ಮಂಗಳವಾರ, ಏಪ್ರಿಲ್ 20, 2021
32 °C

ಹಾಗಾದರೆ ಬೆಂಗಳೂರು ಯಾರಿಗೂ ಬೇಡವೇ?

ಪದ್ಮರಾಜ ದಂಡಾವತಿ Updated:

ಅಕ್ಷರ ಗಾತ್ರ : | |

ಹಾಗಾದರೆ ಬೆಂಗಳೂರು ಯಾರಿಗೂ ಬೇಡವೇ?

ಸುದ್ದಿ ಆಗಬೇಕು. ಕೆಟ್ಟ ಕಾರಣಕ್ಕೆ ಆಗಬಾರದು. ಬೆಂಗಳೂರು ಈಗ ಒಳ್ಳೆಯ ಕಾರಣಕ್ಕೆ ಸುದ್ದಿಯಲ್ಲಿ ಇಲ್ಲ. ಅಮೆರಿಕೆಯ `ಇಂಟರ್‌ನ್ಯಾಷನಲ್ ಹೆರಾಲ್ಡ್ ಟ್ರಿಬ್ಯೂನ್‌ನಂಥ ಪತ್ರಿಕೆ~ಗೂ ಬೆಂಗಳೂರಿನ ಕಸದ ನಾತ ಬಡಿದಿದೆ. ಭಾರತದ ಸಿಲಿಕಾನ್ ವ್ಯಾಲಿ ಎಂದು ಹೆಸರು ಮಾಡಿದ ನಗರಕ್ಕೆ ಇದು ಖಂಡಿತ ಒಳ್ಳೆಯ ಸುದ್ದಿ ಅಲ್ಲ.ಅಮೆರಿಕೆಯ ಪತ್ರಿಕೆ ಒಂದು ದಿನ ಸುದ್ದಿ ಬರೆದು ಸುಮ್ಮನಾಗಬಹುದು. ಮುಖ್ಯಮಂತ್ರಿಗಳೂ `ಬೆಂಗಳೂರು ದೊಡ್ಡ ನಗರ, ಸುದ್ದಿ ಆಗುವುದು ಖರೆ~ ಎಂದು ಹೇಳಿ ಸುಮ್ಮನಾಗಬಹುದು. ಆದರೆ, ಸಾಮಾನ್ಯ ಜನರ ಪಾಡು ಏನು? ಈಗಲೂ ಬಹುತೇಕ ಬಡಾವಣೆಗಳಲ್ಲಿ ಕಸದ ಗುಡ್ಡೆಗಳು ಬಿದ್ದಿವೆ. ನಿತ್ಯ ವಿಲೇವಾರಿ ಆಗುತ್ತಿದ್ದ ಕಸ ಈಗ ಆಗುತ್ತಿಲ್ಲ.ವಾರಗಟ್ಟಲೆ ಬಿದ್ದ ಕಸವನ್ನು ಲೋಡುಗಟ್ಟಲೆ ಸಾಗಿಸಿದ ಮೇಲೆ ಇಡೀ ಪ್ರದೇಶವನ್ನು ದುರ್ನಾತ ಆವರಿಸುತ್ತಿದೆ. ಜನರು ಬಾಯಿ ಮುಚ್ಚಿಕೊಂಡು ಕಷ್ಟ ಅನುಭವಿಸುತ್ತಿದ್ದಾರೆ. ಮೂಗು ಮುಚ್ಚಿಕೊಂಡು ದಿನ ಕಳೆಯುತ್ತಿದ್ದಾರೆ.ಇದು ಅಷ್ಟು ಸುಲಭವಿದ್ದಂತೆ ಕಾಣುವುದಿಲ್ಲ. ಅದಕ್ಕೇ ಪರಿಹಾರವೂ ಸುಲಭವಾಗಿ ಸಿಗುತ್ತಿಲ್ಲ. ಇಲ್ಲಿ ಅಡ್ಡಾದಿಡ್ಡಿ ಬೆಳೆದ ನಗರದ ಕಾರಣ ಇದೆ. ಭೂಮಿಯ ಬೆಲೆ ಏಕಾಏಕಿ ಗಗನಕ್ಕೆ ಏರಿದ ಕಾರಣ ಇದೆ. ಆಸೆಬುರುಕ ಗುತ್ತಿಗೆದಾರರು ಇದ್ದಾರೆ. ಅವರ ಹಣದ ಮೇಲೆ ಬದುಕುತ್ತಿರುವ ಜಿಗಣೆಯಂಥ ರಾಜಕಾರಣಿಗಳು ಇದ್ದಾರೆ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ಅಧಿಕಾರಿಗಳು ಇದ್ದಾರೆ.ತನ್ನ ಕರ್ತವ್ಯವೇನು ಎಂದು ತಿಳಿಯದ ಸರ್ಕಾರ ಇದೆ. ಎಲ್ಲವನ್ನೂ ಸಹಿಸಿಕೊಂಡು ತೆಪ್ಪಗಿರುವ ಬೆಂಗಳೂರಿನ ಜನ ಇದ್ದಾರೆ... ಇದು ಒಂದು ವಿಷವರ್ತುಲ. ಈ ವರ್ತುಲವನ್ನು ಎಲ್ಲಿ ಕತ್ತರಿಸಲು ಹೋದರೂ ವ್ಯತಿರಿಕ್ತ ಪರಿಣಾಮಗಳು ಆಗುತ್ತವೆಯೇ ಹೊರತು ಪರಿಹಾರ ಸಿಗುವಂತೆ ಕಾಣುವುದಿಲ್ಲ. ಹೈಕೋರ್ಟಿನ ಚಾಟಿ ಏಟು ಕೂಡ ತಕ್ಷಣಕ್ಕೆ ಫಲ ಕೊಟ್ಟಿಲ್ಲ.ಕೊಟ್ಟಿದ್ದರೆ ಕಳೆದ ಗುರುವಾರವೇ ಹೊಸ ಗುತ್ತಿಗೆ ವ್ಯವಸ್ಥೆ ಅಸ್ತಿತ್ವಕ್ಕೆ ಬರಬೇಕಿತ್ತು. ಬರಲಿಲ್ಲ.

1990ರ ದಶಕದ ಉತ್ತರಾರ್ಧದಲ್ಲಿ ಬೆಂಗಳೂರು ಇಡೀ ವಿಶ್ವದ ಗಮನ ಸೆಳೆಯಿತು. ಐ.ಟಿ ಮತ್ತು ಬಿ.ಟಿ `ಹಬ್~ ಎಂದು ಖ್ಯಾತವಾಯಿತು. ದೇಶದ ವಿವಿಧ ಕಡೆಯಿಂದ ಜನರು ಇಲ್ಲಿಗೆ ಬಂದು ವಾಸ ಮಾಡತೊಡಗಿದರು. ಗಗನಚುಂಬಿ ಕಟ್ಟಡಗಳು ಭೂಮಿಯಿಂದ ಉದ್ಭವ ಮೂರ್ತಿಯ ಹಾಗೆ ಎಲ್ಲ ಕಡೆ ಧುತ್ ಎಂದು ಮೇಲೆ ಏಳತೊಡಗಿದುವು.ಕೇವಲ ನೂರು ವಾರ್ಡ್ ವ್ಯಾಪ್ತಿ ಇದ್ದ ಬೆಂಗಳೂರು ದುಪ್ಪಟ್ಟು ದೊಡ್ಡದಾಯಿತು. ವಾರ್ಡ್‌ಗಳ ಸಂಖ್ಯೆ 198ಕ್ಕೆ ಏರಿತು. ಜನಸಂಖ್ಯೆ ಕೋಟಿ ಹತ್ತಿರ ಆಯಿತು. ಜನಸಂಖ್ಯೆ ಹೆಚ್ಚಿದಂತೆ ಮಾಲ್‌ಗಳು ಬರತೊಡಗಿದುವು. ಪ್ಲಾಸ್ಟಿಕ್ ಬಳಕೆ ಇನ್ನಿಲ್ಲದಂತೆ ಹೆಚ್ಚಿತು. ಬೆಂಗಳೂರು ಮೇಲಿನ ಧಕ್ಕಡಿ ನಿತ್ಯವೂ ಹೆಚ್ಚುತ್ತ ಹೋಯಿತು.ಕಸ ವಿಲೇವಾರಿ ಮಾಡುತ್ತಿದ್ದ ಜಾಗದ ಸುತ್ತಲು ಬೆಳವಣಿಗೆಗೆ ಇದ್ದ ಒಂದು ಕಿಲೋ ಮೀಟರ್ ವ್ಯಾಪ್ತಿ ನಿಷೇಧವನ್ನು (ಬಫರ್ ಝೋನ್) 20-20 ತಿಂಗಳ ಸರ್ಕಾರದಲ್ಲಿ ಅರ್ಧ ಕಿಲೋ ಮೀಟರ್‌ಗೆ ಇಳಿಸಲಾಯಿತು. ಆ ವೇಳೆಗಾಗಲೇ ಬೆಂಗಳೂರು ಸುತ್ತಲಿನ ಭೂಮಿಗೆ ಚಿನ್ನದ ಬೆಲೆ ಬಂದಿತ್ತು. ರಾಜಕಾರಣಿಗಳು ಈ ಭೂಮಿಯ ಮೇಲೆ ಕಣ್ಣು ಹಾಕಿದ್ದರು. ಅಥವಾ ಭೂಮಿಯ ಒಡೆಯರು ರಾಜಕಾರಣಿಗಳ ಆಶ್ರಯ ಬಯಸಿದ್ದರು.ಬೆಂಗಳೂರಿನ ಕಸವನ್ನು ಒಯ್ದು ಸುರಿಯಲು ಮಂಡೂರಿನಲ್ಲಿ ಖರೀದಿ ಮಾಡಿದ್ದ ನೂರು ಎಕರೆ ಜಮೀನು ಯಾವುದಕ್ಕೂ ಸಾಲದಾಯಿತು. ವಿಚಿತ್ರ. ಮುಂಬೈನಂಥ ಮಹಾನಗರ ಬಿಡಿ ಸೇಲಂನಂಥ ಚಿಕ್ಕ ಊರಿನಲ್ಲಿ ಕಸ ವಿಂಗಡಣೆ ಮಾಡಲು, ಸಂಸ್ಕರಿಸಲು, ಗೊಬ್ಬರ ಮಾಡಲು ಒಂದು ಘಟಕ ಇರಬಹುದಾದರೆ ಬೆಂಗಳೂರಿನಂಥ ಅಂತರರಾಷ್ಟ್ರೀಯ ಗಮನ ಸೆಳೆಯುವ ಊರಿನಲ್ಲಿ ಅದಕ್ಕೆ ವ್ಯವಸ್ಥೆ ಇರಲಿಲ್ಲ.ಎರಡು ಘಟಕಗಳಿಗೆ ಅನುಮತಿ ಕೊಟ್ಟಿದ್ದರೂ ಅವು ಸರಿಯಾಗಿ ಕೆಲಸ ಮಾಡಲಿಲ್ಲ. ಮಾಡಿಸಬೇಕಾದ ಅಗತ್ಯ ಸರ್ಕಾರಕ್ಕಾಗಲೀ, ಪುರಪಿತೃಗಳಿಗಾಗಲೀ ಹೊಳೆಯಲಿಲ್ಲ. ನೂರು ವಾರ್ಡ್ ಇದ್ದ ಬೆಂಗಳೂರಿನಲ್ಲಿ ಪ್ರತಿದಿನ 800 ಟನ್‌ನಿಂದ 1,000 ಟನ್ ಕಸ ಉತ್ಪಾದನೆ ಆಗುತ್ತಿತ್ತು. `ಆ ಕಸವನ್ನು ಬಳಿಯುತ್ತಿದ್ದ ಪೌರಕಾರ್ಮಿಕರು ಸರಿಯಾಗಿ ಕೆಲಸ ಮಾಡುವುದಿಲ್ಲ. ಬೇಕೆಂದಾಗ ಮುಷ್ಕರ ಮಾಡುತ್ತಾರೆ~ ಎಂದು ಆ ಕೆಲಸವನ್ನು ಹೊರಗುತ್ತಿಗೆಗೆ ಕೊಡಲಾಯಿತು. ಬಾಣಲೆಯಿಂದ ಬೆಂಕಿಗೆ ಬಿದ್ದಂತೆ ಆಯಿತು.ಪೌರಕಾರ್ಮಿಕರು ಬಡಪಾಯಿಗಳು. ಅವರು ಎಲ್ಲ ಸರ್ಕಾರಿ ನೌಕರರ ಹಾಗೆ ಮೈಗಳ್ಳರಾಗಿದ್ದರು; ಒಂದಿಷ್ಟು ಸಂಬಳ ಜಾಸ್ತಿ ಕೇಳುತ್ತಿದ್ದರು. ಆದರೆ, ಗುತ್ತಿಗೆದಾರರು, ಬೆಂಗಳೂರು ನಗರದ ಸಚಿವರು ಮತ್ತು ಪಾಲಿಕೆಯ ಸದಸ್ಯರ ಮೇಲೆ ಸವಾರಿ ಮಾಡುವಷ್ಟು ಶಕ್ತರು. ಮೂವತ್ತು ಕೋಟಿ ರೂಪಾಯಿ ಇದ್ದ ಕಸ ವಿಲೇವಾರಿ ಗುತ್ತಿಗೆ ಮೊತ್ತ ತೊಂಬತ್ತು ಕೋಟಿಗೆ ಏರಿಸಿದ್ದಕ್ಕೆ, ಗುತ್ತಿಗೆ ಅವಧಿ ಮುಗಿದು ಎರಡು ಮೂರು ವರ್ಷಗಳು ಆದರೂ ಅವರನ್ನು ಬದಲಿಸುವ ಶಕ್ತಿಯನ್ನು ಪಾಲಿಕೆ ತೋರಿಸದೇ ಇರುವುದಕ್ಕೆ ಗುತ್ತಿಗೆ ಮೊತ್ತ ದೊಡ್ಡದು ಇದ್ದುದೇ ಕಾರಣ.ಗುತ್ತಿಗೆ ಕೊಡುವಾಗ, `ಕಸ ವಿಲೇವಾರಿ ಜತೆಗೆ ಜನರಿಗೆ ಕಸ ವಿಂಗಡಣೆಯ ಕುರಿತು ಜಾಗೃತಿ ಮೂಡಿಸಬೇಕು. ನಿಧಾನವಾಗಿ ಕಸ ವಿಂಗಡಣೆ ರೂಢಿ ಆಗಬೇಕು~ ಎಂಬ ಷರತ್ತುಗಳನ್ನೂ ವಿಧಿಸಲಾಗಿತ್ತು. ಆದರೆ, ಹಾಗೆ ಮಾಡಿದ್ದರೆ ಸಾಗಣೆ ಮಾಡಬೇಕಿದ್ದ ಕಸದ ಪ್ರಮಾಣ ಭಾರಿ ಪ್ರಮಾಣದಲ್ಲಿ ಕಡಿಮೆ ಆಗಿ ಬಿಡುತ್ತಿತ್ತು. ಅದು ಗುತ್ತಿಗೆದಾರರ ಹಿತಕ್ಕೆ ಧಕ್ಕೆ ತರುತ್ತಿತ್ತು. ಈಗ ಇದ್ದಕ್ಕಿದ್ದಂತೆ ಪಾಲಿಕೆ ಆಯುಕ್ತರು ಕಸ ವಿಂಗಡಣೆ ಮಾಡಿ ಸಾಗಿಸುವ ನಿರ್ಧಾರ ತೆಗೆದುಕೊಂಡರು.ಆದರೆ, ಮನೆಯ ಕಸವನ್ನು ರಸ್ತೆಗೆ ತಳ್ಳಿ, ಯಾವುದೋ ಮೂಲೆಯಲ್ಲಿ ಹಾಕಿ ತಮ್ಮ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಂಡಿದ್ದ ಬೆಂಗಳೂರು ಜನರಿಗೆ ಅದು ಕಷ್ಟ ಎನಿಸಿತು. ಒಳ್ಳೆಯ ರೂಢಿಗಳನ್ನು ತರುವುದು ಯಾವಾಗಲೂ ಬಹುಕಷ್ಟ. ಅತ್ತ ಮಂಡೂರಿನ ಜನರನ್ನು ಆಯಾ ಪ್ರದೇಶದ ರಾಜಕಾರಣಿಗಳು ಎತ್ತಿಕಟ್ಟಿದರು. ಅಲ್ಲಿನ ಜನರಿಗೂ ಕಸದ ಜತೆಗೆ ಬದುಕು ಮಾಡುವುದು ಅಸಹನೀಯವಾಗಿತ್ತು. ಯಾವ ದೊಡ್ಡ ಊರಿನ ಜನರೂ ಹೀಗೆ ನಡೆದುಕೊಳ್ಳಬಾರದು.ತಮ್ಮ ಮನೆಯ ಕಸವನ್ನು ಇನ್ನೊಬ್ಬರ ಮನೆಯ ಬಾಗಿಲಿಗೆ ಹೋಗಿ ಹಾಕುವುದು ಅತ್ಯಂತ ಅನಾಗರಿಕ ವರ್ತನೆ. ಮಂಡೂರಿನಲ್ಲಿ, ಮಾವಳ್ಳಿಪುರದಲ್ಲಿ ಇರುವವರೂ ನಮ್ಮ ಹಾಗೆಯೇ ಸಾರ್ವಜನಿಕರು, ಅವರೇನು ಆದಿಮಾನವರಲ್ಲ ಎಂದು ಬೆಂಗಳೂರಿನ ಜನ ಅಂದುಕೊಳ್ಳಲಿಲ್ಲ. ಬೆಂಗಳೂರಿನ ಪುರಪಿತೃಗಳು, ಇಡೀ ಕರ್ನಾಟಕದ ಪುರಪಿತೃ ಆದ ಸರ್ಕಾರವೂ ಅಂದುಕೊಳ್ಳಲಿಲ್ಲ.ಕಸದ ಗುಣವೇ ಹಾಗೆ. ಅದು ರೋಗವನ್ನು ತರುತ್ತದೆಯೇ ಹೊರತು ಆರೋಗ್ಯವನ್ನು ತರುವುದಿಲ್ಲ. ಮಾವಳ್ಳಿಪುರ ಮತ್ತು ಮಂಡೂರಿನ ಜನ ಪ್ರತಿಭಟನೆ ಮಾಡುತ್ತಾರೆ ಎಂದು ಚಿಂತಾಮಣಿ ಹತ್ತಿರ ಹೋಗಿ ಕಸ ಹಾಕಿದರೆ ಅಲ್ಲಿನ ಜನ ಏಕೆ ಸುಮ್ಮನಿರುತ್ತಾರೆ? ಇತ್ತ ಹೊಸೂರು, ಅತ್ತ ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಇನ್ನೊಂದು ಕಡೆ ನೈಸ್ ರಸ್ತೆ. ಬೆಂಗಳೂರಿನ ಕಸವನ್ನು ಇನ್ನು ಎಲ್ಲಿಯೂ ಹಾಕಲು ಸಾಧ್ಯವಿಲ್ಲ.ಈಗ ಇರುವ ದಾರಿ ಒಂದೇ ಎಂದರೆ ಬೀಳುವ ಕಸವನ್ನು ಬೇಗ ಸಾಗಿಸಬೇಕು ಮತ್ತು ಅದನ್ನು ಗೊಬ್ಬರವಾಗಿ, ವಿದ್ಯುತ್ ಆಗಿ ಪರಿವರ್ತಿಸಲು ತುರ್ತು ಕ್ರಮ ತೆಗೆದುಕೊಳ್ಳಬೇಕು. ಅಂಥ ಕ್ರಮ ತೆಗೆದುಕೊಳ್ಳುತ್ತೇವೆ; ನಿಮ್ಮ ಊರಿನ ಸುತ್ತ ಕಸ ಬೀಳುವುದಿಲ್ಲ ಎಂದು ಪಾಲಿಕೆ ಮತ್ತು ಸರ್ಕಾರಗಳು ಕಸ ಒಯ್ದು ಸುರಿಯುವ ಊರಿನ ಜನರಿಗೆ ಭರವಸೆ ಕೊಡಬೇಕು. ಆ ಭರವಸೆ ಅವರಲ್ಲಿ ನಂಬಿಕೆ ಹುಟ್ಟಿಸಬೇಕು. ಮೂಲ ಬೆಂಗಳೂರಿನ ಪ್ರದೇಶಗಳನ್ನು ಬಿಟ್ಟು ಬಡಾವಣೆಗಳಲ್ಲಿ ಕೂಡ ಇದೇ ರೀತಿಯಲ್ಲಿ ಕಸ ಸಂಸ್ಕರಿಸುವ ವ್ಯವಸ್ಥೆ ಆಗಬೇಕು.ಇದೆಲ್ಲ ಆಗಬೇಕು ನಿಜ. ಆದರೆ, ಆಗುಮಾಡುವ ಸರ್ಕಾರಕ್ಕೆ ಮನಸ್ಸು ಇದ್ದಂತೆ ಇಲ್ಲ. ಬೆಂಗಳೂರು ನಗರವನ್ನು ಇಷ್ಟು ತಾತ್ಸಾರವಾಗಿ, ಕಾಲಕಸದ ಹಾಗೆ ಕಂಡ ಸರ್ಕಾರ ಮತ್ತೊಂದು ಇದುವರೆಗೆ ಬಂದಿಲ್ಲ. ಬೆಂಗಳೂರಿನ ಜನರು ಎಷ್ಟೊಂದು ಕನಸು ಕಟ್ಟಿಕೊಂಡಿದ್ದರು. ಈ ಸರ್ಕಾರದಲ್ಲಿ ಬೆಂಗಳೂರು ಬಲ್ಲ ಸಚಿವರು ಇದ್ದರು, ಪುರಪಿತೃಗಳು ಇದ್ದರು.ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು, ಪುರಪಿತೃಗಳಾಗಿ ಸಚಿವರಾದವರೂ ಇದ್ದರು. ಇಡೀ ರಾಜ್ಯದ ಆರೋಗ್ಯದ ಹೊಣೆ ಹೊತ್ತ ಸಚಿವರೂ ಬೆಂಗಳೂರಿನಿಂದಲೇ ಆಯ್ಕೆಯಾಗಿದ್ದರು. ಬೆಂಗಳೂರನ್ನು ಪ್ರತಿನಿಧಿಸುವ ಐವರು ಸಚಿವರಲ್ಲಿ ಒಬ್ಬ ಮಹಿಳೆಯೂ ಇದ್ದರು. ಆದರೆ, ಯಾರಿಗೂ ಬೆಂಗಳೂರಿನ ಬಗ್ಗೆ ಪ್ರೀತಿ ಇದ್ದಂತೆ ಕಾಣಲಿಲ್ಲ, ಹೃದಯ ಇದ್ದಂತೆ ತೋರಲಿಲ್ಲ.ಬೆಂಗಳೂರಿನ ಜನ ಹೀಗೆ ತಮ್ಮ ಮನೆಯ ಮುಂದೆ, ಬಡಾವಣೆಯಲ್ಲಿ ಕಸದ ಗುಡ್ಡೆಯ ಮಧ್ಯೆ ಬದುಕುವುದು ನರಕಸದೃಶ ಎಂದು ಅವರಿಗೆ ಅನಿಸಲಿಲ್ಲ. ಅದೆಲ್ಲ ಅವರ ಕೈ ಮೀರಿ ಹೋದ ಸನ್ನಿವೇಶವಾಗಿತ್ತೇ? ಅಥವಾ ಅವರಿಗೆ ಪ್ರತಿಷ್ಠೆ ಅಡ್ಡಬಂತೇ? ಅವರಿಗೂ ಅಧಿಕಾರ ತರುವ ಅಹಂಕಾರ, ಅಸಡ್ಡೆ ಇತ್ತೇ? ಗೊತ್ತಾಗಲಿಲ್ಲ.ಯಾರೂ ಬಾಯಿಯೇ ಬಿಡಲಿಲ್ಲವಾದ್ದರಿಂದ ಅವರ ಮನಸ್ಸಿನಲ್ಲಿ ಏನಿದೆ ಎಂದೂ ಗೊತ್ತಾಗಲಿಲ್ಲ!ರಾಮಕಷ್ಣ ಹೆಗಡೆ ಅಥವಾ ಎಸ್.ಎಂ.ಕೃಷ್ಣ ಮುಖ್ಯಮಂತ್ರಿ ಆಗಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಏಕೋ ಅನಿಸಿತು. ಅವರಿಬ್ಬರೂ ಸೂಕ್ಷ್ಮ ಮನಸ್ಸಿನ ಮುಖ್ಯಮಂತ್ರಿಗಳಾಗಿದ್ದರು. ಅವರಿಗೆ ಬೆಂಗಳೂರಿನ ಬಗ್ಗೆ ನೈಜ ಕಾಳಜಿ ಇತ್ತು.ಬೆಂಗಳೂರಿಗೆ ಕೆಟ್ಟ ಹೆಸರು ಬಂದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಂತೆ ಎಂದೂ ಅವರಿಗೆ ತಿಳಿದಿತ್ತು. ಆಡಳಿತ ಎಂದರೆ ಜನರಿಗೆ ಒಳಿತು ಮಾಡುವುದು ಎಂದು ಅವರಿಗೆ ಗೊತ್ತಿತ್ತು. ಈಗಿನ ಸರ್ಕಾರಕ್ಕೂ ಈ ಸೂಕ್ಷ್ಮ ತಿಳಿದಿರಬೇಕಿತ್ತು. ಬೆಂಗಳೂರು ಮಹಾನಗರ ಪಾಲಿಕೆಯೂ ಬಿಜೆಪಿ ಆಡಳಿತದಲ್ಲಿಯೇ ಇದೆ ಎಂದು ಅವರಿಗೆ ಗೊತ್ತಿರಬೇಕಿತ್ತು.ಬೆಂಗಳೂರಿನ ಕಸವನ್ನೇ ಸರಿಯಾಗಿ ತೆಗೆಯದ ಸರ್ಕಾರ ನಮ್ಮ ಊರಿನ ಕಸವನ್ನು ಇನ್ನೇನು ತೆಗೆಯುತ್ತದೆ ಎಂದು ಇತರ ಊರುಗಳ ಜನ ಅಂದುಕೊಂಡಾರು ಎಂದಾದರೂ ಸರ್ಕಾರಕ್ಕೆ ಅಳುಕು ಇರಬೇಕಿತ್ತು.ಸರ್ಕಾರ ಮತ್ತು ಪಾಲಿಕೆಗಳೆರಡೂ ತಮ್ಮ ಕರ್ತವ್ಯದಲ್ಲಿ ವಿಫಲವಾಗಿರುವಾಗ ಅವುಗಳ ವಿರುದ್ಧ ಧ್ವನಿ ಎತ್ತುವ ಕೆಲಸವನ್ನು ಸಾರ್ವಜನಿಕರಾದರೂ ಮಾಡಬೇಕಿತ್ತು. ಅಣ್ಣಾ ಹಜಾರೆ ಚಳವಳಿಯಲ್ಲಿ ಮುಖಕ್ಕೆ ಬಣ್ಣ ಬಳಿದುಕೊಂಡು ಸ್ವಾತಂತ್ರ್ಯ ಉದ್ಯಾನಕ್ಕೆ ಸಾವಿರ ಸಂಖ್ಯೆಯಲ್ಲಿ ಬಂದು ಇಳಿದ ಐ.ಟಿ ಉದ್ಯೋಗಿಗಳಿಗೆ ಬೆಂಗಳೂರಿನ ಕಸ ಒಂದು ಸಮಸ್ಯೆ ಎನಿಸಲಿಲ್ಲ. ಅವರು `ಗೇಟೆಡ್ ಕಮ್ಯುನಿಟಿ~ ಆಗಿರುವುದರಿಂದ ಅವರಿಗೆ ಅದು ಸಮಸ್ಯೆ ಆಗಲಿಲ್ಲವೇ?ಅಥವಾ ಅಪಾರ್ಟ್‌ಮೆಂಟ್ ಎಂಬ `ಆಕಾಶದಲ್ಲಿ ಬದುಕುವ~ ಜೀವಿಗಳು ಆದುದರಿಂದ ಸಮಸ್ಯೆ ಎನಿಸಲಿಲ್ಲವೇ? ಐ.ಟಿ, ಬಿ.ಟಿ ಉದ್ಯೋಗಿಗಳನ್ನು ಪಾಲಿಸುವ ನಾರಾಯಣಮೂರ್ತಿಗಳು, ಅಜೀಂ ಪ್ರೇಮ್‌ಜೀಗಳು, ಕಿರಣ್ ಮಜುಂದಾರ್ ಷಾಗಳೂ ದಿವ್ಯ ಮೌನ ತಾಳಿದ್ದಾರೆ.ಅವರು ಒಂದು ಗುಡುಗು ಹಾಕಿದ್ದರೆ ಇಡೀ ದೇಶದ ತುಂಬ ಸುದ್ದಿ ಆಗುತ್ತಿತ್ತು. ಮತ್ತೆ ಮತ್ತೆ ಗುಡುಗು ಹಾಕಿದ್ದರಂತೂ ಸರ್ಕಾರ ಗಾಢ ನಿದ್ದೆಯಿಂದ ಎಚ್ಚೆತ್ತುಕೊಳ್ಳುತ್ತಿತ್ತು... ಇಲ್ಲಿ ಎಷ್ಟೊಂದು ಮಂದಿ ಸಾಹಿತಿಗಳು, ಕಲಾವಿದರು ಇದ್ದಾರಲ್ಲ...? ಏಕೋ ಏನೋ ಎಲ್ಲರೂ ಮೌನ ತಾಳಿದರು. ಹಾಗಾದರೆ ಬೆಂಗಳೂರು ಯಾರಿಗೂ ಬೇಡವೇ? ಎಂಥ ದುರ್ದೈವ! 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.