ಹಸಿವು ಮತ್ತು ಅಪೌಷ್ಟಿಕತೆ

7

ಹಸಿವು ಮತ್ತು ಅಪೌಷ್ಟಿಕತೆ

ಡಾ. ಆಶಾ ಬೆನಕಪ್ಪ
Published:
Updated:
ಹಸಿವು ಮತ್ತು ಅಪೌಷ್ಟಿಕತೆ

ಹೊಸ ವರ್ಷದ ನನ್ನ ಆರಂಭ ನಾನು ರೂಢಿಸಿಕೊಂಡು ಬಂದ ನ್ಯಾಯ, ನೀತಿ, ದಾನಗಳಂಥ ನೈತಿಕ ಮೌಲ್ಯಗಳ ಅನುಸರಣೆಯೊಂದಿಗೆ ಶುರುವಾಯಿತು. ಪ್ರಸಕ್ತ ಸಮಾಜದಲ್ಲಿನ ವರ್ಗೀಕೃತ ಶ್ರೇಣಿ ವ್ಯವಸ್ಥೆಗೆ ಹೊಂದಿಕೊಳ್ಳುವುದು ನನಗೆ ತುಂಬಾನೇ ಹಿಂಸೆ. ಕೆಲವೊಮ್ಮೆ ಮೌಲ್ಯಗಳೊಂದಿಗೆ ಬೆಳೆದಿದ್ದೇ ತಪ್ಪು ಎನ್ನುವ ಭಾವನೆಯೂ ಕಾಡಿ, ಅಂಥ ಸಂದರ್ಭಗಳಲ್ಲಿ ಅಪ್ಪಾಜಿಯೊಂದಿಗೆ ಜಗಳ ಆಡಿದ್ದೇನೆ. ಒಂದಂತೂ ಸ್ಪಷ್ಟ- ತಕ್ಷಣ ಬದಲಾಗುವುದು ನನಗೆ ಸಾಧ್ಯವಿಲ್ಲ. ಆದರೂ `ನಾನು ಬದಲಾಗುತ್ತೇನೆ' ಎಂದು ನನಗೆ ನಾನೇ ಹೇಳಿಕೊಳ್ಳುವ ಮೂಲಕ ಹೆಚ್ಚು ಘಾಸಿಗೊಳಗಾಗುವ ಸಂದರ್ಭವನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುವೆ.2012 ನವೆಂಬರ್ 16ರ ಕೆಲಸವನ್ನು ಇನ್ನೂ ಪೂರ್ಣಗೊಳಿಸಲು ಸಾಧ್ಯವಾಗದಿರುವ ಬೇಸರ ನನ್ನದು. ಅಂದು ಜೀವನಪರ್ಯಂತ ಮರೆಯಲಾಗದ ಎರಡು ಸನ್ನಿವೇಶಗಳು ನಡೆದವು. ಮೊದಲನೆಯದು, ಹುದ್ದೆಯೊಂದರ ಸಂದರ್ಶನ ಎದುರಿಸಿದ್ದು, ಎರಡನೆಯದು ಸಂಜೆ ನಡೆದ ದೂರದರ್ಶನ `ಚಂದನ' ವಾಹಿನಿಯ ಪ್ರಶಸ್ತಿ ಪ್ರದಾನ ಸಮಾರಂಭ.ವೇದಿಕೆ ಮೇಲೆ ಜಾನಪದ ಕಲಾವಿದ ಮಾರಪ್ಪ ದಾಸರ ವಿಡಿಯೊ ತುಣುಕುಗಳನ್ನು ತೋರಿಸಲಾಗುತ್ತಿತ್ತು. ಅವರು ಜೀವನೋಪಾಯಕ್ಕಾಗಿ ಭಿಕ್ಷಾಟನೆ ಮಾಡುತ್ತಿರುವವರು. ಅವರನ್ನು ಭೇಟಿ ಮಾಡಿ ನನ್ನ ಪರ್ಸ್‌ನಲ್ಲಿದ್ದ ಹಣವನ್ನೆಲ್ಲಾ ಕೊಟ್ಟುಬಿಡಬೇಕು ಎನಿಸಿತು. ಆದರೆ ಜಾನಪದ ಕಲೆಗಾಗಿ `ಚಂದನ' ವಾಹಿನಿಯ ಮೊದಲ ಪ್ರಶಸ್ತಿಯನ್ನು ಪಡೆದುಕೊಳ್ಳುತ್ತಿರುವ ಅವರಿಗೆ ಅದು ಅಗೌರವ ಸಲ್ಲಿಸಿದಂತಾಗಬಹುದು ಎನ್ನಿಸಿ ಸುಮ್ಮನಾದೆ. ಅವರು ಗುಲ್ಬರ್ಗ ಜಿಲ್ಲೆ ಯಲಬುರ್ಗಿ ತಾಲ್ಲೂಕಿನ ತುಮರ ಗುಬ್ಬಿ ಗ್ರಾಮದವರು. ದಟ್ಟ ದಾರಿದ್ರ್ಯವಿದ್ದರೂ ನಮ್ಮ ಶ್ರೀಮಂತ ಸಂಸ್ಕೃತಿಯ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡು ಬಂದ ಜಾನಪದ ಕಲಾವಿದರ ಪೀಳಿಗೆಗೆ ಸೇರಿದವರು.ಮಾರಪ್ಪ ದಾಸರನ್ನು ಪ್ರಶಸ್ತಿಗೆ ಆರಿಸಿದ್ದಕ್ಕಾಗಿ ಆಯ್ಕೆ ಸಮಿತಿಯ ಅಧ್ಯಕ್ಷ ನ್ಯಾಯಮೂರ್ತಿ ಡಾ. ಶಿವರಾಜ್ ಪಾಟೀಲ್ ಮತ್ತು ಅವರ ತಂಡವನ್ನು ಅಭಿನಂದಿಸುವೆ. ದೂರದರ್ಶನ ಕೇಂದ್ರದ ಡಾ. ಮಹೇಶ್ ಜೋಷಿ ಮತ್ತು ತಂಡಕ್ಕೆ ನನ್ನ ವಂದನೆಗಳು. ಇಲ್ಲಿ ಪ್ರಶಸ್ತಿ ಪಡೆದವರಾರೂ ಪ್ರಭಾವ ಅಥವಾ ಲಾಬಿ ಮಾಡಿದವರಲ್ಲ. ಅವರ ಅರ್ಹತೆ, ಸಾಧನೆಯನ್ನು ಪ್ರಶಸ್ತಿ ಹುಡುಕಿಕೊಂಡು ಬಂದಿತ್ತು. ನ್ಯಾಯಮೂರ್ತಿಗಳು ತಮ್ಮ ಪ್ರಧಾನ ಭಾಷಣದಲ್ಲಿ ಇದನ್ನೇ ಹೇಳಿದರು.ದೂರದರ್ಶನ ಕೇಂದ್ರದಲ್ಲಿದ್ದ ನನ್ನ ಗೆಳತಿ ಎಚ್.ಎನ್.ಆರತಿ ಮಾರಪ್ಪ ದಾಸರ ವಿಳಾಸ ನೀಡಿದರು. ಅವರಿಗೆ ಮನಿ ಆರ್ಡರ್ ಮಾಡುವ ಮೂಲಕ 2013ರ ವರ್ಷವನ್ನು ಆರಂಭಿಸಿದ್ದೇನೆ. ನನ್ನ ಹೃದಯದ ಭಾರ ತಗ್ಗಿದಂತಾಗಿದೆ.ಭಾರಿ ಮೊತ್ತದ ಅನುದಾನ ಮಂಜೂರಾಗಿದ್ದರೂ ಕರ್ನಾಟಕದ ಅತ್ಯಂತ `ಹಿಂದುಳಿದ ಮತ್ತು ಬಡತನಕ್ಕೆ ತುತ್ತಾದ ಜಿಲ್ಲೆ'ಗಳಲ್ಲಿ ಗುಲ್ಬರ್ಗಾ ಒಂದಾಗಿದೆ. 2011ರಲ್ಲಿ `ಸ್ತನ್ಯಪಾನ ಮತ್ತು ಎಚ್‌ಐವಿ' ಕುರಿತ ಕಾರ್ಯಾಗಾರ ನಡೆಸಲು ನಾನು ಗುಲ್ಬರ್ಗಾಕ್ಕೆ ಭೇಟಿ ನೀಡಿದ್ದೆ. ಅಲ್ಲಿನ ಬಡವರ ಶೋಚನೀಯ ಸ್ಥಿತಿ ನನ್ನನ್ನು ತಲ್ಲಣಗೊಳಿಸಿತು. ನಾನು ಈ ಬಗ್ಗೆ ಸಂಘಟಕರಲ್ಲಿ ವಿಚಾರಿಸಿದಾಗ, ಅವರು ಪ್ರತಿಕ್ರಿಯಿಸಿದ್ದು- `ಅವರನ್ನು ಬಡವರನ್ನಾಗಿ ಉಳಿಸುವುದೇ ಮುಖ್ಯ ಗುರಿಯಾಗಿದೆ; ಹೀಗಿದ್ದರೆ ಅನುದಾನದ ಹರಿವು ನಿಲ್ಲುವುದಿಲ್ಲ.' ಈ ತರ್ಕ ನನಗೆ ಅರ್ಥವಾಗಲಿಲ್ಲ.20ನೇ ಶತಮಾನದ ಆರಂಭದಲ್ಲಿ (1930) ಜಗತ್ತಿನಾದ್ಯಂತ ತೀವ್ರಗೊಳ್ಳುತ್ತಿದ್ದ ಮಕ್ಕಳ ಅಪೌಷ್ಟಿಕತೆ ಮತ್ತು ಸಾವನ್ನು ನಿಯಂತ್ರಿಸುವ ಕಾರ್ಯದಲ್ಲಿ ಆರೋಗ್ಯ ಕೇಂದ್ರದ ವೃತ್ತಿಪರರು ಸ್ವಯಂಪ್ರೇರಿತರಾಗಿ ಮುಂದೆ ಬಂದರು. ಇದು ಬಹುತೇಕ ಬಗೆಹರಿಸಬಹುದಾದ ಸಮಸ್ಯೆ. ಸಿಂಗಪುರದಲ್ಲಿ ಶಿಶುತಜ್ಞರಾಗಿ ಸೇವೆಸಲ್ಲಿಸುತ್ತಿದ್ದ ಡಾ. ಸಿಸೆಲಿ ವಿಲಿಯಮ್ಸ 1939ರಲ್ಲಿ ಸಿಂಗಪುರದ ರೋಟರಿ ಕ್ಲಬ್‌ನಲ್ಲಿ `ಹಾಲು (ಕೃತಕ) ಮತ್ತು ಹತ್ಯೆ' ಕುರಿತ ತಮ್ಮ ಭಾಷಣದಲ್ಲಿ, ಆಸ್ಪತ್ರೆಗಳಲ್ಲಿ ಅಪೌಷ್ಟಿಕತೆಯ ಹೆಚ್ಚಿನ ಪ್ರಕರಣಗಳು ದಾಖಲಾಗುತ್ತಿರುವುದು ಮತ್ತು ಸಾವಿನ ಸಂಖ್ಯೆಯಲ್ಲಿನ ಏರಿಕೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು.ಅನುಚಿತವಾದ ಹಾಲುಣಿಸುವಿಕೆ ಕ್ರಮದಿಂದ ನಡೆಯುತ್ತಿರುವ ಮುಗ್ಧ ಮಕ್ಕಳ ಕಗ್ಗೊಲೆ, ಶ್ರೀಮಂತ ಹಾಗೂ ಬಡವರಲ್ಲಿ ಸ್ತನ್ಯಪಾನದ ಕುರಿತು ಪ್ರೇರಣೆ ನೀಡುವುದು ಮತ್ತು ಕ್ವಾಶಿಯೊರ್ಕರ್‌ನ (1931-32) ವರ್ಗೀಕೃತ ತಾರತಮ್ಯದ ವಿವರಣೆಯನ್ನು ಮೊದಲ ಬಾರಿಗೆ ಆಕೆ ತಮ್ಮ ಭಾಷಣದಲ್ಲಿ ನೀಡಿದ್ದರು. ಆಫ್ರಿಕಾದ ಎಸಿಸಿಆರ್‌ಎನಲ್ಲಿ `ಶಿಶುಗಳಲ್ಲಿ ನ್ಯೂನತೆಯ ಕಾಯಿಲೆಗಳು' ಎಂಬ ವಿಷಯದ ಕುರಿತು ಮಾತನಾಡುವಾಗ ಮಕ್ಕಳಲ್ಲಿ ನ್ಯೂಟ್ರಿಷನಲ್ ಸಿಂಡ್ರೋಮ್ ಕುರಿತು ಅವರು ವಿವರಿಸಿದ್ದರು. ಆರಂಭಿಕ ಹಂತದಲ್ಲಿಯೇ ಸೂಕ್ತ ಚಿಕಿತ್ಸೆ ನೀಡದಿದ್ದರೆ ಕಾಯಿಲೆ ಮಾರಕವಾಗಿ ಪರಿಣಮಿಸಲಿದೆ ಎಂಬುದನ್ನು ಪ್ರಸ್ತಾಪಿಸಿದ್ದ ಅವರು, ಸಾಕಷ್ಟು ಪ್ರಮಾಣದಲ್ಲಿ ಪ್ರೊಟೀನ್ ಹೊಂದಿರದವರ ಪರಿಸ್ಥಿತಿಯ ಬಗ್ಗೆ ವಿವರಣೆ ನೀಡಿದ್ದರು.ಮಗುವಿನಲ್ಲಿ ಈ ಕಾಯಿಲೆ ಕಂಡುಬರುವುದು ಎರಡನೇ ಮಗುವಿನ ಜನನದ ಬಳಿಕ ಅದನ್ನು ಸ್ತನ್ಯಪಾನದಿಂದ ಬೇರ್ಪಡಿಸುವುದರಿಂದ. ಇದನ್ನು ಗಾ ಭಾಷೆಯಲ್ಲಿ `ಕ್ವಾಶಿಯೊರ್ಕರ್' ಎಂದು ಕರೆಯುತ್ತಾರೆ. `ಕ್ವಾಶಿ' ಎಂದರೆ `ಮೊದಲು', `ಒರ್ಕರ್' ಎಂದರೆ `ಎರಡನೆಯದು'. ಒಂದು ವೇಳೆ ತಾಯಿ ಮತ್ತೆ ಗರ್ಭಿಣಿಯಾದಾಗಲೂ ಎರಡನೇ ಮಗು ಜನಿಸುವವರೆಗೂ ಮೊದಲ ಮಗುವಿಗೆ ಸ್ತನ್ಯಪಾನವನ್ನು ಮುಂದುವರಿಸಬಹುದು. ಮತ್ತೊಂದು ಮಗು ಜನಿಸಿದ ಬಳಿಕವೂ ಎರಡು ಮಕ್ಕಳಿಗೂ ಹಾಲುಣಿಸಬಹುದು. ಎರಡು ಮಕ್ಕಳಿಗೆ ಸಾಕಾಗುವಷ್ಟು ಪ್ರಮಾಣದ ಹಾಲು ತಾಯಿ ಎದೆಯಲ್ಲಿ ಇರುತ್ತದೆ.`ಕ್ವಾಶಿಯೊರ್ಕರ್'ನಿಂದ ಬಳಲುತ್ತಿದ್ದ ಮೂರು ವರ್ಷದ ಶಕುಂತಲಾಳನ್ನು ವಾಣಿವಿಲಾಸ ಮಕ್ಕಳ ಆಸ್ಪತ್ರೆಯ ಪಿಐಸಿಯುಗೆ ಕರೆತರಲಾಯಿತು. 20ನೇ ಶತಮಾನದ ಪ್ರಾರಂಭದಲ್ಲಿಯೇ ವಿವರಿಸಲ್ಪಟ್ಟ ಪರಿಹಾರ ಕಂಡುಕೊಳ್ಳಬಹುದಾದ ಸಮಸ್ಯೆಯನ್ನು ನೋಡಿ ನನಗನಿಸಿದ್ದು ನಾವು ಏನನ್ನು ಸಾಧಿಸಿದ್ದೇವೆ? ಎಂದು. ಮಗು ದಾಖಲಾಗಿರುವ ಘಟಕದಲ್ಲಿ ಆಕೆಯನ್ನು ಅಲ್ಲಿನವರು ಚೆನ್ನಾಗಿ ನೋಡಿಕೊಳ್ಳುತ್ತಿಲ್ಲವಾದ್ದರಿಂದ ಬೇರೆ ಘಟಕಕ್ಕೆ ದಾಖಲಿಸಿಕೊಳ್ಳಿ ಎಂದು ಮಗುವಿನ ಅಜ್ಜಿ ಕೈಮುಗಿದು ನನ್ನನ್ನು ಕೇಳಿಕೊಂಡರು.ನಾನು ಈ ಮಗುವಿನ ಪ್ರಕರಣದ ಇತಿಹಾಸವನ್ನು ಕೆದಕತೊಡಗಿದೆ. ನಾಲ್ಕು ಮಕ್ಕಳ ತಾಯಿ ಜಯಮ್ಮಳಿಗೆ ಶಕುಂತಳಾ ಮೂರನೇ ಮಗು. ಆಕೆಯ ನಾಲ್ಕನೇ ಮಗುವಿಗೆ 1 ವರ್ಷ 2 ತಿಂಗಳು. ಗುಲ್ಬರ್ಗಾದವರಾದ ಆಕೆಗೆ ಅಲ್ಲಿ ಮನೆ ಅಥವಾ ಜಮೀನು ಇಲ್ಲ. ಅವರ ಕುಟುಂಬದ ಎಲ್ಲಾ ಸದಸ್ಯರೂ ಕೂಲಿಯಾಳುಗಳಾಗಿಯೇ ಬದುಕು ಸಾಗಿಸುತ್ತಿರುವುದು. ಗುಲ್ಬರ್ಗಾದಲ್ಲಿ ಸಿಗುತ್ತಿದ್ದ ಕೂಲಿ ಅತಿ ಕಡಿಮೆ ಇದ್ದುದರಿಂದ ಅವರೆಲ್ಲರೂ ಬೆಂಗಳೂರಿಗೆ ವಲಸೆ ಬಂದರು. ಮಕ್ಕಳನ್ನು ಹೊರತುಪಡಿಸಿ ಉಳಿದವರೆಲ್ಲರೂ ಕಟ್ಟಡ ನಿರ್ಮಾಣದ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದರು. 12ನೇ ವಯಸ್ಸಿಗೆ ಮದುವೆಯಾದ ಜಯಮ್ಮನಿಗೆ 15ನೇ ವಯಸ್ಸಿಗೆ ಮೊದಲ ಮಗು ಜನಿಸಿತು. ಆಕೆಗೆ ಏಕೆ ಅಷ್ಟು ಬೇಗ ಮದುವೆ ಮಾಡಿದಿರಿ ಎಂದು ಅಜ್ಜಿಯಲ್ಲಿ ವಿಚಾರಿಸಿದೆ. ತಮ್ಮ ಹೆಣ್ಣುಮಗುವನ್ನು `ಸುರಕ್ಷೆಯ ಬಂಧನ'ದಲ್ಲಿ ಇಡುವುದು ಉದ್ದೇಶವಾಗಿತ್ತು ಎಂದರು. ಹೆಣ್ಣುಮಕ್ಕಳು ಸುರಕ್ಷಿತವಾಗಿರುತ್ತಾರೆ ಎಂಬ ಉದ್ದೇಶದಿಂದ ಚಿಕ್ಕ ವಯಸ್ಸಿಗೇ ಮದುವೆ ಮಾಡುವುದು ಆ ಸಮುದಾಯದ ಸಂಪ್ರದಾಯವಾಗಿತ್ತು. ಈಗ ದೇಶದೆಲ್ಲೆಡೆ ಯುವತಿಯರು ಮತ್ತು ಮಹಿಳೆಯರ ವಿಷಯದಲ್ಲಿ ನಡೆಯುತ್ತಿರುವ ಘಟನಾವಳಿಗಳ ಹಿನ್ನೆಲೆಯಲ್ಲಿ ಅದು ಸರಿ ಎಂದೂ ಅನಿಸಬಹುದು.ಅಜ್ಜಿ, ತಾಯಿ ಮತ್ತು ಮಗು ಪೌಷ್ಟಿಕಾಂಶ ಕೊರತೆ ಎದುರಿಸುತ್ತಿದ್ದರು. ಅವರು `ಇನ್‌ಕ್ರೆಡಿಬಲ್ ಇಂಡಿಯಾ'ದಲ್ಲಿನ ಬಡತನದ ಹೀನಸ್ಥಿತಿಯ `ಸಂಕೇತ' ಕೂಡ. ನ್ಯೂನ ಪೌಷ್ಟಿಕತೆಯ ಅಂತರಪೀಳಿಗೆಯ ಚಕ್ರ ಎಂದು ಕರೆಯಲಾಗುವುದು ಇದನ್ನೇ. ಭವಿಷ್ಯದ ತಾಯಂದಿರು ಮತ್ತು ಅವರ ಮಕ್ಕಳು ಎದುರಿಸುವ ಅತ್ಯಂತ ಕಷ್ಟಕರ ವ್ಯಾಧಿ ಇದು.ಈ ಕಾಯಿಲೆ ಸಂಪೂರ್ಣವಾಗಿ ನಿಯಂತ್ರಿಸಬಹುದಾದದ್ದು. ಆರೋಗ್ಯ ಕಾರ್ಯಕರ್ತರಲ್ಲಿನ ಬದ್ಧತೆಯ ಕೊರತೆ ಮತ್ತು ಆಳವಾಗಿ ಇಳಿದಿರುವ ಸಾಂಪ್ರದಾಯಿಕ ನಂಬಿಕೆಗಳ ಬೇರನ್ನು ಕಿತ್ತೊಗೆಯುವುದು ಸುಲಭವಲ್ಲ. ಹೀಗಾಗಿ ಮುಗ್ಧ ಮಕ್ಕಳು ಇದಕ್ಕೆ ಬಲಿಯಾಗುತ್ತಿದ್ದಾರೆ.

ಶಕುಂತಲ ಕ್ವಾಶಿಯೊರ್ಕರ್‌ನಿಂದ ಬಳಲುತ್ತಿದ್ದಳು. ಆಕೆಯ ತಾಯಿ ನಾಲ್ಕನೇ ಮಗುವಿನ ಆರೈಕೆಯಲ್ಲಿ ತೊಡಗಿದ್ದರಿಂದ ಹಠಾತ್ತನೆ ಸ್ತನ್ಯಪಾನವನ್ನು ನಿಲ್ಲಿಸಿದರು. ತಿಳಿವಳಿಕೆ ಕೊರತೆ ಮತ್ತು ಬಡತನದಿಂದಾಗಿ ಸೂಕ್ತವಲ್ಲದ ಆಹಾರ ಪದ್ಧತಿಯು ಆ ಮಗುವಿನಲ್ಲಿ ಈ ಕಾಯಿಲೆ ಕಾಣಿಸಿಕೊಳ್ಳಲು ಮುಖ್ಯ ಕಾರಣ.ಇತ್ತೀಚಿಗೆ ಸರ್ಕಾರ ಎನ್‌ಆರ್‌ಸಿ ಅಥವಾ ಪೌಷ್ಟಿಕತೆ ಪುನರ್‌ಸ್ಥಾಪನಾ ಕೇಂದ್ರದ ಮೂಲಕ ಅನುದಾನವನ್ನು ಒದಗಿಸುತ್ತಿದೆ. ಆದರೆ ಅದು ಫಲಾನುಭವಿಗಳಿಗೆ ಎಷ್ಟರಮಟ್ಟಿಗೆ ಪೂರೈಕೆಯಾಗುತ್ತಿದೆ ಎಂಬುದು ಪತ್ತೆಹಚ್ಚಬೇಕಾದ ಸಂಗತಿ. ಇದು ನನಗೆ ಆದ್ಯ ಪೋಷಣ ತಜ್ಞರಲ್ಲಿ ಒಬ್ಬರಾದ ನನ್ನ ಗುರು ಪ್ರೊ. ನಿರ್ಮಲಾ ಕೇಸರಿ ಅವರನ್ನು ನೆನಪಿಗೆ ತಂದಿತು. ಅವರು 1980ರ ದಶಕದಲ್ಲಿ ಪೌಷ್ಟಿಕತೆ ಪುನರ್‌ಸ್ಥಾಪನಾ ಕೇಂದ್ರ ಎಂಬ ನವೀನ ಮಾದರಿಯ ಘಟಕವನ್ನು ಪ್ರಾರಂಭಿಸಿದರು. ನಮ್ಮ ದೈನಂದಿನ ರೌಂಡ್ಸ್‌ಗಳು ಕೊನೆಗೊಳ್ಳುತ್ತಿದ್ದದ್ದು ಎನ್‌ಆರ್‌ಸಿಯಲ್ಲಿ. ಕೇಸರಿ ಮೇಡಂ ನೇಮಿಸಿಕೊಂಡಿದ್ದ ಸರೋಜಮ್ಮ ಎಂಬುವವರ ಅಲ್ಪಮಟ್ಟಿಗಿನ ಮೇಲ್ವಿಚಾರಣೆ ಹೊರತಾಗಿ ಇಡೀ ಎನ್‌ಆರ್‌ಸಿ ಸ್ವತಃ ತಾಯಂದಿರಿಂದಲೇ ನಡೆಯುತ್ತಿತ್ತು. ಪ್ರಾರ್ಥನೆಯೊಂದಿಗೆ ಶುರುವಾಗುತ್ತಿದ್ದ ಅಲ್ಲಿನ ದೈನಿಕದಲ್ಲಿ ಅಲ್ಲಿರುವ ಮಕ್ಕಳಿಗೆ ಔಪಚಾರಿಕ ಬೋಧನೆ, ಸಾಮೂಹಿಕ ಅಡುಗೆ, ಸಾಮೂಹಿಕ ಸ್ತನ್ಯಪಾನ, ಆಟ ಇತ್ಯಾದಿಗಳು ಸಾಗುತ್ತಿದ್ದವು. ಈ ಕೇಂದ್ರವು ತನ್ನೊಟ್ಟಿಗೆ ನ್ಯೂಟ್ರಿಷನ್ ಮ್ಯೂಸಿಯಂ ಮತ್ತು ತರಕಾರಿ ತೋಟವನ್ನು ಒಳಗೊಂಡಿತ್ತು. ಪೌಷ್ಟಿಕತೆಯಲ್ಲದೆ, ವೈಯಕ್ತಿಕ ಆರೋಗ್ಯಶಾಸ್ತ್ರ, ಶುಚಿತ್ವ, ದಾವಣಗೆರೆ ಮಿಕ್ಸ್‌ನಂತಹ ಆಂತರಿಕ ಆದಾಯ ಸೃಷ್ಟಿಯ ಕೆಲಸ ಮುಂತಾದವುಗಳನ್ನು ಇಲ್ಲಿ ತಾಯಂದಿರು ಮತ್ತು ಮಕ್ಕಳಿಗೆ ಹೇಳಿಕೊಡಲಾಗುತ್ತಿತ್ತು.ಆಸ್ಪತ್ರೆಯಲ್ಲಿನ ವಿಪರೀತ ಒತ್ತಡದ ಕೆಲಸದ ಜೊತೆಯಲ್ಲಿ ಇದನ್ನೂ ನಡೆಸುವುದು ತುಂಬಾ ಕಷ್ಟವಾಗಿತ್ತು. ನಾನು ಎನ್‌ಆರ್‌ಸಿಗೆ ತೆರಳಿ ಅಲ್ಲಿ ಸಮಯ ಕಳೆಯುತ್ತಿದ್ದೆ. ಬಹುಶಃ ನನ್ನ ಆಕರ್ಷಣೆ ಇದ್ದದ್ದು ಅಲ್ಲಿ ಪ್ರತಿ ದಿನ ಹಂಚಲಾಗುತ್ತಿದ್ದ ಪೌಷ್ಟಿಕಾಂಶಯುಳ್ಳ ತಿಂಡಿ ದಾವಣಗೆರೆ ಲಡ್ಡುವಿನ ಮೇಲೆ.

ಅಕ್ಟೋಬರ್ 2012ರಲ್ಲಿ ರಾಜ್ಯ ಸಮ್ಮೇಳನವೊಂದರಲ್ಲಿ ಮುಖ್ಯ ಭಾಷಣಗಾರ್ತಿಯಾಗಿ ಭಾಗವಹಿಸಲು ತೆರಳಿದ್ದೆ. ಆಗ ನನಗೆ ಪೌಷ್ಟಿಕತೆಯ ಬಗ್ಗೆ ಪಾಠ ಮಾಡಿದ್ದ ಎನ್‌ಆರ್‌ಸಿಗೆ ಭೇಟಿ ನೀಡಿದಾಗ ಅದು ವಿನಾಶದ ಅಂಚಿನಲ್ಲಿರುವುದು ಕಂಡಿತು. ಕಟ್ಟಡ ಶಿಥಿಲಗೊಂಡು ಬೀಳುವ ಸ್ಥಿತಿಯಲ್ಲಿದೆ. ಅಲ್ಲಿ ಈಗ ಸರೋಜಮ್ಮನಾಗಲೀ (ಆಕೆ ನಿವೃತ್ತರಾದರು ಎಂದು ಕೇಳಲ್ಪಟ್ಟೆ) ಮಕ್ಕಳಾಗಲೀ ಇಲ್ಲ. ಆದರೆ ನನ್ನಲ್ಲಿ ಪೌಷ್ಟಿಕತೆಯ ಕೌಶಲ್ಯಗಳು ಸಾಣೆ ಹಿಡಿದ ಮತ್ತು ಮೈಗೂಡಿದ ಜಾಗದ ನಿನ್ನೆಯ ದಿನಗಳ ಪ್ರತಿಧ್ವನಿ ಅಲ್ಲಿ ನನಗೆ ಕೇಳಿಸಿತು. ನನ್ನ ಗುರು ಬಾಪೂಜಿ ಮಕ್ಕಳ ಆರೋಗ್ಯ ಸಂಸ್ಥೆಯಲ್ಲಿ (ಅವರೇ ಕಟ್ಟಿಸಿದ್ದು) ವಾಸಿಸುತ್ತಿದ್ದಾರೆ. ಅವರನ್ನು ನೋಡಬೇಕೆಂಬ ಬಯಕೆ ಉಕ್ಕಿದರೂ ಅವರ ದೀರ್ಘಕಾಲದ ಸಹವರ್ತಿ ಸ್ವಾಮಿ `ನಿಮ್ಮ ಛಾಯಾಗ್ರಹಣದ ಸ್ಮೃತಿಕೋಶವನ್ನು ಆಕೆಯ ಇಂದಿನ ಪರಿಸ್ಥಿತಿಯ ಚಿತ್ರಣ ಆಕ್ರಮಿಸಿಕೊಳ್ಳುವುದು ಬೇಡ- ಅವರ ಆ ಒಳ್ಳೆಯ ಚಿತ್ರಗಳನ್ನು ದಯವಿಟ್ಟು ಜೋಪಾನವಾಗಿ ಇಟ್ಟುಕೊಳ್ಳಿ' ಎಂದು ತಡೆದರು.ನನ್ನ ಜೀವನವನ್ನು ರೂಪಿಸಿದವರು ಇಬ್ಬರು ಶಿಶುತಜ್ಞರು. ಒಬ್ಬರು ಪ್ರೊ. ಕೇಸರಿ. ಅವರ ಬದುಕಿನ ತಿರುವಿನಿಂದಾಗಿ ನಾನು ಮಾರ್ಗದರ್ಶಕ ಅಥವಾ ಗುರುವಿಲ್ಲದೆ ಒಬ್ಬಂಟಿಯಾಗಿದ್ದೇನೆ. ಮತ್ತೊಬ್ಬರು ನನ್ನ ತಂದೆ ಡಾ.ಡಿ.ಜಿ. ಬೆನಕಪ್ಪ. ನಾನು ಅವರ ಬಳಿ ಶಿಶುವೈದ್ಯಶಾಸ್ತ್ರ ಕಲಿಯಲಿಲ್ಲ. ಏಕೆಂದರೆ ಅವರ ದೀರ್ಘಕಾಲದ ಸಹವರ್ತಿ ಡಾ. ಶಿವಾನಂದ ಯುನಿಟ್ ಪೋಸ್ಟಿಂಗ್‌ನ ಮೇಲ್ವಿಚಾರಕರಾಗಿದ್ದಾಗ ನನ್ನನ್ನು ಡಿಜಿಬಿ (ಡಿಜಿಬಿ ಅವರ ಗಾಡ್‌ಫಾದರ್ ಕೂಡ ಹೌದು) ಅವರ ಜೊತೆ ಕೆಲಸ ಮಾಡುವುದರಿಂದ ದೂರವೇ ಇರಿಸುತ್ತಿದ್ದರು. ಅವರ ಮಗಳ ಸಾಮರ್ಥ್ಯವನ್ನು ಸಾಬೀತುಪಡಿಸಲು ಶಕ್ತಿ ಮೀರಿ ಪ್ರಯತ್ನಿಸಿದರೂ ವಿಫಲಳಾದೆ.2012 ನವೆಂಬರ್‌ನ ಕಥೆ ನೆನಪಿಸಿಕೊಳ್ಳಿ. ಕ್ಷಮಿಸಿ ಅಪ್ಪಾಜಿ- ನಾನು ನಿಮ್ಮ ಆಶಾಭಂಗ ಮಾಡಿದೆ.

ಮಾಮೂಲಿಯಂತೆ ನನ್ನ ಯೋಚನೆಗಳನ್ನೆಲ್ಲಾ ಬದಿಗಿಟ್ಟು ನನ್ನ ಲೈಬ್ರರಿಯ ಕಪಾಟಿನಲ್ಲಿ ಕಣ್ಣಾಡಿಸಿದೆ. 1930ರ ದಶಕದಲ್ಲಿ ವಿವರಿಸಲಾದ ಈ ಮರೆತುಹೋದ, ಏಖಿಘೆಎಅಅ (ಹಸಿವು ಮತ್ತು ಅಪೌಷ್ಟಿಕತೆ) ಎಂಬ ಮರುಕಳಿಸಿರುವ ಪುರಾತನ ಕಾಯಿಲೆಯ ಬಗ್ಗೆ ವಿದ್ಯಾರ್ಥಿಗಳಿಗೆ ಬೋಧಿಸಲು 1964ರ ಅಕ್ಟೋಬರ್‌ನಲ್ಲಿ ಅಪ್ಪಾಜಿ ಯವರು ಬರೆದ ಪುಸ್ತಕ `ಕ್ವಾಶಿಯೊರ್ಕರ್' ಅನ್ನು ಕೈಗೆತ್ತಿಕೊಂಡೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry