ಹಸಿರು ಬಳ್ಳದಲ್ಲಿ ಉದ್ಯಮಗಳ ಮಾನ ಹರಾಜು

7

ಹಸಿರು ಬಳ್ಳದಲ್ಲಿ ಉದ್ಯಮಗಳ ಮಾನ ಹರಾಜು

ನಾಗೇಶ್ ಹೆಗಡೆ
Published:
Updated:
ಹಸಿರು ಬಳ್ಳದಲ್ಲಿ ಉದ್ಯಮಗಳ ಮಾನ ಹರಾಜು

ಈ ವರ್ಷದ ಜೂನ್ 5ರ ಪರಿಸರ ದಿನದ ವಿಶೇಷವೇನಿತ್ತು ಗೊತ್ತೆ? ಕಾರುಗಳ ಗಾಜಿನ ಟಿಂಟ್ ಹೊದಿಕೆಯನ್ನು ಕಿತ್ತು ತೆಗೆಯಲು ಅಂದೇ ಕಡೇ ದಿನವಾಗಿತ್ತು. ದಂಡಕ್ಕೆ ಬೆದರಿ ನಾಡಿನ ಎಲ್ಲ ಕಡೆ ಲಕ್ಷಾಂತರ ಜನರು ಗಾಜಿನ ಕೆರೆತಗಳಲ್ಲಿ  ತೊಡಗಿದ್ದರು.ಇಲ್ಲವೆ ಗರಾಜ್‌ಗೆ ಹೋಗಿ ಕೆರೆಸಿ ತೆಗೆಸುತ್ತಿದ್ದರು. ಕಿತ್ತು ತೆಗೆದ ಹಾಳೆಯನ್ನು ಹೇಗೆ ವಿಲೆವಾರಿ ಮಾಡಬೇಕು; ಹೇಗೆ ಮರುಬಳಕೆಗೆ ರವಾನಿಸಬೇಕು ಎಂಬ ಮಾಹಿತಿಯನ್ನು ಮಾಲಿನ್ಯ ನಿಯಂತ್ರಣ ಮಂಡಲಿ ನೀಡಬಹುದಿತ್ತು.

 

ಆದರೆ ಮಂಡಲಿ ಅಂದು ವಿಶ್ವ `ಪರಿಸರ ದಿನಾಚರಣೆ~ಯ ಸಂಭ್ರಮದಲ್ಲಿ  ಮುಳುಗಿತ್ತು. ಮರುದಿನ ಯಾವ ತೊಟ್ಟಿ ನೋಡಿದರೂ ಕರಿ ಕರೀ ಒರಟು ಪ್ಲಾಸ್ಟಿಕ್ ಸುರುಳಿಗಳು.ಗಾಳಿಗೆ ಹಾರುತ್ತ ಚರಂಡಿ ಸೇರಿದ್ದು ಒಂದಿಷ್ಟು; ಲಾರಿ ಏರಿ ತಿಪ್ಪೆಗುಂಡಿಗೆ ಸೇರಿದ್ದು ಇನ್ನಷ್ಟು. ಅಂತೂ ಮುಂದಿನ ನೂರಿನ್ನೂರು ವರ್ಷಗಳಾದರೂ ಮಣ್ಣಲ್ಲಿ  ಮಣ್ಣಾಗದೆ, ನಾಗರಿಕತೆಯ ಒಂದು ಘಟ್ಟದ ಪಳೆಯುಳಿಕೆಯನ್ನು ಅಂದು ಸೃಷ್ಟಿಸಿದ ಖ್ಯಾತಿ ನಮ್ಮದಾಯಿತು.ಜೂನ್ 7ರಂದು ಎಲ್ಲೆಡೆ  `ಜಾಹೂ~  ಮೇಳದ್ದೇ ಸುದ್ದಿ. ಅಂದರೆ, ಜಾಗತಿಕ ಹೂಡಿಕೆದಾರರ ಸಮ್ಮೇಳನದ ಸಂಭ್ರಮ. ಇವೆರಡರ ನಡುವಣ ಜೂನ್ 6ರಂದು ನಮ್ಮ ದೇಶದ ಬೃಹತ್ ಉದ್ದಿಮೆಗಳ ಅನಾಚಾರ, ದುರಾಚಾರಗಳ ಬಂಡವಾಳವನ್ನು ಬಯಲು ಮಾಡುವ ವರದಿಯೊಂದನ್ನು ದಿಲ್ಲಿಯ ಪರಿಸರ ಮತ್ತು ವಿಜ್ಞಾನ ಕೇಂದ್ರ (ಸಿಎಸ್‌ಇ) ಪ್ರಕಟಿಸಿದೆ.

 

ಈ ಸಂಸ್ಥೆ ಎರಡು-ಮೂರು ವರ್ಷಗಳಿಗೊಮ್ಮೆ ಭಾರತದ ಒಂದಲ್ಲ ಒಂದು ಉದ್ಯಮದ ಪರಿಸರ ಬಾಧ್ಯತೆಯನ್ನು ತಪಶೀಲು ಮಾಡಿ ಜನತೆಯ ಮುಂದಿಡುತ್ತ ಬಂದಿದೆ. ಹಿಂದೆ ಅದು ಕಾಗದ ಉದ್ಯಮ, ವಾಹನ ತಯಾರಿಕೆ, ಕ್ಲೋರ್ ಅಲ್ಕಲಿ  ಮತ್ತು ಸಿಮೆಂಟ್ ಉದ್ಯಮಗಳ ಪರಿಸರ ಮೌಲ್ಯಮಾಪನ (`ಗ್ರೀನ್ ರೇಟಿಂಗ್~) ಮಾಡಿತ್ತು. ಈಗ ಭಾರತದ ಕಬ್ಬಿಣ ಮತ್ತು ಉಕ್ಕು ಕಂಪನಿಗಳ ವರದಿ.ಉದ್ಯಮವೊಂದು ತನ್ನ ಸುತ್ತಲಿನ ಪರಿಸರದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತಿದೆ, ತನ್ನ ಮನೆಯನ್ನು ಎಷ್ಟು ಚೊಕ್ಕಟ ಇಟ್ಟುಕೊಂಡಿದೆ ಎಂಬುದನ್ನು ಅಳೆದು ನೋಡುವುದೇ `ಗ್ರೀನ್ ರೇಟಿಂಗ್ ಪ್ರಾಜೆಕ್ಟ್ `. ಸುಧಾರಿತ ದೇಶಗಳಲ್ಲೆಲ್ಲ ಇಂಥ ಮೌಲ್ಯ ಮಾಪನ ಆಗಾಗ ನಡೆಯುತ್ತಿರುತ್ತದೆ.ಕಂಪನಿ ತನಗೆ ಬೇಕಿದ್ದ ಕಚ್ಚಾವಸ್ತುಗಳನ್ನು ಎಲ್ಲಿಂದ ತರುತ್ತಿದೆ, ಏನೆಲ್ಲ ಕಚಡಾಗಳನ್ನು ಹೊರಹಾಕುತ್ತಿದೆ; ಅದರ ವಿಲೆವಾರಿ ವಿಧಾನ ಏನು ಮತ್ತು ಆ ಉದ್ಯಮದ ನೆರೆಹೊರೆಯ ನಿವಾಸಿಗಳ ಮೇಲೆ ಏನು ಪರಿಣಾಮ ಬೀರುತ್ತಿದೆ- ಇವು ಮೌಲ್ಯಮಾಪನದ ನೆಲೆಗಳು.

 

ಯಾವುದೇ ಮುಚ್ಚುಮರೆ ಇಲ್ಲದೆ, ಸರಕಾರದ ಮತ್ತು ಉದ್ಯಮದ ಸಹಕಾರ ಪಡೆದು, ಸೌಹಾರ್ದ ವಿಧಾನದಲ್ಲಿ, ಕಂಪನಿಗಳ ಅಧಿಕಾರಿಗಳ ನೆರವಿನಿಂದಲೇ ಮೌಲ್ಯಮಾಪನ ನಡೆಸಲಾಗುತ್ತದೆ. ಕೆಲವು ಕಂಪನಿಗಳು ತಾವಾಗಿ ಇಂಥ ಸಮೀಕ್ಷೆಯಲ್ಲಿ  ಪಾಲ್ಗೊಳ್ಳುತ್ತವೆ.

ಇನ್ನು ಕೆಲವು ನಿರಾಸಕ್ತ ಕಂಪನಿಗಳು ಸಹಕಾರ ನೀಡದಿದ್ದರೆ ಪರೋಕ್ಷ ವಿಧಾನದಲ್ಲಿ ಅವುಗಳ ಚಾರಿತ್ರ್ಯ ಪರೀಕ್ಷೆ ನಡೆಯುತ್ತದೆ. ಅವು ಸರಕಾರಕ್ಕೆ ಆಗಾಗ ಸಲ್ಲಿಸುವ ದಾಖಲೆಗಳನ್ನೇ ಮತ್ತೊಮ್ಮೆ ಪರಿಶೀಲಿಸಿ, ಕ್ಷೇತ್ರ ಸಮೀಕ್ಷೆ ಮಾಡಿ, ಆಸುಪಾಸಿನ ಜನರ ಸಂದರ್ಶನ ಮಾಡಿ, ತಜ್ಞರ ನೆರವು ಪಡೆದು ಸರ್ವೆ ಮಾಡಲಾಗುತ್ತದೆ.ಸಾಧ್ಯವಾದಷ್ಟೂ ನಿಷ್ಪಕ್ಷಪಾತದ, ಜೊಳ್ಳಿಗೆ ಅವಕಾಶವಿಲ್ಲದ, ಪಾರದರ್ಶಕ, ಆದರೆ ಶಿಸ್ತುಬದ್ಧ ವರದಿ ಅದಾಗಿರುತ್ತದೆ. ನೂರಕ್ಕೆ ಇಂತಿಷ್ಟು ಎಂದು ಅಂಕ ನೀಡಿ, ಉತ್ತಮ ಕಂಪನಿಗಳಿಗೆ ಸರ್ಟಿಫಿಕೇಟ್ ನೀಡಲಾಗುತ್ತದೆ. ಅತಿ ಶ್ರೇಷ್ಠ ದರ್ಜೆಯ, ಪರಿಸರಸ್ನೇಹಿ ಕಂಪನಿಗೆ  `ಪಂಚವಾಳ ಪ್ರಶಸ್ತಿ~  (ಐದು ಎಲೆ -ಫೈವ್ ಲೀವ್ಸ್ ಅವಾರ್ಡ್) ನೀಡಲಾಗುತ್ತದೆ.

 

ಕಡಿಮೆ ದರ್ಜೆಯವಕ್ಕೆ ನಾಲ್ಕು ಎಲೆ, ಮೂರು ಎಲೆ, ಎರಡು ಎಲೆ ಹಾಗೂ ಒಂದು ಎಲೆ ಪ್ರಶಸ್ತಿಗಳಿವೆ. ಮೊನ್ನೆ ಜೂನ್ 6ರಂದು ಪ್ರಕಟಿಸಲಾದ ವರದಿಯನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹ್ಲುವಾಲಿಯಾ ಮತ್ತು ಕೇಂದ್ರ ಪರಿಸರ ಸಚಿವೆ ಜಯಂತಿ ನಟರಾಜನ್ ಜಂಟಿಯಾಗಿ ಬಿಡುಗಡೆ ಮಾಡಿದರು.ಹೇಗಿವೆ ನಮ್ಮ ಉಕ್ಕಿನ ಕಾರ್ಖಾನೆಗಳು? ನಾಚಿಕೆಯಾಗಬೇಕು. ಒಟ್ಟಾರೆ ಇಡೀ ಉಕ್ಕುರಂಗಕ್ಕೆ ಲಭಿಸಿದ್ದು ಶೇಕಡಾ 19ರಷ್ಟು ಅಂಕ ಮತ್ತು ಒಂದೆಲೆ ಪ್ರಶಸ್ತಿ. ಸಮೀಕ್ಷೆಯಲ್ಲಿ  ಪಾಲ್ಗೊಂಡ 21 ಕಬ್ಬಿಣ ಉಕ್ಕು ಕಂಪನಿಗಳಲ್ಲಿ  ಕೇವಲ ಮೂರು ಕಂಪನಿಗಳು `ಮೂರೆಲೆ ಪ್ರಶಸ್ತಿ~  ಪಡೆದಿವೆ.ಮಹಾರಾಷ್ಟ್ರದ ರಾಯಗಡದಲ್ಲಿರುವ ಇಸ್ಪಾತ್ ಇಂಡಸ್ಟ್ರೀಸ್ (40% ಅಂಕ), ಗುಜರಾತಿನ ಹಾಝಿರಾದಲ್ಲಿರುವ ಎಸ್ಸಾರ್ ಸ್ಟೀಲ್ (39%) ಮತ್ತು ವಿಶಾಖಾಪಟ್ಟಣದಲ್ಲಿರುವ ವೈಗ್ ಸ್ಟೀಲ್ (36%) ಈ ಮೂರು ಕಂಪನಿಗಳನ್ನು ಬಿಟ್ಟರೆ ಪಾಸ್ ಮಾರ್ಕ್ಸ್ ಗಳಿಸಿದ ಕಂಪನಿಗಳೇ ಇಲ್ಲ! ಅಷ್ಟೆಲ್ಲ ಖ್ಯಾತಿಯ ಟಾಟಾ ಸ್ಟೀಲ್, ಜಿಂದಾಲ್ ಕೂಡ ನಮ್ಮ ದೇಶದ ಕೊಳಕುಮಡುಗಳ ಪಟ್ಟಿಗೆ ಬರುತ್ತಿವೆ.ಇವೆಲ್ಲ ಹೋಗಲಿ, ನಮ್ಮ ನಿಮ್ಮೆಲ್ಲರ ತೆರಿಗೆಯಿದ ನಡೆಯುವ ಸರಕಾರಿ ಸ್ವಾಮ್ಯದ ಉಕ್ಕು ಪ್ರಾಧಿಕಾರದ (ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ) ಸುಪರ್ದಿಯಲ್ಲಿರುವ ಭಿಲಾಯಿ, ಬೊಕಾರೊ, ದುರ್ಗಾಪುರ್, ಬರ್ನ್‌ಪುರನಲ್ಲಿರುವ ಉಕ್ಕು ಕಾರ್ಖಾನೆಗಳು ತಾವಾಗಿ ಸಮೀಕ್ಷೆಯಲ್ಲಿ ಪಾಲ್ಗೊಳ್ಳಲಿಲ್ಲ;ಪರೋಕ್ಷ ದಾಖಲೆಗಳನ್ನು ಪರಿಶೀಲಿಸಿದಾಗ ತೀರಾ ಕೊಳಕು ಸ್ಥಿತಿಯಲ್ಲಿರುವುದು ಕಂಡುಬಂದಿದೆ. ಪ್ರಾಧಿಕಾರದ ಅಧೀನದಲ್ಲಿರುವ ರೂರ್‌ಕಿಲಾ ಉಕ್ಕು ಕಾರ್ಖಾನೆ ಮಾತ್ರ ಈ ಸಮೀಕ್ಷೆಗೆ ಸಹಕರಿಸಿದ್ದು ಅದೊಂದಕ್ಕೆ `ಒಂದೆಲೆ ಪ್ರಶಸ್ತಿ~  ಲಭಿಸಿದೆ.ಕರ್ನಾಟಕದ ಕಬ್ಬಿಣ ಉಕ್ಕು ಕಾರ್ಖಾನೆಗಳ ಪೈಕಿ ನೂರಕ್ಕೆ 27 ಅಂಕಗಳನ್ನು ಪಡೆದ ಬಳ್ಳಾರಿಯ ವಿಜಯನಗರ (ಜೆಎಸ್‌ಡಬ್ಲೂ) ಉಕ್ಕು ಕಾರ್ಖಾನೆಯೇ ಅತಿಶ್ರೇಷ್ಠ ಎನ್ನಿಸಿಕೊಂಡು `ಎರಡು ಎಲೆ  ಪ್ರಶಸ್ತಿ~ ಪಡೆದಿದೆ.

 

ಅಲ್ಲಿ ಉಕ್ಕು ತಯಾರಿಕೆಯ ಸುಧಾರಿತ ತಂತ್ರಜ್ಞಾನವಿದೆ; ವ್ಯರ್ಥ ಸೋರಿಹೋಗುವ ಉಷ್ಣತೆಯಿಂದ ವಿದ್ಯುತ್ ಉತ್ಪಾದನೆ ಕೂಡ ನಡೆಯುತ್ತಿದೆ; ಕೆಲಮಟ್ಟಿಗೆ ನೀರಿನ ಮಿತವ್ಯಯ ಸಾಧಿಸಲಾಗಿದೆ. ರಾಜ್ಯದಲ್ಲೇ ಉತ್ತಮ ಗುಣಮಟ್ಟದ್ದೆನ್ನಿಸಿದರೂ ವಾಯುಮಾಲಿನ್ಯ ತುಂಬಾ ಜಾಸ್ತಿ ಇದೆ. ಕೊಳಕು ಘನತ್ಯಾಜ್ಯಗಳ ಪ್ರಮಾಣ ಜಾಸ್ತಿ ಇದೆ. ಅಪಘಾತಗಳೂ ಹೆಚ್ಚೇ ಆಗುತ್ತಿವೆ.ಮಾಲಿನ್ಯ ವಿಚಾರ ಒತ್ತಟ್ಟಿಗಿರಲಿ. ಉಕ್ಕು ಉದ್ಯಮದ ಬೇರೆ ಅಧ್ವಾನಗಳನ್ನೂ ಈ ಸಮೀಕ್ಷೆಯಲ್ಲಿ  ಪಟ್ಟಿ ಮಾಡಲಾಗಿದೆ. ಇತರ ದೇಶಗಳಿಗೆ ಹೋಲಿಸಿದರೆ ನಮ್ಮ ಸ್ಥಾವರಗಳಲ್ಲಿ  ಶಕ್ತಿಯ ಅತಿಯಾದ ಅಪವ್ಯಯವಾಗುತ್ತಿದೆ.ಪ್ರತಿ ಟನ್ ಉಕ್ಕು ತಯಾರಿಸಲು ಜಗತ್ತಿನ ಉತ್ತಮ ಕಂಪನಿಗಳು ನಾಲ್ಕೂವರೆ ಗಿಗಾ ಕ್ಯಾಲೊರಿ ಶಕ್ತಿಯನ್ನು ಬಳಸಿದರೆ ನಮ್ಮ ದೇಶದ ಕಾರ್ಖಾನೆಗಳು ಸರಾಸರಿ ಏಳು ಗಿಗಾ ಕ್ಯಾಲೊರಿ ಶಕ್ತಿಯನ್ನು ವ್ಯಯಿಸುತ್ತಿವೆ.ಉಷಾ ಮಾರ್ಟಿನ್ ಹೆಸರಿನ ಕಂಪನಿಯಂತೂ 10 ಗಿಗಾ ಕ್ಯಾಲೊರಿ ಶಕ್ತಿಯನ್ನು ಕಬಳಿಸುತ್ತಿದೆ. ಇನ್ನು ನೀರಿನ ಕತೆಯನ್ನಂತೂ ಕೇಳುವುದೇ ಬೇಡ. ಜಗತ್ತಿನ ಉತ್ತಮ ಕಂಪನಿಗಳು ಪ್ರತಿ ಟನ್ ಉಕ್ಕು ಉತ್ಪಾದನೆಗೆ 1 ಘನಮೀಟರ್ ನೀರನ್ನು ಬಳಸುತ್ತಿದ್ದರೆ ನಮ್ಮ ಉದ್ಯಮಗಳು ನಾಲ್ಕು, ಐದು ಪಟ್ಟು ಹೆಚ್ಚು ನೀರನ್ನು ವ್ಯಯಿಸುತ್ತಿವೆ; ಕೊಳೆ ಮಾಡಿ ಹರಿಬಿಡುತ್ತಿವೆ.

 

ಕೆಲವು ಕಂಪನಿಗಳು ಬಿಸಿಲೋಹವನ್ನು ತಂಪುಗೊಳಿಸಲು ಕೊಳಕು ನೀರನ್ನೇ ಬಳಸುತ್ತಿವೆ. ಜಲಮಾಲಿನ್ಯವನ್ನು ವಾಯು ಮಾಲಿನ್ಯವಾಗಿ ಪರಿವರ್ತಿಸುವ ಈ ದಂಧೆಯಲ್ಲಿ  ನೀರನ್ನು ಮರುಬಳಕೆ ಮಾಡಿದ್ದಾಗಿ ದಾಖಲೆಯಲ್ಲಿ ತೋರಿಸಿ, ಸರಕಾರಿ ರಿಯಾಯ್ತಿ ಬೇರೆ ಪಡೆಯುತ್ತಿವೆ.ಎಲ್ಲಕ್ಕಿಂತ ದೊಡ್ಡದಾಗಿ ಕಾಣುವುದು ಅಪಾರ ಭೂಕಬಳಿಕೆ. ತಮ್ಮ ಅಗತ್ಯಕ್ಕಿಂತ ಐದು ಪಟ್ಟು ಹೆಚ್ಚು ಭೂಮಿಯನ್ನು ಇವು ಸರಕಾರದಿಂದ ಪಡೆದಿವೆ. ಇವರಿಗೆ ಇದುವರೆಗೆ ಕೊಟ್ಟ ಭೂಮಿಯಲ್ಲಿ  ಈಗಿನ ಆರು ಪಟ್ಟು ಹೆಚ್ಚು ಉಕ್ಕನ್ನು ತಯಾರಿಸಲು ಸಾಧ್ಯವಿದೆ ಎಂದು ಸಿಎಸ್‌ಇ ವರದಿಯಲ್ಲಿ ಹೇಳಲಾಗಿದೆ.ಉಕ್ಕಿನ ಕಾರ್ಖಾನೆಗಳೆಂದರೆ ದೇಶದ ಅತಿ ಪ್ರತಿಷ್ಠಿತ ಸ್ಥಾವರಗಳು. ನೆಹರೂ ಕಲ್ಪನೆಯಲ್ಲಿ  ಅವು ಆಧುನಿಕ ಭಾರತದ ದೇವಾಲಯಗಳು. ಭಿಲಾಯಿ, ರೂರ‌್ಕಿಲಾ, ಜಮಶೇಡ್ಪುರ್ ಇವೆಲ್ಲ ಹೈಸ್ಕೂಲ್ ಪಠ್ಯಗಳಲ್ಲೇ ಹೆಮ್ಮೆಯ ಛಾಪು ಮೂಡಿಸಿದ ಹೆಸರುಗಳು.

 

ಆದರೆ ಒಳಹೊಕ್ಕು ನೋಡಿದರೆ ಕಾಣುವುದೆಲ್ಲ ಅದಕ್ಷತೆ, ಶಕ್ತಿಯ ಅಪವ್ಯಯ, ನೀರಿನ ಅಪವ್ಯಯ, ಕಾರ್ಮಿಕರ ಶೋಷಣೆ, ಕಾನೂನಿನ ಕಡೆಗಣನೆ, ಮಾಲಿನ್ಯ -ಒಂದಲ್ಲ, ಎರಡಲ್ಲ. ಇಂಥ ಅಂದಾದುಂದಿಯಿಂದಾಗಿ ಕಬ್ಬಿಣದ ಬೆಲೆ ವಿಪರೀತ ಹೆಚ್ಚಾಗಿ, ನಾವೆಲ್ಲ ಅದಕ್ಕೆ ಬೆಲೆ ತೆರಬೇಕು.

 

ಇಷ್ಟಕ್ಕೂ ಈ ಸಮೀಕ್ಷೆ ನಡೆಸುವಾಗ, ಕಬ್ಬಿಣದ ಅದುರು ಮತ್ತು ಕಲ್ಲಿದ್ದಲ ಗಣಿಗಳನ್ನು  ಮೌಲ್ಯಮಾಪನದ ವ್ಯಾಪ್ತಿಯಿಂದ ಹೊರಗೇ ಇಡಲಾಗಿತ್ತು. ಗಣಿಪರಿಸರದ ಅಧ್ವಾನಗಳನ್ನೂ ಪರಿಗಣಿಸಿದ್ದರೆ ಈಗಿನ 19 ಅಂಕಗಳೂ ಈ ಉದ್ಯಮಕ್ಕೆ ಸಿಗುತ್ತಿರಲಿಲ್ಲ.ನಾವು ಆಯ್ಕೆ ಮಾಡಿಕೊಂಡ ಅಭಿವೃದ್ಧಿಯ ಹೆದ್ದಾರಿಗೆ ಭಾರೀ ಪ್ರಮಾಣದ ಉಕ್ಕು ಬೇಕು; ಅದರಲ್ಲಿ  ಎರಡು ಮಾತಿಲ್ಲ. ನಮ್ಮ ಪ್ರಜೆಗಳ ತಲಾವಾರು ಉಕ್ಕು ಬಳಕೆ ನಿರಂತರ ಹೆಚ್ಚುತ್ತಿದ್ದು ಕಳೆದ ವರ್ಷ 57 ಕಿಲೊಗ್ರಾಮ್‌ಗೆ ಏರಿದೆ.ಜಾಗತಿಕ ಸರಾಸರಿ ಉಕ್ಕು ಬಳಕೆ 215 ಕೆಜಿ ಇದೆ. ಚೀನಾದ್ದು 460 ಕೆಜಿ, ಜಪಾನಿನದ್ದು 507 ಕೆಜಿ, ದಕ್ಷಿಣ ಕೊರಿಯಾದ್ದು ಅಬ್ಬಬ್ಬಾ ಎನ್ನಿಸುವ 1157 ಕೆಜಿ ಇದೆ. ನಮ್ಮ ಉಕ್ಕಿನ ಉತ್ಪಾದನೆಯನ್ನು ಭಾರೀ ಪ್ರಮಾಣದಲ್ಲಿ  ಹೆಚ್ಚಿಸಲು ಭಾರತ ಸರಕಾರ ಉದ್ದೇಶಿಸಿದೆ.ಈಗಿನ 75 ದಶಲಕ್ಷ ಟನ್‌ನಿಂದ 300 ದಶಲಕ್ಷ ಟನ್‌ಗೆ ಏರಿಸುವ ಗುರಿ ಇದೆ. ಅದಕ್ಕೆಂದು ಆದ್ಯತೆಯ ಮೇರೆಗೆ ಭೂಮಿ, ನೀರು, ಅದಿರು, ಕಲ್ಲಿದ್ದಲು, ವಿದ್ಯುತ್ತು, ಕಾರ್ಮಿಕ ಸೈನ್ಯ ಎಲ್ಲ ಸಜ್ಜಾಗಬೇಕಿದೆ. ಹೂಡಿಕೆದಾರರಂತೂ ಬರಲು ತುದಿಗಾಲಲ್ಲೇ ನಿಂತಿದ್ದಾರೆ.ಹೂಡಿಕೆದಾರರ ಉತ್ಸಾಹ ಯಾಕೆಂದು ಊಹಿಸುವುದು ಕಷ್ಟವೇನಲ್ಲ. ಇತರ ದೇಶಗಳಿಗೆ ಹೋಲಿಸಿದರೆ ಲಾಭ ಗಳಿಕೆಗೆ ನಮ್ಮಲ್ಲಿ  ಹೇರಳ ಅವಕಾಶಗಳಿವೆ. ಇಲ್ಲಿ ಎಲ್ಲವೂ ಅಗ್ಗ. ಕಾನೂನುಗಳ ಬೇಲಿ ಬಿಗಿಯಾಗಿದ್ದರೂ ಅವುಗಳನ್ನು ದಾಟಲೆಂದು ಏಣಿ, ಹಗ್ಗ, ಹಾರೆಗಳು ಅಗ್ಗದಲ್ಲೇ ಲಭಿಸುತ್ತವೆ.ಉದ್ಯಮಗಳ ಮೇಲೆ ನಿಗಾ ಇಡಬೇಕಾದ ನಿಯಂತ್ರಣ ಮಂಡಲಿಗಳು ಕಣ್ಣುಮುಚ್ಚಿ ಕೂತಿರುತ್ತವೆ. ರಾಜಕೀಯ ಪಕ್ಷಗಳು `ಸಂಪನ್ಮೂಲ ಕ್ರೋಡೀಕರಣ~ಕ್ಕೆ ಇಳಿದಾಗಲಷ್ಟೆ ಅವು ಕಣ್ಣು ತೆರೆದು, ಹೆಚ್ಚಿನ ಮೊತ್ತದ ದೇಣಿಗೆ ಸಂಗ್ರಹಕ್ಕೆ ನೆರವಾಗುತ್ತವೆ.ಮುಂದಿನವಾರ ಬ್ರಝಿಲ್‌ನಲ್ಲಿ ನಡೆಯಲಿರುವ `ರಿಯೊ+20~ ರ ಶೃಂಗಸಭೆಗೆ ಭಾರತವೂ ಹಾಜರಿರುತ್ತದೆ. ಎಲ್ಲ ದೇಶಗಳೂ ಒಂದಾಗಿ ಪೃಥ್ವಿಯ ಜೀವಿವೈವಿಧ್ಯವನ್ನು ಮತ್ತೆ ಸಮೃದ್ಧಗೊಳಿಸುವ, ವಾಯುಮಂಡಲವನ್ನು ಮತ್ತೆ ಸುಸ್ಥಿತಿಗೆ ತರುವ, ಮಾಲಿನ್ಯವನ್ನು ಮತ್ತಷ್ಟು ಕಡಿಮೆ ಮಾಡುವ ನಿಟ್ಟಿನಲ್ಲಿ  ಬಿಗಿ ನಿರ್ಧಾರ ಕೈಗೊಳ್ಳುವ ಸಂದರ್ಭ ಅದು.ಮನೆಯ ಅಟ್ಟದಲ್ಲಿ  ಇಷ್ಟೆಲ್ಲ ಕಚಡಾಗಳನ್ನು ತುಂಬಿಟ್ಟುಕೊಂಡ ನಾವು ಅಲ್ಲಿ ನಮ್ಮ ಪುರಾತನ ಸಂಸ್ಕೃತಿಯನ್ನು ಹಾಡಿ ಹೊಗಳಿ ಅಟ್ಟಕ್ಕೇರಿಸುತ್ತೇವೆ.  `ನಮಗಿನ್ನೂ ಅಭಿವೃದ್ಧಿ ಸಾಧಿಸಬೇಕಿದೆ; ನಿಯಮಗಳನ್ನು ನಮಗಾಗಿ ಸಡಿಲಿಸಬೇಕು~ ಎಂದು ಬಿಗಿಪಟ್ಟು ಹಿಡಿಯುತ್ತೇವೆ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry