ಹಿಂದುಳಿದಿರುವಿಕೆ ಎಂಬುದು ವಿಮೋಚನೆ ಆಗದ ಶಾಪವೇ?

7

ಹಿಂದುಳಿದಿರುವಿಕೆ ಎಂಬುದು ವಿಮೋಚನೆ ಆಗದ ಶಾಪವೇ?

Published:
Updated:
ಹಿಂದುಳಿದಿರುವಿಕೆ ಎಂಬುದು ವಿಮೋಚನೆ ಆಗದ ಶಾಪವೇ?

‘ಪ್ರಾದೇಶಿಕ ಅಭಿವೃದ್ಧಿಯಲ್ಲಿ ತ್ವರಿತಗತಿಯ ಬೆಳವಣಿಗೆ ಮತ್ತು ಸಮತೋಲನವನ್ನು ಸಾಮಾಜಿಕ ನ್ಯಾಯ ಬದ್ಧತೆಗೆ ಜೊತೆಗೆ ಹೈದರಬಾದ ಕರ್ನಾಟಕ ಪ್ರಾದೇಶ ವ್ಯಾಪ್ತಿಯ ಆರು ಜಿಲ್ಲೆಗಳಲ್ಲಿ ಸಾಧನೆಪಡಿಸುವುದೇ ಹೈ.ಕ.ಪ್ರ.ಆ.ಮ : ಮಿಷನ್‌ ಮೂಲ ಉದ್ದೇಶ. ಇದರ ಧ್ಯೇಯವೇನೆಂದರೆ ಮೈಕ್ರೋ ಮತ್ತು ಮ್ಯಾಕ್ರೋ ಯೊಜನೆಗಳನ್ನು ಅಳವಡಿಸುವುದರಿಂದ ಈ ಭಾಗದ ಐತಿಹಾಸಿಕ ಅಂತರವನ್ನು ತುಂಬಬಹುದಾಗಿದೆ.

ಅದು ಅಲ್ಲದೇ ಅಭಿವೃದ್ಧಿಯನ್ನು ಅವಲಂಬನೆ ಪ್ರಾತ್ಯವಲಂಬನೆ ಮೇಲೆ ಸಾಧಿಸಬಹುದಾಗಿದೆ. ಊಏಖಆಃ ಯೋಜನೆಗಳನ್ನು ತಯಾರಿಸುವಾಗ ಡಾ.ಡಿ.ಎಂ.ನಂಜುಂಡಪ್ಪ ಕಮಿಟಿಯ ವರದಿಯಲ್ಲಿನ ಅಂಶಗಳನ್ನು ಆಧರಿಸಿ ಅಆIಯನ್ನು ಮೂಲವಾಗಿಟ್ಟುಕೊಂಡು ತಾಲ್ಲೂಕವನ್ನು ಒಂದು ಘಟಕವನ್ನಾಗಿ ಪರಿಗಣಿಸಲಾಗಿದೆ.

ಮೈಕ್ರೋ ಯೋಜನೆಯ ಅಡಿಯಲ್ಲಿ ಒಟ್ಟಾರೆ ಅನುದಾನದ ಶೇಕಡಾ 60% ಪ್ರತಿಶತವನ್ನು ಕ್ಲಿಷಟಕರವಾದ ಮೂಲಭೂತ ಸೌಕರ್ಯಗಳನ್ನು ಸಂಸ್ಥಾಥಿಕ ವಲಯದ ಅಡಿಯಲ್ಲಿ ಐತಿಹಾಸಿಕ ಅಂತರವನ್ನು ಹೋಗಲಾಡಿಸಲು ಒದಗಿಸುವುದು...’ ನಿಮಗೆ ಏನಾದರೂ ಅರ್ಥವಾಯಿತೇ?

ದುರಂತವೆಂದರೆ ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ವೆಬ್‌ ಮುಖಪುಟದಲ್ಲಿನ ‘ನಮ್ಮ ದೃಷ್ಟಿಕೋನ’ ಅಧ್ಯಾಯದ ಕೆಲವು ಸಾಲುಗಳು ಇವು. ಅಲ್ಲಿ ಅವರು ಹೇಗೆ ಬರೆದಿದ್ದಾರೋ ಅದೇ ವಾಕ್ಯಗಳನ್ನು ನಾನು ಇಲ್ಲಿ ಇಟ್ಟಿರುವೆ. ಇಲ್ಲಿರುವ ವಾಕ್ಯ ರಚನೆಯ ದೋಷಗಳು, ಕಾಗುಣಿತ ದೋಷಗಳು ಯಾವುವೂ ನಾನು ಬರೆದುವು ಅಲ್ಲ. ಅದರ ಎಲ್ಲ ಶ್ರೇಯ ಅವರಿಗೇ ಸಲ್ಲಬೇಕು!

ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಆ ಭಾಗದ ಅಭಿವೃದ್ಧಿಯ ಹೊಣೆ ಹೊತ್ತುಕೊಂಡಿರುವ ಒಂದು ಸಂಸ್ಥೆ.  ಯುಪಿಎ ಸರ್ಕಾರ, ಸಂವಿಧಾನದ 371 ವಿಧಿಗೆ (ಜೆ) ತಿದ್ದುಪಡಿ ತಂದು ಹೈದರಾಬಾದ ಕರ್ನಾಟಕದ ಜಿಲ್ಲೆಗಳನ್ನು ಮತ್ತು ಬಳ್ಳಾರಿ ಜಿಲ್ಲೆಯನ್ನು ಸೇರ್ಪಡೆ ಮಾಡಿದ ನಂತರ ಹುಟ್ಟಿಕೊಂಡ ಸಂಸ್ಥೆ ಇದು.

ಅಸಮಾನತೆಯ ನಿವಾರಣೆಗಾಗಿ ಅಥವಾ ವಿಶೇಷ ಸ್ಥಾನಮಾನಕ್ಕಾಗಿ ಈ ಭಾಗ ನಡೆಸಿಕೊಂಡು ಬಂದ ಹೋರಾಟ ಭಾಷಾವಾರು ಪ್ರಾಂತ್ಯಗಳ ರಚನೆಯ ನಂತರದ ಇತಿಹಾಸದ ಒಂದು ಬಹುದೊಡ್ಡ ಭಾಗ. ಅದು ಎಲ್ಲಿಯ ವರೆಗೆ ಹೋಗಿತ್ತು ಎಂದರೆ ತಮಗೆ ಪ್ರತ್ಯೇಕ ರಾಜ್ಯ ಬೇಕು ಎಂದು ಅವರು ನವೆಂಬರ್‌ ಒಂದರಂದು ಬೇರೆ  ನಾಡಧ್ವಜವನ್ನೇ ಹಾರಿಸುತ್ತಿದ್ದರು.

ದಕ್ಷಿಣ ಕರ್ನಾಟಕದ ಹಾಗೆ ಉತ್ತರ ಕರ್ನಾಟಕದ ಅನೇಕ ಪ್ರದೇಶಗಳು ಅಭಿವೃದ್ಧಿಯ ಫಲಗಳನ್ನು ಕಾಣಲಿಲ್ಲ. ಅದರಲ್ಲಿಯೂ ಹೈದರಾಬಾದ ಕರ್ನಾಟಕದ  ಅನೇಕ ಪ್ರದೇಶಗಳು ತೀರಾ ಹಿಂದೆ ಬಿದ್ದುವು. ಕರ್ನಾಟಕ ರಾಜ್ಯ ರಚನೆಯಾಗಿ 60 ವರ್ಷಗಳು ಕಳೆದು ಹೋದರೂ ಈಗಲೂ ಅದು ಅಭಿವೃದ್ಧಿಯ ಅನೇಕ ಸೂಚ್ಯಂಕಗಳಲ್ಲಿ ಹಿಂದೆ ಬಿದ್ದಿರುವ ಭಾಗವೇ ಆಗಿದೆ.

ಸಮಾನತೆಗಾಗಿ ಹೈದರಾಬಾದ ಕರ್ನಾಟಕದಲ್ಲಿ ವಿಶೇಷವಾಗಿ, ಉತ್ತರ ಕರ್ನಾಟಕದಲ್ಲಿ ಒಟ್ಟಾರೆಯಾಗಿ ಎದ್ದಿದ್ದ ಕೂಗನ್ನು ತಣಿಸುವ ಉದ್ದೇಶದಿಂದ ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದಾಗ, ‘ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಿಹಾರೋಪಾಯಗಳನ್ನು ಸೂಚಿಸಲು’ ಡಾ.ಡಿ.ಎಂ.ನಂಜುಂಡಪ್ಪ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿದ್ದರು

ಸುದೀರ್ಘ ಕಾಲ ಅಧ್ಯಯನ ನಡೆಸಿದ ಸಮಿತಿ 2002 ರಲ್ಲಿ ತನ್ನ ವರದಿ ಸಲ್ಲಿಸಿತು. ಸರಿಸುಮಾರು 900 ಪುಟಗಳಷ್ಟು ದೀರ್ಘವಾದ ಈ ವರದಿ, ಅಸಮಾನತೆಯ ಕೂಗು ಎದ್ದ ಪ್ರದೇಶಗಳಿಗೆ ಮಾತ್ರ ಸೀಮಿತಗೊಳ್ಳದೇ, ಇಡೀ ಕರ್ನಾಟಕದಲ್ಲಿನ ಹಿಂದುಳಿದ ಪ್ರದೇಶಗಳನ್ನು ಗುರುತಿಸಿತು. ಅದರಲ್ಲಿ ಅತಿ ಹೆಚ್ಚು ಹಿಂದುಳಿದ ತಾಲ್ಲೂಕುಗಳು  ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿಯೇ ಇದ್ದುದು ನಿರೀಕ್ಷಿತವೇ ಆಗಿತ್ತು.

ಆಗಿನ ಅವಿಭಜಿತ ಕಲಬುರ್ಗಿ ಜಿಲ್ಲೆಯ ಹತ್ತು ತಾಲ್ಲೂಕುಗಳ ಪೈಕಿ ಒಂಬತ್ತು ತಾಲ್ಲೂಕುಗಳು ಹಿಂದೆ ಬಿದ್ದಿದ್ದುವು. ಬೀದರ್‌  ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ನಾಲ್ಕು ತಾಲ್ಲೂಕುಗಳು, ರಾಯಚೂರು ಜಿಲ್ಲೆಯಲ್ಲಿಯೂ ಐದರ ಪೈಕಿ ನಾಲ್ಕು ತಾಲ್ಲೂಕುಗಳು ತೀರಾ ಹಿಂದುಳಿದ ಪ್ರದೇಶಗಳು ಎಂದು ವರದಿ ಗುರುತಿಸಿತು.

ಈ ಪ್ರದೇಶಕ್ಕೆ ಹೊರತಾದ ಜಿಲ್ಲೆಗಳಲ್ಲಿಯೂ ಅನೇಕ ತಾಲ್ಲೂಕುಗಳು ಹಿಂದೆ ಉಳಿದಿದ್ದುವು. ಉದಾಹರಣೆಗೆ ತುಮಕೂರು ಜಿಲ್ಲೆಯ ನಾಲ್ಕು ತಾಲ್ಲೂಕುಗಳೂ ಈ ಪಟ್ಟಿಯಲ್ಲಿ ಇದ್ದುವು. ಇಡೀ ರಾಜ್ಯದಲ್ಲಿ ಹಿಂದೆ ಉಳಿದಿರುವ ತಾಲ್ಲೂಕುಗಳು 114 ಎಂದು ಸಮಿತಿ ತನ್ನ ವರದಿಯಲ್ಲಿ ಪಟ್ಟಿ ಮಾಡಿತು.ಈ ಎಲ್ಲ ಹಿಂದುಳಿದ ತಾಲ್ಲೂಕುಗಳ ಅಸಮಾನತೆ ನೀಗಿಸಲು 2002 – 2010ರ ನಡುವಿನ ಎಂಟು ವರ್ಷಗಳ ಅವಧಿಯಲ್ಲಿ ₹16,000 ಕೋಟಿಗಳನ್ನು ಖರ್ಚು ಮಾಡಬೇಕು ಎಂದಿದ್ದ ನಂಜುಂಡಪ್ಪ ಸಮಿತಿ ಯಾವುದಕ್ಕೆಲ್ಲ ಹಣ ಖರ್ಚು ಮಾಡಬೇಕು ಎಂಬುದಕ್ಕೆ 35 ಸೂಚ್ಯಂಕಗಳನ್ನೂ ಕೊಟ್ಟಿತ್ತು.

ತಾಲ್ಲೂಕನ್ನು  ಪ್ರಾಥಮಿಕ ಘಟಕ ಎಂದು  ಗುರುತಿಸಿ ಆಯಾ ತಾಲ್ಲೂಕುಗಳ ತಲಾವಾರು ಆದಾಯ, ಬಡತನ ಪ್ರಮಾಣ, ಮಾನವ ಸಂಪನ್ಮೂಲ ಇತ್ಯಾದಿ ಅನೇಕ ಅಂಶಗಳನ್ನು ಪರಿಗಣಿಸಬೇಕು. ಇದನ್ನೆಲ್ಲ ಗಮನದಲ್ಲಿ ಇಟ್ಟುಕೊಂಡು ಪಂಚ ವಾರ್ಷಿಕ ಯೋಜನೆಗಳನ್ನು ರೂಪಿಸಿ ಸರ್ವತೋಮುಖ ಅಭಿವೃದ್ಧಿ ಸಾಧಿಸಲು ಅಗತ್ಯ ತಾಂತ್ರಿಕ ಪರಿಣತರು ಇರಬೇಕು.

ಈ ಕೆಲಸವನ್ನು ಸರ್ಕಾರವೇ ವಹಿಸಿಕೊಂಡು ಮಾಡಬೇಕು. ಮಾರುಕಟ್ಟೆಯಲ್ಲಿನ ಶಕ್ತಿಗಳಿಗೆ ಅಥವಾ ಖಾಸಗಿಯವರಿಗೆ ಇದನ್ನು ವಹಿಸಬಾರದು ಎಂದು ಸಮಿತಿ ಎಚ್ಚರಿಸಿತ್ತು. ಆದಾಗ್ಯೂ, ರಾಜ್ಯ ಸರ್ಕಾರ 2007–08ನೇ ಸಾಲಿನಿಂದ ಇದುವರೆಗೆ ಕೊಡುತ್ತ ಬಂದಿರುವ ಅನುದಾನ ಹೇಗೆ ಸದ್ಬಳಕೆ ಆಗಿಲ್ಲ ಅಥವಾ ಹೆಚ್ಚೂ ಕಡಿಮೆ ನಿರರ್ಥಕವಾಗಿ ಹೋಗಿದೆ ಎಂಬ ಮಾಹಿತಿ ನಮ್ಮ ಪತ್ರಿಕೆಯಲ್ಲಿಯೇ ಬಹಿರಂಗವಾಗಿದೆ.

2007–08 ರಿಂದ 2016–17ರ ನಡುವಿನ ಹತ್ತು ವರ್ಷಗಳ ಅವಧಿಯಲ್ಲಿ 114 ತಾಲ್ಲೂಕುಗಳ ಅಭಿವೃದ್ಧಿಗಾಗಿ ಸರ್ಕಾರ ₹25,438 ಕೋಟಿ ಹಣವನ್ನು ಹಂಚಿಕೆ ಮಾಡಿದೆ. ಅದರಲ್ಲಿ ₹19,016 ಕೋಟಿ ಬಿಡುಗಡೆಯಾಗಿದೆ. ಆ ಪೈಕಿ ₹17,499  ಕೋಟಿ ಮಾತ್ರ ವೆಚ್ಚವಾಗಿದೆ.  ಆದರೆ, ಆ ಪ್ರದೇಶಗಳ ಸ್ಥಿತಿಗತಿಯಲ್ಲಿ ಏನಾದರೂ ಬದಲಾವಣೆ ಆಯಿತೇ ಎಂದರೆ ಸರ್ಕಾರವೇ ಕಂಡುಕೊಂಡ ಉತ್ತರ ನಿರಾಶಾದಾಯಕವಾಗಿದೆ.

ಬಹುಶಃ ಹೀಗೆಲ್ಲ ಆಗಬಹುದು ಎಂದು ತಿಳಿದೇ, ‘ರಾಜ್ಯದ ಅಭಿವೃದ್ಧಿಯಲ್ಲಿನ ಅಸಮಾನತೆ ನೀಗಿಸಲು, ಬರೀ ಹಣಕಾಸು ನೆರವು ಒದಗಿಸಿದರೆ ಸಾಲದು, ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರೂ ಸಾಲದು. ಬದಲಿಗೆ ಅಭಿವೃದ್ಧಿಗೆ ಇರುವ ಅಡ್ಡಿ–ಅಡಚಣೆಗಳು ಏನು ಎಂದು ತಿಳಿದುಕೊಳ್ಳಬೇಕು ಮತ್ತು ಅಲ್ಲಿನ ನೈಸರ್ಗಿಕ ಸಂಪನ್ಮೂಲ ಹಾಗೂ ಕೌಶಲಗಳ ಸದ್ಬಳಕೆ ಮಾಡಿಕೊಳ್ಳಬೇಕು. ಎಲ್ಲದಕ್ಕಿಂತ ಮುಖ್ಯವಾಗಿ ಆಯಾ ಭಾಗದ ಜನರನ್ನು ಒಳಗೊಳ್ಳುವುದು ಬಹಳ ಅಗತ್ಯ’ ಎಂದು ನಂಜುಂಡಪ್ಪನವರು ಕಿವಿ ಮಾತು ಹೇಳಿದ್ದರು.

ಕಳೆದ ಹತ್ತು ವರ್ಷಗಳ ಆಯವ್ಯಯಗಳಲ್ಲಿ ಹಣ ಬಿಡುಗಡೆ ಮಾಡುವುದಕ್ಕಿಂತ ಮುಂಚೆ ಸರ್ಕಾರದಲ್ಲಿ ಇದ್ದವರು ನಂಜುಂಡಪ್ಪ ವರದಿಯನ್ನು ಓದಿದ್ದರೋ ಇಲ್ಲವೋ ತಿಳಿಯದು. ವರ್ಷಕ್ಕೆ ಇಂತಿಷ್ಟು ಎಂದು ಹಣ ನಿಗದಿ ಮಾಡುತ್ತ ಹೋದರು. ಬಹುಶಃ ಆ ಹಣವನ್ನು ಹೇಗೆ ವ್ಯಯ ಮಾಡಬೇಕು, ಯಾವುದಕ್ಕೆಲ್ಲ ವ್ಯಯ ಮಾಡಬೇಕು ಎಂಬ ಕಟ್ಟುನಿಟ್ಟಿನ ನಿರ್ಬಂಧಗಳನ್ನೂ ಹಾಕಲಿಲ್ಲ.

ಈಗ ನೋಡಿದರೆ ನಂಜುಂಡಪ್ಪನವರು ನಿಗದಿ ಮಾಡಿದ್ದಕ್ಕಿಂತ ಹೆಚ್ಚು ಹಣ ವ್ಯಯವಾಗಿರುವುದರ ಜೊತೆಗೆ ಹತ್ತು ವರ್ಷಗಳ ಅಮೂಲ್ಯ ಅವಧಿಯೂ ಕಳೆದು ಹೋಗಿದೆ. ಆದರೆ, ಆ ಪ್ರದೇಶಗಳು ಈ ಎಲ್ಲ ಹಣ ಬಿಡುಗಡೆ ಮಾಡುವುದಕ್ಕಿಂತ ಹಿಂದೆ ಯಾವ ದುಃಸ್ಥಿತಿಯಲ್ಲಿ ಇದ್ದುವೋ ಈಗಲೂ ಅದೇ ದುಃಸ್ಥಿತಿಯಲ್ಲಿಯೇ ಇವೆ.

ಇದೀಗ ಸರ್ಕಾರಕ್ಕೆ ತಾನು ಮೋಸ ಹೋದೆ ಎಂದು ಅನಿಸಿದಂತೆ ಕಾಣುತ್ತಿದೆ.  ಇನ್ನು ಮುಂದೆ ಬಿಡುಗಡೆಯಾಗುವ ಹಣ ಹೇಗೆ ವ್ಯಯವಾಗಬೇಕು ಎಂದು ಸೂಚನೆ ನೀಡಲು ಹೊರಟಿದೆ. ಇದು ವಿಚಿತ್ರ ಅಲ್ಲವೇ? ಒಂದು ಪ್ರದೇಶ ತೀರಾ ಹಿಂದುಳಿದಿದೆ, ಇತರ ಪ್ರದೇಶಗಳಿಗೆ ಸಮಾನವಾಗಿ ತನ್ನನ್ನೂ ಮುಂದೆ ತರಬೇಕು ಎಂದು ಅದು ಹೋರಾಟ ಮಾಡುತ್ತದೆ, ಅದಕ್ಕೆ ಸರ್ಕಾರ ಹಣವನ್ನೂ ಬಿಡುಗಡೆ  ಮಾಡುತ್ತದೆ, ಆದರೆ, ಅದು ಯಾವುದೇ ಪ್ರಯೋಜನಕ್ಕೆ ಬಾರದ ರೀತಿಯಲ್ಲಿ ವೆಚ್ಚವಾಗುತ್ತದೆ. ಆದರೂ ಎಲ್ಲರೂ ಕಣ್ಣು ಬಾಯಿ ಮುಚ್ಚಿಕೊಂಡು ಸುಮ್ಮನೇ ಇರುತ್ತಾರೆ.

ನಂಜುಂಡಪ್ಪನವರು ಹಿಂದುಳಿದ ತಾಲ್ಲೂಕುಗಳನ್ನು ಉಳಿದ ಮುಂದುವರಿದ ಪ್ರದೇಶಗಳ ಮಟ್ಟಿಗೆ ತರಲು ಒಂದು ಕಾಲಮಿತಿಯನ್ನು ನಿಗದಿ ಮಾಡಿದ್ದರು. ಯಾವುದೇ ಒಂದು ಪ್ರದೇಶದ ಅಭಿವೃದ್ಧಿಗೆ ನಿರಂತರವಾಗಿ ಹಣ ಕೊಡುತ್ತ ಹೋಗುವುದು ವ್ಯರ್ಥ ಕೆಲಸ ಎಂದು 1970ರ ದಶಕದಲ್ಲಿಯೇ ಸರ್ಕಾರದಲ್ಲಿ ಮೊದಲ ಐಎಎಸ್‌ಯೇತರ ಯೋಜನಾ  ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದ ಅವರಿಗೆ ಗೊತ್ತಿತ್ತು. ಅದಕ್ಕಾಗಿಯೇ ಅವರು ಎಂಟು ವರ್ಷಗಳ ಗಡುವನ್ನು ಕೊಟ್ಟಿದ್ದರು.

ಎಂಟು ವರ್ಷಗಳು ಕಳೆದು ಹೋದುವು. ಆದರೆ, ಸೂಕ್ತ ಯೋಜನೆ ಇಲ್ಲದೆ, ಏನು ಮಾಡಬೇಕು ಎಂದು ಯಾರೂ ಸಿದ್ಧತೆ  ಮಾಡಿಕೊಳ್ಳದೆ, ರೂಪಿಸಿದ ಒಂದೆರಡು ಯೋಜನೆಗಳ ಅನುಷ್ಠಾನಕ್ಕೆ ಸಮರ್ಪಕ ಸಿಬ್ಬಂದಿಯೂ ಇಲ್ಲದೆ ಬಹುತೇಕ ಹಣ ನೀರಿನಲ್ಲಿ ಹೋಮ ಮಾಡಿದಂತೆ  ವ್ಯರ್ಥವಾಗಿ ಹೋಯಿತು.

ಈಗಿನ ಸ್ಥಿತಿಯಲ್ಲಿ ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗಾಗಿ ಸರ್ಕಾರ ಇನ್ನೂ ಅನೇಕ ವರ್ಷಗಳ ಕಾಲ ಆಯವ್ಯಯದಲ್ಲಿ ಹಣ ಬಿಡುಗಡೆ ಮಾಡುತ್ತಲೇ ಇರಬೇಕಾಗುತ್ತದೆ. ಬರಗಾಲವನ್ನು ಎಲ್ಲರೂ ಹೇಗೆ ಬಯಸುತ್ತಾರೋ ಹಾಗೆಯೇ ಹಿಂದುಳಿದಿರುವಿಕೆಯನ್ನೂ ಬಯಸುತ್ತಾರೆಯೇ?

ಹೈದರಾಬಾದ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯಲ್ಲಿ ಇತರರ ಜೊತೆಗೆ ಮುಖ್ಯವಾಗಿ ಆ ಭಾಗದ 40 ಜನ ಶಾಸಕರು ಸದಸ್ಯರಾಗಿದ್ದಾರೆ. ಮಂಡಳಿ ಕಾಲಕಾಲಕ್ಕೆ ಸಭೆ ಸೇರುತ್ತದೆ ಎಲ್ಲ ಶಾಸಕರಿಗೆ ತಮ್ಮ  ಕ್ಷೇತ್ರದ ಮತದಾರರನ್ನು ಸಮಾಧಾನ ಮಾಡಬೇಕು ಎನ್ನುವುದನ್ನು ಬಿಟ್ಟರೆ ಬೇರೆ ಯೋಚನೆಗಳು ಇದ್ದಂತೆ ಅನಿಸುವುದಿಲ್ಲ. ಒಬ್ಬರು ಸಮುದಾಯ ಭವನ ಬೇಕು ಎನ್ನುತ್ತಾರೆ, ಇನ್ನೊಬ್ಬರು ಸ್ವಾಗತ ಕಮಾನು ಬೇಕು ಎನ್ನುತ್ತಾರೆ. ಮತ್ತೊಬ್ಬರು ಯಾವುದೋ ದೇವಸ್ಥಾನದ ಜೀರ್ಣೋದ್ಧಾರಕ್ಕೆ ಹಣ ಬೇಕು ಎನ್ನುತ್ತಾರೆ.

ಸಮುದಾಯ ಭವನ, ಸ್ವಾಗತ ಕಮಾನು ಅಥವಾ ದೇವಾಲಯಗಳ ಜೀರ್ಣೋದ್ಧಾರ ಮಾಡಿದರೆ ಆ ಊರಿನ ಜನ ಸಂತೃಪ್ತರಾಗಬಹುದು. ಆದರೆ, ಆ ಊರು ಉದ್ಧಾರ ಆಗುವುದಿಲ್ಲ. ಊರು ಉದ್ಧಾರ ಆಗಲು ಆಗಬೇಕಾದ ಕೆಲಸಗಳೇ ಬೇರೆ.  ಆದರೆ, ಊರು ಉದ್ಧಾರ ಆಗುವುದು ಯಾರಿಗೆ ಬೇಕಾಗಿದೆ? ಎಲ್ಲರಿಗೂ ತಾತ್ಕಾಲಿಕ ಸವಲತ್ತುಗಳು ಮತ್ತು ಸುಖಗಳು ಬೇಕು.

ಹಸಿದವರಿಗೆ ಏನೋ ತುಂಡು ರೊಟ್ಟಿ ಕೊಟ್ಟರೆ ಸಾಕು ಎಂದೇ ನಮ್ಮ ರಾಜಕಾರಣಿಗಳು ಯೋಚಿಸುತ್ತಾರೆ. ಹಸಿವೆಯೇ ಇಲ್ಲದ ಒಂದು ಸ್ಥಿತಿಯನ್ನು ನಿರ್ಮಾಣ ಮಾಡಬೇಕು ಎಂದು ಅವರಿಗೆ ತಿಳಿಯುವುದೇ ಇಲ್ಲ. ಹಸಿವೆಯೇ ಇಲ್ಲದ ಸ್ಥಿತಿ ಇದ್ದರೆ ರಾಜಕಾರಣಿಗಳಿಗೆ ಕೆಲಸವೇ ಇಲ್ಲದಂತೆ ಆಗುತ್ತದೆ. ಅದು ಅವರಿಗೆ ಎಂಥ ಭಯಾನಕ ಸ್ಥಿತಿ ಅಲ್ಲವೇ?

ತಮ್ಮ ಭಾಗದ ಅಸಮಾನತೆ ಹೋಗಲಾಡಿಸಬೇಕು ಎಂದು ಹೋರಾಡಿದ ಹೈದರಾಬಾದ ಕರ್ನಾಟಕದ ಸಾಮಾನ್ಯ ಮಂದಿಗಾದರೂ ಒಂದು ಎಚ್ಚರ ಇರಬೇಕಿತ್ತು. ಅದಕ್ಕಾಗಿ ಒಂದು ಸ್ಪಷ್ಟ ಯೋಜನೆ ರೂಪಿಸಬೇಕು ಎಂದು ಅವರು  ಹೈ.ಕ.ಪ್ರದೇಶ ಅಭಿವೃದ್ಧಿ ಮಂಡಳಿಗೆ ಒತ್ತಾಯಿಸಬೇಕಿತ್ತು.

ಸ್ಪಷ್ಟ ಯೋಜನೆ ರೂಪಿಸಲು ಸ್ಪಷ್ಟ ಚಿಂತನೆ ಬೇಕಾಗುತ್ತದೆ. ಯಾವ ಯಾವ ವಿಭಾಗದಲ್ಲಿ ಯಾವ ಯಾವ ತಾಲ್ಲೂಕುಗಳು ಹಿಂದೆ ಬಿದ್ದಿವೆ ಎಂಬುದು ಶಾಸಕರಿಗೆ, ಅಧಿಕಾರಿಗಳಿಗೆ ಅಲ್ಲದೇ ಮತ್ತೆ ಯಾರಿಗೆ ಗೊತ್ತಿರುತ್ತದೆ? ಪ್ರಮುಖವಾಗಿ ಶಿಕ್ಷಣ, ಆರೋಗ್ಯ ಮತ್ತು ಮೂಲ ಸೌಕರ್ಯಗಳ ವಿಭಾಗದಲ್ಲಿ ಹಿಂದೆ ಬಿದ್ದುದೇ ಒಟ್ಟು ಹಿಂಬೀಳುವಿಕೆಯ ಮುಖ್ಯ ಸೂಚ್ಯಂಕಗಳು ಆಗುತ್ತವೆ. ಈಗಲೂ ಆ ಭಾಗದಲ್ಲಿ ಎಷ್ಟು ಇರಬೇಕೋ ಅಷ್ಟು ಸರ್ಕಾರಿ ಶಾಲೆಗಳು ಇಲ್ಲ.  ಎಷ್ಟು ಸರ್ಕಾರಿ ಆಸ್ಪತ್ರೆಗಳು ಇರಬೇಕೋ ಅಷ್ಟು ಆಸ್ಪತ್ರೆಗಳು ಇಲ್ಲ.

ಈ ಮಂಡಳಿಗೆ ಮಾರ್ಗದರ್ಶಕವಾಗಿ ನಂಜುಂಡಪ್ಪ ವರದಿಗಿಂತ ಬೇರೆ ಯಾವ ಬೈಬಲ್ಲೂ ಬೇಕಿರಲಿಲ್ಲ. ಆ ವರದಿ ಯಾವ ಯಾವ ತಾಲ್ಲೂಕುಗಳು ಯಾವ ಯಾವ ಕ್ಷೇತ್ರದಲ್ಲಿ ಹಿಂದೆ ಬಿದ್ದಿವೆ ಎಂಬುದನ್ನು ಕಣ್ಣಿಗೆ ಕಟ್ಟುವ ಹಾಗೆ ಹೇಳಿತ್ತು. ತನಗೆ ಬಂದ ಅನುದಾನವನ್ನು ಖರ್ಚು ಮಾಡುವುದಕ್ಕಿಂತ ಮುಂಚೆ ಕಟ್ಟು ನಿಟ್ಟಿನ ಮಾರ್ಗದರ್ಶಿ ಸೂತ್ರಗಳನ್ನು ಮಂಡಳಿ ಹಾಕಬೇಕಿತ್ತು.

ಹಾಕಬೇಕು ಎಂದು ಹಣ ಬಿಡುಗಡೆ ಮಾಡಿದ ಸರ್ಕಾರವಾದರೂ ಹೇಳಬೇಕಿತ್ತು. ತಾನು ಬಿಡುಗಡೆ ಮಾಡಿದ  ಹಣ ಯಾವುದಕ್ಕೆ ವ್ಯಯವಾಗುತ್ತಿದೆ, ಏನೆಲ್ಲ ಭೌತಿಕ ಪ್ರಗತಿ ಆಗಿದೆ ಎಂದು ತಿಳಿಯಲು ಸರ್ಕಾರ ಕಾಲ ಕಾಲಕ್ಕೆ ಪ್ರಗತಿ ಪರಿಶೀಲನೆ ಮಾಡಬೇಕಿತ್ತು. ಏಕೆಂದರೆ ಅದು ಇಡೀ ರಾಜ್ಯದ ಜನರು ಕೊಟ್ಟ ತೆರಿಗೆಯ ಹಣವಾಗಿತ್ತು. ಅದನ್ನು ಬೇಕಾಬಿಟ್ಟಿ ಖರ್ಚು ಮಾಡಲು ಆ ಭಾಗದ ಶಾಸಕರಿಗೆ ಅಧಿಕಾರ ಇರಲಿಲ್ಲ. ಆದರೆ, ಶಾಸಕರು ಹೇಗೆ ನಡೆದುಕೊಳ್ಳುತ್ತಾರೆ ಎಂದು ಎಲ್ಲರಿಗೂ ಗೊತ್ತಿರುತ್ತದೆ.

ಅವರದು ಯಾವಾಗಲೂ ಮುಂಗೈ ಜೋರು. ಅವರ ಎತ್ತರದ ಗಂಟಲಿನ ಮುಂದೆ ಅಧಿಕಾರಿಗಳು ತೆಪ್ಪಗಾಗುತ್ತಾರೆ. ಮತ್ತು ಒಂದು ಪ್ರದೇಶ ಮುಂದುವರಿಯುವುದಕ್ಕೂ ಹಿಂದೆ ಉಳಿಯುವುದಕ್ಕೂ ಆ ಭಾಗದ ಜನಪ್ರತಿನಿಧಿಗಳೇ ಉತ್ತರದಾಯಿಗಳು ಆಗಿರುವುದರಿಂದ ಅವರು ಏನಾದರೂ ಮಾಡಿಕೊಂಡು ಹಾಳಾಗಿ ಹೋಗಲಿ ಎಂದೂ ಅವರು ಸುಮ್ಮನಾಗಿರಬಹುದು!

ಹಿಂದುಳಿದ ಪ್ರದೇಶಗಳ ಇನ್ನೊಂದು ಸಮಸ್ಯೆ ಏನು ಎಂದರೆ ಅಲ್ಲಿಗೆ ಹೋಗಿ ಕೆಲಸ ಮಾಡಲು ಅನೇಕ ಅಧಿಕಾರಿಗಳು ಸಿದ್ಧವೇ ಇರುವುದಿಲ್ಲ. ಹೈ.ಕ.ಪ್ರ. ಅಭಿವೃದ್ಧಿ ಮಂಡಳಿ ರೂಪಿಸಿದ ಯೋಜನೆಗಳನ್ನು ಜಾರಿಗೆ ತರಲು ಅಲ್ಲಿ ಅಗತ್ಯ ಸಿಬ್ಬಂದಿಯೇ ಇಲ್ಲದೇ ಇರುವುದು ಕೂಡ ಹಣ ಹೇಗೆ ಖರ್ಚು ಮಾಡಬೇಕು ಎಂದು ಯೋಜನೆ ರೂಪಿಸಲು ಅಡಚಣೆ ಆಗಿರಬಹುದು. ಅಂಥ ಒಂದು ಸಮರ್ಥ ಆಡಳಿತ ಯಂತ್ರವನ್ನು ಯೋಜನೆಗಳ ಜಾರಿಗಾಗಿ ರೂಪಿಸಬೇಕು ಎಂದು ನಂಜುಂಡಪ್ಪನವರು ಒತ್ತಿ ಹೇಳಿದ್ದರು. ‘ಅಭಿವೃದ್ಧಿಗೆ ಇರುವ ಅಡ್ಡಿ ಅಡಚಣೆಗಳನ್ನು ಮೊದಲು ಗುರುತಿಸಬೇಕು’ ಎಂದು ಅವರು ಹೇಳಿದ್ದು ಈ ಅರ್ಥದಲ್ಲಿ.

ಆದರೆ, ಇಂಥ ಅಭಿವೃದ್ಧಿ ಮಂಡಳಿ ಮತ್ತು ವಿಶೇಷ ಅನುದಾನ ಮುಂತಾದ ಯಾವ ಸೌಲಭ್ಯಗಳೂ ಇಲ್ಲದೇ ಇದ್ದಾಗಲೂ ಒಬ್ಬ ಜಿಲ್ಲಾಧಿಕಾರಿ ಬೀದರ್‌ ಜಿಲ್ಲೆಯನ್ನು ಅಭಿವೃದ್ಧಿ ಮಾಡಿದರು. ನಂಜುಂಡಪ್ಪ ತಮ್ಮ ವರದಿಯಲ್ಲಿ ಹೇಳಿದ, ‘ಊರಿನ ಅಭಿವೃದ್ಧಿ ಪ್ರಕ್ರಿಯೆಯಲ್ಲಿ ಜನರನ್ನು ಪಾಲುಗೊಳ್ಳಬೇಕು’ ಎಂಬ ಒಂದು ಅಂಶ ಆಗ ಬೀದರ್‌ ಅಭಿವೃದ್ಧಿಯಲ್ಲಿ ಬಹಳ ದೊಡ್ಡ ಪಾತ್ರ ವಹಿಸಿತ್ತು.

ಬೀದರ್‌ ಅಭಿವೃದ್ಧಿಯಾಗಿ ಅನೇಕ ವರ್ಷಗಳು ಕಳೆದು ಹೋಗಿವೆ. ನಂತರ ಆ ಭಾಗದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಅಲ್ಪ ಸ್ವಲ್ಪ ಅಭಿವೃದ್ಧಿ ಆಗಿದೆ. ಆದರೆ, ಬೀದರ್‌ನಲ್ಲಿ ಕಂಡ  ಅಪರೂಪ ಎನ್ನುವಂಥ ಜನರ ಪಾಲುಗೊಳ್ಳುವಿಕೆ ಉಳಿದೆಡೆ ಕಾಣಲಿಲ್ಲ. ಅದಕ್ಕೆ ಏನು ಕಾರಣ ಎಂದು ಅಲ್ಲಿನ ಜನರಿಗೆ ಗೊತ್ತಿರಬಹುದು.ಒಂದು ಯೋಜನೆ ರೂಪಿಸಲು ಆಲೋಚನೆ ಬೇಕು. ಆಲೋಚನೆ ಖಚಿತವಾಗಿರಬೇಕು ಮತ್ತು ಸ್ಪಷ್ಟವಾಗಿರಬೇಕು.

ಆಲೋಚನೆಯಲ್ಲಿ ಗೊಂದಲ ಅಥವಾ ಅಸ್ಪಷ್ಟತೆ ಇದ್ದರೆ ಅದು ಯೋಜನೆಯಲ್ಲಿ ಪ್ರತಿಫಲಿತವಾಗುತ್ತದೆ. ಈ ಅಂಕಣದ ಆರಂಭದ ಪ್ಯಾರಾ ಓದಿದರೆ ನಮ್ಮ ಅಭಿವೃದ್ಧಿ ಯೋಜನೆಗಳು, ಪರಿಕಲ್ಪನೆಗಳು ಎಷ್ಟು ಗೊಂದಲಕಾರಿಯಾಗಿವೆ, ಅದರಲ್ಲಿ ಎಂಥ ತಾತ್ಸಾರ ಇದೆ, ಎಂಥ ಉದ್ಧಟತನ ಇದೆ ಎಂದು ಅನಿಸುವುದಿಲ್ಲವೇ? 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry