ಶುಕ್ರವಾರ, ಡಿಸೆಂಬರ್ 6, 2019
25 °C

ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

ನಾಗೇಶ ಹೆಗಡೆ
Published:
Updated:
ಹಸುರಿನ ಲೋಕದಲ್ಲಿ ಪ್ರಜ್ಞೆಯ ಪ್ರಶ್ನೆ

ರೋಗಿಯ ಪ್ರಜ್ಞೆ ತಪ್ಪಿಸಲು ಆಸ್ಪತ್ರೆಗಳಲ್ಲಿ ಬಳಸುವ ಅರಿವಳಿಕೆ ಚುಚ್ಚುಮದ್ದನ್ನು ಸಸ್ಯಕ್ಕೆ ಚುಚ್ಚಿದರೆ ಏನಾಗುತ್ತದೆ? ಯಾವುದೇ ಕಿಡಿಗೇಡಿ ಹುಡುಗರು ಮಾಡಬಹುದಾದ ಈ ಪ್ರಯೋಗವನ್ನು ಈಚೆಗೆ ಜರ್ಮನಿಯ ಬಾನ್ ವಿಶ್ವವಿದ್ಯಾಲಯದ ಅರ್ಧ ಡಝನ್ ವಿಜ್ಞಾನಿಗಳು ಮಾಡಿ ನೋಡಿದರು. ಸಸ್ಯಗಳಿಗೆ ಪ್ರಜ್ಞೆ ಇದೆಯೆ ಎಂಬ ಹಳೇ ವಿವಾದಕ್ಕೆ ಹೊಸ ಕಿಚ್ಚು ಹಚ್ಚಿದರು.

ಈ ವಿಜ್ಞಾನಿಗಳು ಐದು ಬಗೆಯ ಸಸ್ಯಗಳಿಗೆ ಅರಿವಳಿಕೆ ಮದ್ದನ್ನು ತೂರಿಸಿದರು. ನಮಗೆಲ್ಲ ಪರಿಚಿತ ಇರುವ ‘ಮುಟ್ಟಿದರೆ ಮುನಿ’, ಥಾಲಿಯಾನಾ ಮತ್ತು ಬಟಾಣಿ ಸಸ್ಯ (ಈ ಮೂರು ವೆಜ್ ಸಸ್ಯಗಳು); ವೀನಸ್ ನೊಣಹಿಡುಕ ಮತ್ತು ಇಬ್ಬನಿ ಇರುವೆಹಿಡುಕ (ಇವೆರಡು ನಾನ್‌ವೆಜ್ ಸಸ್ಯಗಳು). ಫಲಿತಾಂಶ ಏನೆಂದರೆ ಈ ಎಲ್ಲ ಸಸ್ಯಗಳೂ ಎಚ್ಚರ ತಪ್ಪಿದಂತೆ ತಟಸ್ಥಗೊಂಡವು. ‘ಮುಟ್ಟಿದರೆ ಮುನಿ’ಯ ಎಲೆಗಳನ್ನು ಕಡ್ಡಿಯಿಂದ ಮುಟ್ಟಿದರೆ ಅವು ಮುನಿಸಿಕೊಳ್ಳಲಿಲ್ಲ. ಜಿರಳೆ ಮೀಸೆಯಂತೆ ಸದಾಕಾಲ ಆಚೆಈಚೆ ಓಲಾಡುತ್ತ ಆಧಾರವನ್ನು ಹುಡುಕಬೇಕಿದ್ದ ಬಟಾಣಿ ಸಸ್ಯತಂತುಗಳೂ ನಿದ್ದೆ ಬಂದಂತೆ ಜೋಲುಬಿದ್ದವು. ನೊಣಹಿಡುಕ ಸಸ್ಯದ ತೆರೆದ ಎಲೆಗಳ ಮೇಲೆ ಜೀವಂತ ನೊಣವನ್ನು ಕೂರಿಸಿದರೆ ಎಲೆಗಳು ಗಬಕ್ಕೆಂದು ಮುಚ್ಚಿಕೊಳ್ಳಲಿಲ್ಲ. ನೊಣವಿದ್ದುದು ಗೊತ್ತೇ ಆಗಿಲ್ಲವೆಂಬಂತೆ ಬೊಗಸೆಯನ್ನು ತೆರೆದೇ ಇದ್ದವು. ಸುಮಾರು ಒಂದು ಗಂಟೆಯ ಮೇಲೆ ಅರಿವಳಿಕೆ ಮದ್ದಿನ ಪ್ರಭಾವ ಇಳಿದ ನಂತರ, ಅವೆಲ್ಲವೂ ಎಚ್ಚೆತ್ತು (ಪ್ರಜ್ಞೆ ತಿಳಿದೆದ್ದು) ತಮ್ಮ ನಿತ್ಯದ ಕೆಲಸದಲ್ಲಿ ತೊಡಗಿದವು.

ನಿತ್ಯ ಬದುಕಿನಲ್ಲಿ ನಾವು ಯಾವುದೇ ಪಾಪಪ್ರಜ್ಞೆ ಇಲ್ಲದೆಯೇ ಸಸ್ಯಗಳನ್ನು ಬಡಿಯುತ್ತೇವೆ, ಕಡಿಯುತ್ತೇವೆ, ಕತ್ತರಿಸಿ ವಿಗ್ರಹಗಳ ಪಾದಕ್ಕೆ ಚೆಲ್ಲುತ್ತೇವೆ; ಕೊಚ್ಚಿ ಯಜ್ಞೇಶ್ವರನಿಗೆ ಅರ್ಪಿಸುತ್ತೇವೆ, ಕಚ್ಚಿ  ತಿನ್ನುತ್ತೇವೆ, ಕುದಿಸಿ ಕುಡಿಯುತ್ತೇವೆ. ಆದರೆ  ಅವಕ್ಕೂ ಪ್ರಜ್ಞೆ ಇದೆಯೆಂಬುದು ಗೊತ್ತಿಲ್ಲವೆ? ಗೊತ್ತಿಲ್ಲದೆ ಏನು, ಸಸ್ಯಗಳಿಗೂ ಪ್ರಜ್ಞೆ ಇದೆ ಎಂಬುದನ್ನು ಜಗತ್ತಿಗೆ ಮೊದಲು ಸಾರಿದವರೇ ನಮ್ಮ ಸರ್ ಜಗದೀಶ ಚಂದ್ರ ಬೋಸ್. ಅವರು ಇಂದಿಗೆ ನೂರು ವರ್ಷಗಳ  ಹಿಂದೆಯೇ ಸಸ್ಯಗಳ ನೋವನ್ನು ದಾಖಲಿಸಬಲ್ಲ ಸೂಕ್ಷ್ಮ ಸಂವೇದಿ ಸಲಕರಣೆಗಳನ್ನು ರೂಪಿಸಿ, ವಿಜ್ಞಾನರಂಗದಲ್ಲಿ ಬೆರಗು ಮೂಡಿಸಿ ಅನೇಕ ಹೊಸ ಸಂಶೋಧನೆಗಳಿಗೆ ದಾರಿ ತೋರಿದವರು. ಆದರೆ ಇಂದಿಗೂ ಪ್ರಜ್ಞೆ ಎಂದರೆ ಏನು, ಅದು ಎಲ್ಲಿ ಉತ್ಪತ್ತಿಯಾಗುತ್ತದೆ ಎಂಬುದನ್ನು ಕಂಡುಹಿಡಿಯಲು ಯಾರಿಗೂ ಸಾಧ್ಯವಾಗಿಲ್ಲ. ಪ್ರಜ್ಞೆಯ ಪ್ರಶ್ನೆ ಬಂದಾಗಲೆಲ್ಲ ಅತೀಂದ್ರಿಯ ಶಕ್ತಿ, ದೈವೇಚ್ಛೆ, ಭಕ್ತಿರಸ ಇತ್ಯಾದಿಗಳತ್ತ ಚರ್ಚೆ ಹೊರಳಿ ಏನೆಲ್ಲ ವಿವಾದಗಳೇಳುತ್ತವೆ. ಅದಕ್ಕೇ ಬಾನ್ ವಿವಿಯ ವಿಜ್ಞಾನಿಗಳು ‘ಪ್ರಜ್ಞೆ’ ಎಂಬ ಪದವನ್ನು ಬಳಸುವ ಉಸಾಬರಿಗೇ ಹೋಗಲಿಲ್ಲ. ಅವರು ವರದಿ ಮಾಡಿದ್ದು ಏನೆಂದರೆ, ಸಸ್ಯಗಳಿಗೆ ಅರಿವಳಿಕೆ ಮದ್ದು ಕೊಟ್ಟಾಗ ಕೋಶಪೊರೆ (ಸೆಲ್ ಮೆಂಬ್ರೇನ್) ತನ್ನ ಮಾಮೂಲು ಚಟುವಟಿಕೆಯಿಂದ ವಿಮುಖಗೊಳ್ಳುತ್ತದೆ. ಅಕ್ಕಪಕ್ಕದ ಜೀವಕೋಶಗಳಿಗೆ ಸಂದೇಶಗಳನ್ನು ರವಾನಿಸದೇ ಬೆಪ್ಪಾಗಿ ನಿಲ್ಲುತ್ತದೆ- ಇಷ್ಟೇ ಹೇಳಿದರು. ಮನುಷ್ಯರಲ್ಲೂ ಹೀಗೇ- ವಿದ್ಯುತ್ ಪ್ರವಾಹದ ಮೂಲಕ ಒಂದು ನರಕೋಶದಿಂದ ಇನ್ನೊಂದು ನರಕೋಶಕ್ಕೆ ಸಂದೇಶ ರವಾನೆಯಾಗುತ್ತಿರುತ್ತದೆ. ಅರಿವಳಿಕೆ ಮದ್ದನ್ನು ನೀಡಿದಾಗ ಮನುಷ್ಯನಿಗೆ ಪ್ರಜ್ಞೆ ತಪ್ಪುತ್ತದೆ. ಸಸ್ಯಗಳಲ್ಲೂ ಹಾಗೇ ಆಗುವುದೆಂದಾದರೆ ಅವಕ್ಕೂ ಪ್ರಜ್ಞೆ ಇದೆಯೆ? ಮಿದುಳೇ ಇಲ್ಲದ ಸಸ್ಯಗಳಿಗೆ ಸ್ವಂತಿಕೆ ಎಲ್ಲಿರುತ್ತದೆ, ಪ್ರಜ್ಞೆ ಎಲ್ಲಿರುತ್ತದೆ?

ಮನೋವಿಜ್ಞಾನಿಗಳು ಮನುಷ್ಯನಲ್ಲಿ ಎಚ್ಚರ, ನಿದ್ದೆ, ಆಳ ನಿದ್ದೆ ಇತ್ಯಾದಿ ಹಂತಗಳಲ್ಲಿ ಪ್ರಜ್ಞೆಯನ್ನು ಅಳೆಯುತ್ತಾರೆ. ದಾರ್ಶನಿಕರು ಉಡವನ್ನು ಪ್ರಾಥಮಿಕ ಹಂತದಲ್ಲೂ ಚಿಂಪಾಂಜಿಯನ್ನು ನಂತರದ ಹಂತದಲ್ಲೂ ಮನುಷ್ಯನನ್ನು ಪ್ರಜ್ಞೆಯ ಅತ್ಯುನ್ನತ ಹಂತದಲ್ಲೂ ಇಟ್ಟಿದ್ದಾರೆ. ಈ ವರ್ಗೀಕರಣದಲ್ಲಿ ಸಸ್ಯಗಳಿಗೆ ಜಾಗವೇ ಇಲ್ಲ. ಉದಾಹರಣೆಗೆ ಒಂದು ಉಡ ಮತ್ತು ಅದಕ್ಕೆ ಆಶ್ರಯ ನೀಡಿದ ಪೊದೆ- ಇವೆರಡರ ಮಧ್ಯೆ ಯಾವುದಕ್ಕೆ ಹೆಚ್ಚು ಜೀವಂತಿಕೆ ಇದೆ ಎಂದು ಕೇಳಿದರೆ ನಮ್ಮೆಲ್ಲರ ವೋಟೂ ಉಡಕ್ಕೇ ಹೋಗುತ್ತದೆ. ಆದರೆ ವಾಸ್ತವ ಬೇರೆಯದೇ ಇರಬಹುದು. ಆಸರೆ ಕೊಟ್ಟ ಆ ಜೀವಿಯ ಶೇಕಡಾ 90 ಭಾಗವನ್ನು ಕಿತ್ತು ತಿಂದರೂ ಅದು ಮತ್ತೆ ಬೆಳೆಯುತ್ತದೆ. ಅದು ಹತ್ತಾರು ಕಿಲೊಮೀಟರ್ ಆಚೆ ಇರುವ ತನ್ನ ಸಹಜೀವಿಯ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತದೆ. ಸುಮಾರು ಇಪ್ಪತ್ತಕ್ಕೂ ಹೆಚ್ಚು ಬಗೆಯ ಸಂವೇದನೆಗಳನ್ನು ಅರ್ಥ ಮಾಡಿಕೊಂಡು, ಅಗತ್ಯವಿದ್ದರೆ ಸಹಜೀವಿಗಳಿಗೆ ಸೂಕ್ತ ಸಂದೇಶಗಳ ಮೂಲಕ ಅದನ್ನು ರವಾನಿಸುತ್ತವೆ. ತಾಪಮಾನ, ತೇವಾಂಶ, ಕಂಪನ, ಗುರುತ್ವ, ಕಾಂತಕ್ಷೇತ್ರ ಎಲ್ಲವುಗಳ ಅತಿಸೂಕ್ಷ್ಮ ಏರಿಳಿತವೂ ಅವಕ್ಕೆ ಗೊತ್ತಾಗುತ್ತವೆ. ಧ್ವನಿ ತರಂಗಗಳನ್ನು ಕೇಳಿಸಿಕೊಳ್ಳುತ್ತವೆ; ಅಷ್ಟೇಕೆ ಅವು ಸ್ವತಃ ಧ್ವನಿ ಹೊಮ್ಮಿಸುವುದನ್ನೂ ವಿಜ್ಞಾನಿಗಳು ದಾಖಲಿಸಿದ್ದಾರೆ. ಕೀಟಭಕ್ಷಕ ವೀನಸ್ ಸಸ್ಯವಂತೂ ಲೆಕ್ಕ ಕೂಡ ಮಾಡುತ್ತದೆ.

ಸಸ್ಯಗಳಿಗೆ ನೆನಪಿನ ಶಕ್ತಿ ಇದೆ. ‘ಮುಟ್ಟಿದರೆ ಮುನಿ’ (ಮೈಮೊಸಾ) ಸಸ್ಯಗಳನ್ನು ಬೆಳೆಸಿದ ಕುಂಡಗಳನ್ನು ಸುಮ್ಮನೆ ಗುದ್ದಿದರೆ ಮೊದಲ ಬಾರಿಗೆ ಸಸ್ಯಗಳು ಮಡಚಿಕೊಳ್ಳುತ್ತವೆ. ಒಂದೆರಡು ಗಂಟೆಗಳ ಅಂತರದಲ್ಲಿ ಮತ್ತೆ ಮತ್ತೆ ಗುದ್ದುತ್ತಿದ್ದರೆ ಅವು ಮುದುರುವುದಿಲ್ಲ. ಮೂರು ದಿನ ಬಿಟ್ಟು ಮತ್ತೆ ಗುದ್ದಿದರೂ ಮುದುರುವುದಿಲ್ಲ. ಅಂಥ ಗುದ್ದು ತನಗೆ ಅಪಾಯಕಾರಿ ಅಲ್ಲ ಎಂಬುದನ್ನು ಸಸ್ಯ ನೆನಪಿಟ್ಟುಕೊಳ್ಳುತ್ತದೆ. ನಾಲ್ವತ್ತು ದಿನಗಳವರೆಗೆ ಆ ನೆನಪು ಹಸಿಯಾಗಿಯೇ ಇರುತ್ತದೆ. ಆದರೆ ‘ನೆನಪು’ ಎಂಬುದು ಪ್ರಜ್ಞಾವಂತಿಕೆಯ ದ್ಯೋತಕ ಅಲ್ಲವಲ್ಲ? ಸಸ್ಯಗಳಿಗೆ ಮೆದುಳೇ ಇಲ್ಲ.

ಪ್ರಾಣಿಗಳಲ್ಲಿರುವಂತೆ ಸಸ್ಯಗಳಲ್ಲಿ ಹೊಟ್ಟೆ, ಕಣ್ಣು, ಕಾಲು, ಯಕೃತ್ತು, ಮೂತ್ರಪಿಂಡ, ಮಿದುಳು ಯಾವುದೂ ಇಲ್ಲ. ಗುರುತಿಸಬಹುದಾದ ಯಾವ ಇಂದ್ರಿಯಗಳೂ ಇಲ್ಲ. ಅಷ್ಟು ಮಾತ್ರಕ್ಕೇ ಅವು ನಮಗಿಂತ ಕೆಳಗಿನ ಸ್ತರದ ಜೀವಿಗಳೆಂದು ಹೇಳುವ ಹಾಗೂ ಇಲ್ಲ. ಒಂದು ಬೆಕ್ಕಿನ ಮಿದುಳಿಗೆ ಘಾಸಿ ಮಾಡಿದರೆ ಅದರ ಗತಿ ಮುಗಿದೇ ಹೋಗುತ್ತದೆ. ಸಸ್ಯಕ್ಕೆ ಹಾಗೆ ಮಾಡಿದರೆ ಅಂಥ ನಷ್ಟವೇನೂ ಇಲ್ಲ. ಅದು ಮತ್ತೆ ಚಿಗುರಿಕೊಳ್ಳುತ್ತದೆ. ಅಷ್ಟೇ ಅಲ್ಲ, ಕಂಬಳಿ ಹುಳುವೊಂದು ತನ್ನ ಎಲೆಗಳನ್ನು ಕತ್ತರಿಸತೊಡಗಿದರೆ ಆ ಸಸ್ಯ ಒಂದು ಬಗೆಯ ವಿಶಿಷ್ಟ ಪರಿಮಳವನ್ನು ಹೊರಕ್ಕೆ ಸೂಸುತ್ತದೆ. ಸುತ್ತಲಿನ ಸಸ್ಯಗಳಿಗೆ ಸಂದೇಶ ರವಾನೆ ಮಾಡುತ್ತದೆ. ಇತರ ಸಸ್ಯಗಳು ಚುರುಕಾಗುತ್ತವೆ. ತಮ್ಮನ್ನು ತಿನ್ನಲು ಬರುವ ಕೀಟಗಳಿಗೆ ಕಹಿ ಎನಿಸಬಲ್ಲ ಜೀವರಸವನ್ನು ಉತ್ಪತ್ತಿ ಮಾಡಿ ತಮ್ಮ ಎಲೆ-ಕಾಂಡಗಳಲ್ಲಿ ಉಕ್ಕಿಸುತ್ತವೆ. ಸಂದೇಶ ಹೊಮ್ಮಿಸುವಾಗಲೂ ತಮ್ಮ ಸಂಬಂಧಿಗಳಿಗೆ ಮಾತ್ರ ಅರ್ಥವಾಗುವ ಸಂಕೇತಗಳನ್ನು ಬಳಸುತ್ತವೆ. ಅವುಗಳಲ್ಲೂ ಜಾತಿ ಸಂಘರ್ಷ (ಪ್ರಭೇದ ಭೇದ) ಇರುತ್ತದೆ. ಆದರೆ ಸಂಕಟ ಬಂದಾಗ ಎಲ್ಲ ಪಾಲಿಟಿಕ್ಸ್ ಮರೆತು ಒಗ್ಗಟ್ಟಾಗಿ ನಿಲ್ಲುತ್ತವೆ. ಸೆಕೆ ತೀರ ಹೆಚ್ಚಾದಾಗ ಮಳೆರಾಯನನ್ನು ತಮ್ಮಲ್ಲಿಗೆ ಕರೆಸಿಕೊಳ್ಳುತ್ತವೆ. ಹೇಗೆ ಕರೆಸಿಕೊಳ್ಳುತ್ತವೆ? ಎಲೆಗಳಲ್ಲಿ ದಟ್ಟ ಬಣ್ಣಗಳನ್ನು ಮೂಡಿಸಿ ಬಿಸಿಲನ್ನು ಜಾಸ್ತಿ ಹೀರಿಕೊಳ್ಳುತ್ತವೆ. ಸುತ್ತೆಲ್ಲ ಶಾಖ ಹೆಚ್ಚಾಗುವಂತೆ ಮಾಡಿ, ಬಿರುಗಾಳಿಯನ್ನೂ ದೂಳು ಕಣಗಳನ್ನೂ ಮೋಡಗಳನ್ನೂ ತಮ್ಮತ್ತ ಸೆಳೆಯುತ್ತವೆ. ಅಥವಾ ಏಕಕಾಲಕ್ಕೆ ಅಗೋಚರ ಬೀಜಕಣಗಳನ್ನು ಆಕಾಶಕ್ಕೆ ರವಾನಿಸಿ ಮೋಡಬಿತ್ತನೆ ಮಾಡುತ್ತವೆ.

ಹದಿನೈದು ವರ್ಷಗಳ ಹಿಂದೆ ಭತ್ತದ ತಳಿನಕ್ಷೆಯನ್ನು ಬಿಚ್ಚಿ ನೋಡಿದಾಗ ವಿಜ್ಞಾನಿಗಳಿಗೆ ಅಚ್ಚರಿ ಕಾದಿತ್ತು. ಮನುಷ್ಯನ ಪ್ರತಿ ಜೀವಕೋಶದ ಡಿಎನ್ಎಯಲ್ಲಿ 32 ಸಾವಿರ ಜೀನ್ (ಗುಣಾಣು)ಗಳು ಇದ್ದರೆ ಭತ್ತದ ಸಸ್ಯದ ಜೀವಕೋಶದಲ್ಲಿ 52 ಸಾವಿರ ಜೀನ್ ಇದ್ದವು. ಯಾಕೆ ಅಷ್ಟೊಂದಿವೆ, ಅದೂ ಮನುಷ್ಯನ ಡಿಎನ್ಎಗಿಂತ ಆರುಪಟ್ಟು ಚಿಕ್ಕದಾದ ಭತ್ತದ ಡಿಎನ್ಎಯಲ್ಲಿ ಯಾಕೆ ಅಷ್ಟೊಂದು ಜೀನ್ ಒತ್ತೊತ್ತಾಗಿವೆ ಎಂದಾಗ ಸಿಕ್ಕ ಉತ್ತರ ಹೀಗಿತ್ತು: ಬರಗಾಲ ಅಥವಾ ಬೆಂಕಿ ಬಂದರೆ ಭತ್ತದ ಸಸಿ ಎದ್ದು ಓಡುವಂತಿಲ್ಲ. ಪ್ರವಾಹ ಅಥವಾ ಸುಂಟರಗಾಳಿಯನ್ನು ತಡೆಯಬಲ್ಲ ದಪ್ಪ ಕವಚವೂ ಇಲ್ಲ. ಮೈಮೇಲೆ ಮುಳ್ಳುಗಳೂ ಇಲ್ಲ. ತಿನ್ನಲು ಬಂದ ವೈರಿಗೆ ತುರಿಕೆ ಹಬ್ಬಿಸಿಯೊ, ಕಹಿ ತಿನ್ನಿಸಿಯೋ ಓಡಿಸುವಂತಿಲ್ಲ. ಅಮ್ಮ ಅಥವಾ ಮೇಡಮ್ಮನಿಂದ ಹೊಸ ಉಪಾಯ ಕಲಿಯುವ ಹಾಗೂ ಇಲ್ಲ. ಅಷ್ಟೆಲ್ಲ ಸಂಕಟಗಳನ್ನು ಎದುರಿಸಿಯೂ ಬದುಕಲು ಸಾಕಷ್ಟು ತಾಕತ್ತನ್ನು ಅದು ತನ್ನ ಗುಣಾಣುವಿನಲ್ಲಿ ತುಂಬಿಕೊಂಡಿದೆ.

ನಮಗೇ ಅರಿವಿಲ್ಲದ ಹಾಗೆ ಸಸ್ಯಗಳು ನಮಗೆ ಹೇಗೆ ಪೂಸಿ ಹೊಡೆಯುತ್ತವೆ ಎಂಬುದನ್ನು ಮೈಕೆಲ್ ಪೊಲ್ಲಾನ್ ತನ್ನ ‘ಬಯಕೆಯ ಬಾಟನಿ’ ಹೆಸರಿನ ಗ್ರಂಥದಲ್ಲಿ ತೋರಿಸಿದ್ದಾನೆ. ಮನುಷ್ಯನ ನಾಲ್ಕು ಪರಮಾಪ್ತ ಬಯಕೆಗಳನ್ನು (ಸಿಹಿ, ಸೌಂದರ್ಯ, ಉನ್ಮಾದ ಮತ್ತು ನಿಯಂತ್ರಣ) ಉದ್ದೀಪಿಸಬಲ್ಲ ನಾಲ್ಕು ಸಸ್ಯಗಳನ್ನು (ಕಬ್ಬು, ಟ್ಯೂಲಿಪ್, ಮರಿಯುವಾನಾ ಮತ್ತು ಆಲೂಗಡ್ಡೆ) ಆತ ವಿಶ್ಲೇಷಿಸುತ್ತ ಹೇಗೆ ಇವು ಮನುಷ್ಯನನ್ನೇ ತಮ್ಮ ಅಡಿಯಾಳಾಗಿ ಮಾಡಿಕೊಂಡು ಜಗತ್ತಿಗೆಲ್ಲ ವಿಸ್ತರಿಸಿವೆ ಎಂದು ವಿವರಿಸಿದ್ದಾನೆ. ಅಡಿಯಾಳಷ್ಟೇ ಅಲ್ಲ, ಅವು ಮನುಷ್ಯನನ್ನೇ ತಲೆಕೆಳಗು ಮಾಡುತ್ತವೆ ಎಂಬುದನ್ನು ತೋರಿಸುವಂತೆ ಡಾರ್ವಿನ್ ಅನೇಕ ಪ್ರಯೋಗಗಳನ್ನು ನಡೆಸಿದ್ದ. ಬೇರುಗಳ ತುತ್ತ ತುದಿಯಲ್ಲಿರುವ ಸೂಕ್ಷ್ಮಾಂಗ ಆತನ ಆಸಕ್ತಿಯನ್ನು ವಿಶೇಷವಾಗಿ ಕೆರಳಿಸಿತ್ತು. ಸಸ್ಯದ ಇತರೆಲ್ಲ ಅಂಗಗಳಿಗಿಂತ ಅಲ್ಲೇ ಹೆಚ್ಚಿನ ಗ್ರಹಿಕೆ ಇರುತ್ತವೆ, ಕೆಳಸ್ತರದ ಪ್ರಾಣಿಗಿರುವಷ್ಟಾದರೂ ಬುದ್ಧಿಮತ್ತೆ ಅಲ್ಲಿರುತ್ತದೆ ಎಂದಿದ್ದ. ಅಷ್ಟೇಕೆ, ‘ಸಸ್ಯಗಳೆಂದರೆ ತಲೆ ಕೆಳಗಾಗಿ ನಿಂತ ಮನುಷ್ಯನ ಹಾಗೆ- ತಳದಲ್ಲಿ ಮಿದುಳು, ತುದಿಯಲ್ಲಿ ಜನನೇಂದ್ರಿಯ’ ಎಂದೇ ವರ್ಣಿಸಿದ್ದ.

ಹಾಗಿದ್ದರೆ ಪ್ರಜ್ಞಾವಂತ ಜೀವಿಗಳ ಸಾಲಿನಲ್ಲಿ ಸಸ್ಯಗಳು ಏಕೆ ಬರುತ್ತಿಲ್ಲ? 1973ರಲ್ಲಿ ಪೀಟರ್ ಟಾಂಪ್ಕಿನ್ಸ್ ಮತ್ತು ಕ್ರಿಸ್ತಾಫರ್ ಬರ್ಡ್ ಎಂಬಿಬ್ಬರು ಸೇರಿ ‘ಸೀಕ್ರೆಟ್ ಲೈಫ್ ಆಫ್ ಪ್ಲಾಂಟ್ಸ್’ ಎಂಬ ಗ್ರಂಥ ಬರೆದು ಓದುಗರಲ್ಲಿ ಹುಚ್ಚೆಬ್ಬಿಸಿದರು.

ಸಸ್ಯಗಳಲ್ಲಿ ಪ್ರಜ್ಞೆ ಇದೆ, ಅವು ಸುಳ್ಳು ಪತ್ತೆ ಮಾಡುತ್ತವೆ, ಭವಿಷ್ಯ ಹೇಳುತ್ತವೆ, ಸಮೀಪ ಬಂದ ಮನುಷ್ಯನ ಮಿದುಳನ್ನು ಸ್ಕ್ಯಾನ್ ಮಾಡುತ್ತವೆ, ಅನ್ಯಾಯಕ್ಕೆ ಪ್ರತಿಭಟಿಸುತ್ತವೆ ಎಂದೆಲ್ಲ ಕೆಲವು ಸತ್ಯಾಂಶಗಳ ಜೊತೆಗೆ ದೊಡ್ಡ ದೊಡ್ಡ ಬರುಡೆ ಬಿಟ್ಟರು. ಅವರು ನಡೆಸಿದ ಪ್ರಯೋಗಗಳಲ್ಲಿ ಅರ್ಧಕ್ಕರ್ಧ ಸುಳ್ಳೆಂಬುದು ಸಾಬೀತಾಯಿತು. ಅಲ್ಲಿಂದೀಚೆಗೆ ಸಸ್ಯವಿಜ್ಞಾನಿಗಳು ಸತ್ಯಾಂಶವನ್ನು ಹೇಳುವಾಗ ತುಂಬ ಎಚ್ಚರ ವಹಿಸುತ್ತಾರೆ. ಸಸ್ಯಗಳ ‘ನರವಿಜ್ಞಾನ’ದಲ್ಲಿ ಅದೆಷ್ಟೇ ಹೊಸ ಸಂಗತಿಗಳು ಪತ್ತೆಯಾದರೂ ಭಕ್ತರ ಹುಚ್ಚೆಬ್ಬಿಸದ ಹಾಗೆ ಹುಷಾರಾಗಿ ಪದಪ್ರಯೋಗ ಮಾಡುತ್ತಾರೆ.

ಅದಂತಿರಲಿ, ಸಸ್ಯಗಳ ಕುರಿತು ಮನುಷ್ಯನಿಗೆ ಪ್ರಜ್ಞೆ ಇದೆಯೇ? ಕಾಡಿನ ನಾಲ್ಕು ಚಿತ್ರಗಳನ್ನು ವೀಕ್ಷಕರಿಗೆ ಒಂದರ ನಂತರ ಒಂದರಂತೆ ಸರಸರ ತೋರಿಸಿ ‘ಏನೇನು ಕಂಡಿರಿ?’ ಎಂದು ನೂರು ಜನರಿಗೆ ಕೇಳಲಾಯಿತು. ಒಂದರಲ್ಲಿ ಜಿಂಕೆ, ಇನ್ನೊಂದರಲ್ಲಿ ಕಡವೆ, ಮತ್ತೊಂದರಲ್ಲಿ ಕಪ್ಪೆ, ನಾಲ್ಕನೆಯದರಲ್ಲಿ ಒಂದು ಜೋಡಿ ಯುವಕ-ಯುವತಿ ಎಂಬ ಸರಿಯಾದ ಉತ್ತರ ಬಂತು ನಿಜ. ಆದರೆ ಅಲ್ಲಿ ಗಿಡಮರಗಳೂ ಇವೆ ಎಂಬುದು ಶೇಕಡಾ 97 ಜನರ ಗಮನಕ್ಕೆ ಬರಲೇ ಇಲ್ಲ. ಇದಕ್ಕೆ ಹಸಿರುಗುರುಡು ಎನ್ನೋಣವೆ? ಸಸ್ಯದಿಂದ ನಮಗೇನು ಸಿಗುತ್ತದೆ ಎಂಬುದಷ್ಟೇ ಮುಖ್ಯವಾಗುತ್ತದೆ ವಿನಾ ಅದೊಂದು ಪ್ರಜ್ಞಾವಂತ ಜೀವಿ ಹಾಗಿರಲಿ, ಸಾಮಾನ್ಯ ಜೀವಿ ಎಂಬುದೂ ನಮ್ಮ ಅರಿವಿಗೆ ಬರುವುದಿಲ್ಲ.

ಬರಲಿರುವ ಬಿಸಿ ಪ್ರಳಯವನ್ನು ಎದುರಿಸಲು ಸಸ್ಯಗಳು ಏನೇನು ಸಿದ್ಧತೆ ಮಾಡಿಕೊಳ್ಳುತ್ತಿವೆ ಎಂಬುದರ ಬಗ್ಗೆ ಈಚೆಗೆ ಅನೇಕ ಹೊಸ ಸಂಗತಿಗಳು ಪತ್ತೆಯಾಗುತ್ತಿವೆ. ನಾವು ಮಾತ್ರ ಹಾಯಾಗಿದ್ದೇವೆ.

ಪ್ರತಿಕ್ರಿಯಿಸಿ (+)