ಶುಕ್ರವಾರ, ನವೆಂಬರ್ 22, 2019
23 °C

ಹೊಣೆಗಾರಿಕೆ ಜಾರಿಸುವ ಪ್ರವೃತ್ತಿ ಕೊನೆಯಾಗಲಿ...

ಡಿ. ಮರಳೀಧರ
Published:
Updated:
ಹೊಣೆಗಾರಿಕೆ ಜಾರಿಸುವ ಪ್ರವೃತ್ತಿ ಕೊನೆಯಾಗಲಿ...

ಹಿಂದಿನ ವಾರ ವಾಣಿಜ್ಯೋದ್ಯಮ ಸಂಘಗಳು ಏರ್ಪಡಿಸಿದ್ದ ಸಮಾವೇಶಗಳಲ್ಲಿ  ರಾಷ್ಟ್ರ ಪ್ರಮುಖರು ಮಾಡಿದ ಭಾಷಣಗಳೇ ಹೆಚ್ಚು ಸುದ್ದಿ ಮಾಡಿದವು. ಈ ಭಾಷಣಗಳು ದೇಶದ ಅರ್ಥವ್ಯವಸ್ಥೆ ಬಗ್ಗೆ ಸಾಕಷ್ಟು ಚಿಂತನೆಗೆ ಅವಕಾಶ ಮಾಡಿಕೊಟ್ಟಿವೆ.



ಹೆಚ್ಚು ಮಾತನಾಡದ ಪ್ರಧಾನಿ ಎಂದೇ ಜನಪ್ರಿಯವಾಗಿರುವ  ಮನಮೋಹನ್ ಸಿಂಗ್, ದೆಹಲಿಯಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಸಭೆಯಲ್ಲಿ ಒಂದು ಗಂಟೆ ಕಾಲ  ಮಾತನಾಡಿ ಗಮನ ಸೆಳೆದರು. ಇಂತಹ ಸಮಾವೇಶಗಳಲ್ಲಿ ಅಪರೂಪಕ್ಕೊಮ್ಮೆ ಮಾತನಾಡುವ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರೂ ಬಹುಶಃ ಇದೇ ಮೊದಲ ಬಾರಿಗೆ ಉದ್ಯಮಿಗಳನ್ನು ಉದ್ದೇಶಿಸಿ ಮಾತನಾಡಿದರು. ಇತ್ತ ಬೆಂಗಳೂರಿನಲ್ಲಿ ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ಅವರ ಸಲಹೆಗಾರ ರಘುರಾಂ ರಾಜನ್ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಆರ್. ಸುಬ್ಬರಾವ್ ಅವರೂ ದೇಶದ ಆರ್ಥಿಕತೆ ಬಗ್ಗೆ ತಮ್ಮದೇ ಆದ ನಿಲುವು ಮಂಡಿಸಿದರು.



ಅರ್ಥ ವ್ಯವಸ್ಥೆಯ ನಿರಾಶಾದಾಯಕ ಸಾಧನೆ ಬಗ್ಗೆ ಸರ್ಕಾರ ತಳೆದಿರುವ ಉದಾಸೀನ ಧೋರಣೆಯ ಫಲವಾಗಿಯೇ ರಾಜನ್ ಮತ್ತು  ಸುಬ್ಬರಾವ್ ಅವರು  ಆರ್ಥಿಕತೆ ಮತ್ತೆ ಸುಧಾರಣೆಯ ಹಾದಿಗೆ ಮರಳಲಿದೆ ಎಂದು ಭರವಸೆಯ ಮಾತುಗಳನ್ನಾಡಿದ್ದಾರೆ ಎಂದೇ ನನಗೆ ಭಾಸವಾಗುತ್ತದೆ.



ಪ್ರಧಾನಿ ಮನಮೋಹನ್ ಸಿಂಗ್ ಮತ್ತು ರಾಹುಲ್ ಗಾಂಧಿ ಅವರ ಭಾಷಣಗಳು ವಿಭಿನ್ನ ಕಾರಣಕ್ಕೆ ಮುಖ್ಯವಾಗುತ್ತವೆ. ವಿಶ್ವವಿಖ್ಯಾತ ಅರ್ಥಶಾಸ್ತ್ರಜ್ಞರೂ ಮತ್ತು ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದ ಮುಖ್ಯಸ್ಥರಾಗಿರುವ ಸಿಂಗ್ ಅವರಿಂದ ಆತ್ಮವಿಶ್ವಾಸದ, ಸ್ಫೂರ್ತಿದಾಯಕ ಮತ್ತು ಹುರುಪಿನ ಮಾತುಗಳನ್ನು ಕೇಳಲು ಎಲ್ಲರೂ ನಿರೀಕ್ಷಿಸುತ್ತಾರೆ. ಆದರೆ, ಸಿಂಗ್ ಅವರು ಅರ್ಥ ವ್ಯವಸ್ಥೆಯ ಸದ್ಯದ ಸ್ಥಿತಿಗತಿ ಮತ್ತು 2008ರ ಆರಂಭದಲ್ಲಿ ಘಟಿಸಿದ ಜಾಗತಿಕ ಆರ್ಥಿಕ ಬಿಕ್ಕಟ್ಟಿನ ಬಗ್ಗೆಯೇ ಹೆಚ್ಚು ಒತ್ತು ಕೊಟ್ಟು ಮಾತನಾಡಿ ನಿರಾಶೆಗೊಳಿಸಿದರು.



ಆರ್ಥಿಕ ವೃದ್ಧಿಯಲ್ಲಿ ಸರ್ಕಾರದ  ಪಾತ್ರ ಒಂದು ಸುತ್ತು ಪೂರ್ಣಗೊಳಿಸಿದೆ ಎನ್ನುವ  ಈ ಮೊದಲಿನ ಧೋರಣೆಯನ್ನೇ ಅವರು ಪುನರುಚ್ಚರಿಸಿದರು. ಖಾಸಗಿ ಬಂಡವಾಳ ಹೂಡಿಕೆಯು ಆರ್ಥಿಕ ಬೆಳವಣಿಗೆಗೆ ಪುಷ್ಟಿ  ನೀಡುತ್ತದೆ ಎನ್ನುವುದು ನಿಜವಾದರೂ, ಇಲ್ಲಿ ಸರ್ಕಾರದ ಪಾತ್ರ ಮುಖ್ಯವಾಗಿರುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ದೇಶದಲ್ಲಿ ಹೊಸ ಬಂಡವಾಳ ಹೂಡಿಕೆಗೆ ಪೂರಕವಾದ ಮತ್ತು ಉತ್ತೇಜನಕಾರಿಯಾದ ಪರಿಸ್ಥಿತಿ ಇಲ್ಲ ಎಂದೂ ಅವರು ತಪ್ಪೊಪ್ಪಿಕೊಂಡು ವಾಸ್ತವಕ್ಕೆ ಕನ್ನಡಿ ಹಿಡಿದಿದ್ದರು.



ತಮ್ಮ ಭಾಷಣದ ಉದ್ದಕ್ಕೂ ಸಿಂಗ್ `ಆರ್ಥಿಕ ಬೆಳವಣಿಗೆ' ಬಗ್ಗೆ ಸಾಕಷ್ಟು ಬಾರಿ ಪ್ರಸ್ತಾಪಿಸಿ, ಆರ್ಥಿಕ ವೃದ್ಧಿಯ ಮಹತ್ವಕ್ಕೆ ಒತ್ತು ಕೊಟ್ಟರು. ಶೀಘ್ರದಲ್ಲಿಯೇ ಆರ್ಥಿಕ ವೃದ್ಧಿ ದರವನ್ನು ಈ ಮೊದಲಿನ ಶೇ 9ರ ಮಟ್ಟಕ್ಕೆ ತರಲು ಸರ್ಕಾರ ಗಂಭೀರವಾಗಿ ಪ್ರಯತ್ನಿಸುತ್ತಿದೆ ಎಂದೂ ಭರವಸೆ ನೀಡಿದರು.



ಸರ್ಕಾರದ ಮುಖ್ಯಸ್ಥರಾಗಿರುವ ಸಿಂಗ್, ಆರ್ಥಿಕ ವೃದ್ಧಿ ದರವು ಸಂಕಷ್ಟದ ಮಟ್ಟಕ್ಕೆ ಕುಸಿಯಲು ಅವಕಾಶ ಕೊಟ್ಟಿದ್ದೇಕೆ. ಇಷ್ಟು ದೀರ್ಘ ಕಾಲದವರೆಗೆ ಸಂಬಂಧವೇ ಇಲ್ಲ ಎನ್ನುವ ರೀತಿಯಲ್ಲಿ ವರ್ತಿಸಿರುವುದು  ಮತ್ತು ಹಠಾತ್ತಾಗಿ ಎಚ್ಚರಗೊಂಡು `ವೃದ್ಧಿ ಮಹತ್ವ'ದ ಬಗ್ಗೆ ಚರ್ಚೆಗೆ ಮುಂದಾಗಿರುವುದು ಮಾತ್ರ ಅರ್ಥವಾಗದು. ಗರಿಷ್ಠ ಮಟ್ಟದ ಆರ್ಥಿಕ ವೃದ್ಧಿ ಸಾಧಿಸಲು ಸಾಕಷ್ಟು ವರ್ಷಗಳ ಪರಿಶ್ರಮ ಇರುತ್ತದೆ, ಅದೇ ಮಟ್ಟ ಕಾಯ್ದುಕೊಳ್ಳಲು ಇನ್ನಷ್ಟು ಕಷ್ಟಪಡಬೇಕು ಎನ್ನುವುದೂ ಎಲ್ಲರಿಗೂ ಗೊತ್ತಿರುವ ಸಂಗತಿ. ಆರ್ಥಿಕ ಬೆಳವಣಿಗೆ ಮುನ್ನಡೆಸುವ ಸಂಗತಿಗಳಿಗೆ ಬರೀ ಭರವಸೆಯ ಮಾತುಗಳನ್ನಾಡಿದರೆ ಸಾಲದು. ವಾಸ್ತವದಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡರೆ ಮಾತ್ರ ಬೆಳವಣಿಗೆ ಸ್ಥಿರವಾಗಿರುತ್ತದೆ ಎನ್ನುವುದು ಪ್ರಧಾನಿಗೆ ಕೊನೆಗೂ ಮನವರಿಕೆಯಾದಂತೆ ಆಗಿದೆ ಎಂಬುದು ಅವರ ಭಾಷಣದಿಂದ ನನಗೆ ಮನದಟ್ಟಾಗಿದೆ. ಸರ್ಕಾರದ ಉದ್ದೇಶಗಳು ಮತ್ತು ಸಾಧನೆಗಳ ಮಧ್ಯೆ ಇರುವ ಅಂತರ ತುಂಬದಿದ್ದರೆ ಆರ್ಥಿಕ ವೃದ್ಧಿ ಕುಂಠಿತಗೊಳ್ಳುತ್ತಲೇ ಸಾಗಿರುತ್ತದೆ ಎನ್ನುವುದೂ ಈಗ ಎಲ್ಲರ ಅನುಭವಕ್ಕೆ ಬಂದಾಗಿದೆ.



ಆರ್ಥಿಕ ಸುಧಾರಣಾ ಕ್ರಮಗಳನ್ನು ಮತ್ತೆ ಮುಂಚೂಣಿಗೆ ತಂದು ನಿಲ್ಲಿಸಲು ಸರ್ಕಾರ ಇತ್ತೀಚಿನ ದಿನಗಳಲ್ಲಿ ಕೈಗೊಂಡ ಕ್ರಮಗಳನ್ನು ಪಟ್ಟಿ ಮಾಡಿದ ಪ್ರಧಾನಿ, ಅರ್ಥ ವ್ಯವಸ್ಥೆ ಚೇತರಿಕೆಗೆ ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಂಡಿದೆ ಎಂದೂ ಭರವಸೆ ತುಂಬುವ ಮಾತುಗಳನ್ನಾಡಿದ್ದಾರೆ.



ಬಂಡವಾಳ ಹೂಡಿಕೆಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಇಂಧನ ವಲಯದಲ್ಲಿ ನಿಕ್ಷೇಪ ಪತ್ತೆ ಯೋಜನೆಗಳಿಗೆ ಅನುಮತಿ ನೀಡಿದೆ, ಉಳಿದವುಗಳಿಗೂ ಸದ್ಯದಲ್ಲೇ ಅನುಮತಿ ನೀಡುವ ಸಾಧ್ಯತೆಗಳಿವೆ. ಇದರಿಂದ ರೂ1,10,000 ಕೋಟಿಗಳಷ್ಟು ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದೆ. ರಸ್ತೆ ನಿರ್ಮಾಣ ಯೋಜನೆಗಳಿಗೆ ಪರಿಸರ ಮತ್ತು ಅರಣ್ಯ ಇಲಾಖೆಗಳ ಅನುಮತಿ ನೀಡುವುದನ್ನೂ ಸರಳಗೊಳಿಸುವ ಪ್ರಧಾನಿ ಭರವಸೆ ಜಾರಿಗೆ ಬಂದರೆ ಇದುವರೆಗೆ ನೆನೆಗುದಿಗೆ ಬಿದ್ದಿರುವ ಹಲವಾರು ಯೋಜನೆಗಳು ಕಾರ್ಯಗತಗೊಳ್ಳಬಹುದು.



ವಿದ್ಯುತ್ ವಿತರಣಾ ಸಂಸ್ಥೆಗಳಿಗೆ ಹೊಸ ರೂಪ ಕೊಡುವುದು, ಹೊಸ ತಯಾರಿಕಾ ನೀತಿ ಜಾರಿಗೆ ತರುವುದು, ವಾಯುಯಾನ, ಬಹು ಬ್ರಾಂಡ್ ಚಿಲ್ಲರೆ ವಹಿವಾಟು, ಹೊಸ ಖಾಸಗಿ ಬ್ಯಾಂಕ್ ನೀತಿ, ವಿಶೇಷ ಆರ್ಥಿಕ ವಲಯ ನೀತಿ (ಎಸ್‌ಇಜೆಡ್) ಪರಾಮರ್ಶೆ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಆದ್ಯತೆ ನೀಡುವ ಕೈಗಾರಿಕಾ ನೀತಿ, ಭೂ ಸ್ವಾಧೀನ ಕಾಯ್ದೆಗೆ ತಿದ್ದುಪಡಿ ಮುಂತಾದವು ಆರ್ಥಿಕ ವೃದ್ಧಿಗೆ ಅಗತ್ಯವಾದ ವೇಗ ನೀಡಲಿವೆ.



ಪ್ರಧಾನಿ ಉಲ್ಲೇಖಿಸಿದ ಅಂಕಿ ಅಂಶಗಳ ಅನ್ವಯ, ಬಹುತೇಕ ದೇಶಗಳು ಕಡಿಮೆ ಆರ್ಥಿಕ ವೃದ್ಧಿ ದರದಿಂದ ಬಳಲುತ್ತಿವೆ. ಈ ವಿಷಯದಲ್ಲಿ ಭಾರತವೂ ಹೊರತಾಗಿಲ್ಲ ಎಂದೂ ಅವರು ಪ್ರತಿಪಾದಿಸಿದರು. ಈ  ರೀತಿ ವಾದಿಸುವುದು ಸಂಪೂರ್ಣವಾಗಿ ಸ್ವೀಕಾರಾರ್ಹವಲ್ಲ. ಏಕೆಂದರೆ, ದೇಶದ ಅರ್ಥ ವ್ಯವಸ್ಥೆಯು ಬೆಳವಣಿಗೆಯ ಇನ್ನೂ ಆರಂಭಿಕ ಹಂತದಲ್ಲಿ ಇದೆ. ಬೆಳವಣಿಗೆಗೆ ವಿಪುಲ ಅವಕಾಶಗಳೂ ಇವೆ. ಕನಿಷ್ಠ ಎರಡು ದಶಕಗಳ ಕಾಲ ಭಾರತ ಎರಡಂಕಿಯ ಆರ್ಥಿಕ ವೃದ್ಧಿ ದರ ಸಾಧಿಸಲು ಸಾಧ್ಯವಿದೆ.

ಅಧಿಕಾರಶಾಹಿಯ ಜಡತ್ವ, ಭ್ರಷ್ಟಾಚಾರ ಮತ್ತು ಮೈತ್ರಿಕೂಟ ರಾಜಕೀಯದ ನಿರ್ಬಂಧಗಳ  ಬಗ್ಗೆ ಪ್ರಧಾನಿ ವ್ಯಕ್ತಪಡಿಸಿದ ನಿರಾಶೆ ಮತ್ತು ಅಸಹಾಯಕತೆ ಮಾತ್ರ ಗಮನ ಸೆಳೆಯುವಂತಿತ್ತು. ಅನಿಯಮಿತ ಮತ್ತು ಸಂಪೂರ್ಣ ಅಧಿಕಾರ ಹೊಂದಿದ ದೇಶದ ಪ್ರಧಾನಿಯಾದವರಿಂದ ಇಂತಹ ಮಾತುಗಳು ಕೇಳಿ ಬರಬಾರದಿತ್ತು. ಹೊಣೆಗಾರಿಕೆ ಅವರಲ್ಲಿಗೇ ಕೊನೆಯಾಗುವಾಗ, ದೇಶವು ಇಂತಹ ತಪ್ಪೊಪ್ಪಿಗೆಯ ಮಾತುಗಳನ್ನು ಕೇಳಲು ಸಿದ್ಧವಿರುವುದಿಲ್ಲ.



ಜಾನ್ ಎಫ್ ಕೆನಡಿ ಅವರು ಅಮೆರಿಕದ ಅಧ್ಯಕ್ಷರಾಗುತ್ತಿದ್ದಂತೆ ತಮ್ಮ ಮೇಜಿನ ಮೇಲೆ, `ಇಲ್ಲಿಂದಾಚೆಗೆ ಹೊಣೆಗಾರಿಕೆಯನ್ನು ಇನ್ನೊಬ್ಬರಿಗೆ ವರ್ಗಾಯಿಸುವಂತಿಲ್ಲ' ಎನ್ನುವ ಫಲಕ ಇರಿಸಿದ್ದರು. `ಸರ್ಕಾರ ಮುನ್ನಡೆಸುವ ಹೊಣೆಗಾರಿಕೆಯನ್ನು ವೈಯಕ್ತಿಕವಾಗಿ ಹೊತ್ತುಕೊಳ್ಳುವೆ. ಅದನ್ನು ಯಾರ ಹೆಗಲ ಮೇಲೂ ಹೊರಿಸುವುದಿಲ್ಲ' ಎನ್ನುವ ಕೆನಡಿ ಅವರ ಧೋರಣೆ ಇತರರಿಗೆ ಮಾದರಿಯಾಗಿರಬೇಕು. ಸರ್ಕಾರದ ಮುಖ್ಯಸ್ಥರಾದವರು, ಯಾವುದೇ ಹಿಂಜರಿಕೆ ಇಲ್ಲದೇ ಆಡಳಿತದ ಸಾಧನೆ - ವೈಫಲ್ಯಗಳ ಹೊಣೆಗಾರಿಕೆ ಒಪ್ಪಿಕೊಳ್ಳುವ ಧೈರ್ಯ ಹೊಂದಿರಬೇಕು.



ಪ್ರಧಾನಿ ಮನಮೋಹನ್ ಸಿಂಗ್ ಅವರು, ಅರ್ಥ ವ್ಯವಸ್ಥೆ ಬಗೆಗಿನ ಸರ್ಕಾರದ ದೃಷ್ಟಿಕೋನವನ್ನು ಸಮರ್ಥವಾಗಿ ಬಿಂಬಿಸಿದರೂ, ಉದ್ಯಮಿಗಳ ಮನದಾಳ ತಿಳಿದುಕೊಳ್ಳುವಲ್ಲಿ ವಿಫಲರಾದರು. ಅರ್ಥ ವ್ಯವಸ್ಥೆಯನ್ನು ಸರಿದಾರಿಗೆ ತರುವಲ್ಲಿ ರಾಜ್ಯ ಸರ್ಕಾರಗಳು ನಿರ್ವಹಿಸುವ ಪ್ರಮುಖ ಪಾತ್ರವನ್ನೂ ಪ್ರಧಾನಿ ತಮ್ಮ ಭಾಷಣದಲ್ಲಿ ನಿರ್ಲಕ್ಷಿಸಿದರು.



ಕೈಗಾರಿಕೆ ಮತ್ತು ಉದ್ಯಮ ವಲಯವು ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಪ್ರತಿನಿತ್ಯ ಎದುರಿಸುವ ಸಮಸ್ಯೆಗಳಿಗಿಂತ ಹೆಚ್ಚು ಸವಾಲುಗಳನ್ನು  ಎದುರಿಸುತ್ತಿರುತ್ತವೆ. ಹಲವಾರು ದೇಶಗಳು ನಿಜವಾದ ಸಮಸ್ಯೆಗಳನ್ನು ಗುರುತಿಸುವ ಬದಲಿಗೆ ಸ್ಥಳೀಯ ವಿವಾದಗಳಿಗೆ ಹೆಚ್ಚು ಆದ್ಯತೆ ನೀಡುತ್ತವೆ ಎಂದು ವಿಶ್ವಬ್ಯಾಂಕ್ ಸರಿಯಾಗಿಯೇ ಗುರುತಿಸಿದೆ. ಪ್ರಧಾನಿ ವಿಷಯ ಬಿಟ್ಟು ಈಗ ರಾಹುಲ್ ಗಾಂಧಿ ಅವರ ಭಾಷಣಕ್ಕೆ ಬರೋಣ. ರಾಹುಲ್ ಭಾವುಕ ಜೀವಿ. ಆದರೆ ಅವರಲ್ಲಿ ವಿಷಯ ಮಾಹಿತಿ ಕಡಿಮೆ. ಅವರ ಭಾಷಣವನ್ನು ರಾಜಕೀಯ ಎದುರಾಳಿಗಳು ಟೀಕಿಸಿದ್ದೇ ಹೆಚ್ಚು.



ಯುವ ಜನಾಂಗದ ಪ್ರತಿನಿಧಿಯಾಗಿರುವ ರಾಹುಲ್ ಅವರಿಗೆ ಅವರದ್ದೇ ಆದ ಕನಸುಗಳು, ಕಾರ್ಯಸೂಚಿಗಳು ಇರುವುದು ನಿಜ. ಆದರೆ, ದುರದೃಷ್ಟವಶಾತ್ ಅವರು ತಮ್ಮ ರಾಜಕೀಯ ಮಾರ್ಗದರ್ಶಕರು ಹೆಣೆದ ಬಲೆಯಲ್ಲಿ ಬಿದ್ದಿದ್ದಾರೆ. ದೇಶವು ತಮ್ಮನ್ನು ಗಂಭೀರವಾಗಿ ಪರಿಗಣಿಸಬೇಕು ಎನ್ನುವ ಕಾಳಜಿ ಅವರಿಗೇನಾದರೂ ಇದ್ದಿದ್ದರೆ ರಾಹುಲ್ ಈಗಲೇ ಮೈಕೊಡವಿಕೊಳ್ಳಬೇಕಾಗಿದೆ.

 

ಪ್ರತಿಕ್ರಿಯಿಸಿ (+)