ಹುಡುಗಿಯೊಬ್ಬಳ ಸಂಕೀರ್ಣ ಸಮಸ್ಯೆ

7

ಹುಡುಗಿಯೊಬ್ಬಳ ಸಂಕೀರ್ಣ ಸಮಸ್ಯೆ

Published:
Updated:

ಪೊಲೀಸರೆಂದರೆ ಕೇವಲ ಕಳ್ಳ-ಕಾಕರನ್ನು ಹಿಡಿಯುವವರು ಎಂದು ಈಗಲೂ ಕೆಲವು ಮುಗ್ಧರು ನಂಬಿದ್ದಾರೆ. ಆದರೆ, ನಮ್ಮ ಕೆಲಸ ಅಷ್ಟು ಸರಳವಾಗಿ ಇರುತ್ತಿರಲಿಲ್ಲ. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಅನೇಕ ಕಾಯ್ದೆಗಳು, ಭಾರತೀಯ ದಂಡ ಸಂಹಿತೆ, ಅಪರಾಧ ಸಂಹಿತೆಯ ಹಲವಾರು ಸೆಕ್ಷನ್‌ಗಳು ಕಾನೂನು ಕಾಪಾಡಲು ಇವೆ. ನನ್ನ ಸೇವಾವಧಿಯಲ್ಲಿ ಬಹುತೇಕ ಎಲ್ಲಾ ಸೆಕ್ಷನ್‌ಗೆ ಅನ್ವಯವಾಗುವ ಪ್ರಕರಣಗಳನ್ನು ದಾಖಲಿಸಿದ್ದೇನೆ. ಅವುಗಳಲ್ಲಿ ನಾನು ಕಂಡ ಅತಿ ಸೂಕ್ಷ್ಮವಾದ ಪ್ರಕರಣಗಳು ಮಹಿಳೆಯರಿಗೆ ಸಂಬಂಧಪಟ್ಟವು.ಎಂಬತ್ತರ ದಶಕದ ಹಿಂದೆ ಮಹಿಳೆಯರಿಗೆ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುವುದು ವ್ಯಾಪಕವಾಗಿತ್ತು. ಕೌಟುಂಬಿಕ ಕಲಹದಿಂದ ನೊಂದು ಅನೇಕ ಮಹಿಳೆಯರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದರು. ಭಾರತೀಯ ಸಂಪ್ರ ದಾಯದ ಬೇರುಗಳು ಗಟ್ಟಿ. ಹಾಗಾಗಿ ಮದುವೆ ಮಾಡಿಕೊಟ್ಟ ಹುಡುಗಿಯ ಮನೆಯವರು, ಗಂಡನ ಮನೆಯಲ್ಲಿನ ಎಲ್ಲಾ ನೋವು ಗಳನ್ನೂ ನುಂಗಿಕೊಂಡು ಹೋಗು ಎಂದೇ ಅವಳಿಗೆ ಕಿವಿಮಾತು ಹೇಳುತ್ತಿದ್ದರು. ಈಗಲೂ ಹಾಗೆ ಹೇಳುವವರನ್ನು ಕಾಣುತ್ತೇವೆ. ಮರ್ಯಾದೆಗಾಗಿ ಎಂಥ ಕಷ್ಟ ಬಂದರೂ ಅನುಸರಿಸಿಕೊಂಡು ಹೋಗಬೇಕಾದದ್ದು ಸತಿ ಧರ್ಮ ಎಂದು ಪ್ರತಿಪಾದಿಸುವವರು ಅನೇಕರು.ಆಗ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆದರೆ ಅದಕ್ಕೆಂದೇ ಪ್ರತ್ಯೇಕವಾದ ಕಾನೂನು ಇರಲಿಲ್ಲ. ಕಿರುಕುಳದಿಂದ ಮನನೊಂದು ಹೆಣ್ಣುಮಕ್ಕಳು ಆತ್ಮಹತ್ಯೆ ಮಾಡಿಕೊಂಡರೆ ಅದನ್ನು ಅಸಹಜ ಸಾವು ಎಂದು 174 ಸಿಆರ್‌ಪಿಸಿ ಅಡಿಯಲ್ಲಿ ಪ್ರಕರಣ ದಾಖಲು ಮಾಡಿ ಕೊಳ್ಳುತ್ತಿದ್ದೆವು. ನಿಯಮದಂತೆ ಪೋಸ್ಟ್ ಮಾರ್ಟಮ್ ಮಾಡಿಸುತ್ತಿದ್ದೆವು. ಅದು ಆತ್ಮಹತ್ಯೆ ಯನ್ನು ದೃಢಪಡಿಸುತ್ತಿತ್ತು. ಅಲ್ಲಿಗೆ ಪ್ರಕರಣ ಮುಗಿದುಹೋಗುತ್ತಿತ್ತು. ಅಂಥ ಆತ್ಮಹತ್ಯೆಯ ಹಿಂದಿನ ಸತ್ಯಗಳು ಬೆಳಕಿಗೆ ಬರುತ್ತಲೇ ಇರಲಿಲ್ಲ. ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರು ಅನುಭವಿಸುವ ನರಕ ಯಾತನೆಗಳ ಬಗ್ಗೆ ಬಹುಶಃ ಪೊಲೀಸರಷ್ಟು ಆಳವಾಗಿ ಗೊತ್ತಿರುವವರು ವಿರಳ.ಮಹಿಳಾ ದೌರ್ಜನ್ಯ ವ್ಯಾಪಕವಾದ ನಂತರ, ಬಹುಶಃ 1983-84ರಲ್ಲಿ ಭಾರತೀಯ ದಂಡ ಸಂಹಿತೆ `498ಎ~ ಸೆಕ್ಷನ್ ಜಾರಿಗೆ ಬಂದಿತು. ಮದುವೆಯಾದ ಮಹಿಳೆಯರಿಗೆ ಪತಿ ಹಾಗೂ ಅವನ ಕುಟುಂಬದವರು ಮಾನಸಿಕ ಅಥವಾ ದೈಹಿಕ ಹಿಂಸೆ ನೀಡಿದ್ದು ಸಾಬೀತಾದರೆ ಮೂರು ವರ್ಷಗಳವರೆಗೆ ಜೈಲುಶಿಕ್ಷೆ ನೀಡುವ ಅವಕಾಶ ಸೃಷ್ಟಿಯಾಯಿತು. ಆಮೇಲೆ `ವರದಕ್ಷಿಣೆ ನಿರ್ಮೂಲನೆ ಕಾಯ್ದೆ~ ಬಂದಿತು. ಮಹಿಳೆಯರಿಗೆ ಕಾನೂನಿನಲ್ಲೂ ಗೌರವ ಸಿಗುವಂತಾದದ್ದೇ ಆಗ. ಕೆಲವರು ಈ ಕಾನೂನಿನ ದುರುಪಯೋಗ ಮಾಡಿಕೊಂಡರೆಂಬುದು ನಿಜವಾದರೂ ಮಹಿಳಾ ದೌರ್ಜನ್ಯವನ್ನು ಮಟ್ಟಹಾಕಲು ಇಂಥ ಕಾನೂನು ಅತ್ಯಗತ್ಯವಾಗಿತ್ತೆಂಬುದು ನಮ್ಮ ಅನುಭವಕ್ಕೆ ಬಂದಿತ್ತು.ಶೀಲದ ಶಂಕೆ, ಕುಟುಂಬದ ಇತರೆ ಸದಸ್ಯರನ್ನು ಆಡಿಕೊಳ್ಳುವುದು, ಅಂತಸ್ತು ಹಿಡಿದು ಹೀಯಾಳಿಸುವುದು, ಸಂಬಂಧಿಕರನ್ನು ಮೂದಲಿಸುವುದು, ಸೌಂದರ್ಯವತಿ ಅಲ್ಲದವ ರನ್ನು ಮಾತುಗಳಿಂದ ಚುಚ್ಚುವುದು ಮೊದಲಾದ ಪ್ರಸಂಗಗಳು ಭಾರತೀಯ ಸಮಾಜದಲ್ಲಿ ಅಪರೂಪವೇನೂ ಅಲ್ಲ. ಆದರೆ, ಅವುಗಳಿಂದ ಮಹಿಳೆಯ ಮನಸ್ಸಿಗೆ ಆಗುವ ಘಾಸಿ ತುಂಬಾ ಗಂಭೀರವಾದದ್ದು. ಹಾಗಾಗಿಯೇ ಮಹಿಳೆಯು ತನ್ನ ಗಂಡ ಕುರೂಪಿ, ಕತ್ತೆ, ಕೋತಿ ಎಂದು ಹೀಗಳೆದರೆ ಅದಕ್ಕೂ `498ಎ~ ಅನ್ವಯ ಪ್ರಕರಣ ದಾಖಲಿಸಬಹುದು. ಅದು ಸಾಬೀತಾ ದಲ್ಲಿ ಹೀಯಾಳಿಸಿದವನಿಗೆ ಶಿಕ್ಷೆ ಯಾಗುತ್ತದೆ. ಮಹಿಳೆಯರನ್ನು ಕಾಪಾಡಲು ಹೊಸದಾಗಿ ಕಾನೂನನ್ನು ತಂದಾಗ ನಾವು ಸೂಕ್ಷ್ಮವಾಗಿ ಅದನ್ನು ಗಮನಿಸಿದ್ದೆವು. ಕಾನೂನು ತಜ್ಞರು ಮಹಿಳೆಯ ಮೇಲೆ ಆಗುತ್ತಿದ್ದ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ತಲಸ್ಪರ್ಶಿಯಾಗಿ ತಿಳಿದುಕೊಂಡು, ಹಲವು ಪ್ರಕರಣಗಳನ್ನು ಅಧ್ಯಯನ ಮಾಡಿಯೇ ಕ್ರಮ ತೆಗೆದುಕೊಂಡಿದ್ದಾರೆ ಎಂಬುದು ನಮಗೆ ಸ್ಪಷ್ಟವಾಗಿತ್ತು.ಮಹಿಳೆಯ ಮೇಲೆ ದೈಹಿಕ ಹಲ್ಲೆ ನಡೆದರೆ ಅಂಥ ಪ್ರಕರಣಗಳು ಬೆಳಕಿಗೆ ಬರುತ್ತಿದ್ದವು. ಆದರೆ, ಕೆಲವು ವಿದ್ಯಾವಂತರು, ಕಾನೂನಿನ ಅರಿವಿರುವವರು ಬಹಳ ಬುದ್ಧಿವಂತಿಕೆಯಲ್ಲೇ ಹೆಣ್ಣುಮಕ್ಕಳಿಗೆ ಶೋಷಣೆ ನೀಡುವುದನ್ನು ಮುಂದುವರಿಸಿದ್ದರು.1990ರಿಂದ 93ರವರೆಗೆ ನಾನು ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ಸಬ್ ಇನ್ಸ್‌ಪೆಕ್ಟರ್ ಆಗಿದ್ದೆ. ಆಗ `498 ಎ~ ಪ್ರಕಾರ ಒಂದು ದೂರು ಬಂದಿತು. ರಾಜ್ಯ ಸರ್ಕಾರಿ ಇಲಾಖೆಯ ಶಿಕ್ಷಣ ಇಲಾಖೆಯಲ್ಲಿ ಕೆಲಸ ಮಾಡುವ ಹೆಣ್ಣು ಮಗಳೊಬ್ಬಳು ಕೊಟ್ಟ ದೂರು ಅದು. ಸುಶಿಕ್ಷಿತೆ ಯಾಗಿದ್ದ ಆಕೆಯ ಪತಿ ಎಂಜಿನಿಯರಿಂಗ್ ಪದವೀಧರ. ಪ್ರತಿಷ್ಠಿತ ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದ. ರಾಜ್ಯ ಪೊಲೀಸ್ ಮುಖ್ಯಸ್ಥರ ಮಗನೇ ಕಾಲೇಜಿನಲ್ಲಿ ಅವನ ಸಹಪಾಠಿಯಾಗಿದ್ದ. ಹಾಗಾಗಿ ಆ ದೂರು ಮುಂದೆ ಬೇರೆ ಒತ್ತಡಗಳನ್ನೆಲ್ಲಾ ಹಾಕತೊಡಗಿತು.

ದೂರು ಕೊಟ್ಟ ಹೆಣ್ಣುಮಗಳ ತಂದೆಯೂ ಸರ್ಕಾರಿ ಇಲಾಖೆಯಲ್ಲೇ ಹಿರಿಯ ಅಧಿಕಾರಿಯಾಗಿ ನಿವೃತ್ತಿಯಾದವರು. ಸಜ್ಜನರ ಕುಟುಂಬ ಅದು. ತಾಯಿ-ತಂದೆ ಇಲ್ಲದ ಹುಡುಗನಿಗೆ ಮಗಳನ್ನು ಕೊಟ್ಟು ಮದುವೆ ಮಾಡಿದ್ದರು. ಹುಡುಗ ಅಕ್ಕನ ಮನೆಯಲ್ಲಿ ವಾಸವಿದ್ದ. ಅವನ ಅಕ್ಕನೋ ತುಂಬಾ ಘಟವಾಣಿ. ಕಟ್ಟಳೆಗಳಿಲ್ಲದೆ ಮುಕ್ತವಾದ ಕೌಟುಂಬಿಕ ಪರಿಸರದಲ್ಲಿ ಬೆಳೆದ ಹುಡುಗಿ ಆ ಮನೆಯಲ್ಲಿ ಮಾನಸಿಕಯಾತನೆ ಅನುಭವಿಸಬೇಕಾ ಯಿತು. ಇನ್ನು ಆ ಕಿರುಕುಳ ಸಹಿಸಿಕೊಳ್ಳಲಾಗದು ಎಂದು ದೂರಿನಲ್ಲಿ ಬರೆದಿದ್ದಳು.ನಾವು ನಡೆದ ಸಂಗತಿಯನ್ನು ವಿವರವಾಗಿ ಕೇಳಿದೆವು. ಪ್ರತಿ ತಿಂಗಳು ಋತುಸ್ರಾವವಾದಾಗ ಆ ಹುಡುಗಿಯನ್ನು ವರಾಂಡದಲ್ಲಿ ಕೂರುವಂತೆ ಒತ್ತಾಯಿಸುತ್ತಿದ್ದರು. ಅಲ್ಲೊಂದು ಅಲ್ಯುಮಿನಿಯಂ ತಟ್ಟೆ ಇಟ್ಟು, ಅದರಲ್ಲೇ ಕೊಟ್ಟಷ್ಟು ಊಟ ಮಾಡಬೇಕೆಂಬುದು ಅವರ ತಾಕೀತು. `ಮಡಿ- ಮೈಲಿಗೆ ಎಂದು ಹೀಗೆಲ್ಲಾ ಈ ಕಾಲದ್ಲ್ಲಲಿ ಯಾರು ಈ ರೀತಿ ಇರುತ್ತಾರೆ~ ಎಂದು ಹುಡುಗಿ ಪ್ರಶ್ನಿಸಿದರೆ, ಅದು ತಮ್ಮ ಮನೆಯ ಸಂಪ್ರದಾಯ ಎಂದು ಕುಟುಕುತ್ತಿದ್ದರು.ಬರೀ ಇಷ್ಟೇ ಅಲ್ಲ, ಪ್ರತಿ ತಿಂಗಳೂ ಹೊರಗಾದಾಗ ಕೆಲಸಕ್ಕೆ ಹೋಗಬೇಡ ಎಂದು ಗಂಡ ಹಾಗೂ ಆತನ ಅಕ್ಕ ಪೀಡಿಸತೊಡಗಿದ್ದರು. ತಿಂಗಳಿಗೆ ಐದು ದಿನದಂತೆ ವರ್ಷಕ್ಕೆ 60 ದಿನ ಋತುಸ್ರಾವಕ್ಕೆಂದೇ ಯಾರು ತಾನೆ ರಜಾ ಹಾಕಲು ಸಾಧ್ಯ? ಹುಡುಗಿ ಅದನ್ನು ಪ್ರತಿಭಟಿಸಿದಾಗ ಮಾನಸಿಕ ಹಿಂಸೆ ಇನ್ನೂ ಹೆಚ್ಚಾಯಿತೇ ವಿನಾ ತೊಂದರೆ ನೀಗಲಿಲ್ಲ. ತಂದೆ-ತಾಯಿ ಬಳಿ ಹೇಳಿಕೊಂಡಾಗಲೂ ಹೇಗಾದರೂ ಅನುಸರಿಸಿಕೊಂಡು ಹೋಗ ಬೇಕೆಂದು ಸೂಚಿಸಿದ್ದರು.ದೀರ್ಘ ಕಾಲ ಈ ಕಾಟವನ್ನು ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ದಿನ ಹುಡುಗಿಯು ತಾನೇ ಒಳಮನೆಯಲ್ಲಿ ಮಲಗುತ್ತೇನೆಂದೂ, ಬೇಕಿದ್ದರೆ ಅಕ್ಕ-ತಮ್ಮನೇ ಹೊರಗೆ ಮಲಗು ವಂತೆಯೂ ಸೂಚಿಸಿದಳು. ಚಳಿಗಾಲದಲ್ಲಿ ಚಾದರವಿಲ್ಲದೆ, ಗಾಳಿ ತೂರಿಬರುವ ವರಾಂಡದಲ್ಲಿ ಮಲಗುವುದು ಕಷ್ಟಸಾಧ್ಯವಾದ ಕಾರಣ ಹುಡುಗಿಗೆ ಹಾಗೆ ಪ್ರತಿಭಟಿಸದೆ ವಿಧಿಯೇ ಇರಲಿಲ್ಲ. ಎಲ್ಲಿ ಅವಳು ಹಾಸಿಗೆ ಹತ್ತುತ್ತಾಳೋ ಎಂದು ಅಕ್ಕ-ತಮ್ಮ ಇಬ್ಬರೂ ಇಡೀ ಹಾಸಿಗೆ ಮೇಲೆ ಐದಾರು ಕೊಡ ನೀರನ್ನು ಸುರಿದರು. ಆ ಘಟನೆಯನ್ನು ಕಂಡು ಹುಡುಗಿಯ ಮನಸ್ಸು ಆಘಾತಕ್ಕೊಳಗಾಯಿತು. ಬೇರೆ ವಿಧಿಯೇ ಇಲ್ಲದೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿಬಂದಳು.ಮನೆಯಲ್ಲಿ ಕಾಟ ಕೊಡುತ್ತಿದ್ದ ಆ ಹುಡುಗಿಯ ಗಂಡ ಹೊರಗೆ ಮಾತ್ರ ಸಂಭಾವಿತನಂತೆ ಗುರುತಿಸಿಕೊಂಡಿದ್ದ. ರಾಜ್ಯ ಪೊಲೀಸ್ ಮುಖ್ಯಸ್ಥರ ಮಗನೇ ಅವನ ಗೆಳೆಯನಾಗಿದ್ದ.ಅಮೆರಿಕದಲ್ಲಿ ಇದ್ದ ಪೊಲೀಸ್ ಮುಖ್ಯಸ್ಥರ ಮಗನಿಗೆ ಇಲ್ಲಿಂದಲೇ ತನ್ನ ಹೆಂಡತಿ ದೂರು ಕೊಟ್ಟಿರುವ ಸಂಗತಿಯನ್ನು ಆ ಹುಡುಗಿಯ ಗಂಡ ತಿಳಿಸಿದ್ದ. ಇದರಲ್ಲಿ ತನ್ನದೇನೂ ತಪ್ಪಿಲ್ಲವೆಂದು ನಂಬಿಸಿದ್ದ. ಪೊಲೀಸ್ ಮುಖ್ಯಸ್ಥರು ನನ್ನನ್ನು ಸಂಪರ್ಕಿಸಿದರು. ನಾನು ಹುಡುಗಿಯ ಪರಿಸ್ಥಿತಿಯನ್ನು ಎಷ್ಟೇ ವಿವರಿಸಿದರೂ ಅವರು ನಂಬಲಿಲ್ಲ. `ಅವನು ಹಾಗೆ ಮಾಡಲು ಸಾಧ್ಯವೇ ಇಲ್ಲ. ಅವನನ್ನು ಚಿಕ್ಕ ವಯಸ್ಸಿನಿಂದಲೂ ನಾನು ನೋಡಿದ್ದೇನೆ. ಹೀ ಈಸ್ ಎ ಜಂಟಲ್‌ಮನ್~ ಎಂದುಬಿಟ್ಟರು.ಪೊಲೀಸ್ ಮುಖ್ಯಸ್ಥರಿಗೆ ಕೇಸನ್ನು ಯಾರಿಂದ ಯಾರಿಗಾದರೂ ವರ್ಗಾವಣೆ ಮಾಡುವ ಅಧಿಕಾರ ಇದೆ. ಅವರು ನನ್ನಿಂದ ಈ ಕೇಸನ್ನು ಕಿತ್ತುಕೊಂಡು ಎಸಿಪಿ ಒಬ್ಬರಿಗೆ ಕೊಟ್ಟರು. ಆ ಎಸಿಪಿ ತುಂಬಾ ವೃತ್ತಿಪರರಾಗಿದ್ದರು. ಅವರಿಗೆ ಹುಡುಗಿಯ ಪರಿಸ್ಥಿತಿ ಎಷ್ಟು ಕೆಟ್ಟದಾಗಿದೆ ಎಂಬುದು ಮನವರಿಕೆಯಾಯಿತು. ಮುಂದೆ ಬಹುಶಃ ರಾಜೀ ಮೂಲಕ ಆ ಗಂಡ-ಹೆಂಡತಿ ಸಮಸ್ಯೆ ಬಗೆಹರಿಯಿತೆಂದು ಕಾಣುತ್ತದೆ.ನಟ ದರ್ಶನ್ ಹಾಗೂ ಅವರ ಪತ್ನಿಯ ನಡುವಿನ ಕೌಟುಂಬಿಕ ಸಮಸ್ಯೆ ಈಗ ಚರ್ಚೆಯ ವಸ್ತುವಾಗಿದೆ. ಹಾಗಾಗಿ ಈ ಸಂದರ್ಭದಲ್ಲಿ ನನಗೆ ಕೆಲವು ಹೆಣ್ಣುಮಕ್ಕಳು ಅನುಭವಿಸಿದ ಮಾನಸಿಕ ಯಾತನೆಯ ಕಥೆಗಳು ತಂತಾವೇ ನೆನಪಾಗುತ್ತಿವೆ.

ಮುಂದಿನ ವಾರ: ಇನ್ನೊಬ್ಬ ಮಹಿಳೆಯ ವಿಚಿತ್ರ ಯಾತನೆ

 ಶಿವರಾಂ ಅವರ ಮೊಬೈಲ್  ಸಂಖ್ಯೆ 94483 13066

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry