ಬುಧವಾರ, ಜೂನ್ 16, 2021
22 °C

ಸ್ವಾಭಿಮಾನ ಒರೆಗೆ ಹಚ್ಚಿದಕ್ಷಣ

ಶಿವರಾಮ್ Updated:

ಅಕ್ಷರ ಗಾತ್ರ : | |

ನಾನು ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದ ಕಾಲ. ಹಾಲ್ತೊರೆ ರಂಗರಾಜನ್ ಪ್ರಕಾಶ್ ನನ್ನ ಸಹಪಾಠಿ. ಇಬ್ಬರೂ ಏಕಕಾಲಕ್ಕೆ ಕೆಲಸಕ್ಕೆ ಸೇರಿದ್ದೆವು. ಈಗ ಅವರು ಬದುಕಿಲ್ಲ. ನಾವು ಒಂದು ಮೀಟಿಂಗ್ ಮುಗಿಸಿಕೊಂಡು ಕ್ಯಾವೆಲ್ರಿ ರಸ್ತೆಯಲ್ಲಿ (ಕಾಮರಾಜ ರಸ್ತೆ) ಬರುತ್ತಿದ್ದೆವು. ಆಗ ಎಸಿಪಿ ಆಗಿದ್ದ ಶೌಕತ್ ಅಲಿ ಮಹಾನ್ ಮಾನವತಾವಾದಿ. ನಮ್ಮನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ನಿಜಾಮುದ್ದೀನ್ ಕಮಿಷನರ್ ಆಗಿದ್ದರು. ಅಬಿದ್ ಅಲಿ ಟ್ರಾಫಿಕ್ ವಿಭಾಗದ ಡಿಸಿಪಿ ಆಗಿದ್ದರು.ನಾನು ಪೊಲೀಸ್ ವಾಹನವನ್ನು ಓಡಿಸುತ್ತಿದ್ದೆ. ಎದುರಿನಿಂದ ದಿಢೀರನೆ ಒಂದು ಕಾರು ಬಂದಿತು. ಅದು ಒನ್‌ವೇ ರಸ್ತೆ. `ದಿಸ್ ರೋಡ್ ಈಸ್ ಒನ್ ವೇ. ಈವನ್ ಸೈಕಲ್ ಪುಷಿಂಗ್ ಈಸ್ ನಾಟ್ ಅಲೌಡ್~ ಎಂದು ಆಗ ಆ ರಸ್ತೆಯಲ್ಲಿ ಬೋರ್ಡ್ ಬರೆಯಲಾಗಿತ್ತು. ವಿರುದ್ಧ ದಿಕ್ಕಿನಿಂದ ಸೈಕಲ್ ಕೂಡ ತಳ್ಳಿಕೊಂಡು ಬರುವುದು ನಿಷಿದ್ಧ ವಾಗಿದ್ದ ರಸ್ತೆಯಲ್ಲಿ ಕಾರು ಬಂದದ್ದನ್ನು, ಅದೂ ಪೊಲೀಸ್ ಕಾರು ಬಂದದ್ದನ್ನು ಕಂಡು ನಮಗೆ ಅಚ್ಚರಿಯಾಯಿತು. ನಮ್ಮ ಹಿಂದೆ ಇನ್ನೊಂದು ವಾಹನದಲ್ಲಿ ಬರುತ್ತಿದ್ದವರು ಹಾರ್ನ್ ಮಾಡುತ್ತಾ ಕಿಚಾಯಿಸಿದರು.ನಿಮ್ಮ ಇಲಾಖೆಯವರೇ ನಿಯಮ ಮುರಿಯುತ್ತಿದ್ದಾರಲ್ಲ ಎಂಬುದನ್ನು ಆ ಹಾರ್ನ್ ಸಂಕೇತಿಸುತ್ತಿತ್ತು. ನಾನು ಆ ಕಾರನ್ನು ಅಡ್ಡಹಾಕಿದೆ. ಅದನ್ನು ಓಡಿಸಿಕೊಂಡು ಬರುತ್ತಿದ್ದವನು ನನ್ನನ್ನೇ ಪಕ್ಕಕ್ಕೆ ಸರಿಯುವಂತೆ ಸಂಜ್ಞೆ ಮಾಡಿದನೇ ಹೊರತು ತಕ್ಷಣ ನಿಲ್ಲಿಸಲಿಲ್ಲ. ತುಸು ಮುಂದೆ ಹೋಗಿ ದರ್ಪದಿಂದ ನಿಲ್ಲಿಸಿ ಹೊರಗೆ ಇಣುಕಿದ. ವಾಪಸ್ ಬಾ ಎಂದು ನಾನು ಸಂಜ್ಞೆ ಮಾಡಿದೆ. `ಬರೋಲ್ಲ, ಬೇಕಾದರೆ ನೀವೇ ಬನ್ನಿ~ ಎಂಬಂತೆ ಅವನು ಪ್ರತಿಸಂಜ್ಞೆ ಮಾಡಿದ. ನಾನು, ಹಾಲ್ತೊರೆ ರಂಗರಾಜನ್ ಇಬ್ಬರೂ ಹೋದೆವು. `ಒನ್ ವೇಗೆ ವಿರುದ್ಧವಾಗಿ ಬರ‌್ತಾ ಇದ್ದೀರಲ್ಲಾ~ ಎಂದು ಕೇಳಿದೆವು. `ಹಿಂದೆ ಯಾರಿದ್ದಾರೆ ಗೊತ್ತಾ? ಅವರ ಜೊತೆ ಮಾತಾಡಿ~ ಎಂದು ಅವನು ಮತ್ತೂ ದರ್ಪದಿಂದಲೇ ಹೇಳಿದ.ಹಿಂದೆ ಯಾರೋ ಮೇಡಂ ಕೂತಿದ್ದರು. ಅದು ಕಮಿಷನರ್ ವಾಹನವಾಗಿತ್ತು. ಆದರೆ, ಒಳಗಿದ್ದವರು ಕಮಿಷನರ್ ಪತ್ನಿ ಆಗಿರಲಿಲ್ಲ. ಅವರು ದಿವ್ಯ ಗಾಂಭೀರ್ಯದಲ್ಲಿ ಕುಳಿತಿದ್ದರು. ಶಿಸ್ತಿನ ಪ್ರಕಾರ ಸಲ್ಯೂಟ್ ಹೊಡೆದೆವು. ಹತ್ತಿರದಿಂದ ಗಮನಿಸಿದರೆ, ಅವರು ತಮಿಳುನಾಡು ಡಿ.ಜಿ. ಒಬ್ಬರ ಪತ್ನಿ ಎಂಬುದು ಖಾತರಿಯಾಯಿತು.ಅದು ಒನ್‌ವೇ ಆದ್ದರಿಂದ ತುರ್ತು ಸಂದರ್ಭ ಹೊರತುಪಡಿಸಿ ಪೊಲೀಸ್ ವಾಹನ ಕೂಡ ಅಲ್ಲಿ ವಿರುದ್ಧ ದಿಕ್ಕಿನಿಂದ ಚಲಿಸುವಂತಿಲ್ಲ ಎಂದು ಹೇಳಿದೆವು. ಹಾಲ್ತೊರೆ ರಂಗರಾಜನ್ ಪ್ರಕಾಶ್ ಅವರಂತೂ ನೋಡಲು ಯುರೋಪ್ ಪೊಲೀಸರ ಹಾಗೆ ಗತ್ತಿನಿಂದ ಇದ್ದವರು. ಆ ಮೇಡಂ ನಮ್ಮ ಮಾತಿಗೆ ಉದಾಸೀನದಿಂದ ಪ್ರತಿಕ್ರಿಯಿಸಿದರು. `ಐ ವಾಂಟ್ ಟು ಗೋ ಟು ಎಂ.ಜಿ.ರೋಡ್. ಐ ಆಮ್ ಫ್ರಮ್ ತಮಿಳ್‌ನಾಡು. ಐ ಡೋಂಟ್ ನೊ ಅಬೌಟ್ ದಿಸ್. ಜಸ್ಟ್ ಲೀವ್ ಅಸ್~ (ನಾನು ಎಂ.ಜಿ.ರೋಡ್‌ಗೆ ಹೋಗಬೇಕು. ತಮಿಳುನಾಡಿನಿಂದ ಬಂದಿದ್ದೇನೆ. ಈ ಒನ್‌ವೇ ಸಮಾಚಾರ ನನಗೆ ಗೊತ್ತಿಲ್ಲ. ಸುಮ್ಮನೆ ನನ್ನನ್ನು ಬಿಟ್ಟುಬಿಡಿ) ಅಂದರು.ಎಂ.ಜಿ.ರಸ್ತೆಗೆ ಅಲಸೂರು ಕೆರೆಕಡೆಯಿಂದ ಹೋಗಬೇಕು ಎಂದು ನಾವು ಎಷ್ಟೇ ಎಚ್ಚರಿಸಿದರೂ ಅವರು ಕೇಳಲಿಲ್ಲ. ಇದರ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಕಮಿಷನರ್ ಚಾಲಕ ಪೊಗರಿನಿಂದ ನಮ್ಮನ್ನೇ ಎಚ್ಚರಿಸಲಾರಂಭಿಸಿದ. ಜಮಾಯಿಸಿದ್ದ ಜನ ನಮ್ಮ ಮಾತನ್ನು ಅವರು ಕೇಳಲಿಲ್ಲ ಎಂಬಂತೆ ಮೂದಲಿಸುವ ರೀತಿ ವರ್ತಿಸಿದರು. ನಮ್ಮ ಸ್ವಾಭಿಮಾನಕ್ಕೆ ಪೆಟ್ಟುಬಿತ್ತು. ಅವರನ್ನು ನಾವು ಆ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ಹೋಗಲು ಕೊನೆಗೂ ಬಿಡಲೇ ಇಲ್ಲ. ಆ ಚಾಲಕ ನಮಗೆ ಪಾಠ ಕಲಿಸುವುದಾಗಿ ಏನೇನೋ ಗೊಣಗುತ್ತಲೇ ಕಾರನ್ನು ತಿರುಗಿಸಿಕೊಂಡು ಸಾಗಿದ.ತಕ್ಷಣ ನಾವು ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟೆವು. ಅಲ್ಲಿನ ಹಿರಿಯ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಕಂಪ್ಲೇಟ್ ತೆಗೆದುಕೊಳ್ಳುವಾಗ ಖುಷಿಯಿಂದಲೇ, `ಒಳ್ಳೆ ಕೆಲಸ ಮಾಡಿದಿರಿ. ಇಲಾಖೆಗೆ ನಿಮ್ಮಂಥ ಬೋಲ್ಡ್ ಹುಡುಗರು ಬೇಕು~ ಎಂದು ಹುರಿದುಂಬಿಸುವಂತೆ ಮಾತನಾಡಿದರು. ನಮಗೆ ದೂರು ಸ್ವೀಕೃತಿ ಪತ್ರ ಕೊಟ್ಟ ನಂತರ ಆ ವಾಹನದ ನಂಬರ್ ಯಾವುದು ಎಂದು ನಿಗಾ ಮಾಡಿದರು. ಅದನ್ನು ನೋಡಿದ ತಕ್ಷಣ ಕಮಿಷನರ್ ವಾಹನವೆಂಬುದು ಗೊತ್ತಾದದ್ದೇ ಚಕಿತರಾದರು. ಅವರ ಚಹರೆಯೇ ಬದಲಾಗಿಹೋಯಿತು. `ಇದೇನ್ರಪ್ಪಾ... ಹಿಂಗಾ ಮಾಡೋದು. ನಿಮ್ಮ ಕತೆ ಅಷ್ಟೆ~ ಎಂದು ರಾಗ ಬದಲಿಸಿದರು.ನಾವು ದೂರು ಕೊಟ್ಟಿದ್ದು ಡಿಸೆಂಬರ್ 31. ಮರುದಿನ, ಅಂದರೆ ಹೊಸವರ್ಷದಲ್ಲಿ ಅಧಿಕಾರಿಗಳಿಗೆ ಶುಭಾಶಯ ವಿನಿಮಯ, ಗೌರವ ಸಮರ್ಪಣೆ ಮಾಡುವುದು ಪದ್ಧತಿ. ಆಗ ನಾನು ಹಾಗೂ ಹಾಲ್ತೊರೆ ರಂಗರಾಜನ್ ಪ್ರಕಾಶ್ ಕೂಡ ಅಲ್ಲಿದ್ದೆವು. ಅಷ್ಟು ಹೊತ್ತಿಗೆ ನಾವು ದೂರು ಕೊಟ್ಟ ಸಂಗತಿ ಕಮಿಷನರ್ ಕಿವಿಗೂ ತಲುಪಿತ್ತು. ಟ್ರಾಫಿಕ್ ವಿಭಾಗದ ಡಿಸಿಪಿ ಅಬಿದ್ ಅಲಿ ನಮ್ಮ ಮೇಲೆ ಕೂಗಾಡಲು ಬಂದಾಗ ಎಸಿಪಿ ಶೌಕತ್ ಅಲಿ ಅವರನ್ನು ನಿಯಂತ್ರಿಸಿದ್ದರು. ನಾವು ಮಾಡಿದ್ದೇ ಸರಿ ಎಂದು ಅವರು ಸಮರ್ಥಿಸಿದ್ದರು.ಇಷ್ಟೆಲ್ಲಾ ಆಗಿದ್ದರಿಂದ ಆ ದಿನ ಕಮಿಷನರ್ ನಮ್ಮನ್ನು ಏನೂ ಕೇಳದೇ ಇರಲಿ ಎಂದುಕೊಂಡು ಅಳುಕಿನಲ್ಲೇ ನಿಂತಿದ್ದೆವು. ಆದರೂ ಆತ್ಮಾಭಿಮಾನದ ಕೆಲಸ ಮಾಡಿದ ಹೆಮ್ಮೆ ನಮ್ಮಿಬ್ಬರಲ್ಲೂ ಇತ್ತು. ಶುಭಾಶಯ ವಿನಿಮಯದ ಸಂದರ್ಭದಲ್ಲಿ ಹಿರಿಯ ಸಬ್ ಇನ್ಸ್‌ಪೆಕ್ಟರ್ ಒಬ್ಬರು ಎಲ್ಲರನ್ನೂ ಪರಿಚಯ ಮಾಡಿಕೊಟ್ಟರು. ಡಿಸಿಪಿ- ಟ್ರಾಫಿಕ್, ಕಮಿಷನರ್ ಎಲ್ಲಾ ಅಲ್ಲಿದ್ದರು. `ನೆನ್ನೆ ಮೇಡಂನ ವಾಪಸ್ ಕಳುಹಿಸಿದವರು ಇವರಿಬ್ಬರೇ ಸರ್~ ಎಂದು ಟ್ರಾಫಿಕ್ ವಿಭಾಗದ ಡಿಸಿಪಿ ಹೇಳಿಬಿಟ್ಟರು. ನಮ್ಮನ್ನು ಕಂಡಾಕ್ಷಣ ಕಮಿಷನರ್ ಕೆಂಪಾದರು. ಹಾರಾಡಲಾ ರಂಭಿಸಿದರು. `ಯೂ ಹ್ಯಾವ್ ಮಿಸ್‌ಬಿಹೇವ್ಡ್ ವಿತ್ ದಿ ಲೇಡಿ. ಡೋಂಟ್ ಯು ನೌ ಹೌವ್ ಟು ಬಿಹೇವ್ ವಿತ್ ಗೆಸ್ಟ್ಸ್?~ (ನೀವು ಮಹಿಳೆಯೊಬ್ಬರ ಜೊತೆ ಅಸಭ್ಯವಾಗಿ ವರ್ತಿಸಿದ್ದೀರಿ. ಅತಿಥಿಗಳ ಜೊತೆ ಹೇಗೆ ನಡೆದುಕೊಳ್ಳಬೇಕು ಎಂಬ ಅರಿವಿಲ್ಲವೇ?) ಎಂದು ದಬಾಯಿಸಿದರು.ಹಾಲ್ತೊರೆ ರಂಗರಾಜನ್ ಪ್ರಕಾಶ್ ಹಾಗೂ ನನಗೆ ಅದು ಸ್ವಾಭಿಮಾನದ ಪ್ರಶ್ನೆಯಾಗಿತ್ತು. ಇಬ್ಬರೂ ನಡೆದ ಸಂಗತಿಯನ್ನು ವಿವರಿಸಿದೆವು. ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸುವವರ ಪೈಕಿ ನಾವಲ್ಲ ಎಂದು ತುಸುವೂ ಅಳುಕಿಲ್ಲದೆ ಹೇಳಿದೆವು. ಅವರ ಚಾಲಕ ಉದ್ಧಟತನದಿಂದ ವರ್ತಿಸಿದ್ದನ್ನು, ಒನ್‌ವೇ ಎಂಬುದನ್ನು ಲೆಕ್ಕಸದೆ ಕಾನೂನು ಮುರಿದು ನಾಗರಿಕರ ಎದುರು ಇಲಾಖೆಯನ್ನು ನಗೆಪಾಟಲಿಗೆ ಗುರಿಮಾಡಿದ್ದನ್ನು ತಿಳಿಸಿದೆವು. ಆದರೂ ಕಮಿಷನರ್ ಕೋಪ ತಣ್ಣಗಾಗಲಿಲ್ಲ. ನಮಗೆ ತಕ್ಕ ಶಾಸ್ತಿ ಮಾಡುವುದಾಗಿ ಎಚ್ಚರಿಕೆ ನೀಡುತ್ತಾ ಇನ್ನಷ್ಟು ಆವೇಶದಿಂದ ಮಾತನಾಡತೊಡಗಿದರು. ಟ್ರಾಫಿಕ್ ವಿಭಾಗದ ಡಿಸಿಪಿ ಕೂಡ ಕಮಿಷನರ್ ಅಭಿಪ್ರಾಯವೇ ಸರಿ ಎಂಬಂತೆ ಮಾತು ಸೇರಿಸುತ್ತಿದ್ದರು.ಆಗ ಎಸಿಪಿ ಶೌಕತ್ ಅಲಿ ಅಡ್ಡಬಂದರು. ಕಾನೂನಿನ ದೃಷ್ಟಿಯಿಂದ ಈ ಹುಡುಗರು ಮಾಡಿದ್ದೇ ಸರಿ ಎಂದು ನಮ್ಮನ್ನು ಸಮರ್ಥಿಸಿದರು. ಇಲಾಖೆಗೆ ಸೇರಿದಾಗ ನಾವು ಪಡೆದಿದ್ದ ಮೊದಲ ಸಮವಸ್ತ್ರ ಇನ್ನೂ ಆಗ ಹರಿದಿರಲಿಲ್ಲ. ಹಾಗಾಗಿ ಅನುಭವಿಗಳು, ದೊಡ್ಡವರು ನಮ್ಮ ಪರವಾಗಿ ಎರಡು ಮಾತನಾಡಿದರೂ ನಮ್ಮ ಹುಮ್ಮಸ್ಸು ಇಮ್ಮಡಿಯಾಗುತ್ತಿತ್ತು. ಕೊನೆಗೂ ಕಮಿಷನರ್ ತಣ್ಣಗಾದರು. ಇನ್ನು ಮುಂದೆ ಹಾಗೆಲ್ಲಾ ನಡೆದುಕೊಳ್ಳಬೇಡಿ ಎಂದು ನಮ್ಮನ್ನು ಎಚ್ಚರಿಸಿ ಹೊರಟುಹೋದರು.`ಮಕ್ಕಳಾ... ನೀವು ಮಾಡಿದ ಕೆಲಸ ಸರಿಯಾಗೇ ಇದೆ. ಕಾನೂನು ಎಲ್ಲರಿಗೂ ಒಂದೇ. ನೀವು ಕಮಿಷನರ್ ಕಾರು ಎಂಬುದನ್ನೂ ಲೆಕ್ಕಿಸದೆ ದೂರು ಕೊಡಲು ಮನಸ್ಸು ಮಾಡಿದ್ದು ಸಣ್ಣ ವಿಷಯವಲ್ಲ. ಇನ್ನು ಮುಂದೆ ಕೆಲಸದಲ್ಲೂ ಅದೇ ನಿಷ್ಠೆ ಇರಬೇಕು~ ಎಂದು ಶೌಕತ್ ಅಲಿ ಬೆನ್ನುತಟ್ಟಿದರು. ದೊಡ್ಡವರ ಹಮ್ಮನ್ನು ಎದುರಿಸುವುದು ಇಲಾಖೆಯಲ್ಲಿರುವ ಸಿಬ್ಬಂದಿಗೂ ಎಷ್ಟು ಕಷ್ಟ ಎಂಬುದು ನಮಗೆ ಆಗ ಸ್ಪಷ್ಟವಾಗಿ ಗೊತ್ತಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.