ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಗುರುವಾರ , ಮಾರ್ಚ್ 21, 2019
26 °C

ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಕೆ. ಜಿ. ಕೃಪಾಲ್
Published:
Updated:
ಹೂಡಿಕೆದಾರರಲ್ಲಿ ಮೂಡಿದ ಗೊಂದಲ

ಷೇರುಪೇಟೆಯ ಏರಿಳಿತಗಳು ಕ್ಷಣಿಕ ಮಾತ್ರವಾಗಿರುವುದಕ್ಕೆ  ಹೆಚ್ಚಿನವರಿಗೆ ಗೊಂದಲಮಯವಾಗಿದೆ. ವಿಶೇಷವಾಗಿ ದೀರ್ಘಕಾಲೀನ ಹೂಡಿಕೆ ಎಂಬ ದೃಷ್ಟಿಯಿಂದ ಹೂಡಿಕೆ ಮಾಡಿದವರಿಗಂತೂ ಹೆಚ್ಚಿನ ಗೊಂದಲ ಮೂಡುವುದು ಸಹಜ. ಇದಕ್ಕೆ ಕಾರಣವೆಂದರೆ ಪೇಟೆಯಲ್ಲಿ ಉಂಟಾಗುತ್ತಿರುವ ತೀವ್ರತರ ಅಸಮತೋಲನೆಯಾಗಿದೆ.

ಈಗ ಬ್ಯಾಂಕ್ ಬಡ್ಡಿದರ ಫ್ಲೋಟ್, ಪೆಟ್ರೋಲ್ ದರ ಫ್ಲೋಟ್, ಬಸ್ ಪ್ರಯಾಣದ ದರ ಫ್ಲೋಟ್, ಗ್ರಾಹಕ ನಿರ್ಧಾರವು ಫ್ಲೋಟ್, ಇದರಿಂದ ವ್ಯಾಪಾರವೆಲ್ಲ ಕ್ಲಾಟ್. ಹೀಗಿರುವಾಗ ಷೇರುಪೇಟೆಯಲ್ಲಿ ಷೇರಿನ ದರಗಳು ಸ್ಥಿರವಾಗಿರಬೇಕೆಂದು ಬಯಸುವುದು ಸರಿಯಲ್ಲ. ಪೇಟೆಯ ವಾತಾವರಣವನ್ನವಲಂಬಿಸಿ, ಖರೀದಿಸಿದ ದರದಮೇಲೆ ಲಭ್ಯವಿರುವ ಲಾಭದ ಆಧಾರದ ಮೇಲೆ ಪ್ರಾಫಿಟ್ ಬುಕ್ ಮಾಡುವುದು ಅತ್ಯವಶ್ಯಕ.

ಇದನ್ನು ಪುಷ್ಟೀಕರಿಸಲು ಎ ಗುಂಪಿನ ಕಂಪನಿ ವಕ್ರಾಂಗಿ ಲಿಮಿಟೆಡ್ ತನ್ನ ಕುಸಿತದ ಪಯಣವನ್ನು ನಿರಂತರವಾಗಿ,  ಷೇರುದಾರರಿಗೆ ಮಾರಾಟ ಮಾಡುವ ಸವಲತ್ತಿನಿಂದ ವಂಚಿತರನ್ನಾಗಿಸಿ, ಮುಂದುವರೆದು ವಾರ್ಷಿಕ ಕನಿಷ್ಠ ₹ 154.85 ರಲ್ಲಿ ವಾರಾಂತ್ಯ ಕಂಡಿದೆ.  ಜನವರಿ 24 ರಂದು ₹ 515 ರ ಸಮೀಪದಲ್ಲಿದ್ದಂತಹ ಈ ಷೇರು ಈ ರೀತಿ ಕುಸಿದಿರುವುದಕ್ಕೆ ಯಾವುದೇ ಅಧಿಕೃತ ಕಾರಣ ಹೊರಬಂದಿಲ್ಲದಿರುವುದು ಹೂಡಿಕೆದಾರರಲ್ಲಿ ಹೆಚ್ಚಿನ ಗೊಂದಲ ಮೂಡಿಸಿದೆ.

ಬುಧವಾರ ಮಾರುತಿ ಸುಜುಕಿ ಕಂಪನಿ ಷೇರಿನ ಬೆಲೆ ₹8,772 ರ ಸಮೀಪದಿಂದ ₹8,934 ಕ್ಕೆ ಕೇವಲ ಒಂದೆರಡು ಗಂಟೆಗಳಲ್ಲಿ ಜಿಗಿತ ಕಂಡಿತು. ಅಂದು ದಿನದ ಆರಂಭದಲ್ಲಿ ಕೆನರಾ ಬ್ಯಾಂಕ್ ಷೇರಿನ ಬೆಲೆಯೂ ₹285 ರ ಸಮೀಪಕ್ಕೆ ಕುಸಿದು ನಂತರ ಪುಟಿದೆದ್ದು ₹303ಕ್ಕೆ ತಲುಪಿತು. ಅಂದು ಫಲಿತಾಂಶ ಪ್ರಕಟಿಸಲಿದ್ದ ರೇನ್ ಇಂಡಸ್ಟ್ರೀಸ್ ಷೇರಿನ ಬೆಲೆ ₹409 ರವರೆಗೂ ಜಿಗಿದು, ಹಣಕಾಸು ಸಾಧನೆ  ಪ್ರಕಟವಾಗುತ್ತಿದ್ದಂತೆ, ಪ್ರಕಟಿಸಿದ ಫಲಿತಾಂಶ ಕಳಪೆಯಾಗಿದ್ದ ಕಾರಣ ಷೇರಿನ ಬೆಲೆ ವಾರಾಂತ್ಯದಲ್ಲಿ  ₹359 ರವರೆಗೂ ಕುಸಿದು ₹362 ರಲ್ಲಿ ಕೊನೆಗೊಂಡಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್, ಓರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್ ಮುಂತಾದವುಗಳಲ್ಲಿನ  ಹಗರಣಗಳ ಕಾರಣ  ಸರ್ಕಾರವು ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳಲ್ಲಿ ಉಂಟಾದ ₹50 ಕೋಟಿಗೂ ಹೆಚ್ಚಿನ ಎನ್‌ಪಿಎ ಪ್ರಕರಣಗಳನ್ನು ತನಿಖೆ ನಡೆಸಿ ನಿಯಮಬಾಹಿರ ಅಂಶಗಳಿದ್ದಲ್ಲಿ ಹದಿನೈದು ದಿನಗಳಲ್ಲಿ ಸಿಬಿಐಗೆ ನೀಡಲು ಬ್ಯಾಂಕ್‌ಗಳ ನಿರ್ದೇಶಕ ಮಂಡಳಿಗಳಿಗೆ ಆದೇಶಿಸಿರುವುದು ಬುಧವಾರ ಬ್ಯಾಂಕಿಂಗ್ ಷೇರುಗಳ ತೀವ್ರತರ ಕುಸಿತಕ್ಕೆ ಕಾರಣವಾಯಿತು. ಪಂಜಾಬ್ ನ್ಯಾಷನಲ್ ಬ್ಯಾಂಕ್, ದಿನದ ಆರಂಭಿಕ ಕ್ಷಣಗಳಲ್ಲಿ ₹92 ರ ವಾರ್ಷಿಕ ಕನಿಷ್ಠದ ದಾಖಲೆ ನಿರ್ಮಿಸಿ ಅಲ್ಲಿಂದ ಪುಟಿದೆದ್ದು ₹102 ರ ಸಮೀಪಕ್ಕೆ ತಲುಪಿ ₹101 ರಲ್ಲಿ ಕೊನೆಗೊಂಡಿದೆ.

ಮುಂಬೈ ಷೇರು ವಿನಿಮಯ ಕೇಂದ್ರದ ಹೆಗ್ಗುರುತಾದ 'ಸೆನ್ಸೆಕ್ಸ್' ಫೆಬ್ರುವರಿ ತಿಂಗಳಲ್ಲಿ ನಿರಾಶಾದಾಯಕ ಸ್ಪಂದನೆ ನೀಡಿದೆ. ಇದಕ್ಕೆ ಕಾರಣ ಕೇಂದ್ರೀಯ ಬಜೆಟ್ ಪ್ರಭಾವ, ಜೊತೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್‌ನ ಬಹುಕೋಟಿ ಹಗರಣವಾಗಿದೆ. ಬ್ಯಾಂಕಿಂಗ್ ಹಗರಣಕ್ಕೂ ಸೆನ್ಸೆಕ್ಸ್ ಕುಸಿತಕ್ಕೂ ಯಾವ ಸಂಬಂಧ ಎಂಬ ಸಂಶಯ ಹಲವರಲ್ಲಿ ಮೂಡುವುದು ಸಹಜ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಸೆನ್ಸೆಕ್ಸ್ ನಲ್ಲಿರುವ 30 ಕಂಪನಿಗಳಲ್ಲಿ ಎಂಟು ಕಂಪನಿಗಳು ಬ್ಯಾಂಕಿಂಗ್ ವಲಯದ ಕಂಪನಿಗಳಾಗಿವೆ. ಹೀಗಾಗಿ ಬ್ಯಾಂಕಿಂಗ್ ಕ್ಷೇತ್ರದ ಪ್ರತಿಯೊಂದು ಬದಲಾವಣೆಯು ಸೆನ್ಸೆಕ್ಸ್ ಮೇಲೆ ನೇರ ಪರಿಣಾಮ ಬೀರುತ್ತದೆ.

ಪೇಟೆಯಲ್ಲಿ ಅಗ್ರಮಾನ್ಯ ಕಂಪನಿಗಳು ಒತ್ತಡದಲ್ಲಿರುವ ಈ ಸಂದರ್ಭದಲ್ಲಿ ವಹಿವಾಟುದಾರರು ತಮ್ಮ ಚಟುವಟಿಕೆಯನ್ನು ಬೇರೆ ದಿಕ್ಕಿಗೆ ಬದಲಿಸಿಕೊಂಡಿರುತ್ತಾರೆ. ಈ ವಾರದಲ್ಲಿ ಭಾರತ್ ಬಿಜಲಿ ಕಂಪನಿ ಷೇರಿನ ಬೆಲೆ ₹1,447 ರ ಸಮೀಪದಿಂದ ವಾರ್ಷಿಕ ಗರಿಷ್ಠ  ₹1,760 ರವರೆಗೂ ಜಿಗಿತ ಕಾಣುವಂತಾಗಿದೆ. ಗಾಡ್ರೇಜ್ ಆಗ್ರೋ ವೆಟ್ ಕಂಪನಿ ಐಪಿಒ ಲಿಸ್ಟ್ ಅದ ನಂತರದಲ್ಲಿ ಕುಸಿತಕ್ಕೊಳಗಾಗಿದ್ದು ಶುಕ್ರವಾರ  ಸಾರ್ವಕಾಲಿಕ ಗರಿಷ್ಠ ₹ 670 ರವರೆಗೂ ಜಿಗಿತ ಕಂಡು ₹654 ರಲ್ಲಿ ವಾರಾಂತ್ಯ ಕಂಡಿದೆ. ಇದರೊಂದಿಗೆ ನೋಸಿಲ್, ಗ್ರಾಫೈಟ್ ಇಂಡಿಯಾ,  ಸುದರ್ಶನ್ ಕೆಮಿಕಲ್ಸ್ ಷೇರುಗಳಲ್ಲಿ ಕಂಡುಬಂದ ಏರಿಕೆ ಗಮನಿಸಿದಾಗ ಮಧ್ಯಮ ಮತ್ತು ಕೆಳಮಧ್ಯಮ ಶ್ರೇಣಿಯ ಸಾಧನೆಯಾಧಾರಿತ ಕಂಪನಿಗಳಲ್ಲಿ ಇನ್ನು ಆಸಕ್ತಿ ಇದೆ ಎಂದೆನಿಸುತ್ತದೆ.

ಪಾರ್ಟಿಸಿಪೇಟರಿ ನೋಟ್ ಮೂಲಕ ದೇಶದೊಳಗೆ ಹರಿದು ಬರುತ್ತಿರುವ ಹಣದ ಪ್ರಮಾಣವು ಜನವರಿ ಅಂತ್ಯದಲ್ಲಿ ಆಗಸ್ಟ್ 2009 ರ ನಂತರದ ಕನಿಷ್ಠಮಟ್ಟಕ್ಕೆ ಕುಸಿದು ₹1,19,556 ಕೋಟಿಗೆ ಇಳಿಕೆಯಾಗಿರುವುದು ಸಹ ಪೇಟೆಯ ನಿರುತ್ಸಾಹಮಯ ವಾತಾವರಣಕ್ಕೆ ಕಾರಣವಾಗಿದೆ. ನಿಯಂತ್ರಕರ ಬಿಗಿ ನಿಯಮಾವಳಿಯು ಸಹ ಈ ಒಳಹರಿವಿನ ಪ್ರಮಾಣ ಇಳಿಕೆಯಾಗಲು ಕಾರಣವಾಗಿದೆ.

ಫೆಬ್ರುವರಿ ತಿಂಗಳಲ್ಲಿ ಆಟೊ ವಲಯದ ಕಂಪನಿಗಳು ಉತ್ತಮ ಮಾರಾಟದ ಅಂಕಿ ಅಂಶಗಳನ್ನು ಪ್ರಕಟಿಸಿರುವುದರ ಜೊತೆಗೆ ಉತ್ತಮ ಜಿ ಡಿ ಪಿ ಬೆಳವಣಿಗೆಯು ಪೇಟೆಗೆ ಸ್ಫೂರ್ತಿದಾಯಕವಾದರೆ ವಿಶ್ವದ ಇತರೆ  ಪೇಟೆಗಳಲ್ಲುಂಟಾಗಿರುವ ಕುಸಿತವು ಭಾರತೀಯ ಪೇಟೆಗಳ ಮೇಲೆ ಬೀರಬಹುದಾದ ಪ್ರಭಾವವು ಸೋಮವಾರ ತಿಳಿಯಲಿದೆ.

ಏರ್‌ಸೆಲ್‌  ಸೆಲ್ಲ್ಯುಲರ್ ಲಿ ಕಂಪನಿ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ ಮುಂದೆ ದಿವಾಳಿತನಕ್ಕೆ ಅರ್ಜಿ ಸಲ್ಲಿಸಿರುವುದು ಇಂದಿನ ವ್ಯಾವಹಾರಿಕ ಶೈಲಿಗೆ ಹಿಡಿದ ಕನ್ನಡಿಯಾಗಿದೆ. ಕೇವಲ ವಹಿವಾಟಿನ ಗಾತ್ರ ಮತ್ತು ಸಂಖ್ಯೆಯ ಸ್ಪರ್ಧೆಯಲ್ಲಿ ಮೂಲ ಉದ್ದೇಶವಾದ ಲಾಭ ಗಳಿಕೆ ಎಂಬ ಅಂಶವು ಮಾಯವಾಗುತ್ತಿರುವದು ಈ ದುರವಸ್ಥೆಗೆ ಕಾರಣವಾಗಿದೆ.

ಒಟ್ಟಾರೆ ನಾಲ್ಕು ದಿನಗಳ ಈ ವಾರದಲ್ಲಿ ನಿಖರವಾದ ಚಲನೆ ಪ್ರದರ್ಶಿಸಲಾಗದೆ ಸಂವೇದಿ ಸೂಚ್ಯಂಕವು 95 ಪಾಯಿಂಟುಗಳ ಇಳಿಕೆಗೊಳಪಟ್ಟಿತು. ಮಧ್ಯಮ ಶ್ರೇಣಿ ಸೂಚ್ಯಂಕವು  100 ಪಾಯಿಂಟುಗಳ ಇಳಿಕೆ ಕಂಡಿತು. ಕೆಳಮಧ್ಯಮ ಶ್ರೇಣಿ ಸೂಚ್ಯಂಕವು 88 ಪಾಯಿಂಟುಗಳ ಏರಿಕೆ ಕಂಡಿತು. ಸ್ವದೇಶಿ ವಿತ್ತೀಯ ಸಂಸ್ಥೆಗಳು ₹4,049 ಕೋಟಿ ಮೌಲ್ಯದ ಷೇರು ಖರೀದಿಸಿದರೆ ವಿದೇಶಿ ವಿತ್ತೀಯ ಸಂಸ್ಥೆಗಳು ₹3,535 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಪೇಟೆಯ ಬಂಡವಾಳೀಕರಣ ಮೌಲ್ಯವು ₹147.15 ಲಕ್ಷ ಕೋಟಿಯಲ್ಲಿ ಸ್ಥಿರತೆ ಕಂಡುಕೊಂಡಿತ್ತು.

ಲಾಭಾಂಶ ವಿಚಾರ: ಪವರ್ ಫೈನಾನ್ಸ್ ಕಾರ್ಪೊರೇಷನ್ ಪ್ರತಿ ಷೇರಿಗೆ ₹1.80, ಒಎನ್‌ಜಿಸಿ  ₹2.25, ಎಲಂಟಾ ಬೆಕ್ ₹4.50, ಸಿ ಈ ಎಸ್ ಸಿ  ₹12, ಸ್ಟೋವೆಕ್ ಇಂಡಸ್ಟ್ರೀಸ್ ಪ್ರತಿ ಷೇರಿಗೆ ₹36. ಟಿವಿಎಸ್ ಮೋಟಾರ್ ₹1.30, ರೇನ್ ಇಂಡಸ್ಟ್ರೀಸ್ ₹1 ರಂತೆ ಲಾಭಾಂಶ ಪ್ರಕಟಿಸಿವೆ.

ನವರತ್ನ ಕಂಪನಿ ಕೋಲ್ ಇಂಡಿಯಾ ಈ ತಿಂಗಳ 7 ರಂದು ಮಧ್ಯಂತರ ಲಾಭಾಂಶ ಪರಿಶೀಲಿಸಲಿದೆ ಎಂಬ ಸುದ್ದಿಯು ಷೇರಿನ ಬೆಲೆಯನ್ನು ಚುರುಕುಗೊಳಿಸಿ ₹305 ರ ಸಮೀಪದಿಂದ ₹316 ರವರೆಗೂ ಏರಿಕೆ ಪಡೆಯುವಂತಾಯಿತು. ಆದರೆ ಕಳೆದ ಒಂದು ತಿಂಗಳಲ್ಲಿ ₹285 ರ ಸಮೀಪದಿಂದ ಏರಿಕೆ ಕಂಡಿದೆ ಎಂಬುದು ಗಮನಾರ್ಹ ಅಂಶವಾಗಿದೆ.

ವಾರದ ಮುನ್ನೋಟ

1992 ರ ಹರ್ಷದ್ ಮೆಹ್ತಾ ಹಗರಣದ ಕಾರಣ ಪೇಟೆಯ ನಿಯಂತ್ರಕ 'ಸೆಬಿ' ತನ್ನ ಅಸ್ತಿತ್ವವನ್ನು ಪಡೆದುಕೊಂಡು ಆರೋಗ್ಯಕರ ಸುಧಾರಣೆಗಳಿಗೆ ಕಾರಣವಾದಂತೆ ಬ್ಯಾಂಕ್ ಗಳಲ್ಲುಂಟಾಗಿರುವ ಹಗರಣಗಳು ' ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಅಥಾರಿಟಿ'   ಸ್ಥಾಪನೆಗೆ ಕಾರಣವಾಗಿದೆ. ಆರ್ಥಿಕ ವಲಯದಲ್ಲಿನ ಹಗರಣಗಳ ಕಾರಣ ಕೇಂದ್ರ ಸರ್ಕಾರವು ' ನ್ಯಾಷನಲ್ ಫೈನಾನ್ಷಿಯಲ್ ರಿಪೋರ್ಟಿಂಗ್ ಅಥಾರಿಟಿ'  ಸ್ಥಾಪಿಸಲು ನಿರ್ಧರಿಸಿದೆ.  ಇದರಂತೆ  ಲಿಸ್ಟೆಡ್ ಮತ್ತು  ಲಿಸ್ಟಿಂಗ್ ಆಗದ ದೊಡ್ಡ ಕಂಪನಿಗಳ ಅಕೌಂಟಿಂಗ್ ಮತ್ತು ಅಡಿಟ್ ನಿಯಮಗಳ ಮೇಲುಸ್ತುವಾರಿ ಈ ಸಂಸ್ಥೆಗೆ ನೀಡಲಾಗುವುದು.

ಆಡಿಟರ್ ಮತ್ತು ಚಾರ್ಟರ್ಡ್ ಅಕೌಂಟಂಟ್‌ಗಳ ವೃತ್ತಿ ಲೋಪಗಳನ್ನು ಸಹ ತನಿಖೆ ಮಾಡುವುದಕ್ಕೆ ಈ ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗುವುದು.  ಇಂತಹ ಮತ್ತಷ್ಟು ಬೆಳವಣಿಗೆಗಳು, ಕ್ರಮಗಳು ತೇಲಿ ಬರುವ ಕಾರಣ,  ವಿದೇಶಿ ವಿತ್ತೀಯ ಪೇಟೆಗಳ ಪರಿಸ್ಥಿತಿಯಾಧಾರಿಸಿ ಸ್ಥಳೀಯ ಪೇಟೆಗಳು ಬದಲಾವಣೆ ಪ್ರದರ್ಶಿಸುತ್ತವೆ.  ಎಸ್ ಬಿ ಐ, ಪಿ ಎನ್ ಬಿ ಗಳು ವಿತರಿಸಬಹುದಾದ ಸಾಲಗಳ ಮೇಲೆ ಬಡ್ಡಿ ದರ ಹೆಚ್ಚಿಸಿರುವ ಕ್ರಮವು ಪೇಟೆಯ ಮೇಲೆ ವಿಶೇಷವಾಗಿ, ರಿಯಲ್ ಎಸ್ಟೇಟ್,  ಆಟೊ ವಲಯದ ಕಂಪನಿಗಳು ಒತ್ತಡವನ್ನೆದುರಿಸಬಹುದಾಗಿದೆ.

ಬೋನಸ್ ಷೇರಿನ ವಿಚಾರ:

* ಇಂಡಿಯನ್ ಆಯಿಲ್ ಕಾರ್ಪೊರೇಷನ್ ವಿತರಿಸಲಿರುವ 1:1 ರ ಅನುಪಾತದ ಬೋನಸ್ ಷೇರಿಗೆ ಈ ತಿಂಗಳ 17 ನಿಗದಿತ ದಿನವಾಗಿದೆ.

* ಶಿವಾಲಿಕ್ ರಾಸಾಯನ ಲಿ ಕಂಪನಿ 5 ರಂದು ಬೋನಸ್ ಷೇರು ವಿತರಣೆ ಪರಿಶೀಲಿಸಲಿದೆ.

(ಸಂಪರ್ಕಕ್ಕೆ 9886313380. ಸಂಜೆ 4.30 ರನಂತರ).

ವಾರದ ವಹಿವಾಟು

95 ಅಂಶ–  ಸೂಚ್ಯಂಕದ ಇಳಿಕೆ

₹ 4,049 ಕೋಟಿ –ಸ್ವದೇಶಿ ವಿತ್ತೀಯ ಸಂಸ್ಥೆಗಳು ಖರೀದಿಸಿದ ಷೇರುಗಳ ಮೌಲ್ಯ

₹ 3,535 ಕೊಟಿ –ವಿದೇಶಿ ವಿತ್ತೀಯ ಸಂಸ್ಥೆಗಳು ಮಾರಾಟ ಮಾಡಿದ ಷೇರುಗಳ ಮೌಲ್ಯ

₹147.15 ಲಕ್ಷ ಕೋಟಿ –ಷೇರುಪೇಟೆಯ ಬಂಡವಾಳ ಮೌಲ್ಯ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry