ಹೆಣ್ಣುಮಕ್ಕಳ ‘ಒಲಿಂಪಿಕ್’ ಶಕ್ತಿ ದಾಪುಗಾಲು

7

ಹೆಣ್ಣುಮಕ್ಕಳ ‘ಒಲಿಂಪಿಕ್’ ಶಕ್ತಿ ದಾಪುಗಾಲು

Published:
Updated:
ಹೆಣ್ಣುಮಕ್ಕಳ ‘ಒಲಿಂಪಿಕ್’ ಶಕ್ತಿ ದಾಪುಗಾಲು

2016ರ ರಿಯೊ ಒಲಿಂಪಿಕ್  ಕ್ರೀಡಾಕೂಟ, ಭಾರತದ ಹೆಣ್ಣುಮಕ್ಕಳ ಶಕ್ತಿಯನ್ನು ಮುನ್ನೆಲೆಗೆ ತಂದಿದೆ. ಪುರುಷರನ್ನು ಮೀರಿ ಹೆಣ್ಣುಮಕ್ಕಳ ಸಾಧನೆ ಹೀಗೆ ಪ್ರಖರವಾಗಿ ಹೊರಹೊಮ್ಮಿರುವುದು ಇದೇ ಮೊದಲ ಬಾರಿ. 17 ದಿನಗಳ ಈ ಬಾರಿಯ ಒಲಿಂಪಿಕ್ ಕ್ರೀಡಾಕೂಟದಲ್ಲಿ ಯಾವುದೇ ಪದಕ ಗೆಲ್ಲಲಾಗದೆ ಭಾರತ ಬರಿಗೈಯಲ್ಲಿ ಮರಳುವುದೇ ಎಂಬಂತಹ ನಿರಾಶಾದಾಯಕ ಮನಸ್ಥಿತಿ ರಾಷ್ಟ್ರದಾದ್ಯಂತ ಆವರಿಸಿಕೊಂಡಿತ್ತು.ಅಂತಹ ಸನ್ನಿವೇಶದಲ್ಲಿ ಕ್ರೀಡಾಕೂಟದ 12ನೇ ದಿನ  ಮಹಿಳಾ ಕುಸ್ತಿಯ 58 ಕೆಜಿ ವಿಭಾಗದಲ್ಲಿ ಕಂಚು ಗೆದ್ದ  ಹರಿಯಾಣದ ರೋಹ್‌ಟಕ್‌ನ ಸಾಕ್ಷಿ ಮಲಿಕ್  ರಾಷ್ಟ್ರದಾದ್ಯಂತ ಸಂಚಲನ ಮೂಡಿಸಿದರು.ನಂತರ ಹೈದರಾಬಾದ್‌ನ ಪಿ.ವಿ. ಸಿಂಧು, ಮಹಿಳಾ ಸಿಂಗಲ್ಸ್ ಬ್ಯಾಡ್ಮಿಂಟನ್‌ನ ಫೈನಲ್‌ಗೆ ಪ್ರವೇಶಿಸಿದ್ದು ರಾಷ್ಟ್ರದಾದ್ಯಂತ ಸಂಭ್ರಮದ ಅಲೆಗಳನ್ನೆಬ್ಬಿಸಿತಷ್ಟೇ ಅಲ್ಲ, ಸಿಂಧುವಿಗೆ ಚಿನ್ನದ ಪದಕ ಲಭಿಸಲಿ ಎಂದು ಇಡೀ ದೇಶ ಒಂದಾಗಿ ಹಾರೈಸಿದ್ದು ಅಪೂರ್ವವಾದದ್ದು.ಆದರೆ ಅಂತಿಮ ಸುತ್ತಿನ  ಪಂದ್ಯದಲ್ಲಿ ಬೆಳ್ಳಿಯನ್ನಷ್ಟೇ ಗೆದ್ದರೂ ಸ್ಪೇನ್‌ನ ಕ್ಯಾರೊಲಿನಾ ಮರೀನ್ ಜೊತೆ ಸಿಂಧು ಸೆಣಸಿದ ಪರಿ ರೋಮಾಂಚನದ ಅಲೆಗಳನ್ನು ಎಬ್ಬಿಸಿತು.ಕ್ರಿಕೆಟೇತರ ಪಂದ್ಯವೊಂದನ್ನು ಇದೇ ಮೊದಲ ಬಾರಿಗೆ ಭಾರತದ ಗಲ್ಲಿಗಲ್ಲಿಗಳಲ್ಲಿ ಜನ ಟಿ.ವಿ.ಯಲ್ಲಿ ವೀಕ್ಷಿಸಿ ಸಂಭ್ರಮಿಸಿದರು. ಈ ಇಬ್ಬರು ಹೆಣ್ಣುಮಕ್ಕಳೂ ಪದಕಗಳನ್ನು ಗಳಿಸುವ ಮೂಲಕ 125 ಕೋಟಿ ಜನಸಂಖ್ಯೆಯ ಭಾರತದ ಗೌರವವನ್ನು ಉಳಿಸಿದ್ದಾರೆ. ಏಕೆಂದರೆ, ಇದೇ ಮೊದಲ ಬಾರಿಗೆ ಭಾರತದ 118 ಅಥ್ಲೀಟ್‌ಗಳ ಬೃಹತ್ ಪಡೆಯೇ ಬ್ರೆಜಿಲ್‌ನ ರಿಯೊ ಡಿ ಜನೈರೊಗೆ ತೆರಳಿತ್ತು ಎಂಬುದನ್ನು ನೆನಪಿಸಿಕೊಳ್ಳಬೇಕು.ಸಾಕ್ಷಿ ಹಾಗೂ ಸಿಂಧು ಗಳಿಸಿದ ಪದಕಗಳ ಸಂಭ್ರಮಕ್ಕೂ ಮುಂಚೆ ಅಗರ್ತಲಾದ ದೀಪಾ ಕರ್ಮಾಕರ್  ಜಿಮ್ನಾಸ್ಟಿಕ್ಸ್‌ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದರು.ಭಾರತೀಯರಿಗೆ ಅಷ್ಟೇನೂ ಪರಿಚಿತವಲ್ಲದ ಜಿಮ್ನಾಸ್ಟಿಕ್ಸ್‌ನಲ್ಲಿ ದೀಪಾ ಕರ್ಮಾಕರ್ ಪದಕವನ್ನು ಕೂದಲೆಳೆಯಷ್ಟು  ಅಂತರದಿಂದ ತಪ್ಪಿಸಿಕೊಂಡರೂ ಆಕೆಯ ಸಾಧನೆಯೇನೂ ಕಡಿಮೆಯದಲ್ಲ. ಅದರಲ್ಲೂ ಅವರು ಪ್ರದರ್ಶಿಸಿದ  ಅಪಾಯಕಾರಿ ಪ್ರೊಡೊನೊವಾವನ್ನು ಈವರೆಗೆ ಜಗತ್ತಿನಲ್ಲಿ ಇತರ ಇಬ್ಬರು ಮಹಿಳೆಯರು ಮಾತ್ರ ಪ್ರಯತ್ನಿಸಿದ್ದಾರೆ ಅಷ್ಟೆ.ಪದಕ ಗೆಲ್ಲದಿದ್ದರೇನಂತೆ?  ಆಕೆಯ ಆತ್ಮವಿಶ್ವಾಸದ ವಾಲ್ಟ್‌ಗಳು  ಆಕೆಗೆ ಅನೇಕ ಅಭಿಮಾನಿಗಳನ್ನು ಸೃಷ್ಟಿಸಿವೆ. ಆದರೆ ಈ ಮಟ್ಟಿನ ಸಾಧನೆಗೈದ ದೀಪಾಗೆ ತನ್ನ ಫಿಸಿಯೊ ಥೆರಪಿಸ್ಟ್ ಕರೆದೊಯ್ಯಲು ಅವಕಾಶ ನೀಡಿರಲಿಲ್ಲ ಎಂಬುದು ವಿಪರ್ಯಾಸ. ಪದಕ ಗಳಿಸಬಹುದಾದ ಸಾಧ್ಯತೆಯಿರುವ ಕ್ರೀಡಾಳು ಎಂಬ ಭಾವನೆ ದಟ್ಟವಾದ ನಂತರವಷ್ಟೇ ಭಾರತ ಕ್ರೀಡಾ ಪ್ರಾಧಿಕಾರದ ನಿರ್ಧಾರ ಬದಲಾಯಿತು ಎಂಬುದು ನಮ್ಮ ವ್ಯವಸ್ಥೆಯ ಧೋರಣೆಗೆ ಸಾಕ್ಷಿ.ಇಂತಹ ಸನ್ನಿವೇಶದಲ್ಲಿ ತನ್ನ ಯಶಸ್ಸಿಗೆ ಯಾರು ಕಾರಣ ಎಂದು ಹೇಳುವಾಗ ಯಾವುದೇ ಕ್ರೀಡಾ ಸಂಸ್ಥೆ ಅಥವಾ ಸರ್ಕಾರಿ ಸಂಸ್ಥೆಯನ್ನು ಹೆಸರಿಸದೆ ‘12 ವರ್ಷಗಳ ನನ್ನ ಪರಿಶ್ರಮದ ಫಲ’ ಎಂದು ಸಾಕ್ಷಿ ಮಲಿಕ್ ಹೇಳಿರುವುದರಲ್ಲಿ ಯಾವುದೇ ಅತಿಶಯೋಕ್ತಿ ಇಲ್ಲ. ಹೆಣ್ಣುಮಕ್ಕಳು ಹುಟ್ಟುವುದೇ ಬೇಡ ಎಂಬಂಥ ರಾಜ್ಯದ ಕುವರಿ ಈಕೆ.ಹೆಣ್ಣುಭ್ರೂಣಹತ್ಯೆ ವ್ಯಾಪಕವಾಗಿ ಚಾಲ್ತಿಯಲ್ಲಿದೆ ಎಂಬುದಕ್ಕೆ ಪ್ರತೀಕವಾಗಿ  0-6 ವಯೋಮಾನದ 1000 ಗಂಡುಮಕ್ಕಳಿಗೆ ಕೇವಲ 834 ಹೆಣ್ಣುಮಕ್ಕಳು ಮಾತ್ರ (2011ರ ಜನಗಣತಿ) ಈ ರಾಜ್ಯದಲ್ಲಿ ಇದ್ದಾರೆ.  ಹಾಗೆಯೇ ಇದು,  ಹೆಣ್ಣುಮಕ್ಕಳ ನಡವಳಿಕೆಗಳನ್ನು ನಿಯಂತ್ರಿಸುವಂತಹ ಖಾಪ್ ಪಂಚಾಯಿತಿಗಳು ಪ್ರಾಬಲ್ಯ ಸಾಧಿಸಿರುವಂತಹ ರಾಜ್ಯವೂ ಹೌದು.ಇಂತಹ ಪಿತೃಪ್ರಧಾನ ಸಮಾಜದಲ್ಲಿ ಈ ಹೆಣ್ಣುಮಕ್ಕಳು ಅನುಭವಿಸುವ ಕಿರಿಕಿರಿಗಳು ಕಡಿಮೆಯದೇನಲ್ಲ. ಹೀಗಾಗಿಯೇ 23 ವರ್ಷದ ಸಾಕ್ಷಿ ಮಲಿಕ್ ಸಾಧನೆ  ಇನ್ನಷ್ಟು ಮೆರುಗು ಪಡೆದುಕೊಳ್ಳುತ್ತದೆ. ‘ಈ ಕ್ರೀಡಾಕ್ಷೇತ್ರದಲ್ಲಿ ಮುಂದುವರಿದಲ್ಲಿ ಮುಂದೆ ಆಕೆಗೆ ಮದುವೆಯಾಗುವುದಿಲ್ಲ’ ಎಂದು ಸಾಕ್ಷಿಯ ತಂದೆತಾಯಿಗೆ ಬುದ್ಧಿಹೇಳಿದವರೂ ಇದ್ದರು.ಇಂತಹ ಮನೋಧರ್ಮಗಳು, ಹೆಣ್ಣುಮಕ್ಕಳನ್ನು ಹೀನಾಯವಾಗಿ ಕಾಣುವಂತಹ ಸಾಮಾಜಿಕ ನಡಾವಳಿಗಳು ಇತ್ಯಾದಿ ಅಡೆತಡೆಗಳ ಹಾದಿಯಲ್ಲಿ ಈ ಹೆಣ್ಣುಮಗಳ ಸಾಧನೆ ಭರವಸೆಯ ಬೆಳಕು. ಅನೇಕ ಹೆಣ್ಣುಮಕ್ಕಳಿಗೆ ಹೊಸದೊಂದು ಆದರ್ಶದ ಮಾದರಿ.ಭಾರತದಲ್ಲಿ ಮಹಿಳೆಯರು ಕುಸ್ತಿಕಣದಲ್ಲಿ ಸಾಧನೆ ಮಾಡತೊಡಗಿದ್ದೇ 1990ರ ದಶಕದ ಮಧ್ಯಭಾಗದಲ್ಲಿ ಎಂಬುದನ್ನು ನೆನಪಿಸಿಕೊಳ್ಳಬೇಕು. ಆದರೆ ಹರಿಯಾಣದಲ್ಲಿ ಹುಡುಗರ ಜೊತೆ ತರಬೇತಿ ಪಡೆದುಕೊಳ್ಳುವ ಅವಕಾಶಕ್ಕಾಗಿ 2002ರವರೆಗೆ ಕಾಯಬೇಕಾಯಿತು. ಈಗ ರಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಲು ಅವಕಾಶ ಪಡೆದಿದ್ದ ದಾಖಲೆಯ ಮೂವರು ಮಹಿಳಾ ಕುಸ್ತಿಪಟುಗಳೂ ಹರಿಯಾಣದವರೇ ಎಂಬುದು ಕಾಕತಾಳೀಯ.ಕುಸ್ತಿ ವಿಭಾಗದಲ್ಲಿ ಭಾರತೀಯ ಮಹಿಳೆಯರ ಇಂತಹ ಸಾಧನೆಗೆ ಕಾರಣರಾದ ಈಶ್ವರ ಸಿಂಗ್ ದಹಿಯಾ, ಸಾಕ್ಷಿ ಮಲಿಕ್‌ಗೂ ತರಬೇತಿ ನೀಡಿದ್ದಾರೆ. 2015ರಲ್ಲಿ ಜಿಲ್ಲಾ ಕ್ರೀಡಾ ಅಧಿಕಾರಿಯಾಗಿ ನಿವೃತ್ತರಾದ ಸಂದರ್ಭದಲ್ಲಿ ‘ದಿ ಹಿಂದೂಸ್ತಾನ್ ಟೈಮ್ಸ್’ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ  ‘ಹರಿಯಾಣದ ರೋಹ್‌ಟಕ್‌ನ ಚೋಟು ರಾಂ ಸ್ಟೇಡಿಯಂನಲ್ಲಿ ಹೆಣ್ಣುಮಕ್ಕಳಿಗೆ ಹಿಂದೆ ಸ್ವಾಗತವಿರುತ್ತಿರಲಿಲ್ಲ. ಈಗ ಆ ಹೆಣ್ಣುಮಕ್ಕಳೇ ಅದರ ಹೆಮ್ಮೆಯಾಗಿದ್ದಾರೆ’ ಎಂದಿದ್ದರು.ಭಾರತದಲ್ಲಷ್ಟೇ ಅಲ್ಲ, ಒಲಿಂಪಿಕ್  ಕ್ರೀಡಾಕೂಟಗಳಲ್ಲಿ  ಮಹಿಳೆಯರು ಸಮಾನ ಅವಕಾಶಗಳನ್ನು ಪಡೆದುಕೊಳ್ಳಲು 120 ವರ್ಷಗಳ ಹೋರಾಟವೇ ನಡೆದಿದೆ ಎಂಬುದನ್ನು ಇಲ್ಲಿ ಸ್ಮರಿಸಬೇಕು. 1896ರಲ್ಲಿ ನಡೆದ  ಮೊದಲ ಆಧುನಿಕ ಒಲಿಂಪಿಕ್ ಕ್ರೀಡಾಕೂಟದಲ್ಲಿ ಮಹಿಳಾ ಅಥ್ಲೀಟ್‌ಗಳನ್ನು ಹೊರಗಿಡಲಾಯಿತು.  ಏಕೆಂದರೆ,  ಅವರ ಪಾಲ್ಗೊಳ್ಳುವಿಕೆ ಅಸಮರ್ಪಕ ಎಂದು ಅದರ ಸಂಸ್ಥಾಪಕ ಪಿಯರ್ ಡೆ ಕೂಬರ್ತಿ ಭಾವಿಸಿದ್ದರು.ಮಹಿಳಾ  ಕ್ರೀಡಾಪಟು ಎಷ್ಟೇ ಗಟ್ಟಿಯಾಗಿದ್ದರೂ  ಕೆಲವೊಂದು ಆಘಾತಗಳನ್ನು ಸಹಿಸಿಕೊಳ್ಳುವುದು  ಆಕೆಗೆ ಕಷ್ಟ ಎಂದು ಈ ಫ್ರೆಂಚ್ ಶಿಕ್ಷಣತಜ್ಞ ಹಾಗೂ ಇತಿಹಾಸಕಾರ  ಆಗ ಹೇಳಿದ್ದರು. 100ಕ್ಕೂ ಹೆಚ್ಚು ವರ್ಷಗಳ ನಂತರವೂ ಲಿಂಗ ಸಮಾನತೆ ಎಂಬುದು ಈಗಲೂ ಗುರಿಯಾಗಿಯೇ ಉಳಿದಿದೆ. ಅದು ಪೂರ್ಣ ವಾಸ್ತವವಾಗಿಲ್ಲ ಎಂಬುದು ವಿಪರ್ಯಾಸ.  2016ರ ರಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿಯೂ ಪುರುಷರ ಕ್ರೀಡಾ ಪಂದ್ಯಗಳೇ ಹೆಚ್ಚಿದ್ದವು (161). ಮಹಿಳೆಯರದು ಹಾಗೂ ಮಿಶ್ರ ಪಂದ್ಯಗಳು 145 ಇದ್ದವು.1900ರ ಪ್ಯಾರಿಸ್  ಒಲಿಂಪಿಕ್ ಕ್ರೀಡಾಕೂಟದಲ್ಲಿ  ಮೊದಲ ಬಾರಿಗೆ ಮಹಿಳಾ ಅಥ್ಲೀಟ್‌ಗಳಿಗೆ ಪ್ರವೇಶ ನೀಡಲಾಯಿತು. ಆದರೆ ಟೆನಿಸ್, ಸೇಲಿಂಗ್, ಕ್ರಾಕೆಟ್, ಈಕ್ವೆಸ್ಟ್ರಿಯನ್ ಹಾಗೂ ಗಾಲ್ಫ್ - ಈ ಐದು ವಿಭಾಗಗಳಿಗಷ್ಟೇ ಅವಕಾಶ ನೀಡಲಾಗಿತ್ತು. ‘ಓಟ, ನೆಗೆತದಂತಹ ಆಟೋಟಗಳಲ್ಲಿ ಸ್ಪರ್ಧಿಸಲು ಮಹಿಳೆಯರಿಗೆ ಶಕ್ತಿ ಇಲ್ಲ. ಇಂತಹ ಸ್ಪರ್ಧೆಗಳಿಂದ ಹೆಣ್ಣಿನ ಸೌಂದರ್ಯ ಕುಂದುತ್ತದೆ. ಜೊತೆಗೆ ಪ್ರಜನನ ಅಂಗಾಂಗಗಳಿಗೆ ಧಕ್ಕೆಯಾಗುತ್ತದೆ’ ಎಂಬಂತಹ ನಂಬಿಕೆ ಇದ್ದದ್ದು ಇದಕ್ಕೆ ಕಾರಣ.ಮೊದಲ ಒಲಿಂಪಿಕ್  ಕ್ರೀಡಾಕೂಟ ನಡೆದ ನಂತರ ಬಹುತೇಕ ಒಂದು ಶತಮಾನದಷ್ಟರ ಹೊತ್ತಿಗೆ 1992ರಲ್ಲಿ ಪುರುಷರ ಕ್ರೀಡಾ ಸ್ಪರ್ಧೆಗಳಿಗೆ ಹೋಲಿಸಿದಲ್ಲಿ ಅರ್ಧದಷ್ಟು ಸ್ಪರ್ಧೆಗಳಲ್ಲಿ ಮಹಿಳಾ  ಸ್ಪರ್ಧಿಗಳೂ ಪಾಲ್ಗೊಳ್ಳುವಂತಾಯಿತು. ಈಗ ಮುಕ್ತಾಯವಾದ 2016ರ ರಿಯೊ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅತಿ ಹೆಚ್ಚಿನ  ಮಹಿಳಾ ಸ್ಪರ್ಧಿಗಳು ಪಾಲ್ಗೊಂಡಿದ್ದರು ಎಂಬುದು ಹೆಗ್ಗಳಿಕೆ. ಒಟ್ಟು ಸ್ಪರ್ಧಿಗಳಲ್ಲಿ ಸುಮಾರು ಶೇ 45ರಷ್ಟು ಮಹಿಳೆಯರಿದ್ದರು ಎಂಬುದು ಐಓಸಿ (ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ) ಅಂಕಿ ಅಂಶ. ಜೊತೆಗೆ ಎರಡು ಪಂದ್ಯ ಮಹಿಳೆಗೆ ಸೀಮಿತವಾಗಿದ್ದವು. ಅವು ಸಿಂಕ್ರೊನೈಸ್ಡ್ ಸ್ವಿಮ್ಮಿಂಗ್ ಹಾಗೂ ರಿಥ್‌ಮಿಕ್ ಜಿಮ್ನಾಸ್ಟಿಕ್ಸ್.ಕಳೆದ ಬಾರಿ 2012ರಲ್ಲಿ ಲಂಡನ್‌ನಲ್ಲಿ ನಡೆದ ಒಲಿಂಪಿಕ್ಸ್ ಕೂಟ, ಮಹಿಳಾ ಪಾಲ್ಗೊಳ್ಳುವಿಕೆ, ಸಾಧನೆ ಹಾಗೂ ಪ್ರಾತಿನಿಧ್ಯದಲ್ಲಿ  ಹೊಸ ದಾಖಲೆಗಳನ್ನೇ ನಿರ್ಮಿಸಿತು ಎಂಬುದನ್ನು ಸ್ಮರಿಸಬೇಕು. 1992ರಲ್ಲಿ 34 ರಾಷ್ಟ್ರೀಯ ತಂಡಗಳು ಮಹಿಳೆಯರನ್ನೇ ಹೊಂದಿರಲಿಲ್ಲ. ಆದರೆ ಲಂಡನ್‌ನಲ್ಲಿ ಮೊದಲ ಬಾರಿಗೆ ಎಲ್ಲಾ ಕ್ರೀಡಾ ವಿಭಾಗಗಳಲ್ಲೂ ಮಹಿಳೆಯರು ಪಾಲ್ಗೊಂಡಿದ್ದರು. ಸ್ಪರ್ಧಿಸಿದ ಎಲ್ಲಾ 204 ದೇಶಗಳೂ ಮಹಿಳಾ ಅಥ್ಲೀಟ್‌ಗಳನ್ನು ಹೊಂದಿದ್ದವು. ಸೌದಿ ಅರೇಬಿಯಾ, ಕತಾರ್ ಹಾಗೂ ಬ್ರೂನೈದಂತಹ ದೇಶಗಳೂ ಮೊದಲ ಬಾರಿಗೆ ಮಹಿಳಾ ಪ್ರಾತಿನಿಧ್ಯ ಹೊಂದಿದ್ದವು. ಇದು ನಿಜಕ್ಕೂ ಲಿಂಗ ಸಮಾನತೆಯತ್ತ ದೊಡ್ಡ ಹೆಜ್ಜೆಯಾಗಿತ್ತು.ಲಂಡನ್ ಕ್ರೀಡೆಗಳ ಸಂದರ್ಭದಲ್ಲಿ ಮಹಿಳಾ ಹಕ್ಕುಗಳು ಹಾಗೂ ಲಿಂಗ ಸಮಾನತೆ ಬಗ್ಗೆ ವ್ಯಕ್ತವಾದ ಹೆಚ್ಚಿನ ಕಾಳಜಿ ಹಾಗೂ ಅದರ ಬಗ್ಗೆ ಬಂದ ವರದಿಗಳು ಹಾಗೂ ಐಓಸಿಯ ಬದ್ಧತೆ, 2016ರ ಕ್ರೀಡಾಕೂಟಕ್ಕೆ ಮತ್ತಷ್ಟು ಬಲ ತುಂಬಿತು. 2012ರ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ಮಹಿಳಾ ಬಾಕ್ಸಿಂಗ್‌ಗೆ ಅವಕಾಶ ದೊರೆತಿತ್ತು. ಆದರೇನು? ಅವರು ಧರಿಸುವ ಬಟ್ಟೆ ಹಾಗೂ ಹೆಣ್ಣಿನ ಬಗೆಗಿರುವ ದೃಷ್ಟಿಕೋನಗಳಾಚೆ  ಎದುರಿಸಬೇಕಿದ್ದ ಸವಾಲುಗಳನ್ನು  ಆ ಸಂದರ್ಭ ಎತ್ತಿ ತೋರಿತ್ತು.ಬಾಕ್ಸಿಂಗ್ ಪಟುಗಳಾಗಿ ಸಾಧನೆ ಮೆರೆದು ಸಾಬೀತು ಮಾಡಿದ್ದರೂ, ಅವರನ್ನು ಹೆಣ್ಣುಮಕ್ಕಳು ಎಂದು ಟಿ.ವಿ. ವೀಕ್ಷಕರು ಗುರುತಿಸಲು ಅನುಕೂಲ ಮಾಡಿಕೊಡುವುದಕ್ಕಾಗಿ ಮಹಿಳೆಯರು ಸ್ಕರ್ಟ್‌ಗಳನ್ನು ಧರಿಸಬೇಕು ಎಂಬಂಥ ಒತ್ತಾಯಗಳನ್ನು ಅವರ ಮೇಲೆ ಹೇರಲಾಗಿತ್ತು. ಇದು ವಿವಾದವಾಯಿತು. ನಂತರ ಶಾರ್ಟ್ಸ್ ಅಥವಾ ಸ್ಕರ್ಟ್ ಧರಿಸಬೇಕೆಂಬುದನ್ನು ಮಹಿಳೆಯರೇ ಆಯ್ಕೆ ಮಾಡಿಕೊಳ್ಳಲಿ ಎಂದು ಅಂತರರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್ ನಿರ್ಧರಿಸಿದಾಗ ಈ ವಿವಾದ ಅಂತ್ಯವಾಯಿತು.ಈ ಬಾರಿಯಂತೂ, ರಿಯೊದಲ್ಲಿ ಮಹಿಳಾ ಬೀಚ್ ವಾಲಿಬಾಲ್‌ನಲ್ಲಿ ಮೊದಲಬಾರಿಗೆ ಪಾಲ್ಗೊಂಡಿದ್ದ ಈಜಿಪ್ಟ್ ಮಹಿಳಾ ತಂಡ ದೇಹ ಮುಚ್ಚುವ ದಿರಿಸು ಹಾಗೂ ಹಿಜಾಬ್ ಧರಿಸಿ ಆಟವಾಡಿದ್ದಂತೂ ಹೊಸ ದಾಖಲೆ. ಬಿಕಿನಿಗೆ ಬದಲಾಗಿ ಈ ದಿರಿಸು ತೊಟ್ಟು ಆಟವಾಡಿದ ಈ ಮಹಿಳೆಯರು ಕ್ರೀಡೆಯನ್ನು ಅದರ ರೋಮಾಂಚನಕ್ಕಾಗಿ ನೋಡಬೇಕೆ ಹೊರತು ಹೆಣ್ಣಿನ ಅಂಗಾಂಗಗಳ ನೋಟಕ್ಕಲ್ಲ ಎಂಬುದನ್ನು ವಿಶ್ವಕ್ಕೆ ಮೊದಲ ಬಾರಿಗೆ ತೋರಿಸಿಕೊಟ್ಟರು.ಅಮೆರಿಕದ ಜೂಡೊ ಸ್ಪರ್ಧಿ ಕಾಯ್ಲಾ ಹ್ಯಾರಿಸನ್ ಈಗ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಕಳೆದ ಬಾರಿ ಹಾಗೂ ಈ ಬಾರಿಯ ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಪಡೆದಿರುವ ಅವರ ಸಾಧನೆ ಅನನ್ಯ. 13ನೇ ಎಳೆವಯಸ್ಸಿನಲ್ಲೇ ಆರಂಭವಾದ ತನ್ನ ಮೊದಲ ಕೋಚ್‌ನ ಲೈಂಗಿಕ ದುರ್ವರ್ತನೆಪ್ರತಿರೋಧಿಸಿದ ಆಕೆಯ ಗಟ್ಟಿತನವೂ ಅನೇಕ ಮಂದಿಗೆ ಪ್ರೇರಕ.‘ಸಂಬಂಧವನ್ನು ಗುಟ್ಟಾಗಿಡಬೇಕು ಇಲ್ಲದಿದ್ದಲ್ಲಿ ನಿನಗೆ ತೊಂದರೆಯಾಗುತ್ತದೆ’ ಎಂದು ಆತ ಆಕೆಗೆ ಹೆದರಿಸಿದ್ದ. ಖಿನ್ನತೆ, ಆತ್ಮಹತ್ಯೆ ಯೋಚನೆಗಳಿಂದ ನರಳಿದ ಆಕೆ ಕಡೆಗೆ ‘ಇನ್ನು ಸಹಿಸಲಾಗದು’ ಎನಿಸಿದಾಗ ಗೆಳತಿಗೆ ತಿಳಿಸಿದಳು. ನಂತರ ತಾಯಿಗೆ ವಿಷಯ ತಿಳಿದು ಪೊಲೀಸ್ ದೂರು ನೀಡಲಾಯಿತು. ತಪ್ಪನ್ನು ಒಪ್ಪಿಕೊಂಡ ಕೋಚ್‌ಗೆ 10 ವರ್ಷ ಜೈಲು ಶಿಕ್ಷೆ ಆಯಿತು. ಮತ್ತೆ ಹೊಸ ಪುರುಷ ಕೋಚ್‌ನಿಂದ ತರಬೇತಿ ಪಡೆದ ಕಾಯ್ಲಾ ಚಿನ್ನದ ಪದಕ ಗೆಲ್ಲುತ್ತಿದ್ದಾರೆ. ಇದರ ಪಾಠವೆಂದರೆ ‘ನಿಮ್ಮನ್ನು ನೀವು ಹಾಗೆ ಬಿಟ್ಟುಕೊಂಡರೆ ಸಂತ್ರಸ್ತೆಯಾಗೇ ಇರುತ್ತೀರಿ.’ಮಹಿಳೆಯರ ಸಬಲೀಕರಣಕ್ಕೆ ಕ್ರೀಡೆ ತುಂಬಬಹುದಾದ ಶಕ್ತಿ ನಿರ್ವಿವಾದ. ತಮ್ಮನ್ನು ತಾವು ಸಾಬೀತುಪಡಿಸಿಕೊಳ್ಳಲು ಕ್ರೀಡಾ ಚಟುವಟಿಕೆಗಳು ಮಹಿಳೆಯರಿಗೆ ಅವಕಾಶ ನೀಡುತ್ತವೆ. ಜೀವನಪೂರ್ತಿ ಒದಗಿಬರಬಹುದಾದ ಕೌಶಲ ಹಾಗೂ ಆತ್ಮ ವಿಶ್ವಾಸದ ಬಲವೂ ತರಬೇತಿಯಿಂದ ಸಿಗುತ್ತದೆ. ಆದರೆ ಮಹಿಳೆಯರ ಸಾಮರ್ಥ್ಯ ಸದ್ಬಳಕೆಯಾಗಲು ಅವಕಾಶಗಳ ಲಭ್ಯತೆಯಲ್ಲಿ ಅಸಮಾನತೆಯಿದೆ ಎಂಬುದು ಕಹಿ ವಾಸ್ತವ.ಹಾಗೆಯೇ ಮಹಿಳಾ ಕ್ರೀಡೆಗಳು ಮಾಧ್ಯಮಗಳಲ್ಲಿ ಸ್ಥಾನ ಪಡೆಯುವುದು ಶೇ 5ರಷ್ಟು ಮಾತ್ರ. ತಮಗೆ ಆದರ್ಶವಾಗುವಂತಹ ಮಾದರಿಗಳೇ ತಮಗಿಲ್ಲ ಎಂದು ಶೇ 43ರಷ್ಟು ಹದಿಹರೆಯದ ಹುಡುಗಿಯರು ಭಾವಿಸುತ್ತಾರೆ ಎಂದು ಬ್ರಿಟಿಷ್ ಅಧ್ಯಯನವೊಂದು ಹೇಳಿದೆ. ಮಾಧ್ಯಮಗಳಲ್ಲಿ ಹೆಣ್ಣುಮಕ್ಕಳ ಸಾಧನೆಗಿಂತ ಅಂದಚೆಂದಗಳು ಗಮನ ಸೆಳೆದುಕೊಳ್ಳುವಂತಹ ವರದಿಗಾರಿಕೆಯೂ ಮುಂದುವರಿದಿದೆ. ಈ ಬಾರಿಯೂ ಒಲಿಂಪಿಕ್ ಕ್ರೀಡಾಕೂಟಗಳವರದಿಗಾರಿಕೆಯಲ್ಲಿ ಮಹಿಳೆಯರ ಸಾಧನೆ ಕುರಿತು ಬಳಸಲಾದ ಲಿಂಗತಾರತಮ್ಯದ ಭಾಷೆ ಬಗ್ಗೆ ವಿವಾದಗಳು ಸೃಷ್ಟಿಯಾದವು. ತಾರತಮ್ಯದ ಆಚರಣೆಗಳಿಗೆ ಅಂತ್ಯ ಹಾಡಲು ತುರ್ತು ಕ್ರಮಗಳೂ ಅವಶ್ಯ. ಇದು ಬರೀ ಮಹಿಳೆಯ ವಿಚಾರವಲ್ಲ. ಮೂಲಭೂತ ಮಾನವ ಮೌಲ್ಯಗಳು,  ಸಾರ್ವತ್ರಿಕ ಚೈತನ್ಯ ಹಾಗೂ ಒಲಿಂಪಿಕ್ಸ್ ಆದರ್ಶಗಳಿಗೆ ಸಂಬಂಧಿಸಿದ ವಿಚಾರ ಎಂಬುದನ್ನು ಮನಗಾಣುವುದು ಅವಶ್ಯ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry