ಹೆಣವಾದವಳು ಮತ್ತೆ ಬಂದಳು

7

ಹೆಣವಾದವಳು ಮತ್ತೆ ಬಂದಳು

Published:
Updated:

‘ಆಕೆ ಒಳ್ಳೆ ಹುಡುಗಿ. ಚುರುಕಾಗಿದ್ದಳು. ಬುದ್ಧಿವಂತೆ. ಅಂಥವಳು ಆತ್ಮಹತ್ಯೆ ಮಾಡಿಕೊಳ್ಳೋಕೆ ಸಾಧ್ಯನೇ ಇಲ್ಲಾ ಸಾರ್’.

‘ಅಯ್ಯೋ ನಾವು ಫೋನು ಮಾಡಿದಾಗ ಅವರ ತಾಯೀನೇ ಹೇಳಿದ್ರು ಸಾರ್. ಮನೇಲಿ ವೇಲ್ ಬಿಕ್ಕೊಂಡು ನೇಣ್ ಹಾಕ್ಕೊಂಡ್ಲಂತೆ ಸಾರ್’. ‘ಸರಿಯಾಗಿ ಕೇಳಿದ್ರೇನ್ರಿ? ಅವಳು ಸಾಯೋ ಥರದ ಹುಡುಗಿ ಅಲ್ಲ ಕಣ್ರಿ ಮಾರಾಯ್ರೆ. ಸಾವಿಗೆ ಏನ್ ಕಾರಣಾಂತ ಹೇಳಿದ್ರಾ? ನಿಮ್ಮ ಹತ್ರ ಯಾರ್ರೀ ಮಾತಾಡಿದ್ರು?’‘ಅವರಮ್ಮ ಹೇಳಿದ್ದು ಸಾರ್. ಅವಳಿಗೆ ಮೊನ್ನೆ ದಿಢೀರ್ ಎಂಗೇಜ್‌ಮೆಂಟ್ ಮಾಡಿದ್ರಂತೆ. ಅದವಳಿಗೆ ಇಷ್ಟವಿರಲಿಲ್ಲವಂತೆ. ಓಡಿಹೋಗಬಹುದೂಂತ ಮನೇಲಿ ಕೂಡ್ಹಾಕಿ ಅವರಮ್ಮ ಕೂಲಿ ಕೆಲಸಕ್ಕೆ  ಹೋದ್ರಂತೆ. ಸಂಜೆ ಬಂದು ನೋಡೋ ಹೊತ್ತಿಗೆ ಅವಳು ವೇಲ್ ಬಿಕ್ಕೊಂಡು ಸತ್ತಿದ್ಲಂತೆ ಸಾರ್’.‘ಛೇ..! ಎಷ್ಟು ಚೆನ್ನಾಗಿ ನಗುನಗ್ತಾ ಇದ್ದ ಹುಡುಗಿಯಲ್ರಿ ಅವಳು. ಪುಟಪುಟಾಂತ ಓಡಿ ಬಂದು ಲೆಕ್ಚರರ್‍್ಸಗೆ ನಮಸ್ಕಾರ ಮಾಡುತ್ತಿದ್ದಳು. ತಿಂಡಿ ಆಯ್ತಾ ಸಾರ್, ಕ್ಲಾಸ್ ಮುಗೀತಾ ಸಾರ್, ಅಂತೆಲ್ಲಾ  ಆಪ್ತವಾಗಿ ವಿಚಾರಿಸುತ್ತಿದ್ದಳು. ಅಂಥ ಜೀವಕಳೆಯ ಹುಡುಗಿ ಸತ್ತೋಗಿದ್ದಾಳೆ ಅಂದ್ರೆ ನಂಬೋಕೆ ಆಗ್ತಾ ಇಲ್ಲ’.‘ಹೌದು ಸಾರ್. ನಮಗೂ ಹಂಗೆ ಅನ್ನಿಸ್ತಾ ಇದೆ. ಅವಳೂ... ಸತ್ತಿಲ್ಲ ಸಾರ್. ಈ ಮನೆಯವರೇ ಹೊಡೆದು ಸಾಯ್ಸಿರಬೇಕು. ಬಲವಂತದ ಎಂಗೇಜ್‌ಮೆಂಟ್ ಮಾಡ್ಸಿದ್ದಾರೆ. ಹೊರಗೂ ಹೋಗೋಕ್ಕೆ ಬಿಟ್ಟಿಲ್ಲ. ಮನಸ್ಸಿಗೆ ಏನನ್ನಿಸಿತೋ ಬೇಜಾರಾಗಿ ನೇಣ್ಹಾಕಿಕೊಂಡಿದ್ದಾಳೆ ಪಾಪ. ತುಂಬಾ ಅನ್ಯಾಯ ಸಾರ್. ಅವಳ ನಗುಮುಖ,  ಮಾತು ಈಗ್ಲೂ ಕಣ್ಣ ಮುಂದೇನೆ ಇದೆ ಸಾರ್’.‘ಫೋನು ಮಾಡಿ ಅಡ್ರೆಸ್ ಕೇಳ್ರಿ. ಅದೇನಾಗಿದ್ದೂಂತ ಒಂದು ಮಾತು ಕೇಳಿ ಹೆಣಾನ ನೋಡ್ಕೊಂಡಾದ್ರೂ ಬರೋಣ’.

‘ಅಯ್ಯೋ.. ಅಡ್ರೆಸ್ ನನ್ನ ಜೇಬಲ್ಲೇ ಇದೆ ಸಾರ್. ಬೆಳಿಗ್ಗೇನೆ ಕಲೆಕ್ಟ್ ಮಾಡ್ಕೊಂಡೆ.  ಆದರೆ, ಅಲ್ಲಿಗೆ ಈಗ ಹೋಗಿ  ಏನ್ಮಾಡೋದು ಸಾರ್. ಸತ್ತ ದಿನ ರಾತ್ರಿನೇ ಸೈಲೆಂಟಾಗಿ ದಫನ್ ಮಾಡ್ಬಿಟ್ರಂತೆ. ಇದೆಲ್ಲಾ ಆಗಿ ಈಗಾಗಲೇ ಮೂರು ದಿನವಾಗಿದೆ. ಈಗ ಅಲ್ಲೋಗಿ ಏನ್ ಮಾಡ್ತೀರ ಹೇಳಿ’.‘ಅವರ ತಂದೆ ತಾಯಿಗೆ ಸಮಾಧಾನದ ನಾಲ್ಕು ಮಾತಾದ್ರೂ ಹೇಳಬಹುದಲ್ಲ’

‘ಗೋಪಾಲಕೃಷ್ಣ ವಿಷಯ ತಿಳಿದು ನಿನ್ನೆ ಸಂಜೇನೆ ತಂದೆಗೆ ಪೋನ್ ಮಾಡಿದ್ರಂತೆ ಸಾರ್. ಅವರಪ್ಪ ಬಾಯಿಗೆ ಬಂದಂತೆ ಅವಳನ್ನ ಬೈತಾ ಇದ್ನಂತೆ. ಹಾಳಾದವಳು ನಮ್ಮ ಮರ್ಯಾದೆ ತೆಗೆದಳು. ನೀವೆಲ್ಲಾ ಬಂದು ಹೋದ್ರೆ ನಮ್ಮ ಮಾನ ಮರ್ಯಾದೆ ಇನ್ನಷ್ಟು ಬೀದೀಲಿ ಹರಾಜಾಗುತ್ತೆ. ವಾರದ ನಂತರ ತಿಥಿ ಮಾಡ್ತೀವಿ ಆಗ ಬನ್ರಿ ಊಟಕ್ಕೆ’ ಅಂದ್ರಂತೆ ಸಾರ್. ಅವರ ಮಾತ್ನಲ್ಲಿ ಮಗಳು ಸತ್ತೋದಳು ಅನ್ನೋ ಸಣ್ಣ ಫೀಲಿಂಗ್ ಇರ್‍್ಲಿಲ್ಲವಂತೆ ಸಾರ್. ಇದೆಲ್ಲಾ ನೋಡ್ತಾ ಇದ್ರೆ ಅಲ್ಲೇನೋ ಗೋಲ್‌ಮಾಲ್ ನಡೆದಿದೆ ಸಾರ್’.‘ಛೇ..! ಏನ್ ನಡಿತೋ? ಏನ್ ನಡೀಲಿಲ್ಲವೋ? ಅದು ಬಿಡಿ. ಆದ್ರೂ ಎಂಥ ದರಿದ್ರ ಜನಾರಿ ಇವರು. ಮಗಳ ಸಾವಿಗಿಂತ ಮರ್ಯಾದೆನೆ ಮುಖ್ಯ ಅಂತ ಕೊರಗ್ತಿದ್ದಾರಲ್ಲಾ!’‘ಮಿಡಲ್ ಕ್ಲಾಸ್ ಜನರ ಪ್ರಾಬ್ಲಂ ಅಂದ್ರೆ ಇದೇ ನೋಡಿ ಸಾರ್. ಹಾಳಾದ ಈ ಮಕ್ಕಳು ಬೆಳೆದ ಮೇಲೆ ಅಪ್ಪ ಅಮ್ಮನ ಮಾತ್ ಕೇಳಲ್ಲ. ಅಪ್ಪ ಅಮ್ಮನೂ ಮಕ್ಕಳ ಮನಸ್ಸಿನ ಮಾತು ಕೇಳಲ್ಲ. ಎಲ್ಲಾದಕ್ಕೂ ಹಾಳಾದ ಈ ಪ್ರೀ ಮೆಚ್ಯೂರ್‍ಡ್‌ ಲವ್ವೇ ಕಾರಣ ಸಾರ್.ಆದರೂ, ಬೆಳಿಯೋ ಒಂದು ಜೀವ ಹಿಂಗೆ ತಣ್ಣಗಾಗಿದ್ದು ಯಾಕೋ ಸರಿ ಅನ್ನಿಸ್ತಾ ಇಲ್ಲ ಸಾರ್. ಈಗಿನ ಮಕ್ಕಳ ಮನಸ್ಸು ತುಂಬಾ ಸೂಕ್ಷ್ಮ. ಅವು ಹಿಂದೆ ಮುಂದೆ ಯೋಚ್ನೇನೆ ಮಾಡಲ್ಲ. ಸಣ್ಣ ಮಾತಿಗೆ, ಚಿಕ್ಕ ಅವಮಾನಕ್ಕೂ ನೇಣು ಹಾಕ್ಕೊಳ್ಳೊ ಕೆಟ್ಟ ತೀರ್ಮಾನ ಕೈಗೆತ್ತಿಕೊಂಡು ಬಿಡ್ತಾವಲ್ಲಾ ಸಾರ್’.‘ರೀ ಶಿವಕುಮಾರ್ ಬನ್ರಿ. ಅವರ ಮನೆ ಎಲ್ಲೀಂತ ಹುಡುಕೋಣ. ಅದೇನಾಗಿದೆ ಅಂತ ಪಕ್ಕಾ ವಿಚಾರಿಸೇ ಬಿಡೋಣ. ಅವಳು ಸತ್ತಿದ್ದಾಳೆ ಅನ್ನೋ ವಿಷಯಾನೆ ಯಾಕೋ ಒಪ್ಪಿಕೊಳ್ಳೋಕೆ ಆಗ್ತಾ ಇಲ್ಲಾ’.

‘ಒಂದು ನಿಮಿಷ ಸಾರ್. ಪ್ರಿನ್ಸಿಪಾಲರಿಗೆ ಒಂದ್ ಮಾತು ಹೇಳಿ ಬರ್ತಿನಿ’

*****

‘ಈ ಗಲ್ಲಿ ನೋಡಿದ್ರೆ ಎಲ್ರೂ ಕೂಲಿ ಕಾರ್ಮಿಕರೇ ಇದ್ದಂಗೆ ಕಾಣಿಸ್ತಾರಲ್ಲಾ ಸಾರ್. ಯಾವುದಕ್ಕೂ ನೀವಿಲ್ಲೇ ನಿಂತಿರಿ. ಅಲ್ಲೊಂದಿಷ್ಟು ಜನ ಇದ್ದಾರೆ. ನಾನೇ ವಿಚಾರಿಸಿಕೊಂಡು ಬರ್‍ತೀನಿ’‘ನಿಮ್ಮನ್ನು ನೋಡಿದ್ರೆ ಥೇಟ್ ಪೊಲೀಸ್ ಥರ ಇದ್ದೀರಿ. ಜನ ಹೆದರಿ ಬಿಟ್ಟಾರು. ಹೋಗಿ ಬೇಗ ಬನ್ನಿ. ನಾನಿಲ್ಲೇ ಇರ್‍ತೀನಿ’.

‘ಥೂ.. ಏನ್ ಸಾರ್ ಇಲ್ಲಿ ಯಾರಿಗೆ ಕೇಳಿದ್ರೂ ಇಲ್ಲಿ ಯಾರೂ ಸತ್ತೇ ಇಲ್ಲ ಅಂತಾರೆ. ಆ ಹುಡುಗಿ ಮನೆಗೆ ಬೇರೆ ಬೀಗ ಹಾಕಿದೆ. ಒಂದು ಅಸಹಜ ಸಾವು ನಡೆದರೂ ಈ ಬೀದಿ ಜನಕ್ಕೆ ಗೊತ್ತಾಗಿಲ್ಲ ಅಂದ್ರೆ ಆಶ್ಚರ್ಯ ಅಲ್ವಾ?. ಇಲ್ಲಿನ ಪರಿಸ್ಥಿತಿ ನೋಡಿದ್ರೆ ಅಂಥದ್ದೇನು ನಡೆದೇ ಇಲ್ಲಾ ಅನ್ಸುತ್ತೆ ಸಾರ್. ಅವರಪ್ಪ ಅಮ್ಮ ನಮ್ಮಿಂದ ಏನೋ ಮುಚ್ಚಿಡ್ತಾ ಇದ್ದಾರೆ. ಇಲ್ಲಿ ಬೇರೆ ಏನೋ ಕಥೆ ನಡೆದಾಂಗೆ ಕಾಣುತ್ತೆ. ಮುದುಕರು ಎಳೆ ಮಕ್ಕಳು ಬಿಟ್ಟರೆ ಉಳಿದವರೆಲ್ಲಾ ಕೂಲಿ ಕೆಲಸಕ್ಕೆ ಹೋಗಿದ್ದಾರೆ. ಯಾವುದಕ್ಕೂ ಸಂಜೆಗೆ ಬನ್ನಿ ಅಂದ್ರು ಸಾರ್. ಈಗೇನ್ ಮಾಡೋಣ ಸಾರ್’.‘ಅಲ್ರಿ ಶಿವಕುಮಾರ್, ಆಕೆ ಸತ್ತಿದ್ರೆ, ಸ್ಮಶಾನದಲ್ಲಿ ಹೂತಾಕಿದ್ರೆ, ಮಸಣದಲ್ಲೇ ಮಾಹಿತಿ ಸಿಗುತ್ತಲ್ವ. ಹೋಗೋಣ ಬನ್ರಿ. ಮೂರು ದಿವಸದಿಂದ ಈಚೆಗೆ ಯಾರ್‍್ಯಾರು ದಫನ್ ಆಗಿದ್ದಾರೆ ಅಂತ ಕೇಳಿದ್ರೆ ಎಲ್ಲಾ ಗೊತ್ತಾಗುತ್ತೆ.ಅಯ್ಯೋ ಇವನಾ! ಸ್ಮಶಾನ ನೋಡಿದ್ರೆ ಇವರ ಕೇರಿ ಹಿಂದೇನೆ ಇದೆಯಲ್ರಿ. ಅಗೋ.. ಅಲ್ಲಿ ನೋಡಿ. ಯಾರೋ ಗುಂಡಿ ಅಗೀತಿದ್ದಾನೆ. ಅವನೇ ಈ ಮಸಣದ ವಾರಸುದಾರ ಇರಬೇಕು’‘ಏನಪ್ಪ, ಈ ಮೂರು ದಿನದ ಹಿಂದೆ ಯಾವುದಾದರೂ ನೇಣು ಹಾಕ್ಕೊಂಡ ಕಾಲೇಜು ಹುಡುಗಿ ಹೆಣ ಇಲ್ಲಿ ಹೂತಾಕಿದ್ರಾ? ಅವಳ ಮನೆ ನಿಮ್ಮ ಸ್ಮಶಾನದ ಹಿಂದಿನ ಕೇರಿಯಲ್ಲಿದೆ’‘ಅಯ್ಯೋ ಎಲ್ಲಿ ಸ್ವಾಮಿ. ವಾರದ ಹಿಂದೆ ಒಂದು ಅಜ್ಜಿ ಸತ್ತಿದ್ ಬಿಟ್ರೆ ಬೇರೆ ಯಾವ ಹೆಣಾನೂ ಬಂದಿಲ್ಲ. ಇವತ್ತು ಬೆಳಿಗ್ಗೆ ಒಂದು ಹೆಣದ ಆರ್ಡರ್ ಸಿಕ್ಕಿದೆ. ನಾಲ್ಕು ವರ್ಷದ ಮಗು ಅಂತೆ. ಜ್ವರ ಜಾಸ್ತಿಯಾಗಿ ಸತ್ತೋಗಿದ್ದಂತೆ. ಹಿಂಗಾಗಿ ಸಣ್ಣ ಗುಂಡಿ ಅಗೀತಾ ಇದ್ದೀನಿ’.‘ಶಿವಕುಮಾರ್ ನೀವು ಹೇಳೋದು ನಿಜ ಅನ್ಸುತ್ತೆ. ಸಂಜೆ ಹೊತ್ತಿಗೆ ಮತ್ತೆ ಬರೋಣ ನಡೀರಿ. ಅವರ ಮನೆಗೆ ಹೋಗಿ ನೇರವಾಗಿ ವಿಚಾರಿಸೋಣ. ನಡೆದ ಸಂಗತಿ ಆಗಲಾದ್ರೂ ಏನೂಂತ ಗೊತ್ತಾಗುತ್ತೆ. ಯಾಕೆ ಸತ್ತಳು ಅಂತ ಅಪ್ಪ ಅಮ್ಮ ಸುಳ್ಳು ಹೇಳಲ್ಲ ಕಣ್ರಿ’.

‘ನಿಜಾನೋ? ಸುಳ್ಳೋ? ಸಂಜೆ ಗೊತ್ತಾಗುತ್ತಾಲ್ವಾ? ಸಾರ್’.

*****

‘ಇದೇ ಮನೆ, ಇಲ್ಲೇ ಗಾಡಿ ನಿಲ್ಸಿ ಸಾರ್. ಮನೇಲಿ ಜನ ಸಖತ್ತಾಗೇ ಸೇರ್ಕಂಡಿದ್ದಾರೆ. ಅದೇನೂಂತ ವಿಚಾರಿಸಿಯೇ ಬಿಡೋಣ’.

‘ನಮಸ್ಕಾರ. ನಾವು ನಿಮ್ಮ ಮಗಳು ಓದೋ ಕಾಲೇಜು ಲೆಕ್ಚರರ್‍್ಸ್‌್‌ಗಳು. ನಾವು ಬೆಳಿಗ್ಗೆ ಇಲ್ಲಿಗೆ ಬಂದಿದ್ವಿ. ನಿಮ್ಮ ಬೀದಿ ಜನಕ್ಕೆ ಕೇಳಿದ್ರೆ ನಿಮ್ಮ ಮನೇಲಿ ಯಾವ ಸಾವೂ ಆಗಿಲ್ಲ ಅಂತಿದ್ದಾರೆ. ನೀವು ನೋಡಿದ್ರೆ ನಿಮ್ಮ ಮಗಳು ನೇಣು ಹಾಕಿಕೊಂಡು ಸತ್ತೋದ್ಲು ಅಂತ ಕಾಲೇಜಿನವರು ಫೋನು ಮಾಡಿದಾಗ ಹೇಳಿದ್ದೀರಿ. ಏನು ಈ ಕಥೆ? ನಿಮ್ಮ ಮಗಳೀಗ ಎಲ್ಲಿದ್ದಾಳೆ?. ಅವಳು ಸತ್ತಿದ್ದು ನಿಜಾನ? ನಿಮ್ಮ ಮಗಳು ತುಂಬಾ ಒಳ್ಳೆ ಹುಡುಗಿ. ಕಾಲೇಜಿನಲ್ಲಿ ಒಂದು ತರಗತಿಗೆ ಮಾನಿಟರ್ ಆಗಿದ್ದವಳು. ಅವಳನ್ನ ಕಂಡ್ರೆ ನಾವೆಲ್ಲಾ ಖುಷಿ ಪಡ್ತಿದ್ವಿ. ಅವಳ ತಾಯಿ ನೀವು. ದಯವಿಟ್ಟು ಏನಾಯ್ತು ಅಂತ ಬಿಡಿಸಿ ಹೇಳಿ’.‘ಅಯ್ಯೋ ಮಾನ ತೆಗೆದವಳ ಕಥೆ ಏನ್ ಹೇಳೋದು ಸ್ವಾಮಿ. ನಾವು ಕೂಲಿ ಕೆಲ್ಸ ಮಾಡಿ ತಿನ್ನೋ ಜನ. ನನ್ನ ತಮ್ಮನಿಗೆ ಅವಳ್ನ ಕೊಟ್ಟು ಖರ್ಚಿಲ್ಲದಂಗೆ ಮದ್ವೆ ಮಾಡೋಣಾಂತ ಯೋಚ್ನೆ ಮಾಡಿದ್ವಿ. ಇವಳಿಗೆ ಕೇಳದಾಗೆಲ್ಲಾ ಹಟನೇ ಮಾಡಿದ್ಲು. ಓದ್ತೀನಿ ಅಂತಿದ್ಲು. ನಮ್ಮ ಕೈಲಿ ಅವಳಿಗೆ ಓದ್ಸಾಕೆ ಆದಾದ ಸ್ವಾಮಿ. ಮದ್ವೆ ಆದ ಮೇಲೂ ನನ್ನ ತಮ್ಮ ಓದಿಸ್ತೀನಿ ಅಂತ ಪ್ರಮಾಣ ಮಾಡ್ದ ಸ್ವಾಮಿ. ವಿಳ್ಳೆಶಾಸ್ತ್ರ ಆಗೋಗಂಟ ಸುಮ್ಮನಿದ್ದು, ಆಮೇಲೆ ಅದ್ಯಾವ ಮಾಯದಲ್ಲೋ ಮನೆಬಿಟ್ಟು ಓಡಿ ಹೋಗಿದ್ದಾಳೆ.ಅವನ್ಯಾವನೋ ಬೆವರ್ಸಿ ಹುಡುಗನಿಗೆ ಲವ್ ಮಾಡ್ತಿದ್ಲಳಂತೆ. ಅದು ನಮ್‌ಗಂಟ ಗೊತ್ತಾಗಿಲ್ಲ. ಅವಳ ತಂಗಿ ಇವಳು. ಇವಳಿಗೆ ಗೊತ್ತಿತ್ತಂತೆ. ಇವಳೂ ಹಲ್ಕ ನೋಡಿ ನಮಗೆ ಬಾಯ್ಬಿಟ್ಟಿಲ್ಲ. ಅವಳು ಓಡಿ ಹೋದ ಮೇಲೆ ಈಗ ಬೊಗಳ್ತಿದ್ದಾಳೆ. ಎಲ್ಲಾ ಫೋನಲ್ಲೇ ಪ್ಲಾನ್ ಮಾಡ್ಕೊಂಡಿದ್ದಾಳೆ. ಮನೇಲಿರೋ ಬಟ್ಟೆ ಬರೆ, ದುಡ್ಡು, ಅವಳ್ ಮಾರ್ಕ್ಸ್ ಕಾರ್ಡ್ ಎಲ್ಲಾ ತಗೊಂಡು ಆ ಹುಡ್ಗನ ಜತೆ ಪರಾರಿ ಆಗ್ಬಿಟ್ಟಿದ್ದಾಳೆ.ನಮ್ಮ ಮರ್ಯಾದೀನೆ ತೆಗೆದ ಮೇಲೆ ಅವಳು ನಮ್ಮ ಪಾಲಿಗೆ ಸತ್ತಂಗೆ ಲೆಕ್ಕ ಅಲ್ವಾ ಸ್ವಾಮಿ. ಅದಕ್ಕೆ ನಿಮ್ಮ ಇಸ್ಕೂಲಿನೋರು ಫೋನ್ ಮಾಡ್ದಾಗ ಸತ್ತೋದಳು ಅಂತ ಬೇಜಾರಾಗಿ ಹೇಳಿದ್ವಿ ಸ್ವಾಮಿ. ಇನ್ನ ಯಾರು ಅವಳ್ನ ಕೇಳಿದ್ರೂ ನಾವು ಸತ್ತೂದ್ಲು ಅಂತಾನೆ ಹೇಳ್ತೀವಿ. ಅಂಥ ಲೋಫರ್ ಮಗಳು ಇದ್ರೆಷ್ಟು? ಸತ್ರೆಷ್ಟು?’.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry