ಹರಳುಗಟ್ಟುತ್ತಿರುವ ಭಾವನೆ ಬಳಸಿದ ಬಗೆ...

7

ಹರಳುಗಟ್ಟುತ್ತಿರುವ ಭಾವನೆ ಬಳಸಿದ ಬಗೆ...

ಎ.ಸೂರ್ಯ ಪ್ರಕಾಶ್
Published:
Updated:
ಹರಳುಗಟ್ಟುತ್ತಿರುವ ಭಾವನೆ ಬಳಸಿದ ಬಗೆ...

ಉತ್ತರ  ಪ್ರದೇಶದಲ್ಲಿ ಭಾರತೀಯ ಜನತಾ ಪಕ್ಷ ಸಾಧಿಸಿದ ಅದ್ಭುತ ಗೆಲುವು ಮತ್ತು ಇತರ ಮೂರು ರಾಜ್ಯಗಳಲ್ಲಿ ತೋರಿದ ಸಾಧನೆಯು ರಾಜಕೀಯ ವಿಶ್ಲೇಷಕರನ್ನು, ಚುನಾವಣಾ ಸಮೀಕ್ಷೆ ನಡೆಸುವವರನ್ನು ಮೂಕಸ್ತಬ್ಧರನ್ನಾಗಿಸಿದೆ.ಈ ಅವಿಸ್ಮರಣೀಯ ಮತ ಸಂಗ್ರಾಮದ ಫಲಿತಾಂಶವು ನಮ್ಮ ಬಹುತೇಕ ರಾಜಕೀಯ ಪಂಡಿತರು ‘ವಿಶ್ಲೇಷಣೆಯ ಒಟ್ಟು ಹೂರಣ’ ಎಂದು ಹೇಳುತ್ತಿದ್ದ ಮಾತುಗಳ ಸನಿಹದಲ್ಲಾಗಲಿ, ಚುನಾವಣಾಪೂರ್ವ ಸಮೀಕ್ಷೆ ಅಥವಾ ಮತದಾನೋತ್ತರದ ಸಮೀಕ್ಷೆಯ ಫಲಿತಾಂಶದ ಸಮೀಪದಲ್ಲಾಗಲಿ ಇಲ್ಲ.ಮುಖ್ಯವಾಹಿನಿಯ ಮಾಧ್ಯಮಗಳು– ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳು– ತುಸು ಹಿಂದೆ ಸರಿದು ನಿಂತು, ಚುನಾವಣಾ ಪ್ರಕ್ರಿಯೆಯನ್ನು ನಿರ್ಭಾವುಕವಾಗಿ ನೋಡುವ ಸಾಮರ್ಥ್ಯವನ್ನು ಕಳೆದುಕೊಂಡಿವೆಯೇನೋ ಎಂಬಂತಿದೆ ಚುನಾವಣಾ ಫಲಿತಾಂಶ.

 

ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಕುರಿತು ರಾಜಕೀಯ ವಿಶ್ಲೇಷಕರಲ್ಲಿ ಆಳವಾಗಿ ಬೇರೂರಿರುವ ಪೂರ್ವಗ್ರಹ ಮತ್ತು ದ್ವೇಷ ಇದಕ್ಕೆ ಮುಖ್ಯ ಕಾರಣ. ‘ಜಾತ್ಯತೀತತೆ’ ಹಾಗೂ ‘ಹಿಂದೂ ಕೋಮುವಾದ’ ಎಂಬ ಕನ್ನಡಕದ ಮೂಲಕವೇ ಎಲ್ಲವನ್ನೂ ನೋಡುವ ಹಳಸಲು ಮಾದರಿಯನ್ನು ಮೀರಿ ನಿಲ್ಲಲು ಇವರಿಗೆ ಮನಸ್ಸಿಲ್ಲದಿರುವುದೂ ಒಂದು ಕಾರಣ.ನೆಹರೂ ಚಿಂತನೆಯ ಜನ ಹಾಗೂ ಮಾರ್ಕ್ಸ್‌ವಾದಿ ಜೊತೆಗಾರರು ಅನುಸರಿಸಿಕೊಂಡು ಬಂದಿರುವ  ಈ ಮಾದರಿಯ ಅನ್ವಯ, ನೆಹರೂ ಚಿಂತನೆಯನ್ನು ಒಪ್ಪಿಕೊಂಡವರು ಭಾರತದ ರಾಜಕೀಯದಲ್ಲಿ ‘ಒಳ್ಳೆಯ ವ್ಯಕ್ತಿ’ಗಳು.ನೆಹರೂ ಚಿಂತನೆಯ ಭುಜದ ಮೇಲೆ ಸವಾರಿ ಮಾಡುವ ಮಾರ್ಕ್ಸ್‌ವಾದಿಗಳು– ಅವರು ನೆಹರೂ ಚಿಂತನೆಯ ಜೊತೆ ಇದ್ದಾರೆ ಎಂಬ ಕಾರಣಕ್ಕೆ– ಒಳ್ಳೆಯವರೇ ಆಗಿರುತ್ತಾರೆ. ರಾಷ್ಟ್ರೀಯತೆಯ ಪರ ಒಲವುಳ್ಳವರು ಕೆಟ್ಟವರು. ಹಾಗೆಯೇ, ಪ್ರಾದೇಶಿಕ ರಾಜಕೀಯ ಶಕ್ತಿಗಳನ್ನು ಪ್ರತಿನಿಧಿಸುವ ವ್ಯಕ್ತಿಗಳನ್ನು ‘ಸಹಿಸಿಕೊಳ್ಳಬಹುದು’, ಅಗತ್ಯವೆನಿಸಿದಾಗ ಅವರನ್ನು ಜಾಣತನದಿಂದ ಬಳಸಿಕೊಳ್ಳಬಹುದು ಎನ್ನುತ್ತದೆ ಈ ಮಾದರಿ.  

 

ನೆಹರೂ ಹಾಗೂ ಮಾರ್ಕ್ಸ್‌ವಾದಿ ಚಿಂತನೆಗಳು ಕಳೆದ ಎಪ್ಪತ್ತು ವರ್ಷಗಳ ಅವಧಿಯಲ್ಲಿ ಮಾಧ್ಯಮಗಳನ್ನು, ಅದರಲ್ಲೂ ಮುಖ್ಯವಾಗಿ ಇಂಗ್ಲಿಷ್‌ ಮಾಧ್ಯಮಗಳನ್ನು, ಶಿಕ್ಷಣ ಕ್ಷೇತ್ರವನ್ನು ಮತ್ತು ಅಧಿಕಾರಶಾಹಿಯನ್ನು ವ್ಯಾಪಿಸಿಕೊಂಡಿವೆ.

 

ಅಲ್ಲದೆ, ಈ ವಲಯಗಳಲ್ಲಿನ ಆಲೋಚನೆಗಳು ತಾವು ಹೇಳಿದಂತೆಯೇ ನಡೆಯುವಂತೆ ನೋಡಿಕೊಂಡಿವೆ. ಹಾಗಾಗಿ, ನೆಹರೂವಾದಿ ಆಗುವುದು ಅಥವಾ ಎಡಪಂಥೀಯ ಒಲವು ಹೊಂದಿರುವುದು ಒಂದು ಫ್ಯಾಷನ್. ಈ ಎರಡು ಚಿಂತನೆಗಳನ್ನು ಒಪ್ಪಿಕೊಳ್ಳದವರನ್ನು ಬಹಿಷ್ಕೃತರಂತೆ ಕಾಣಲಾಗುತ್ತದೆ, ಈ ವಲಯಗಳಲ್ಲಿನ ಮೇಲಿನ ಸ್ತರಗಳ ಹುದ್ದೆಗಳಿಂದ ದೂರ ಇಡಲಾಗುತ್ತದೆ.

 

ಈಗ 2017ರ ಉತ್ತರ ಪ್ರದೇಶ ಚುನಾವಣೆಗೆ ಮರಳೋಣ. ಮಾಧ್ಯಮಗಳಲ್ಲಿ ಈ ಎರಡು ಚಿಂತನೆಗಳ ಪ್ರಭಾವ ಹೆಚ್ಚಿರುವ ಕಾರಣ, ಈ ಚಿಂತನೆಯು ಎಲ್ಲವನ್ನೂ ಕನ್ನಡಕದ ಮೂಲಕವೇ ನೋಡುವ ಕಾರಣ, ಚುನಾವಣೆಯನ್ನು ‘ಜಾತ್ಯತೀತ’ ಹಾಗೂ ‘ಹಿಂದೂ ಕೋಮುವಾದಿ’ ಶಕ್ತಿಗಳ ನಡುವಣ ಯುದ್ಧ ಎಂಬ ದೃಷ್ಟಿಕೋನ ಹೊರತುಪಡಿಸಿ ಬೇರೆ ರೀತಿಯಿಂದ ಕಾಣಲು ಸಾಧ್ಯವಾಗಲಿಲ್ಲ!ಜನಸಂಘದ ಕಾಲದಿಂದಲೂ ಬಿಜೆಪಿಯನ್ನು ಹಿಂದುತ್ವವಾದಿ ಪಕ್ಷ ಎಂದು ಕಾಣಲಾಗುತ್ತಿದ್ದರೂ, ಈ ಪಕ್ಷ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಬಗ್ಗೆ ಮಾತನಾಡಿದ್ದರೂ, ಈ ಯಾವ ವಿಚಾರಗಳೂ ಪಕ್ಷದ ಉತ್ತರ ಪ್ರದೇಶ ಚುನಾವಣಾ ಪ್ರಚಾರದಲ್ಲಿ ಸುಳಿಯದಂತೆ ಮೋದಿ ನೋಡಿಕೊಂಡರು. ಸಮಾನತೆ ಹಾಗೂ ಸಮಾನ ಅವಕಾಶಗಳನ್ನು ಮೂಲ ಮಂತ್ರವಾಗಿಸಿಕೊಂಡ ನವ ಭಾರತದ ಭರವಸೆಯನ್ನು ಯುವಕರಿಗೆ, ಮಹತ್ವಾಕಾಂಕ್ಷೆ ಇರುವವರಿಗೆ ನೀಡಿದರು. ಈ ವಿಚಾರಗಳ ಮೂಲಕವೇ ಸಮಾಜದ ಎಲ್ಲ ವರ್ಗಗಳನ್ನು ತಲುಪುವ ನಿರ್ಧಾರ ಮಾಡಿದರು.

 

ಆದರೆ, ಬೇಸರದ ವಿಚಾರವೆಂದರೆ, ಕಾಂಗ್ರೆಸ್‌, ಸಮಾಜವಾದಿ ಪಕ್ಷ ಹಾಗೂ ಬಿಎಸ್‌ಪಿ ಅಷ್ಟೊಂದು ಉತ್ಸಾಹದಿಂದ ಇರಲಿಲ್ಲ. ಇವು ಕೆಲವು ಸಂದರ್ಭಗಳಲ್ಲಿ ವಿಭಜನಕಾರಿಯಾಗಿಯೂ ವರ್ತಿಸಿದಂತೆ ಕಂಡುಬಂತು. ಅಲ್ಪಸಂಖ್ಯಾತರ ಮತ ಪಡೆಯುವ ಹತಾಶ ಯತ್ನದಲ್ಲಿದ್ದ ಅವು ಚುನಾವಣಾ ಕಣದಲ್ಲಿ ದಿಕ್ಕೆಟ್ಟವು.

 

ನೋಟು ರದ್ದತಿಯ ವಿಚಾರದಲ್ಲಿ ಕೂಡ ಈ ಮೂರು ಪಕ್ಷಗಳು ಹಾಗೂ ಮಾಧ್ಯಮಗಳು ವಾಸ್ತವ ಅರ್ಥ ಮಾಡಿಕೊಳ್ಳಲಿಲ್ಲ. ನೋಟು ರದ್ದತಿಯ ನಂತರ, ನವೆಂಬರ್‌ನಿಂದ ಜನವರಿ ನಡುವಣ ಅವಧಿಯಲ್ಲಿ ಬಡವರು ಹಾಗೂ ಕಡುಬಡವರು ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರಾದರೂ, ಅದಕ್ಕೆ ಮೋದಿ ಅಥವಾ ಅವರ ಪಕ್ಷವನ್ನು ಶಿಕ್ಷಿಸಬೇಕು ಎಂದು ಈ ವರ್ಗದವರಿಗೆ ಅನಿಸಲಿಲ್ಲ. ಬದಲಿಗೆ, ಮೋದಿ ಅವರ ಕ್ರಮಕ್ಕೆ ಇವರು ಬೆಂಬಲ ಸೂಚಿಸಿದಂತೆ ಕಾಣುತ್ತಿದೆ.

 

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೋದಿ ಅವರು ದೇಶದ ಬಡವರ ಮನಸ್ಸು ಹಾಗೂ ಹೃದಯ ಪ್ರವೇಶಿಸಿರುವಂತಿದೆ ಎಂಬುದನ್ನು ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಫಲಿತಾಂಶ ಹೇಳುತ್ತಿದೆ. ಈ ವಿಚಾರದಲ್ಲಿ ಮೋದಿ ಹಾಗೂ ಇಂದಿರಾ ಗಾಂಧಿ ನಡುವೆ ಹೋಲಿಕೆ ಮಾಡಬಹುದು.

 

ಇಂದಿರಾ ಕೂಡ ದೇಶದ ಬಡವರ ಮನಸ್ಸನ್ನು ಪ್ರಭಾವಿಸಿದ್ದರು, ಬಡತನ ನಿರ್ಮೂಲನೆ ಬಗ್ಗೆ (ಗರೀಬಿ ಹಟಾವೊ) ಮತ್ತೆ ಮತ್ತೆ ಮಾತನಾಡುತ್ತಿದ್ದರು. ಆದರೆ ಬಡತನ ನಿರ್ಮೂಲನೆ ಮಾಡುವುದು ಹೇಗೆ ಎಂಬ ಬಗ್ಗೆ ಅವರಲ್ಲಿ ಯೋಜನೆ ಇರಲಿಲ್ಲ. ಹಾಗಾಗಿ, ಮೋದಿ ಹಾಗೂ ಇಂದಿರಾ ನಡುವಣ ಹೋಲಿಕೆಯನ್ನು ಇಷ್ಟಕ್ಕೇ ನಿಲ್ಲಿಸಬೇಕಾಗುತ್ತದೆ.

 

ಇಂದಿರಾ ಅವರು ಬ್ಯಾಂಕ್‌ಗಳನ್ನು ರಾಷ್ಟ್ರೀಕರಿಸಿದರು, ಸಾರ್ವಜನಿಕರ ಹಣವನ್ನು ಬೋಗಸ್‌ ಸಾಲ ಮೇಳಗಳಿಗೆ ದುಂದುವೆಚ್ಚ ಮಾಡಿದರು. ಈ ಮೇಳಗಳಿಂದ ಪ್ರಯೋಜನ ಪಡೆದುಕೊಂಡವರು ಬಹುಪಾಲು ಸಂದರ್ಭಗಳಲ್ಲಿ ಕಾಂಗ್ರೆಸ್‌ ಕಾರ್ಯಕರ್ತರೇ ಆಗಿದ್ದರು. ಆದರೆ ಯೋಜನೆಗಳನ್ನು ಅನುಷ್ಠಾನಕ್ಕೆ ತರುವ ಬದ್ಧತೆ ತಮಗೆ ಇದೆ ಎಂಬ ಸಂದೇಶವನ್ನು ಮೋದಿ ಅವರು ನೀಡುತ್ತಾರೆ. 27 ಕೋಟಿ ಜನ ಬಡವರು ಜನಧನ ಖಾತೆ ತೆರೆದಿರುವುದು ಇದಕ್ಕೊಂದು ನಿದರ್ಶನ.

 

ಉತ್ತರ ಪ್ರದೇಶ, ಉತ್ತರಾಖಂಡ, ಮಣಿಪುರ ಹಾಗೂ ಈಚೆಗೆ ಪಂಚಾಯಿತಿ ಮತ್ತು ನಗರಪಾಲಿಕೆ ಚುನಾವಣೆಗಳನ್ನು ಕಂಡ ಒಡಿಶಾ, ಮಹಾರಾಷ್ಟ್ರದಿಂದ ಹಲವು ಸಂದೇಶಗಳು ಹೊರಬರುತ್ತಿವೆ. ದೇಶದಲ್ಲಿ ಬೆಳೆಯುತ್ತಿರುವ ವಿಭಜನಕಾರಿ ಧೋರಣೆಗಳ ಬಗ್ಗೆ, ದೇಶದ ಏಕತೆಗೆ ಧಕ್ಕೆ ತರುವ ಶಕ್ತಿಗಳಿಗೆ ಕಾಂಗ್ರೆಸ್ ಹಾಗೂ ಎಡಪಂಥೀಯ ಗುಂಪುಗಳು ನೀಡುತ್ತಿರುವ ಪ್ರತ್ಯಕ್ಷ, ಪರೋಕ್ಷ ಬೆಂಬಲದ ಬಗ್ಗೆ ಜನರಲ್ಲಿ ಆತಂಕ ಇದೆ.‘ಭಾರತ್‌ ಕೊ ಟುಕಡೆ, ಟುಕಡೆ ಕರೇಂಗೆ’ (ಭಾರತವನ್ನು ತುಂಡು ತುಂಡು ಮಾಡುತ್ತೇವೆ) ಎಂದು ನವದೆಹಲಿ ಹಾಗೂ ಪಶ್ಚಿಮ ಬಂಗಾಳದ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಂದ ಘೋಷಣೆ ಕೇಳಿಬಂದ ಘಟನೆಯಿಂದ ಸಾಮಾನ್ಯ ನಾಗರಿಕ ಆತಂಕಕ್ಕೆ ಒಳಗಾಗಿದ್ದಾನೆ.  

 

ಅಲ್ಲದೆ, ಕಾಶ್ಮೀರಿ ಉಗ್ರರು ಹಾಗೂ ಪ್ರತ್ಯೇಕತಾವಾದಿ ಘೋಷಣೆಗಳನ್ನು ಕೂಗುವವರಿಗೆ ರಾಷ್ಟ್ರೀಯ ಹಾಗೂ ಪ್ರಾದೇಶಿಕ ಪಕ್ಷಗಳ ಹಲವು ನಾಯಕರು ಬೆಂಬಲ ಕೊಡಲು ಸಾಧ್ಯವಾಗಿದ್ದು ಹೇಗೆ ಎಂಬುದು ಜನಸಾಮಾನ್ಯನಿಗೆ ಅರ್ಥವಾಗುತ್ತಿಲ್ಲ. ಇವೆಲ್ಲವುಗಳಿಗಿಂತ ಹೆಚ್ಚಾಗಿ, ಮನಮೋಹನ್ ಸಿಂಗ್ ಅವರು ಹತ್ತು ವರ್ಷ ಮುನ್ನಡೆಸಿದ ಅಸ್ಥಿರ ಮೈತ್ರಿಕೂಟದ ಆಳ್ವಿಕೆಯಿಂದ ಜನ ಇನ್ನೂ ಚೇತರಿಸಿಕೊಂಡಿಲ್ಲ.

 

ಚುನಾವಣಾ ಫಲಿತಾಂಶಗಳ ನಂತರ ಮೋದಿ ಅವರು ಈ ಮಾತು ಹೇಳಿದರು: ‘ಬಹುಮತದ ಆಧಾರದಲ್ಲಿ ಸರ್ಕಾರಗಳು ರಚನೆಯಾಗುತ್ತವೆ. ಆದರೆ ಸರ್ವಮತದ ಆಧಾರದಲ್ಲಿ ಸರ್ಕಾರಗಳು ಮುನ್ನಡೆಯುತ್ತವೆ. ಸರ್ಕಾರವು ಮತ ನೀಡಿದವರದ್ದೂ ಹೌದು, ಮತ ನೀಡದವರದ್ದೂ ಹೌದು’.

ಮೋದಿ ಅವರು ಅಭಿವೃದ್ಧಿಯ ವಿಚಾರಗಳ ಆಧಾರದಲ್ಲಿ ಚುನಾವಣೆ ಎದುರಿಸಿದರು, ಭಾರಿ ಜನಬೆಂಬಲ ಪಡೆದರು.ಹಾಗಾಗಿ, ಸರ್ಕಾರ ಕೂಡ ಈ ಚೌಕಟ್ಟಿನಲ್ಲೇ ಕೆಲಸ ಮಾಡಬೇಕು. ಉತ್ತರ ಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಇದೇ ಮಾರ್ಗಸೂಚಿ ಆಗಿರಬೇಕು.

 

ಮೂರು ದಶಕಗಳ ನಂತರ ಬಲಿಷ್ಠವಾದ, ಎಲ್ಲರನ್ನೂ ಒಳಗೊಳ್ಳುವ, ಬಲಾಢ್ಯ ನಾಯಕನನ್ನು ಹೊಂದಿರುವ ರಾಷ್ಟ್ರೀಯ ಪಕ್ಷದ ಪರವಾಗಿ ದೇಶದ ಮನಸ್ಸು ತಿರುಗುತ್ತಿದೆ.ಅಸ್ಥಿರ ಮೈತ್ರಿಕೂಟಗಳು, ಧಾರ್ಮಿಕ ಗುಂಪುಗಳ ಜೊತೆ ಆಟವಾಡುವ ಹಾಗೂ ವಿಭಜನಕಾರಿ ಶಕ್ತಿಗಳನ್ನು ಉತ್ತೇಜಿಸುವ ಪಕ್ಷಗಳ ವಿರುದ್ಧ ಭಾವನೆ ಹರಳುಗಟ್ಟುತ್ತಿದೆ. ಈ ಭಾವನೆಯನ್ನು ಮೋದಿ ಅವರು ತಮ್ಮ ಪರ ಬಳಸಿಕೊಳ್ಳುತ್ತಿದ್ದಾರೆ! 

ಲೇಖಕ ಪ್ರಸಾರ ಭಾರತಿ ಮಂಡಳಿ ಅಧ್ಯಕ್ಷ

 

***

ಕಳೆದ ಎರಡು ವರ್ಷಗಳ ಅವಧಿಯಲ್ಲಿ ಮೋದಿ ಅವರು ದೇಶದ ಬಡವರ ಮನಸ್ಸು ಹಾಗೂ ಹೃದಯ ಪ್ರವೇಶಿಸಿರುವಂತಿದೆ ಎಂಬುದನ್ನು ಉತ್ತರ ಪ್ರದೇಶ ಹಾಗೂ ಉತ್ತರಾಖಂಡ ರಾಜ್ಯಗಳ ಫಲಿತಾಂಶ ಹೇಳುತ್ತಿದೆ. ಈ ವಿಚಾರದಲ್ಲಿ ಮೋದಿ ಹಾಗೂ ಇಂದಿರಾ ಗಾಂಧಿ ನಡುವೆ ಹೋಲಿಕೆ ಮಾಡಬಹುದು.ಇಂದಿರಾ ಕೂಡ ದೇಶದ ಬಡವರ ಮನಸ್ಸನ್ನು ಪ್ರಭಾವಿಸಿದ್ದರು, ಬಡತನ ನಿರ್ಮೂಲನೆ ಬಗ್ಗೆ (ಗರೀಬಿ ಹಟಾವೊ) ಮತ್ತೆ ಮತ್ತೆ ಮಾತನಾಡುತ್ತಿದ್ದರು. ಆದರೆ ಬಡತನ ನಿರ್ಮೂಲನೆ ಮಾಡುವುದು ಹೇಗೆ ಎಂಬ ಬಗ್ಗೆ ಅವರಲ್ಲಿ ಯೋಜನೆ ಇರಲಿಲ್ಲ. ಹಾಗಾಗಿ, ಮೋದಿ ಹಾಗೂ ಇಂದಿರಾ ನಡುವಣ ಹೋಲಿಕೆಯನ್ನು ಇಷ್ಟಕ್ಕೇ ನಿಲ್ಲಿಸಬೇಕಾಗುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry