ಬುಧವಾರ, ನವೆಂಬರ್ 13, 2019
23 °C

ಹೆದರಿಕೆಯ ಸಾವು

ಗುರುರಾಜ ಕರ್ಜಗಿ
Published:
Updated:

ಇದು ನಾನು ಹಿಂದೆ ಯಾವಾಗಲೋ ಓದಿದ ದಕ್ಷಿಣ ಆಫ್ರಿಕೆಯ ಕಥೆ. ಕಥೆಯ ಪೂರ್ತಿ ಸ್ವರೂಪ ಮರೆತು ಹೋದರೂ ಅದರ ಮುಖ್ಯ ಆಶಯ ತುಂಬ ಸ್ಪಷ್ಟವಾಗಿ ಮನದಲ್ಲಿ ನಿಂತಿದೆ.ಇದು ನಡೆದದ್ದು ದಕ್ಷಿಣ ಆಫ್ರಿಕೆಯ ಕಿಂಬರ್ಲೆ ಪ್ರದೇಶದಲ್ಲಿ. ಕಿಂಬರ್ಲೆಯ ವಜ್ರದ ಗಣಿಗಳು ಜಗತ್‌ಪ್ರಸಿದ್ಧವಾದವುಗಳು. ಅಲ್ಲೊಬ್ಬ ಹುಡುಗ ಕರ್ಟಿನಿ ಮೋಸೆಸ್ ಎನ್ನುವವ ಕೂಲಿಯಾಗಿ ಕೆಲಸಕ್ಕೆ ಸೇರಿದ. ಹಗಲು ರಾತ್ರಿಯ ದುಡಿತ. ಆತನಿಗೆ ದೊಡ್ಡ ಸಾಧನೆಯ ಕನಸು. ದುಡಿದು ದುಡಿದು ದೇಹ ಗಟ್ಟಿಯಾಯಿತು, ಹಣವೂ ಕೂಡಿತು. ಅವನೇ ಒಂದು ಸಣ್ಣ ಗಣಿಯನ್ನು ಗುತ್ತಿಗೆಗೆ ತೆಗೆದುಕೊಂಡ. ಅವನ ದೈವ ಚೆನ್ನಾಗಿತ್ತು. ಅಲ್ಲಿ ಅವನಿಗೆ ವಜ್ರಗಳ ರಾಶಿಯೇ ದೊರಕಿತು. ಒಂದೇ ಸಲ ಸಂಪತ್ತು ನುಗ್ಗಿಕೊಂಡು ಬಂದಿತು.ಒಂದು ಸಲ ಸಂಪತ್ತು ಬಂದಿತೋ ಅವನ ದೇಹಶ್ರಮ ಕಡಿಮೆಯಾಯಿತು, ಆರಾಮ ಜೀವನ ಒಗ್ಗಿಹೋಯಿತು. ಅದರಿಂದಾಗಿ ದೇಹದ ಬಿಗಿ ಸಡಿಲಾಯಿತು, ವಿಪರೀತ ಬೊಜ್ಜು ಶೇಖರವಾಯಿತು. ಒಮ್ಮೆ ಆತ ಗಣಿಗೆ ಹೋದ. ಲಿಫ್ಟ್ ನಡೆಸುವವನಿಗೆ ಹೇಳಿದ,  `ನನ್ನನ್ನು ಹದಿನಾಲ್ಕನೇ ನೆಲಮಾಳಿಗೆಗೆ ಕರೆದುಕೊಂಡು ಹೋಗು'. ಲಿಫ್ಟ್ ಚಾಲಕ ಹೇಳಿದ, `ಅಲ್ಲಿಗೆ ಬೇಡ ಸರ್, ಅಲ್ಲಿ ಇನ್ನೂ ಸರಿಯಾಗಿ ಕಬ್ಬಿಣದ ಬಂಧಗಳನ್ನು ಬಿಗಿದಿಲ್ಲ. ಅದಿರು ಶೇಖರಣೆಗೆ ಸಿದ್ಧವಾಗಿಲ್ಲ'. ಮೋಸೆಸ್‌ನಿಗೆ ಕೋಪ ಬಂತು,  `ನಾನೇನಪ್ಪ ಈ ಕಂಪನಿ ಯಜಮಾನ. ಎಲ್ಲಿಗೆ ಹೋಗಬೇಕೆನ್ನುವುದನ್ನು ನಾನು ತೀರ್ಮಾನ ಮಾಡುತ್ತೇನೆ. ನೀನು ಸುಮ್ಮನೇ ಕರೆದು ನಡೆ'  ಎಂದ.ಆತ ಮಾತನಾಡದೇ ಈತನನ್ನು ಹದಿನಾಲ್ಕನೇ ನೆಲಮಾಳಿಗೆಗೆ ಕರೆದುಕೊಂಡು ಹೋದ. ಮೋಸೆಸ್ ಲಿಫ್ಟನ್ನು ಮೇಲೆ ಕಳುಹಿಸಿಬಿಟ್ಟ. ಗಣಿ ಮಾರ್ಗದಲ್ಲಿ ನಡೆಯುತ್ತ ಹೊರಟ. ಅಲ್ಲಿ ಕೆಲವು ಕೆಲಸಗಾರರು ಸುತ್ತಲಿನ ಮಣ್ಣಿಗೆ ಬಂಧಗಳನ್ನು ಬಿಗಿಯುತ್ತಿದ್ದರು, ನೀರು ಜಿನುಗುತ್ತಿತ್ತು. ಹಾಗೆಯೇ ಆತ ಮುಂದುವರೆದ. ಆಗ ಥಟ್ಟನೇ ನೆಲನಡುಗಿದಂತಾಯಿತು, ಸುತ್ತಲಿನ ಮಣ್ಣು ಕುಸಿಯತೊಡಗಿತು. ಕೆಲಸಗಾರರು ದಿಕ್ಕಾಪಾಲಾಗಿ ಲಿಫ್ಟಿನೆಡಗೆ ಓಡಲಾರಂಭಿಸಿದರು. ಈತ ಸ್ವಲ್ಪ ಒಳಗೆ ಹೋಗಿದ್ದನಲ್ಲ, ಕಲ್ಲು ಮಣ್ಣು ಇವನ ಮುಂದೆಯೇ ಕುಸಿದು ದಾರಿ ಬಂದಾಗಿ ಹೋಯಿತು. ಮೋಸೆಸ್ ಜೀವದ ಆಸೆ ತೊರೆದ. ತಾನು ಭೂಮಿಯಲ್ಲಿ ಸುಮಾರು ಐದು ನೂರು ಅಡಿ ಆಳದಲ್ಲಿದ್ದೇನೆ, ಯಾರಾದರೂ ಬಂದು ಪಾರು ಮಾಡುವುದು ಅಸಾಧ್ಯ ಎಂಬುದು ಅರಿವಾಯಿತು. ಸರ‌್ರನೇ ತಲೆಯ ಮೇಲಿನ ಕಲ್ಲು ಸಡಲಿತು. ಪುಣ್ಯಕ್ಕೆ ಇವನ ತಲೆಯ ಮೇಲೆ ಕಟ್ಟಿದ್ದ ಮರದ ಹಲಗೆ ಇವನ ಸಮಾಧಿಯನ್ನು ತಡೆಯಿತು. ಹತ್ತು ಕ್ಷಣ ಅವನಿಗೆ ಅವು ಜೀವನದ ಕೊನೆಯ ಕ್ಷಣಗಳು ಎನ್ನಿಸಿತು. ಭಯದಿಂದ ತತ್ತರಿಸಿ ಹೋದ. ಅರ್ಧ ಗಂಟೆಯ ಮೇಲೆ ಜನರ ಓಡಾಟದ ಸದ್ದು ಕೇಳಿಸಿತು. ಇವನ ಕಂಪನಿಯ ಕೆಲಸಗಾರರು ಬಂದು ನಿಧಾನವಾಗಿ ಕಲ್ಲು ಮಣ್ಣುಗಳನ್ನು ಸರಿಸಿ ಈತನನ್ನು ಪಾರು ಮಾಡಿ ಹೊರಗೆ ತಂದರು.ಮನೆಗೆ ಬಂದು ರಾತ್ರಿ ಮಲಗಿದಾಗ ಮತ್ತೆ ಕಲ್ಲುಗಳು ಉರುಳಿದಂತೆ, ಮಣ್ಣು ಸುರಿದು ಸಮಾಧಿಯಾದಂತೆ ಭಾಸವಾಯಿತು. ಎದ್ದು ಕುಳಿತು ಬೆವರಿದ. ಪ್ರತಿ ದಿನ ಇದೇ ಪುನರಾವರ್ತನೆಯಾಗಿ ಸಾವಿನ ಭಯ ಪ್ರತಿಕ್ಷಣ ಕಾಡಿ ಇವನನ್ನು ದಿಕ್ಕುಗೆಡಿಸಿತು. ಆತನೊಂದು ತೀರ್ಮಾನ ಮಾಡಿದ. ಮರುದಿನ ಮತ್ತೆ ಗಣಿಗೆ ಹೋಗಿ ಮತ್ತದೇ ಹದಿನಾಲ್ಕನೇ ನೆಲಮಾಳಿಗೆಗೆ ಹೋದ. ಅಲ್ಲಿದವರನ್ನೆಲ್ಲ ಹೊರಗೆ ಕಳಿಸಿ ಒಬ್ಬನೇ ಉಳಿದ. ಗಾಢ ಕತ್ತಲು, ನೀರು ಜಿನುಗುತ್ತಿದೆ, ಯಾರೊಬ್ಬರೂ ಗಣಿಯಲ್ಲಿಲ. ಸರಕ್ಕನೇ ಎಲ್ಲೋ ಮಣ್ಣು ಸರಿದಂತಾಯಿತು. ಭಯ ನುಗ್ಗಿ ಬಂತು. ಜೋರಾಗಿ ಕೂಗಿದ,  `ಸಾಯುವುದಿದ್ದರೆ ಹೀಗೆಯೇ ಸಾಯುತ್ತೇನೆ. ಬಾ ಸಾವೇ, ಬೇಗ ಬಾ' ಎಂದು ಮತ್ತೆ ಮತ್ತೆ ಕೂಗಿದ. ಏನೂ ಆಗಲಿಲ್ಲ. ಫೋನ್ ಮಾಡಿ ಲಿಫ್ಟ್ ತರಿಸಿಕೊಂಡು ಮೇಲಕ್ಕೆ ಬಂದ. ಕಾತರದಿಂದ ಕಾಯುತ್ತಿರುವ ಅಧಿಕಾರಿಗಳಿಗೆ ಹೇಳಿದ.  `ಕೆಳಗೆ ಒಂದು ಸಾವಿನ ಭೂತವಿದೆ. ಅದನ್ನು ಕೊಂದು ಬಂದೆ. ಸಾವಿನ ಹೆದರಿಕೆಯನ್ನೇ ಕೊಂದೆ'. ಅಂದಿನಿಂದ ನಿರಾಳವಾಗಿ ಬದುಕಿದ.ನಮಗೂ ನೂರೆಂಟು ಭಯಗಳು. ಅದರಲ್ಲಿ ಬಹುತೇಕವಾದವು ಕಾಲ್ಪನಿಕವಾದವುಗಳು. ಅವುಗಳಿಂದ ದೂರ ಓಡಲು ಪ್ರಯತ್ನಿಸಿದಷ್ಟೂ ನಮ್ಮನ್ನು ಬೆಂಬತ್ತಿ ಹೆದರಿಸುತ್ತವೆ. ಎದೆ ನೀಡಿ ಅವುಗಳನ್ನು ಎದುರಿಸಿದರೆ ಓಡಿ ಹೋಗುತ್ತವೆ. ಭಯಕ್ಕೆ ಹೆದರದೇ ಭಯವನ್ನೇ ಹೆದರಿಸಬೇಕು.

ಪ್ರತಿಕ್ರಿಯಿಸಿ (+)