ಭಾನುವಾರ, ಮಾರ್ಚ್ 7, 2021
32 °C

ಹೊಗಳುಭಟರಾದ ನಟರು, ಉದ್ಯಮಿಗಳು

ರಾಮಚಂದ್ರ ಗುಹಾ Updated:

ಅಕ್ಷರ ಗಾತ್ರ : | |

ಹೊಗಳುಭಟರಾದ ನಟರು, ಉದ್ಯಮಿಗಳು

ಐನೂರು ಮತ್ತು ಸಾವಿರ ರೂಪಾಯಿ ಮುಖಬೆಲೆಯ ನೋಟುಗಳನ್ನು ಚಲಾವಣೆಯಿಂದ ಹಿಂದಕ್ಕೆ ಪಡೆಯಲಾಗುವುದು ಎಂದು ಕಳೆದ ನವೆಂಬರ್‍ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್ ಘೋಷಣೆ ಮಾಡಿದಾಗ ತಕ್ಷಣವೇ ಕೆಲವು ಅರ್ಥಶಾಸ್ತ್ರಜ್ಞರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದರು. ಅದು ಸಹಜ ಕೂಡ. ಆಶ್ಚರ್ಯ ಎಂದರೆ, ಭಾರತ ಕ್ರಿಕೆಟ್ ತಂಡದ ನಾಯಕ ಕೂಡ ಸಾರ್ವಜನಿಕವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ‘ಭಾರತದ ರಾಜಕೀಯದ ಇತಿಹಾಸದಲ್ಲಿ ಈತನಕ ಇಷ್ಟು ಶ್ರೇಷ್ಠವಾದ ನಿರ್ಧಾರವನ್ನು ನಾನು ನೋಡಿಲ್ಲ. ನನಗೆ ಇದು ಬಹಳ ಮೆಚ್ಚುಗೆ ಆಗಿದೆ’ ಎಂದು ನೋಟು ರದ್ದತಿಯ ವಾರದ ಬಳಿಕ ವಿರಾಟ್ ಕೊಹ್ಲಿ ಹೇಳಿದರು.

ರಾಜಕಾರಣಿಗಳು ಮತ್ತು ಕ್ರಿಕೆಟಿಗರು ಆಪ್ತರಾಗಿರುವುದು ಹೊಸದೇನೂ ಅಲ್ಲ. ಕೆಲವು ದಶಕಗಳಿಂದ ಕಾಂಗ್ರೆಸ್ ಮತ್ತು ಬಿಜೆಪಿಯ ಮುಖಂಡರು ಕ್ರಿಕೆಟ್ ಆಡಳಿತದಲ್ಲಿ (ಜತೆಗೆ ದುರಾಡಳಿತದಲ್ಲಿ ಕೂಡ) ಸಕ್ರಿಯರಾಗಿದ್ದಾರೆ. ಗೆದ್ದ ತಂಡದ ಜತೆ ಫೋಟೊಗೆ ನಿಲ್ಲಲು ಎಲ್ಲ ಪಕ್ಷಗಳ ರಾಜಕಾರಣಿಗಳು ಬಯಸುತ್ತಾರೆ. ಹೀಗಿದ್ದರೂ ಕೊಹ್ಲಿಯ ಹೇಳಿಕೆ ಅಭೂತಪೂರ್ವವೇ ಆಗಿದೆ. ಈ ಹಿಂದೆ ಯಾವ ಕ್ರಿಕೆಟಿಗನೂ ಪ್ರಧಾನಿಯ ನಿರ್ಧಾರವನ್ನು ಇಷ್ಟೊಂದು ದೃಢವಾಗಿ ಸಮರ್ಥಿಸಿಕೊಂಡದ್ದಿಲ್ಲ (ನೋಟು ರದ್ದತಿಯನ್ನು ಸಮರ್ಥಿಸಿಕೊಳ್ಳಲು ನಮ್ಮ ಕ್ರಿಕೆಟ್ ತಂಡದ ನಾಯಕನಿಗೆ ರಾಜಕಾರಣ, ಇತಿಹಾಸ ಅಥವಾ ಅರ್ಥಶಾಸ್ತ್ರದ ಬಗ್ಗೆ ಇರುವ ಜ್ಞಾನ ಏನು ಎಂಬುದು ಇನ್ನೊಂದು ಚರ್ಚೆಯ ವಿಷಯ).

ಭಾರತದಲ್ಲಿ ಅತ್ಯಂತ ಹೆಚ್ಚು ಮೆಚ್ಚುಗೆ ಪಡೆಯುವವರು ಕ್ರಿಕೆಟಿಗರು ಮತ್ತು ಸಿನಿಮಾ ತಾರೆಯರು. ಸಿನಿಮಾ ತಾರೆಯರು ರಾಜಕಾರಣಿಗಳನ್ನು ಬೆಂಬಲಿಸುವುದು ಸಾಮಾನ್ಯ. ಆದರೆ ಕ್ರಿಕೆಟಿಗರು ಪ್ರಭಾವಿ ರಾಜಕಾರಣಿಯ ಪಕ್ಷ ವಹಿಸುವುದು ವಿರಳ. ನಟನ ಪ್ರಸಿದ್ಧಿ ಹೆಚ್ಚಿದಂತೆ ಆತ ಹೆಚ್ಚು ಅವಕಾಶವಾದಿಯೂ ಆಗುತ್ತಾನೆ. ಅಮಿತಾಭ್ ಬಚ್ಚನ್ ಅವರನ್ನೇ ತೆಗೆದುಕೊಳ್ಳಿ- ಭಾರತದ ಸಿನಿಮಾ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ನಟ ಅವರು ಎಂಬುದು ಪ್ರಶ್ನಾತೀತ. 1980ರ ದಶಕದಲ್ಲಿ ಅವರು ಕಾಂಗ್ರೆಸ್ ಪಕ್ಷಕ್ಕೆ ನಿಕಟವಾಗಿದ್ದರು. ಆಗ ದೀರ್ಘ ಕಾಲ ಕಾಂಗ್ರೆಸ್ ಅಧಿಕಾರದಲ್ಲಿತ್ತು. ಅಮಿತಾಭ್ ಅವರು ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರ ಹತ್ತಿರದ ಗೆಳೆಯರಾಗಿದ್ದರು ಎಂಬುದು ಜನಜನಿತವಾಗಿತ್ತು. ರಾಜೀವ್ ಅವರ ಒತ್ತಾಯದಿಂದ ಅಮಿತಾಭ್ ಅವರು ಕಾಂಗ್ರೆಸ್ ಟಿಕೆಟ್‍ನಲ್ಲಿ ಲೋಕಸಭೆಗೆ ಸ್ಪರ್ಧಿಸಿ ಗೆದ್ದಿದ್ದರು.

1990ರ ದಶಕದಲ್ಲಿ ಬಚ್ಚನ್ ಮತ್ತು ನೆಹರೂ-ಗಾಂಧಿ ಕುಟುಂಬಗಳು ದೂರವಾದವು. ಅದೇ ಹೊತ್ತಿಗೆ, ಭಾರತದ ರಾಜಕಾರಣದಲ್ಲಿ ಹೊಂದಿದ್ದ ಬಿಗಿ ಹಿಡಿತವನ್ನು ಕಾಂಗ್ರೆಸ್ ಕಳೆದುಕೊಂಡಿತು. ಪ್ರಾದೇಶಿಕ ಪಕ್ಷಗಳು ಮಹತ್ವ ಪಡೆದುಕೊಂಡವು. ಅವುಗಳೇ ಜತೆಯಾಗಿ 1996ರಲ್ಲಿ ಕೇಂದ್ರದಲ್ಲಿ ಸಂಯುಕ್ತ ರಂಗ ಸರ್ಕಾರ ರಚಿಸಿದವು. ಅವುಗಳಲ್ಲಿ ಒಂದು ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸಮಾಜವಾದಿ ಪಕ್ಷ (ಎಸ್‍ಪಿ).

ಬಚ್ಚನ್-ನೆಹರೂ ಗಾಂಧಿ ಕುಟುಂಬದ ಸಂಬಂಧ ಹಳಸುತ್ತಿದ್ದಂತೆಯೇ ಮುಲಾಯಂ ಮತ್ತು ಅವರ ಸಹವರ್ತಿಗಳ ಜತೆಗೆ ಬಚ್ಚನ್ ಕುಟುಂಬದ ಸಂಬಂಧ ಹೆಚ್ಚಿತು. ಲೋಕಸಭೆಗೆ ಸ್ಪರ್ಧಿಸಲು ಅಮಿತಾಭ್ ಒಮ್ಮೆ ಕಾಂಗ್ರೆಸ್ ಟಿಕೆಟ್ ಪಡೆದದ್ದನ್ನು ನೆನಪಿಸುವಂತೆ ಜಯಾ ಬಚ್ಚನ್ ಅವರಿಗೆ ಎಸ್‌ಪಿ ರಾಜ್ಯಸಭೆ ಟಿಕೆಟ್ ಕೊಟ್ಟಿತು.

ಅದಷ್ಟಕ್ಕೇ ಮುಗಿಯಲಿಲ್ಲ. ಇತ್ತೀಚಿನ ವರ್ಷಗಳಲ್ಲಿ ಅಮಿತಾಭ್ ಅವರು ಮೋದಿ ಮತ್ತು ಬಿಜೆಪಿಗೆ ಹತ್ತಿರವಾಗಿದ್ದಾರೆ. ತಾವು ನಟಿಸಿದ್ದ ಸಿನಿಮಾವೊಂದರ ಪ್ರಚಾರಕ್ಕಾಗಿ 2010ರ ಜನವರಿಯಲ್ಲಿ ಗುಜರಾತಿಗೆ ಹೋಗಿದ್ದ ಅಮಿತಾಭ್, ಆ ರಾಜ್ಯದ ಪ್ರಚಾರ ರಾಯಭಾರಿ ಆಗುವುದಾಗಿ ಹೇಳಿದ್ದರು. 2002ರ ಗಾಯಗಳನ್ನು ಮರೆತು ಮುಂದಕ್ಕೆ ಹೋಗಲು ಮತ್ತು ರಾಷ್ಟ್ರೀಯ ಮಟ್ಟದಲ್ಲಿ ತಮ್ಮದೇ ಆದ ಸ್ಥಾನ ಕಂಡುಕೊಳ್ಳಲು ಉತ್ಸುಕರಾಗಿದ್ದ ಅಲ್ಲಿನ ಮುಖ್ಯಮಂತ್ರಿ ಇದನ್ನು ಕೃತಜ್ಞತಾಪೂರ್ವವಾಗಿಯೇ ಒಪ್ಪಿಕೊಂಡರು.

ಮೋದಿ ಅವರು ಪ್ರಧಾನಿಯಾಗಿ ಎರಡು ವರ್ಷ ಪೂರೈಸಿದ ಸರ್ಕಾರಿ ಕಾರ್ಯಕ್ರಮವನ್ನು ಅಮಿತಾಭ್ ನಿರೂಪಿಸಿದರು. ಆ ಬಳಿಕ, ಮೋದಿ ಅವರ ಆರ್ಥಿಕ ನೀತಿಗೆ ಪ್ರಚಾರ ನೀಡುವುದರಲ್ಲಿ ಅವರು ಸಕ್ರಿಯರಾಗಿದ್ದಾರೆ.

ಒಂದು ಕಾಲದಲ್ಲಿ ಕಾಂಗ್ರೆಸ್‍ಗೆ, ಬಳಿಕ ಸಮಾಜವಾದಿ ಪಕ್ಷಕ್ಕೆ ಹತ್ತಿರವಾಗಿದ್ದ ಈ ನಟ, ಈಗ ಮೂರನೇ ಪಕ್ಷಕ್ಕೂ ಅಷ್ಟೇ ನಿಕಟವಾಗಿದ್ದಾರೆ. ಈ ವರ್ಷದ ಆರಂಭದಲ್ಲಿ ಮುಂಬೈಯಲ್ಲಿ ಉಂಟಾದ ಪ್ರವಾಹದ ಹಾನಿಯನ್ನು ನಿಯಂತ್ರಿಸಲು ಸರ್ಕಾರ ವಿಫಲವಾದಾಗ ಅಮಿತಾಭ್ ಹೀಗೆ ಟ್ವೀಟ್ ಮಾಡಿದ್ದರು: ‘ನಿಸರ್ಗದ ವಿರುದ್ಧ ಹೋರಾಟಕ್ಕೆ ಯತ್ನಿಸಬೇಡಿ... ಯಾರ ಮೇಲೂ ತಪ್ಪು ಹೊರಿಸಬೇಡಿ...’ ಕೇಂದ್ರದಲ್ಲಿ ಮತ್ತು ಮಹಾರಾಷ್ಟ್ರದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿಯನ್ನು ಟೀಕೆಗಳಿಂದ ರಕ್ಷಿಸುವುದು ಈ ಟ್ವೀಟ್‍ನ ಉದ್ದೇಶವಾಗಿತ್ತು ಎಂದೇ ಜನರು ಭಾವಿಸಿದ್ದರು.

ನಟರು ಕೂಡ ಪ್ರಜೆಗಳೇ. ಅವರ ರಾಜಕೀಯ ನಿಲುವುಗಳನ್ನು ಯಾರೂ ಪ್ರಶ್ನಿಸಲಾಗದು. ಆದರೆ ಅಮಿತಾಭ್ ಅವರು ಒಂದು ಪಕ್ಷದಿಂದ ಮತ್ತೊಂದಕ್ಕೆ, ಒಬ್ಬ ರಾಜಕಾರಣಿಯಿಂದ ಮತ್ತೊಬ್ಬ ರಾಜಕಾರಣಿಯ ಬಳಿಗೆ ನಿರಾಯಾಸವಾಗಿ ಹೋಗಿರುವುದನ್ನು ಅರಗಿಸಿಕೊಳ್ಳುವುದು ಕಷ್ಟ. ಇದು ಅವಕಾಶವಾದವಲ್ಲದೆ ಬೇರೇನೂ ಅಲ್ಲ. ಹಾಲಿವುಡ್‍ನ ಪ್ರಸಿದ್ಧ ನಟರ ಜತೆಗೆ ಅಮಿತಾಭ್ ವರ್ತನೆಯನ್ನು ಹೋಲಿಸಿದರೆ ವ್ಯತ್ಯಾಸ ಎದ್ದು ಕಾಣುತ್ತದೆ. ಹಾಲಿವುಡ್ ನಟರೂ ರಾಜಕೀಯ ನಿಲುವುಗಳನ್ನು ಹೊಂದಿದ್ದಾರೆ. ಆದರೆ ಒಂದು ಪಕ್ಷಕ್ಕೆ ಮಾತ್ರ ನಿಷ್ಠೆ. ಜಾರ್ಜ್ ಕ್ಲೂನಿ ಡೆಮಾಕ್ರಟ್ ಸಿದ್ಧಾಂತಕ್ಕೆ ಬದ್ಧ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಡು ಬಗ್ಗಿಸಿ ಬೇಡಿಕೊಂಡರೂ ಅವರ ಪ್ರಮಾಣ ವಚನ ಸಮಾರಂಭಕ್ಕೆ ಕ್ಲೂನಿ ಹೋಗಲಿಲ್ಲ. ಹಾಗೆಯೇ, ಕ್ಲಿಂಟ್ ಈಸ್ಟ್‌ವುಡ್ ಒಂದು ಬಾರಿ ರಿಪಬ್ಲಿಕನ್ ಪಕ್ಷದ ರಾಷ್ಟ್ರೀಯ ಸಮಾವೇಶದಲ್ಲಿ ಮಾತನಾಡಿದ್ದರು. ಆದರೆ ಅವರು ಡೆಮಾಕ್ರಟ್ ಪಕ್ಷದಿಂದ ಮಾರು ದೂರವೇ ಉಳಿದಿದ್ದಾರೆ. ಬಲವಾದ ರಾಜಕೀಯ ನಿಲುವುಗಳನ್ನು ಹೊಂದಿರುವ ಪಶ್ಚಿಮದ ನಟರು ದಿಟ್ಟತನ ಅಥವಾ ಬದ್ಧತೆ ತೋರಿದ್ದಾರೆ.

ಆದರೆ, ಭಾರತದಲ್ಲಿ ಅಮಿತಾಭ್ ಅವರೊಬ್ಬರೇ ಹೀಗೆ ಎನ್ನುವಂತಿಲ್ಲ. ಹಿಂದಿ ಸಿನಿಮಾ ರಂಗದ ಇತರ ನಟರೂ ಅಧಿಕಾರದಲ್ಲಿರುವ ರಾಜಕಾರಣಿಗಳ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದಾರೆ. ಇದಕ್ಕೆ ಅಪವಾದವಾಗಿ ಕಾಣಿಸುವ ಪ್ರವೃತ್ತಿ ಇರುವುದು ಹಿಂದಿಯೇತರ ಭಾಷೆಗಳಲ್ಲಿ. ತಮ್ಮ ಗಾಢವಾದ ರಾಜಕೀಯ ನಿಲುವುಗಳನ್ನು ಪ್ರತಿಪಾದಿಸುವುದಕ್ಕಾಗಿ ಸ್ವಂತ ರಾಜಕೀಯ ಪಕ್ಷಗಳನ್ನೇ ಕಟ್ಟಿದ ಎಂ.ಜಿ. ರಾಮಚಂದ್ರನ್, ಎನ್.ಟಿ. ರಾಮರಾವ್ ಅವರಂತೆ ಪ್ರಕಾಶ್ ರೈ ಮತ್ತು ಕಮಲ್ ಹಾಸನ್ ಅವರು ಸಮಾಜದಲ್ಲಿ ಹೆಚ್ಚಿನ ಜನ ಹೇಳುವುದೇ ಸರಿ ಎಂಬ ಪ್ರವೃತ್ತಿಯ ವಿರುದ್ಧ ದಿಟ್ಟವಾಗಿ ಮಾತನಾಡಿದ್ದಾರೆ.

ನಟರು ರಾಜಕೀಯ ನಿಲುವುಗಳನ್ನು ಹೊಂದಿರಲೇಬೇಕೆಂದಿಲ್ಲ. ತಮ್ಮ ಕಲೆಗೆ ನಿಷ್ಠವಾಗಿದ್ದು ರಾಜಕೀಯದಿಂದ  ದೂರವೇ ಇರುವವರ ಬಗ್ಗೆ ಗೌರವ ಇದೆ. ಆದರೆ, ಆಡಳಿತ ಪಕ್ಷದ ರಾಜಕಾರಣಿಗಳಿಗೆ ಹತ್ತಿರವಾಗಲು ತವಕಿಸುವ ನಟರ ಬಗ್ಗೆ ಎಚ್ಚರಿಕೆಯಿಂದ ಇರಲೇಬೇಕು. 2006ರಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಶಾರುಕ್ ಖಾನ್ ಭೇಟಿಯಾಗಿದ್ದರು. ಸೋನಿಯಾ ಅವರು ‘ಬಹಳ ಗಟ್ಟಿಯಾದ, ಯಾರಾದರೂ ಮೆಚ್ಚಬಹುದಾದ ಮಹಿಳೆ’ ಎಂದು ಬಳಿಕ ಶಾರುಕ್ ಹೇಳಿದ್ದರು. ಮುಂದಿನ ಸಿನಿಮಾ ಬಿಡುಗಡೆ ಸಂದರ್ಭದಲ್ಲಿ ಶಾರುಕ್ ಅವರು ಈಗ ವಿರೋಧ ಪಕ್ಷದಲ್ಲಿರುವ ಕುಟುಂಬವನ್ನು ಸಾರ್ವಜನಿಕವಾಗಿ ಹೊಗಳಲಿ ಎಂದು ನಾವು ಬಯಸಬಹುದು (ಆದರೆ ಅವರು ಹಾಗೆ ಖಂಡಿತ ಮಾಡುತ್ತಾರೆ ಎಂದು ಹೇಳುವಂತಿಲ್ಲ).

ಯೋಜನೆಗಳು ಮತ್ತು ಸಂಸ್ಥೆಗಳಿಗೆ ನೆಹರೂ-ಗಾಂಧಿ ಕುಟುಂಬದ ಹೆಸರು ಇರಿಸುವುದರ ವಿರುದ್ಧ ನಟ ರಿಷಿ ಕಪೂರ್ ಅವರು 2016ರ ಮೇ ನಲ್ಲಿ ಟ್ವಿಟರ್‍ನಲ್ಲಿ ಸಂಚಲನ ಸೃಷ್ಟಿಸಿದ್ದರು. ಅವರು ಹೇಳಿದ್ದು ಅಸತ್ಯವಲ್ಲ. ಆದರೆ, ನೆಹರೂ-ಗಾಂಧಿ ಕುಟುಂಬ ಅಧಿಕಾರ ಕಳೆದುಕೊಳ್ಳುವುದಕ್ಕೆ ಮೊದಲು ಅವರು ಇದನ್ನು ಹೇಳಿದ್ದರೆ ಅದು ಹೆಚ್ಚು ವಿಶ್ವಾಸಾರ್ಹ ಮತ್ತು ಪರಿಣಾಮಕಾರಿ ಆಗುತ್ತಿತ್ತು ಎಂದು ನಾವು ಭಾವಿಸದಿರುವುದು ಕಷ್ಟ. ಯುಪಿಎ ಅಧಿಕಾರದಲ್ಲಿದ್ದಾಗ ರಿಷಿ ಕಪೂರ್ ಅವರು ಈ ಬಗ್ಗೆ ಮೌನವಾಗಿದ್ದರು (ಈ ಲೇಖಕ ಸೇರಿ ಇತರ ಹಲವರು ಯುಪಿಎ ಅಧಿಕಾರದಲ್ಲಿದ್ದಾಗಲೇ ಈ ಪ್ರವೃತ್ತಿಯನ್ನು ಬಲವಾಗಿ ಟೀಕಿಸಿದ್ದರು). ಇದು ಭಾರತದ ನಟ ವರ್ಗದ ಮೂಲಭೂತ ಲಕ್ಷಣವೇ ಆಗಿದೆ. ಅಮೀರ್ ಖಾನ್ ಅವರು ಹೆಚ್ಚುತ್ತಿರುವ ಅಸಹಿಷ್ಣುತೆಯ ಬಗ್ಗೆ ಯಾವುದೋ ಒಂದು ಎಚ್ಚರ ತಪ್ಪಿದ ಕ್ಷಣದಲ್ಲಿ ಮಾತನಾಡಿದ್ದರು. ಬಳಿಕ, ಸರ್ಕಾರದಿಂದ ಪ್ರಶಸ್ತಿಯೊಂದನ್ನು ಪಡೆದು, ಆರ್‍ಎಸ್‍ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಎದುರು ಸಾಂಕೇತಿಕವಾಗಿ ತಲೆಬಾಗಿ ಆಡಳಿತ ಪಕ್ಷದ ಜತೆಗಿನ ಸಂಬಂಧವನ್ನು ಸರಿಪಡಿಸಿಕೊಂಡರು.

ರಾಜಕೀಯ ಪ್ರಭಾವಿಗಳ ಬಗ್ಗೆ ಖ್ಯಾತನಾಮ ಭಾರತೀಯರು ಅತಿಯಾದ ಗೌರವ ಹೊಂದಿದ್ದಾರೆ. ಇದು ಭಾರತದ ಶ್ರೀಮಂತರ ವಿಚಾರದಲ್ಲಿಯೂ ನಿಜ. ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ, ಪ್ರತಿ ಸಾರಿ ಬಜೆಟ್ ಮಂಡನೆ ಆದಾಗಲೂ ಕೈಗಾರಿಕೋದ್ಯಮಿಗಳು ಅದನ್ನು ಸಾರ್ವಜನಿಕವಾಗಿ ಹೊಗಳುತ್ತಾರೆ (ಖಾಸಗಿಯಾಗಿ ಅವರು ಏನು ಹೇಳುತ್ತಾರೆ ಎಂಬುದು ಬೇರೆ ಮಾತು). ಭಾರತದ ಕೈಗಾರಿಕೋದ್ಯಮದ ದಿಗ್ಗಜರು ಎನಿಸಿಕೊಂಡವರು ಟ್ವಿಟರ್‍ನಲ್ಲಿ ದಿಗ್ಗಜರಾಗಿ ಉಳಿಯದೆ ಅತಿಯಾದ ಭಟ್ಟಂಗಿತನದ ಪದಗಳಲ್ಲಿ ಮೋದಿ ಅವರನ್ನು ಹೊಗಳುತ್ತಾರೆ.

ನೋಟು ರದ್ದತಿ ಜಾರಿಯಾದ ತಕ್ಷಣವೇ ಮೋದಿ ಅವರ ಕ್ರಮವನ್ನು ಕೊಹ್ಲಿ ಹೊಗಳಿದ ಪ್ರಸ್ತಾಪದೊಂದಿಗೆ ಅಂಕಣ ಆರಂಭಿಸಿದ್ದೇನೆ. ನಾಲ್ಕು ತಿಂಗಳ ಬಳಿಕ, ನೋಟು ರದ್ದತಿಯ ನಕಾರಾತ್ಮಕ ಪರಿಣಾಮಗಳು ಗೋಚರಿಸತೊಡಗಿದಾಗ ಉದ್ಯಮಿ ರಾಹುಲ್ ಬಜಾಜ್ ಅವರು ನೋಟು ರದ್ದತಿಯನ್ನು ದಿಟ್ಟವಾಗಿ ಟೀಕಿಸಿದ್ದಾರೆ. ‘ಪರಿಹಾರ ಅಥವಾ ಚಿಂತನೆಯೊಂದು ಸರಿಯಾಗಿದೆ ಎಂದರೆ ಅದು ಬೆಣ್ಣೆಯ ಮುದ್ದೆಯಲ್ಲಿ ಬಿಸಿ ಚೂರಿಯಂತೆ ಸಾಗಬೇಕು. ಉದಾಹರಣೆಗೆ, ನೋಟು ರದ್ದತಿಯ ಹಾಗೆ ಚಿಂತನೆಯೇ ಸರಿಯಾಗಿ ಜಾರಿಯಾಗುತ್ತಿಲ್ಲ ಎಂದರೆ ಅನುಷ್ಠಾನವನ್ನು ದೂರಬೇಡಿ. ನಿಮ್ಮ ಚಿಂತನೆಯೇ ಸರಿ ಇಲ್ಲ ಎಂದು ಅನಿಸುತ್ತದೆ’ ಎಂದು ನಾಸ್ಕಾಂ ಸಮಾವೇಶವೊಂದರಲ್ಲಿ ಬಜಾಜ್ ಹೇಳಿದ್ದಾರೆ.

ಉದ್ಯಮಿಗಳು ಸರ್ಕಾರದ ನೀತಿಯನ್ನು ಟೀಕಿಸುವುದು ವಿರಳ. ರಾಜಕಾರಣಿಗಳು ಮತ್ತು ಸರ್ಕಾರದ ಅನೈತಿಕ ಮತ್ತು ಸರ್ವಾಧಿಕಾರಿ ಮನೋಭಾವದ ವಿರುದ್ಧ ತನ್ನ ಆಸ್ತಿ, ಬುದ್ಧಿಮತ್ತೆ, ಪ್ರತಿಷ್ಠೆ ಎಲ್ಲವನ್ನೂ ಪಣಕ್ಕಿಟ್ಟು ಹೋರಾಡಿದ ಜಾರ್ಜ್ ಸೊರೊಸ್‍ಗೆ ಸಮಾನವಾದ ದೇಶೀ ಅವತಾರ ಇಲ್ಲ (ತುರ್ತು ಸ್ಥಿತಿಯನ್ನು ಕೂಡ ಯಾವುದೇ ಉದ್ಯಮಿ ವಿರೋಧಿಸಲಿಲ್ಲ, ಬದಲಿಗೆ ಕೆಲವರು ಬೆಂಬಲಿಸಿದ್ದರು). ಆಯ್ದ ಕೆಲವು ಮುಸ್ಲಿಂ ದೇಶಗಳ ಜನರು ಅಮೆರಿಕ ಪ್ರವೇಶಿಸುವುದಕ್ಕೆ ನಿಷೇಧ ಹೇರುವ ನಿರ್ಧಾರವನ್ನು ಟ್ರಂಪ್ ಕೈಗೊಂಡಾಗ ಮೈಕ್ರೊಸಾಫ್ಟ್‌ನಿಂದ ಗೂಗಲ್‍ವರೆಗೆ ಹಲವು ದೊಡ್ಡ ಕಂಪೆನಿಗಳು ಬಹಿರಂಗವಾಗಿಯೇ ವಿರೋಧಿಸಿದವು. ಆದರೆ, ಕೇಂದ್ರ ಸರ್ಕಾರವು ಅತ್ಯಂತ ಸಂಶಯಾಸ್ಪದ, ಆರ್ಥಿಕವಾಗಿ ಹಾನಿಕರವಾದ ನಿರ್ಧಾರ ಕೈಗೊಂಡಾಗಲೂ ನಮ್ಮ ಉದ್ಯಮಿಗಳು ಸರ್ವಾನುಮತ ಅಥವಾ ಬಹುತೇಕ ಸರ್ವಾನುಮತದಿಂದ ಅದನ್ನು ಅನುಮೋದಿಸಿದ್ದಾರೆ. ‘ದ ಟೆಲಿಗ್ರಾಫ್’ ಪತ್ರಿಕೆಯಲ್ಲಿ ಆಗಸ್ಟ್‌ನಲ್ಲಿ ಪ್ರಕಟವಾದ ಲೇಖನವೊಂದು ಈ ವ್ಯತ್ಯಾಸವನ್ನು ದಾಖಲಿಸಿದೆ. ಲೇಖನದ ಶೀರ್ಷಿಕೆಯೇ ಎಲ್ಲವನ್ನೂ ಹೇಳುವಂತಿದೆ: ‘ಉದ್ಯಮಿ ಕುರಿಮರಿಗಳ ಮೌನ: ಅಮೆರಿಕದ ಸಿಇಒಗಳು ಮಾತನಾಡಿದರೂ ಭಾರತದವರ ಸದ್ದಿಲ್ಲ’.

ನಟರ ಹಾಗೆಯೇ ಬಂಡವಾಳಶಾಹಿಗಳು ಕೂಡ ಅಧಿಕಾರದಲ್ಲಿರುವವರ ಪರವಾಗಿರಲು ಬಯಸುತ್ತಾರೆ. ದುರ್ಬಲವಾಗಿರುವ ನಮ್ಮ ಸಾರ್ವಜನಿಕ ಸಂಸ್ಥೆಗಳು ಮತ್ತು ಅವುಗಳನ್ನು ದುರ್ಬಳಕೆ ಮಾಡಿಕೊಳ್ಳುವ ರಾಜಕಾರಣಿಗಳ ಸಾಮರ್ಥ್ಯ ಇದಕ್ಕೆ ಒಂದು ಕಾರಣವಾಗಿರಬಹುದು. ಟ್ರಂಪ್ ವಿರುದ್ಧ ನಿಲ್ಲುವಾಗ, ತಮ್ಮ ವಿರುದ್ಧ ಪ್ರಕರಣವೊಂದನ್ನು ದಾಖಲಿಸಿಕೊಳ್ಳುವಂತೆ ತನಿಖಾ ಸಂಸ್ಥೆಗಳಿಗೆ ಆದೇಶ ನೀಡಲು ಟ್ರಂಪ್‍ಗೆ ಅವಕಾಶ ಇಲ್ಲ ಎಂಬುದು ಜಾರ್ಜ್ ಸೊರೊಸ್ ಅಥವಾ ಮೆರಿಲ್ ಸ್ಟ್ರೀಪ್ ತರಹದವರಿಗೆ ತಿಳಿದಿರುತ್ತದೆ. ಆದರೆ ಭಾರತದಲ್ಲಿ ಅಧಿಕಾರ ದುರುಪಯೋಗ ತಡೆಯುವ ಸಾಂಸ್ಥಿಕ ನಿರ್ಬಂಧಗಳಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿಗಳೆರಡೂ ತಮ್ಮ ಟೀಕಾಕಾರರು ಹಾಗೂ ಪ್ರತಿಸ್ಪರ್ಧಿಗಳನ್ನು ಮಟ್ಟಹಾಕಲು ಸರ್ಕಾರದ ಸಂಸ್ಥೆಗಳನ್ನು ಬಳಸಿಕೊಂಡಿವೆ.

ಅತಿ ಶ್ರೀಮಂತರು ಮತ್ತು ಖ್ಯಾತರಲ್ಲಿ ವೈಯಕ್ತಿಕ ಧೈರ್ಯ ಇಲ್ಲದಿರುವುದು ಕೂಡ ಅವರು ಅಧಿಕಾರದಲ್ಲಿರುವವರ ಭಟ್ಟಂಗಿಗಳಾಗಲು ಕಾರಣ ಆಗಿರಬಹುದು. ಸರ್ಕಾರ ಎಸಗುವ ಸಾಮಾಜಿಕ ಅಸಮಾನತೆ ಅಥವಾ ಅಪರಾಧಗಳ ವಿರುದ್ಧ ಮಾತನಾಡಿ ಈತನಕ ಗಳಿಸಿದ ಖ್ಯಾತಿ ಅಥವಾ ಸಂಪತ್ತು ಅಥವಾ ಈ ಎರಡನ್ನೂ ಅಪಾಯಕ್ಕೆ ಒಡ್ಡಿಕೊಳ್ಳಲು ನಮ್ಮ ನಟರು, ಉದ್ಯಮಿಗಳು (ಕ್ರೀಡಾಪಟುಗಳು ಕೂಡ) ಸಿದ್ಧರಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.