ಹೊಸಹುಟ್ಟು ಪಡೆದಿವೆ.

7

ಹೊಸಹುಟ್ಟು ಪಡೆದಿವೆ.

Published:
Updated:

ಪ್ರತಿ ವರ್ಷದಂತೆ ಈ ಸಲವೂ ವಾರ್ಷಿಕೋತ್ಸವದಲ್ಲಿ ವಿದುಷಿ ನೀಲಾ ರಾಮಗೋಪಾಲ್ ಹಾಗೂ ಡಾ. ಅನಸೂಯಾ ಕುಲಕರ್ಣಿ ಅವರನ್ನು ಸನ್ಮಾನಿಸುತ್ತಿದೆ.ನಾಡಿನ ಹಿರಿಯ ಸಂಗೀತಗಾರ್ತಿಯರ ಸಾಲಿನಲ್ಲಿ ಮುಂಚೂಣಿಯಲ್ಲಿರುವ ನೀಲಾ ರಾಮಗೋಪಾಲ್ ಅವರು ದೇಶ ವಿದೇಶಗಳ ಪ್ರತ್ಠಿತ ಸಂಸ್ಥೆಗಳಲ್ಲಿ ತಮ್ಮ ಗಾಯನ ಕಚೇರಿಗಳನ್ನು ನೀಡಿದ್ದಾರೆ. ‘ಏ ಟಾಪ್’ ಶ್ರೇಣಿಯ ಗಾಯಕಿ. ‘ಸಂಗೀತ ಕಲಾರತ್ನ’, ‘ಕರ್ನಾಟಕ ಕಲಾಶ್ರೀ’ ಮುಂತಾದ ಅನೇಕ ಬಿರುದು ಪುರಸ್ಕಾರಗಳಿಗೆ ಭಾಜನರಾಗಿದ್ದಾರೆ. ಗುರುವಾಗಿಯೂ ಬಹುಬೇಡಿಕೆಯಲ್ಲಿರುವ 75ರ ಹರೆಯದ ಉತ್ಸಾಹದ ಚಿಲುಮೆ ನೀಲಾ. ಮೈಸೂರು ಪರಂಪರೆಯ ಸಂಗೀತಗಾರ ಆರ್ ಆರ್ ಕೇಶವಮೂರ್ತಿ ಹಾಗೂ ಪಿಟೀಲು ಗಾರುಡಿಗ ಸಂಗೀತ ಕಲಾನಿಧಿ ದಿ. ಟಿ ಚೌಡಯ್ಯನವರಲ್ಲಿ ಸಂಗೀತಾಭ್ಯಾಸ ನಡೆಸಿದ ಡಾ. ಎಚ್ ಎಸ್ ಅನಸೂಯಾ ಕುಲಕರ್ಣಿಯವರ ವಿಶೇಷ ಎಂದರೆ ಗಡಿಯಾಚೆಯ ಇಂಡೋನೇಷ್ಯದ ವಾದ್ಯ ಆಂಕ್ಲಂಗ್ ಅನ್ನು ಕರ್ನಾಟಕ ಸಂಗೀತಕ್ಕೆ ತಂದದ್ದು.ವಿಶ್ವದಾದ್ಯಂತ ಅನೇಕ ಸಂಸ್ಥೆಗಳು, ಉತ್ಸವಗಳು ಹಾಗೂ ವಿವಿಗಳಲ್ಲಿ ತಮ್ಮ ಸಂಗೀತ ಹಾಗೂ ಸೋದಾಹರಣ ಭಾಷಣಗಳನ್ನು ನಿಡಿದ್ದಾರೆ. ಪರ್ಕಸ್ಸಿವ್ ಆರ್ಟ್ಸ್ ಸೆಂಟರ್, ಅಕಾಡೆಮಿ ಆಫ್ ಮ್ಯೂಸಿಕ್ ಮೊದಲಾದ ಪ್ರತಿಷ್ಠಿತ ಸಂಗೀತ ಸಂಸ್ಥೆಗಳ ಪುರಸ್ಕಾರ ಸಂದಿದೆ.  ಅಪರೂಪದ ಸೀಡಿ: ಇದೇ ಸಂದರ್ಭದಲ್ಲಿ ಮುತ್ತಯ್ಯ ಭಾಗವತರು ರಚಿಸಿದ 108 ಚಾಮುಂಡೇಶ್ವರಿ ಅಷ್ಟೋತ್ತರ ಶತನಾಮ ಕೃತಿಗಳ ಸೀಡಿ (ಗಾಯನ ಎಂ.ಎಸ್. ಶೀಲಾ) ಲೋಕಾರ್ಪಣೆಯೂ ಇದೆ.ತ್ಯಾಗರಾಜರ ಶಿಷ್ಯಪರಂಪರೆಗೆ ಸೇರಿದ ಡಾ. ಹರಿಕೇಶನಲ್ಲೂರು ಮುತ್ತಯ್ಯ ಭಾಗವತರು (1877-1945), ಕರ್ಣಾಟಕ ಸಂಗೀತದ ತ್ರಿಮೂರ್ತಿಗಳ ನಂತರ ಬಂದ ಪ್ರಮುಖ ವಾಗ್ಗೇಯಕಾರರಲ್ಲೊಬ್ಬರು. ಗಾಯಕ, ಕರಿಕಥಾ ಕಲಾವಿದ ಹಾಗೂ ವಾಗ್ಗೇಯಕಾರರಾಗಿ ಪ್ರಖ್ಯಾತಿ ಪಡೆದಿದ್ದ ಇವರು 400ಕ್ಕೂ ಹೆಚ್ಚು ಸಂಗೀತರಚನೆಗಳನ್ನು ನೀಡಿದ್ದಾರೆ. ಮೈಸೂರಿನ ರಾಜಾಶ್ರಯ ಪಡೆದ ಭಾಗವತರಿಗೆ ಮೈಸೂರು ರಾಜಮನೆತನದ ಕುಲದೇವತೆ ಚಾಮುಂಡೇಶ್ವರಿಯ ಅಶ್ಟೋತ್ತರ ಶತನಾಮಾವಳಿಗಳ ಕೃತಿಗಳನ್ನು ರಚಿಸುವಂತೆ ಪ್ರೇರಣೆ ನೀಡಿದ್ದು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರು.ವೈವಿಧ್ಯಮಯ ರಾಗ-ತಾಳಗಳಿಂದ ಕೂಡಿದ ಈ ಕೃತಿಗಳಿಗೆ ಧಾರ್ಮಿಕ ಮಹತ್ವದ ಜೊತೆಗೆ ಸಂಗೀತಾತ್ಮಕ ಮೌಲ್ಯವೂ ಇದೆ. ಮುತ್ತಯ್ಯ ಭಾಗವತರು ಸೃಷ್ಟಿಸಿದ ಪಶುಪತಿಪ್ರಿಯ, ಬುಧಮನೋಹರಿ, ವಲಚಿ ಮುಂತಾದ ಹೊಸರಾಗಗಳು ಈ ಕೃತಿಗಳಲ್ಲಿ ರೂಪ ಪಡೆದಿವೆ. ಬಳಕೆ ತಪ್ಪಿದ್ದ ಹಂಸಾನಂದಿ, ಮೋಹನಕಲ್ಯಾಣಿಯಂತಹ ಪುರಾತನ ರಾಗಗಳು ಹೊಸಹುಟ್ಟು ಪಡೆದಿವೆ.ಇಡಿ 108 ಕೃತಿಗಳ ಗುಚ್ಛದಲ್ಲಿ ಒಮ್ಮೆ ಬಳಸಿದ ರಾಗವನ್ನು ಮತ್ತೆ ಬಳಸದಿರುವುದು ಭಾಗವತರ ಪಾಂಡಿತ್ಯದ ಆಳ ವಿಸ್ತಾರಗಳ ನಿದರ್ಶನ. ಪಲ್ಲವಿ ಅನುಪಲ್ಲವಿ ಚರಣಗಳನ್ನು ಹೊಂಡಿರುವ ಈ ಕೃತಿಗಳಲ್ಲಿ ಹಲವಕ್ಕೆ ಚಿಟ್ಟೇಸ್ವರಗಳ ಜೋಡಣೆಯ ಚಮತ್ಕಾರವಿದೆ. ಬಹುಪಾಲು ಕೃತಿಗಳು ಕನ್ನಡದಲ್ಲಿರುವುದು ಇನ್ನೊಂದು ವಿಶೇಷ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry