ಹಿಡಿಯಷ್ಟು ಪ್ರೀತಿ, ಬೊಗಸೆಯಷ್ಟು ಗೌರವ

7

ಹಿಡಿಯಷ್ಟು ಪ್ರೀತಿ, ಬೊಗಸೆಯಷ್ಟು ಗೌರವ

Published:
Updated:
ಹಿಡಿಯಷ್ಟು ಪ್ರೀತಿ, ಬೊಗಸೆಯಷ್ಟು ಗೌರವ

ಅವರು ಬಹಳ ಒಳ್ಳೆಯ ಪ್ರಿನ್ಸಿಪಾಲರು. ಕಚೇರಿಗೆ ಯಾರೇ ಬಂದರೂ ಆತ್ಮೀಯವಾಗಿ ನಡೆದುಕೊಳ್ಳುತ್ತಿದ್ದರು. ತಾವೇ ಮೊದಲು ಎದ್ದು ನಿಂತು ಎರಡೂ ಕೈ ಮುಗಿದು ಬಂದವರನ್ನು ಸ್ವಾಗತಿಸಿ, ಕೂರಿಸಿ ಮಾತಾಡಿಸುತ್ತಿದ್ದರು. ಅವರ ನಗು, ವಿನಯ ಕಂಡು ಗುರ್ರ್ ಎನ್ನಲು ಬಂದವನೂ ಬೆಕ್ಕಿನಂತಾಗುತ್ತಿದ್ದ.ನಮಸ್ಕಾರ ಮಾಡುವವನ ಘನತೆ ಸದಾ ಹೆಚ್ಚಾಗುತ್ತದೆ ಕಣ್ರೀ ಎನ್ನುತ್ತಿದ್ದರು. ಕಿರಿಯರ ಜೊತೆ ಸಲುಗೆ ಮತ್ತು ಗೆಳೆತನದಿಂದ ಇರಲು ಹೆಚ್ಚು ಹಂಬಲಿಸುತ್ತಿದ್ದರು. ವಯಸ್ಸಾದ ಯಜಮಾನರುಗಳ ಕಂಡರೆ ಅವರಲ್ಲಿ ವಿನಯ ಗೌರವ ಉಕ್ಕಿ ಬರುತ್ತಿದ್ದವು. ‘ಬನ್ರಿ, ವಯಸ್ಸಾದವರು ಸಿಕ್ಕಾಗ ಕಾಲಿಗೆ ಬಿದ್ದು ಆಶೀರ್ವಾದ ಪಡಿಯೋಣ. ಮುಂದೆ ಈ ಮಾಡೆಲ್ಲಿನ ಜನ ನೋಡಕ್ಕೂ ಸಿಗಲ್ಲ. ಇಷ್ಟು ವಯಸ್ಸಾಗೋ ತನಕ ನಾವು ನೀವು ನಮ್ಮಪ್ಪರಾಣೆ ಬದುಕಲ್ಲ ಕಣ್ರೀ. ಇಂಥ ಮಾಡೆಲ್‌ಗಳು ಸಿಕ್ಕಾಗಲೇ ಮಾತಾಡಿಸಿ, ನಮಸ್ಕಾರ ಮಾಡಿ ಬಿಡಬೇಕು’ ಎಂದು ನಮಗೆಲ್ಲಾ ಬುದ್ಧಿ ಹೇಳುತ್ತಿದ್ದರು.ವಯಸ್ಸಾದವರು ನಮ್ಮಿಂದ ಸಿಗೋ ಅನ್ನ, ಔಷಧಿ ಆಸೆಗೆ ಬದುಕಿರ್ತಾರೆ ಅಂದ್ಕೊಂಡಿದ್ದೀರಾ? ಇಲ್ಲ ಕಣ್ರಿ. ಆ ವಯಸ್ಸಲ್ಲಿ ಅನ್ನನೂ ರುಚಿ ಅನ್ಸಲ್ಲ. ಔಷಧಿ ಅಂತೂ ಯಾವತ್ತೂ ರುಚಿನೇ ಅಲ್ಲ. ಅವು ಕಿರಿಯ ತಲೆಗಳಿಂದ  ಸಿಗುವ ಒಂದಿಷ್ಟು ಗೌರವ, ಮರ್ಯಾದೆಗೆ ಸಾಯ್ತಾ ಇರ್ತಾವೆ ಅಷ್ಟೆ. ಅದನ್ನ ನಾವು ಮೊದಲು ಅರ್ಥ ಮಾಡ್ಕೊಬೇಕು. ತಮ್ಮ ಮಕ್ಕಳ ಸುಖ ನೋಡೋಕೆ ಜೀವ ಗಟ್ಟಿ ಇಟ್ಕೊಂಡಿರ್ತಾವೆ. ಇದು ನಿಮ್ಮಂಥ ಯುವಕರಿಗೆ ಅರ್ಥ ಆಗಬೇಕಲ್ಲ. ಇಂಥದ್ದು ಏನಾದ್ರೂ ಹೇಳಿದ್ರೆ ಹಾಳಾದವನು ಕೊರಿತಾನೆ ಅಂತ ನೀವೆಲ್ಲಾ ಮನಸ್ಸಲ್ಲೇ ಬೈಕೋತೀರಾ. ಹಿಂದೆ ಕಿಚಾಯಿಸಿ ನಗ್ತಾ ಇರ್ತೀರಾ. ನಾಲ್ಕೇ ನಾಲ್ಕು ಒಳ್ಳೆ ಮಾತು, ಹಿಡಿಯಷ್ಟು ಪ್ರೀತಿ, ಬೊಗಸೆಯಷ್ಟು ಗೌರವಾನೂ ನಾವು ಅವರಿಗೆ ಕೊಡಕ್ಕೆ ಆಗದಿದ್ದರೆ ನಾವ್ಯಾಕ್ರಿ ಬದುಕಬೇಕು ಎಂದು ಪ್ರತಿಯೊಬ್ಬ ಯಜಮಾನರ ಕಾಲಿಗೆ ಬಿದ್ದು ಎದ್ದ ಮೇಲೆ ನಮಗೆ ಪಾಠ ಹೇಳುತ್ತಿದ್ದರು.ಇದರ ನಡುವೆ, ನಮ್ಮ ಕಾಲೇಜಿಗೊಬ್ಬ ಯಜಮಾನ ಆಗಾಗ ಕುಡಿದು ಬಂದು ಏನೇನೋ ಪ್ರಶ್ನೆ ಕೇಳಿ ತಲೆ ತಿನ್ನುತ್ತಿದ್ದ. ಮೇಲಾಗಿ ಅವನು ಆ ಊರಿನ ಗ್ರಾಮ ಪಂಚಾಯಿತಿ ಅಧ್ಯಕ್ಷ ಕೂಡ ಆಗಿದ್ದ. ಪ್ರಿನ್ಸಿಪಾಲರು ಅವನಿಗೂ ಮಾಮೂಲಿ ನಮಸ್ಕಾರ, ಗೌರವ ಎಲ್ಲಾ ಕೊಡ್ತಾ ಇದ್ರು. ಆದರೆ ಕುಡಿದ ನಶೆಯಲ್ಲಿರುತ್ತಿದ್ದ ಅವನು ಇವರು ತೋರುವ ಗೌರವ ಮರ್ಯಾದೆಗಳನ್ನು ಎಂದೂ ಸ್ವೀಕರಿಸುವ ಗೋಜಿಗೆ ಹೋಗುತ್ತಿರಲಿಲ್ಲ. ಜೊತೆಗೆ ಇದೆಲ್ಲಾ ಅರ್ಥ ಮಾಡಿಕೊಳ್ಳುವ ಸ್ಥಿತಿಯಲ್ಲೂ ಅವನು ಇರುತ್ತಿದ್ದದ್ದು ಕಮ್ಮೀನೆ. ಬದಲಿಗೆ ನಾನಾ ವಿಚಿತ್ರ ಪ್ರಶ್ನೆಗಳನ್ನು ಕೇಳಿ ಪ್ರಿನ್ಸಿಪಾಲರ ತಲೆ ಚಿಟ್ಟು ಹಿಡಿಸುತ್ತಿದ್ದನು. ಆದರೂ ಅವನ ಮೇಲೆ ಅವರೆಂದೂ ಅಪ್ಪಿತಪ್ಪಿಯೂ ರೇಗುತ್ತಿರಲಿಲ್ಲ.ಹಕೀಖತ್ತು ಅಂದರೆ ಅವನಿಗೆ ಖರ್ಚಿಗೆ ಆಗಾಗ ಒಂದಿಷ್ಟು ರೊಕ್ಕ ಬೇಕಾಗಿರುತ್ತಿತ್ತು. ಹಿಂಗಾಗಿ ಅವನು ಕಾಲೇಜಿನ ಕಡೆ ಬರ್ತಾ ಇದ್ದ. ಈ ಸೂಕ್ಷ್ಮವನ್ನ ಅರ್ಥ ಮಾಡಿಕೊಳ್ಳದ ನಮ್ಮ ಸಾಹೇಬರು ನಮಸ್ಕಾರ, ಗೌರವ, ಬೊಗಸೆ ಪ್ರೀತಿ ಎಂದೆಲ್ಲಾ ಅವನೆದುರು ಹೆಣಗಾಡುತ್ತಿದ್ದರು. ಪ್ರಿನ್ಸಿಪಾಲರ ಶುದ್ಧ ಮನಸ್ಸು ಮತ್ತು ಮಾತುಗಳು ಅವನಿಗೆ ಸುತಾರಾಂ ಇಷ್ಟವಾಗುತ್ತಿರಲಿಲ್ಲ. ಅವೆಲ್ಲಾ ಅವನಿಗೆ ಬೇಕೂ ಆಗಿರಲಿಲ್ಲ. ಅವರ ಒಲುಮೆ, ವಿನಯಗಳು ಅರ್ಥವಾಗದೆ ಆತ ಫುಲ್ ಸುಸ್ತಾಗಿ, ಎದ್ದು  ಹೋಗುವಾಗ ‘ಥೂ ಹಾಳಾದವನು ಬರೀ ತಲೆ ತಿಂತಾನೆ. ಮೇನ್ ಮ್ಯಾಟರ್ರೇ ಅರ್ಥಮಾಡ್ಕೊಳಲ್ಲ.ವ್ಯವಹಾರ ಜ್ಞಾನಾನೇ ಇಲ್ಲ. ಅದೇನು ಓದಿ ದಬಾಕಿದ್ದಾನೋ? ಏನೋ? ಲೋಡಾಗಿದ್ದ ಮಾಲೆಲ್ಲಾ ಮಾತಲ್ಲೇ ಇಳಿಸಿಬಿಟ್ಟ’ ಎಂದು ಗೊಣಗಿಕೊಂಡು ಹೋಗುತ್ತಿದ್ದ. ಅವನ ಮನಸ್ಸಿನ ಮರ್ಮ ಕಿಂಚಿತ್ತೂ ಅರಿಯದ ನಮ್ಮ ಸಾಹೇಬರು ಮಾತ್ರ ಹಿರಿಯರೊಬ್ಬರಿಗೆ  ಗೌರವ ತೋರಿಸಿದ ಆತ್ಮ ತೃಪ್ತಿಯಿಂದ ಬೀಗುತ್ತಿದ್ದರು.ಒಂದು ದಿನ ‘ಸಾರ್ ನಿಮ್ಮ ಗೌರವ, ಮರ್ಯಾದೆಗೆ ಅವನು ಕಾಲೇಜಿನ ಕಡೆ ಬರ್ತಾ ಇರೋದಲ್ಲ, ಲೋಡಾಗಲು ದುಡ್ಡು ಕಮ್ಮಿ ಆದಾಗ ವಸೂಲಿಗೆ ಅಂತ ಬರ್ತಿದ್ದಾನೆ. ಅದನ್ನ ನೀವು ಅರ್ಥ ಮಾಡ್ಕೊಳ್ತಾ ಇಲ್ಲ ಅನ್ನೋ ಬೇಜಾರಿದೆ ಅವನಿಗೆ. ಇಲ್ಲಿಗೆ ಬರುವ ಮೊದಲೂ ಅವನು ಒಂದಿಷ್ಟು ಏರಿಸಿಕೊಂಡೇ ಬಂದಿರ್ತಾನೆ. ಆತನ ಮನಸ್ಸನ್ನು ನೀವು ಅರ್ಥಾನೆ ಮಾಡ್ಕೊಂಡಿಲ್ವಲ್ಲ’ ಎಂದು ಸಮಜಾಯಿಷಿ ಕೊಟ್ಟೆವು. ಅದಕ್ಕೆ ದಂಗಾದ ಪ್ರಿನ್ಸಿಪಾಲರು ‘ಹೌದೇನ್ರಿ’ ಎಂದು ಹೌಹಾರಿ ಕೂತರು.‘ಛೇ! ಅವನು ಬರ್ತಾ ಇದ್ದದ್ದು ದುಡ್ಡೀಗಾ? ನಾನು ಕಾಲೇಜಿನ ಅಭಿವೃದ್ಧಿಗೆ ಅಂತ ತಪ್ಪಾಗಿ ತಿಳ್ಕೊಂಡು ಬಿಟ್ಟಿದ್ರೆ ಕಣ್್ರಿ. ಮೇಲಾಗಿ, ಸುಖಾಸುಮ್ಮನೆ ದುಡ್ಡು ಕೊಡೋದು ತಪ್ಪಾಗುತ್ತೆ ಕಣ್ರಿ. ಅದೊಂದು ಅನಿಷ್ಟ ಪದ್ಧತಿ. ನಾವು ನೆಟ್ಟಗಿದ್ರೆ ಯಾರಿಗ್ಯಾಕ್ರಿ ಸುಖಾಸುಮ್ಮನೆ ದುಡ್ಡು ಕಾಸು ಕೊಡಬೇಕು. ಅದೂ ಕುಡಿಯೋಕಂದ್ರೆ ನನ್ನ ಪ್ರಾಣ ಹೋದ್ರೂ ನಾನು ಕೊಡೋನಲ್ಲ. ಅದರ ಬದಲಿಗೆ ಅವರ ಕಷ್ಟ ಬೇರೆ ಏನೋ ಇರಬಹುದು. ಅದೇನಂತ ಸಾಧ್ಯವಾದರೆ ಆತ್ಮೀಯವಾಗಿ ಕೇಳಿ ನೋಡಿ. ಮನುಷ್ಯ ಬದುಕೋದೇ ಹಾಳು ಪ್ರೀತಿ, ಗೌರವ, ಸ್ವಾಭಿಮಾನಕ್ಕೆ. ಅದು ಸಿಗದಿದ್ದಾಗಲೇ ಹೀಗೆಲ್ಲಾ  ಮಾಡ್ಕೋಳೊದು. ಅವರನ್ನ ಸರಿ ಮಾಡೋಣ. ಅವರತ್ರ ನೀವು ಮಾತಾಡಿ’ ಎಂದು ನನಗೇ ಕೆಲಸ ಹಚ್ಚಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷನಂತೆಯೇ ಸಾಕಷ್ಟು ವಿದ್ಯಾರ್ಥಿಗಳ ಅಪ್ಪಂದಿರೂ, ಕಾಲೇಜಿಗೆ ಕೆಲಸದ ನಿಮಿತ್ತ ಬರುವಾಗ ಒಂದಿಷ್ಟು ಲೋಡಾಗಿ ಬರುವುದು ಈಗಲೂ ಸಾಮಾನ್ಯ ಎನಿಸುವ ಸಂಗತಿ. ಆಗ ಅವರ ಜೊತೆಯಲ್ಲಿ ಬರುವ ನಮ್ಮ ವಿದ್ಯಾರ್ಥಿಗಳು ಮಾತ್ರ ಸಾಕಷ್ಟು ಸಂಕಟವನ್ನು ಅನುಭವಿಸುತ್ತಾರೆ. ‘ತನ್ನಪ್ಪ ಇಂಥವನು ಎಂದು ನಮ್ಮ ಸಾರ್‌ಗಳಿಗೆ ತಿಳಿದು ಹೋಯಿತಲ್ಲ’ ಎಂದು ಅತೀವ ಬೇಸರ ಪಡುತ್ತಾರೆ. ನಂತರ ಬಂದು ‘ಸಾರ್ ಬೇಜಾರಾಗಬೇಡಿ. ನಮ್ಮಪ್ಪ ಸ್ವಲ್ಪ ಹಂಗೇನೆ. ಏನು ಮಾಡೋದು ಹೇಳಿ’ಎಂದು ಮಕ್ಕಳು ವ್ಯಥೆ ಪಡುತ್ತಾರೆ. ಆದರೆ, ಅಪ್ಪಂದಿರು ಮಾತ್ರ ಇದ್ಯಾವುದರ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಅವರು ಸದಾ ಆರಾಮಾಗಿ, ಗರಮ್ಮಾಗಿ ಇರುತ್ತಾರೆ.ಕಾಲೇಜಿಗೆ ಕುಡ್ಕೊಂಡು ಬರೋ ಪೋಷಕರನ್ನ ಹೇಗೆ ಓಡಿಸಬೇಕು ಅನ್ನೊದಕ್ಕೆ ಒಂದು ಡೀಸೆಂಟ್ ಆಗಿರೋ ಪ್ಲಾನ್ ತಯಾರಿಸೋಣ ಕಣ್ರಿ ಎಂದು ಪ್ರ್ರಿನ್ಸಿಪಾಲರೊಮ್ಮೆ ಹಟ ಹಿಡಿದು ಕೂತರು. ಏನು ಮಾಡೋದು ನೀವೇ ಹೇಳಿ ಸಾರ್ ಎಂದು ನಾವು ಜವಾಬ್ದಾರಿಯನ್ನು ಅವರಿಗೇ ವರ್ಗಾಯಿಸಿದೆವು. ಕುಡಿದು ಬಂದೋರಿಗೆ ಬಿಸಿಬಿಸಿ ಟೀ ಕೊಟ್ರೆ ಬ್ಯಾಡಾಂತ ಎದ್ದು ಓಡಿ ಹೋಗ್ತಾರಂತೆ ಹೌದಾ? ಎಂದರು. ನಮಗೆ ಆ ಅನುಭವ ಇಲ್ಲ ಸಾರ್ ಎಂದೆವು.ಮೊದಲು ಇದನ್ನ ಪ್ರಯೋಗ ಮಾಡಿ ನೋಡೋಣ. ಸಕ್ಸಸ್ ಆದ್ರೂ ಆಗಬಹುದು. ಹೆಂಗೂ ಅವರೂ ಕುಡಿದು ಬಂದಿರ್ತಾರೆ. ಮೇಲಿಂದ ನಾವೊಂದಿಷ್ಟು ಕುಡಿಸಿ ನೋಡೋಣ! ಅದೇನಾಗುತ್ತೋ ಆಗಲಿ ಎಂದು ಹೇಳಿ ಹೊಸ ಗ್ಯಾಸ್ ಸ್ಟೌವ್, ಟೀ ಕಾಯಿಸುವ ಪಾತ್ರೆ, ಸಕ್ಕರೆ, ಟೀ ಪುಡಿ ಎಲ್ಲಾ ತರಿಸಿ ಇಡಿಸಿದರು. ಈ ಟೀ ಕುಡಿಸುವ ಯೋಜನೆ ಜಾರಿಗೆ ಬಂದಿದೆ ಎಂದು ತಿಳಿದ ಮೇಲೆ ಲೋಡಾದ ಅನೇಕ ಗಿರಾಕಿಗಳು ಕಾಲೇಜಿನ ಕಡೆ ಅದ್ಯಾಕೋ ಬರುವುದನ್ನೇ ನಿಲ್ಲಿಸಿ ಬಿಟ್ಟರು. ಗ್ರಾಮ ಪಂಚಾಯಿತಿ ಅಧ್ಯಕ್ಷನಂತೂ ಅವತ್ತು ಟೀಗೆ ಹೆದರಿ ಕಣ್ಣಿಗೆ ಕಾಣದೆ ಹಾರಿ ಹೋದ.ಮುಂದೆ ದಿನಾ ಟೀ ಕುಡಿಯುವ ಚಟ ಅವರ ಬದಲಿಗೆ ನಮಗೆಲ್ಲಾ ತಗುಲಿಕೊಂಡಿತು. ಟೀ ಕುಡಿಯುತ್ತಾ ಮತ್ತೇರಿದವರಂತೆ ಫಿಲಾಸಫಿಯ ಕಡೆ ಹೊರಳುತ್ತಿದ್ದ ನಮ್ಮ ಪ್ರಿನ್ಸಿಪಾಲ್ ಸಾಹೇಬರು ನಿಧಾನಕ್ಕೆ ಸ್ವಗತ ಲಹರಿಯಂತೆ ಮಾತಾಡುತ್ತಿದ್ದರು. ಆಗ ಅವರ ಕಣ್ಣಿನ ಅಂಚಿನಿಂದ ನೀರು ನಿಧಾನಕ್ಕೆ ತೊಟ್ಟಿಕ್ಕುತ್ತ್ತಿತ್ತು. ‘ಪಾಪ ಅವರಿಗೆ ಏನೇನು ಕಷ್ಟ ಇರ್ತಾವೋ ಏನೋ? ಎಲ್ಲಾ ನಾವು ಅಂದ್ಕೊಂಡಷ್ಟು ಈಸಿ ಇರಲ್ಲ ಕಣ್ರಿ ಈ ಸಮಾಜದಲ್ಲಿ.  ನಾವೋ ಹೊಟ್ಟೆ ತುಂಬಿದ ಕೆಟ್ಟ ಜನ. ಸುಖ ಜೀವಿಗಳು. ಜೊತೆಗೆ ಸೋಮಾರಿಗಳು. ಹಿಂಗಾಗಿ ಬಡವರ ಬಗ್ಗೆ, ಅವರ ಕುಡಿತದ ಬಗ್ಗೆ ಹಗುರವಾಗಿ ಮಾತಾಡ್ತೀವಿ. ಅವರ ನೋವು, ಕಷ್ಟ, ಅವಮಾನವನ್ನು ನಾವು ಯಾವತ್ತಾದರೂ ಅರ್ಥ ಮಾಡ್ಕೊಂಡಿದ್ದೀವಾ? ಹೇಳಿ ನೋಡೋಣ.ಕುಡಿಯೋದು ತಪ್ಪು ಅನ್ನೋದನ್ನ ಅವರಿಗೆ ಉದಾಹರಣೆ ಕೊಟ್ಟು ವಿವರಿಸಬೇಕು. ಸುಖದಲ್ಲಿರೋ ನಾವು ನಮ್ಮ ಪ್ರೀತಿನ ಧಾರಾಳವಾಗಿ ಅವರ ಮೇಲೆ ಖರ್ಚು ಮಾಡಬೇಕು. ಕೂಲಿ ಕಾರ್ಮಿಕರಿಗೆ ನಾವು ಕೊಡೋ ಗೌರವಾನ ಇನ್ನು ಜಾಸ್ತಿ ಮಾಡ್ಕೊಬೇಕು. ನಮಗಾಗಿ ಬಿಸಿಲಲ್ಲಿ, ಮಳೆಯಲ್ಲಿ ಕೊರಗಿ ನಲುಗಿದ ಜೀವಗಳು ನೀವು ಎಂದು ಅಭಿಮಾನ ತೋರಿಸಬೇಕು. ಇದೆಲ್ಲಾ ಅವರಿಗೆ ಅರ್ಥ ಆಗೋದು ತಡ ಆಗಬಹುದು. ಆಗಲಿ, ಹಂಗಂತ ನಮ್ಮ ಪ್ರಯತ್ನಾನ ನಿಲ್ಲಿಸಬಾರದು. ಪ್ರೀತಿ, ಗೌರವ, ಅಂದ್ರೆ ಏನೂಂತ ಅನ್ಕೊಂಡಿದ್ದೀರಾ? ನಾವು ಮೊದಲು ಬೇರೆಯವರಿಗೆ ಅದನ್ನು ಲೋಡುಗಟ್ಟಲೆ ಕೊಡಬೇಕು. ಆಮೇಲೆ ನಮಗದು ಬೆಟ್ಟದಷ್ಟು ಬಡ್ಡಿ ಸಮೇತ ವಾಪಸ್ಸು ಸಿಗುತ್ತೆ. ಇಷ್ಟು ವಿಷಯ ಜೀವನದಲ್ಲಿ ನನಗೂ ಅರ್ಥ ಆಗಿದ್ದು ನಮ್ಮಪ್ಪ ಅನಾಥ ಹೆಣವಾಗಿ ರಸ್ತೆ ಮೇಲೆ ಸಿಕ್ಕಾಗ ಕಣ್ರಿ...

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry