ಹೀಗಿದ್ದಳು ಅವಳು

7

ಹೀಗಿದ್ದಳು ಅವಳು

Published:
Updated:

‘ಯಾರಾದ್ರೂ ಹುಡುಗ್ರನ್ನ ಲೀಡರ್ ಮಾಡಿ ಸಾರ್. ಹೋಗಿ ಹೋಗಿ ಆ ಜವಾಬ್ದಾರಿನ ಒಂದು ಹುಡುಗಿಗೆ ಕೊಡ್ತಿದ್ದೀರಲ್ಲ. ಅವಳು ಹೇಳಿದಂಗೆ ನಾವು ಕೇಳಬೇಕಾ?’ ಎಂದು ಎನ್ಎಸ್ಎಸ್ ಕ್ಯಾಂಪಿನಲ್ಲಿದ್ದ ಒಂದು ಹುಡುಗರ ಗುಂಪು ಕ್ಯಾತೆ ತೆಗೆದಿತ್ತು. ಆದರೆ ಎನ್ಎಸ್ಎಸ್ ಅಧಿಕಾರಿಗಳು ಹುಡುಗರ ಈ ಕಂಪ್ಲೇಂಟ್‌ಗೆ ಕಿವಿಗೊಡಲು ಸಿದ್ಧರಿರಲಿಲ್ಲ.

ಅವರಿಗೆ ಆಕೆಯ ಸಾಮರ್ಥ್ಯದ ಬಗ್ಗೆ ಸ್ಪಷ್ಟ ವಿಶ್ವಾಸವಿತ್ತು. ‘ಅವಳನ್ನ ಏನೂಂತ ತಿಳ್ಕಂಡಿದ್ದೀರಾ? ಎನ್ಎಸ್ಎಸ್‌ನಲ್ಲಿ ಡೆಲ್ಲಿ ತನಕ ಹೋಗಿ ಬಂದ ಬೆಸ್ಟ್‌ಕೆಡೆಟ್ ಅವಳು. ಆರ್.ಡಿ. ಪೆರೇಡ್‌ನಲ್ಲಿ ಭಾಗವಹಿಸಿ ಧ್ವಜವಂದನೆ ಅರ್ಪಿಸಿ ಬಂದವಳು. ನ್ಯಾಷನಲ್ ಲೆವೆಲ್ ಸ್ಪೋರ್ಟ್ಸ್ ಪ್ಲೇಯರ್. ಬೆಸ್ಟ್ ವಾಲೆಂಟಿಯರ್ ರಾಜ್ಯ ಪ್ರಶಸ್ತಿ ಪಡೆದವಳು. ನೀವು ನಾಲ್ಕಾರು ಹುಡುಗ್ರು ಮಾಡೋ ಕೆಲ್ಸಾನಾ ಅವಳೊಬ್ಬಳೇ ಮಾಡ್ತಾಳೆ. ಅಷ್ಟು ಪವರ್‌ಫುಲ್ ಅಂಡ್ ಡಿಸಿಪ್ಲಿನ್ ಗರ್ಲ್ ಆಕೆ. ಹುಡುಗಿ ಅನ್ನೊ ಏಕೈಕ ಕಾರಣ ಮುಂದಿಟ್ಟುಕೊಂಡು ಅಷ್ಟೊಂದು ಹಗುರವಾಗಿ ಮಾತಾಡ್ಬೇಡಿ. ನಾವೆಲ್ಲಾ ಸರಿಯಾಗಿ ಯೋಚ್ನೆ ಮಾಡೇ ಅವಳನ್ನ ಸ್ಪೆಶಲ್ ಕ್ಯಾಂಪಿನ ಮುಖ್ಯ ಲೀಡರ್ರಾಗಿ ಸೆಲೆಕ್ಟ್ ಮಾಡಿರೋದು’.‘ನಾಳೆ ಬೆಳಿಗ್ಗೆಯಿಂದ ನಿಮಗೆ ವರ್ಕ್ ಆರ್ಡರ್ ಕೊಡೋದು, ಡ್ರಿಲ್ ಮಾಡಿಸೋದು, ಕಾಶನ್ ಕೊಡೋದು ಅವಳೇನೆ. ನಾವು ಹುಡುಗ್ರು ಅನ್ನೋ ಧಿಮಾಕು ಕೈಬಿಟ್ಟು, ಈಗ ಹೋಗಿ ಸುಮ್ನೆ ಮಲ್ಕೊಳ್ರಿ. ಎಂಟ್ಹತ್ತು ಸ್ಟೇಟ್ ಕ್ಯಾಂಪ್ ಲೀಡರ್‌ಶಿಪ್ ನಿಭಾಯಿಸಿರೋ ಅವ್ಳ ಪವರ್ ಏನೂಂತ ನಿಮ್ಗೇನೆ  ನಾಳೆಯಿಂದ ಗೊತ್ತಾಗುತ್ತೆ. ನಾವು ಗಂಡಸ್ರು ಅನ್ನೊ ಅಹಂಕಾರನ ಇಲ್ಲೆಲ್ಲಾ ಇಟ್ಕೋಬೇಡಿ. ಅದನ್ನ ಸಾಧ್ಯವಾದರೆ ಇಲ್ಲಿರೋ ಕಸದ ಡಬ್ಬಿಗೆ ಬಿಸಾಕಿ ಹೋಗಿ.ಕ್ಯಾಂಪಲ್ಲಿ ಈ ಸ್ಟುಪಿಡ್ ಈಗೋಎಲ್ಲಾ ವರ್ಕ್‌ಔಟ್ ಆಗಲ್ಲ. ನಿಮ್ಮೊಳಗಿರುವ ಇಂಥ ಸಣ್ಣತನಗಳನ್ನು ಸುಟ್ಟು ಹಾಕೋದಕ್ಕೆ ಇಂತಹ ಸ್ಪೆಶಲ್ ಕ್ಯಾಂಪ್ ಅರೇಂಜ್ ಮಾಡೋದು. ಹುಡುಗೀರು ಅಂತ ಇನ್ನು ಮುಂದೆ ಯಾವಾಗಲೂ ಅಂಡರ್ ಎಸ್ಟಿಮೇಟ್ ಮಾಡ್ಬೇಡಿ. ನಾನೂ ಎರಡು ಹೆಣ್ಣು ಮಕ್ಕಳ ತಂದೆ ಇದ್ದೀನಿ. ಅರ್ಥವಾಯಿತಾ? ಈಗ ನೀವು ಹೊರಡಿ’ ಎಂದು ಹೇಳಿ ಅವರನ್ನೆಲ್ಲಾ ಅಲ್ಲಿಂದ ಓಡಿಸಿಬಿಟ್ಟರು.ಬಲು ಗತ್ತಿನಿಂದ ‘ಅವಳನ್ನು ಲೀಡರ್‌ಶಿಪ್‌ ನಿಂದ ಬದಲಾಯಿಸಿಯೇ ತೀರುತ್ತೇವೆ’ ಎಂದು ತೋಳು ಏರಿಸಿಕೊಂಡು ಹೋಗಿದ್ದ ಆ ಗೆಳೆಯರ ಗ್ಯಾಂಗ್ ಅಧಿಕಾರಿಗಳ ಖಡಕ್ ಮಾತಿನಿಂದ ಗರ ಬಡಿದವರಂತಾಗಿದ್ದರು. ಅಫ್ಟ್ರಾಲ್ ಒಂದು ಹುಡುಗಿಯ ಆಜ್ಞೆಯನ್ನು ಪಾಲಿಸುವುದು ಗಂಡಸರಾದ ತಮಗೆ ಅವಮಾನ. ಯಾವ ಕಾರಣಕ್ಕೂ ಇದನ್ನೆಲ್ಲಾ ಒಪ್ಪಬಾರದು. ತಲೆಮೇಲೆ ತಲೆ ಬಿದ್ದೋಗಲಿ ಬದಲಾವಣೆ ಮಾಡಿಯೇ ಬರುತ್ತೇವೆ ಎಂದು ಶಪಥ ಮಾಡಿ ಮೀಸೆ ತಿರುವಿ ಹೋದವರು ಮುಖ ಇಳಿಸಿಕೊಂಡು  ವಾಪಸಾದರು.ಒಂದು ಹುಡುಗಿ ನಮ್ಮನ್ನೆಲ್ಲ ಕಂಟ್ರೋಲ್ ಮಾಡ್ತಿದಾಳಲ್ಲ ಅನ್ನೋ ಸಂಗತಿ ಬಗ್ಗೆ ಹೆಚ್ಚಿನ ಸ್ವಯಂಸೇವಕರ್‍ಯಾರು ತಲೆ ಕೆಡಿಸಿಕೊಂಡಿರಲಿಲ್ಲ. ಅದರಲ್ಲಿ ಉಳ್ಳವರ ಮನೆಯಿಂದ ಬಂದಿದ್ದ ಕೆಲ ಉಂಡಾಡಿಗಳಿದ್ದರು. ಜೀವನದಲ್ಲಿ ಯಾವತ್ತೂ, ಯಾರ ಮಾತೂ ಕೇಳಿ ಅಭ್ಯಾಸವಿರದ ವಿಚಿತ್ರ ಹುಡುಗರವರು. ಅವರಷ್ಟೇ ಆಕೆಯ ನೇಮಕದಿಂದ ರೊಚ್ಚಿಗೆದ್ದಿ ದ್ದರು. ಅವರಿಗೆ ನಾವೆಲ್ಲಾ ‘ಬ್ಯಾಡ ಕಂಡ್ರೋ’ ಎಂದು ಬುದ್ಧಿಮಾತು ಹೇಳಿದರೂ ಅವರು ಕೇಳಲಿಲ್ಲ. ಆಕೆಯ ಮೇಲೆ ದೂರು ಕೊಡಲು ಹೋಗಿ ಸರಿಯಾಗಿ ನಿವಾಳಿಸಿಕೊಂಡು ಬಂದರು.ಈ ಹುಡುಗರ ಕೆಂಗಣ್ಣಿಗೆ ಗುರಿಯಾಗಿದ್ದ ಅವಳ ಹೆಸರು ಪರ್ವಿನ್. ಸದಾ ಟ್ರ್ಯಾಕ್ ಸೂಟಿನಲ್ಲಿ ಠೀಕುಠಾಕಾಗಿ ಇರುತ್ತಿದ್ದ ಅವಳನ್ನು ಬಹಳಷ್ಟು ಜನ ಬಜಾರಿಯೆಂದೇ ತಿಳಿದಿದ್ದರು. ಮುಖ ಮುಲಾಜಿಲ್ಲದೆ ಡ್ರಿಲ್ಲು ನೆಟ್ಟಗೆ ಮಾಡದ ಅಶಿಸ್ತಿನ ವಿದ್ಯಾರ್ಥಿಗಳನ್ನು ಆಕೆ ಹಿಡಿದು ಬಾರಿಸಿ ಕಲಿಸುತ್ತಿದ್ದಳು. ಕೆಲ ಹುಡುಗರ ಉಟಾಬೈಸ್ ತೆಗೆಸಿ ಹುಡುಗಿಯರೆಲ್ಲಾ ಗೊಳ್ಳೆಂದು ನಗುವಂತೆ ಮಾಡುತ್ತಿದ್ದಳು. ಹೀಗೆ ಅಲ್ಪ ಸ್ವಲ್ಪ ಮಾನ ಮರ್ಯಾದೆ ಕಳೆದುಕೊಂಡ ಹುಡುಗರು ಅವಳನ್ನು ವಿಲನ್ ಎಂಬಂತೆ ಕಂಡರು.ಪರ್ವಿನ್ ಒಂದು ಶಿಸ್ತು ತರುವ ದೃಷ್ಟಿಯಿಂದ ಇದನ್ನೆಲ್ಲಾ ನಿರ್ವಹಿಸುತ್ತಿದ್ದಳು. ಅದರೆ ಹುಡುಗರು ಇದನ್ನು ತಮ್ಮ ಮರ್ಯಾದೆಯ ವಿಷಯವನ್ನಾಗಿ ಮಾಡಿಕೊಳ್ಳುತ್ತಾ ಹೋದರು. ಹುಡುಗಿಯರ ಎದುರು ಚಾಕೊಲೇಟ್ ಹೀರೊಗಳಾಗಿ ಮಿಂಚಬೇಕೆಂದು ಬಯಸುವ ಪೋರರಿಗೆ ಅದೇ ಹುಡುಗಿಯರ ಎದುರಿಗೆ ಮಾನ ಹರಾಜಾದರೆ ಪಿತ್ತಕ್ಕೆ ಬೆಂಕಿ ಬೀಳುವುದು ಸಹಜವಲ್ಲವೇ? ಇಲ್ಲಿ ಆದದ್ದು ಅಂಥದ್ದೇ ಕಥೆ.ಅದು ರಾಜ್ಯಮಟ್ಟದ ಎನ್‌ಎಸ್‌ಎಸ್ ಶಿಬಿರ. ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿಕೊಂಡಿದ್ದ ದೊಡ್ಡ ಕೊಂಪೆ. ಇಂಥ ಕಡೆ ಸಮಯ ಪಾಲನೆ, ಶಿಸ್ತುಗಳಿಗೆ ಹೆಚ್ಚಿನ ಪ್ರಾಶಸ್ತ್ಯವಿರುತ್ತದೆ. ಇದನ್ನೆಲ್ಲಾ ನಿಭಾಯಿಸುವುದು ಸುಲಭದ ಕೆಲಸವಲ್ಲ. ಅಷ್ಟೂ ಶಿಬಿರಾರ್ಥಿಗಳನ್ನು ತನ್ನ ವಿಜ಼ಲ್‌ನಿಂದ ಕಂಟ್ರೋಲ್ ಮಾಡುತ್ತಿದ್ದ ಪರ್ವಿನ್ ನಮಗೆಲ್ಲಾ ಒಂದು ಆಶ್ಚರ್ಯವಾಗಿ ಕಾಣಿಸುತ್ತಿದ್ದಳು. ನಾವೆಲ್ಲಾ ಸೇರಿ ಮಂಡ್ಯದ ಡಿಸಿ ಕಚೇರಿ ಎದುರಿಗೊಂದು ಪಾರ್ಕ್ ನಿರ್ಮಿಸಬೇಕಿತ್ತು.ಅಲ್ಲಿ ಬಹಳಷ್ಟು ವಿದ್ಯಾರ್ಥಿಗಳು ಬೇಕೋಬೇಡವೋ ಎನ್ನುವಂತೆ ಉದಾಸೀನರಾಗಿ ಕೆಲಸ ಮಾಡುತ್ತಿದ್ದರು. ಕೆಲ ತಿಂದುಂಡು ಬೆಳೆದ ಮನೆಗಳಿಂದ ಬಂದಿದ್ದ ಸುಖ ಜೀವಿಗಳು ಪುಗ್ಸಟ್ಟೆ ಹರಟೆ ಕೊಚ್ಚಿಯೇ ಸುಸ್ತಾಗುತ್ತಿದ್ದರು. ಅದೇ ಹಳ್ಳಿಕಡೆಯಿಂದ ಬಂದಿದ್ದ ಹುಡುಗರಂತೂ ಬೆವರು ಕಿತ್ತು ಬರುವಂತೆ ಕೆಲಸ ಮಾಡುತ್ತಿದ್ದರು. ಪೇಟೆ ಕಾಲೇಜುಗಳಿಂದ ಬಂದಿದ್ದ ಕೆಲ ಲಲನಾ ಮಣಿಯರು ತಮ್ಮ ಮೇಕಪ್ ಎಲ್ಲಿ ಹಾಳಾಗುತ್ತದೋ ಎಂಬ ನಾಜೂಕಿನಲ್ಲೇ ವೈಯಾರ ಮಾಡಿಕೊಂಡು ಓಡಾಡುತ್ತಿದ್ದರು.  ಎಲ್ಲರಿಗೂ ಕೆಲಸ ಹಂಚುತ್ತಿದ್ದ ಪರ್ವಿನ್, ಮೇಲ್ವಿಚಾರಣೆ ನೋಡಿಕೊಳ್ಳಲು ಎನ್ಎಸ್ಎಸ್ ಅಧಿಕಾರಿಗಳು ಬರುತ್ತಿದ್ದಂತೆಯೇ ಚಾಮುಂಡಿ ಯಂತೆ ಹಾರೆ, ಗುದ್ದಲಿ ಹಿಡಿದುಕೊಂಡು ಕೆಲಸಕ್ಕೆ ನಿಲ್ಲುತ್ತಿದ್ದಳು. ಅವಳು ಕೆಲಸ ಮಾಡುತ್ತಿದ್ದ ರೀತಿ ಎಂಥವರನ್ನೂ ದಂಗುಬಡಿಸುತ್ತಿತ್ತು. ಐದಾರು ಹುಡುಗರು ಮಾಡುವಷ್ಟು ಕೆಲಸವನ್ನು ತಾನೊಬ್ಬಳೇ ಮಾಡುತ್ತಿದ್ದಳು. ಜೊತೆಗೆ ಎಲ್ಲರನ್ನೂ ಹುರಿದುಂಬಿಸುತ್ತಿದ್ದಳು. ರಫಿ, ಕಿಶೋರನ ಹಾಡುಗಳ ಹೇಳಿ ರಂಜಿಸುತ್ತಿದ್ದಳು. ನಕ್ಕು ಸಾಕಾಗುವಷ್ಟು ಜೋಕ್ಸ್ ಹೇಳುತ್ತಿದ್ದಳು.ಇವಳ ಲೀಡರ್‌ಶಿಪ್‌ ಅನ್ನು ವಿರೋಧಿಸಿದ್ದ ಹುಡುಗರ ಗುಂಪಿನ ಹತ್ತಿರ ತಾನಾಗಿಯೇ ಹೋದ ಪರ್ವಿನ್ ಬಲು ಬೇಗ ಅವರ ಸ್ನೇಹವನ್ನು ಸಂಪಾದಿಸಿದಳು. ಅವಳ ಮಾತು, ವರ್ತನೆ, ದಕ್ಷತೆಗಳಿಗೆ, ಮನಸೋತ ಅವರೆಲ್ಲ ಕೊನೆಕೊನೆಗೆ ಅವಳ ಅನುಯಾಯಿ ಗಳಾಗಿಬಿಟ್ಟರು. ತರಲೆ ಮಾಡುತ್ತಿದ್ದ, ಕ್ಯಾತೆ ತೆಗೆಯುತ್ತಿದ್ದ, ಉಡಾಫೆಯಿಂದ ನಡೆದುಕೊಳ್ಳುತ್ತಿದ್ದ ಹುಡುಗರೆಲ್ಲಾ ಎರಡು ಮೂರು ದಿನದಲ್ಲಿ ಅವಳ ಗೆಳೆಯರಾಗಿಬಿಟ್ಟರು.ಮೊದಲು ಒಗಟಂತೆ ಕಂಡ ಪರ್ವಿನ್ ಮಹಾನ್ ಶ್ರಮಜೀವಿ. ಮೇಲು ನೋಟದಲ್ಲಿ ಒರಟಳಂತೆ ಕಂಡರೂ ಅವಳದು ಮೃದು ಮಾತೃ ಹೃದಯ. ಕಿತ್ತು ತಿನ್ನುವ ಕಡು ಬಡತನದಿಂದ ಬಂದವಳು.  ಪಾರ್ಟ್‌ಟೈಂ ಕೆಲಸ ಮಾಡುತ್ತಾ ಓದುತ್ತಿದ್ದವಳು. ತನ್ನ ದುಡಿಮೆಯಿಂದ ಮನೆಯನ್ನು ಸಾಕುವ ಜವಾಬ್ದಾರಿಯನ್ನು ಚಿಕ್ಕ ವಯಸ್ಸಿನಲ್ಲೇ ಹೊತ್ತಿದ್ದವಳು. ಮನೆಯಲ್ಲಿ ಓದುವ ತಂಗಿಯರಿದ್ದರು. ಅವರ ಜವಾಬ್ದಾರಿಯೂ ಇವಳ ಹೆಗಲ ಮೇಲಿತ್ತು. ಅಪ್ಪ ಅಮ್ಮ ಕಾಯಿಲೆಗಳ ಕಾರಣದಿಂದ ಕೃಶರಾಗಿದ್ದರು.ಹೀಗಾಗಿ, ಬಿಡುವಿಲ್ಲದೆ ದುಡಿಮೆ ಮಾಡುವುದು ಅವಳಿಗೆ ಬಾಲ್ಯದಿಂದಲೇ ಅಭ್ಯಾಸವಾಗಿ ಹೋಗಿತ್ತು. ಅವಮಾನ, ಅಸಹಾಯಕತೆಗಳಿಂದ ಬೆಳೆದು ಬಂದ ಅವಳಿಗೆ ಬೇಸರವೆನ್ನುವುದು ಗೊತ್ತೇ ಇರಲಿಲ್ಲ. ಗೊತ್ತಿದ್ದರೂ ತೋರಿಸಿಕೊಳ್ಳುತ್ತಿರಲಿಲ್ಲ. ಒಂದು ಸಣ್ಣ ನಗೆಯಿಂದ ಅವೆಲ್ಲಾ ಮರೆಯುವ ಶಕ್ತಿ ಅವಳಿಗಿತ್ತು. ಯಾವತ್ತೂ, ಯಾವುದಕ್ಕೂ ಆಕೆ ಹೆದರುತ್ತಿರಲಿಲ್ಲ. ಅದಮ್ಯವಾದ ಚೈತನ್ಯ, ಸಾಧಿಸಬೇಕೆಂಬ ಛಲಗಳು ಅವಳ ರಕ್ತದಲ್ಲೇ ಕುಟ್ಟಿಕುಟ್ಟಿ ತುಂಬಲಾಗಿತ್ತು. ಹೆಣ್ಣು ಮಕ್ಕಳು ಹೀಗೆ, ಧೀರರಾಗಿ ಪರ್ವೀನ್ ಥರ ಇರಬೇಕು ಎಂದು ಯಾವಾಗಲೂ ಅನ್ನಿಸುತ್ತದೆ.ಕಷ್ಟಗಳು, ಸಮಸ್ಯೆಗಳು ಹೆಣ್ಣುಮಕ್ಕಳಿಗೆ ಇದ್ದೇ ಇರುತ್ತವೆ. ಅದನ್ನು ಮೀರಿ ಬದುಕುವ ಧೀರೋದತ್ತ ಶಕ್ತಿಯೂ ಅವರಿಗಿರುತ್ತದೆ ಎನ್ನುವುದಕ್ಕೆ ಪರ್ವಿನ್ ಒಂದು ಉದಾಹರಣೆಯಾಗಿದ್ದಳು. ನಮ್ಮ ಕಾಲೇಜಿನ ಕ್ರೀಡಾ ಸ್ಫರ್ಧೆಗಳ ಸಮಯದಲ್ಲೂ ಮೈದಾನಕ್ಕೆ ಬಂದು ಸಹಜವಾಗಿ ಆಟವಾಡಲು ಹೆಣ್ಣು ಮಕ್ಕಳು ಹೆದರಿ ಹಿಂದೆ ಸರಿಯುವುದನ್ನು ನಾನು ನೋಡಿದ್ದೇನೆ. ಎಲ್ಲಿ ಜನ ತನ್ನನ್ನು ಬಜಾರಿ ಎಂದುಕೊಳ್ಳುವರೋ? ಎಂದು ಹೆದರಿ ಮುದ್ದೆಯಾಗುವ ಹೆಣ್ಣುಮಕ್ಕಳೇ ಈಗ ಜಾಸ್ತಿ.ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಮೀನಾಕ್ಷಿ ಎಂಬ ಹಳ್ಳಿಯ ಕಾಲೇಜಿನ ಹುಡುಗಿಯೊಬ್ಬಳು ಬಂದಿದ್ದಳು. ರನ್ನಿಂಗ್ ರೇಸ್ ಸ್ಪರ್ಧೆಗೆ ಆಕೆ ತಾಲ್ಲೂಕಿನಿಂದ ಆಯ್ಕೆಯಾಗಿದ್ದಳು. ಅವಳ ಕಾಲಿನಲ್ಲಿ ಕಿತ್ತೋಗಿ ಹೊಲಿಗೆ ಹಾಕಿಸಿಕೊಂಡ ಚಪ್ಪಲಿ ಬಿಟ್ಟರೆ ಬೇರೇನೂ ಇರಲಿಲ್ಲ. ಅಲ್ಲಿ, ದೊಡ್ಡದೊಡ್ಡ ಕಾಲೇಜಿನ ಮಕ್ಕಳು ನೈಕ್ ಶೂಗಳನ್ನು, ಟ್ರ್ಯಾಕ್ ಸೂಟ್‌ಗಳನ್ನು ಹಾಕಿಕೊಂಡು ಬಂದಿದ್ದರು. ರನ್ನಿಂಗ್ ಟ್ರ್ಯಾಕಿನಲ್ಲಿ ಬರಿಗಾಲಿನಲ್ಲಿ, ಹಳೇ ಚೂಡಿದಾರದಲ್ಲಿ ನಿಂತಿದ್ದ ಮೀನಾಕ್ಷಿಯನ್ನು ನೋಡಿ ಅಲ್ಲಿದ್ದ ಕೆಲವರು ಮುಸಿಮುಸಿ ನಕ್ಕರು.ಟ್ರ್ಯಾಕ್ ಸೂಟಿನ ಹೈಕಳು ಅವಳನ್ನು ಅಸ್ಪೃಶ್ಯಳಂತೆ ಕೆಕ್ಕರಿಸಿ ನೋಡಿದರು. ಅದಕ್ಕೂ ತನಗೇನೂ ಸಂಬಂಧವೇ ಇಲ್ಲ ಎನ್ನುವಂತೆ ನಿಂತಿದ್ದ ಮೀನಾಕ್ಷಿ ಗುರಿಯ ಕಡೆಗೆ ತನ್ನ ಗಮನ ಇಟ್ಟಿದ್ದಳು. ಓಟದ ಸ್ಪರ್ಧೆಯಲ್ಲಿ ಬರಿಗಾಲಲ್ಲೇ ಆಕೆ ಜಿಂಕೆಯಂತೆ ಓಡಿದಳು. ಠಾಕುಠೀಕಾಗಿ ಬಂದಿದ್ದ ಹೈಫೈ ಸ್ಪರ್ಧಿಗಳನ್ನೆಲ್ಲಾ ಹಿಂದೆ ಬಿಸಾಡಿದ ಹಳ್ಳಿಯ ಈ ಧೀರೆ ಅನಾಯಾಸವಾಗಿ ಮೊದಲಿಗಳಾಗಿ ಬಂದು ನಿಂತಿದ್ದಳು.‘ಗುಲ್ಕೋಸ್ ಪುಡಿ ತಿಂದು ನೀರು ಕುಡಿಯಮ್ಮ’ ಎಂದು ಕೊಡಲು ಹೋದರೆ ‘ಬೆಳಿಗ್ಗೆಯಿಂದ ಏನೂ ತಿಂದಿಲ್ಲ ಸಾರ್ ತಿಂಡಿ ಇದ್ರೆ ಕೊಡ್ಸಿ’ ಎಂದಳು. ಅವಳು ಹಾಗೆ ಹೇಳಿದಾಗ ಮಧ್ಯಾಹ್ನ ಒಂದು ಗಂಟೆಯಾಗಿತ್ತು. ಕೇಳಿದ ನನಗೇ ಕಣ್ಣೀರು ತಡೆಯಲಾಗಲಿಲ್ಲ. ಹಳ್ಳಿಯ ಮಕ್ಕಳ ಗಟ್ಟಿತನಕ್ಕೆ ಮೀನಾಕ್ಷಿ ಸಾಕ್ಷಿಯಾಗಿದ್ದಳು. ಯಾವ ಸೌಲಭ್ಯವೂ ಇಲ್ಲದೆ, ಹೊಟ್ಟೆಗೆ ಊಟ, ನೆಟ್ಟಗಿನ ಬಟ್ಟೆ, ಕೊನೆಗೆ ಕಾಲಲ್ಲಿ ಚಪ್ಪಲಿಯೂ ಇಲ್ಲದೆ ಚೆನ್ನಾಗಿ ಓದಿರುವ, ಕ್ರೀಡೆಯಲ್ಲೂ ಸೈ ಎನಿಸಿಕೊಂಡ ಅನೇಕ ಹಳ್ಳಿ ಹೆಣ್ಣು ಮಕ್ಕಳ ಆತ್ಮವಿಶ್ವಾಸದ ಶಕ್ತಿಯನ್ನು ನೋಡಿ ನಾನು ವಿಸ್ಮಿತನಾಗಿದ್ದೇನೆ.ಇವತ್ತು ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳ ನಡುವಿನ ಲಿಂಗ ತಾರತಮ್ಯವನ್ನು ದೂರ ಮಾಡುವ ಕೆಲಸವನ್ನು ಎನ್ಎಸ್ಎಸ್ ಹಾಗೂ ಎನ್‌ಸಿಸಿಗಳು ಸಶಕ್ತವಾಗಿ ಮಾಡುತ್ತಿವೆ. ವಿದ್ಯಾರ್ಥಿಗಳ ಸಿಟ್ಟು, ಸೆಡವು, ಸಣ್ಣಪುಟ್ಟ ತಪ್ಪು ಕಲ್ಪನೆಗಳಿಂದ ಶುರುವಾಗುವ ಎನ್ಎಸ್ಎಸ್ ಕ್ಯಾಂಪ್‌ಗಳು ಕೊನೆಗೆ ಸ್ನೇಹ, ವಿಶ್ವಾಸ ಮತ್ತು ಪ್ರೀತಿಯ ಕಣ್ಣೀರಿನಿಂದ ಕೊನೆಯಾಗುತ್ತವೆ. ಮಕ್ಕಳ ಭಾವುಕ ಮನಸ್ಸು ಕರಗಿ, ನೀರಾಗಿ, ತಿಳಿಯಾಗುವುದು ನೋಡಿ ಹೆಮ್ಮೆ ಎನಿಸುತ್ತದೆ.ಎನ್ಎಸ್ಎಸ್ ಕ್ಯಾಂಪಿನ ಮೊದಲೆರಡು ದಿನ ಪರಸ್ಪರ ಅಣಕಿಸಿಕೊಂಡು, ಹಾವು-ಮುಂಗುಸಿಗಳಂತೆ ಕಿತ್ತಾಡಿಕೊಳ್ಳುವ ಮಕ್ಕಳು ಕ್ಯಾಂಪಿನ ಕೊನೆ ಕೊನೆಗೆ ಬಂದಾಗ ಒಡಹುಟ್ಟಿದವರಿಗಿಂತಲೂ ಮಿಗಿಲಾದ ಗೆಳೆಯರಾಗಿರುತ್ತಾರೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದ ಕ್ಯಾಂಪ್‌ಗಳಲ್ಲಿ ಬೇರೆ ಭೂ ಪ್ರದೇಶಗಳಿಂದ ಬಂದ ಯುವ ಮನಸ್ಸುಗಳು ಗೋಳಾಡಿ, ಆಟೋಗ್ರಾಫ್ ಬರೆಸಿಕೊಂಡು ಕೊನೆಗೆ ಹೇಳುವ ಟಾಟಾದಲ್ಲಿ ನೋವು ಮಡುಗಟ್ಟಿ ಹೋಗಿರುತ್ತದೆ. ನಿಜಕ್ಕೂ ಅದೊಂದು ಭಾವುಕ ಕ್ಷಣ.ರಾಷ್ಟ್ರೀಯ ಸೇವಾ ಯೋಜನೆಯನ್ನು ಬಲು ಹತ್ತಿರದಿಂದ ನೋಡಿರುವ ನನಗೆ ಈ ಅನುಭವ ಸಾಕಷ್ಟು ಸಲವಾಗಿದೆ. ಇನ್ನೂ ಆಶ್ಚರ್ಯದ ಹುಡುಗಿ ಎನಿಸಿದ್ದ ಪರ್ವಿನ್ ಬಹಳ ವರ್ಷದ ನಂತರ ಒಂದು ದಿನ ಬೆಳಿಗ್ಗೆ ಸ್ಟೇಡಿಯಂನಲ್ಲಿ ಸಿಕ್ಕಳು. ಅವಳಿದ್ದ ಊರಿಗೆ ನಾನು ಪರೀಕ್ಷಾ ಕರ್ತವ್ಯಕ್ಕೆ ಹೋಗಿದ್ದೆ. ಟ್ರ್ಯಾಕ್ ಸೂಟಿನಲ್ಲಿ ಜಾಗಿಂಗ್ ಮಾಡುತ್ತಿದ್ದಳು. ‘ನನ್ನ ಪರಿಚಯ ಸಿಕ್ಕಿತಾ’? ಎಂದೆ. ‘ಹೆಂಗಿದ್ದೀಯೋ ಬಡ್ಡಿ ಮಗನೇ’ ಎಂದು ಬೆನ್ನಿಗೆ ಗುದ್ದಿದಳು. ಅದೇ ನಗು, ಅದೇ ಉತ್ಸಾಹ. ‘ನೀನು ಹೇಗಿದ್ದೀಯಾ’? ಎಂದೆ. ಮುಖ ಸಣ್ಣಗೆ ಮಾಡಿಕೊಂಡಳು. ಅವಳ ಕಣ್ಣು ತುಂಬಿಕೊಂಡವು.ತುಟಿ ಕಚ್ಚಿ ನಡುಗುತ್ತಾ, ‘ನಾನು ಮನಸಾರೆ ಪ್ರೀತಿಸಿ ಮದುವೆಯಾದ ಆ ಬಡ್ಡೀ ಮಗ, ಮೋಸ ಮಾಡ್ದ ಕಣೋ. ಲೈಫಿನ ಅರ್ಧ ದಾರಿಯಲ್ಲೇ ನನ್ನ ಬಿಟ್ಟು ಹೋದ. ನನಗೊಬ್ಬ ಮಗನಿದ್ದಾನೆ. ಅವನಿಗಾಗಿ ನಾನೂ ಬದುಕ್ತಾ ಇದ್ದೀನಿ. ಒಂದು ಪ್ರೈವೇಟ್ ಶಾಲೆಯಲ್ಲಿ ಡ್ರಿಲ್ ಟೀಚರ್ ಆಗಿದ್ದೀನಿ. ನನ್ನ ತಂಗಿಯರ ಬದುಕನ್ನೂ ನಾನೇ ನೋಡಿಕೊಳ್ಳುತ್ತಿದ್ದೇನೆ. ನನಗಿಂತ ಕಷ್ಟ ದಲ್ಲಿರೋರನ್ನ ನೋಡಿ ಸದ್ಯ ನಾನು ಹಂಗಿಲ್ಲವಲ್ಲ ಅಂತ ಸಮಾಧಾನ ಮಾಡಿಕೊಳ್ತಾ ಇರ್ತೀನಿ. ಮೊದಲಿದ್ದ ಭಂಡ ಧೈರ್ಯ ಈಗಿಲ್ಲ ಕಣೋ’ ಎಂದು ಕಹಿಯಾಗಿ ನಕ್ಕಳು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry