ಹಿಗ್ಸ್ ಬೋಸಾನ್ ಮತ್ತು ಹಿಗ್ಗಿದ ಹುಡುಗಿ

ಬುಧವಾರ, ಜೂಲೈ 17, 2019
30 °C

ಹಿಗ್ಸ್ ಬೋಸಾನ್ ಮತ್ತು ಹಿಗ್ಗಿದ ಹುಡುಗಿ

ನಾಗೇಶ್ ಹೆಗಡೆ
Published:
Updated:

ವಿಧಾನಸೌಧದ ಮೊಗಸಾಲೆಯಲ್ಲಿ ಮಾಧ್ಯಮ ವರದಿಗಾರರು, ಛಾಯಾಗ್ರಾಹಕರು, ವಿಡಿಯೊಗ್ರಾಫರುಗಳು, ವಂದಿಮಾಗಧರು ಕಿಕ್ಕಿರಿದು ತುಂಬಿದ್ದಾರೆ. ಜಗದೀಶ್ ಶೆಟ್ಟರ್ ಒಳಕ್ಕೆ ಪ್ರವೇಶ ಮಾಡುತ್ತಿದ್ದಂತೆ ಎಲ್ಲರೂ ಅವರ ಮೇಲೆ ಮುಗಿ ಬೀಳುತ್ತಾರೆ. ಶೆಟ್ಟರ್‌ಗೆ ಮುಂದಕ್ಕೆ ಚಲಿಸುವುದೇ ಕಷ್ಟವಾಗುತ್ತದೆ. ಅವರ ಮೇಲೆ ಒತ್ತಡ ಹೆಚ್ಚುತ್ತ ಹೋದಂತೆ, ಅವರ ವಜನ್ನು ಹೆಚ್ಚುತ್ತದೆ. ಆದರೆ ಅದೇ ವೇಳೆಗೆ ಪ್ರವೇಶ ಮಾಡಿದ ಶೆಟ್ಟರ ಬಾಲ್ಯದ ಗೆಳೆಯನೊಬ್ಬ ಸಲೀಸಾಗಿ ಆ ಬಾಗಿಲಲ್ಲಿ ಬಂದು ಈ ಬಾಗಿಲಲ್ಲಿ ದಾಟಿ ಹೋಗುತ್ತಾನೆ. ಏಕೆಂದರೆ ಅವನತ್ತ ಯಾರೂ ಗಮನ ಹರಿಸುವುದಿಲ್ಲ. ಆದ್ದರಿಂದ ಅವರಿಗೆ ತೂಕವೇ ಬರುವುದಿಲ್ಲ.ಶೆಟ್ಟರ ನಡೆಯನ್ನು `ಹಿಗ್ಸ್ ಬೋಸಾನ್~ಗೆ ಹೋಲಿಸಿ ನೋಡೋಣ. ಮುಖ ಕಿವುಚಿಕೊಳ್ಳಬೇಕಾದ ಅಗತ್ಯವಿಲ್ಲ. ಒಂದು ಕ್ಷಣ ಹೀಗೆ ಹೋಲಿಸಿದರೆ ತಪ್ಪೇನಿಲ್ಲ. ಇಷ್ಟಕ್ಕೂ ಅದು ದೇವಕಣವೇನಲ್ಲ. ಬದಲಿಗೆ, ವಿಜ್ಞಾನಿಗಳನ್ನು ಸಾಕಷ್ಟು ಕಂಗೆಡಿಸಿದ, ಅಪಾರ ಖರ್ಚುವೆಚ್ಚಕ್ಕೆ ಹಾಗೂ ಅನೇಕರ ತಲೆನೋವಿಗೆ ಕಾರಣವಾದ ಕಣ. ಕಳೆದ ವಾರ ಹಠಾತ್ತಾಗಿ ಮಿಂಚಿದ ಹಿಗ್ಸ್ ಬೋಸಾನ್ ಎಂಬ ಕಣವನ್ನು ಅರ್ಥ ಮಾಡಿಕೊಳ್ಳಲು, ಅದನ್ನು ವಿವರಿಸಲು ಅನೇಕರು ತಿಣುಕುತ್ತಿದ್ದಾರೆ. 1993ರಲ್ಲಿ ಬ್ರಿಟನ್ನಿನ ವಿಜ್ಞಾನ ಸಚಿವ ವಿಲಿಯಂ ವಾಲ್ಡ್‌ಗ್ರೇವ್‌ಗೂ ಈ ಬೋಸಾನ್ ಕಣ ಸಾಕಷ್ಟು ಕಿರಿಕಿರಿ ಉಂಟುಮಾಡಿತ್ತು. ಅದನ್ನು ಪತ್ತೆ ಮಾಡಲು ಭಾರೀ ಮೊತ್ತದ ಹಣವನ್ನು ವಿನಿಯೋಗಿಸುವಂತೆ ಸಚಿವರ ಮೇಲೆ ಒತ್ತಡ ಬರುತ್ತಿತ್ತು. ಆಗಿನ್ನೂ ಅದಕ್ಕೆ `ದೇವ ಕಣ~ ಎಂಬ ತಪ್ಪು ಹೆಸರಾಗಲೀ, ಖ್ಯಾತಿಯಾಗಲೀ ಬಂದಿರಲಿಲ್ಲ. ಅದೇನೆಂದು ಜನಸಾಮಾನ್ಯರಿಗೆ ಅರ್ಥವಾಗುವಂತೆ ಅತ್ಯಂತ ಸರಳ ರೀತಿಯಲ್ಲಿ ಹೇಳಬಲ್ಲವರಿಗೆ ಬಹುಮಾನ ನೀಡುವುದಾಗಿ ವಿಜ್ಞಾನ ಸಚಿವರು ಘೋಷಿಸಿದರು. ಡೇವಿಡ್ ಮಿಲ್ಲರ್ ಹೆಸರಿನ ವಿಜ್ಞಾನಿಗೆ ಆ ಬಹುಮಾನ ಲಭಿಸಿತು. ಆತ ನೀಡಿದ್ದು ಈ ಶೆಟ್ಟರ್ ಮಾದರಿಯದೇ ಉಪಮೆ.

ಅಲ್ಲಿ ಶೆಟ್ಟರ್ ಬದಲಿಗೆ ಗ್ಲಾಮರ್ ನಟಿಯೊಬ್ಬಳು ಸಭಾಂಗಣಕ್ಕೆ ಬರುತ್ತಾಳೆ. ಅವಳ ಆಗಮನದ ನಿರೀಕ್ಷೆಯಿಂದಾಗಿಯೇ ಅಲ್ಲೊಂದು ಕಾಂತಕ್ಷೇತ್ರ ನಿರ್ಮಿತವಾಗಿರುತ್ತದೆ. ಆಕೆಯ ಸುತ್ತ ಜಮಾಯಿಸುವ ಜನರಿಂದಾಗಿ ಅವಳಿಗೆ `ವಜನು~ ಬರುತ್ತದೆ. ಮುಂದಕ್ಕೆ ಚಲಿಸಲಾರದಂತೆ ಆಕೆಗೆ ಅವಳ ಖ್ಯಾತಿಯ ಪೊರೆಯೇ ತಡೆಗೋಡೆಯಾಗುತ್ತದೆ. `ಆ ಪೊರೆಯೇ ಹಿಗ್ಸ್ ಫೀಲ್ಡ್~ ಎಂದು ಮಿಲ್ಲರ್ ಹೇಳಿದ್ದ.ಈ ವಿಶ್ವ ಆರಂಭವಾದ ಕ್ಷಣದಲ್ಲಿ ನಾನಾ ಬಗೆಯ ಶಕ್ತಿಕಣಗಳು ಫೂತ್ಕರಿಸಿ ಚೆಲ್ಲಾಡಿದವು. ಎಲ್ಲವೂ ಬೆಳಕಿನ ವೇಗದಲ್ಲಿ  ಸುತ್ತೆಲ್ಲ ಪಸರಿಸಿದವು. ಅದೇ ಕ್ಷಣದಲ್ಲಿ `ಅಗೋಚರ ಪೊರೆಯೊಂದು ವಿಶ್ವವನ್ನು ಆವರಿಸಿತು~ ಎಂದು ಪೀಟರ್ ಹಿಗ್ಸ್ 1964ರಲ್ಲಿ ಹೇಳಿದ್ದಕ್ಕೇ, ಆ ಪೊರೆಗೆ `ಹಿಗ್ಸ್ ಫೀಲ್ಡ್~ ಎಂಬ ಹೆಸರು ಬಂತು. ಇಂಥದ್ದೊಂದು ಅಗೋಚರ ಪೊರೆ ಇಲ್ಲವಾದರೆ ವಿಶ್ವ ನಿರ್ಮಾಣ ಸಾಧ್ಯವೇ ಇರುತ್ತಿರಲಿಲ್ಲ. ಏಕೆಂದರೆ ಆಗ ಉಗಮವಾದ ಎಲ್ಲ ಶಕ್ತಿಕಣಗಳೂ ಎತ್ತೆತ್ತಲೋ ಸಾಗಿ ಹೋಗುತ್ತಿದ್ದವು. `ದ್ರವ್ಯ~ ಎಂಬುದೇ ಇರುತ್ತಿರಲಿಲ್ಲ. ನಕ್ಷತ್ರಗಳು, ತಾರಾಮೇಘಗಳು, ಗ್ಯಾಲಕ್ಸಿಗಳು, ಗ್ರಹಗಳು ಇರುತ್ತಿರಲಿಲ್ಲ. ನೀರು, ಗಾಳಿ, ಬಂಡೆ, ನಾವು ನೀವು ಯಾರೂ ಇರುತ್ತಿರಲಿಲ್ಲ. ಚದುರಿ ಹೋಗಲಿದ್ದ ಶಕ್ತಿಕಣಗಳ ಮೇಲೆ ಆ ಕ್ಷಣದಲ್ಲೇ ಒಂದು ಮಾಯಾ ಪೊರೆಯ ದಿಗ್ಬಂಧನ ಹಾಕಿ, ಕೆಲವು ಕಣಗಳಿಗೆ ಬ್ರೇಕ್ ಹಾಕಿ ಹಿಡಿದಿಟ್ಟಿದ್ದರಿಂದಲೇ ಆ ಕಣಗಳು `ದ್ರವ್ಯ~ಗಳಾದವು. ಇಡೀ ವಿಶ್ವ ಅಸ್ತಿತ್ವಕ್ಕೆ ಬಂತು.

ಇದೊಂದು ತರ್ಕ ಅಷ್ಟೆ. ಆದರೆ ಅದನ್ನು ಪ್ರತ್ಯಕ್ಷ ನೋಡುವುದು ಹೇಗೆ? ವಿಜ್ಞಾನದ ಇತಿಹಾಸವೆಂದರೆ ಹೀಗೆ ಊಹೆ ಮತ್ತು ಪ್ರತ್ಯಕ್ಷ ಸಿದ್ಧಾಂತಗಳ ಸರಣಿಯೇ ಆಗಿದೆ. `ಭೂಮಿ ಸೂರ್ಯನ ಸುತ್ತ ತಿರುಗುತ್ತಿದೆ~ ಎಂದು ಹಿಂದೆ ಕೊಪರ್ನಿಕಸ್ ಎಂಬಾತ ತಾರ್ಕಿಕ ಲೆಕ್ಕಾಚಾರದ ಆಧಾರದಿಂದಲೇ ಹೇಳಿದ್ದ. ಆತನ ಬಳಿ ದೂರದರ್ಶಕ ಕೊಳವೆಯೂ ಇರಲಿಲ್ಲ. ಸೂರ್ಯ- ಚಂದ್ರ, ಕುಜ, ಗುರು ಎಲ್ಲವೂ ಕ್ಷಿತಿಜದ ಈ ಮಗ್ಗುಲಿನಿಂದ ಆ ಮಗ್ಗುಲಿಗೆ ಹಾದು ಹೋಗುತ್ತಿದ್ದವು. ಆದರೂ ಸೂರ್ಯನೇ ಇವೆಲ್ಲಕ್ಕೂ ಕೇಂದ್ರಬಿಂದು ಎಂದು ಆತ ವಾದಿಸಿದ. ಕೊಪರ್ನಿಕಸ್‌ನ ಈ ವಾದದಲ್ಲಿರುವ ತಥ್ಯವನ್ನು ಪ್ರತ್ಯಕ್ಷವಾಗಿ ತೋರಿಸಲು ಗೆಲಿಲಿಯೊ ಬರಬೇಕಾಯಿತು. ಹಡಗಿನಲ್ಲಿ ಬರುವ ಶತ್ರುಗಳನ್ನು ನೋಡಲೆಂದೇ ಸೃಷ್ಟಿಯಾದ ಟೆಲಿಸ್ಕೋಪ್ ಎಂಬ ಕೊಳವೆಯನ್ನು ಹಿಡಿದು ಆತ ಗ್ರಹಗಳ ಚಲನೆಯನ್ನು ತೋರಿಸಬೇಕಾಯಿತು. ನಮಗೆ ಕಾಣುವ ಸತ್ಯಕ್ಕಿಂತ ವಾಸ್ತವ ವಿಶ್ವ ಬೇರೆಯದೇ ಇದೆ ಎಂದು ಹೇಳಬೇಕಾಯಿತು.ಪರಮಾಣುವಿನ ಒಳಗೆ ಅವಿತಿರುವ ಅತಿಸೂಕ್ಷ್ಮ ವಿಶ್ವವನ್ನು ಕೆದಕುತ್ತ ಹೋದ ಹಾಗೆ ವಿಜ್ಞಾನಿಗಳಿಗೆ ಅಚ್ಚರಿಯ ಮೇಲೆ ಅಚ್ಚರಿಗಳು ಕಾಣತೊಡಗಿದ್ದವು. ಅದೊಂದು ವಿಲಕ್ಷಣ ಮೃಗಾಲಯದಂತೆ ಕಾಣತೊಡಗಿತ್ತು. ಅಲ್ಲಿರುವ ಕೆಲವು ಕಣಗಳು ಯಾವ ಐಹಿಕ ತರ್ಕಕ್ಕೂ ಸಿಗುವಂತಿಲ್ಲ. ಕೆಲವಂತೂ ನೋಡಲು ಯತ್ನಿಸಿದರೆ ಮಾಯವಾಗುತ್ತಿದ್ದವು. ಕೆಲವಕ್ಕೆ ರೂಪ ಆಕಾರ ಏನೇನೂ ಇಲ್ಲ. ಅವು ಬರೀ ತರಂಗಗಳು, ಕಂಪನಗಳು ಅಷ್ಟೆ. ಇನ್ನು ಕೆಲವು ಕಣಗಳಿಗೆ `ದ್ರವ್ಯ~ ಇದೆ. ದ್ರವ್ಯ ಇಲ್ಲದಿದ್ದರೆ ಎಲ್ಲವೂ ಓಡಿ ಹೋಗಿರುತ್ತಿದ್ದವು. ಪ್ರೋಟಾನೂ ಇರುತ್ತಿರಲಿಲ್ಲ; ಪರಮಾಣುವೂ ಇರುತ್ತಿರಲಿಲ್ಲ; ಕಬ್ಬಿಣ, ಚಿನ್ನ, ಅನಿಲ, ದ್ರವ ಯಾವುದೂ ಇರುತ್ತಿರಲಿಲ್ಲ. ಎಲ್ಲವೂ ಶಕ್ತಿಕಿರಣಗಳಾಗಿರುತ್ತಿದ್ದವು. ಹಾಗಿದ್ದರೆ `ದ್ರವ್ಯ~ ಎಂಬ ಗುಣ ಬರಲು ಏನು ಕಾರಣ ಇರಬಹುದೆಂದು ತರ್ಕಿಸಿದಾಗ ಪೀಟರ್ ಹಿಗ್ಸ್ ಮತ್ತು ಇನ್ನೂ ಕೆಲವರು ಇಡೀ ವಿಶ್ವಕ್ಕೇ ವ್ಯಾಪಿಸಿರಬಹುದಾದ ಒಂದು ಪ್ರಭಾವ ಕ್ಷೇತ್ರವನ್ನು ಊಹಿಸಿದರು. ಈ ಕ್ಷೇತ್ರದ ಪ್ರಭಾವಕ್ಕೆ ಬಂದ ಕಣಗಳೆಲ್ಲ ತಾವಾಗಿ ವಜನು ಪಡೆದು ದ್ರವ್ಯಗಳಾಗುತ್ತವೆ, ಜಡತ್ವವನ್ನು ಪಡೆಯುತ್ತವೆ ಎಂದರು. ನೀರಿನಲ್ಲಿ ಅಗೋಚರ ಅಣುಗಳು (ಜಲಜನಕ ಮತ್ತು ಆಮ್ಲಜನಕ) ಇರುವ ಹಾಗೆ ಹಿಗ್ಸ್ ಫೀಲ್ಡ್‌ನಲ್ಲಿ ಬೋಸಾನ್ ಕಣಗಳು ಇವೆಯೆಂದು ತರ್ಕಿಸಿದರು.ಅದನ್ನು ಪ್ರತ್ಯಕ್ಷವಾಗಿ ಪತ್ತೆ ಮಾಡಬೇಕಲ್ಲ? ತಟಸ್ಥವಾಗಿರುವ ಕೊಳದಲ್ಲಿ  ಒಂದು ಪುಟ್ಟ ಕಲ್ಲನ್ನು ಎಸೆದರೆ ಮಾತ್ರ ಅಲ್ಲಿ ನೀರಿದೆ ಎಂಬುದು ಗೊತ್ತಾಗುತ್ತದೆ. ಹಾಗೆಯೇ ಇಡೀ ವಿಶ್ವವನ್ನು ಆವರಿಸಿಕೊಂಡಿರುವ ಈ ಪ್ರಭಾವಲಯನ್ನು ಕೆಣಕಲೆಂದು ಕಳೆದ ನಾಲ್ಕು ದಶಕಗಳಿಂದ ಏನೆಲ್ಲ ಯಂತ್ರಾಗಾರಗಳನ್ನು ನಿರ್ಮಿಸಿದರು. ಅಂಥ ಪ್ರಯೋಗವನ್ನು ನಡೆಸಿ ನಾವೇ ಈ ವಲಯದ ಅಸ್ತಿತ್ವವನ್ನು ಮೊದಲು ಘೋಷಿಸುತ್ತೇವೆ ಎಂದು ಅಮೆರಿಕ, ಜಪಾನ್, ಚೀನಾ, ಯುರೋಪ್‌ನ ಸರಕಾರಗಳು ಪೈಪೋಟಿಯಲ್ಲಿ ಒಂದಕ್ಕಿಂತ ಒಂದು ಮಹಾಕ್ಲಿಷ್ಟ ಯಂತ್ರಗಳನ್ನು ನಿರ್ಮಿಸಿದವು. ಸೈಕ್ಲೊಟ್ರಾನ್, ಸಿಂಕ್ರೊಟ್ರಾನ್, ಕಾಸ್ಮೋಟ್ರಾನ್, ಟೆವಾಟ್ರಾನ್, ಲೀನಿಯರ್ ಅಕ್ಸಲರೇಟರ್, ಕೊಲೈಡರ್... ಒಂದೊಂದೂ ಅಣುವನ್ನು ಒಡೆಯುವ, ಜ್ಞಾನದ ಪರಿಧಿಯನ್ನು ವಿಸ್ತರಿಸುವ ಯಂತ್ರಗಳು. ಅವುಗಳ ಪೈಕಿ ಯುರೋಪಿಯನ್ನರು `ಸರ್ನ್~ ಹೆಸರಿನಲ್ಲಿ ಜಿನಿವಾದ ಪಾತಾಳದಲ್ಲಿ ನಿರ್ಮಿಸಿದ 27 ಕಿಮೀ ಸುತ್ತಳತೆಯ `ಲಾರ್ಜ್ ಹೇಡ್ರಾನ್ ಕೊಲೈಡರ್~ ಯಂತ್ರವೇ ಭೂಮಂಡಲದ ಅತಿ ದೊಡ್ಡ ಹಾಗೂ ಅತ್ಯಂತ ಕ್ಲಿಷ್ಟ ಯಂತ್ರಾಗಾರವೆನಿಸಿದೆ. 35 ದೇಶಗಳ, 160ಕ್ಕೂ ಹೆಚ್ಚು ವಿಜ್ಞಾನ ಸಂಸ್ಥೆಗಳಿಗೆ ಸೇರಿದ ಎರಡು ಸಾವಿರಕ್ಕೂ ಹೆಚ್ಚು ವಿಜ್ಞಾನಿಗಳು ಹಾಗೂ ಎಂಜಿನಿಯರ್‌ಗಳು  ಸೇರಿ ನಿರ್ಮಿಸಿದ ಅಲ್ಲಿನ ಕೊಳವೆಯ ಅತಿ ಶೀತಲದಲ್ಲಿ, ಗಾಳಿಯ ಒಂದೇ ಒಂದು ಅಣುವೂ ಇಲ್ಲದಂತೆ ನೋಡಿಕೊಳ್ಳಲಾಗುತ್ತಿದೆ. ಜಿನಿವಾ ನಗರಕ್ಕೆ ಒಂದು ದಿನಕ್ಕೆ ಬೇಕಾದಷ್ಟು ವಿದ್ಯುತ್ ಶಕ್ತಿಯನ್ನು ಒಮ್ಮೆಲೆ ಊಡಿಸಿ ಎರಡು ಪ್ರೋಟಾನ್‌ಗಳನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ  ಅತಿ ವೇಗವಾಗಿ ಸುತ್ತಿಸಿ, ಸುತ್ತಿಸಿ, ಕೊನೆಗೆ ಅವು ಬೆಳಕಿನ ವೇಗವನ್ನು ಇನ್ನೇನು ಸರಿಗಟ್ಟುತ್ತವೆ ಎಂದಾಗ ಡಿಕ್ಕಿ ಹೊಡೆಸಲಾಗುತ್ತದೆ. ಬ್ರಹ್ಮಾಂಡದ ಆದಿಕ್ಷಣವೇ ಮತ್ತೊಮ್ಮೆ ಸೃಷ್ಟಿಯಾದಂತೆ ಕಣಗಳು ಸಿಡಿದು ಕೋರೈಸುತ್ತವೆ. ಅವುಗಳನ್ನು ಬೃಹತ್ ಅಯಸ್ಕಾಂತದಲ್ಲಿ ಸೆರೆ ಹಿಡಿಯಲೆಂದು ವೃತ್ತದ ಎರಡು ಕಡೆ ಆರಾರು ಅಂತಸ್ತುಗಳ ಭೂಗತ ಗೋಪುರಗಳನ್ನು ನಿರ್ಮಿಸಲಾಗಿದೆ. ಎರಡು ವರ್ಷಗಳ ಹಿಂದೆ ಮೊದಲ ಬಾರಿಗೆ ಪ್ರೋಟಾನ್‌ಗಳನ್ನು ಡಿಕ್ಕಿ ಹೊಡೆಸಿದಾಗ ಆದಿ ವಿಶ್ವದ ಮಹಾಸ್ಫೋಟವೇ ಮತ್ತೊಮ್ಮೆ ಸಂಭವಿಸೀತೆಂದೂ ಕಪ್ಪುರಂಧ್ರವೇ ಸೃಷ್ಟಿಯಾಗಿ ಇಡೀ ಭೂಮಿಯೇ ನಾಪತ್ತೆ ಆದೀತೆಂದೂ ಆತಂಕ ಎದ್ದಿತ್ತು. ಕೆಲವರಂತೂ ಜಿನಿವಾದ ಭೂಗತ ಉಂಗುರದಲ್ಲಿ  ಪ್ರಯೋಗ ನಡೆಸದಂತೆ ಕೋರ್ಟಿನಲ್ಲಿ  ದಾವೆಯನ್ನೂ ಹೂಡಿದ್ದರು.ಶೂನ್ಯದಲ್ಲಿ ಉಂಗುರವನ್ನೋ ಭಸ್ಮವನ್ನೋ ನಮ್ಮವರು ಸೃಷ್ಟಿಸಬಹುದು. ಆದರೆ ಉಂಗುರದಲ್ಲಿ  ಶೂನ್ಯವನ್ನು ಸೃಷ್ಟಿಸುವುದು, ಅದರಲ್ಲಿ  ತುಮುಲ ಏಳುವಂತೆ ಮಾಡುವುದು ಸುಲಭವಲ್ಲ. ಹಿಗ್ಸ್ ಪ್ರಭಾವಲಯವನ್ನು ಒಂದು ಅಗೋಚರ ಗೋಡೆ ಎಂದುಕೊಂಡರೆ, ಅದಕ್ಕೆ ಜೋರಾಗಿ ಸುತ್ತಿಗೆ ಹೊಡೆದು ಒಂದಿಷ್ಟು ತುಣುಕನ್ನು ಎತ್ತಿದರೆ, ಗೋಡೆಯಲ್ಲಿ  ಏನೇನಿದೆ ಎಂಬುದು ಗೊತ್ತಾದೀತು. ಹಿಂದೆ ಅನೇಕ ಬಾರಿ ಡಿಕ್ಕಿ ಹೊಡೆದರೂ ಚೂರೇಚೂರು ದೂಳು ಎದ್ದು ಮಾಯವಾಗಿತ್ತು. ಈ ಬಾರಿ ಇನ್ನೂ ಜೋರಾಗಿ ಹೊಡೆದಿದ್ದರಿಂದ ಆ ದೂಳಿನಲ್ಲಿ ಹಿಗ್ಸ್ ಬೋಸಾನ್ ಕಂಡಿದೆ ಎಂದು ಎರಡು ಪ್ರತ್ಯೇಕ ತಂಡಗಳ ವಿಜ್ಞಾನಿಗಳೂ ಹೇಳಿದ್ದಾರೆ. ಹಿಗ್ಸ್ ಜತೆ ಇನ್ನೇನೇನಿವೆ ಎಂಬುದರ ಅಧ್ಯಯನ ನಡೆದಿದೆ.ವಿಶ್ವದ ಈ ಅಗೋಚರ ಪ್ರಭಾವಲಯಕ್ಕೆ ಪೆಟ್ಟುಕೊಟ್ಟು ಚೂರೆಬ್ಬಿಸಿದಾಗ ಹಿಗ್ಸ್ ಬೋಸಾನ್ ಒಂದೇ ಅಲ್ಲ, ಇನ್ನೂ ಅನೇಕ ವೈಚಿತ್ರ್ಯಗಳು ಪ್ರತ್ಯಕ್ಷ ಕಾಣಬಹುದು ಎಂಬ ನಿರೀಕ್ಷೆ ಭೌತವಿಜ್ಞಾನಿಗಳದ್ದು. ಉದಾಹರಣೆಗೆ, ನಮ್ಮ ಸುತ್ತ ಗುರುತ್ವವಲಯ ಎಂಬುದೊಂದಿದೆ. ಅದಕ್ಕೆ ಕಾರಣವಾದ `ಗ್ರಾವಿಟ್ರಾನ್~ ಎಂಬ ಕಣ ಇದೆಯೆ? ನಮಗೆ ಇದುವರೆಗೂ ಗೋಚರಿಸದ `ಕಪ್ಪುದ್ರವ್ಯ~, `ಕಪ್ಪುಶಕ್ತಿ~ಗಳು ವಿಶ್ವಕ್ಕೆಲ್ಲ ವ್ಯಾಪಿಸಿವೆ. ಅದರ ಸುಳಿವು ಸಿಕ್ಕೀತೆ? ನಮಗೆ ಗೋಚರವಾಗುವ ದ್ರವ್ಯಗಳಿಗೆ ತದ್ವಿರುದ್ಧವಾದ `ಪ್ರತಿದ್ರವ್ಯ~ ಎಂಬುದೂ ಇರಲೇಬೇಕು. ಅವುಗಳ ಅಸ್ತಿತ್ವವನ್ನು ಸಾಬೀತುಪಡಿಸಲು ಸಾಧ್ಯವೆ?ಇವೆಲ್ಲ ಪ್ರಶ್ನೆಗಳ ಮಧ್ಯೆ `ಹಿಗ್ಸ್ ಬೋಸಾನ್~ ಗೇ ಅತಿ ಹೆಚ್ಚು ಪ್ರಚಾರ ಸಿಗಲು ಕಾರಣ ಏನೆಂದರೆ ಅದಕ್ಕೆ `ಗಾಡ್ ಪಾರ್ಟಿಕಲ್~ ಎಂಬ ತಪ್ಪು ಹೆಸರು ಕೊಟ್ಟಿದ್ದು. ಅದೆಷ್ಟೇ ಹುಡುಕಿದರೂ ಗೋಚರವಾಗದೆ ವಿಜ್ಞಾನಿಗಳನ್ನು ನಾನಾ ರೀತಿಯಲ್ಲಿ ಕಾಡಿದ ಈ ಕಣಕ್ಕೆ `ಗಾಡ್‌ಡ್ಯಾಮ್ ಪಾರ್ಟಿಕಲ್ (ಅನಿಷ್ಟ ಕಣ)~ ಎಂಬ ಬೈಗುಳದ ಶಿರೋನಾಮೆಯನ್ನು ಕೊಟ್ಟು ಲೆಡರ್‌ಮ್ಯೋನ್ ಎಂಬಾತ ಪುಸ್ತಕವನ್ನು ಬರೆದಿದ್ದ. ಹೆಸರು ಚೆನ್ನಾಗಿಲ್ಲವೆಂದು ಗ್ರಂಥದ ಪ್ರಕಾಶಕರು `ಗಾಡ್‌ಡ್ಯಾಮ್~ನಲ್ಲಿ ಬರೀ `ಗಾಡ್~ ಭಾಗವನ್ನಷ್ಟೇ ಉಳಿಸಿದ್ದರಿಂದ ಹಿಗ್ಸ್ ಬೋಸಾನ್‌ಗೆ ದೇವತಾ ಸ್ವರೂಪವೇ ಬಂದಂತಾಯಿತು.ಸದ್ಯ ವಿಜ್ಞಾನಿಗಳಲ್ಲಿ  ಯಾರೂ ಇದನ್ನು `ದೇವ ಕಣ~ ಎಂದು ಮಾನ್ಯ ಮಾಡುತ್ತಿಲ್ಲ. ಹಿಗ್ಸ್ ಬೋಸಾನ್ ಸಿಕ್ಕಿತೆಂದು ಹಿಗ್ಗುತ್ತ ಬೀಗುತ್ತ ಪಟಾಕಿಯನ್ನೂ ಸಿಡಿಸುತ್ತಿಲ್ಲ. ಅರಿವಿನ ಕ್ಷಿತಿಜವನ್ನು ಇನ್ನಷ್ಟು ವಿಸ್ತರಿಸುವುದಷ್ಟೆ ಅವರ ಕೆಲಸ. ಅಗೋಚರ ಗೋಡೆಗೆ ಡಿಕ್ಕಿ ಹೊಡೆದೋ, ನಿಶ್ಚಲ ಕೊಳಕ್ಕೆ ಕಲ್ಲು ಬೀಳಿಸಿಯೊ, ಶೆಟ್ಟರ ನಡಿಗೆಗೆ ತಡೆಹಾಕಿಯೊ -ಅಂತೂ ನಾನಾ ಹೋಲಿಕೆ ಕೊಟ್ಟು ವಿಜ್ಞಾನಿಗಳ ಶೋಧವನ್ನು ಜನಸಾಮಾನ್ಯರಿಗೆ ತಿಳಿಸಲು ಯತ್ನಿಸುವುದಷ್ಟೆ ಮಾಧ್ಯಮದ ಕೆಲಸ.(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry