಕರಿಸಿಕೊಂಡರೆ ಹೊಸ ವಿಂಡೋಸ್8 ಲ್ಯಾಪ್‌ಟಾಪ್ ಕೊಂಡುಕೊಂಡ ಅನುಭವವೇ ಬರುತ್ತದೆಯೆ?

ಉ: ಹೌದು. ಆದರೆ ಒಂದು ವಿಷಯ ನೆನಪಿಟ್ಟುಕೊಳ್ಳಿ. ವಿಂಡೋಸ್8ರ ಪೂರ್ತಿ ಶಕ್ತಿಯ ಅನುಭವ ಬೇಕಿದ್ದಲ್ಲಿ ಸ್ಪರ್ಶಸಂವೇದಿ ಪರದೆ (touchscreen) ಅಗತ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry