ಹೆಡ್‌ಮೇಷ್ಟ್ರು ಕಲಿತ ಪಾಠ

7

ಹೆಡ್‌ಮೇಷ್ಟ್ರು ಕಲಿತ ಪಾಠ

Published:
Updated:

ದಯಾನಂದ ಗಿಣಿ ಮೂಗಿನವನು. ಬಂದೂಕಿನ ನಳಿಕೆಯಂತಿದ್ದ ಅವನ ಮೂಗು ವರ್ಷಪೂರ್ತಿ ಗಟ್ಟಿಯಾಗಿ ಸೋರುತ್ತಿತ್ತು. ಇನ್ಯಾವತ್ತೂ ಬಂದ್ ಆಗುವ ಲಕ್ಷಣಗಳು ಅದಕ್ಕಿರಲಿಲ್ಲ. ಹಸಿಅವರೆ ಕಾಯಿ ಬಿಡಿಸುವಾಗ ಹಸಿರು ಬಣ್ಣದ ಹುಳಗಳು ಸಿಗುತ್ತವೆ. ಅದೇ ಮಾದರಿಯ ಎರಡು ರಸಾಯಣಗಳು ದಯನ ಮೂಗಿನಲ್ಲಿ ಇಳಿಬಿದ್ದಿರುತ್ತಿದ್ದವು. ತನ್ನ ಪ್ರತಿ ಮಾತಿನ ನಡುವೆ ಆತ ಸ್ಟಾಪ್ ಕೊಟ್ಟು, ಆ ತನ್ನ ಮಕ್ಕಳನ್ನು  ಎತ್ತಿ ಮೂಗಿನೊಳಗೆ ಬಚ್ಚಿಟ್ಟು ಕೊಳ್ಳುತ್ತಿದ್ದ. ಅವನ ಕಂಟ್ರೋಲು ತಪ್ಪಿದ ಅವು ಜಗತ್ತು ನೋಡಲು ಮತ್ತೆ ಓಡೋಡಿ ಬರುತ್ತಿದ್ದವು. ಅವನ ಈ ಗೊಣ್ಣೆರೂಪ ಕಂಡು ಬಹಳಷ್ಟು ಹುಡು ಗರು ಅವನ ದೋಸ್ತಿ ಸುದ್ದಿಗೇ ಹೋಗಿರಲಿಲ್ಲ. ನನಗೆ ಮಾತ್ರ ಆತ ಖಾಸ ಗೆಳೆಯ ನಾಗಿದ್ದ.

ನಮ್ಮ ಶಾಲೆ ಎದುರು ಮೂರು ಚಕ್ರದ ಸೈಕಲ್‌ನಲ್ಲಿ ಡಬ್ಬಿ ಸಿಕ್ಕಿಸಿಕೊಂಡು ಐಸ್ಕ್ರೀಂ ಮಾರುವ ಮುದುಕನೊಬ್ಬ ಬರುತ್ತಿದ್ದ. ಅದ್ಯಾಕೋ ದಯನ ಮುಸುಡಿ ಕಂಡರೆ ಮುದುಕನಿಗೆ ಆಗಿ ಬರುತ್ತಿರಲಿಲ್ಲ. ದಯನ ಮೂಗಿನ ದರ್ಶನವಾದ ಕೂಡಲೇ ಆತ ಹೊಡೆಯಲು ಕಲ್ಲು ಹುಡುಕುತ್ತಿದ್ದ. ಆತ ಮಾರುವ ಐಸ್ಕ್ರೀಂನ ಬಣ್ಣವೂ, ದಯನ ಗೊಣ್ಣೆ ಬಣ್ಣವೂ, ಒಂದೇ ಥರ ಇದ್ದದ್ದು ಅವನ ಸಿಟ್ಟಿಗೆ ಕಾರಣವಾಗಿದ್ದಿರಬೇಕು. ಬಿಝ್‌ನೆಸ್ ಟೈಮಲ್ಲಿ ತನ್ನ ಅಶ್ಲೀಲ ಮೂಗು  ಪ್ರದರ್ಶಿಸಿಕೊಂಡು ನಿಲ್ಲುವ ದಯನನ್ನ ಓಡಿಸಲು ಆತ ಹೆಣಗಾಡುತ್ತಿದ್ದ.ಆದರೆ ದಯ ಒಂದಿಂಚೂ ಜಾಗ ಬಿಟ್ಟು ಕದಲುತ್ತಿರಲಿಲ್ಲ. ಗಾಡಿಗೆ ಮತ್ತಷ್ಟು ಹತ್ತಿರ ಹೋಗಿ ನಿಲ್ಲುತ್ತಿದ್ದ. ಕೊನೆಗವನು ಸಾಕಾಗಿ ಒಂದಿಷ್ಟು ಐಸ್ಕ್ರೀಂ ಕೊಟ್ಟು ‘ನಿನ್ನ ಕೈ ಮುಗೀತೀನಪ್ಪ. ಇಲ್ಲಿಂದ ದೂರ ಹೋಗು. ನನ್ನ ಯಾಪಾರ ಹಾಳು ಮಾಡಬೇಡ’ ಎಂದು ಗೋಗರೆಯುತ್ತಿದ್ದ. ತನ್ನ ಮೇಲಿನ ಪ್ರೀತಿಯಿಂದ ಮುದುಕ ಐಸ್ಕ್ರೀಂ ಕೊಡುತ್ತಿದ್ದಾನೆಂದು ಭಾವಿಸಿದ್ದ ದಯ ವರತ್ನೆಯ ಹಸುವಿನಂತೆ ದಿನಾ ಬಂದು ಅಲ್ಲೇ ನಿಲ್ಲುತ್ತಿದ್ದ.  ದಯ ಬೈಯುವುದರಲ್ಲಿ ವಿಶ್ವವಿಖ್ಯಾತನಾಗಿದ್ದ. ಬೆಲೆಬಾಳುವ ಬೈಗುಳಗಳನ್ನು ಬಳಸುತ್ತಿದ್ದ. ಮೇಷ್ಟ್ರು ಶಾಂತಪ್ಪರಿಗೆ ಒಮ್ಮೆ ಆತ ಬೈದ ಏಟಿಗೆ ಅವರು ನಡುಗಿ ಹೋಗಿದ್ದರು. ‘ಇಂಥ ಹಲ್ಕಾ ಮಾತು ಮಕ್ಕಳ ಬಾಯಲ್ಲಿ ನನ್ನ ಸರ್ವಿಸಲ್ಲೇ ಕೇಳಿಲ್ಲ. ಕಿವಿನೇ ತೂತ್ ಬಿದ್ದಂಗೆ ಆಯ್ತಲ್ರಿ’ ಎಂದು ತಲೆತಲೆ ಚಚ್ಚಿಕೊಂಡಿದ್ದರು. ದಯ ಹಾಗೆ ಸುಖಾಸುಮ್ಮನೆ ಯಾರಿಗೂ ಬೈಯುತ್ತಿರಲಿಲ್ಲ. ಹೊಡೆದರೆ, ಕೆಣಕಿ ದರೆ ಮಾತ್ರ ಛಟ್ಟಂತ, ‘ಸೂ... ಮಗನೆ’ ಎನ್ನುತ್ತಿದ್ದ. ಯಾರಿಗೆ ಬೈತಾ ಇದ್ದೀನಿ ಅನ್ನೋ ಖಬರೂ ಅವನಿಗಿರುತ್ತಿರಲಿಲ್ಲ. ಗೆಳೆಯರಿರಲಿ, ಮೇಷ್ಟ್ರೇ ಆಗಿರಲಿ, ಇಲ್ಲಾ, ಆತ ಪ್ರಧಾನಮಂತ್ರಿಯೇ ಆಗಿರಲಿ, ಮುದ್ದಾಂ ಬೈದು ಬಿಡುತ್ತಿದ್ದ. ಇನ್ನು ಕೋಲಲ್ಲೋ, ಕಾಲಲ್ಲೋ, ಒದ್ದು ಬಿಟ್ಟರಂತೂ ಅವರ ಕಥೆ ಮುಗಿದೇ ಹೋಯಿತು.ಕೆರಳಿಸಿದವರು ಪ್ರಜ್ಞೆ ತಪ್ಪಿ ಬೀಳಬೇಕಿತ್ತು. ಇಲ್ಲಾ ಆತ್ಮಹತ್ಯೆಯನ್ನೇ ಮಾಡಿಕೊಳ್ಳಬೇಕಿತ್ತು ಅಷ್ಟು ಸೊಗಸಾಗಿ ತನ್ನ ಶಬ್ದಕೋಶ ಬಿಚ್ಚುತ್ತಿದ್ದ. ನಮ್ಮದು ಶುದ್ಧ ಗಂಡುಮಕ್ಕಳ ಶಾಲೆ. ಕೆಲ ಹುಡುಗರ ತಲೆಗಳು ಧರ್ಮಸ್ಥಳಕ್ಕೂ, ಕೆಲವು ಬಾಬಾ ಬುಡನ್‌ಗಿರಿಗೂ  ಬುಕ್ ಆಗಿದ್ದವು. ಕಟಿಂಗ್ ಶಾಪಿನ ಕತ್ತರಿ ದಾಳಿಗೆ ಸಿಗದ ಇವು ಸ್ಮಾರಕಗಳಾಗಿದ್ದವು. ಕಟ್ಟಿಕೊಂಡ ದೇವರ ಹರಕೆಗಳನ್ನು ಬಹಳ ಪೋಷಕರು ಮರೆತು ಕೂತಿದ್ದರು. ಈ ವರ್ಷ ದುಡ್ಡಾಗಲಿಲ್ಲ ಎಂದು ಬೋಳು ಹೊಡೆಸುವ ಶಾಸ್ತ್ರವನ್ನು ತಳ್ಳುತ್ತಾ ಬಂದಿದ್ದರು. ಕೆಲ ಗೆಳೆಯರ ತಲೆಗಳು ಮಂಡಕ್ಕಿ ಮೂಟೆಗಳಂತೆ ಎದ್ದು ನಿಂತು ಕಟಾವಿಗೆ ರಾಗಿ ಹೊಲಗಳಂತೆ ಕಾಣುತ್ತಿದ್ದವು.‘ತಲೆ ಕೂದಲು ನೆಟ್ಟಗೆ ಹುಡುಗ್ರು ಮಡಿಕೊಳ್ಳಲ್ಲ, ಅತ್ಲಾಗೆ ಜಡೆನಾದ್ರೂ ಹಾಕಿ ಕಳಿಸಿ’ ಎಂದು ಮೇಷ್ಟ್ರುಗಳು ವ್ಯಂಗ್ಯವಾಗಿ ಹೇಳಿದ್ದನ್ನೇ ನಿಜವೆಂದು ನಂಬಿದ ಕೆಲ ಅಮ್ಮಂದಿರು ಜಡೆ ಹಾಕಿ ಕಳಿಸುವ ಪದ್ಧತಿ ರೂಢಿಗೆ ತಂದರು. ವಾರಕ್ಕೊಂದು ಸಲ ಎಣ್ಣೆಹಾಕಿ ಬಾಚುತ್ತಿದ್ದರು. ಎಣ್ಣೆ ಹಾಕಿ ವಾರಗಟ್ಟಲೆ ನೀರೇ ನೋಡದ ಕೆಲವರ ತಲೆಗಳು ವಿಚಿತ್ರ ಕಮಟು ವಾಸನೆ ಬೀರುತ್ತಿದ್ದವು. ನಮಗೆಲ್ಲಾ ಈ ವಾಸನೆ ಅಭ್ಯಾಸವಾಗಿತ್ತು. ಮುಂದಿನ ಸಾಲಿನ ಗರಿಗರಿ ಬಟ್ಟೆಯ ಮಕ್ಕಳು ಮಾತ್ರ ಬೇಕಂತಲೇ ಹತ್ತಿರ ಬಂದು ಮೂಸಿ ನೋಡಿ ‘ಥೂ ಗಲೀಜು’ ಎಂದು ಹಂಗಿಸಿ ಮೂಗು ಮುರಿಯುತ್ತಿದ್ದವು. ದಯನ ಜಡೆಯಂತೂ ಮೋಹಕವಾಗಿ ಬೆಳೆದು ಹೋಗಿತ್ತು. ನಮ್ಮದು ಗಂಡುಮಕ್ಕಳ ಶಾಲೆಯಾಗಿ ದ್ದರೂ ದೂರದಿಂದ ನೋಡುವ ಮಂದಿಗೆ ಕೋ ಎಜುಕೇಶನ್ ಶಾಲೆ ಥರ ಕಾಣಿಸುತ್ತಿತ್ತು.ದಯನ ತಾಯಿಗೆ ಹೆಣ್ಣು ಮಕ್ಕಳಿರಲಿಲ್ಲ. ಇದ್ದವ ಇವನೊಬ್ಬನೇ ಸುಪುತ್ರ. ದಯನಿಗೆ ಹುಡುಗಿ ಯಂತೆ ಆಗಾಗ ಶೃಂಗಾರ ಮಾಡಿ, ಅವನ ತಾಯಿ ಸಂತೋಷಪಡುತ್ತಿದ್ದರು. ಹುಡುಗಿಯರಿಟ್ಟು ಕೊಳ್ಳುವ ಲಂಗಾ ದಾವಣಿ ಹಾಕಿ, ಭರ್ಜರಿ ಕನಕಾಂಬರ ಹೂ ಮುಡಿಸಿ, ಲಿಪ್‌ಸ್ಟಿಕ್‌ ಬಳಿದು ಸಂಭ್ರಮಪಡುತ್ತಿದ್ದರು. ಈ ಸಲ ಬೀರೂರಿಗೆ ಜಾತ್ರೆ ಬಂದಿತ್ತು. ತಾಜ್‌ಮಹಲ್ ಪಟ, ಕಾರಿನ ಚಿತ್ರ, ಪಾರ್ಕಿನ ಸೀನರಿಗಳ ಮುಂದೆ ನಿಲ್ಲಿಸಿ ಫೋಟೊ ತೆಗೆಸುವ ಟೆಂಟ್ ಸ್ಟುಡಿಯೊ ಬಂದಿತ್ತು. ಅಲ್ಲಿಗೆ ಶೃಂಗರಿಸಿದ ದಯನನ್ನು ಬೆಳ್ಳಂಬೆಳಿಗ್ಗೆ ಕರೆದುಕೊಂಡು ಹೋದ ತಾಯಿ, ಯಥಾವತ್ತಾಗಿ ಕರೆತಂದು ಶಾಲೆಗೂ ಬಿಟ್ಟು ಹೋದರು. ದಯ ‘ನಾನು ಶಾಲೆಯೊಳಗೆ ಹೋಗಲ್ಲ’ ಎಂದು ಚಂಡಿ ಹಿಡಿದರೂ ಅವರಮ್ಮ ನೂಕಿ ಹೋದರು. ದಯ ನಾಚುತ್ತಾ ಹುಡುಗರ ಶಾಲೆಯಲ್ಲಿ ಹುಡುಗಿಯಾಗಿ ಪ್ರತ್ಯಕ್ಷವಾಗಿದ್ದು ದೊಡ್ಡ ಗಲಭೆಗೆ ಕಾರಣವಾಯಿತು.  ಮೊದಲೇ ಹುಡುಗಿಯರ ಮುಖ ಕಾಣದೆ ಬರಗೆಟ್ಟಿದ್ದ ಹುಡುಗರು ದಯನನ್ನು ನೋಡಿ ‘ಹೋ....’ ಎಂದು ಒಟ್ಟಿಗೆ ಕಿರುಚಿಕೊಂಡರು. ಇದರಿಂದ ಪಾಣಿಪಂಚೆ ನಾರಾಯಣಪ್ಪ ಹೆಡ್‌ ಮೇಷ್ಟ್ರಿಗೆ ತಿಕ್ಕಲು ಹತ್ತುವಷ್ಟು ಸಿಟ್ಟು ಉಕ್ಕಿ ಬಂತು. ಸೀದಾ ತಮ್ಮ ಛೇಂಬರಿನಿಂದ ಎದ್ದು ಬಂದವರೆ, ‘ಏನಾಗಿತ್ರಲೇ ನಿಮಗೆ ಕೂಳೆ ರೋಗ ಕತ್ತೆ ನನಮಕ್ಕಳಾ’ ಎಂದು ಮುಂದಿನ ಬೆಂಚಿನಲ್ಲಿ ಕೂತಿದ್ದ ನಾಲ್ಕು ಜನರಿಗೆ ಬಿಗಿದರು. ಆದರೂ ಹುಡುಗರ ಕುಸುಕುಸು ನಗು ನಿಂತಿರಲಿಲ್ಲ. ‘ಏನಾತ್ರೋ ನಿಮ್‌ಗೆ.

ಹುಚ್ಚುಗಿಚ್ಚು ಹಿಡಿತೇನ್ರಲೇ’ ಎಂದು ಮತ್ತೆ ಹೊಡೆಯಲು ಬೆತ್ತ ಎತ್ತಿದಾಗ ಎಲ್ಲರೂ ಲಂಗ ಉಟ್ಟುಕೊಂಡು ಬಂದಿದ್ದ ದಯನ ಕಡೆ ಬೆರಳು ಮಾಡಿ ತೋರಿಸಿದರು. ದಯಾ ನಾಚಿಕೆಯಿಂದ ಮೂಲೆಯಲ್ಲಿ ಕೂತಿದ್ದ. ‘ಇದು ಬಾಯ್ಸ್ ಸ್ಕೂಲು ಕಣಮ್ಮ.ನೀನ್ಯಾಕೆ ಇಲ್ಲಿಗೆ ಬಂದೆ’ ಎಂದು ಹೆಡ್‌ಮೇಷ್ಟ್ರು ನಯವಾಗಿ ದಯನಿಗೆ ಹೇಳಿದರು. ಈ ಮಾತಿಗೆ ಹುಡುಗರು ಹೊಟ್ಟೆ ಹಿಡಿದುಕೊಂಡು ಮತ್ತೆ ನಗತೊಡಗಿದವು. ಯಾಕೆಂಬುದು ಪಾನಿಬುಲ್ಡೆ ನಾರಾಯಣಪ್ಪರಿಗೆ ಹೊಳೆಯಲಿಲ್ಲ. ಆಗ ಒಬ್ಬ ಧೈರ್ಯಸ್ಥ ಎದ್ದು ನಿಂತು  ‘ಸಾರ್ ಅವನು ಗೊಣ್ಣೆ ದಯಾನಂದ ಸಾರ್. ಅವನಿಗೆ ನೀವು ಅವಳು ಅಂತಿದ್ದರಲ್ಲ’ ಎಂದು ಕಿಸಿಯುತ್ತಾ ಹೇಳಿದ. ಹೆಡ್‌ ಮೇಷ್ಟ್ರಿಗೆ ಹುಡುಗರೆದುರು ತಾವು ಫೂಲ್ ಆಗಿದ್ದು  ರೋಷದ ಇಮ್ಮಡಿಗೆ ಇಂಬುಕೊಟ್ಟಿತು. ಲಂಗಾ ದಾವಣಿಯಲ್ಲಿ ಮಳ್ಳನಂತೆ ಅಡಗಿದ್ದ, ದಯನನ್ನು ನಾಯಿಮರಿಯಂತೆ ಹಿಡಿದು ಎತ್ತಿ ತಂದು ಬ್ಲಾಕ್ ಬೋರ್ಡಿನ ಮುಂದೆ ಕುಕ್ಕಿದರು. ದುಶ್ಯಾಸನನ ರೀತಿ ಲಂಗವನ್ನು ದುರುಗುಟ್ಟಿ ನೋಡಿದರು. ‘ಲೋಫರ್ ನನ ಮಗನೇ... ಲಂಗ ಇಕ್ಕೊಂಡು ಶೋಕಿ ಮಾಡಕ್ಕೆ ಬಂದಿದ್ದೀಯ. ನಿನಗೆ ಮಾಡ್ತೀನಿ ಇರು ಪೂಜೆ’ ಎಂದು ಗರ್ಜಿಸಿ, ಫರ್ ಎಂದು ಲಂಗವನ್ನು ಮೂರ್‌ನಾಲ್ಕು ಕಡೆಯಿಂದ ಹರಿದುಬಿಟ್ಟರು. ದಯ ಆಧುನಿಕ ಕ್ಲಬ್ ಡ್ಯಾನ್ಸರ್ ಥರ ಕಾಣತೊಡಗಿದ. ಒಮ್ಮೆಗೇ ಲಂಗವನ್ನು ಟೇಪುಗಳ ರೀತಿ ಹರಿದು ರಂಪ ಮಾಡಿದ್ದರಿಂದ ದಯನಿಗೆ ಸಿಟ್ಟೇನು ಬರಲಿಲ್ಲ. ಯಾವಾಗ ಹೆಡ್‌ ಮೇಷ್ಟ್ರು ಫಟಾರಂತ ಅವನ ತಲೆ ಮೇಲೆ ಕುಕ್ಕಿದರೋ ಆಗ ದಯ ತನ್ನ ಎಂದಿನ ಲಯದಲ್ಲಿ, ‘ಲೇ ಹುಚ್ಚ ಸೂ... ಮಗನೇ’ ಎಂಬ ಬೈಗುಳವನ್ನು ತನ್ನ ನಾಲಿಗೆಯಿಂದ ಕಿತ್ತೆಸೆದು ಬಿಟ್ಟ. ಈ ವಾಕ್ಯ ನಿರೀಕ್ಷಿಸದ ಹೆಡ್‌ಮೇಷ್ಟ್ರಿಗೆ ಸಿಡಿಲೇ ಬಡಿದಂತಾ ಯಿತು. ಕರೆಂಟ್ ಹೊಡೆಸಿಕೊಂಡವರಂತೆ ಸೀಜಾಗಿ ನಿಂತು ಬಿಟ್ಟರು.ನಾರಾಯಣಪ್ಪ ದಿಕ್ಕೇ ತೋಚದೇ ಸುಸ್ತಾಗಿದ್ದರು. ದುಃಖದ ಸೊಲ್ಲು ತೆಗೆದು ‘ಎಲ್ಲಿದ್ದೀರಿ ಬರ್ರೋ’ ಎಂದು ಸಹಾಯಕ್ಕಾಗಿ, ತಮ್ಮ ಸಹೋದ್ಯೋಗಿಗಳಿದ್ದ ದಿಕ್ಕಿನೆಡೆಗೆ ಅರಚಿ ಕೊಂಡರು. ಅನಾಹುತವೇ ಆಗಿದೆ ಎಂದರಿತ ಶಾಲೆಯ ಎಲ್ಲಾ ಮೇಷ್ಟ್ರುಗಳೂ ತಮ್ಮ ಕ್ಲಾಸುಗಳನ್ನು ನಿಲ್ಲಿಸಿ ಎದ್ದೂಬಿದ್ದು ಓಡಿ ಬಂದರು. ಬಂದವರಿಗೆ ಏನೊಂದೂ ಅರ್ಥವಾಗಲಿಲ್ಲ. ಬಲು ಸಂಕಟ ದಿಂದ ಸಣ್ಣ ಮಕ್ಕಳು ಚಾಡಿ ಹೇಳುವಂತೆ ತಮ್ಮ ಫಜೀತಿಯನ್ನು ಹೆಡ್‌ಮೇಷ್ಟ್ರು ತೋಡಿಕೊಂಡರು. ದಯಾ ಮಾತ್ರ ಅಚಲವಾಗಿ ತನ್ನ ಗೊಣ್ಣೆ ಮಕ್ಕಳ ಒಳಗೂ ಹೊರಗೂ ಆಡಿಸುತ್ತಾ ನಿಂತಿದ್ದ.ಹೆಡ್‌ ಮೇಷ್ಟರ ತಲೆಯೇ ಕಂಡರಾಗದ ಕೆಲ ಮೇಷ್ಟ್ರುಗಳ ಹೃದಯಗಳು ನಡೆದ ಕಥೆ ಕೇಳಿ ಒಳಗೊಳಗೇ ಪುಲಕಗೊಂಡವು. ಅವರೆಲ್ಲಾ ದಯನ ಮುಖವನ್ನು ಒಮ್ಮೆ ಹೆಮ್ಮೆಯಿಂದ ನೋಡಿ ‘ಭಪ್ಪರೇ ಮಗನೇ, ಭಾರಿ ಚಲೋ ಕೆಲ್ಸ ಮಾಡಿದ್ದೀಯ’ ಎಂದುಕೊಂಡವು. ಕೆಂಚಪ್ಪ ಮೇಷ್ಟ್ರು ಹೆಡ್‌ ಮೇಷ್ಟ್ರಿಗೆ ಉರಿ ತಾಗುವಂತೆ ‘ಅವನೇಳಿದ ಕೆಟ್ಟ ಮಾತ್ನಾ ತಿರಗ ಒಂದ್ ಸಲ ಹೇಳ್ಸಿ ಸಾ. ನಾವೊಮ್ಮೆ ಕೇಳ್ನು’ ಎಂದರು. ‘ಆ ದರಿದ್ರ ಮಾತ್ನ ಕೇಳ್ನು ಅಂತಿರಲ್ರಿ. ಎಲ್ಲಾ ಸೇರಿ ಈ ಕುನ್ನಿ ನನ್ಮಗನಿಗೆ ನಾಲ್ಕು ತದುಕ್ರಿ’ ಎಂದು ಅಪ್ಪಣೆ ಮಾಡಿದರು. ನಿಂತ ಯಾರೂ ಅಲುಗಾಡಲಿಲ್ಲ.ದಯನ ಮೇಲೆ ಮುಗಿಬಿದ್ದು, ಎಲ್ಲಾ ಟೀಚರ್‌ಗಳು ಅವನನ್ನು ಹಣ್ಣುಗಾಯಿ ನೀರು ಗಾಯಿ ಮಾಡೇ ಬಿಡ್ತಾರೆ ಅನ್ನೋ ಸ್ಪಷ್ಟ ಭರವಸೆ ಹೆಡ್‌ಮೇಷ್ಟ್ರಿಗಿತ್ತು. ಆದರೆ ಯಾರೊಬ್ಬರೂ ಮಿಸು ಕಾಡದೆ ನಿಂತಿದ್ದು ಅವರ ಬಿಪಿ ಗತಿಯನ್ನು ಮತ್ತಷ್ಟು ಏರಿಸಿತು. ಆಗ ಹೆಡ್‌ಮೇಷ್ಟ್ರು ನರ ನಾಡಿಗಳೆಲ್ಲಾ ಬಿಗಿಯಾದವು. ತನಗಾಗಿ ಯಾವ ಸಹೋದ್ಯೋಗಿಯೂ ಸೊಲ್ಲು ತೆಗೆಯದೆ ಮೌನ ವಾಗಿದ್ದು ಬಲು ಅಪಮಾನವೆನಿಸಿತು. ‘ಅಲೆಲೆ... ನೋಡ್ದೆ ಕಣಯ್ಯ ನಿಮ್ ಸತಿ ಸಾವಿತ್ರಿ ನಾಟಕವ. ಅವನಂದಿದ್ದು ನನಗಲ್ವೆ, ನಿಮಿಗಲ್ವಲ್ಲ? ಏಯ್.. ನಸಗುನ್ನಿಗಳಾ ನೋಡ್ ಬರ್ರಲೇ, ಬೆರಿಕಿ ಹುಡುಗ್ರಿಗೆ ಬಿಗಿಯೋದು ಹೆಂಗೇಂತ ನಾನು ತೋರುಸ್ತೀನಿ. ಈ ಹೆಡ್‌ಮೇಷ್ಟ್ರು ತಾಕತ್ತು ತೋರಿಸ್ತೀನಿ ನೋಡ್ರಿ’ ಎಂದು ದಯನನ್ನ ಅನಾಮತ್ತಾಗಿ ಹಿಡಿದೆತ್ತಿ ಮೇಜಿನ ಮೇಲೆ ನಿಲ್ಲಿಸಿ ಕೊಂಡರು. ಗುರು ವೃಂದ ಮುಂದಿನ ದೃಶ್ಯ ವೀಕ್ಷಣೆಗೆ ಸಿದ್ಧವಾಗಿ ನಿಂತಿತು.ಹೆಡ್‌ ಮೇಷ್ಟ್ರು ದಯನನ್ನ ಮೇಜಿನ ಮೇಲೆ ನಿಲ್ಲಿಸಿದರು. ಅವನ ಮುಖ ತಮ್ಮ ಮುಖಕ್ಕೆ ಸಮ ಬರುತ್ತಾ ಅಂತ ಬಡಗಿಯಂತೆ ಮೂಲೆಮಟ್ಟ ನೋಡಿಕೊಂಡರು. ‘ಜೀವನದಲ್ಲಿ ಮನುಷ್ಯನಿಗೆ ಲೆವೆಲ್ ಇರಬೇಕು ಕಣಲೇ, ಲೆವೆಲ್ಲು’ ಎಂದು ಹೇಳಿದರು. ದಯ ಪಿಳಿಪಿಳಿ ಕಣ್ಣುಗಳಷ್ಟೇ ಬಿಟ್ಟು ಕೊಂಡು ಹೆಡ್‌ಮೇಷ್ಟ್ರು ಎತ್ತರದ ಸಮಕ್ಕೆ ನಿಂತಿದ್ದ. ‘ಈಗ, ಬಾಯಿ ಬಿಡೋ ನಾಯಿ ನನ್ಮಗನೇ.., ಏನಂತ ಬೊಗುಳಿದೆ ಅದನ್ನೇ ಬೊಗಳು. ಎಲ್ಲಾ ಅದನ್ನ ಕೇಳಿ ಖುಷಿಪಡಕ್ಕೆ ಇಲ್ಲಿ ಕಾಯ್ತಿದವೆ. ಏನೋ, ಭಡವಾ ರಾಸ್ಕಲ್, ಈ ವಯಸ್ಸಿಗೆ, ಅಮ್ಮ, ಅಕ್ಕನ ಬೈಗುಳಗಳೆಲ್ಲಾ ಕಲಿತಿದ್ದೀಯಾ? ಬೊಗಳಲೇ... ಭಾಂಚತ್’ ಎಂದು ಕಿರುಚಾಡಿ ದವರೇ, ಬ್ರೆಡ್ಡಿನ ತುಂಡುಗಳಂತೆ ಎದ್ದು ಕಾಣುತ್ತಿದ್ದ ದಯನ ಕೆನ್ನೆಗಳ ಮೇಲೆ ಫಟಾರ್ ಫಟಾರಂತ, ಧಿಮ್ಮನಾಗಿ ಬಾರಿಸಿದರು. ದಯ, ಈಗ ನಿಜವಾಗಿಯೂ ಹೆದರಿ ಹೋಗಿದ್ದ. ತಿರುಗಿ ಬೈಯುವ ಅವನ ಧೈರ್ಯವೇ ಉಡುಗಿ ಹೋಗಿತ್ತು. ಹೆಡ್‌ಮೇಷ್ಟ್ರು ‘ಬೊಗಳೋ, ಬೊಗಳೋ’ ಎಂದು ಮತ್ತೆ ಮತ್ತೆ ಅವನನ್ನು ಪೀಡಿಸುತ್ತಿದ್ದರು. ಅವನಿಗೆ ಎಲ್ಲಾ ಮರೆತು ಹೋದಂತಾಗಿತ್ತು. ತಮ್ಮ ಕಣ್ಣುಗಳನ್ನು ಉಂಡೆ ಮಾಡಿಕೊಂಡು, ತಮ್ಮ ಮುಖವ ದಯನ ಮೂಗಿನ ಹತ್ತಿರಕ್ಕೆ ತಂದು ಕೊಂಡರು. ಕೆಳಗೂ ಮೇಲೂ ತಾಳಬದ್ಧವಾಗಿ ಸರಿದಾಡುತ್ತಿದ್ದ ದಯಾನಂದನ ಮೂಗಿನ ಎರಡು ರಸಾಯಣಗಳು ಮಾತ್ರ ಹೆಡ್‌ಮೇಷ್ಟ್ರಿಗೆ ಅಂಜದೆ ಚಲನೆಯಲ್ಲೇ ಇದ್ದವು. ಇವರಿಬ್ಬರ ಈ ದೃಷ್ಟಿ ಯುದ್ಧ ನಡೆಯುವಾಗ, ಅಚಾನಕ್ಕಾಗಿ ಒಂದು ಅನಾಹುತ ಜರುಗಿ ಹೋಯಿತು. ಅಲ್ಲಿ ಮೂಡಿದ ಆ ಶಬ್ದಕ್ಕೆ ಎಲ್ಲಾ ತತ್ತರಿಸಿ ಹೋದರು. ದಯಾನಂದನ ಮೂಗಿನ ರಸಾಯಣಗಳು ಒಳಗೆ ಹೊರಗೆ ಆಟವಾಡುವಾಗ, ದಪ್ಪ  ನೊಣ ವೊಂದು ಹಾರಿ ಬಂದಿತು. ಹುಳದಂತೆ ಥಳಥಳ ಹೊಳೆಯುತ್ತಿದ್ದ ದಯನ ರಸಾಯಣಗಳು ತೀರಾ ಆಕರ್ಶಕವಾಗಿ ಕಂಡವು. ಆಸೆಬುರುಕ  ಅಡ್ಡಕಸುಬಿ ನೊಣ ಆಸೆಯಿಂದ ಅಲ್ಲೇ ಕೂತು ಬಿಟ್ಟಿತು. ಎದುರಾಳಿ ಹೆಡ್‌ಮೇಷ್ಟ್ರು ತೀರಾ ಹತ್ತಿರದಲ್ಲಿ ಮುಖವಿಟ್ಟುಕೊಂಡು ಗುರಾಯಿಸುತ್ತಿದ್ದರಿಂದ ದಯಾನಂದನಿಗೆ ಆ ದರಿದ್ರ ನೊಣವನ್ನು ಓಡಿಸಲು ಅವಕಾಶವೇ ಸಿಗಲಿಲ್ಲ. ಹೆಡ್‌ಮೇಷ್ಟ್ರು ಕೈಗಳನ್ನು ಬಿಗಿಯಾಗಿ ಅವನ ಪುಷ್ಠದ ಕಡೆಗೆ ಹಿಡಿದಿಟ್ಟುಕೊಂಡಿದ್ದರು. ಪರಿಸ್ಥಿತಿ ಹೀಗಿದ್ದಾಗ ಪಾಪ ದಯ ತಾನೇ ಏನು  ಮಾಡಲಾದೀತು? ಹೆದರಿಕೆಯ ಅವಸರದಲ್ಲಿ ನೊಣವನ್ನು ಸೇರಿಸಿಕೊಂಡೇ ಮೂಗಿನೊಳಗೆ ಸುರ್ ಎಂದು ಆಪೋಶನೆ ಮಾಡಿಕೊಂಡು ಬಿಟ್ಟ. ಬೆಳಕಿನ ಲೋಕದಿಂದ ಒಮ್ಮೆಲೇ ಕತ್ತಲ ಗೂಡಿಗೆ ಎಸೆಯಲ್ಪಟ್ಟ ನೊಣಕ್ಕೆ ಉಸಿರುಗಟ್ಟಿದಂತಾಯಿತು. ತಾನೇ ಇನ್ನೊಂದು ಪ್ರಾಣಿಗೆ ಆಹಾರವಾದೆ ಎಂದು ಹೆದರಿದ ನೊಣ ಮೂಗಿನೊಳಗೆ ಸೇರಿ ಗಲಾಟೆ ಎಬ್ಬಿಸಿತು. ಸಹಾಯಕ್ಕಾಗಿ ಅಂಗಲಾಚಿತು. ನೊಣದ ಒದ್ದಾಟದಿಂದ ದಯಾನಂದನಿಗೂ ಅಸಾಧ್ಯ ಕಿರಿಕಿರಿ ಶುರುವಾಗಿ ಹೋಗಿತ್ತು.ಹೀಗಾಗಿ, ಅವನು ಸೀನಲು ಒಂದಿಷ್ಟು ಬಾಯಿ ತೆರೆದು ಜಾಗ ಮಾಡಿಕೊಳ್ಳತೊಡಗಿದ. ಇನ್ನೂ ಮುಖಕ್ಕೆ ಮುಖವಿಕ್ಕಿ ‘ಬೊಗಳೋ, ಬೊಗಳೋ’  ಭಾಂಚಾತ್ ಎಂದು ಹೆಡ್‌ಮೇಷ್ಟ್ರು ಪೀಡಿಸುತ್ತಲೇ ಇದ್ದರು. ದಯ ಉಸಿರಾಡಲು ಬಾಯಿ ಕಳೆಯುತ್ತಿ ರುವುದು ನೋಡಿ ಹೆಡ್‌ಮೇಷ್ಟ್ರು ತಮ್ಮ ಜೋರು ಫಲಿಸಿತೆಂದು ಖುಷಿಪಟ್ಟರು. ‘ಈಗ ಬಾಯ್ಬಿಟ್ತಿದ್ದಾನೆ ರಾಸ್ಕಲ್’ ಎಂದು ಅವನ ಮುಸುಡಿಗೆ ಮತ್ತಷ್ಟೂ ಹತ್ತಿರವಾದರು. ‘ಹ್ಞಾ... ಹ್ಞೂ.... ಬಾಯಿ ಬಿಡು’ ಎಂದು ಮಂತ್ರವಾದಿಯಂತೆ ಕಾಡಿಸತೊಡಗಿದರು. ದಯನಿಗೆ ಪಾಪ ಏನೂ ತೋಚಲಿಲ್ಲ. ನೊಣದ ಕಾಟ ಸಹಿಸಲಾಗದ ದಯ ತಲೆಯನ್ನು ಆಗಸದ ಕಡೆಗೆತ್ತಿ, ಕಡೆಗೆ ಫಕ್ಕಂತ ಕೆಳಗಿಳಿಸಿ ಆಕ್‌ಶ್ಷೀ... ಎಂಬ ಸಿಡಿಲ ಸೀನನ್ನು ಝಾಡಿಸಿಬಿಟ್ಟ. ಹೆಡ್‌ಮೇಷ್ಟ್ರು ಮುಖದ ಮೇಲೆ ಭೂಕಂಪನವೇ ಆಗಿತ್ತು. ಹೆದರಿ ಹೆಡ್‌ಮೇಷ್ಟ್ರು ಸಂಪೂರ್ಣ ಕಂಗಾಲಾ ಗಿದ್ದರು. ಅವರ ಕನ್ನಡಕ, ಮುಖ, ಪಾಣಿ ಬುರುಡೆ ಮೇಲೆಲ್ಲಾ ದಯನ ಮೂಗಿನ ಐಸ್ಕ್ರೀಂ ಚೆಲ್ಲಾಟ ವಾಡಿತ್ತು. ಮಂಜಿನ ಮಳೆಯೇ ಸುರಿದಿತ್ತು. ಗುರು ಶಿಷ್ಯರ ಜಗಳದಲ್ಲಿ ತನ್ನ ಪ್ರಾಣವನ್ನು ಅನ್ಯಾಯವಾಗಿ ಕಳೆದುಕೊಳ್ಳುತ್ತಿದ್ದ ನೊಣ ಹೆಡ್‌ಮೇಷ್ಟ್ರು ಮುಖದ ಮೇಲೆ ಬಿದ್ದದ್ದೇ ತಡ ಎದ್ದೋಡಿ ಹೋಯಿತು. ಹೆಡ್‌ಮೇಷ್ಟ್ರು ಸಂಪೂರ್ಣ ಕಂಗಾಲಾಗಿ, ಮುಖ ಕಿವುಚಿಕೊಂಡು ನಿಂತಿದ್ದರು. ತನ್ನ ಮೂಗಿನ ಮಕ್ಕಳ ಕಳೆದುಕೊಂಡ ದಯ ಸಂಪೂರ್ಣ ನಿರಾಳವಾಗಿ ಉಸಿರಾಡುತ್ತಿದ್ದ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry