ಶನಿವಾರ, ಮೇ 15, 2021
22 °C

ಹರ್ಶೀ ಚಾಕಲೇಟ್

ಗುರುರಾಜ ಕರ್ಜಗಿ Updated:

ಅಕ್ಷರ ಗಾತ್ರ : | |

ಅಮೆರಿಕದ ಪೆನಿಸಿಲ್ವೇನಿಯಾದಲ್ಲಿ ಒಬ್ಬ ತುಂಬ ಬಡ ಹುಡುಗನಿದ್ದ. ಅವನ ಹೆಸರು ಮಿಲ್ಟನ್ ಹರ್ಶೀ. ಆತ ಯಾವುದರಲ್ಲಿಯೂ ಯಶ ಗಳಿಸುವಂತೆ ತೋರುತ್ತಿರಲಿಲ್ಲ. ಶಾಲೆಯಲ್ಲಿ ಪರೀಕ್ಷೆ ಪಾಸಾಗುವುದು ಕಷ್ಟವಿತ್ತು. ಅವನು ಸರಿಯಾಗಿ ಮಾತನಾಡಲಾರ.ಅವನು ಶಾಲೆಯನ್ನು ಪೂರೈಸದೇ ಹೊರಬಂದ. ಅವನು ಒಂದು ಪ್ರಿಂಟಿಂಗ್ ಪ್ರೆಸ್‌ನಲ್ಲಿ ಕೆಲಸಕ್ಕೆ ಸೇರಿಕೊಂಡ. ಅಲ್ಲಿಯೂ ವೈಫಲ್ಯವೇ. ಏನೋ ಚಿಂತಿಸುತ್ತ ಹೋಗುತ್ತಿರುವಾಗ ಹತ್ತಾರು ಪುಟಗಳನ್ನು ಜೋಡಿಸಿದ ಮೊಳೆಗಳ ತಟ್ಟೆಯನ್ನು ಕೆಳಗೆ ಬೀಳಿಸಿಬಿಟ್ಟ. ಮತ್ತೊಮ್ಮೆ ಕುತೂಹಲದಿಂದ ಮುದ್ರಣ ಯಂತ್ರದೊಳಗೆ ಬಗ್ಗಿ ನೋಡುವಾಗ ತನ್ನ ಹ್ಯಾಟನ್ನು ಯಂತ್ರದೊಳಗೆ ಬೀಳಿಸಿದಾಗ ಯಂತ್ರವೇ ನಿಂತುಹೋಯಿತು!ಅದರೊಂದಿಗೆ ಅವನ ಕೆಲಸವೂ ಹೋಯಿತು. ಅವನ ತಾಯಿ ಚಿಂತಿಸಿ ಒಂದು ಉಪಾಯ ತೆಗೆದಳು. ಆಕೆಗೆ ಚಾಕಲೇಟ್ ಮಾಡುವ ವಿಧಾನ ಗೊತ್ತಿತ್ತು. ತಾನು ಮನೆಯಲ್ಲಿ ಮಾಡಿದ ಚಾಕಲೇಟ್‌ಗಳನ್ನು ಈತ ಮನೆಮನೆಗೆ ಹೋಗಿ ಮಾರಿಕೊಂಡು ಬರುವ ಕೆಲಸವನ್ನಾದರೂ ಮಾಡಲಿ ಎಂದು ತಯಾರಿಕೆ ಪ್ರಾರಂಭಿಸಿದಳು. ಸ್ವಲ್ಪವೇ ತಯಾರಿಸಿದ ಚಾಕಲೇಟ್‌ನಲ್ಲಿ ಲಾಭ ಬರುವುದೆಷ್ಟು? ಈತ ಬೇರೆ ಬೇರೆ ಪ್ರದೇಶಗಳಿಗೆ ಹೋಗಿ ಮಾರಲು ಪ್ರಯತ್ನಿಸಿ ಸೋತು ಹೋದ. ಈ ಮಧ್ಯೆ ಪತ್ರಿಕೆಯಲ್ಲಿ  ಹುಡುಗರು ಬೇಕಾಗಿದ್ದಾರೆ  ಎಂಬ ಜಾಹೀರಾತನ್ನು ನೋಡಿ ತಾನೂ ಅರ್ಜಿ ಸಲ್ಲಿಸಿ ಹೋದ. ಜಾಹೀರಾತು ನೀಡಿದವರಾರೋ ಖದೀಮರು.ಇವನ ಜೊತೆಗೆ ಇನ್ನೂ ಹತ್ತಾರು ಹುಡುಗರನ್ನು ಸೇರಿಸಿ ಕೈಕಾಲು ಕಟ್ಟಿ ಬೇರೊಂದು ಪ್ರದೇಶಕ್ಕೆ ಕರೆದೊಯ್ದು ಕೂಲಿ ಕೆಲಸಕ್ಕೆ ಹಚ್ಚಿದರು. ಈತ ತನ್ನ ಜೇಬಿನಲ್ಲಿದ್ದ ಸ್ವಲ್ಪ ದುಡ್ಡನ್ನು ಅಲ್ಲಿದ್ದ ಆಸೆಬರುಕರಿಗೆ ನೀಡಿ ಪಾರಾಗಿ ಓಡಿ ಬಂದ. ಪಾಪ! ದುಡ್ಡಿಲ್ಲದ ಇತರ ಹುಡುಗರು ತುಂಬ ಕಷ್ಟಪಟ್ಟಿರಬೇಕು. ಮತ್ತೆ ಮನೆಗೆ ಬಂದು ರಾತ್ರಿಯಲ್ಲಿ ಚಾಕಲೇಟ್ ಮಾಡಿ ಮರುದಿನ ಹಗಲಿನಲ್ಲಿ ಮಾರಿಕೊಂಡು ಬರುತ್ತಿದ್ದ. ತನ್ನ ಜೀವನ ಹೀಗೆಯೇ ಕಳೆದುಹೋಗುತ್ತದೆ ಎನ್ನಿಸಿತು.ಆಗ ಇಂಗ್ಲೆಂಡಿನ ಚಿಕ್ಕ ವ್ಯಾಪಾರಿಯೊಬ್ಬ ಹರ್ಶೀ ಬಳಿಗೆ ಬಂದು, ದೊಡ್ಡ ಪ್ರಮಾಣದಲ್ಲಿ ಚಾಕಲೇಟ್ ಮಾಡಿಕೊಡುವುದಾದರೆ ತಾನು ಇಂಗ್ಲೆಂಡಿನಲ್ಲಿ ಇದಕ್ಕೆ ಮಾರುಕಟ್ಟೆ ಹೊಂದಿಸುವುದಾಗಿ ಹೇಳಿದ. ಮಿಲ್ಟನ್ ಹರ್ಶೀ ತಲೆಗೆ ಏನು ಬಂತೋ ತಿಳಿಯದು. ತನ್ನ ಮನೆ, ಇರುವ ಎಲ್ಲ ಆಸ್ತಿಗಳನ್ನು ಒತ್ತೆ ಇಟ್ಟು ಬ್ಯಾಂಕಿನಲ್ಲಿ ಭಾರಿ ಸಾಲ ತೆಗೆದುಕೊಂಡ, ಧೈರ್ಯದಿಂದ ಜನರನ್ನು ನಿಯಮಿಸಿಕೊಂಡ, ಯಂತ್ರಗಳನ್ನು ತಂದ, ಬಾಡಿಗೆಗೆ ಕಟ್ಟಡಗಳನ್ನು ತೆಗೆದುಕೊಂಡ. ಆದರೆ ಚಾಕಲೇಟಿನ ಗುಣಮಟ್ಟ ಮಾತ್ರ ತನ್ನ ತಾಯಿ ಮಾಡುತ್ತಿದ್ದಂತೆಯೇ ಉಳಿಸಿಕೊಂಡ.ಇಂಗ್ಲೆಂಡಿಗೆ ಹರ್ಶೀ ಚಾಕಲೇಟ್‌ಗಳ ರವಾನೆ ಪ್ರಾರಂಭವಾಯಿತು. ಈ ರುಚಿಯನ್ನೇ ಕಂಡಿರದ ಇಂಗ್ಲೆಂಡಿನ ಜನಕ್ಕೆ ಹರ್ಶೀ ಚಾಕಲೇಟ್ ಎಂದರೆ ಪಂಚಪ್ರಾಣವಾಯಿತು. ಟನ್‌ಗಟ್ಟಲೇ ಚಾಕಲೇಟ್ ಮಾರಾಟವಾಗತೊಡಗಿದವು. ಪರದೇಶದಲ್ಲಿ ಅಷ್ಟೊಂದು ಖ್ಯಾತವಾಗಿದೆ ಎಂದೊಡನೆ ಅಮೆರಿಕದ ಜನ ಕೂಡ ಮುತ್ತಿದರು. ಹತ್ತು ವರ್ಷಗಳಲ್ಲಿ ಮಿಲ್ಟನ್ ಹರ್ಶೀ ಕೋಟಿ ಕೋಟಿ ಡಾಲರ್‌ಗಳನ್ನು ಗಳಿಸಿಬಿಟ್ಟ. ಇಂದಿಗೂ ಪ್ರಪಂಚದಾದ್ಯಂತ ಹರ್ಶೀ ಚಾಕಲೇಟ್‌ಗಳು ಲೆಕ್ಕವಿಲ್ಲದಷ್ಟು ಮಾರಾಟವಾಗುತ್ತಿವೆ.ಅಷ್ಟೊಂದು ಹಣ ಬಂದೊಡನೆ, ತಾನು ಹಿಂದಿದ್ದ ಬಡತನವನ್ನು ಛಲದಿಂದ ತಿರಸ್ಕರಿಸುವಂತೆ ಹರ್ಶೀ ಹೊಸ ಕಾರುಗಳನ್ನು, ಬಂಗಲೆಗಳನ್ನು ಕೊಂಡ. ಅದು ದೊಡ್ಡದಲ್ಲ, ತನ್ನ ಊರಾದ ಪೆನಿಸಿಲ್ವೇನಿಯಾದಲ್ಲಿ ಬಂದು ವಿಶೇಷ ಶಾಲೆಯನ್ನು ತೆಗೆದ. ತನ್ನಂತೆ ಶಾಲೆಯ ಪರೀಕ್ಷೆಗಳಲ್ಲಿ ಪಾಸಾಗದ ಹುಡುಗರು ಜೀವನದಲ್ಲಿ ಪಾಸಾಗುವಂತೆ ಅವರಿಗೆ ಕೈ ಕೆಲಸಗಳನ್ನು ಕಲಿಸಿದ, ಭಾಷಾ ಪ್ರಯೋಗವನ್ನು ಕಲಿಸಿದ, ಮಾರಾಟ ಮಾಡುವ ರೀತಿಯನ್ನು, ಜೀವನದಲ್ಲಿ ಸೋಲನ್ನು ಎದುರಿಸುವ, ಒಪ್ಪಿಕೊಳ್ಳುವ ಕಲೆ ಕಲಿಸಿದ.ಕೇವಲ ನಾಲ್ಕು ಹುಡುಗರಿಂದ ಶಾಲೆ ಶುರುವಾಯಿತು. ಅಲ್ಲಿ ಓದಿದವರೆಲ್ಲ ಜೀವನದಲ್ಲಿ ಅಪಾರ ಯಶಸ್ಸು ಪಡೆದರು. ಈಗ ಹರ್ಶೀ ಇಲ್ಲ. ಆದರೆ, ಅವನ ಶಾಲೆ ಹತ್ತು ಸಾವಿರ ಎಕರೆ ಜಮೀನಿನಲ್ಲಿ ನಡೆಯುತ್ತಿದೆ. ಸಾವಿರಾರು ತರುಣರಿಗೆ ಜೀವನದ ಯಶಸ್ಸಿನ ಕೀಲೀಕೈಗಳನ್ನು ಕೊಡುತ್ತಿದೆ. ಸೋಲು ಯಾರನ್ನೂ ಬಿಟ್ಟಿದ್ದಲ್ಲ. ಆದರೆ, ನಾವು ಸೋಲಿಗೇ ಅಂಟಿಕೂಡ್ರದೇ ಜಾಡಿಸಿಕೊಂಡು ಮೇಲೆದ್ದು ನವಶಕ್ತಿಯಿಂದ, ಯೋಚನೆಯಿಂದ ಕೆಲಸ ಮಾಡಿದಾಗ ಯಶಸ್ಸು ಅಪ್ಪುತ್ತದೆ. ಆಗ ನಾವು ಯಶಸ್ಸು ದೊರೆಯದೇ ಕೊರಗುವವರನ್ನು ಎತ್ತುವ ಕೆಲಸ ಮಾಡಬೇಕು ಮಿಲ್ಟನ್ ಹರ್ಶೀ ಮಾಡಿದ ಹಾಗೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.