ಹೆಣ್ಣು ಜನ್ಮದ ಅಪೇಕ್ಷೆ

7

ಹೆಣ್ಣು ಜನ್ಮದ ಅಪೇಕ್ಷೆ

ಗುರುರಾಜ ಕರ್ಜಗಿ
Published:
Updated:

ಇತ್ತೀಚೆಗೆ ಲಿಂಗ ಪರಿವರ್ತನೆಯ ಸುದ್ದಿಗಳನ್ನು ಕೇಳಿದಾಗ, ಅದೊಂದು ವಿಜ್ಞಾನದ ವಿಸ್ಮಯವೆಂದಂತೆ ಭಾವಿಸಿದಾಗ ಭಂಗಾಸ್ಪನ ಕಥೆ ನೆನಪಾಯಿತು.ಭಂಗಾಸ್ಪನ ಒಬ್ಬ ಮಹಾರಾಜ. ಅವನಿಗೆ ಮಕ್ಕಳಿರಲಿಲ್ಲ. ತನ್ನ ರಾಜಗುರುಗಳ ಅಪ್ಪಣೆಯ ಮೇರೆಗೆ. ಅಗ್ನಿಷ್ಟುತ  ಎಂಬ ಯಾಗವನ್ನು ಮಾಡಿದ. ಇದು ಅಗ್ನಿಯ ಮೆಚ್ಚುಗೆಗಾಗಿ ಮಾಡಿದ ಯಾಗ. ಇದರಲ್ಲಿ ಇಂದ್ರನಿಗೆ ಯಾವ ಸ್ಥಾನವೂ ಇಲ್ಲ.ಇದರಿಂದ ಇಂದ್ರನಿಗೆ ಬಲು ಕೋಪ ಬಂತು. ಕೆಲವರಿಗೆ ಉನ್ನತ ಸ್ಥಾನ ದಕ್ಕಿದರೂ ನೀಚ ಬುದ್ಧಿ ಹೋಗುವುದಿಲ್ಲ. ಈ ಯಾಗದ ನಂತರ ಅಗ್ನಿಯ ಕೃಪೆಯಿಂದ ಭಂಗಾಸ್ಪನನಿಗೆ ನೂರು ಮಕ್ಕಳಾದದ್ದು ಕಂಡು ಇನ್ನೂ ಹೊಟ್ಟೆ ಉರಿದು ಹೋಯಿತು ಇಂದ್ರನಿಗೆ. ದೊಡ್ಡ ಪರಿವಾರದೊಂದಿಗೆ ಭಂಗಾಸ್ಪನ ಸಂತೋಷವಾಗಿದ್ದ.ಒಂದು ದಿನ ಕಾಡಿನಲ್ಲಿ ಬೇಟೆಯಾಡಲು ಕುದುರೆ ಏರಿ ಹೊರಟ ರಾಜ ಭಂಗಾಸ್ಪನ. ದಾರಿಯಲ್ಲಿ ಕುದುರೆಗೆ ಕೊಳದಲ್ಲಿ ನೀರು ಕುಡಿಸಿ ಕಟ್ಟಿಹಾಕಿ ತಾನೂ ಸ್ನಾನ ಮಾಡಲು ನೀರಿಗಿಳಿದ. ಆ ಸಮಯವನ್ನೇ ಕಾದಿದ್ದು ಇಂದ್ರ ಅವನ ಮೇಲೆ ಮಾಯೆ ಬೀಸಿಬಿಟ್ಟ. ನೀರಿನಲ್ಲಿ ಮುಳುಗಿದ ಭಂಗಾಸ್ಪನ ಮೇಲೆ ಏಳುವುದರಲ್ಲಿ ಪೂರ್ಣ ಹೆಣ್ಣಾಗಿಬಿಟ್ಟಿದ್ದ.ಅವನ ರೂಪ ಮಾತ್ರವಲ್ಲ, ಸ್ವಭಾವವೂ ಬದಲಾಗಿಬಿಟ್ಟಿತ್ತು. ತನ್ನ ಹೆಂಡತಿ ಮಕ್ಕಳನ್ನು ಕಾಡಿಗೆ ಕರೆಸಿಕೊಂಡು, ತನ್ನ ಪರಿಸ್ಥಿತಿಯನ್ನು ಹೇಳಿಕೊಂಡ. ತನಗೆ ಈ ಸ್ಥಿತಿ ಯಾಕೆ ಬಂದಿತೆಂಬುದನ್ನು ಕಂಡು ಹಿಡಿದು ಪರಿಹಾರ ಪಡೆದು ಬರುವವರೆಗೆ ಅವರೆಲ್ಲ ಚೆನ್ನಾಗಿ ರಾಜ್ಯ ನೋಡಿಕೊಂಡಿರಬೇಕೆಂದು ಹೇಳಿ ಕಳುಹಿಸಿದ.ಕಥೆಗೆ ಮತ್ತೊಂದು ತಿರುವು. ಹೆಣ್ಣಾದ ಭಂಗಾಸ್ಪನ ಕಾಡಿನ ಅಲೆದಾಡುತ್ತ ಒಬ್ಬ ತಪಸ್ವಿಯನ್ನು ಕಂಡ. ಅವನಿಗೆ ಒಲಿದು, ಅವನ ಆಶ್ರಮದಲ್ಲೇ ಇದ್ದು ಮತ್ತೆ ನೂರು ಮಕ್ಕಳನ್ನು ಪಡೆದ.ನಂತರ ಅವರನ್ನೆಲ್ಲ ತನ್ನ ರಾಜ್ಯಕ್ಕೆ ಕರೆದುಕೊಂಡು ಹೋಗಿ ತಾನು ತಂದೆಯಾಗಿ ಪಡೆದ ನೂರು ಮಕ್ಕಳು ಮತ್ತು ತಾಯಿಯಾಗಿ ಹಡೆದ ನೂರು ಮಕ್ಕಳು ಜೊತೆಯಾಗಿ ಸಂತೋಷವಾಗಿ ಇರಲೆಂದು ವ್ಯವಸ್ಥೆ ಮಾಡಿದ.ಯಾಗದಿಂದ ಭಂಗಾಸ್ಪನ ನೂರು ಮಕ್ಕಳನ್ನು ಪಡೆದಾಗಲೇ ಹೊಟ್ಟೆ ಉರಿಸಿಕೊಂಡಿದ್ದ ಇಂದ್ರನಿಗೆ ತನ್ನ ಶಾಪ ರಾಜನಿಗೆ ವರವೇ ಆಗಿ ಮತ್ತೆ ನೂರು ಮಕ್ಕಳು ಹುಟ್ಟಿದ್ದನ್ನು ನೋಡಿ ಇನ್ನಷ್ಟು ಸಂಕಟವಾಯಿತು.ವೇಷ ಮರೆಸಿಕೊಂಡು ರಾಜನ ಅರಮನೆಗೆ ಹೋಗಿ ಈ ಮಕ್ಕಳಲ್ಲಿ ಅಂತಃಕಲಹ ನಡೆಯುವಂತೆ ಮಾಡಿದ. ಅವರು ತಮ್ಮ ತಮ್ಮಲ್ಲೇ ಹೊಡೆದಾಡಿ ಸತ್ತು ಹೋದರು. ತುಂಬ ದುಃಖದಲ್ಲಿದ್ದ ಹೆಣ್ಣು ಭಂಗಾಸ್ಪನ ಬಳಿಗೆ ಇಂದ್ರ ಹೋಗಿ ತನಗೆ ಮರ್ಯಾದೆ ಕೊಡದೇ ಮಾಡಿದ ಯಾಗಕ್ಕೆ ಇದು ಶಿಕ್ಷೆ ಎಂದು ಹೇಳಿದ.ಭಂಗಾಸ್ಪನ ತನಗೆ ಅರಿಯದೇ ಆದ ತಪ್ಪಿಗೆ ಇಂದ್ರನ ಕಾಲಿಗೆ ಬಿದ್ದು ಕ್ಷಮೆ ಕೇಳಿ ಕೃಪೆದೋರಬೇಕು ಎಂದು ಕೇಳಿದ. ಆಗ ಇಂದ್ರ ಪ್ರಸನ್ನನಾಗಿ,  `ನೀನು ಗಂಡಾಗಿ ಪಡೆದ ಪುತ್ರರು ಬದುಕಬೇಕೋ ಇಲ್ಲ ಹೆಣ್ಣಾಗಿ ಹಡೆದ ಪುತ್ರರು ಬದುಕಬೇಕೋ?~ ಎಂದು ಕೇಳಿದಾಗ  ತಾನು ಹೆಣ್ಣಾಗಿ ಹಡೆದ ಮಕ್ಕಳು ಮತ್ತೆ ಬದುಕಲಿ.ಯಾಕೆಂದರೆ ತಾಯಿಗೆ ಮಕ್ಕಳ ಬಗ್ಗೆ ಇರುವಷ್ಟು ಪ್ರೀತಿ ತಂದೆಗೆ ಇರುವುದಿಲ್ಲ ಎಂದು ಹೇಳಿ ಅವುಗಳನ್ನು ಬದುಕಿಸಿಕೊಂಡ. ನಂತರ ಉತ್ತರದಿಂದ ತೃಪ್ತನಾದ ಇಂದ್ರ ಉಳಿದ ನೂರು ಜನ ಮಕ್ಕಳನ್ನೂ ಬದುಕಿಸಿದನಂತೆ.ಕೊನೆಗೆ  ನೀನು ಹೆಣ್ಣು ರೂಪದಲ್ಲೇ ಇರಲು ಬಯಸುತ್ತೀಯೋ ಇಲ್ಲ ಗಂಡುರೂಪವನ್ನು ಪಡೆಯಲು ಬಯಸುತ್ತೀಯೋ ಎಂದು ಇಂದ್ರ ಕೇಳಿದಾಗ ಎರಡೂ ರೂಪಗಳನ್ನು ಅನುಭವಿಸಿದ ಭಂಗಾಸ್ಪನ ಹೇಳಿದ ಮಾತು ಇವು  ಸ್ತ್ರಿಯಾ ಪುರುಷ ಸಂಯೋಗೇ ಪ್ರೀತಿರಭ್ಯಧಿಕಾ ಸದಾ

 ಏತಸ್ಮಾತ್ ಕಾರಣಾತ್ ಶಕ್ರ ಸ್ತ್ರಿತ್ವಮೇವ ವೃಣೋಮ್ಯಹಂ

ಪುರುಷ, ಸ್ತ್ರೀಯರ ಮಿಲನವಾದಾಗ ಅತ್ಯಂತ ಹೆಚ್ಚು ಸಂತೋಷವನ್ನು ಅನುಭವಿಸುವವಳು ಸ್ತ್ರೀ. ಆದ್ದರಿಂದ ನನಗೆ ಅದೇ ದೇಹವನ್ನು ಕೊಡು ಎಂದ ಭಂಗಾಸ್ಪನ ಸ್ತ್ರೀಯಾಗಿಯೇ ಉಳಿದ.ಹೆಣ್ಣು ಜನ್ಮ ವ್ಯರ್ಥ, ಭಗವಂತಾ ಹೆಣ್ಣಿನ ಜನ್ಮ ಬೇಡ ಎಂದು ಅಳುವವರಿಗೆ ಭಂಗಾಸ್ಪನನ ಅಪೇಕ್ಷೆ ಸಾಂತ್ವನ ನೀಡುತ್ತದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry