ಹೀಗೆಲ್ಲ ಮಾಡಿ ಮಹಾದಾಯಿ ನೀರು ಪಡೆಯಲು ಸಾಧ್ಯವಿಲ್ಲ...

7

ಹೀಗೆಲ್ಲ ಮಾಡಿ ಮಹಾದಾಯಿ ನೀರು ಪಡೆಯಲು ಸಾಧ್ಯವಿಲ್ಲ...

Published:
Updated:
ಹೀಗೆಲ್ಲ ಮಾಡಿ ಮಹಾದಾಯಿ ನೀರು ಪಡೆಯಲು ಸಾಧ್ಯವಿಲ್ಲ...

ಇದು ಗೋಡೆ ಮೇಲಿನ ಬರಹ. ಅದು ಸ್ಪಷ್ಟವಾಗಿದೆ, ಮತ್ತು ಶುದ್ಧ ಕನ್ನಡದಲ್ಲಿ ಇದೆ. ನಾವು ಓದಬೇಕು ಮತ್ತು ಅರ್ಥ ಮಾಡಿಕೊಳ್ಳಬೇಕು. ಅದಕ್ಕೆಲ್ಲ ವ್ಯವಧಾನ ಬೇಕು ಮತ್ತು ವಿವೇಕ ಬೇಕು. ಈಗ ನಾವು ಉದ್ವೇಗದಲ್ಲಿ ಇದ್ದೇವೆ.ಏಕೆಂದರೆ ನೆಲ ಹಾಗೂ ಜಲ ವಿಚಾರದಲ್ಲಿ ನಮಗೆ ಅನ್ಯಾಯವಾಗಿದೆ ಹಾಗೂ ನಿರಂತರವಾಗಿ ಅನ್ಯಾಯವಾಗುತ್ತಿದೆ ಎಂಬ ಭಾವನೆ ನಮ್ಮನ್ನು ಸುಡುತ್ತಿದೆ. ಸುಡುವ ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ದೇವೆ ಹಾಗೂ ಸಿಕ್ಕ ಸಿಕ್ಕ ಕಡೆಗೆ ಕಲ್ಲು ತೂರುತ್ತಿದ್ದೇವೆ, ಬೆಂಕಿ ಹಚ್ಚುತ್ತಿದ್ದೇವೆ.ಈಗಲಂತೂ ನಮಗೆ  ಎಷ್ಟು ಬೇಗ ಸಿಟ್ಟು ಬರುತ್ತಿದೆ ಎಂದರೆ ಸಣ್ಣ ಸಣ್ಣ ಕಾರಣಕ್ಕೂ ಬಂದ್‌ಗೆ ಕರೆ ಕೊಡುತ್ತಿದ್ದೇವೆ ಹಾಗೂ ಅದು ಹೇಗೆ  ಯಶಸ್ವಿಯಾಗುವುದಿಲ್ಲ ಎಂದು ನೋಡಿಯೇ ಬಿಡೋಣ ಎಂದು ಹಟಕ್ಕೆ ಬೀಳುತ್ತಿದ್ದೇವೆ.ನಿಜ, ಅನ್ಯಾಯವಾದಾಗ ಪ್ರತಿಭಟಿಸದೇ ಇದ್ದರೆ ಇನ್ನಷ್ಟು ಅನ್ಯಾಯವಾಗುತ್ತದೆ ಎಂದು ವಾದಿಸಬಹುದು ಅಥವಾ ನಮ್ಮ ಆಕ್ರೋಶವನ್ನು ಹೇಗೆ ವ್ಯಕ್ತಪಡಿಸುವುದು ಎಂದು ಕೇಳಬಹುದು.ಅನ್ಯಾಯವನ್ನು ಸಹಿಸಿಕೊಳ್ಳಬಾರದು ಮತ್ತು ಅದನ್ನು ಪ್ರತಿಭಟಿಸಬೇಕು ಎಂಬುದರಲ್ಲಿ ಎರಡು ಅಭಿಪ್ರಾಯ ಇರಲಾರದು. ಆದರೆ, ನಾವು ಈಗ ಪ್ರತಿಭಟಿಸುತ್ತಿರುವ ರೀತಿ ಸರಿಯೇ ಎಂದು ಒಂದು ಸಾರಿ ಪ್ರಶ್ನಿಸಿಕೊಳ್ಳಬೇಕು ಮತ್ತು ನಾವು ಈಗ ಮಾಡುತ್ತಿರುವ ಪ್ರತಿಭಟನೆಯಿಂದ ನಮಗೆ ಖಂಡಿತವಾಗಿಯೂ ನ್ಯಾಯ ಸಿಗುತ್ತದೆಯೇ ಎಂದೂ ಕೇಳಿಕೊಳ್ಳಬೇಕು.ನಮಗೆ ತಿಳಿಯದೇ ಇದ್ದರೆ ಯಾರಾದರೂ ತಿಳಿವಳಿಕಸ್ಥರ ಬಳಿಯಾದರೂ ಕೇಳಿ ತಿಳಿದುಕೊಳ್ಳಬೇಕು. ಇನ್ನಷ್ಟು ಲಂಬಿಸದೇ ವಿಷಯಕ್ಕೆ ಬರುವುದಾದರೆ ಮಹಾದಾಯಿ ನದಿ ನೀರಿಗಾಗಿ ಬೇಡಿಕೆ ಇಟ್ಟು ನಾವು ಈಗ ನಡೆಸುತ್ತಿರುವ ಹೋರಾಟಕ್ಕೆ ಒಂದು ದಿಕ್ಕು ಬೇಕಾಗಿದೆ, ಮಾರ್ಗದರ್ಶನ ಬೇಕಾಗಿದೆ. ಈಗ ಅದು ನಡೆಯುತ್ತಿರುವ ರೀತಿ ಸರಿಯಿಲ್ಲ.ಮಹಾದಾಯಿ ನದಿ ನೀರಿಗಾಗಿ ನಡೆಯುತ್ತಿರುವ ಹೋರಾಟದ ಕೇಂದ್ರ ಧಾರವಾಡ ಜಿಲ್ಲೆಯ ನವಲಗುಂದದಲ್ಲಿ ಇದೆ. ಪಕ್ಕದ ಗದಗ ಜಿಲ್ಲೆಯ ನರಗುಂದದಲ್ಲಿಯೂ ಚಳವಳಿಗೆ ಸಾಕಷ್ಟು ಬಲ ಇದೆ. ಸುತ್ತಮುತ್ತಲಿನ ಸವದತ್ತಿ, ರಾಮದುರ್ಗ, ಬಾದಾಮಿ, ಗದಗ, ಧಾರವಾಡ, ಹುಬ್ಬಳ್ಳಿ ಮುಂತಾದ ಊರುಗಳಲ್ಲಿ ಚಳವಳಿಯ ಕಾವು ಇದ್ದರೂ ಅದು ನರಗುಂದ ಹಾಗೂ ನವಲಗುಂದದಲ್ಲಿ ಇರುವಷ್ಟು ಪ್ರಖರವಾಗಿ ಇಲ್ಲ.ಮಹಾದಾಯಿ ನದಿಯಿಂದ ಮಲಪ್ರಭಾ ನದಿಯ ಕೊಳ್ಳಕ್ಕೆ 7.5 ಟಿಎಂಸಿ ಅಡಿ ನೀರನ್ನು ತಿರುಗಿಸಿಕೊಳ್ಳಲು ಅನುಮತಿ ಕೊಡಿಸಬೇಕು ಎಂದು ಕಳೆದ ಒಂದು ವರ್ಷದಿಂದ ಹೋರಾಟ ನಡೆದಿದೆ.ಹೋರಾಟಗಾರರ ಆಗ್ರಹ ಮತ್ತು ಸರ್ವ ಪಕ್ಷಗಳ ಸಭೆಯ ನಿರ್ಣಯಕ್ಕೆ ಮಣಿದು ನೀರು ಬಿಡಿಸುವಂತೆ ಕೋರಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ನ್ಯಾಯಮೂರ್ತಿ ಜೆ.ಎಂ.ಪಾಂಚಾಲ್‌ ನೇತೃತ್ವದ ಮೂವರು ಸದಸ್ಯರ ‘ಮಹಾದಾಯಿ ನದಿ ನೀರು ಹಂಚಿಕೆ ನ್ಯಾಯಮಂಡಳಿ’ ತಿರಸ್ಕರಿಸಿದೆ.ತಿರಸ್ಕರಿಸಿದ ಸುದ್ದಿ ಬಂದ ದಿನವೇ ನವಲಗುಂದ ಮತ್ತು ನರಗುಂದದ ಜನರು ಹಿಂಸಾಚಾರಕ್ಕೆ ಇಳಿದು ರಾಷ್ಟ್ರೀಕೃತ ಬ್ಯಾಂಕುಗಳಿಗೆ, ಕೇಂದ್ರ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್‌ ಕಚೇರಿಗೆ ಹಾಗೂ ರಾಜ್ಯ ಸರ್ಕಾರದ ಕಚೇರಿಗಳಿಗೆ ಬೆಂಕಿ ಹಚ್ಚಿ ಪೀಠೋಪಕರಣ ಬಿಸಾಕಿ, ಧ್ವಂಸ ಮಾಡಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಬಂದ್ ಕರೆ ಕೊಡಲು ಸದಾ ತುದಿಗಾಲ ಮೇಲೆ ನಿಂತಿರುವ ಕನ್ನಡ ಚಳವಳಿಗಾರರು ರಾಜ್ಯ ಬಂದ್‌ಅನ್ನೂ ಶನಿವಾರ ಯಶಸ್ವಿಯಾಗಿ ಆಚರಿಸಿದ್ದಾರೆ. ನರಗುಂದ ಮತ್ತು ನವಲಗುಂದ ಹಾಗೂ ಸುತ್ತಮುತ್ತಲಿನ ರೈತರ ಆಕ್ರೋಶ ಅರ್ಥ ಮಾಡಿಕೊಳ್ಳುವಂಥದು.ಅವರ ಹೊಲಗಳಿಗೆ ಈಗ ಹನಿ ನೀರು ಬಿಟ್ಟುಕೊಳ್ಳಲೂ ಅವರು ಒಣಗಿ ನಿಂತ ಮಲಪ್ರಭಾ ಕಾಲುವೆಗಳ ಕಡೆಗೆ ನೋಡಬೇಕು. ಸವದತ್ತಿ ತಾಲ್ಲೂಕಿನ ನವಿಲುತೀರ್ಥ ಬಳಿ ಮಲಪ್ರಭಾ ನದಿಗೆ 1973–74ರಲ್ಲಿ ಅಣೆಕಟ್ಟು ಕಟ್ಟಿದ ನಂತರ ಇದುವರೆಗೆ ಮೂರು ಅಥವಾ ನಾಲ್ಕು ಸಾರಿ ಮಾತ್ರ ಅದು ತುಂಬಿದೆ.ಅದರ ಸಾಮರ್ಥ್ಯ 34.34 ಟಿಎಂಸಿ ಅಡಿ. ಕಳೆದ ಅಕ್ಟೋಬರ್‌ನಲ್ಲಿ ಮಧ್ಯಂತರ ಅರ್ಜಿ ಸಲ್ಲಿಸುವ ಸಮಯದಲ್ಲಿ ಜಲಾಶಯದಲ್ಲಿ ಇದ್ದ ನೀರಿನ ಪ್ರಮಾಣ ಕೇವಲ 11.42 ಟಿಎಂಸಿ ಅಡಿ. ಕಳೆದ ನಾಲ್ಕು ದಶಕಗಳಲ್ಲಿ ಒಟ್ಟು ಸಾಮರ್ಥ್ಯದ ಸರಾಸರಿ ಶೇಕಡಾ 50ರಷ್ಟು ಪ್ರಮಾಣದಲ್ಲಿ ಮಾತ್ರ ಜಲಾಶಯಕ್ಕೆ ನೀರು ಬಂದಿದೆ. ಕೆಲವು ಸಾರಿ ಅಷ್ಟು ನೀರೂ ಹರಿದು ಬಂದಿಲ್ಲ. ಅಂದರೆ ಒಟ್ಟು ಈ ಯೋಜನೆಯೇ ಒಂದು ರೀತಿಯಲ್ಲಿ ನಿರರ್ಥಕವಾದುದು.ನಾನು ನನ್ನ ಪದವಿ ಶಿಕ್ಷಣವನ್ನು ರಾಮದುರ್ಗ ಪಟ್ಟಣದಲ್ಲಿ ಮುಗಿಸಿದವನು. ಪ್ರತಿ ಮಳೆಗಾಲದಲ್ಲಿ ಮಲಪ್ರಭೆ ತುಂಬಿ ಊರೊಳಗೆ ನುಗ್ಗುವ ದೃಶ್ಯ ಇನ್ನೂ ನನ್ನ ಕಣ್ಣುಗಳಲ್ಲಿ ತುಂಬಿ ನಿಂತಿದೆ. ವಿಶಾಲವಾಗಿ ಹರಿಯುತ್ತಿದ್ದ ನದಿಯ ಮರಳು ತೀರಗಳು, ದಂಡೆಯಲ್ಲಿ ಮಹಿಳೆಯರು ಬಟ್ಟೆ ಸ್ವಚ್ಛ ಮಾಡುತ್ತಿದ್ದುದು, ರಟ್ಟೆಯಲ್ಲಿ ಬಲ ಇದ್ದವರು ಮುಳುಗು ಹೊಡೆಯುತ್ತ ಈಜುತ್ತಿದ್ದುದು ಕಣ್ಣಿಗೆ ಕಟ್ಟಿದಂತಿದೆ.ಈಗ ಅದೇ ಪಟ್ಟಣದಲ್ಲಿ ಮಲಪ್ರಭೆ ಚರಂಡಿ ನೀರಿಗಿಂತ ಕೆಟ್ಟದಾಗಿ ಹರಿಯುತ್ತಿದ್ದಾಳೆ. ನಮ್ಮ ಬೃಹತ್‌ ನೀರಾವರಿ ಯೋಜನೆಗಳು ಹೇಗೆ ನಮ್ಮ ನದಿ ಹರಿವನ್ನು ಹಾಳುಗೆಡವುತ್ತವೆ ಎಂಬುದಕ್ಕೆ ನವಿಲುತೀರ್ಥದ ಬಳಿ ನಿರ್ಮಿಸಿರುವ ಜಲಾಶಯಕ್ಕಿಂತ ಕೆಟ್ಟ ನಿದರ್ಶನ ಇನ್ನೊಂದು ಇರಲು ಸಾಧ್ಯವಿಲ್ಲ.ಅದು ಮುಖ್ಯವಾಗಿ ನೀರಾವರಿ ಉದ್ದೇಶಕ್ಕೆ ನಿರ್ಮಿಸಿದ ಜಲಾಶಯವಾದರೂ ಅದರಿಂದ ಹುಬ್ಬಳ್ಳಿ–ಧಾರವಾಡದಂಥ ದೈತ್ಯ ನಗರಗಳ ಕುಡಿಯುವ ನೀರಿಗೂ ಅದೇ ಜಲಾಶಯದ ನೀರು ಆಧಾರವಾಗಿದೆ.ದಂಡೆಯಲ್ಲಿ ಇರುವ ಇತರ ಊರುಗಳಿಗೂ ಕುಡಿಯಲು ಸಹಜವಾಗಿಯೇ ನದಿಯಲ್ಲಿನ ಚೂರು ಪಾರು ನೀರೇ ಬೇಕಾಗುತ್ತದೆ. ಹೀಗೆ ಜಲಾಶಯದಲ್ಲಿನ ನೀರು ಕುಡಿಯುವ ಉದ್ದೇಶಕ್ಕೆ ಮತ್ತು ಸುತ್ತಮುತ್ತಲಿನ ಕಾರ್ಖಾನೆಗಳಿಗೆ ಬಳಕೆಯಾಗುತ್ತಿರುವುದರಿಂದ ರೈತರಿಗೆ ಮತ್ತಷ್ಟು ಸಮಸ್ಯೆಯಾಗಿದೆ. ಇಂಥ ಸಂದರ್ಭದಲ್ಲಿ ಹುಟ್ಟಿಕೊಂಡುದು ಕಳಸಾ ಬಂಡೂರಿ ನಾಲಾ ಯೋಜನೆ.ಮಹಾದಾಯಿ ನದಿಯ ನೀರನ್ನು ಮಲಪ್ರಭಾ ನದಿಗೆ ತಿರುಗಿಸಿಕೊಳ್ಳಲು ಕಳಸಾ ಬಳಿ ನದಿ ತಿರುವು ಯೋಜನೆ ರೂಪಿಸಲಾಗಿದೆ. ರಾಜ್ಯದಲ್ಲಿ ಇದು ತನ್ನ ಮಾದರಿಯಲ್ಲಿ ಮೊದಲ ಯೋಜನೆ.ಮಹಾದಾಯಿ ನದಿಯ ಹರಿವಿಗೆ ಸಂಬಂಧಿಸಿದಂತೆ ನಾವು ಮೇಲಿನ ರಾಜ್ಯವಾಗಿದ್ದರೂ ಆ ನದಿ ತನ್ನ ಜೀವನದಿಯೂ ಆಗಿರುವುದರಿಂದ ಪಕ್ಕದ, ನದಿ ಹರಿವಿನ ದೃಷ್ಟಿಯಿಂದ ಕೆಳಗಿನ, ಗೋವಾ ರಾಜ್ಯ ಆಕ್ಷೇಪ ಎತ್ತಿದೆ. ಗೋವಾ ರಾಜ್ಯದ ಆಕ್ಷೇಪವನ್ನು ನ್ಯಾಯಮಂಡಳಿ ಎತ್ತಿ ಹಿಡಿದಿದೆ. ಈಗಿನ ಉಗ್ರ ಪ್ರತಿಭಟನೆಯ ಹಿನ್ನೆಲೆಯಿದು.ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳಿಗೆ ಬೆಂಕಿ ಹಚ್ಚುವವರು, ಪೀಠೋಪಕರಣ ಧ್ವಂಸ  ಮಾಡುವವರು, ರಾಜ್ಯ ಬಂದ್‌ ಕರೆ  ಕೊಡುವವರು ಒಂದು ಮೂಲಭೂತ ವಿಷಯವನ್ನು ಅರ್ಥ ಮಾಡಿಕೊಳ್ಳಬೇಕು: ಇಂಥ ಹಿಂಸಾಚಾರದಿಂದ, ಪುಂಡಾಟಿಕೆಯಿಂದ ನಾವು ನ್ಯಾಯವನ್ನು ಗಳಿಸಲು ಸಾಧ್ಯವಿಲ್ಲ.  ಅದರಲ್ಲೂ ನ್ಯಾಯಾಲಯಗಳು ಮತ್ತು ನ್ಯಾಯಮಂಡಳಿಗಳು ಇಂಥ ಹಿಂಸಾಚಾರಕ್ಕೆ ಬಗ್ಗುವುದಿಲ್ಲ. ಬಗ್ಗಬಾರದು ಕೂಡ.ಬಗ್ಗಿದರೆ ಅವು ನಿಜವಾದ ನ್ಯಾಯದಾನ ಮಾಡಲು ಸಾಧ್ಯವಾಗುವುದಿಲ್ಲ. ಏಕೆಂದರೆ ನ್ಯಾಯ ಎಂಬುದು ಒಂದು ನಾಣ್ಯ ಇದ್ದಂತೆ. ಅದಕ್ಕೆ ಎರಡು ಮುಖ. ನಮಗೆ ನಮ್ಮದು ಸತ್ಯ, ಆ ಕಡೆಯವರಿಗೆ ಅವರದೂ ಸತ್ಯ.ಕರ್ನಾಟಕದಲ್ಲಿ ದಾಂಧಲೆಯಾಗುತ್ತಿದೆ ಎಂದು ನ್ಯಾಯಮಂಡಳಿಯವರು ಏಳೂವರೆ ಟಿಎಂಸಿ ಅಡಿ ನೀರು ಮಂಜೂರು ಮಾಡಿದರು ಎಂದುಕೊಳ್ಳೋಣ, ಆ ಕಡೆ ಗೋವಾದವರೇನು ಸುಮ್ಮನೆ ಚುರಮರಿ ಶೇಂಗಾ ತಿನ್ನುತ್ತ ಕೂಡ್ರುತ್ತಾರೆಯೇ? ಅವರೂ ಬೀದಿಗೆ ಇಳಿಯುತ್ತಾರೆ.ಕಲ್ಲು ತೂರುತ್ತಾರೆ. ಬಂದ್‌  ಮಾಡುತ್ತಾರೆ. ಆಗ ನ್ಯಾಯಮಂಡಳಿ ಏನು ಮಾಡಲು ಸಾಧ್ಯ? ಬಹುಶಃ ಈ ಕಾರಣಕ್ಕಾಗಿಯೇ  ಮಧ್ಯಂತರ ಅರ್ಜಿ ಮೊನ್ನೆ ವಜಾ ಆಗಿದೆ. ಅದು ನಿರೀಕ್ಷಿತವೇ. ಏಕೆಂದರೆ ಯಾವ  ನ್ಯಾಯಮಂಡಳಿಯೂ ಹೀಗೆ ಮಧ್ಯಂತರ ಅರ್ಜಿ ಒಪ್ಪಿಕೊಂಡಿಲ್ಲ.ಕಾವೇರಿ ನದಿ ನೀರಿನ ಹಂಚಿಕೆಯಲ್ಲಿ ಬಂದ ಮಧ್ಯಂತರ ಆದೇಶ ಅದುವರೆಗಿನ ಕರ್ನಾಟಕದ ನೀರಿನ ಬಳಕೆಯನ್ನು ಸಕ್ರಮಗೊಳಿಸುವುದಾಗಿತ್ತು. ಮಹಾದಾಯಿ ನೀರನ್ನು ನಾವು ಇದುವರೆಗೆ ಬಳಸಿಯೇ ಇಲ್ಲವಾದ್ದರಿಂದ ಅದನ್ನು ಸಕ್ರಮಗೊಳಿಸುವ ಪ್ರಶ್ನೆಯೇ ಇರಲಿಲ್ಲ.ಇನ್ನು ಎರಡು ಅಥವಾ ಮೂರು ವರ್ಷಗಳಲ್ಲಿ ನ್ಯಾಯಮಂಡಳಿಯ ಅಂತಿಮ ಐತೀರ್ಪು ಬರಬಹುದು ಎಂದು ನಿರೀಕ್ಷೆಯಿದೆ. ಅಲ್ಲಿವರೆಗೆ ನಮ್ಮ ವಾದವನ್ನು ಸಮರ್ಥವಾಗಿ ಮಂಡಿಸುವ ಕಡೆಗೆ ನಾವು ಗಮನ ಕೊಡಬೇಕು. ಏಕೆಂದರೆ ನ್ಯಾಯಮಂಡಳಿ ಮುಂದೆ ಈಗ ನಾವು ಮಂಡಿಸಿರುವ ವಾದವನ್ನು ನ್ಯಾಯಮೂರ್ತಿಗಳು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.ನಮ್ಮ ರಾಜ್ಯದ ವಕೀಲರು ಮಂಡಿಸಿದ ವಾದಕ್ಕೆ ಗೋವಾ ರಾಜ್ಯದ ವಕೀಲರು ಅಷ್ಟೇ ಸಮರ್ಥವಾಗಿ ಪ್ರತಿವಾದ ಮಂಡಿಸಿದ್ದಾರೆ. ಅನೇಕ ಸಾರಿ ನಮ್ಮ ವಾದವನ್ನು ಗೇಲಿ ಮಾಡಿದ್ದಾರೆ. 119 ಪುಟಗಳಷ್ಟು ಸುದೀರ್ಘವಾದ ನ್ಯಾಯಮಂಡಳಿ ಆದೇಶವನ್ನು ನಮ್ಮ ಹೋರಾಟಗಾರರು ಯಾರಾದರೂ ಓದಿದ್ದಾರೆಯೋ ಇಲ್ಲವೋ ತಿಳಿಯದು. ಅವರು ಓದಬೇಕು. ಸ್ವತಃ ಮುಖ್ಯಮಂತ್ರಿಗಳೂ ಅದನ್ನು ಓದಬೇಕು.ಓದಿದರೆ ನಮ್ಮ ವಾದವೇನು ಮತ್ತು ಅದಕ್ಕೆ ಗೋವಾ ರಾಜ್ಯದ ಪ್ರತಿವಾದವೇನು ಎಂದು ತಿಳಿಯುತ್ತದೆ. ‘ಮಲಪ್ರಭೆ ಅಣೆಕಟ್ಟೆಯಲ್ಲಿ ನೀರಿಲ್ಲ ಎನ್ನುವ ಕರ್ನಾಟಕ ರಾಜ್ಯ ಅಲ್ಲಿ ಲಭ್ಯ ಇರುವ ನೀರನ್ನು ಹೇಗೆಲ್ಲ ಬೇಕಾಬಿಟ್ಟಿ ಬಳಸಿದೆ’ ಎಂದು ಗೋವಾ ತನ್ನ ವಾದದಲ್ಲಿ ಆಕ್ಷೇಪಿಸಿದೆ.‘ಮಲಪ್ರಭಾ ಅಚ್ಚಕಟ್ಟು ಪ್ರದೇಶದಲ್ಲಿ ಅದರಲ್ಲೂ ಬೆಳಗಾವಿ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಕಳೆದ ಅನೇಕ ವರ್ಷಗಳಲ್ಲಿ ಕಬ್ಬು ಬೆಳೆಯುವ ಪ್ರದೇಶ 1,81,740 ಹೆಕ್ಟೇರ್‌ಗೆ ಏರಿರುವುದನ್ನೂ ಮತ್ತು ಅದಕ್ಕಾಗಿಯೇ 160 ಟಿಎಂಸಿ ಅಡಿಯಷ್ಟು ನೀರನ್ನು ಕರ್ನಾಟಕ ಆಪೋಶನ ಮಾಡುತ್ತಿರುವುದನ್ನೂ ಮತ್ತು ಈಚಿನ ಕೆಲವು ವರ್ಷಗಳಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಐದು ಸಕ್ಕರೆ ಕಾರ್ಖಾನೆಗಳು ಶುರುವಾಗಿರುವುದನ್ನೂ’ ಗೋವಾ ರಾಜ್ಯ ಎತ್ತಿ ತೋರಿಸಿದೆ. ‘ಕುಡಿಯಲು ನೀರಿಲ್ಲ ಎನ್ನುವ ಕರ್ನಾಟಕ ರಾಜ್ಯ, ಧಾರವಾಡದ ಬಳಿಯ ಪೆಪ್ಸಿಕೋ ಕಂಪೆನಿಗೆ ನಿತ್ಯ ನಾಲ್ಕು ಲಕ್ಷ ಲೀಟರ್‌ ನೀರನ್ನು ಅದೇ ನದಿಯಿಂದ ಪೂರೈಸುತ್ತಿದೆ.ಇದು 16,000 ಮನೆಗಳಿಗೆ ಕುಡಿಯಲು ಸಾಕಾಗುವಷ್ಟು ನೀರು’ ಎಂದು ನೆರೆಯ ರಾಜ್ಯ ತನ್ನ ವಾದ ಮಂಡಿಸಿದೆ. ‘ರಾಜಕೀಯ ಒತ್ತಡಕ್ಕೆ  ಮತ್ತು ‘ಸೋ ಕಾಲ್ಡ್’ ಹೋರಾಟಗಾರರ ಆಗ್ರಹಕ್ಕೆ ಮಣಿದು ಕರ್ನಾಟಕ ಮಧ್ಯಂತರ ಅರ್ಜಿ ಸಲ್ಲಿಸಿದೆ’ ಎಂದೂ ಅದು ಗೇಲಿ ಮಾಡಿದೆ.ಸಹಜ, ಗೋವಾ ರಾಜ್ಯದ ವಾದ ನಮಗೆ ರುಚಿಸುವುದಿಲ್ಲ. ‘ನಮ್ಮ ನದಿ ನೀರು ಸಮುದ್ರಕ್ಕೆ ಹರಿದು ಪೋಲಾಗುತ್ತಿದೆ. ಅದನ್ನು ಸದುಪಯೋಗ ಮಾಡಿಕೊಳ್ಳಲು ನಮಗೇಕೆ ಕೊಡಬಾರದು’ ಎಂದು ನಾವು ವಾದಿಸಬಹುದು. ಅಂಥ ವಾದವೂ ನ್ಯಾಯಮಂಡಳಿ ಮುಂದೆ ನಿಂತಿಲ್ಲ.ನದಿ ನೀರು ಸಮುದ್ರಕ್ಕೆ ಹರಿದು ಹೋಗುವುದು ಜಲಚಕ್ರ ಮುಂದುವರಿಯುವ ದೃಷ್ಟಿಯಿಂದ ಎಷ್ಟು ಅಗತ್ಯ ಎಂದು ನ್ಯಾಯಮಂಡಳಿ ಸದಸ್ಯರು ನಮ್ಮ ವಕೀಲರಿಗೆ ಪಾಠ ಹೇಳಿದ್ದಾರೆ! ಈಗ ನಾವು ಏನಿದ್ದರೂ ನ್ಯಾಯಮಂಡಳಿ ಸದಸ್ಯರ ಮನಸ್ಸನ್ನು ಗೆಲ್ಲುವ, ಅವರಿಗೆ ನಮ್ಮ ವಾದ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಬೇಕೇ ಹೊರತು ಅವರಿಗೆ ಇರಿಸು ಮುರಿಸು ಮಾಡುವ ಕೆಲಸವನ್ನು ಅಲ್ಲ.ನ್ಯಾಯಮಂಡಳಿಯ ಐತೀರ್ಪನ್ನು ನಾವು ಸುಪ್ರೀಂ ಕೋರ್ಟಿನಲ್ಲಿ ಮಾತ್ರ ಪ್ರಶ್ನಿಸಬಹುದು. ನ್ಯಾಯಮಂಡಳಿಯ ಮುಂದೆ ಒಂದು ವಿವಾದ ಸಲ್ಲಿಕೆಯಾದರೆ ಅದು ಇತ್ಯರ್ಥವಾಗಲು ಅನೇಕ ವರ್ಷ ಹಿಡಿಯುತ್ತದೆ, ಅದಕ್ಕಾಗಿ, ಚರ್ಚೆ ಹಾಗೂ ಮಾತುಕತೆಯ ಮೂಲಕ, ಕೊಡುತೆಗೆದುಕೊಳ್ಳುವ ಮೂಲಕ ಯಾವಾಗಲೂ ಇಂಥ ವಿವಾದಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ವಿವೇಕಿಗಳು ಹೇಳುತ್ತಾರೆ. ಯಾವಾಗ ಮಾತುಕತೆ ಸಾಧ್ಯವೇ ಇಲ್ಲ ಎನ್ನುವಂಥ ಸಂದರ್ಭ ನಿರ್ಮಾಣ ಆಗುತ್ತದೆಯೋ ಆಗ ನ್ಯಾಯಮಂಡಳಿ ರಚನೆಯಾಗುತ್ತದೆ.ಈಗ ಬೇರೆ  ದಾರಿಗಳು ಇವೆ ಎಂದು ತೋರುವುದಿಲ್ಲ. ಸುಪ್ರೀಂ ಕೋರ್ಟಿನಲ್ಲಿ ಸಲ್ಲಿಸುವ ವಿಶೇಷ ಮೇಲ್ಮನವಿಯಿಂದಲೂ ಪರಿಹಾರ ಸಿಗುತ್ತದೆ ಎಂದು ನಂಬಲು ಸಾಧ್ಯವಿಲ್ಲ. ಅವರೂ, ‘ಹೇಗೂ ನ್ಯಾಯಮಂಡಳಿ ಮುಂದೆ ನಿಮ್ಮ ಕೋರಿಕೆ ಇದೆಯಲ್ಲ’ ಎಂದು ಹೇಳಬಹುದು.ಅಲ್ಲಿ ಆಗುವ ಹಿನ್ನಡೆ ನಮ್ಮ ಮೂಲ ಬೇಡಿಕೆಯ ಮೇಲೆಯೇ ವ್ಯತಿರಿಕ್ತ ಪರಿಣಾಮ ಬೀರಬಹುದು. ಯಾವಾಗಲೂ ಶಾಂತ ಸ್ಥಿತಿಯಲ್ಲಿ ಇಂಥ ಕೋರಿಕೆಗಳಿಗೆ ಹೆಚ್ಚಿನ ಮನ್ನಣೆ ಸಿಗುತ್ತದೆ. ನಾವು ಕಾನೂನನ್ನು ಕೈಗೆ ತೆಗೆದುಕೊಂಡು, ದಾಂಧಲೆ ಮತ್ತು ಹಿಂಸಾಚಾರದಲ್ಲಿ ತೊಡಗಿದರೆ ಗೋವಾ ರಾಜ್ಯ ಅದನ್ನು ನ್ಯಾಯಮಂಡಳಿ ಅಥವಾ ನ್ಯಾಯಾಲಯದ ಮುಂದೆ ಪ್ರಸ್ತಾಪಿಸಬಹುದು.‘ಕರ್ನಾಟಕದ ಜನರು ನಮ್ಮ ರಾಜ್ಯಕ್ಕೆ ಹಾಲು ಮತ್ತು ತರಕಾರಿ ಪೂರೈಸುವುದನ್ನು ತಡೆಯುತ್ತಿದ್ದಾರೆ, ಆ ಮೂಲಕ ನಮ್ಮ ಬದುಕುವ ಹಕ್ಕಿಗೆ ಧಕ್ಕೆಯಾಗಿದೆ’ ಎಂದು ಆ ರಾಜ್ಯ ಒಂದು ಅರ್ಜಿ ಜಡಿದರೆ ಚಳವಳಿಗಾರರೇನು ಹೋಗಿ ಅಲ್ಲಿ ವಾದ ಮಾಡುತ್ತಾರೆಯೇ?ಧಾರವಾಡದ ಪೇಟೆಯಲ್ಲಿ ಇಂಥ ಅವಿವೇಕಿ ಕೆಲಸವನ್ನು ನಮ್ಮ ಹೋರಾಟಗಾರರು ಮಾಡಿದ್ದಾರೆ. ಸಾಲಾಗಿ ಬುಟ್ಟಿಗಳಲ್ಲಿ ತುಂಬಿ ಇಟ್ಟಿದ್ದ ತರಕಾರಿಯನ್ನು ಅದು ಗೋವಾಕ್ಕೆ ಹೊರಟಿದೆ ಎಂದು ಅವರು ಬೀದಿಗೆ ಚೆಲ್ಲಿದ್ದಾರೆ. ಇದಕ್ಕಿಂತ ಗೂಂಡಾ ಮತ್ತು ಅಮಾನವೀಯ ವರ್ತನೆ ಇನ್ನೊಂದು ಇರಲು ಸಾಧ್ಯವಿಲ್ಲ. ಈ  ಅವಿವೇಕಿಗಳಿಗೆ ಒಂದು ಬದನೆಕಾಯಿ ಹೇಗೆ ಬೆಳೆಯುತ್ತದೆ ಮತ್ತು ಅದು ಎಷ್ಟು ಕಷ್ಟದ ಕೆಲಸ ಎಂದೂ ಗೊತ್ತಿರುವುದಿಲ್ಲ. ತರಕಾರಿ ಮಾರಲು ಸಂತೆಗೆ ಬಂದ ರೈತನ ಸಮ್ಮುಖದಲ್ಲಿಯೇ ಅದನ್ನೆಲ್ಲ ಬೀದಿಗೆ ಚೆಲ್ಲಿರುವುದು ಅತ್ಯಂತ ಖಂಡನಾರ್ಹ ಸಂಗತಿ. ಇಂಥ ಕಿಡಿಗೇಡಿತನದಿಂದ ನಮ್ಮ ರಾಜ್ಯದ ಹಿತ ಕಾಪಾಡುತ್ತೇವೆ ಎಂದು ಯಾರಾದರೂ ತಿಳಿದುಕೊಂಡಿದ್ದರೆ ಅವರು ಮೂರ್ಖರ ಸ್ವರ್ಗದಲ್ಲಿ ಇದ್ದಾರೆ ಎಂದೇ ಅರ್ಥ.ಇಂಥ ವರ್ತನೆಗಳು ಮಾತುಕತೆಯ ಬಾಗಿಲನ್ನು ಮುಚ್ಚಿ ಬಿಡುತ್ತವೆ ಮಾತ್ರವಲ್ಲ ಕರ್ನಾಟಕವನ್ನು ಜಗಳಗಂಟಿ ರಾಜ್ಯ ಎಂದು ಇಡೀ ದೇಶಮಟ್ಟದಲ್ಲಿ ಬಿಂಬಿಸಲು ಕಾರಣವೂ ಆಗುತ್ತವೆ. ಈಗಾಗಲೇ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂ ಕೋರ್ಟು ಅಂಥ ಪಟ್ಟವನ್ನು ನಮಗೆ ಒಂದು ಸಾರಿ ಕಟ್ಟಿತ್ತು ಎಂಬುದು ನಮಗೆಲ್ಲ ನೆನಪು ಇರಬೇಕು.ಮಹಾದಾಯಿ ನದಿ ನೀರು ತಿರುವು ಯೋಜನೆಗೆ ರಾಜಕೀಯ ಪರಿಹಾರ ಸಾಧ್ಯವಿತ್ತು. ಅದಕ್ಕೆ ಪ್ರಧಾನಿ ಮನಸ್ಸು ಮಾಡಬೇಕಿತ್ತು. ಪ್ರಧಾನಿಯ ಮೇಲೆ ನಮ್ಮ ರಾಜ್ಯದ ಅತಿರಥ ಮಹಾರಥ ಬಿಜೆಪಿ ನಾಯಕರು ಪ್ರಭಾವ ಬೀರಬೇಕಿತ್ತು. ಆದರೆ, ಅವರ ವರ್ತನೆ ನೋಡಿದರೆ  ಅವರೆಲ್ಲ ಪ್ರಧಾನಿ ಕಚೇರಿಯ ಬಾಗಿಲಿಗೂ ಹೋಗುವಂತೆ ಕಾಣುವುದಿಲ್ಲ. ‘ಅಧಿಕಾರ ಹೋಗಿ ಬಿಟ್ಟರೆ ಏನು ಮಾಡುವುದು’ ಎಂದು ಹೆದರಿ ಸಾಯುತ್ತಿರುವಂತೆ ಕಾಣುತ್ತದೆ.ಅಥವಾ ರಾಜಕೀಯವೇ ಹಾಗೆ ಇರುತ್ತದೆಯೋ ಏನೋ? ‘ಹೇಗಿದ್ದರೂ, ಕರ್ನಾಟಕದಲ್ಲಿ ನಮ್ಮ ಸರ್ಕಾರ ಇಲ್ಲ. ಕಾಂಗ್ರೆಸ್ಸಿಗರು ಅನುಭವಿಸಲಿ ಬಿಡಿ’ ಎಂದೂ ಬಿಜೆಪಿಯವರು ವಿಘ್ನ ಸಂತೋಷ ಅನುಭವಿಸುತ್ತಿರಬಹುದು. ನರಗುಂದದಲ್ಲಿ ಕಾಂಗ್ರೆಸ್‌ ಶಾಸಕ ಇರುವುದು, ನವಲಗುಂದದಲ್ಲಿ ಜೆ.ಡಿ ಎಸ್‌ ಶಾಸಕ ಇರುವುದು ಕೂಡ ಬಿಜೆಪಿ ಕೆಲಸವನ್ನು ಇನ್ನಷ್ಟು ಹಗುರ ಮಾಡಿರಬಹುದು.

ಅಂದರೆ ನರಗುಂದ–ನವಲಗುಂದ ಭಾಗದ ರೈತರ ಎದುರು ಇರುವ ಅಡ್ಡಿಗಳು ಎಷ್ಟು ಎಂದು ಯಾರಿಗಾದರೂ ಅರ್ಥವಾಗಬಹುದು. ಅವರು ಮಲಪ್ರಭೆಯ ನೀರಿಗಾಗಿ ನಲವತ್ತು ವರ್ಷ ಕಾದಿದ್ದಾರೆ. ಬಹಶಃ ಅವರು ಇನ್ನೂ ಕೆಲವು ವರ್ಷ ಕಾಯಬೇಕಾಗಿ ಬರಬಹುದು.ಅಲ್ಲಿಯವರೆಗೆ ಅವರು ಹೋರಾಟ ಮಾಡಲು ಸ್ವತಂತ್ರರು. ಆದರೆ, ಅವರ  ಹೆಂಡತಿಯರು, ತಾಯಂದಿರು ಅವರಿಗೆ ಮನೆಯಲ್ಲಿ ಏನು ಹೇಳುತ್ತಿದ್ದಾರೆ ಎಂದು ಒಂದು ಸಾರಿ ನಿಂತು ಕೇಳಿಸಿಕೊಳ್ಳಬೇಕು. ಸಂಸದರಿಗೆ, ಶಾಸಕರಿಗೆ ಸೀರೆ ಉಡಿಸಿ, ಬಳೆ ತೊಡಿಸಿ ಅವಮಾನ ಮಾಡುತ್ತೇವೆ ಎಂದು ಯಾರಾದರೂ ಹೋರಾಟಗಾರರು ತಿಳಿದುಕೊಂಡಿದ್ದರೆ ಅದು ತಮ್ಮ ತಾಯಿಯರಿಗೆ ಮತ್ತು ಹೆಂಡತಿಯರಿಗೆ ಮಾಡುವ ಅವಮಾನ ಎಂದು ಅರ್ಥ ಮಾಡಿಕೊಳ್ಳಬೇಕು.

ಹೆಣ್ಣು ಆಗಿರುವುದೇ ಅವಮಾನಕರ ಸಂಗತಿಯಲ್ಲ, ಬಳೆ ತೊಟ್ಟುಕೊಳ್ಳುವುದೂ ಅಪಮಾನಕರವಲ್ಲ. ಇದನ್ನೆಲ್ಲ ಅವರಿಗೆ ಹೇಗೆ ತಿಳಿಸಿ ಹೇಳುವುದು?

ಕರ್ನಾಟಕವು ನೀರನ್ನು ದುಂದು ಮಾಡುತ್ತಿದೆ ಎಂಬ ಗೋವಾ ಆರೋಪದ ಹಿನ್ನೆಲೆಯಲ್ಲಿ ಲಭ್ಯ ಇರುವ ನೀರನ್ನು ಹೇಗೆ ಮಿತವ್ಯಯದಿಂದ ಬಳಸಿಕೊಳ್ಳಬೇಕು ಎಂದು ನಮ್ಮ ಹೋರಾಟಗಾರರು ಯೋಚಿಸಬೇಕು.ಗೋವಾದಲ್ಲಿ ಕೂಡ ನಮ್ಮ ರೈತರ ಬಗೆಗೆ ಸಹಾನುಭೂತಿ ಇರುವ ಜನರು ಇರಬಹುದು. ಅವರ ಬೆಂಬಲ ಗಳಿಸುವ ದಿಸೆಯಲ್ಲಿ ಪ್ರಯತ್ನ ಮಾಡಬೇಕು. ಕಾವೇರಿ ತಟದ ರೈತರು ಗಡಿಯ ಭೇದ ಮರೆತು ಹೀಗೆ ಮೈತ್ರಿ ಮಾಡಿಕೊಂಡಿದ್ದರು. ಇದು ವಿವೇಕದ ಹಾದಿ. ಅದನ್ನೆಲ್ಲ ಬಿಟ್ಟು ಸಿಟ್ಟಿನಲ್ಲಿ ನಮ್ಮ ಮೈಯನ್ನು ನಾವೇ ಪರಚಿಕೊಂಡರೆ ಏನಾಗುತ್ತದೆ? ಮೈಯೆಲ್ಲ ರಕ್ತ ಬರುತ್ತದೆ ಅಷ್ಟೇ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry