ಹದಗೆಡದಿರಲಿ `ಆರೋಗ್ಯ' ವ್ಯವಸ್ಥೆ

7

ಹದಗೆಡದಿರಲಿ `ಆರೋಗ್ಯ' ವ್ಯವಸ್ಥೆ

ಡಾ.ಆರ್.ಬಾಲಸುಬ್ರಹ್ಮಣ್ಯಂ
Published:
Updated:

ಮೈಸೂರಿನಲ್ಲಿ ನಾನು ವಾಸಿಸುತ್ತಿರುವ ಅಪಾರ್ಟ್‌ಮೆಂಟ್‌ನ ವಾಚ್‌ಮನ್ ಮಗ ಕೆಲ ದಿನಗಳ ಹಿಂದೆ ಅನಾರೋಗ್ಯಕ್ಕೆ ತುತ್ತಾಗಿದ್ದ. ಅವನನ್ನು ತೋರಿಸಲು ಒಬ್ಬ ಒಳ್ಳೆಯ ವೈದ್ಯರ ಬಗ್ಗೆ ತಿಳಿಸುವಂತೆ ಆ ವಾಚ್‌ಮನ್ ನನ್ನನ್ನು ಕೇಳಿಕೊಂಡ. ನಾನು ಕೂಡಲೇ, ಮೈಸೂರಿನ ಸರ್ಕಾರಿ ಕೆ.ಆರ್.ಆಸ್ಪತ್ರೆಯಲ್ಲಿರುವ ನನ್ನ ಪರಿಚಯದ ವೈದ್ಯರ ಬಳಿ ಕರೆದೊಯ್ಯುವಂತೆ ತಿಳಿಸಿದೆ. ಇದರಿಂದ ಅವನಿಗೆ ಅಷ್ಟೇನೂ ಸಮಾಧಾನ ಆದಂತೆ ಕಾಣಲಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಯಾರಾದರೂ ತಿಳಿದವರು ಇದ್ದರೆ ಹೇಳಿ ಎಂದು ಅವನು ಕೋರಿದ. ಕೆಲವು ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರಿ ಆಸ್ಪತ್ರೆಗಳೇ ಉತ್ತಮವಾಗಿರುತ್ತವೆ ಎಂಬ ನನ್ನ ವಿವರಣೆ ಅವನ ಮನಸ್ಸಿಗೆ ನಾಟಲಿಲ್ಲ. 


 

ಇಂತಹ ಉದಾಹರಣೆಗಳು ವಿರಳವೇನಲ್ಲ. ಶಾಲೆ ಇರಲಿ ಅಥವಾ ಆಸ್ಪತ್ರೆಯೇ ಆಗಿರಲಿ ನಾವು ಬಹುತೇಕರು ಸರ್ಕಾರಿ ವ್ಯವಸ್ಥೆಯ ಬಗ್ಗೆ ಈಗ ನಂಬಿಕೆಯನ್ನೇ ಕಳೆದುಕೊಂಡುಬಿಟ್ಟಿದ್ದೇವೆ. ಸರ್ಕಾರಿ ವ್ಯವಸ್ಥೆಯಲ್ಲಿ ಉತ್ತಮ ಗುಣಮಟ್ಟವನ್ನು ನಿರೀಕ್ಷಿಸಲಾಗದು, ಆದರೆ ಖಾಸಗಿ ವ್ಯವಸ್ಥೆಯಲ್ಲಿ ಇಂತಹ ಪರಿಸ್ಥಿತಿ ಇರುವುದಿಲ್ಲ  ಎಂಬ ನಂಬಿಕೆ ನಮ್ಮಲ್ಲಿ ಬೇರೂರಿದೆ. ಹಾಗಿದ್ದರೆ ಎಲ್ಲ ಸಂದರ್ಭದಲ್ಲೂ ನಮ್ಮ ಈ ನಂಬಿಕೆ ನಿಜ ಆಗಿರುತ್ತದೆಯೇ? ನಮ್ಮ ದೇಶಕ್ಕೆ ಈಗ ಪರಿಣಾಮಕಾರಿಯಾದ ಸರ್ಕಾರಿ ವ್ಯವಸ್ಥೆಯ ಅಗತ್ಯವಿದೆ, ಮಾತ್ರವಲ್ಲ ಅಂತಹದ್ದೊಂದು ವ್ಯವಸ್ಥೆ ನಿಜಕ್ಕೂ ಮೌಲಿಕವಾದ ಸಂಘಟಿತ ಕಾರ್ಯನಿರ್ವಹಣೆಯನ್ನು ಮಾಡಬಲ್ಲದು ಎಂಬ ನನ್ನ ನಂಬಿಕೆ ಬಲವಾಗುವಂತಹ ಕೆಲವು ಉದಾಹರಣೆಗಳನ್ನು ನಾನಿಲ್ಲಿ ನೀಡಬಯಸುತ್ತೇನೆ.

 

ದಿನೇಶ್ (ಹೆಸರು ಬದಲಿಸಲಾಗಿದೆ) ಎಂಬ 20 ವರ್ಷದ ಯುವಕ ತನ್ನ ಪೋಷಕರು ಮತ್ತು ಅಣ್ಣ ತಂಗಿಯ ಜೊತೆ ಮೈಸೂರಿನಲ್ಲಿ ವಾಸವಾಗಿದ್ದ. ಬಡ ಕುಟುಂಬದ ಆತ ಪಿಯುಸಿಗೇ ಓದು ನಿಲ್ಲಿಸಿ ಹೋಟೆಲ್‌ನಲ್ಲಿ ಸರ್ವರ್ ಆಗಿ ದುಡಿಯುತ್ತಾ ಕುಟುಂಬಕ್ಕೆ ನೆರವಾಗುತ್ತಿದ್ದ. ಒಂದು ದಿನ ಇಬ್ಬರು ಸ್ನೇಹಿತರೊಟ್ಟಿಗೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದಾಗ ದುರದೃಷ್ಟವಶಾತ್ ಅಪಘಾತಕ್ಕೆ ಈಡಾದ.ಹೆಲ್ಮೆಟ್ ಧರಿಸದಿದ್ದುದರಿಂದ ಅವನ ತಲೆಗೆ ಭಾರಿ ಪೆಟ್ಟು ಬಿತ್ತು. ಮೈಸೂರಿನ ಖಾಸಗಿ ಆಸ್ಪತ್ರೆಗೆ ಅವನನ್ನು ದಾಖಲಿಸಲಾಯಿತು. ಎರಡು ತಿಂಗಳಿಗೂ ಹೆಚ್ಚು ಕಾಲ ಅವನು ಅಲ್ಲೇ ಇದ್ದ. ಅವನ ಕುಟುಂಬದವರು ಅಷ್ಟರಲ್ಲಾಗಲೇ ಚಿಕಿತ್ಸೆಗಾಗಿ 8 ಲಕ್ಷ ರೂಪಾಯಿಖರ್ಚು ಮಾಡಿದ್ದರು. ಆದರೂ, ಅವನ ಚಿಕಿತ್ಸೆ ಇನ್ನೂ ಪೂರ್ಣಗೊಂಡಿಲ್ಲವಾದ್ದರಿಂದ ಮತ್ತೆ 1.50 ಲಕ್ಷ ರೂಪಾಯಿ ಕಟ್ಟಿ ಎಂದು ಆಸ್ಪತ್ರೆಯವರು ಸೂಚಿಸಿದರು. ಇದರಿಂದ ಆ ಕುಟುಂಬಕ್ಕೆ ಆಘಾತ, ವಂಚನೆಗೊಳಗಾದ ಭಾವನೆ, ಅಸಹಾಯಕತೆ ಎಲ್ಲವೂ ಒಟ್ಟಿಗೇ ಆವರಿಸಿಕೊಂಡಂತಾಯಿತು.ಲಕ್ಷಾಂತರ ರೂಪಾಯಿ ಅವರ ಕೈಬಿಟ್ಟಿತ್ತಷ್ಟೇ ಅಲ್ಲ, ದಿನೇಶನಿಗೆ ಸೂಕ್ತ ಚಿಕಿತ್ಸೆಯೂ ಸಿಕ್ಕಿರಲಿಲ್ಲ. ನಂತರ ಅವನ ಮನೆಯವರು ಸಹಾಯಕ್ಕಾಗಿ ಎಲ್ಲರ ಬಳಿಯೂ ಅಂಗಲಾಚಿದರು. ಕಡೆಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಅವರಿಗೆ 30 ಸಾವಿರ ರೂಪಾಯಿ ಬಿಡುಗಡೆ ಆಯಿತು. ಆದರೆ ಆಸ್ಪತ್ರೆ ಮಾತ್ರ ಪೂರ್ತಿ ಹಣ ಕಟ್ಟದ ಹೊರತು ಚಿಕಿತ್ಸೆ ಆರಂಭಿಸುವುದಿಲ್ಲ ಎಂದು ಕಡ್ಡಿ ಎರಡು ತುಂಡು ಮಾಡಿದಂತೆ ಹೇಳಿಬಿಟ್ಟಿತು. ಅಸಹಾಯಕರಾದ ಪೋಷಕರು, ಸಂಪೂರ್ಣವಾಗಿ ಹಾಸಿಗೆ ಹಿಡಿದಿದ್ದ ದಿನೇಶನನ್ನು ಮನೆಗೆ ಕರೆತಂದರು.ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯೊಂದು ಅವನ ಆರೈಕೆ ಮಾಡತೊಡಗಿತು. ಆದರೆ ಅವನ ಸ್ಥಿತಿ ಗಂಭೀರ ಆಗಲಾರಂಭಿಸಿದಾಗ ಸಮೀಪದ ಆಸ್ಪತ್ರೆಗೆ ಅವನನ್ನು ಕರೆದೊಯ್ಯಲಾಯಿತು. ಅವನಿದ್ದ  ಸ್ಥಿತಿಯ ತೀವ್ರತೆಯನ್ನು ಮನೆಯವರಿಗೆ ಮನದಟ್ಟು ಮಾಡಿಕೊಟ್ಟ ಆಸ್ಪತ್ರೆಯವರು, ಇನ್ನು ಕೆಲ ದಿನಗಳಷ್ಟೇ ಅವನು ಬದುಕಲಿದ್ದಾನೆ ಎಂದು ತಿಳಿಸಿದರು. ಕಡೆಗೆ, ಈ ವರ್ಷದ ಅಕ್ಟೋಬರ್ ತಿಂಗಳಲ್ಲಿ ದಿನೇಶ್ ಕೊನೆಯುಸಿರೆಳೆದ. ಬಡತನ, ವೈದ್ಯ ಸಿಬ್ಬಂದಿಯ ನಿರ್ದಯೆ, ಯಾವ ನಿಯಂತ್ರಣಕ್ಕೂ ಒಳಪಡದ ಹಾಗೂ ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕಾದ ಹೊಣೆಗಾರಿಕೆ ಇಲ್ಲದ ಖಾಸಗಿ ಆರೋಗ್ಯ ವ್ಯವಸ್ಥೆಯ ಹೃದಯಹೀನ ವರ್ತನೆಗೆ ಅವನು ಬಲಿಪಶುವಾಗಿದ್ದ.

 

ಈ ಉದಾಹರಣೆ ಅತಿರೇಕದ್ದು ಎಂಬಂತೆ ನಮಗೆ ಕಾಣಿಸಬಹುದು. ಆದರೆ ರಘು (ಹೆಸರು ಬದಲಿಸಲಾಗಿದೆ) ಎಂಬ 32 ವರ್ಷದ ಬಡ ರೈತನಿಗೆ ಆದ ಅನುಭವ ಇದಕ್ಕಿಂತ ಭಿನ್ನವಾದುದು. ಮೈಸೂರು ಜಿಲ್ಲೆಯ ತನ್ನ ಹಳ್ಳಿಯಲ್ಲಿ ಎತ್ತಿನ ಗಾಡಿಯಿಂದ ಕೆಳಗೆ ಬಿದ್ದು ಅವನ ಬೆನ್ನುಹುರಿಗೆ ಭಾರಿ ಪೆಟ್ಟಾಗಿತ್ತು. ಮೂರು ವರ್ಷಗಳಿಂದ ಹಾಸಿಗೆ ಹಿಡಿದಿದ್ದ ಅವನಿಗೂ ಅದೇ ಸ್ವಯಂ ಸೇವಾ ಸಂಸ್ಥೆ ಆರೈಕೆ ಮಾಡುತ್ತಿತ್ತು. ಮಲಗಿದ್ದಲ್ಲೇ ಮಲಗಿದ್ದರಿಂದ ಒಂದು ವರ್ಷದ ಹಿಂದೆ ಅವನಿಗೆ ಹುಣ್ಣುಗಳು ಆಗಿದ್ದುದನ್ನು ಗಮನಿಸಿದ ಸಂಸ್ಥೆಯ ಸಿಬ್ಬಂದಿ, ಕೆ.ಆರ್.ಆಸ್ಪತ್ರೆಗೆ ಅವನನ್ನು ದಾಖಲಿಸಿದರು. ಆಸ್ಪತ್ರೆಯ ಶುಶ್ರೂಷಕರು ಮತ್ತು ವೈದ್ಯಕೀಯ ಸಿಬ್ಬಂದಿ ಅವನಿಂದ ಹಣವನ್ನೇ ನಿರೀಕ್ಷಿಸದೆ ಅಪಾರ ಕರುಣೆಯಿಂದ ಚಿಕಿತ್ಸೆ ನೀಡಿದರು.ಸರ್ಕಾರಿ ಆರೋಗ್ಯ ವ್ಯವಸ್ಥೆಯಲ್ಲಿನ ಭ್ರಷ್ಟಾಚಾರ ಮತ್ತು ದುರಾಡಳಿತಕ್ಕೆ ಸಂಬಂಧಿಸಿದ ದೂರುಗಳ ತನಿಖೆ ನಡೆಸುವ ಲೋಕಾಯುಕ್ತದಲ್ಲಿ ಇದ್ದ ನನ್ನ ಅನುಭವದಲ್ಲಿ, ಇಂತಹದ್ದೊಂದು ಸಾಧ್ಯತೆಯನ್ನು ನಂಬಲಿಕ್ಕೇ ನನಗೆ ಸಾಧ್ಯವಾಗಲಿಲ್ಲ. ಇನ್ನಷ್ಟು ಆಳಕ್ಕೆ ಇಳಿದು ನೋಡಿ ವಾಸ್ತವದಲ್ಲಿ ಏನು ನಡೆಯುತ್ತಿದೆ ಎಂಬುದನ್ನು ಅರಿಯಲು ನಾನು ತೀರ್ಮಾನಿಸಿದೆ. ಆಗ, ಕಳೆದ 7 ತಿಂಗಳಿನಿಂದಲೂ ಆಸ್ಪತ್ರೆಯಲ್ಲಿ ಇದ್ದ ರಘುವಿಗೆ ಈ ಅವಧಿಯಲ್ಲಿ ನಾಲ್ಕು ಶಸ್ತ್ರಚಿಕಿತ್ಸೆಗಳು ನಡೆದಿದ್ದವು. ಮತ್ತೊಂದು ಶಸ್ತ್ರಚಿಕಿತ್ಸೆ ನಡೆಸಿದರೆ ಆತ ಸಂಪೂರ್ಣ ಗುಣಮುಖನಾಗುತ್ತಾನೆ ಎಂಬ ನಂಬಿಕೆ ವೈದ್ಯರಿಗಿತ್ತು. ಪ್ಲಾಸ್ಟಿಕ್ ಸರ್ಜರಿ ನಡೆಸಿದ ಬಳಿಕ ಅವನ ಬಹುತೇಕ ಹುಣ್ಣುಗಳು ಗುಣವಾಗಿದ್ದವು.ಸ್ವಯಂ ಸೇವಾ ಸಂಸ್ಥೆಯು ಆತನ ಪತ್ನಿಗೆ ಪುಟ್ಟ ಕರಕುಶಲ ವಸ್ತುಗಳನ್ನು ತಯಾರಿಸುವ ತರಬೇತಿ ನೀಡಿತ್ತು. ಗಂಡನ ಹಾಸಿಗೆಯ ಮಗ್ಗುಲಲ್ಲೇ ಕುಳಿತು ಆಕೆ ಆ ವಸ್ತುಗಳನ್ನು ತಯಾರಿಸಿಕೊಳ್ಳುವುದಕ್ಕೆ ಆಸ್ಪತ್ರೆ ಸಿಬ್ಬಂದಿಯ ಆಕ್ಷೇಪವೇನೂ ಇರಲಿಲ್ಲ. ತನ್ನ ಎಲ್ಲ ವ್ರಣಗಳಿಂದಲೂ ಸಂಪೂರ್ಣ ಗುಣಮುಖನಾಗಿ ಮನೆಗೆ ತೆರಳುವ ವಿಶ್ವಾಸವನ್ನು ಈಗ ರಘು ಹೊಂದಿದ್ದಾನೆ. ಅಲ್ಲದೆ ಅವನು ಪಡೆಯುತ್ತಿರುವ ಪುನಶ್ಚೇತನ ಚಿಕಿತ್ಸೆ ಸಹ ಅವನ ಬದುಕನ್ನು ಮತ್ತಷ್ಟು ಸಹನೀಯವಾಗಿಸುವ ವಿಶ್ವಾಸ ಇದೆ. ರಘು ಮತ್ತು ಅವನ ಕುಟುಂಬಕ್ಕೆ ಆಸ್ಪತ್ರೆ ಸಿಬ್ಬಂದಿಯ ನಿರಂತರ ಸಹಕಾರ, ಚಿಕಿತ್ಸೆ ಮತ್ತು ಅನುಕಂಪ ಸಿಗದಿದ್ದರೆ ಇದೆಲ್ಲ ಸಾಧ್ಯವಾಗುತ್ತಿರಲಿಲ್ಲ.

 

ಇಂತಹ ಉದಾಹರಣೆಗಳು ಒಂದೆರಡಲ್ಲ. ಹಲವು ವರ್ಷಗಳ ಹಿಂದೆ 8 ವರ್ಷದ ಆದಿವಾಸಿ ಬಾಲಕಿಯೊಬ್ಬಳಿಗೆ ಗುಣಪಡಿಸಬಹುದಾದ ಹೃದ್ರೋಗ ಇತ್ತು. ಅವಳಿಗೆ ಚಿಕಿತ್ಸೆ ನೀಡುವಂತೆ ನಾನು ಬೆಂಗಳೂರಿನ ಪ್ರಸಿದ್ಧ ಖಾಸಗಿ ಆಸ್ಪತ್ರೆಯೊಂದಕ್ಕೆ ಶಿಫಾರಸು ಮಾಡಿದ್ದೆ. ಬಡ ಮಕ್ಕಳಿಗೆ ಉಚಿತ ಹೃದ್ರೋಗ ಶಸ್ತ್ರಚಿಕಿತ್ಸೆ ನಡೆಸುವುದಾಗಿ ಈ ಆಸ್ಪತ್ರೆ ಘೋಷಿಸಿಕೊಂಡಿತ್ತು. ಯಾವುದೇ ಖರ್ಚಿಲ್ಲದೆ ಉನ್ನತ ಮಟ್ಟದ ಚಿಕಿತ್ಸೆ ದೊರೆಯಬಹುದೆಂಬ ಭರವಸೆಯಿಂದ ನಾನು ಆ ಆಸ್ಪತ್ರೆಗೆ ಅವಳನ್ನು ಕಳುಹಿಸಿದ್ದೆ.ವಿಷಾದದ ಸಂಗತಿ ಎಂದರೆ, ಶಸ್ತ್ರಚಿಕಿತ್ಸೆಯನ್ನೇ ಮಾಡದೆ ಆಸ್ಪತ್ರೆಯವರು ಮಗುವನ್ನು ವಾಪಸ್ ಕಳುಹಿಸಿದ್ದರು. ಅವರು ಯಾಕೆ ಹಾಗೆ ಮಾಡಿದರು ಎಂಬುದು ಕೊನೆಗೂ ನನಗೆ ತಿಳಿಯಲೇ ಇಲ್ಲ. ಬಳಿಕ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ದೊರೆಯದ ಮಗು ಕೆಲ ದಿನಗಳ ಬಳಿಕ ಮೃತಪಟ್ಟಿತು. ಕಳೆದ ವರ್ಷ ಎಸ್‌ವಿವೈಎಂ ಎಂಬ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯು, ಶಸ್ತ್ರಚಿಕಿತ್ಸೆಯ ಅಗತ್ಯ ಇದ್ದ 6 ಹೃದ್ರೋಗಿ ಆದಿವಾಸಿ ಮಕ್ಕಳನ್ನು ಪತ್ತೆ ಹಚ್ಚಿತ್ತು. ಅದಾಗಲೇ ಮೊದಲಿನ ಪ್ರಕರಣದಿಂದ ಪಾಠ ಕಲಿತಿದ್ದ ನಾನು ಇವರಿಗಾಗಿ ಉತ್ತಮ ಹಾಗೂ ಹೆಚ್ಚು ಖರ್ಚಿಲ್ಲದ ಬೇರೆ ವ್ಯವಸ್ಥೆಯನ್ನು ಹುಡುಕಲು ಮುಂದಾದೆ. ಈ ಕುರಿತು ಜಯದೇವ ಹೃದ್ರೋಗ ಸಂಸ್ಥೆಯ ನಿರ್ದೇಶಕ ಡಾ. ಮಂಜುನಾಥ್ ಅವರೊಂದಿಗೆ ಚರ್ಚಿಸಿದೆ. ಅವರು ಬೆಂಗಳೂರಿನಲ್ಲಿರುವ ತಮ್ಮ ಆಸ್ಪತ್ರೆಗೆ ಮಕ್ಕಳನ್ನು ಕಳುಹಿಸಿಕೊಡುವಂತೆ ತಿಳಿಸಿದರು.ಕೇವಲ 10 ದಿನಗಳ ಒಳಗೆ ಈ ಮಕ್ಕಳು ನಯಾ ಪೈಸೆಯೂ ಖರ್ಚಿಲ್ಲದಂತೆ ಸೂಕ್ತ ಚಿಕಿತ್ಸೆ ಪಡೆದು ತಮ್ಮ ಊರಿಗೆ ಮರಳಿದರು. ಇದೇ ಬಗೆಯ ಚಿಕಿತ್ಸೆ ನೀಡುತ್ತಿರುವ ಇತರ ಖಾಸಗಿ ಆಸ್ಪತ್ರೆಗಳಿಗಿಂತ ಈ ಆಸ್ಪತ್ರೆ ಯಾವುದರಲ್ಲೂ ಕಡಿಮೆ ಇಲ್ಲ ಎಂಬುದು ಅಲ್ಲಿಗೆ ಭೇಟಿ ನೀಡುವ ಯಾರಿಗೇ ಆದರೂ ಅನುಭವಕ್ಕೆ ಬರುತ್ತದೆ. ಇರುವ ಒಂದೇ ವ್ಯತ್ಯಾಸವೆಂದರೆ, ಇಲ್ಲಿ ಕೈಗೆಟುಕುವ ಬೆಲೆಯಲ್ಲಿ ಸೇವಾ ಸೌಲಭ್ಯ ಸಿಗುವುದಷ್ಟೇ ಅಲ್ಲ ಬಡ ರೋಗಿಗಳಿಗೆ ಉಚಿತ ಚಿಕಿತ್ಸೆಯೂ ಲಭ್ಯವಿದೆ. ನನ್ನ ದೃಷ್ಟಿಯಲ್ಲಿ ಇದು ನಿಜಕ್ಕೂ `ಸಹೃದಯ' ಇರುವ ಒಂದು ಆಸ್ಪತ್ರೆ. ಇಂತಹ ಆಸ್ಪತ್ರೆಗಳು ನಿಜಕ್ಕೂ ಸರ್ಕಾರಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಹುಟ್ಟಿಸುತ್ತವೆ. ತನ್ನಲ್ಲಿಗೆ ಬರುವ ಲಕ್ಷಾಂತರ ಬಡ ಜನರಿಗೆ ಸದ್ದಿಲ್ಲದೇ ಅವರು ಒದಗಿಸುತ್ತಿರುವ ಸೇವೆ ನಿಜಕ್ಕೂ ಗಮನಾರ್ಹ. 

 

ಹಾಗೆಂದ ಮಾತ್ರಕ್ಕೆ ಎಲ್ಲ ಸರ್ಕಾರಿ ಆಸ್ಪತ್ರೆಗಳೂ ಉತ್ತಮವಾದವು ಮತ್ತು ನಿರೀಕ್ಷಿತ ಗುಣಮಟ್ಟಕ್ಕೆ ತಕ್ಕಂತೆ ಸೇವಾ ಸೌಲಭ್ಯ ಒದಗಿಸುತ್ತಿವೆ ಎಂದೋ ಅಥವಾ ಎಲ್ಲ ಖಾಸಗಿ ಆಸ್ಪತ್ರೆಗಳೂ ಸರಿ ಇಲ್ಲ ಮತ್ತು ಹೃದಯಹೀನ ಎಂದೋ ನಾನಿಲ್ಲಿ ಪ್ರತಿಪಾದಿಸುತ್ತಿಲ್ಲ. ರಾಜ್ಯದಾದ್ಯಂತ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳು ಇರುವಂತೆಯೇ, ಈ ಎರಡೂ ವಲಯಗಳಲ್ಲಿ ಕಳಪೆ ಗುಣಮಟ್ಟದ ಆಸ್ಪತ್ರೆಗಳು ಸಹ ಇವೆ. ಹೀಗಾಗಿ ಎಲ್ಲ ಸರ್ಕಾರಿ ಆಸ್ಪತ್ರೆಗಳೂ ಗುಣಮಟ್ಟದ ಸೇವೆ ನೀಡುವುದಿಲ್ಲ ಅಥವಾ ಎಲ್ಲ ಖಾಸಗಿ ಆಸ್ಪತ್ರೆಗಳಲ್ಲೂ ಅಂತಹ ಸೇವೆ ಲಭ್ಯವಿರುತ್ತದೆ ಎಂಬ ನಮ್ಮ ರೂಢಿಗತ ನಂಬಿಕೆ ಸರಿಯಾದುದಲ್ಲ ಎಂಬುದು ನನ್ನ ಅಭಿಪ್ರಾಯ. ಸರ್ಕಾರಿ ಆರೋಗ್ಯ ವ್ಯವಸ್ಥೆಯನ್ನು ಬಳಸಿಕೊಳ್ಳುತ್ತಿರುವ ಜನರ ಪ್ರಮಾಣ ಸಹ ನಾವು ಯೋಚನೆ ಮಾಡುವಂತಿದೆ.ಕರ್ನಾಟಕದಲ್ಲಿ ಶೇ 80ಕ್ಕೂ ಹೆಚ್ಚು ಆರೋಗ್ಯ ಮೂಲಸೌಲಭ್ಯವನ್ನು ಸರ್ಕಾರಿ ವ್ಯವಸ್ಥೆ ಹೊಂದಿದೆ. ಆದರೆ ಕೇವಲ ಶೇ 34ರಷ್ಟು ರೋಗಿಗಳು ಅವುಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸುತ್ತವೆ. ಹೀಗೆ ಸರ್ಕಾರಿ ಸೌಲಭ್ಯದ ಕನಿಷ್ಠ ಬಳಕೆ ನಮ್ಮಲ್ಲಿ ಕಳವಳ ಉಂಟು ಮಾಡುವಂತೆಯೇ, ಕೇವಲ ಶೇ 20ರಷ್ಟು ಮೂಲಸೌಲಭ್ಯ ಹೊಂದಿರುವ ಖಾಸಗಿ ಆಸ್ಪತ್ರೆಗಳು ರಾಜ್ಯದ ಇನ್ನುಳಿದ ಶೇ 66ರಷ್ಟು ಜನರಿಗೆಲ್ಲ ಯಾವ ರೀತಿ ಆರೋಗ್ಯ ಸೇವೆ ಒದಗಿಸಲು ಸಾಧ್ಯ ಎಂಬ ಪ್ರಶ್ನೆಯನ್ನೂ ನಮಗೆ ನಾವು ಕೇಳಿಕೊಳ್ಳಬೇಕಾಗುತ್ತದೆ. 

 

ಸರ್ಕಾರಿ ಸಂಸ್ಥೆಗಳು ಉನ್ನತ ಅರ್ಹತೆ ಹೊಂದಿರುವ ಸಿಬ್ಬಂದಿಯನ್ನಷ್ಟೇ ನೇಮಕ ಮಾಡಿಕೊಳ್ಳುತ್ತವೆ. ಆದರೆ ಖಾಸಗಿ ವಲಯದಲ್ಲಿ ಅಂತಹ ಕಡ್ಡಾಯ ಏನಿರುವುದಿಲ್ಲ. ಹಲವು ನರ್ಸಿಂಗ್ ಹೋಮ್‌ಗಳು ಅರ್ಹ ನರ್ಸಿಂಗ್ ಮತ್ತು ಪ್ರಯೋಗಾಲಯ ಸಿಬ್ಬಂದಿಯನ್ನೇ ಹೊಂದಿರುವುದಿಲ್ಲ. ಕೇವಲ ಬಿಳಿ ಸೀರೆ ಉಟ್ಟ ಮಾತ್ರಕ್ಕೆ ಅಥವಾ ಏಪ್ರನ್ ತೊಟ್ಟ ಮಾತ್ರಕ್ಕೆ ಆ ಸ್ಥಾನಕ್ಕೆ ಅಗತ್ಯವಾದ ಅರ್ಹತೆ ಬಂದುಬಿಡುವುದಿಲ್ಲ. ಕೆಲವೇ ಕೆಲವು ಖಾಸಗಿ ಆಸ್ಪತ್ರೆಗಳು ತರ್ಕಬದ್ಧ ಮತ್ತು ಸೂಕ್ತ ಶುಲ್ಕ ನೀತಿಯನ್ನು ಅನುಸರಿಸುತ್ತಿವೆ.ರೋಗಿಗಳಿಗೆ ನೀಡಬೇಕಾದ ನಿರೀಕ್ಷಿತ ಸೇವಾ ಸೌಲಭ್ಯದ ಮಾಹಿತಿಯನ್ನು ಬಹುತೇಕ ಆಸ್ಪತ್ರೆಗಳು ಬಹಿರಂಗಪಡಿಸುವುದಿಲ್ಲ. ಬಹಳಷ್ಟು ರೋಗಿಗಳಿಗೆ ತಮ್ಮ ಹಕ್ಕುಗಳ ಅರಿವಿರುವುದಿಲ್ಲ ಮತ್ತು ಕೆಲವರಷ್ಟೇ ಅದನ್ನು ತಿಳಿದುಕೊಳ್ಳಲು ಆಸಕ್ತಿ ವಹಿಸುತ್ತಾರೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆ ಕಾಯ್ದೆ- 2009 ಅಸ್ತಿತ್ವಕ್ಕೆ ಬಂದಿರುವುದರ ನಡುವೆಯೂ ಬಹುತೇಕಖಾಸಗಿ ಆಸ್ಪತ್ರೆಗಳ ಗುಣಮಟ್ಟ ಅಥವಾ ಶುಲ್ಕ ನಿಯಂತ್ರಣ ಜಾರಿಗೆ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಇವುಗಳ ನಿಯಂತ್ರಣದಲ್ಲಿ ಬಹುಮುಖ್ಯ ಪಾತ್ರ ವಹಿಸಬೇಕಾದ ಸರ್ಕಾರ ಕೇವಲ ಈ ಸಂಸ್ಥೆಗಳ ನೋಂದಣಿ ಕಾರ್ಯ ಮತ್ತು ನಿಗದಿತ ಶುಲ್ಕ ಸಂಗ್ರಹಕ್ಕಷ್ಟೇ ಸೀಮಿತಗೊಂಡಿದೆ. ಇದರಿಂದ ಕಳಪೆ ಗುಣಮಟ್ಟದ, ಅನೈತಿಕ ಚಟುವಟಿಕೆಗಳಲ್ಲಿ ತೊಡಗಿರುವ ಹಲವು ಖಾಸಗಿ ಆಸ್ಪತ್ರೆಗಳು ಎಗ್ಗಿಲ್ಲದೇ ಕಾರ್ಯ ನಿರ್ವಹಿಸುತ್ತಿವೆ. ಜೊತೆಗೆ ಮಿತಿಮೀರಿದ ಸೇವಾ ಶುಲ್ಕವನ್ನೂ ವಿಧಿಸುತ್ತಿವೆ. ಇದರಿಂದ ಮಧ್ಯಮ ವರ್ಗ ಮತ್ತು ಬಡಜನರಿಗೆ ಈ ಆಸ್ಪತ್ರೆಗಳು ಕೈಗೆಟುಕುವುದಿಲ್ಲ. ಹೀಗಾಗಿ ಅವರು ಅನ್ಯ ಮಾರ್ಗವಿಲ್ಲದೆ ಸರ್ಕಾರಿ ಸೌಲಭ್ಯಗಳನ್ನು ನೋಡಿಕೊಳ್ಳಬೇಕಾಗುತ್ತದೆ.

 

ಗುಣಮಟ್ಟವು ನಾವು ಖರ್ಚು ಮಾಡುವ ಹಣಕ್ಕೆ ಸರಿಸಮನಾಗಿ ಇರುವುದಿಲ್ಲ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಖ್ಯಾತ ವೈದ್ಯ ಡಾ. ನೋಶಿರ್ ಆ್ಯಂಟಿಯ ಅವರ ಪ್ರಕಾರ, `ಅತ್ಯಂತ ದುಬಾರಿ ಆಗಿರುವುದೆಲ್ಲ ಉತ್ತಮವಾದುದು ಎಂದರ್ಥವಲ್ಲ'. ರೋಗಿಗಳಿಗೆ ಉತ್ತಮವಾದ ಮತ್ತು ತಮಗೆ ಸೂಕ್ತ ಎನಿಸಿದ ಆಯ್ಕೆ ಮಾಡಿಕೊಳ್ಳುವ ಹಕ್ಕು ಇರುತ್ತದೆ. ಅಂತಹ ಆಸ್ಪತ್ರೆಗಳ ನಡುವಿನ ವ್ಯತ್ಯಾಸ ಗ್ರಹಿಸಲು ಅಗತ್ಯವಾದ ಮಾಹಿತಿಯನ್ನು ಒದಗಿಸಿ ಅವರನ್ನು ಸಬಲರನ್ನಾಗಿ ಮಾಡಬೇಕಾಗುತ್ತದೆ. ಸರ್ಕಾರವು ಖಾಸಗಿ ವಲಯದಲ್ಲಿ ಗುಣಮಟ್ಟವನ್ನು ಖಾತ್ರಿಪಡಿಸಿಕೊಳ್ಳುವುದರ ಜೊತೆಗೆ ತನ್ನ ಆಸ್ಪತ್ರೆಗಳೂ ಅಂತಹ ಸೇವಾ ಸೌಲಭ್ಯ ಹೊಂದುವಂತೆ ನೋಡಿಕೊಳ್ಳಬೇಕು. ಇಂತಹ ಕ್ರಮ ಸರ್ಕಾರಿ ಆರೋಗ್ಯ ವ್ಯವಸ್ಥೆಯ ಬಗ್ಗೆ ಜನಸಾಮಾನ್ಯರಲ್ಲಿ ನಂಬಿಕೆ ಹುಟ್ಟಿಸುತ್ತದೆ. ಅನಿಯಂತ್ರಿತ ಖಾಸಗಿ ಆರೋಗ್ಯ ವಲಯದ ಹೊಣೆಗಾರಿಕೆ ಮತ್ತು ಪ್ರಗತಿ ಸಾಧನೆಯ ಮೇಲೆ ನಿಯಂತ್ರಣ ಸಾಧಿಸಿದರೆ, ರೋಗಿಗಳ ಹಿತಾಸಕ್ತಿಯನ್ನು ಕಾಯ್ದಂತಾಗುತ್ತದೆ.

 

 

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry