ಹೀಗೇ ಆದರೆ ಕಾಂಗ್ರೆಸ್ ಕಥೆ ಕಷ್ಟ!

7

ಹೀಗೇ ಆದರೆ ಕಾಂಗ್ರೆಸ್ ಕಥೆ ಕಷ್ಟ!

Published:
Updated:

ಕೊಪ್ಪಳ ಉಪ ಚುನಾವಣೆ ಒಂದು ವಿಶಿಷ್ಟ ಸನ್ನಿವೇಶದಲ್ಲಿ ನಡೆದಿತ್ತು. ಒಂದು ಸರ್ಕಾರಕ್ಕೆ ಎಷ್ಟು ಮಾರಕವೆನಿಸಬೇಕೋ ಅಷ್ಟು ಮಾರಕವಾದ ವರದಿಯನ್ನು ಲೋಕಾಯುಕ್ತರು ಕೊಟ್ಟಿದ್ದರು. ಅದರ ಹಿಂದೆಯೇ ಮುಖ್ಯಮಂತ್ರಿ ಅಧಿಕಾರ ಕಳೆದುಕೊಂಡಿದ್ದರು. ಸಾಲದು ಎಂದು ನಿತ್ಯ ನ್ಯಾಯಾಲಯಕ್ಕೆ ಎಡತಾಕುತ್ತಿದ್ದರು. ಒಬ್ಬ ಮಾಜಿ ಸಚಿವರು ಕರ್ನಾಟಕದ ಜೈಲು ಪಾಲಾಗಿದ್ದರೆ ಮತ್ತೊಬ್ಬ ಮಾಜಿ ಸಚಿವರು ಆಂಧ್ರದ ಜೈಲು ಪಾಲಾಗಿದ್ದರು. `ಕಳೆದ ಮೂರು ವರ್ಷಗಳ ಆಡಳಿತದಲ್ಲಿ ನಾವು ನಪಾಸಾಗಿದ್ದೇವೆ~ ಎಂದು ಹಾಲಿ ಮುಖ್ಯಮಂತ್ರಿ ಚುನಾವಣೆಗೆ ಸ್ವಲ್ಪ ಮುಂಚೆಯಷ್ಟೇ ಒಪ್ಪಿಕೊಂಡಿದ್ದರು. ಆದರೂ ಕೊಪ್ಪಳದ ಜನ ಬಿಜೆಪಿಯನ್ನೇ ಗೆಲ್ಲಿಸಿದ್ದಾರೆ. ರಾಜ್ಯ ಸರ್ಕಾರದ ಮಾನ ಹರಾಜು ಹಾಕಿರುವ ಭ್ರಷ್ಟಾಚಾರ ಅವರಿಗೆ ಕಾಡುವ ಒಂದು ಸಂಗತಿ ಆಗಿರಲಿಲ್ಲವೇ? ಫಲಿತಾಂಶ ನೋಡಿದರೆ ಇಲ್ಲ ಎನಿಸುತ್ತದೆ. ಕೊಪ್ಪಳದಲ್ಲಿ ವಿಚಾರಿಸಿದರೂ ಸಾಮಾನ್ಯ ಜನರಿಗೆ ಅದು `ಒಂದು ಚುನಾವಣೆ ವಿಷಯ~ ಆಗಿರಲಿಲ್ಲ ಎಂಬ ಅಭಿಪ್ರಾಯವೇ ಬರುತ್ತದೆ. ಚುನಾವಣೆಯಲ್ಲಿ ಗೆಲುವು ಬಹಳ ಮುಖ್ಯ. ಅದು ತುಂಬುವ ಚೈತನ್ಯ ಅಷ್ಟಿಷ್ಟಲ್ಲ. ಕಾಂಗ್ರೆಸ್ ಮನೆಯಲ್ಲಿ ಈಗ ಶೋಕದ ವಾತಾವರಣ ನಿರ್ಮಾಣ ವಾಗಿರುವುದಕ್ಕೆ ಕೊಪ್ಪಳದಲ್ಲಿ ಆಗಿರುವ ಸೋಲೇ ಕಾರಣ.ರಾಜ್ಯದ ಪ್ರಮುಖ ವಿರೋಧ ಪಕ್ಷಕ್ಕೆ ಯಾವ ಲೆಕ್ಕಾಚಾರವೂ ಅನುಕೂಲಕರವಾಗಿ ಪರಿಣಮಿಸುತ್ತಿಲ್ಲ. ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿ.ಪರಮೇಶ್ವರ್ ಅವರಿಗೆ ಇದು ಎರಡನೇ ಸೋಲು. ಬಂಗಾರಪೇಟೆ, ಜಗಳೂರು ಮತ್ತು ಚನ್ನಪಟ್ಟಣ ಕ್ಷೇತ್ರಗಳಿಗೆ ಒಟ್ಟಾಗಿ ಉಪ ಚುನಾವಣೆ ನಡೆದಾಗಲೂ ಕಾಂಗ್ರೆಸ್ಸಿಗೆ ಜಯ ಸಿಕ್ಕಿರಲಿಲ್ಲ. ಲಿಂಗಾಯತರು, ಒಕ್ಕಲಿಗರು ಪ್ರಬಲವಾಗಿರುವ ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಗೆಲುವು ಸಾಧ್ಯವೇ ಇಲ್ಲ ಎಂದು ತೀರ್ಮಾನ ಮಾಡಿಬಿಡುವಷ್ಟು ಪರಿಸ್ಥಿತಿ ವ್ಯತಿರಿಕ್ತವಾಗಿರುವಂತೆ ಕಾಣುತ್ತದೆ. ಜಾತಿ ಪ್ರೇಮ, ಹೊಳೆಯಾಗಿ ಹರಿದ ಹಣದ ಮುಂದೆ ಭ್ರಷ್ಟಾಚಾರದ ವಿಚಾರ ಗೌಣವಾದಂತೆಯೂ ಭಾಸವಾಗುತ್ತದೆ. ಕೇಂದ್ರದಲ್ಲಿ 2-ಜಿ ತರಂಗಾಂತರ ಹಗರಣ ಪ್ರಧಾನಿಯಂಥ ಅತ್ಯುನ್ನತ ಹುದ್ದೆಯವರೆಗೂ ಹಬ್ಬುವ ಲಕ್ಷಣಗಳು ಕಾಣುತ್ತಿರುವು ದರಿಂದ ರಾಜ್ಯ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ಸಿಗರು ಮಾಡುವ ದೂರು ಇದ್ದಿಲು ಮಸಿಗೆ ಬುದ್ಧಿ ಹೇಳಿದಂತೆಯೂ ಜನರಿಗೆ ತೋರುತ್ತಿರಬಹುದು!ಈ ಚುನಾವಣೆಯಲ್ಲಿನ ಗೆಲುವು ಬಿಜೆಪಿಗೆ ಅಷ್ಟೇನೂ ಮುಖ್ಯವಾಗಿರಲಿಲ್ಲ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮಾತ್ರ ಅದು ಪ್ರತಿಷ್ಠೆಯ ಪ್ರಶ್ನೆಯಾಗಿತ್ತು. ಕಳೆದ ಮಾರ್ಚ್‌ನಲ್ಲಿ ಕರಡಿ ಸಂಗಣ್ಣ ಅವರಿಂದ ರಾಜೀನಾಮೆ ಕೊಡಿಸಿದ ದಿನದಿಂದಲೇ ಈ ಸೀಟನ್ನು ಗೆಲ್ಲಲು ಅವರು ಸಿದ್ಧತೆ ಮಾಡಿಕೊಂಡಿದ್ದರು.ಉಪಚುನಾವಣೆಯಲ್ಲಿ ಗೆಲ್ಲುವುದು ಹೇಗೆ ಎಂಬ ಸಮರಕಲೆಯಲ್ಲಿ ಯಾರಾದರೂ ಯಡಿಯೂರಪ್ಪ ಅವರಿಂದಲೇ ಪಾಠ ಹೇಳಿಸಿಕೊಳ್ಳಬೇಕು. ಚುನಾವಣೆ ಗೆದ್ದ ನಂತರ ಕರಡಿ ಸಂಗಣ್ಣ ಅವರು `ಅಭಿವೃದ್ಧಿಗೆ ಸಿಕ್ಕ ಜಯ ಇದು~ ಎಂದು ಹೇಳಿದ್ದನ್ನು ಕೇಳಿಸಿಕೊಂಡು ಕೊಪ್ಪಳ ಕ್ಷೇತ್ರದಲ್ಲಿ ಯಾರಾದರೂ ರಸ್ತೆಗಳನ್ನು, ಚರಂಡಿಗಳನ್ನು ಹುಡುಕಲು ಹೋಗಬಾರದು! ಅದು ಬಿಜೆಪಿಯ ಅಭಿವೃದ್ಧಿಯ ವರಸೆಯೇ ಅಲ್ಲ! ಓಣಿ, ಓಣಿಗಳಲ್ಲಿ ಗುಡಿ ಗುಂಡಾರಗಳಿಗೆ, ಮಸೀದಿಗಳಿಗೆ, ಮಠ ಮಾನ್ಯಗಳಿಗೆ ಹಣ ಕೊಡುವುದೇ ಆ  ಪಕ್ಷದ ವರಸೆ.

ಅದು ಅವರಿಗೆ ಫಲ ಕೊಟ್ಟಿದೆ. ಕರಡಿ ಸಂಗಣ್ಣ ಸರ್ಕಾರದಿಂದ ತಮ್ಮ ಕ್ಷೇತ್ರಕ್ಕೆ ಹರಿದು ಬಂದ ಹಣವನ್ನು ಹೀಗೆಯೇ ಹಂಚಿದರು. ಅದೇ ಕಾರಣವಾಗಿ ಈ ಸಾರಿ ಅಲ್ಲಿ ಅಲ್ಪಸಂಖ್ಯಾತರೂ ಬಿಜೆಪಿಗೆ ಮತ ಹಾಕಿದ್ದಾರೆ ಎಂಬ ಸುದ್ದಿ ಇದೆ. ಕಾಂಗ್ರೆಸ್ಸಿಗಾಗಲೀ, ಜೆ.ಡಿ(ಎಸ್)ಗಾಗಲೀ ಹೀಗೆ ಮಾಡುವುದು ಸಾಧ್ಯವಿರಲಿಲ್ಲ. ಬಿಜೆಪಿ ಖರ್ಚು ಮಾಡಿದ ಹಣಕ್ಕೂ ಕಾಂಗ್ರೆಸ್ ಖರ್ಚು ಮಾಡಿದ ಹಣಕ್ಕೂ ಹೋಲಿಕೆಯೇ ಇರಲಿಲ್ಲ. ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ  ರಾಜ್ಯ ರಾಜಕೀಯದಲ್ಲಿ ಬದಲಾದ ಸನ್ನಿವೇಶ ಯಡಿಯೂರಪ್ಪ ನಿಷ್ಠರಿಗೆ ಈ ಚುನಾವಣೆಯಲ್ಲಿ ಗೆಲುವು ಗಳಿಸಲೇಬೇಕು ಎಂಬ ಹುಕಿಯನ್ನು ಸೃಷ್ಟಿಸಿತು. ಯಡಿಯೂರಪ್ಪ ನಿಷ್ಠ  ಸಚಿವರೆಲ್ಲ ಕ್ಷೇತ್ರದಲ್ಲಿಯೇ ತಂಗಿದರು. ಚುನಾವಣೆಯಲ್ಲಿ ಗೆಲ್ಲಲು ಏನು ಮಾಡಬೇಕೋ ಅದನ್ನು ಮಾಡಿದರು. ಯಡಿಯೂರಪ್ಪ ಕೂಡ ಕ್ಷೇತ್ರದಲ್ಲಿಯೇ ಬಿಡಾರ ಹೂಡಿ ಯಾರು ಯಾರನ್ನು ಭೇಟಿ ಮಾಡಬೇಕು, ಅವರಿಗೆ ಏನು `ಸಮಾಧಾನ~ ಮಾಡಬೇಕು ಎಂದು ಲೆಕ್ಕ ಹಾಕಿ ಅದನ್ನೆಲ್ಲ ಮಾಡಿದರು. ಆದರೆ, ಅವರ ಹಣೆಬರಹ. ಎಂದಿನಂತೆ ಅವರು ಯಾವ ವಿಜಯವನ್ನೂ ಭರ್ಜರಿಯಾಗಿ ಸಂಭ್ರಮಿಸುವ ಸ್ಥಿತಿಯಲ್ಲಿ ಇರುವುದಿಲ್ಲ. ಅವರು ಉಪವಾಸ ಮಾಡಬೇಕು ಎಂದರೂ ಪಕ್ಷ ಬಿಡುವುದಿಲ್ಲ. ಹೋರಾಟ ಮಾಡುತ್ತೇನೆ ಎಂದರೂ ಬಿಡುವುದಿಲ್ಲ. ರಾಜ್ಯದಾದ್ಯಂತ ಪ್ರವಾಸ ಮಾಡುತ್ತೇನೆ ಎಂದರೂ ಬಿಡುವುದಿಲ್ಲ. ಕೊಪ್ಪಳ ಚುನಾವಣೆಯಲ್ಲಿಯೂ ಆ ಕಡೆ ಒಬ್ಬರು ಈ ಕಡೆ ಒಬ್ಬರು ಮುಖ ಇಟ್ಟುಕೊಂಡೇ ಬಿಜೆಪಿ ನಾಯಕರು ಪ್ರಚಾರ ಮಾಡಿದರು. ಈಗ ಬಿಜೆಪಿ ಒಂದು ಒಡೆದ ಮನೆ ಎಂಬುದರಲ್ಲಿ ಯಾರಿಗಾದರೂ ಅನುಮಾನ ಉಳಿದಿರಲಾರದು.ಆಡಳಿತ ಪಕ್ಷದಲ್ಲಿ ಇಷ್ಟೆಲ್ಲ ಸಮಸ್ಯೆಯಿದ್ದಾಗಲೂ ಕೊಪ್ಪಳದಲ್ಲಿ ಸೋಲಾದುದು ಕಾಂಗ್ರೆಸ್ ನಾಯಕರಿಗೆ ಆಘಾತ ತಂದಿದೆ. ಚುನಾವಣೆಯ ಫಲಿತಾಂಶಕ್ಕೆ ಪ್ರತಿಕ್ರಿಯೆಯನ್ನೂ ಕೊಡಲು ಬಯಸದೆ ಮನೆಯಲ್ಲಿಯೇ ಉಳಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ವರ್ತನೆಯಲ್ಲಿ ಈ ಆಘಾತವೇ ಎದ್ದು ಕಾಣುತ್ತದೆ. ಕೊಪ್ಪಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕುರುಬರಾಗಿದ್ದರು. ಅವರ ಸೋಲು ತಮ್ಮ ಸೋಲು ಎಂದು ಸಿದ್ದರಾಮಯ್ಯ ಭಾವಿಸಿದ್ದರೆ ಅದು ಸಹಜವಾಗಿಯೇ ಇದೆ. ಕಡೂರು ಉಪಚುನಾವಣೆಯ ಫಲಿತಾಂಶವೂ ಸಿದ್ದರಾಮಯ್ಯ ಅವರಿಗೆ ವೈಯಕ್ತಿಕ ಸೋಲೇ ಆಗಿತ್ತು. ಅಲ್ಲಿಯೂ ಕುರುಬ ಅಭ್ಯರ್ಥಿಯೇ ಕಣದಲ್ಲಿ ಇದ್ದರು.ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸುವ ವರೆಗೆ ಕುರುಬ ಸಮುದಾಯ ಇಡಿಯಾಗಿ ಕಾಂಗ್ರೆಸ್ ಪಕ್ಷದ ಬೆನ್ನಿಗೆ ನಿಲ್ಲುವಂತೆ ಕಾಣುವುದಿಲ್ಲ. ಈಶ್ವರಪ್ಪ ಅವರನ್ನು ನೋಡಿದರೆ, ಈಚೆಗಷ್ಟೇ ಮಂತ್ರಿಯಾಗಿರುವ ವರ್ತೂರು ಪ್ರಕಾಶ್ ಅವರನ್ನು ನೋಡಿದರೆ `ಇವರೂ ನಮ್ಮವರೇ ಅಲ್ಲವೇ~ ಎಂದು ಅವರು ಕರಗುವಂತೆ ಕಾಣುತ್ತದೆ.ಲಿಂಗಾಯತರು ಕಡೆಗಣ್ಣಿನಿಂದಲೂ ಕಾಂಗ್ರೆಸ್ಸಿನ ಕಡೆ ನೋಡುತ್ತಿಲ್ಲ. ದೆಹಲಿಯ ಎಐಸಿಸಿ ಕಚೇರಿಯ ಜವಾನನಿಗೂ ಈ ಸಂಗತಿ ಈಗ ಗೊತ್ತಾಗಿದೆ. ಯಾರಾದರೂ ಕಾಂಗ್ರೆಸ್ಸಿಗರು ಅಲ್ಲಿಗೆ ಹೋದರೆ,  `ಲಿಂಗಾಯತರು ನಿಮಗೆ ಮತ ಹಾಕುವುದಿಲ್ಲ ಅಲ್ಲವೇ?~ ಎಂದು ಕೇಳುವಷ್ಟು ಜನಜನಿತವಾಗಿದೆ. ಕಾಂಗ್ರೆಸ್ಸಿನ ಇನ್ನೊಂದು ಕಷ್ಟ, ಜೆ.ಡಿ  (ಎಸ್). ಅದು ತಾನೂ ಗೆಲ್ಲುವುದಿಲ್ಲ. ಕಾಂಗ್ರೆಸ್ಸನ್ನೂ ಗೆಲ್ಲಲು ಬಿಡುವುದಿಲ್ಲ. ಬಹುಶಃ ಮತ್ತೆ ಮತ್ತೆ `ನನ್ನ ಜತೆ ಬರದಿದ್ದರೆ ನಿಮಗೆ  ಕಷ್ಟ~ ಎಂದೇ ಕಾಂಗ್ರೆಸ್ಸಿಗೆ ಜೆ.ಡಿ (ಎಸ್) ಹೇಳುತ್ತಿರುವಂತೆ ಕಾಣುತ್ತದೆ. ಆದರೆ, ಆ ಮೈತ್ರಿಗೆ ಕಾಂಗ್ರೆಸ್ ಸಿದ್ಧವಿರುವಂತೆ ತೋರುವುದಿಲ್ಲ. ಕಾಂಗ್ರೆಸ್ಸಿನ ಇನ್ನೊಂದು ಸಮಸ್ಯೆ, ನಾಯಕರಲ್ಲಿ ಮೈ ಮುರಿದು ದುಡಿಯುವ ಪ್ರವೃತ್ತಿ ಹೊರಟು ಹೋಗಿರುವುದು. ಯಾರಿಗೂ ಅಂಗಿ ಕೊಳೆಯಾಗಬಾರದು. ಕೊಪ್ಪಳದಲ್ಲಿ ದಿನಕ್ಕೆ ಮೂರು ನಾಲ್ಕು ತಂಡದಲ್ಲಿ ಪತ್ರಿಕಾಗೋಷ್ಠಿ ಮಾಡುವುದನ್ನೇ ಅವರು ಚುನಾವಣೆ ಪ್ರಚಾರ ಎಂದುಕೊಂಡರು. ಕೊಪ್ಪಳದಲ್ಲಿ ಒಳ್ಳೆಯ ಕೊಠಡಿಗಳು ಇಲ್ಲ ಎಂದು ಎಲ್ಲ ನಾಯಕರು ಹೊಸಪೇಟೆಯ ಭವ್ಯ ಹೋಟೆಲುಗಳಲ್ಲಿಯೇ ತಂಗಿ ಕೊಪ್ಪಳಕ್ಕೆ ಹೀಗೆ ಬಂದು ಹಾಗೆ ಹೋದರು. ಹೀಗೆ ಬಂದು ಹಾಗೆ ಹೋದರೆ ಯಾರು ಮತ ಹಾಕುತ್ತಾರೆ? ಕಾಂಗ್ರೆಸ್ಸಿನ ಬಹುತೇಕ ನಾಯಕರು ಕನಿಷ್ಠ ಉಮಾಶ್ರೀ ಅವರಷ್ಟೂ ಬದ್ಧತೆಯಿಂದ, ಕಾಳಜಿಯಿಂದ ಮಾತನಾಡಲಿಲ್ಲ ಎಂದು ಕೊಪ್ಪಳದ ಮಂದಿ ಹಾಸ್ಯ ಮಾಡಿದರು.ಕಾಂಗ್ರೆಸ್ಸಿಗೆ ನಿರ್ವಿಣ್ಣತೆ ಕಾಡುತ್ತಿದೆ. ಅದರ ಭಾಷೆಯಲ್ಲಿ ಶಕ್ತಿಯಿಲ್ಲ. ಎದುರಾಳಿಗೆ ತೊಡೆ ತಟ್ಟುವ ಜಟ್ಟಿತನವೂ ಕಾಣುತ್ತಿಲ್ಲ. ಅದಕ್ಕೆ ಕಾರಣಗಳು ಹಲವು ಇರಬಹುದು. ಪ್ರದೇಶ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆಯಲ್ಲಿಯೇ ಪಕ್ಷ ಎಡವಿರಬಹುದು. ಕರ್ನಾಟಕದ ರಾಜಕೀಯ ಎರಡು ಬಹುಸಂಖ್ಯಾತ ಜಾತಿಗಳ ಮರ್ಜಿಗೆ ಒಳಪಟ್ಟಿದೆ. ಆ ಎರಡು ಜಾತಿಗಳನ್ನು ಅಲಕ್ಷಿಸಿ ಇಲ್ಲಿ ರಾಜಕೀಯ ಮಾಡಲೂ ಆಗುವುದಿಲ್ಲ; ಚುನಾವಣೆ ಗೆಲ್ಲಲೂ ಆಗುವುದಿಲ್ಲ. ಈಗ ಕಾಂಗ್ರೆಸ್ಸಿನಲ್ಲಿ ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡುವ ಕೆಲಸ ನಡೆದಿದೆ.ಚುನಾವಣೆಗಿಂತ ತಿಂಗಳುಗಟ್ಟಲೆ ಮುಂಚಿತವಾಗಿಯೇ ಬಿಜೆಪಿ ಮಾಡಿಕೊಳ್ಳುವ ಸಿದ್ಧತೆಗೂ ಕಾಂಗ್ರೆಸ್ ಮಾಡಿಕೊಳ್ಳುವ ಸಿದ್ಧತೆಗೂ ಅಜಗಜಾಂತರ. ಫಲಿತಾಂಶ ಬಂದ ನಂತರ ಹತಾಶೆ ವ್ಯಕ್ತಪಡಿಸುವುದರಿಂದ ಪ್ರಯೋಜನವೇನೂ ಆಗುವುದಿಲ್ಲ. ಕಡೂರು ಉಪಚುನಾವಣೆ ಫಲಿತಾಂಶ ಬಂದ ನಂತರ ಆಗಲೂ ವಿರೋಧ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ರಾಜೀನಾಮೆಯನ್ನೇ  ನೀಡಿದ್ದರು. ಆಗ ಪಕ್ಷದ ಅಧ್ಯಕ್ಷರಾಗಿದ್ದ ಆರ್.ವಿ.ದೇಶಪಾಂಡೆ ಸೋಲಿನ ನೈತಿಕ ಹೊಣೆ ಹೊತ್ತು `ಬಿಡುಗಡೆ~ ಬಯಸಿದ್ದರು. ಈ ಸಾರಿ ಸೋಲಿನ ನಂತರ ಸಿದ್ದರಾಮಯ್ಯ ಮೌನದ ಮೊರೆ ಹೊಕ್ಕಿದ್ದಾರೆ. ಪರಮೇಶ್ವರ್ ಅವರು ದೇಶಪಾಂಡೆ ಅವರ ಹಾಗೆ ಹೊರನಡೆಯುವ ಮಾತು ಆಡಿಲ್ಲ. ಆದರೆ,  ಫಲಿತಾಂಶದ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ದೇಶಪಾಂಡೆ ಅವರಿಗೆ ಎದುರಾದಷ್ಟು ಸೋಲುಗಳು ಪರಮೇಶ್ವರ್ ಅವರಿಗೆ ಇನ್ನೂ ಆಗಿಲ್ಲ. ಆ  ಪಕ್ಷಕ್ಕೆ ಇದು ಒಂದು ದಿಕ್ಕು ತೋರದ ಸ್ಥಿತಿ. ಕಳೆದ ಮೂರು ಮೂರುವರೆ ವರ್ಷಗಳಲ್ಲಿ ನಡೆದ 20 ಉಪ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷ ಗೆದ್ದಿರುವುದು ಕೇವಲ ಎರಡು ಕಡೆಗಳಲ್ಲಿ. ಹಾಗೆ ನೋಡಿದರೆ ಜೆ.ಡಿ (ಎಸ್) ಆರು ಕಡೆಗಳಲ್ಲಿ ಗೆದ್ದಿದೆ. ಒಂದು ಕಾಲದಲ್ಲಿ ತನ್ನ ಭದ್ರಕೋಟೆಯೇ ಆಗಿದ್ದ ಕರ್ನಾಟಕದಲ್ಲಿ ತನ್ನ ಸ್ಥಿತಿ ಸುಧಾರಿಸಲು ಏನು ಮಾಡಬೇಕು ಎಂದು ಕಾಂಗ್ರೆಸ್ ಹೈಕಮಾಂಡಿಗೆ ಚಿಂತೆಯೇ ಇಲ್ಲವೇ? ಕರ್ನಾಟಕದ ಕಾಂಗ್ರೆಸ್ ನಾಯಕರಲ್ಲಿ ಸದ್ಯದ  ಸವಾಲನ್ನು ಎದುರಿಸುವ ಹೊಸ ಆಲೋಚನೆಗಳೂ ಇಲ್ಲವೇ? ಸೋಜಿಗ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry