ಸೋಮವಾರ, ಜೂನ್ 14, 2021
27 °C

ಹಂಚಿಕೊಳ್ಳಲಾರದ ಭಾವನೆಗಳು

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಒಬ್ಬ ರಾಜನಿಗೆ ಇಬ್ಬರು ಮಕ್ಕಳು. ರಾಜನಿಗೆ ವಯಸ್ಸಾದಾಗ ಆತ ರಾಜ್ಯವನ್ನು ಸರಿಯಾಗಿ ಎರಡು ಭಾಗಗಳಲ್ಲಿ ವಿಂಗಡಿಸಿ ಇಬ್ಬರೂ ಮಕ್ಕಳನ್ನು ರಾಜರನ್ನಾಗಿ ಮಾಡಿದ. ರಾಜನ ತರುವಾಯವೂ ಇದೇ ವ್ಯವಸ್ಥೆ ಮುಂದುವರಿಯಿತು.ತಮ್ಮ ತನ್ನ ರಾಜ್ಯವನ್ನು ಚೆನ್ನಾಗಿ ಬೆಳೆಸಿದ, ಸಂಪತ್ತು ವೃದ್ಧಿಯಾಯಿತು. ಇದು ಅಣ್ಣನ ಅಸೂಯೆಗೆ ಕಾರಣವಾಯಿತು. ತನಗಿಂತಲೂ ತನ್ನ ತಮ್ಮ ಹೆಚ್ಚು ಪ್ರಸಿದ್ಧಿಯಾಗುತ್ತಿರುವುದನ್ನು ಕಂಡು ತಡೆದುಕೊಳ್ಳಲು ಕಷ್ಟವಾಯಿತು. ತನ್ನ ರಾಜ್ಯದ ಅಭಿವೃದ್ಧಿಯ ಕಡೆಗೆ ಗಮನ ನೀಡುವುದನ್ನು ಬಿಟ್ಟು ತಮ್ಮನ ರಾಜ್ಯಕ್ಕೆ ಆದಷ್ಟು ಕಿರುಕುಳ ಕೊಡಲು ಪ್ರಾರಂಭಿಸಿದ.ಇದು ತಮ್ಮನ ಗಮನಕ್ಕೂ ಬಂತು. ಸಾಧ್ಯವಿದ್ದಷ್ಟೂ ತಾಳಿಕೊಂಡ. ನಂತರ ಅಣ್ಣ-ತಮ್ಮಂದಿರ ಮನಸ್ಸುಗಳು ಪೂರ್ತಿ ಮುರಿದು ಹೋಗಿ ಯುದ್ಧದ ಹಂತಕ್ಕೇ ಬಂದವು. ಇಬ್ಬರೂ ತಮ್ಮ ಸಮಗ್ರ ಸೇನೆಯನ್ನು ತೆಗೆದುಕೊಂಡು ಮುಖಾ-ಮುಖಿಯಾಗಿ ಹೋರಾಡಿದರು. ಯುದ್ಧ ತಿಂಗಳುಗಟ್ಟಲೇ ನಡೆಯಿತು. ಅಣ್ಣನ ಸೇನೆ ದೊಡ್ಡದು. ಕೊನೆಗೆ ತಮ್ಮನ ಸೈನ್ಯ ಶರಣಾಯಿತು. ಅಣ್ಣ ಸ್ವತಃ ತಾನೇ ಬಂದು ತಮ್ಮನನ್ನು ಸೆರೆಹಿಡಿದ. ಅಟ್ಟಹಾಸದಿಂದ ನಕ್ಕ. ತಮ್ಮನ ರಾಜ್ಯ ಅಣ್ಣನಿಗೆ ಸೇರಿಹೋಯಿತು.ಅಣ್ಣ ತಮ್ಮನನ್ನು ವಿಶೇಷ ಜೈಲಿಗೆ ಸೇರಿಸಿದ. ಅವನನ್ನು ತೀರಾ ಸಾಮಾನ್ಯ ಕೈದಿಯಂತೆ ನಡೆಸಿಕೊಳ್ಳಲು ಆಜ್ಞೆ ಮಾಡಿದ. ಅವನು ಜೈಲಿನಲ್ಲಿ ಹೇಗಿದ್ದಾನೆ ಎಂದು ದಿನಾಲು ವಿಚಾರಿಸುತ್ತಿದ್ದ. ಸೇವಕರು ಹೇಳಿದರು,  ಆತನಲ್ಲಿ ಯಾವ ವ್ಯತ್ಯಾಸವೂ ಕಾಣುವುದಿಲ್ಲ. ಯಾವ ಕೆಲಸ ಒಪ್ಪಿಸಿದರೂ ಮರುಮಾತನಾಡದೇ ಮಾಡುತ್ತಾನೆ. ಮುಖದಲ್ಲಿ ಯಾವ ವಿಷಾದವೂ ತೋರುತ್ತಿಲ್ಲ .ಅಣ್ಣ ಮತ್ತೂ ಒಂದು ಹೆಜ್ಜೆ ಮುಂದೆ ಹೋದ. ತಮ್ಮನನ್ನು ಬೆಳಿಗ್ಗೆ ತನ್ನ ಅರಮನೆಗೆ ಕರೆಸಿಕೊಂಡು ಮನೆಯ ಆಳಿನಂತೆ ದುಡಿಸುತ್ತಿದ್ದ. ಸಂಜೆಗೆ ಮತ್ತೆ ಅವನು ತನ್ನ ಜೈಲಿಗೇ ಹೋಗಬೇಕಿತ್ತು. ದಿನಗಳು ಕಳೆದಂತೆ ಅಣ್ಣನ ಚಿತ್ರಹಿಂಸೆ ಹೆಚ್ಚಾಗುತ್ತಿತ್ತು. ಇನ್ನು ತಮ್ಮನಿಗೆ ತಡೆದುಕೊಳ್ಳಲು ಸಾಧ್ಯವಿಲ್ಲ ಎನ್ನುವವರೆಗೆ ಅಪಮಾನ ಮಾಡುತ್ತಿದ್ದ.ಆದರೆ ತಮ್ಮ ಮಾತ್ರ ತನ್ನ ನಡವಳಿಕೆಯಲ್ಲಿ ಯಾವ ಬದಲಾವಣೆಯನ್ನೂ ತೋರಲಿಲ್ಲ. ಇದು ಅಣ್ಣನಿಗೆ ಆಶ್ಚರ್ಯ ತಂದಿತು. ಇಷ್ಟು ಅಪಮಾನ ಮಾಡಿದರೆ ಆತ್ಮಗೌರವವಿರುವ ಯಾರೂ ಬದುಕುವುದು ಸಾಧ್ಯವಿಲ್ಲ. ಆದರೆ ತಮ್ಮನಿಗೆ ಇದು ಹೇಗೆ ಸಾಧ್ಯವಾಯಿತು ಎಂದು ಚಿಂತಿಸಿ ತಮ್ಮನ ಹಿಂದೆ ಒಬ್ಬ ದೂತನನ್ನು ಬಿಟ್ಟು ಅವನನ್ನು ಗಮನಿಸಲು ಹೇಳಿದ.

 

ಎರಡು ದಿನಗಳ ನಂತರ ಆ ದೂತ ಬಂದು ಹೇಳಿದ.  `ಸ್ವಾಮೀ, ನಿಮ್ಮ ತಮ್ಮ ಜೈಲಿನಲ್ಲಿ ಒಂದು ಕೋತಿಯನ್ನು ಸಾಕಿದ್ದಾನೆ. ಇಡೀ ದಿನ ತಾವು ಅವನಿಗೆ ಯಾವ ತೊಂದರೆಯನ್ನು ನೀಡುತ್ತೀರೋ, ಯಾವ ಅಪಮಾನವನ್ನು ಮಾಡುತ್ತೀರೋ ಅದೆಲ್ಲವನ್ನು ಆತ ಜೈಲಿಗೆ ಬಂದ ಮೇಲೆ ಕೋತಿಗೆ ಮಾಡುತ್ತಾನೆ.~ ತಕ್ಷಣ ರಾಜನಿಗೆ ತಮ್ಮನ ಈ ತಾಳುವಿಕೆಯ ಗುಟ್ಟು ತಿಳಿಯಿತು. ಮರುದಿನ ಆ ಕೋತಿಯನ್ನು ಕೊಲ್ಲಿಸಿಬಿಟ್ಟ. ಮುಂದೆ ಮೂರುದಿನಗಳಲ್ಲಿ ತಮ್ಮ ಅಪಮಾನವನ್ನು ಹಿಂಸೆಯನ್ನು ತಾಳಲಾರದೇ ಆತ್ಮಹತ್ಯೆ ಮಾಡಿಕೊಂಡ.ಇದೊಂದು ಅದ್ಭುತ ಕಥೆ. ನಾವು ಮನುಷ್ಯರು ಸಂಘ ಜೀವಿಗಳಾಗಿದ್ದಾಗ ನಮ್ಮ ಭಾವನೆಗಳನ್ನು ಹಂಚಿಕೊಂಡು ಜೀವನವನ್ನು ಹಗುರಮಾಡಿಕೊಳ್ಳುತ್ತೇವೆ, ನಮ್ಮ ನೋವುಗಳಿಗೆ ಧ್ವನಿಕೊಟ್ಟು ಮತ್ತೆ ಬರುವ ತೊಂದರೆಗಳಿಗೆ ಎದೆ ಕೊಡುತ್ತೇವೆ. ಈ ಹಂಚಿಕೊಳ್ಳುವಿಕೆ ಜೀವನದ ಬಹಳ ದೊಡ್ಡ ವಿಷಯ. ಯಾರಿಗೆ ತಮ್ಮ ಸುಖ, ದುಃಖಗಳನ್ನು ಹೇಳಿಕೊಳ್ಳಲಾಗುವುದಿಲ್ಲವೋ, ಮತ್ತೊಬ್ಬರೊಡನೆ ಬದುಕಲು ಸಾಧ್ಯವಾಗುವುದಿಲ್ಲವೋ ಅಂಥವರು ತಮ್ಮದೇ ಭಾವನೆಗಳ ಬೆಂಕಿಯಲ್ಲಿ ಬೆಂದುಹೋಗುತ್ತಾರೆ, ಕರಕಾಗಿ ಹೋಗುತ್ತಾರೆ. ಬಹಳಷ್ಟು ಜನ ಆತ್ಮಹತ್ಯೆಗೆ ಮನ ನೀಡುತ್ತಾರೆ. ಹಂಚಿಕೊಂಡು ಬದುಕುವುದು ಜೀವನದ ಯಶಸ್ಸಿನ ಗುಟ್ಟು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.