ಸ್ವಗತ ಮತ್ತು ಸಂವಾದ

7

ಸ್ವಗತ ಮತ್ತು ಸಂವಾದ

ಓ.ಎಲ್. ನಾಗಭೂಷಣಸ್ವಾಮಿ
Published:
Updated:

ಬದುಕು ಭಾಷೆಯೊಳಕ್ಕೆ ಪ್ರವೇಶಿಸುವುದು, ಭಾಷೆ ಬದುಕಿನೊಳಕ್ಕೆ ಪ್ರವೇಶಿಸುವುದು ಉಕ್ತಿಯ ಮೂಲಕವೇ. ಈ ಉಕ್ತಿಯ ಸ್ವರೂಪವನ್ನು ಉದಾಸೀನ ಮಾಡಿ, ವಿವಿಧ ಬಗೆಯ ಉಕ್ತಿಗಳ ವಿಶೇಷತೆಯನ್ನು ಗಮನಿಸದೆ ಇರುವ ಎಲ್ಲ ಭಾಷಿಕ ಅಧ್ಯಯನಗಳೂ ಅತಿಯಾದ ಅಮೂರ್ತತೆಯಲ್ಲಿ ಕಳೆದುಹೋಗುತ್ತವೆ, ಬದುಕಿಗೂ ಭಾಷೆಗೂ ಇರುವ ಸಂಬಂಧದ ಕೊಂಡಿಯನ್ನು ದುರ್ಬಲಗೊಳಿಸುತ್ತವೆ. ಜನ ನಿಜವಾಗಿ ಆಡುವ ಮಾತಿನ, ಉಕ್ತಿಯ ಸ್ವರೂಪವನ್ನು ತಿಳಿಯದಿದ್ದರೆ ವ್ಯಾಕರಣ, ಧ್ವನಿಶಾಸ್ತ್ರ ಇವೆಲ್ಲ ಬಂಜರು ಶಾಸ್ತ್ರಗಳು. 


 

`ಶುದ್ಧ'ವಾದ ಸ್ವಗತವೆನ್ನುವುದು ಇರಲು ಸಾಧ್ಯವಿಲ್ಲ. ಅಕಸ್ಮಾತ್ ಇದ್ದರೆ ಅದು `ಅನ್ಯ'ರನ್ನು ಸಂಪೂರ್ಣವಾಗಿ ನಿರಾಕರಿಸಿ, ಧಿಕ್ಕರಿಸಿ ತನಗೆ ತಾನೇ ಇರುತ್ತದೆ. ಇನ್ನೊಂದು ಪ್ರಜ್ಞೆ ಇದೆ, ತಾನು ಮಾತ್ರವಲ್ಲದೆ ಇತರ ಪ್ರಜ್ಞೆಗಳೂ ಈ ಲೋಕದಲ್ಲಿವೆ ಅನ್ನುವುದನ್ನು ಲಕ್ಷಿಸುವುದೇ ಇಲ್ಲ. ಆದರೆ ಸ್ವಗತವನ್ನು ನುಡಿದುಕೊಳ್ಳುತ್ತಿರುವಾಗಲೂ ಅಸ್ಪಷ್ಟವಾಗಿಯಾದರೂ ಇನ್ನೊಬ್ಬರು ಯಾರೋ ನಮ್ಮ ಮನಸಿನಲ್ಲಿರುತ್ತಾರೆ, ಅಥವಾ ನಾವೇ ಇನ್ನೊಬ್ಬ ಕೇಳುಗರಾಗಿ ಹೇಳಿಕೊಳ್ಳುತ್ತಿರುತ್ತೇವೆ.ಸ್ವಗತದ ಮುಖ್ಯ ಲಕ್ಷಣವೆಂದರೆ ಕಲ್ಪಿತವಾದ ಇನ್ನೊಬ್ಬ ವ್ಯಕ್ತಿ ಕೂಡ ಕೇವಲ ನಿರ್ಜೀವ ವಸ್ತುವಿನಂತೆ ಇರಬಹುದೇ ಹೊರತು ನನ್ನ ಸ್ವಗತವನ್ನು ಕೇಳಿ ನನ್ನ ಪ್ರಜ್ಞೆಯಲ್ಲಿ ಬದಲಾವಣೆ ತರಬಲ್ಲ ಜೀವಂತ ಪ್ರಜ್ಞೆಯಾಗಿ ಇರುವುದಿಲ್ಲ.ಸ್ವಗತವು ತಾನೇ ಅಂತಿಮ ಅನ್ನುವ ಹಾಗೆ ನಟಿಸುತ್ತದೆ, ಲೋಕವನ್ನೂ ಇತರರನ್ನೂ ಒಳಗುಮಾಡಿಕೊಳ್ಳದೆ ಬಾಗಿಲು ಮುಚ್ಚಿಕೊಂಡಿರುತ್ತದೆ. 

 

ಬದುಕು ಹೀಗಿರುವುದಿಲ್ಲ. ಬದುಕು ಅನುಭವಿಸಬೇಕಾದದ್ದೇ ಹೊರತು ಆಲೋಚಿಸಬೇಕಾದದ್ದಲ್ಲ. ಬದುಕು ಅಂದರೇನೇ ತನಗಿಂತ ಅನ್ಯರಾದವರೊಡನೆ ನಡೆಸುವ ಆದಿಯೂ ಇಲ್ಲದ ಅಂತ್ಯವೂ ಇಲ್ಲದ ಸಂವಾದ. ಬದುಕುವುದೆಂದರೆ ಸಂವಾದದಲ್ಲಿ ಪಾಲ್ಗೊಳ್ಳುವುದೆಂದೇ ಅರ್ಥ. ಅನ್ಯರು ಆಡಿದ್ದನ್ನು ಪ್ರಶ್ನಿಸುತ್ತ, ಕೇಳುತ್ತ, ಅದಕ್ಕೆ ಮಿಡಿಯುತ್ತ, ಒಪ್ಪುತ್ತ, ನಿರಾಕರಿಸುತ್ತ ಸಂವಾದದಲ್ಲಿ ಪಾಲ್ಗೊಳ್ಳುವುದೇ ಬದುಕು.ಕಣ್ಣು, ತುಟಿ, ಕೈ, ಇಡೀ ಮೈ, ಮನಸ್ಸು, ಆತ್ಮ ಎಲ್ಲವನ್ನೂ ಅಥವ ಕೆಲವನ್ನು ತೊಡಗಿಸಿಕೊಂಡು ಸಂವಾದದಲ್ಲಿ ಪಾಲುಪಡೆಯುವುದು ಬದುಕು. ಇಡೀ ಜಗತ್ತೆ ನುಡಿಯ ಮೂಲಕ ವ್ಯಕ್ತವಾಗುತ್ತಿರುವ ಭಾವಗಳ, ವಿಚಾರಗಳ, ಮೌಲ್ಯಮಾಪನಗಳ ಜಟಿಲ ನೇಯ್ಗೆಯ ಒಂದು ಸಂಕಿರಣ.

 

ಸಂವಾದದಲ್ಲಿ ಪಾಲ್ಗೊಳ್ಳುವುದು ಅಂದರೆ ಈಗಾಗಲೇ ನಡೆಯುತ್ತಿರುವ ಮಾತು ಕೇಳಿಸಿಕೊಳ್ಳುತ್ತಾ ಅದಕ್ಕೆ ನನ್ನ ಪ್ರತಿಮಾತನ್ನು ಸೇರಿಸುವುದು. ಸುಮ್ಮನೆ ಯೋಚಿಸಿ ನೋಡಿ. ನಾವಾಡುವ ನುಡಿಗಳೆಲ್ಲ ಪಡಿನುಡಿಗಳೇ, ಪ್ರತಿ-ನುಡಿಗಳೇ. ಅರ್ಥಮಾಡಿಕೊಳ್ಳುವುದೆಂದರೆ ಕೇಳಿಸಿಕೊಂಡ ಮಾತಿಗೆ ಸ್ಪಂದಿಸುವುದು ಅಲ್ಲವೇ. ಸ್ಪಂದಿಸುವುದೆಂದರೆ ಕ್ರಿಯೆಯ ಮೂಲಕವೋ, ಮಾತಿನ ಮೂಲಕವೋ ನಮಗೆ ಆದ ಅರ್ಥವನ್ನು ವ್ಯಕ್ತಪಡಿಸುವುದು.ಕೂತುಕೋ, ಬಾಗಿಲು ಹಾಕು, ಪೀಛೇ ಮುಡ್, ಇಂಥ ಆಜ್ಞೆಯಂಥ ನುಡಿಗೆ ತತ್‌ಕ್ಷಣದ ಕ್ರಿಯೆಯಾಗಿ ಸ್ಪಂದನ ಹುಟ್ಟಿದರೆ ಇನ್ನು ಕೆಲವು ಮಾತುಗಳಿಗೆ ವಿಳಂಬಿತವಾಗಿ ಪ್ರತಿಕ್ರಿಯೆ ಮೂಡುತ್ತದೆ. ಇಂದು ಕೇಳಿಸಿಕೊಂಡ ಮಾತಿಗೆ ಇನ್ನೆಂದೋ ನಮ್ಮ ಮಾತಿನಲ್ಲಿ, ವರ್ತನೆಯಲ್ಲಿ ಪ್ರತಿ ಸ್ಪಂದ ಕಾಣುತ್ತದೆ. (ಅಂದಂದಿನ ನುಡಿಯ ಅಂದಂದೆ ಅರಿಯಲು ಬಾರದು ಎಂದು ಅಲ್ಲಮ ಹೇಳಿದ ಮಾತು ನೆನಪಾಗುತ್ತಿದೆ.) ಮಾತಾಡುವವರು ಕೇಳುಗರಾಗಿ, ಕೇಳುಗರಾಗಿದ್ದವರು ಮಾತಾಡುವವರಾಗಿ, ಆಡುವ-ಕೇಳುವ ಪಾತ್ರ ಪಲ್ಲಟ ನಡೆಯುತ್ತಲೇ ಇರುವುದು ಸಂವಾದದ ಲಕ್ಷಣ.ಸಂವಹನ ಸಾಧ್ಯವಾಗಬೇಕಾದರೆ ಆಡುವ-ಕೇಳುವ ಪಾತ್ರಗಳ ಪಲ್ಲಟ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸಂವಹನವೆಂದರೆ ನುಡಿಗೆ ಪಡಿ-ನುಡಿ ಸೃಷ್ಟಿಗೊಳ್ಳುವ ಸ್ಪಂದನ. ನುಡಿಗೆ ಪಡಿ-ನುಡಿ ಹುಟ್ಟಬೇಕಾದರೆ ನನ್ನ ಪಡಿನುಡಿಗೆ ಕಾರಣವಾಗಿರುವ ನುಡಿ ನನಗೆ ಗೊತ್ತಿರಬೇಕು. 

 

ಭಾಷೆ ನನ್ನದಲ್ಲ, ನಿಮ್ಮದೂ ಅಲ್ಲ, ಯಾರೊಬ್ಬರದೂ ಅಲ್ಲ. ಎಲ್ಲರಿಗೂ ಅದರ ಮೇಲೆ ಸಮಾನ ಹಕ್ಕು ಇದೆ, ಎಲ್ಲರಿಗೂ ಸಮಾನವಾದ ಜವಾಬು-ದಾರಿ ಇದೆ. ಉಕ್ತಿಗೆ ಕಾರಣವಾಗುವ ಸಂದರ್ಭ ಹೊರಗೆ ಇರುವಂಥದಲ್ಲ, ಉಕ್ತಿಯೊಳಗೇ ಇರುವ ಅಂಶ. ಉಕ್ತಿ ಮತ್ತು ಸಂದರ್ಭಗಳನ್ನು ಬೇರ್ಪಡಿಸಲು ಸಾಧ್ಯವೇ ಇಲ್ಲ. ಕಾಲ, ದೇಶ, ಚರಿತ್ರೆ, ಉಕ್ತಿ ಎಲ್ಲವೂ ಬಿಡಿಸಲಾಗದಂತೆ ಬೆರೆತಿರುವ ಸಂಗತಿಗಳು. ಸಂಬಂಧ ಅನ್ನುವುದು ಕೂಡ ಉಕ್ತಿಯ ಮೂಲಕವೇ, ಸಂವಾದದ ಮೂಲಕವೇ ಸಾಧ್ಯವೋ ಅಸಾಧ್ಯವೋ ಆಗುತ್ತದೆ. 

 

ನಾವಾಡುವ ಭಾಷೆ ನಮ್ಮದು ಮಾತ್ರವೇ ಅಲ್ಲ. ನಾವಾಡುವ ಒಂದೊಂದು ಮಾತನ್ನೂ ಈಗಾಗಲೇ ಎಷ್ಟೋ ಜನ ಎಷ್ಟೋ ಸಂದರ್ಭಗಳಲ್ಲಿ ಬಳಸಿರುತ್ತಾರೆ. ದನಿಯ ಏರಿಳಿತದ ಮೂಲಕ, ಬಳಸುತ್ತಿರುವ ಮಾತಿಗೆ ನಮ್ಮದೇ ಮೌಲ್ಯಮಾಪನವನ್ನು ಲೇಪಿಸುವ ಮೂಲಕ, ಆಡುತ್ತಿರುವ ಮಾತಿನ ಬಗ್ಗೆ ನಮ್ಮದೇ ನಿಲುವನ್ನು ತೋರ್ಪಡಿಸುವ ಮೂಲಕ ಎಲ್ಲರದ್ದೂ ಆಗಿರುವ ಮಾತನ್ನು ನಮ್ಮದು ಮಾತ್ರ ಅನ್ನುವ ಹಾಗೆ ಮಾಡಿಕೊಳ್ಳುತ್ತಿರುತ್ತೇವೆ.ಉದಾಹರಣೆಗೆ `ಸರಿ' ಅನ್ನುವ ಶಬ್ದವನ್ನೇ ನೋಡಿ.ಒಂದೊಂದು ಸಂದರ್ಭದಲ್ಲೂ ನಾವು `ಸರಿ' ಅಂದಾಗ ಅದು ಒಪ್ಪಿಗೆಯೋ, ಉದಾಸೀನವೋ, ಉಪೇಕ್ಷೆಯೋ, ತಿರಸ್ಕಾರವೋ, ವಿರೋಧವೋ ಆಗಿ ಬಳಕೆಯಾಗುತ್ತಿರುತ್ತದೆ. ಕೇಳಿದ ಅಥವ ಕಂಡ ಸಂಗತಿಗೆ ನಮ್ಮಲ್ಲಿ ಹುಟ್ಟಿಸಿದ ಭಾವವನ್ನು, ಪ್ರತಿಕ್ರಿಯೆಯನ್ನು ಸೂಚಿಸುತ್ತಿರುತ್ತದೆ.ಅಂದರೆ ಸಂವಾದದಲ್ಲಿ, ಭಾಷೆಯ ಬಳಕೆಯಲ್ಲಿ ಡಿಕ್ಷನರಿಯಲ್ಲಿರುವ ಹಾಗೆ ಯಾವ ಒಂದು ಪದವೂ ನಿರ್ಲಿಪ್ತವಾಗಿರುವುದಿಲ್ಲ. ಇತರರ ಬಾಯಲ್ಲಿ, ಇತರರ ಸಂದರ್ಭದಲ್ಲಿ, ಇತರರ ಉದ್ದೇಶಗಳನ್ನು ನೆರವೇರಿಸುತ್ತ ಇದ್ದ ಪದವನ್ನು ಎತ್ತಿಕೊಂಡು ನಮ್ಮದು ಮಾಡಿಕೊಳ್ಳುವ ಕೆಲಸ ಸಂವಾದದಲ್ಲಿ ನಡೆಯುತ್ತ ಇರುತ್ತದೆ. 

 

ನಾವು ಆಡುವ ಮಾತೆಲ್ಲ ನಮ್ಮ ನಿಲುವಿನ, ಭಾವದ, ಮೌಲ್ಯಮಾಪನದ ಅಂಶವನ್ನು ಹೊತ್ತುಕೊಂಡೇ ಹೊರಬಿದ್ದಿರುತ್ತದೆ. ಅಂದರೆ ಸಂವಾದದ ಹೊತ್ತಿನಲ್ಲಿ ಎಂದಿನಿಂದಲೂ ಬಳಕೆಯಲ್ಲಿರುವ ಮಾತು ಹೊಸ ಸಂವಾದ ದೇಶವನ್ನು, ಸಂವಾದ ಲೋಕವನ್ನು ಸೃಷ್ಟಿಸಿಬಿಡುತ್ತದೆ. ನಮಗೆಲ್ಲರಿಗೂ ದತ್ತವಾಗಿರುವ ಭಾಷೆ ಸಂವಾದದ ಉಕ್ತಿ ಸಂದರ್ಭದಲ್ಲಿ ಹೊಸತಾಗಿ ಹುಟ್ಟುತ್ತದೆ.

 

ಸಂವಾದದಲ್ಲಿ ಮೊದಲ ಮಾತು, ಕೊನೆಯ ಮಾತು ಅನ್ನುವುದಿಲ್ಲವೇ ಇಲ್ಲ. ಅಲ್ಲಮನ ಮಾತಿನಲ್ಲಿ ಹೇಳುವುದಾದರೆ ಸಂವಾದವು ಹಿಂದಿನ ಅನಂತಕ್ಕೂ ಮುಂದಿನ ಅನಂತಕ್ಕೂ ಚಾಚಿಕೊಂಡಿರುವಂಥದ್ದು. `ಗತಕಾಲದ' ಅರ್ಥಗಳು ಕೂಡ ಕಳೆದ ಶತಮಾನಗಳ ಸಂವಾದದಲ್ಲಿ ಹುಟ್ಟಿಕೊಂಡವು ಕೂಡ ಸ್ಥಿರವಾಗಿರಲು ಸಾಧ್ಯವಿಲ್ಲ. ಯಾವಾಗಲೂ ಬದಲಾಗುತ್ತಲೇ ಇರುತ್ತವೆ. ಭವಿಷ್ಯದ ಸಂವಾದಗಳಲ್ಲಿ ಹೊಸತಾಗುತ್ತಲೇ ಇರುತ್ತವೆ.ಸಂವಾದದ ಬೆಳವಣಿಗೆಯ ಯಾವುದೇ ಒಂದು ಕ್ಷಣದಲ್ಲಿ ಅಗಾಧವಾದ, ಅಪರಿಮಿತವಾದ, ಮರೆತುಹೋದ ಸಾಂದರ್ಭಿಕ ಅರ್ಥಗಳ ಮೊತ್ತವೇ ಇರುತ್ತದೆ. ಸಂವಾದದ ಕೆಲವು ಕ್ಷಣಗಳಲ್ಲಿ ಅವನ್ನು ನೆನಪಿಸಿಕೊಂಡು ಶಕ್ತಿತುಂಬಿ, ಹೊಸ ಸಂದರ್ಭಕ್ಕೆ ಅನ್ವಯವಾಗುತ್ತವೆ. ಉದಾಹರಣೆ ಬೇಕಿದ್ದರೆ ಈ ಲೇಖನದಲ್ಲಿ ಬಳಸಿಕೊಂಡಿರುವ ಅಲ್ಲಮನ ಉಕ್ತಿಗಳನ್ನೇ ನೋಡಿ. ಇಲ್ಲಿ ಅವು ಪಡೆದಿರುವುದು ತಮ್ಮ `ಹಳೆಯ' ಅರ್ಥಗಳೊಡನೆ ಹೊಸ ಅರ್ಥವನಲ್ಲವೇ? ಯಾವ ಅರ್ಥವೂ ಪೂರಾ ಸಾಯುವದಿಲ್ಲ. 

 

ಹಾಗಾಗಿ ಸತ್ಯವೆನ್ನುವುದು ವ್ಯಕ್ತಿಯೊಳಗೆ ಹುಟ್ಟುವುದಲ್ಲ, ಒಬ್ಬರ ಮಿದುಳಿನಲ್ಲಿ ಮಾತ್ರ ಇರುವುದೂ ಅಲ್ಲ. ಸತ್ಯವೆನ್ನುವದು ಅದನ್ನು ಸಾಮೂಹಿಕವಾಗಿ ಅರಸುತ್ತಿರುವ ಜನರ ಸಂವಾದದೊಳಗೆ ಹುಟ್ಟುತ್ತದೆ. ಸತ್ಯವಾಗಲೀ, ವ್ಯಕ್ತಿತ್ವವಾಗಲೀ, ಅರ್ಥವಾಗಲೀ ಎಂದೂ ಪೂರ್ಣವಾಗುವುದೇ ಇಲ್ಲ. 

 

ಸತ್ಯದ ಅನ್ವೇಷಣೆಗೆ ಸಂವಾದ ಅಗತ್ಯವೆಂದರೆ ಅನ್ಯರೂ ಅಗತ್ಯ. ಯಾವುದೇ ಸಂವಾದದಲ್ಲಿ ಮಾತಾಡುವ ಮತ್ತು ಕೇಳುವ ವ್ಯಕ್ತಿ ಮಾತ್ರವಲ್ಲದೆ ಮಾತಾಡುತ್ತಿರುವವರ ಮನಸ್ಸಿನಲ್ಲಿ ಮೂರನೆಯ ಆದರ್ಶ ಕೇಳುಗನೂ ಇರುತ್ತಾನೆ. ಕನ್ನಡದ ವಚನಗಳನ್ನು ನೋಡಿದರೆ ಅವುಗಳಲ್ಲಿ ವಚನಕಾರ, ಅದನ್ನು ಕೇಳುತ್ತಿರುವವರು ಮಾತ್ರವಲ್ಲದೆ ಅಂಕಿತದ ರೂಪದಲ್ಲಿರುವ ಇಷ್ಟ ದೈವ ಕೂಡ ಇರುತ್ತದೆ.ಮಾಸ್ತಿಯವರು  ಇಬ್ಬರು ಮಾತಾಡುತ್ತಿದ್ದರೆ ಅಲ್ಲಿ ನಾಲ್ಕು ಜನ ಇರುತ್ತಾರೆ- ಆಡುತ್ತಿರುವಾತ, ಕೇಳುತ್ತಿರುವಾತ, ಆಡುತ್ತಿರುವವನ ಕಲ್ಪನೆಯಲ್ಲಿರುವ ಕೇಳುಗ, ಕೇಳುಗನ ಕಲ್ಪನೆಯಲ್ಲಿರುವ ಮಾತಾಡುತ್ತಿರುವ ವ್ಯಕ್ತಿ ಅಂದದ್ದು ನೆನಪಿಗೆ ಬರುತ್ತಿದೆ. ನಾವು ನಡೆಸುವ ಸಂವಾದ ಕೇವಲ ಒಬ್ಬರೊಡನೆ ಮಾತ್ರವಲ್ಲ, ಇಡೀ ಲೋಕದೊಡನೆ. ಅನ್ಯ ಅನ್ನುವುದರಲ್ಲಿ ನಾನಲ್ಲದ ಎಲ್ಲವೂ ಇದೆ. 

 

ಅನ್ಯ ಅನ್ನುವುದಿಲ್ಲದೆ ಸಂವಾದವಿಲ್ಲ. ನಮ್ಮ ಬಹಿರಂಗ ನಮಗೆ ಎಂದೂ ಇಡಿಯಾಗಿ ತಿಳಿಯುವುದೇ ಇಲ್ಲ. ಅದು ಏನಿದ್ದರೂ ಅನ್ಯರಿಗೆ ಮಾತ್ರ ತಿಳಿಯುತ್ತದೆ. ಯಾವ ವ್ಯಕ್ತಿಯೂ ನಾಯಕನಲ್ಲ, ಅನ್ಯರು ಅವನನ್ನು ಹೊರಗಿನಿಂದ ಕಂಡು ಮಾತಿನಲ್ಲಿ, ನಿರಂತರ ಸಂವಾದದಲ್ಲಿ ನಾಯಕನನ್ನಾಗಿಸುತ್ತಾರೆ. ರಾಮ, ಕೃಷ್ಣ, ದುರ್ಯೋಧನ, ಆಳುವ ಪಕ್ಷದ ಮುಖ್ಯಮಂತ್ರಿ, ವಿರೋಧಪಕ್ಷದ ಮುಖಂಡ ಎಲ್ಲರೂ ಅನ್ಯರ ಕಣ್ಣಿಗೆ ನಾಯಕರಾಗಿ, ಖಳರಾಗಿ ಕಂಡು ನಿರಂತರವಾದ ಲೋಕ ಸಂವಾದದಲ್ಲಿ ರೂಪುಗೊಂಡವರೇ ಅಲ್ಲವೇ?

 

ಈ ಮಾತು ಅನ್ಯ ಸಂಸ್ಕೃತಿಯ ಬಗೆಗೂ ನಿಜ. ಅನ್ಯ ಸಂಸ್ಕೃತಿಯನ್ನು ಅರಿಯಲು ನಾವು ನಮ್ಮತನವನ್ನು ಮರೆತು ಅದರಲ್ಲಿ ಒಂದಾಗಿ ಆ ಸಂಸ್ಕೃತಿಯವರ ಕಣ್ಣಿಂದಲೇ ನೋಡಬೇಕು ಅನ್ನುವುದು ಅಷ್ಟು ಸರಿಯಲ್ಲ. ಆದರೆ ಅರ್ಥಮಾಡಿಕೊಳ್ಳಲು ಇದೊಂದೇ ದಾರಿ ಅಂದರೆ ಅದು ಕೇವಲ ಪ್ರತಿಮಾಡುವ ನಕಲೆತ್ತುವ ಕೆಲಸ, ಅದರಲ್ಲಿ ಹೊಸತಾಗಲಿ ಶ್ರೀಮಂತಗೊಳಿಸುವಂಥದಾಗಲೀ ಏನಿಲ್ಲ.ಸೃಜನಶೀಲವಾಗಿ ಅರ್ಥಮಾಡಿಕೊಳ್ಳುವುದೆಂದರೆ ನಮ್ಮನ್ನು ತ್ಯಾಗಮಾಡಿಕೊಂಡು, ನಮ್ಮ ಕಾಲ, ನಮ್ಮ ಸಂಸ್ಕೃತಿ, ನಮ್ಮ ದೇಶಗಳನ್ನು ನೀಗಿಕೊಂಡು ನೋಡುವುದಲ್ಲ. ಅನ್ಯರ ಕಣ್ಣಿಗೆ ಮಾತ್ರ ಸಂಸ್ಕೃತಿಯೊಂದು ಪೂರ್ಣವಾಗಿ, ಗಹನವಾಗಿ ತೆರಕೊಳ್ಳುತ್ತದೆ. ಅರ್ಥವೆನ್ನುವುದು ಪ್ರಕಟವಾಗುವುದು, ಅದರ ಆಳ ತಿಳಿಯುವುದು ಅದು ಇನ್ನೊಂದು ಅನ್ಯ ಅರ್ಥದೊಡನೆ ಸಂಪರ್ಕಕ್ಕೆ ಬಂದು ಎದುರಿಸಿದಾಗಲೇ. 

 

ಹೀಗೆ ಎದುರಿಸುವುದೆಂದರೆ ಬಹುಮುಖ ಭಾಷೆ, ಬಹುಮುಖ ಸಂವಾದಗಳನ್ನು ಗ್ರಹಿಸುವ ಕೆಲಸ. ಒಂದೇ ಭಾಷೆಯನ್ನಾಡುವವರಲ್ಲೂ ಭಾಷೆ ಬಹುಮುಖಿಯೇ. ಆಡುವ ಮಾತು ಸಾಮಾಜಿಕ ಅಂತಸ್ತು, ಮಾಡುತ್ತಿರುವ ಉದ್ಯೋಗ, ಲಿಂಗ, ವಯಸ್ಸು, ಬದುಕಿನ ದೃಷ್ಟಿ ಇತ್ಯಾದಿಗಳನ್ನೆಲ್ಲ ಒಳಗೊಂಡದ್ದು.ಸ್ವಗತದಂಥ ಕವಿತೆ ಈ ಬಹುಮುಖೀ ಭಾಷೆ, ಸಂವಾದಗಳನ್ನು ಹಿಡಿದಿಡಲಾರದು. ವಿವಿಧ ಪ್ರಜ್ಞೆಗಳು ಪರಸ್ಪರ ಪ್ರಭಾವಿಸುವ, ಸ್ಪಂದಿಸುವ ನೇಯ್ಗೆಯನ್ನು ರಶಿಯದ ದಾಸ್ತೊವ್ಸ್‌ಕಿಯಂಥ, ಕನ್ನಡದ ಕುವೆಂಪು ಅವರಂಥ ಕಾದಂಬರಿಕಾರರು ಮಾತ್ರ ಹಿಡಿದಿಡಬಲ್ಲರು. 

 

*

ಭಾಷೆಯ ಬಗ್ಗೆ ಚಿಂತಿಸುವಾಗ ಸುಸ್ಪಷ್ಟವಾದ ಆದರೆ ಮರೆತುಬಿಡುವ, ಇಲ್ಲವೇ ಉದಾಸೀನ ಮಾಡುವ ಸಂಗತಿಗಳನ್ನು ತಪ್ಪದೆ ಗಮನಿಸಬೇಕು, ಭಾಷೆಯ ಸಾಮಾಜಿಕ ಮುಖ, ಸಂವಾದಗುಣ, ಸಂವಾದದ ಪ್ರಾಮುಖ್ಯ ಇವನ್ನು ನಿರ್ಲಕ್ಷಿಸಬಾರದು. ಇವು ರಶಿಯದ ತತ್ವಜ್ಞಾನಿ, ವಿಮರ್ಶಕ, ಭಾಷಾತತ್ವಗಳ ಚಿಂತಕ ಮಿಖಾಯಿಲ್ ಮಿಖಾಯಿಲೊವಿಚ್ ಬಾಖ್ತಿನ್ (ನವೆಂಬರ್ 17, 1895-ಮಾರ್ಚ್ 7, 1975)ನ ಚಿಂತನೆಗಳ ಸ್ಥೂಲ ಸಾರಾಂಶ.ರಶಿಯದಲ್ಲಿ ಆದ ಪಲ್ಲಟಗಳನ್ನೆಲ್ಲ ಕಂಡಿದ್ದವನು, ಆಳುವವರ್ಗದ ಕೋಪಕ್ಕೆ ಗುರಿಯಾಗಿ ಜೈಲಿಗೂ ಹೋಗಿದ್ದವನು. ಬದುಕಿದ್ದ ಕಾಲದಲ್ಲಿ ಅವನ ಚಿಂತನೆಗಳು ಹೆಚ್ಚು ಪ್ರಚಲಿತವಾಗದಿದ್ದರೂ 1960ರ ನಂತರ ಮಾರ್ಕ್ಸ್‌ವಾದ, ಅರ್ಥಚಿಂತನೆ, ರಚನಾವಾದ, ಸಾಹಿತ್ಯತತ್ವಚಿಂತನೆ, ಧರ್ಮಚಿಂತನೆ, ಚರಿತ್ರೆ, ತತ್ವಶಾಸ್ತ್ರ, ಸಮಾಜಶಾಸ್ತ್ರ, ಮಾನವಶಾಸ್ತ್ರಗಳನ್ನೆಲ್ಲ ಬಾಖ್ತಿನ್ ಪ್ರಭಾವಿಸಿದ.ಬಾಖ್ತಿನ್ ಮತ್ತು ಅವನ ಇಬ್ಬರು ಸಹೋದ್ಯೋಗಿಗಳು, ಸಮಾನ ಮನಸ್ಕರು ಮೆಡೆವೆವ್ ಮತ್ತು ವೊಲೊಶಿನೋವ್ ಇವರ ಬರವಣಿಗೆಗಳಲ್ಲಿ ಯಾರಪಾಲು ಎಷ್ಟು ಅನ್ನುವ ವಿವಾದ ಇನ್ನೂ ಜೀವಂತವಾಗಿದೆ. ಬಾಖ್ತಿನ್‌ನದೇ ಎಂದು ಖಚಿತವಾಗಿರುವ ಡಯಲಾಜಿಕ್ ಇಮ್ಯೋಜಿನೇಶನ್, ಮತ್ತು ಇತರ ಕೆಲವು ಲೇಖನಗಳ ಮುಖ್ಯ ಮಾತುಗಳನ್ನು ಆಯ್ದು, ಹೆಣೆದು, ಅಲ್ಲಮ, ಮಾಸ್ತಿ, ಕುವೆಂಪು, ಇವರನ್ನೆಲ್ಲ ಒಳಗೊಂಡು ನಿಮ್ಮಡನೆ ಹೀಗೆ ಈ ವಾರ ಸಂವಾದಿಸಿದ್ದೇನೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry