ಶನಿವಾರ, ಅಕ್ಟೋಬರ್ 19, 2019
28 °C

ಹೆಚ್ಚುತ್ತಿರುವ ಹೆಣ್ಣು ಮಕ್ಕಳ ಕಣ್ಮರೆ ಪ್ರಕರಣಗಳು

ಆರ್. ಇಂದಿರಾ
Published:
Updated:

ಕಳೆದ ಕೆಲ ದಿನಗಳಿಂದ ಬೆಳಗಿನ ವೃತ್ತ ಪತ್ರಿಕೆಗಳನ್ನು ತೆಗೆದಾಕ್ಷಣ ನಮ್ಮ ಗಮನವನ್ನು ಸೆಳೆಯುತ್ತಿರುವ ಒಂದು ಸುದ್ದಿ ಮನೆಗಳಿಂದ ಕಾಣೆಯಾಗುತ್ತಿರುವ ವ್ಯಕ್ತಿಗಳನ್ನು ಕುರಿತದ್ದು.ಈ ಗುಂಪಿನಲ್ಲಿ ವಯಸ್ಕ ಪುರುಷರು, ಮಹಿಳೆಯರು, ಬಾಲಕ-ಬಾಲಕಿಯರಲ್ಲದೆ ಹದಿಹರೆಯದ ಹೆಣ್ಣುಮಕ್ಕಳು ಮತ್ತು 18ರಿಂದ 25-30 ವರ್ಷ ವಯಸ್ಸಿನ ಮಹಿಳೆಯರು ಗಮನಾರ್ಹ ಸಂಖ್ಯೆಯಲ್ಲಿರುವುದು ಎದ್ದು ಕಾಣುತ್ತದೆ.

 

ಇವರಲ್ಲಿ ಮಕ್ಕಳ ತಾಯಂದಿರು ಹಾಗೂ ನವ ವಿವಾಹಿತೆಯರೂ ಇದ್ದಾರೆ. ಹೆಣ್ಣುಮಕ್ಕಳ ಈ ಕಣ್ಮರೆಯನ್ನು ಬಹುಮಂದಿ ಒಂದು ನೈತಿಕ ಚೌಕಟ್ಟಿನಲ್ಲಿ ವಿಶ್ಲೇಷಣೆಗೆ ಒಳಪಡಿಸುತ್ತಾರೆ.

 

ಒಂದು ಗಂಭೀರವಾದ ವಿಷಯವನ್ನು, ಅದರಲ್ಲೂ ಹೆಣ್ಣಿಗೆ ಸಂಬಂಧಿಸಿದ್ದನ್ನು, ನಮ್ಮ ವ್ಯವಸ್ಥೆ ಎಷ್ಟು ಹಗುರವಾಗಿ ಪರಿಗಣಿಸುತ್ತದೆ ಎಂಬುದಕ್ಕೆ ಇವು ಉದಾಹರಣೆಗಳು.ಮಾಧ್ಯಮ ವರದಿಯೊಂದರ ಪ್ರಕಾರ ಮೈಸೂರು ನಗರವೊಂದರಲ್ಲೇ ನಿತ್ಯ ಮೂರರಿಂದ ನಾಲ್ಕು ಯುವತಿಯರು ಕಣ್ಮರೆಯಾಗುತ್ತಾರೆ. ಈ ಸಂಖ್ಯೆ ವರ್ಷದಿಂದ ವರ್ಷಕ್ಕೆ ಏರುತ್ತಿದೆ. ನಮಗೆ ಲಭ್ಯವಿರುವ ಕಾಣೆಯಾದ ಹೆಣ್ಣುಮಕ್ಕಳು ಅಥವಾ ಯುವತಿಯರನ್ನು ಕುರಿತ ಮಾಹಿತಿ ಕೇವಲ ವರದಿಯಾದ ಪ್ರಕರಣಗಳನ್ನು ಆಧರಿಸಿದ್ದು.

 

ಮಗಳು ಅಥವಾ ಮಡದಿ ಕಾಣೆಯಾದಾಗ ಸೃಷ್ಟಿಯಾಗುವ ಮುಜುಗರದ ಪರಿಸ್ಥಿತಿಯನ್ನು ಎದುರಿಸಲಾಗದೆ ಅನೇಕ ಕುಟುಂಬಗಳು ವಿಷಯವನ್ನು ಮುಚ್ಚಿಡುವುದರಿಂದ ಮತ್ತು  ಪೊಲೀಸ್ ಮತ್ತು ಇತರ ಕಾನೂನು ಪಾಲನಾ ಸಂಸ್ಥೆಗಳು ಕಾಣೆಯಾದ ಹೆಣ್ಣುಮಕ್ಕಳ ಬಗ್ಗೆ ತೋರುವ ನಿರ್ಲಕ್ಷ್ಯದಿಂದಾಗಿ ಖಚಿತವಾದ ಅಂಕಿ-ಅಂಶಗಳು ಲಭ್ಯವಾಗುವುದು ಕಷ್ಟ.

 

ಆದಾಗ್ಯೂ ದೇಶದ ವಿವಿಧ ಭಾಗಗಳಲ್ಲಿ ಸಣ್ಣಪುಟ್ಟ ಗ್ರಾಮಗಳಿಂದ ಹಿಡಿದು ಬೃಹತ್ ನಗರಗಳವರೆಗೆ ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳ ಹಾಗೂ ಮಹಿಳೆಯರ ಪ್ರಮಾಣದಲ್ಲಿ ಹೆಚ್ಚಳ ಉಂಟಾಗಿರುವುದು ನಿಜ.ಹೆಣ್ಣಿನ ಬದುಕಿನ ಸುತ್ತ ಅನೇಕ ಗೆರೆಗಳನ್ನು ಎಳೆದಿರುವ ಈ ಸಮಾಜದಲ್ಲಿ ಆಕೆ ಮನೆಯಿಂದ ತಪ್ಪಿಸಿಕೊಂಡು ಹೋದಳೆಂದರೆ ಯಾರನ್ನೋ ಪ್ರೀತಿಸಿಯೋ ಅಥವಾ ಪರಪುರುಷನ ವ್ಯಾಮೋಹದಿಂದಲೋ ಓಡಿ ಹೋಗಿದ್ದಾಳೆ ಎಂದು ಅರ್ಥೈಸುವವರೇ ಹೆಚ್ಚು.

 

ಆದರೆ ಹದಿಹರೆಯದ ಹೆಣ್ಣು ಮಕ್ಕಳು,ಯುವತಿಯರು ಅಥವಾ ವಿವಾಹಿತೆಯರು ಮನೆಯಿಂದ ತಪ್ಪಿಸಿಕೊಂಡು ಹೋಗಬೇಕೆಂದರೆ ಅದಕ್ಕೆ ನಾನಾ ಕಾರಣಗಳಿರುತ್ತವೆ. ಅವರೆಲ್ಲರನ್ನೂ ಒಂದು ಸಮರೂಪವಾದ ವರ್ಗವೆಂಬಂತೆ ಪರಿಗಣಿಸಲು ಸಾಧ್ಯವೇ ಇಲ್ಲ.ಕಾಣೆಯಾಗುವವರಲ್ಲಿ ಮೊದಲನೆಯ ಗುಂಪಿನಲ್ಲಿರುವವರು ಒಂದು ನಿಶ್ಚಿತ ಉದ್ದೇಶವನ್ನಿಟ್ಟುಕೊಂಡು ಮನೆಯಿಂದ ಹೊರಗೆ ಹೋಗುವಂಥವರು. ಅವರಿಗೆ ತಾವು ಎಲ್ಲಿಗೆ ಹಾಗೂ ಏತಕ್ಕಾಗಿ ಹೋಗುತ್ತಿದ್ದೇವೆ ಎಂಬ ಅರಿವು ಇದ್ದು, ಅವರ ಮಟ್ಟಿಗೆ ಅದೊಂದು ಸ್ವಯಂ ಪ್ರೇರಿತ ನಿರ್ಧಾರ.

 

ಇವರಲ್ಲಿ ಒಂದು ವರ್ಗ ತಮ್ಮ ಬದುಕಿನ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಆಸೆಯಿಂದ ಉದ್ಯೋಗಾವಕಾಶಗಳನ್ನರಸಿ ನಗರಗಳಿಗೆ ಹೋಗುವಂತಹುದು. ಬಲಾತ್ಕಾರದ ಮದುವೆ ಅಥವಾ ವೈವಾಹಿಕ ಹಿಂಸೆಯಂಥ ಸ್ಥಿತಿಗಳಿಂದ ಮುಕ್ತಿ ಪಡೆಯಲು ಮನೆಯಿಂದ ತಪ್ಪಿಸಿಕೊಂಡು ಹೋಗುವವರದು ಮತ್ತೊಂದು ವರ್ಗ.ತಮಗೆ ಎದುರಾಗಬಹುದಾದ ಅನಿಶ್ಚಿತ ಹಾಗೂ ಅಪಾಯಕಾರಿ ಪರಿಸ್ಥಿತಿಗಳ ಬಗ್ಗೆ ಚಿಂತಿಸುವುದಕ್ಕಿಂತ ಉಸಿರು ಕಟ್ಟಿಸುವ ವಾತಾವರಣದಿಂದ ದೂರ ಹೋಗುವುದೇ ಅವರಿಗೆ ಆ ಹಂತದಲ್ಲಿ ಮುಖ್ಯವಾಗಿರುತ್ತದೆ ಎಂದು  ಪ್ರತ್ಯೇಕವಾಗಿ ಹೇಳಬೇಕಿಲ್ಲ.ಮನೆಯಿಂದ ಕಾಣೆಯಾಗುವ ಹೆಣ್ಣು ಮಕ್ಕಳಲ್ಲಿ ಹೆಚ್ಚಿನವರು ಸಾಮಾಜಿಕ-ಆರ್ಥಿಕ ಅನುಕೂಲಗಳಿಂದ ವಂಚಿತವಾದ ಕುಟುಂಬಗಳಿಂದ ಬಂದವರು ಎಂಬುದು ಅನೇಕ ವಿಷಯಸಂಬಂಧಿ ಅಧ್ಯಯನಗಳಿಂದ ತಿಳಿದುಬಂದಿದೆ.ಬಡತನ ಮತ್ತು ನಿರಂತರ ದುಡಿಮೆಗಳ ವಿಷವರ್ತುಲದಲ್ಲಿ ಸಿಲುಕಿ ಹಾಕಿಕೊಂಡಿರುವ ಅನೇಕ ಹೆಣ್ಣುಮಕ್ಕಳು ಭವಿಷ್ಯದಲ್ಲಿ ತಮ್ಮ ಬದುಕು ಬದಲಾಗುತ್ತದೆಂಬ ಯಾವುದೇ ಸೂಚನೆ ಕಾಣದಿದ್ದಾಗ ಉದ್ಯೋಗವಕಾಶಗಳನ್ನರಸಿ ನಗರಗಳತ್ತ ಹೋಗುವುದು ಸಾಮಾನ್ಯ.

 

ಅಂಥವರಿಗೆ ಅಲ್ಲಿಯೂ ತಾವು ಬಯಸಿದ ಬದುಕು ದೊರೆಯುವ ಸಾಧ್ಯತೆ ವಿರಳ. ಒಳ್ಳೆಯ ಆದಾಯ ತರಬಲ್ಲ ಉದ್ಯೋಗಗಳನ್ನು ಪಡೆಯಲು ಅಗತ್ಯವಾದ ವಿದ್ಯಾರ್ಹತೆ ಇಲ್ಲದ ಕಾರಣ ಬಹುಮಂದಿ ಕೂಲಿಯಾಳುಗಳಂತೆ ದುಡಿಯಬೇಕಾಗುತ್ತದೆ.ಮನೆಯಿಂದ ತಪ್ಪಿಸಿಕೊಂಡು ಬಂದಿರುವುದರಿಂದ ತಮ್ಮ ಅನಾಮಧೇಯತೆಯನ್ನು ಕಾಪಾಡಿಕೊಳ್ಳಬೇಕಾದ ಅನಿವಾರ್ಯತೆ ಈ ಹೆಣ್ಣು ಮಕ್ಕಳಿಗಿದೆ. ಇದರಿಂದ ಅವರು ಮತ್ತಷ್ಟು ಅಸಹಾಯಕರಾಗುತ್ತಾರೆ.ಮನೆಗಳಲ್ಲಿ ಕೆಲಸ ಮಾಡುವುದಕ್ಕಿಂತ (ಓಡಿ ಬಂದವರು ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡವರನ್ನು ಮನೆಗೆಲಸಕ್ಕೆ ಇಟ್ಟುಕೊಳ್ಳಲು ಬಹು ಮಂದಿ ಒಪ್ಪುವುದಿಲ್ಲ) ತೋಟದ ಮನೆಗಳು, ಅತಿಥಿ ಗೃಹಗಳು, ಬಾರು-ಕ್ಲಬ್‌ಗಳು, ಹೊಟೇಲುಗಳು, ಖಾನಾವಳಿಗಳು, ಡಾಬಾಗಳು ಮುಂತಾದ ಕಡೆಗಳಲ್ಲಿ ಕೆಲಸಕ್ಕೆ ಸೇರಲು ಅವರು ಬಯಸುತ್ತಾರೆ.ಇಂಥ ಸ್ಥಳಗಳಲ್ಲಿ ಅವರನ್ನು ಮರ್ಯಾದೆಯಿಂದ ನಡೆಸಿಕೊಳ್ಳುವಂಥ ಮಾಲೀಕರು ಹಾಗೂ ಸಹವರ್ತಿಗಳಿದ್ದರೆ ಸರಿ, ಇಲ್ಲದಿದ್ದಲ್ಲಿ ಅವಿರತ ದುಡಿಮೆ ಹಾಗೂ ಕಡಿಮೆ ಸಂಬಳಗಳ ಜೊತೆಗೆ ಲೈಂಗಿಕ ಶೋಷಣೆಗೂ ಅವರು ಗುರಿಯಾಗಬೇಕಾಗುತ್ತದೆ.

ಭಾರತೀಯ ಸಮಾಜ ಎಷ್ಟೇ ಬದಲಾವಣೆಗಳನ್ನು ಕಂಡರೂ ಇಂದಿಗೂ ಬಹುಸಂಖ್ಯಾತ ಹೆಣ್ಣು ಮಕ್ಕಳಿಗೆ ವಿವಾಹದ ವಿಷಯದಲ್ಲಿ ಆಯ್ಕೆಯ ಸ್ವಾತಂತ್ರ್ಯವಿಲ್ಲ.ತಮ್ಮ ಕುಟುಂಬ ಆಯ್ಕೆ ಮಾಡಿದ ಗಂಡಿನೊಡನೆ  ಜೀವನ ನಡೆಸಲು ಅವರು ತಯಾರಿಲ್ಲ. ಅವಳು ಆಯ್ಕೆ ಮಾಡಿಕೊಂಡ ಗಂಡಿನ ಜೊತೆ ವಿವಾಹ ಸಂಬಂಧ ಬೆಳೆಸಲು ಆಕೆಯ ಕುಟುಂಬದ ಸಮ್ಮತಿಯಿಲ್ಲ.ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿಲುಕಿ ಹಾಕಿಕೊಂಡ ಅನೇಕರು ಮನೆಯಿಂದ ದೂರ ಸರಿಯಲು ನಿರ್ಧಾರ ಮಾಡುತ್ತಾರೆ. ತಾನು ಇಚ್ಛೆಪಟ್ಟ ಗಂಡು ದೃಢ ಮನಸ್ಸಿನಿಂದ ಆಕೆಯ ನಿರ್ಧಾರವನ್ನು ಗೌರವಿಸಿ, ವಿವಾಹವಾದರೆ ಸರಿ, ಆದರೆ ಎಲ್ಲ ಪ್ರಕರಣಗಳೂ `ಸುಖಾಂತ್ಯ~ ಕಾಣುವುದಿಲ್ಲ.

 

ತನ್ನ ಮನೆಯವರನ್ನು ಎದುರು ಹಾಕಿಕೊಳ್ಳಲು ತಯಾರಿಲ್ಲದೆ  ಅಥವಾ ಸಂಬಂಧವನ್ನು ಹಗುರವಾಗಿ ಪರಿಗಣಿಸುವ ಅನೇಕ ಗಂಡುಗಳು ಹೀಗೆ ಮನೆ ಬಿಟ್ಟು ಬಂದ ಯುವತಿಯರು, ಮಹಿಳೆಯರನ್ನು ತಿರಸ್ಕರಿಸಿರುವ ಅಥವಾ ಲೈಂಗಿಕ ಶೋಷಣೆಗೆ ಒಳಪಡಿಸಿಕೊಂಡ ಪ್ರಕರಣಗಳು ಸಾಕಷ್ಟು ಸಂಖ್ಯೆಯಲ್ಲಿವೆ.ಬಲಾತ್ಕಾರದ ವಿವಾಹಕ್ಕೆ ಬಲಿಯಾಗಿ ಕೌಟುಂಬಿಕ ಹಿಂಸೆಯನ್ನು ಅನುಭವಿಸುತ್ತಿರುವವರು ಕೂಡ ಮನೆಯಿಂದ ಕಾಣೆಯಾಗುವ ನಿರ್ಧಾರವನ್ನು ತೆಗೆದುಕೊಂಡಿರುವ ನಿದರ್ಶನಗಳಿವೆ. ಆದರೆ ಇಂಥ ಪ್ರಕರಣಗಳನ್ನು ಕುಟುಂಬಗಳು ವರದಿ ಮಾಡುವುದಕ್ಕಿಂತ ಮುಚ್ಚಿಡುವ ಸಾಧ್ಯತೆಯೇ ಹೆಚ್ಚು.ಏಕೆಂದರೆ ಅವರಿಗೆ ಮನೆತನದ ಮರ್ಯಾದೆಯ ಪ್ರಶ್ನೆ ಮುಖ್ಯವಾಗಿ ಬಿಡುತ್ತದೆ. ವಿಷಯವನ್ನು ಗೋಪ್ಯವಾಗಿಟ್ಟು ಕಾಣೆಯಾದ `ಸೊಸೆ~ ಅಥವಾ `ಮಗಳಿಗೆ~ ಹುಡುಕಾಟ ನಡೆಸಿ ಅವಳನ್ನು ಕರೆತಂದು ಮತ್ತದೇ ಹಿಂಸೆಯ ಪರಿಸ್ಥಿತಿಗೆ ದೂಡಿರುವಂತಹ ಕುಟುಂಬಗಳು ನಮ್ಮಲ್ಲಿವೆ. ಹತಾಶರಾದ ಇಂತಹ ಹೆಣ್ಣು ಮಕ್ಕಳು ಆತ್ಮಹತ್ಯೆಗೆ ಶರಣಾರಾದ ಉದಾಹರಣೆಗಳಿವೆ.ಮನೆಯಿಂದ ಕಾಣೆಯಾಗುವ ಮತ್ತೊಂದು ವರ್ಗ ಐಷಾರಾಮಿ ಬದುಕಿನ ಕನಸುಗಳನ್ನು ಹೊತ್ತು ಬೃಹತ್ ನಗರಗಳಿಗೆ ಬರುವಂಥವರದ್ದು. ನಮ್ಮ ಬದುಕು ವಾಣಿಜ್ಯೀಕೃತವಾಗುತ್ತಾ ಹೋದ ಹಾಗೆಲ್ಲಾ ಲೌಕಿಕ ಜಗತ್ತಿನ ಆಕರ್ಷಣೆಗಳು ಹೆಚ್ಚುತ್ತ ಹೋಗುತ್ತವೆ.ಮಾಧ್ಯಮಗಳಲ್ಲಿ, ಮಾಲ್‌ಗಳಲ್ಲಿ, ಜಾಹೀರಾತುಗಳಲ್ಲಿ, ಮಲ್ಟಿಪ್ಲೆಕ್ಸ್‌ಗಳಲ್ಲಿ ನಿರಂತರವಾಗಿ ಬಿಂಬಿತವಾಗುವ ಶ್ರೀಮಂತಿಕೆಯ ನೋಟಗಳು ಹಾಗೂ ಸುಲಭವಾಗಿ ಸಂಪತ್ತು ಗಳಿಸುವ ಮಾರ್ಗಗಳಿಗೆ ಮರುಳಾದ ಅನೇಕ ಹೆಣ್ಣು ಮಕ್ಕಳು ಭ್ರಮಾಲೋಕದತ್ತ ಜಾರುತ್ತಾರೆ.ಚಲನಚಿತ್ರ ಅಥವಾ ಟಿ.ವಿ. ಧಾರಾವಾಹಿಗಳಲ್ಲಿ ನಟಿಸುವ ಅಥವಾ ರೂಪದರ್ಶಿಗಳಾಗಿ ಕೆಲಸ ಮಾಡುವ ಕನಸುಗಳನ್ನು ಹೊತ್ತ ನೂರಾರು ಯುವತಿಯರು ಮನೆಗಳಿಂದ ತಪ್ಪಿಸಿಕೊಂಡು ಮುಂಬೈ, ಬೆಂಗಳೂರು, ಚೆನ್ನೈ, ಹೈದರಾಬಾದ್ ಮುಂತಾದ ಬೃಹತ್ ನಗರಗಳಿಗೆ ಹೋಗುತ್ತಾರೆ.ರಂಗಿನ ಬದುಕಿನ ಕನಸುಗಳನ್ನು ಹೊತ್ತ ಯುವತಿಯರ ಅಸಹಾಯಕತೆ ಹಾಗೂ ಆಕಾಂಕ್ಷೆಗಳನ್ನೇ ಬಂಡವಾಳವನ್ನಾಗಿಟ್ಟುಕೊಂಡು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಪೋಷಿಸಿಕೊಳ್ಳುತ್ತಿರುವ ಒಂದು ಬೃಹತ್ ಜಾಲ ನಮ್ಮ  ದೇಶದಲ್ಲಿದೆ.

 

ಹೀಗೆ ಬಂದ ಕೆಲವು ಯುವತಿಯರನ್ನು ಪೊಲೀಸ್ ಅಥವಾ ಸ್ವಯಂಸೇವಾ ಸಂಸ್ಥೆಗಳು ರಕ್ಷಿಸಿದರೆ,ಅನೇಕರನ್ನು ವೇಶ್ಯಾಗೃಹಗಳಿಗೆ ಮಾರಾಟವಾದ ಪ್ರಸಂಗಗಳು ಈ ಬೃಹತ್ ನಗರಗಳಲ್ಲಿ  ನಡೆಯುತ್ತಿವೆ.ಸ್ವಇಚ್ಛೆಯಿಂದ ಮನೆಗಳಿಂದ ದೂರವಾಗುವವರು ಒಂದೆಡೆಯಾದರೆ, ಪರಿಚಿತ ಅಥವಾ ಅಪರಿಚಿತ ವ್ಯಕ್ತಿಗಳಿಂದ ಅಪಹರಣಕ್ಕೊಳಗಾಗಿ ಮನೆಗಳಿಂದ ದೂರವಾಗುವವರದ್ದು ಮತ್ತೊಂದು ವರ್ಗ. ಇಂಥ ಪ್ರಕರಣಗಳಲ್ಲಿ ಸಿಲುಕಿ ಹಾಕಿಕೊಳ್ಳುವ ಅನೇಕ ಹೆಣ್ಣು ಮಕ್ಕಳು ಹದಿಹರೆಯದರು. `ಮಾನವ ಸಾಗಾಣಿಕೆ~ಯ ಜಾಲಕ್ಕೆ ಬಲಿ ಪಶುಗಳಾದವರು.ರಾಷ್ಟ್ರೀಯ ಮಹಿಳಾ ಆಯೋಗದ ಒಂದು ವರದಿಯ ಪ್ರಕಾರ ಭಾರತದ 378 ಜಿಲ್ಲೆಗಳಲ್ಲಿ ವಾಣಿಜ್ಯೀಕೃತ ಲೈಂಗಿಕ ಶೋಷಣೆಗೆ ಒಳಪಡಿಸುವ ಉದ್ದೇಶದಿಂದಲೇ ಮಹಿಳೆಯರ ಮತ್ತು ಹೆಣ್ಣು ಮಕ್ಕಳ ಸಾಗಾಣಿಕೆ ನಡೆಯುತ್ತಿದೆ.ಅದರಲ್ಲೂ ನೇಪಾಳ ಮತ್ತು ಬಾಂಗ್ಲಾದೇಶಗಳ ಗಡಿ ಭಾಗಗಳಲ್ಲಿರುವ ಗ್ರಾಮಗಳಿಂದ ಅಪಹರಣ ನಿರಂತರವಾಗಿ ನಡೆಯುತ್ತಿದೆ. ಇದರಲ್ಲಿ ಸ್ಥಳೀಯ ಮಧ್ಯವರ್ತಿಗಳು, ಪೊಲೀಸರು, ರಾಜಕಾರಣಿಗಳು, ಶ್ರೀಮಂತ ಉದ್ಯಮಿಗಳು ಹಾಗೂ ಕುಟುಂಬಗಳೂ  ಭಾಗಿಯಾದುದಕ್ಕೆ ಸಾಕ್ಷಿ ಗಳಿವೆ.ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳು-ಮಹಿಳೆಯರ ಬಗ್ಗೆ ಆಗಾಗ ಮಕ್ಕಳ ಹಕ್ಕುಗಳಿಗಾಗಿ ಹೋರಾಟ ನಡೆಸುವ ನಾಗರಿಕ ಸಂಸ್ಥೆಗಳು, ಮಹಿಳಾ ಸಂಘಟನೆಗಳು ಹಾಗೂ ಇತರ ಆಸಕ್ತ ನಾಗರಿಕರು ಧ್ವನಿ ಎತ್ತುತ್ತಲೇ ಇದ್ದರೂ ಈ ವಿಷಯವನ್ನು ಕುರಿತಂತೆ ಸಮಾಜದ ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಪ್ರತಿಕ್ರಿಯೆ ನೀರಸವಾಗಿದೆ. ಈ ವಿಷಯವನ್ನು `ಮಾನವ ಹಕ್ಕು~ಗಳು ಹಾಗೂ `ಮಾನವ ಸಂಬಂಧ~ಗಳು-ಇವೆರಡರ ಚೌಕಟ್ಟಿನಲ್ಲಿಯೂ ವಿಶ್ಲೇಷಿಸಬೇಕಾದ ಅಗತ್ಯವಿದೆ.ಕಾಣೆಯಾಗುತ್ತಿರುವ ಹೆಣ್ಣು ಮಕ್ಕಳನ್ನು ಅಪರಾಧಿಗಳೆಂದು ಪರಿಗಣಿಸಿದೆ ಅವರ ಕಣ್ಮರೆಗೆ ಕಾರಣವಾಗುವ ಮಾನವ ಹಕ್ಕುಗಳ ಉಲ್ಲಂಘನೆಯತ್ತ ಮೊದಲು ನಮ್ಮ ಗಮನ ಹರಿಯಬೇಕು.

 

ಮೂರು ವಾರಗಳ ಹಿಂದಷ್ಟೇ ನವದೆಹಲಿಯಲ್ಲಿ ಬಿಡುಗಡೆಯಾದ `ಮಿಸ್ಸಿಂಗ್ ಚಿಲ್ಡ್ರನ್ ಆಫ್ ಇಂಡಿಯಾ-ಎ ಪಯೊನಿಯರಿಂಗ್ ಸ್ಟಡಿ~ ಎಂಬ ವರದಿ ಭಾರತದಲ್ಲಿ ಪ್ರತಿ ಗಂಟೆಗೊಮ್ಮೆ 11 ಮಕ್ಕಳು ಕಣ್ಮರೆಯಾಗುತ್ತಿದ್ದಾರೆ, ಅವರಲ್ಲಿ 4 ಮಕ್ಕಳನ್ನು ಹುಡುಕಲು ಸಾಧ್ಯವಾಗುವುದೇ ಇಲ್ಲ ಎಂದು ತಿಳಿಸಿದೆ.ಈ ವರದಿಯ ಪ್ರಕಾರ ದೇಶದಲ್ಲಿ ಹಿಂದಿನ ಎರಡು ವರ್ಷಗಳ ಅವಧಿಯಲ್ಲಿ 1,17,480 ಮಕ್ಕಳು ಕಣ್ಮರೆಯಾಗಿದ್ದಾರೆ. ಈ ಮಕ್ಕಳ ಬಗ್ಗೆ ಖಚಿತವಾದ ಲಿಂಗವಾರು ಮಾಹಿತಿ ಲಭ್ಯವಿಲ್ಲವಾದರೂ, ಇವರಲ್ಲಿ ಹೆಣ್ಣು ಮಕ್ಕಳು ಗಮನಾರ್ಹವಾದ ಪ್ರಮಾಣದಲ್ಲಿರುವುದು ತಿಳಿದು ಬಂದಿದೆ.ದಿನೇದಿನೇ ಹೆಚ್ಚುತ್ತಿರುವ ಕಣ್ಮರೆ ಪ್ರಸಂಗಗಳನ್ನು ನಿಯಂತ್ರಿಸುವಲ್ಲಿ ಕುಟುಂಬ ಮತ್ತು ಶಾಲೆಗಳ ಪಾತ್ರವೂ ಬಹು ಮುಖ್ಯ. ಮಕ್ಕಳಿಗೆ ಸ್ವಾತಂತ್ರ್ಯ ಹಾಗೂ ಸ್ವೇಚ್ಛಾಚಾರ ಮತ್ತು ಭ್ರಮೆ ಹಾಗೂ ಬದುಕಿನ ವಾಸ್ತವಗಳ ನಡುವಣ ಅಂತರವನ್ನು ತಿಳಿಸುವ ಅಗತ್ಯವಿದೆ.ಎಲ್ಲಕ್ಕಿಂತ ಮಿಗಿಲಾಗಿ ಬಲಾತ್ಕಾರದ ಸಂಬಂಧಗಳಿಗೆ  ಮಕ್ಕಳನ್ನು ತಳ್ಳುವ ಪರಿಪಾಠದಿಂದ ಕುಟುಂಬಗಳು ಹೊರ ಬರಬೇಕು. ಒಟ್ಟಾರೆ ಇಡೀ ಸಮುದಾಯವೇ ಈ ವಿಷಯದಲ್ಲಿ ಜಾಗೃತವಾದಾಗ ಮಾತ್ರ ಹೆಣ್ಣು ಮಕ್ಕಳ ಕಣ್ಮರೆ ಪ್ರಸಂಗಗಳಿಗೆ ಕಡಿವಾಣ ಹಾಕಬಹುದೇನೋ?(ನಿಮ್ಮ ಅನಿಸಿಕೆಗಳನ್ನು ತಿಳಿಸಿ: editpagefeedback@prajavani.co.in

Post Comments (+)