ಶುಕ್ರವಾರ, ಜನವರಿ 21, 2022
30 °C

ಹೊಸ ಚಾಮರ ಹಳೆ ಚಾವಟಿ

ವಸು ಮಳಲಿ Updated:

ಅಕ್ಷರ ಗಾತ್ರ : | |

ಹೊಸ ಚಾಮರ ಹಳೆ ಚಾವಟಿ

ಬಿಡಿಎ (ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ) ನಿವೇಶನ ಸಿಕ್ಕಿ, ಸಾಲ ಮಾಡಿ ಮನೆ ಕಟ್ಟಿ­ದಾಗ ಎಲ್ಲ ಮಧ್ಯಮ ವರ್ಗದವರಂತೆ ನನಗೂ ಸಂಭ್ರಮವಿತ್ತು. ಮಿತ್ರರ ಅಭಿನಂದನೆಗಳ ಸುರಿಮಳೆಗೆ ಏನೋ ಸಾಧನೆ ಮಾಡಿದಂತೆ ಭಾಸ­ವಾಗ­ತೊಡಗಿತು. ಒಂದು ಸಂಜೆ ಮನೆ ಹೊರಗೆ ಬಡಾ­ವಣೆಯ ಸೌಂದರ್ಯ ನೋಡುತ್ತಾ ನಿಂತಾಗ ಕುರಿ ಮೇಯಿಸಿ ಮನೆ ಕಡೆಗೆ ಹೋಗು­ತ್ತಿದ್ದ ವ್ಯಕ್ತಿ ನಿಂತು ಮಾತನಾಡಿಸಿದರು.‘ಇದೆಲ್ಲ ಹತ್ತು ವರ್ಷದ ಹಿಂದೆ ನಮ್ಮ ಹೊಲ ಆಗಿತ್ತು ತಾಯಿ, ನನ್ನದು, ಐದು ಎಕರೆ ಇತ್ತು. ಸರ್ಕಾರ ಕೊಟ್ಟ ದುಡ್ಡಲ್ಲಿ ಮಗಳಿಗೆ ಮದುವೆ ಮಾಡಿದೆ. ಮೂರು­ಜನ ಗಂಡು ಮಕ್ಕಳು, ನಮಗೆ ಬರಬೇಕಾದ ನಿವೇಶನ ಕುರಿತ ವಿಚಾರ ಇನ್ನೂ ಕೋರ್ಟಲ್ಲಿ ನಡೀತಾ ಇದೆ...’ ಎಂದರು.ಇದು, ಪಕ್ಕದ ಗೊಲ್ಲರ ಹಟ್ಟಿಯಲ್ಲಿ ವಾಸ ಮಾಡುವ ಮರಿಯಪ್ಪನ ವ್ಯಥೆ.  ಬಹುಶಃ ಅವರು ಇಲ್ಲಿಯ ಮೂಲನಿವಾಸಿಗಳು. ಆ ಹಟ್ಟಿ­ಯಲ್ಲಿ ಎಷ್ಟೋ ವರ್ಷಗಳಿಂದ ಸತ್ತವರ ನೆನಪಿಗೆ ಇಡುವ ಕಲ್ಲಿನ ಸಾಲು ಹಳೆ ಶಿಲಾಯುಗದ ಸಂಸ್ಕೃತಿ­ಯನ್ನು ನೆನಪಿಸುವಂತಿದೆ. ಬೆಳೆದು ಗಿಜಿ­ಗುಡುವ ನಗರದ ಒಳಗೂ ಅವರ ಮನೆ­ಯಂಚಿನಲ್ಲಿ ಕುರಿರೊಪ್ಪಗಳನ್ನು ಹಾಗೇ ಉಳಿಸಿ­ಕೊಂಡಿದ್ದಾರೆ.  ನೂರಾರು ವರ್ಷಗಳಿಂದ ಇಲ್ಲೇ ಬಾಳಿ ಬದುಕಿದ ಜನರ ಭೂಮಿಯನ್ನು ವಶ­ಪಡಿಸಿ­ಕೊಂಡು ಸರ್ಕಾರ ನಿವೇಶನಗಳನ್ನು ಮಾಡಿ  ಮಧ್ಯಮ­ವರ್ಗ, ಇಲ್ಲವೇ ಮೇಲ್ವರ್ಗಕ್ಕೆ ಮಾರು­ತ್ತದೆ. ನಿವೇಶನದ ಬೆಲೆ ವರ್ಷಕ್ಕೆ ಎರಡು–ಮೂರು ಪಟ್ಟು ಹೆಚ್ಚುತ್ತಾ ಹೋಗುತ್ತದೆ.ನನ್ನ ಅಥವಾ ನನ್ನಂತಹವರ ಮನೆಗಳನ್ನು ಭೂಮಿ ಕಳೆದುಕೊಂಡವರ ಕಣ್ಣೀರು ಬೆಚ್ಚಗಾಗಿಸಿದೆಯೇ? ಮರಿ­ಯಪ್ಪನ ಉಳುಮೆ ಮಾಡುವ ಹಕ್ಕನ್ನು ಕಸಿದುಕೊಂಡವರು ಯಾರು?ವಾಸ್ತವವಾಗಿ ರೈತನ ಭೂಮಿಯನ್ನು ವಶ­ಪಡಿ­ಸಿ­ಕೊಳ್ಳುವ ಹಕ್ಕನ್ನು ಭಾರತ ೧೧೦ ವರ್ಷ­ಗಳಷ್ಟು ಹಿಂದೆಯೇ ಪಡೆದುಕೊಂಡಿದೆ ಎಂದರೆ ಆಭಾಸ ಎನಿಸಬಹುದು. ಇದು ಉತ್ಪ್ರೇಕ್ಷೆಯಲ್ಲ. ೧೮೯೪­ರ ಭೂ ಸ್ವಾಧೀನ ಕಾಯ್ದೆಯನ್ನೇ ಸಣ್ಣ­ಪುಟ್ಟ ತಿದ್ದುಪಡಿಯೊಂದಿಗೆ ಈವರೆಗೆ ಪಾಲಿ­ಸುತ್ತಾ ಬಂದಿದ್ದೇವೆ.  ವಸಾಹತುಶಾಹಿ ನಮ್ಮನ್ನು ಬಿಟ್ಟರೂ  ಅವರ ಬಳುವಳಿಗಳಿಗೆ ನಾವು ಸದಾ ವಿಧೇ­ಯ­ರಾಗಿದ್ದೇವೆ. ಬ್ರಿಟಿಷರು  ಈ ನೆಲವನ್ನು ನೋಡು­ತ್ತಿದ್ದ ರೀತಿಗೂ ನಮ್ಮದೇ ಸರ್ಕಾರ ನಮ್ಮನ್ನು ನೋಡುವ ರೀತಿಗೂ ಯಾವ ವ್ಯತ್ಯಾ­ಸವೂ ಇಲ್ಲವೇ? ‘ತೋಳ ಕುರಿ ನ್ಯಾಯ’ದ ವಸಾ­ಹತು ನೀತಿಯಲ್ಲಿ ಸರ್ಕಾರದ ಯಾವುದೇ ಯೋಜ­­ನೆಗೆ ಭೂಮಿಯನ್ನು ವಶಪಡಿಸಿಕೊಳ್ಳಲು ಕಾನೂ­ನಿನ ಅಡಿಯಲ್ಲಿ ಅವಕಾಶ ಇತ್ತು. ಇಂತಹ ಕಾನೂ­ನು­ಗಳನ್ನೇ ಈ ಕಾಲಕ್ಕೂ ಶ್ರೇಷ್ಠವೆಂದು ಅನು­­ಸರಿಸುತ್ತಿರುವುದಕ್ಕೆ ಇದೊಂದು ಸಣ್ಣ ಉದಾಹರಣೆಸ್ವಾತಂತ್ರ್ಯೋತ್ತರ ಭಾರತದಲ್ಲಿ  ನಗರಗಳು ಹಳ್ಳಿಗಳನ್ನು ನುಂಗಲು ಅಭಿವೃದ್ಧಿ ಒಂದು ನೆಪ­ವಾಯಿತು. ಜನಸಂಖ್ಯೆ ಬೆಳೆದಂತೆ ಭೂಮಿ ಬೇಡಿಕೆ ಹೆಚ್ಚಾದುದರಿಂದ ಪೈಪೋಟಿ ಬೆಳೆದು ಅಸ­ಹಾ­ಯಕ ರೈತರ ಉಳುಮೆ ಭೂಮಿ ಕಬಳಿಕೆ ಮಿತಿ­ಮೀರಿತು. ಭೂಮಿ ಕಳೆದುಕೊಂಡ ರೈತರು ನೆಪ­ಮಾತ್ರದ ಪರಿಹಾರವನ್ನು ಪಡೆದು ಬದ­ಲಾ­ವಣೆ­ಯ ಚಕ್ರಕ್ಕೆ ಸಿಕ್ಕಿ ನಲುಗಿಹೋದರು. ಯಾವ ಭೂ ಸುಧಾರಣಾ ಕಾನೂನೂ ಇದನ್ನು ಮುಟ್ಟ­ಲಿಲ್ಲ. ಇದು ಅದರ ಚರ್ಚೆಯ ಭಾಗವೂ ಆಗಲಿಲ್ಲ.೧೯೯೦ರ ನಂತರ ಜಾಗತೀಕರಣ ಪ್ರಕ್ರಿಯೆ ಕೈಗಾರಿಕಾ ಬೆಳವಣಿಗೆಯನ್ನು ಪವಿತ್ರ­ವಾದು­ದೆಂದು ಭಾವಿಸುವಂತೆ ಮಾಡಿದೆ. ಕೈಗಾರಿಕೆ ಸ್ಥಾಪನೆ ಎಂದಾದರೆ ಅದಕ್ಕಾಗಿ ಸರ್ಕಾರ ಏನೂ ಮಾಡಲು ಸಿದ್ಧ. ಖಾಸಗಿ ಬಂಡವಾಳಗಾರರು ಎಲ್ಲೆಂದರಲ್ಲಿ ರೈತರಿಂದ ಭೂಮಿಯನ್ನು ಕೊಂಡು ಕೈಗಾರಿಕೆಗಳನ್ನು ಸ್ಥಾಪಿಸುತ್ತಾ ಬಂದಿ­ದ್ದಾರೆ. ಅದನ್ನೆಂದೂ ಸರ್ಕಾರ ಪ್ರಶ್ನಿಸುವುದಿಲ್ಲ. ಕಾಡಿನ ಬಗ್ಗೆ ಇರುವ ಕಾಳಜಿ ಕೃಷಿಭೂಮಿ ಕುರಿತು ಇಲ್ಲ. ಅದರಲ್ಲೂ ವಿದೇಶಿ ಬಂಡವಾಳ ಬರು­ವು­ದಾದರೆ ನೀರು, ವಿದ್ಯುತ್, ಭೂಮಿ ಎಲ್ಲ­ವನ್ನೂ ಉದಾರವಾಗಿ ನೀಡಲು ಸರ್ಕಾರ ಮುಂದಾಗುತ್ತದೆ.ನಗರದ ವಿಸ್ತರಣೆಯ ಹೆಸರಿನಲ್ಲಿ  ಭೂಮಿಯ ವಶ,  ರಿಯಲ್ ಎಸ್ಟೇಟೆಂಬ ಶಿರೋ­ನಾಮೆ ಅಡಿಯಲ್ಲಿ ಭೂಮಿ ಮಾರಾಟ ದಂಧೆ­ಯಾಗಿದೆ. ಅತ್ಯಂತ ವೇಗವಾಗಿ ಲಾಭ ತರುವ ಮಾರ್ಗ ಇದಾಗಿರುವುದರಿಂದ ಮಾಫಿಯಾ ಆಗಿ ಬೆಳೆಯಲು ಹೆಚ್ಚು ಸಮಯವನ್ನೇನೂ ತೆಗೆದು­ಕೊಳ್ಳ­ಲಿಲ್ಲ. ನಿವೇಶನಗಳನ್ನು  ವಿಸ್ತರಿಸಲು ಹೇಳಿ­ಮಾಡಿಸಿದ ಜಾಗವೆಂದರೆ ನಗರದ ಸುತ್ತ­ಮುತ್ತಲ ಪ್ರದೇಶ. ನಗರಕ್ಕೆ ಅಂಟಿ­ಕೊಂಡಂ­ತಿರುವ ಹಳ್ಳಿಗಳೇ ಇವರ ಮೊದಲ ಬೇಟೆ.ಆ ಹಳ್ಳಿ­ಗಳ ಜನರೂ ದಿಢೀರನೆ ಬರ­ಬಹುದಾದ ಹಣದ ನಿರೀಕ್ಷೆಯಲ್ಲಿ ಅಸ್ಥಿರವಾದ ಬದುಕನ್ನು ಸಾಗಿಸುತ್ತಾರೆ. ಕಡೆಗೂ ಒಂದು ದಿನ ಆ ಹಳ್ಳಿಯ ಹೊಲಗಳು ಒಂದೊಂದಾಗಿ ನಗರದ ಸ್ವಾಧೀನ­­ವಾಗು­ತ್ತವೆ. ಜಮೀನು ಮಾರಾಟದಿಂದ ಬಂದ ಹಣ, ಆವರೆಗೆ ಮಾಡಿದ ಕೈಸಾಲ ತೀರಿಸು­ವಲ್ಲಿ ಮುಗಿದು ಹೋಗುತ್ತದೆ. ಇತ್ತ ಹಳ್ಳಿಯ­ವರೂ ಆಗದೆ ಅತ್ತ ನಗರ ವಾಸಿಗಳೂ ಆಗದೆ ಅತಂತ್ರ ಸ್ಥಿತಿಯಲ್ಲೇ ನಗರದ ಸುತ್ತಲ ಹಳ್ಳಿಗಳು ಕರಗಿ ಹೋಗುತ್ತಿವೆ. ರಸ್ತೆ ನಿರ್ಮಾಣಕ್ಕಾಗಿ, ಕೈಗಾರಿಕೆ­ಗಳನ್ನು ಕಟ್ಟಲು ಹೀಗೆ ಹತ್ತು ಹಲವು ಕಾರಣಗಳನ್ನು ಹೇಳಿ ಹಳ್ಳಿಗಳನ್ನು ವಶ­ಪಡಿಸಿಕೊಳ್ಳಲಾಗಿದೆ. ಅದಕ್ಕೆ ಈವರೆಗೆ ಕೊಟ್ಟ ಬೆಲೆ ನೆಪ ಮಾತ್ರ. ಬೆಲೆ ಎನ್ನುವುದಕ್ಕಿಂತ ಪರಿ­ಹಾರ ಎನ್ನಬಹುದು.ತಮ್ಮದಲ್ಲದ ತಪ್ಪಿಗೆ ಪರಿ­ಹಾರ ಪಡೆಯಲು ಸಣ್ಣಪುಟ್ಟ ರೈತರು ಕಚೇರಿ­ಗಳನ್ನು ಸುತ್ತಿ ಲಂಚ ಕೊಟ್ಟು ಹಣ್ಣಾಗಿ ಹೋಗಿ­ದ್ದಾರೆ. ಹಣದ ಆರ್ಥಿಕತೆಯಲ್ಲಿ  ಬದುಕದ ರೈತರಿಗೆ ಕೊಡುವ ಸಣ್ಣ ಪ್ರಮಾಣದ ಹಣವೂ ಆಪಾರ­ವಾಗಿ ಕಾಣುತ್ತದೆ.  ಭೂಮಿ ಕಳೆದು­ಕೊಂಡ ಎಲ್ಲಾ ಸಂದರ್ಭಗಳಲ್ಲೂ ರೈತರು ಪ್ರತಿ­ಭಟನೆ ಮಾಡದೆ ಹೋಗಲು ಇದೂ ಒಂದು ಕಾರಣ. ನ್ಯಾಯ ಸಿಗುವವರೆಗೆ ವರ್ಷಾನುಗಟ್ಟಲೆ ಹೋರಾ­ಡುವ ಶಕ್ತಿ ಜನಸಾಮಾನ್ಯರಿಗೆ  ಇರು­ವುದಿಲ್ಲ. ಆದ್ದರಿಂದ ಇಂತಹ ಹೋರಾಟ­ಗಳೇನಿ­ದ್ದರೂ ತಕ್ಷಣದ ಪ್ರತಿಕ್ರಿಯೆಯಾಗಿರುತ್ತವೆ. ಆದರೂ ಈವರೆಗೆ ನಡೆದ ಚಳವಳಿಗಳು ಹಾಗೂ ಪ್ರತಿಭಟನೆಗಳ ಫಲವಾಗಿ, ಭೂಮಿ ವಶ­ಪಡಿಸಿ­ಕೊಳ್ಳಲು ಮಾಡಿದ  ೧೮೯೪ರ ಕಾಯ್ದೆಗೆ ಬದಲಾಗಿ  ಹೊಸ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತರುತ್ತಿದೆ. ೨೦೧೧ರ ಭೂ­ಸ್ವಾಧೀನ, ಪುನರ್‌ವಸತಿ ಮತ್ತು ಪರಿಹಾರ ಮಸೂದೆ ಎಂದು ಅದನ್ನು ಕರೆದಿದೆ. ಸದನದಲ್ಲಿ ನಡೆದ ಸರ್ವಪಕ್ಷಗಳ  ಚರ್ಚೆ ಮತ್ತು ಒಪ್ಪಿಗೆಯ ನಂತರ ನೋಟಿಫಿಕೇಷನ್ ಆಗಿ ಹೊರಬರುತ್ತಿದೆ.ಎಲ್ಲಾ ಪಕ್ಷಗಳೂ ರೈತರ ಪರವಾಗಿಯೇ ವಾದಿ­ಸು­ತ್ತಿವೆ. ಯಾರಿಗೂ ರೈತರಿಗೆ  ಅನ್ಯಾಯ­ವಾಗು­ವುದು ಬೇಡ. ಹಾಗಾಗಿ ಹಳ್ಳಿ ಪ್ರದೇಶ­ವಾದಲ್ಲಿ ಭೂಮಿಯ ಮಾರುಕಟ್ಟೆ ಬೆಲೆಯ ನಾಲ್ಕು ಪಟ್ಟು  ಪರಿಹಾರವಾಗಿ ಕೊಡಲು ಅವಕಾಶ ಕಲ್ಪಿಸಲಾಗಿದೆ. ನಗರ ವಲಯ­ವಾದಲ್ಲಿ ಮಾರುಕಟ್ಟೆ ಬೆಲೆಯ ಎರಡು ಪಟ್ಟನ್ನು  ಭೂಮಿ ಕಳೆದುಕೊಂಡವರಿಗೆ  ಕೊಡ­ಲಾಗು­ವುದು. ಪರಿಹಾರದ ಮೊತ್ತ ಹೊರನೋಟಕ್ಕೆ ಉದಾರ­ವಾಗಿಯೇ ಕಾಣುತ್ತದೆ. ಆದರೆ ಯಾರೂ  ವಿಶೇಷ ಆರ್ಥಿಕ ವಲಯಕ್ಕೆ (SEZ) ಇದನ್ನು ಅನ್ವಯಿಸಲು ಒತ್ತಾಯಿಸಿಲ್ಲ. ಈ ವಲ­ಯ­ಗಳು  ಅತ್ಯಾಧುನಿಕ ಪರಿಭಾಷೆಯಲ್ಲಿ ವಿವ­ರಿಸಿ­­ಕೊಂಡ ಬಹುರಾಷ್ಟ್ರೀಯ ಕಂಪೆನಿಯ ಕೋಠಿಗಳಾಗಿವೆ.ಬೇಸಾಯದಲ್ಲಿ ಬೆವರು ಬಸಿಯ ಬೇಕು. ಬಸಿದರೂ ಎಣ್ಣೆ ಬರುವ ಹೊತ್ತಿಗೆ ಬೆಲೆ ಬಿದ್ದು ಹೋಗು­­ತ್ತದೆ. ಇದನ್ನೆಲ್ಲಾ ಕಂಡ ಹಳ್ಳಿಯ ಯುವಕರು ನಗರದ ಕಡೆ ಮುಖ ಮಾಡಿದ್ದಾರೆ. ನಗರದ ಬಣ್ಣಗಳು ಎಳೆ ಮನಸ್ಸುಗಳನ್ನು ಕೂಗಿ ಕರೆ­­­ಯುತ್ತವೆ. ನಗರದಲ್ಲಿ ಮಲಮೂತ್ರ ವಿಸ­ರ್ಜನೆ­ಗೂ ಬೆಲೆ ತೆರಬೇಕಾಗುತ್ತದೆ ಎಂದು ಗೊತ್ತಾ­­­­­ಗುವ ಹೊತ್ತಿಗೆ ನಗರದ ಗುಲಾಮ­ಗಿರಿ­ಯನ್ನು ಒಪ್ಪಿಕೊಂಡು ಕೊಳೆಗೇರಿ

ವಾಸಿ­­ಗಳಾ­ಗಿರುತ್ತೇವೆ.ಭೂ ಸ್ವಾಧೀನವಾದಾಗ ಅದರ ಮಾರುಕಟ್ಟೆ ಬೆಲೆಯನ್ನು ನಿರ್ಧರಿಸುವವರು ಸರ್ಕಾರಿ ಅಧಿ­ಕಾರಿ­ಗಳೇ ಆಗಿರುತ್ತಾರೆ. ನಾವಿಂದು ಭೂ ಒಡೆ­ತನದ ಪ್ರಶ್ನೆಯನ್ನು ಮೊದಲು ಅರ್ಥೈಸಿ­ಕೊಳ್ಳಬೇಕಾಗಿದೆ. ಈ ಪ್ರಶ್ನೆಯನ್ನು ಬ್ರಿಟಿಷರನ್ನು ಕೇಳಿದಷ್ಟು ನಮ್ಮನ್ನು ನಾವು ಕೇಳಿಕೊಳ್ಳುತ್ತಿಲ್ಲ.

ಭೂಮಿಯ ನಿಜವಾದ ಒಡೆತನ ಯಾರದು? ಸರ್ಕಾ-­­ರದ್ದೋ, ಖಾಸಗಿ ವ್ಯಕ್ತಿಯದೋ ಅಥವಾ ಸಮುದಾಯದ್ದೋ? ಭೂಮಿಯನ್ನು ಯಾರು ಬೇಕಾದರೂ ಕೊಳ್ಳಬಹುದು ಅಥವಾ  ಮಾರ­ಬಹುದು ಎಂದಾಗಲೇ ಸಮುದಾಯದ ಒಡೆತನ ಇಲ್ಲವೆಂದ­ಂತಾಗುತ್ತದೆ. ಶತಮಾನಗಳಿಂದ ಒಂದು ಸಮುದಾಯ ಬದುಕಿದ ಜಾಗವನ್ನು ಸರ್ಕಾ­ರದ ಯೋಜನೆಗಳಿಗಾಗಿ ತೆರವು ಮಾಡ­ಬೇಕಾಗುತ್ತದೆ ಎನ್ನುವುದು ಮಾನವ ಹಕ್ಕಿಗೆ  ವಿರುದ್ಧ­ವಾದುದು. ಈ ಕೆಲಸವನ್ನು ಪರರು ಮಾಡಿ­ದಾಗ ಖಂಡಿಸುತ್ತೇವೆ...ಬುಡಕಟ್ಟು ಜನರು ಭೂಮಿ ಕಳೆದು­ಕೊಂಡಾಗ ನರ್ಮದಾ ಬಚಾವ್ ಆಂದೋ­ಲನ­ದಂತಹ ಹೋರಾಟಗಳು ನಿರಂತರವಾಗಿ ಈ ಪ್ರಶ್ನೆ­ಗಳನ್ನು ಕೇಳಿವೆ. ವಿಶೇಷ ಆರ್ಥಿಕ ವಲಯ ಸ್ಥಾಪನೆ ಸಂದರ್ಭದಲ್ಲೂ ಗುಂಪು ಗುಂಪು ಹಳ್ಳಿ­ಗಳನ್ನೇ ವಶಪಡಿಸಿಕೊಳ್ಳಲಾಗಿದೆ. ಎಲ್ಲವೂ ಅಭಿ­ವೃದ್ಧಿಯ ಹೆಸರಿನಲ್ಲಿ ನಡೆಯುತ್ತದೆ. ಬಹುತೇಕ ಅದು ಕೈಗಾರಿಕಾ ಯೋಜನೆ ರೂಪಿಸುವವರ ಹಕ್ಕೇನೋ ಎನ್ನುವಂತಾಗಿದೆ. ವಿಶೇಷ ಆರ್ಥಿಕ ವಲ­­ಯ­ಗಳನ್ನು  ರೂಪಿಸಿದ್ದೇ ಕೈಗಾರಿಕಾ ಬಂಡ­ವಾಳ­­­ಗಾರರನ್ನು ಆಕರ್ಷಿಸುವುದಕ್ಕೆ. ಅದರಲ್ಲೂ ವಿದೇಶಿ ದುಡ್ಡಿಗಾಗಿ ಹಾಸಿದ ಕೆಂಪು ರತ್ನಗಂಬಳಿ. ಈ ಕೈಗಾರಿಕೆಗಳ ಸ್ಥಾಪನೆಗೆ ಒಳ್ಳೆ ನೀರಿನ ಸೌಲಭ್ಯ ಮತ್ತು ಉತ್ತಮ ರಸ್ತೆ ಸಂಪರ್ಕ ಅಗತ್ಯ. ಜೊತೆಗೆ ಉತ್ತಮ ಹವಾಮಾನ ಇರುವ ಪ್ರದೇಶಗಳ ಮೇಲೆ ಇವರ ಕಣ್ಣು.  ಅಂತಹ ಜಾಗಗಳು ಸಹ­ಜ­ವಾಗಿ ಒಳ್ಳೆಯ ಬೇಸಾಯದ ಭೂಮಿ­ಯಾಗಿ­ರು­ತ್ತವೆ.ಪಾಳು ಬಿದ್ದ ನೆಲ, ಕೈಗಾರಿಕೆ­ಗಳಿಗೂ ಬೇಡ. ಸುಂದರವಾದದ್ದು ಜಗತ್ತಿನಲ್ಲಿ ಎಲ್ಲೇ ಇದ್ದ­ರೂ ಅದನ್ನು ಪಡೆಯುವ ಹಕ್ಕನ್ನು ಬಹು­­ರಾ­ಷ್ಟ್ರೀಯ ಕಂಪೆನಿಗಳು ಪಡೆದುಕೊಂಡೇ ಹುಟ್ಟಿವೆ- ಜಾಗತೀಕರಣದಲ್ಲಿ. ಭೂ ಸ್ವಾಧೀನದ ಹಕ್ಕು ಮಾರು­ವವನದಲ್ಲ ಅದು ಕೊಳ್ಳು­ವವನದ್ದಾಗಿದೆ.

ಬೆಂಗಳೂರಿನ ಸುತ್ತಮುತ್ತಲ ಹವಾಮಾನ ಹಣ್ಣು  ತರಕಾರಿ ಬೆಳೆಗೆ ಹೇಳಿಮಾಡಿಸಿದಂತಿದೆ. ಆದ್ದರಿಂದ ಆ ಊರುಗಳನ್ನು  ಬಿರುಸಿನಲ್ಲಿ ವಶಪಡಿಸಿಕೊಳ್ಳಲಾಗುತ್ತದೆ. ಹತ್ತು ವರ್ಷಗಳ ಹಿಂದೆ ಕಾಣುತ್ತಿದ್ದ ದ್ರಾಕ್ಷಿ ತೋಟಗಳು ಇಂದು ಕಣ್ಮರೆಯಾಗಿವೆ. ತಲೆ ತರಿದ ತೆಂಗಿನ ಮರಗಳ ಸಾಲು ಗೋಳು ಹೇಳಿಕೊಳ್ಳಲಾಗದೆ ಉರುಳಿ ಬೀಳುತ್ತಿವೆ. ಎಸ್‌ಇಜೆಡ್‌ ವಿರುದ್ಧದ ದನಿ, ಬುಡ­ಮೇಲಾದ ಮರದ ಸುಯ್ಯುವ ಗಾಳಿಯಂತೆ ಕ್ಷೀಣ­ವಾಗಿ ಕೇಳಿಸಿತು. ಬೆಂಗಳೂರು ಸಮೀಪದ ನಂದಗುಡಿ ಯೋಜನೆ, ವಿರೋಧಕ್ಕೆ ಮಣಿ­ಯದಿದ್ದರೂ ಸಕಾಲಕ್ಕೆ ಯೋಜನೆಯನ್ನು ಆರಂಭಿಸ­ಲಾಗದೆ ಕೈಬಿಡುವಂತಾಗಿದೆ. ಇಲ್ಲೆಲ್ಲಾ ಪರಿಹಾರ ಪಡೆಯುವುದು ಸಾಹಸದ ವಿಚಾರವೇ ಆಗಿದೆ. ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ, ಮುಂದೆ ಪಡೆಯುವ ಲಾಭದಲ್ಲಿ ರೈತನ ಪಾಲೇನು ಎಂದು ಕೇಳಬೇಕಾಗಿದೆ.ಅವರನ್ನು ಯೋಜನೆಯ ಪಾಲು­ದಾರರ­ನ್ನಾಗಿಸಿ­ಕೊಳ್ಳಲು ಈವರೆಗೆ ಯಾರೂ ಅವಕಾಶ­ವನ್ನು ಕಲ್ಪಿಸಿಲ್ಲ. ಹೊಸ ಕಾಯ್ದೆಯು ಆ ವಿಚಾರ­ವಾಗಿ ಮೌನವಾಗಿದೆ. ಈವರೆಗೆ ಕೃಷಿ ಭೂಮಿ­ಯನ್ನು ಕೊಳ್ಳುವುದಾದರೆ ಆತ ರೈತನಾಗಿ­ರಬೇಕಿತ್ತು. ಹೊಸ ಕಾಯ್ದೆ ಅದನ್ನೆಲ್ಲೂ ಚರ್ಚಿಸದೆ, ಸಾರ್ವಜನಿಕ ಹಿತಾಸಕ್ತಿಯನ್ನು ಎತ್ತಿಹಿಡಿಯುತ್ತದೆ.ಭೂಮಿಯನ್ನು ವಶಪಡಿಸಿಕೊಳ್ಳಲು ಕೃಷಿಗೆ ಸಂಬಂಧ­ಪಟ್ಟ ಕೈಗಾರಿಕೆ, ಸಾರ್ವಜನಿಕ ಹಿತಾ­ಸಕ್ತಿಯ ಚಟುವಟಿಕೆಗಳು ಉದಾಹರಣೆಗೆ ಶಾಲೆ, ಕಾಲೇಜು, ಆಸ್ಪತ್ರೆ, ನೀರು ಶುದ್ಧೀಕರಣ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದಲ್ಲದೆ ಹೆದ್ದಾರಿ, ರಕ್ಷಣೆ ಇಂತಹ ಕ್ಷೇತ್ರಗಳಿಗಂತೂ ಯಾರ ಅನುಮತಿಯೂ ಬೇಕಾಗಿಲ್ಲ. ಉಳಿದಂತೆ ಸರ್ಕಾರದ ಯೋಜನೆಯಾದಲ್ಲಿ ಆ ಪ್ರದೇಶ­ದಲ್ಲಿ ಭೂಮಿಯ ಒಡೆತನ ಹೊಂದಿರುವವರಲ್ಲಿ ಶೇ 70ರಿಂದ ೮೦ರಷ್ಟು ಜನರು ತಮ್ಮ ಒಪ್ಪಿಗೆ ನೀಡ­ಬೇಕಾಗುತ್ತದೆ. ನಮ್ಮ ರೈತರಿಗಿರುವ ಅರಿವು ಎಚ್ಚರ­ದಲ್ಲಿ ಇಷ್ಟೆಲ್ಲಾ ತೀರ್ಮಾನಗಳನ್ನು ತೆಗೆದು­ಕೊಳ್ಳಬಲ್ಲರೆ? ಖಂಡಿತವಾಗಿ ಅವರ ಪರವಾಗಿ ಅವರೇ ನಿಲ್ಲಲಾರರು.ಆ ಕ್ಷಣದ ಸಮಸ್ಯೆಗೆ ಪರಿ­ಹಾರ­ವಾಗಿ ಸಿಕ್ಕುವ ಹಣಕ್ಕೋ ಅಥವಾ ಬೆದ­ರಿಕೆಗೋ ಮಣಿಯಬಲ್ಲರು. ‘ನೈಸ್’ ರಸ್ತೆ ಯೋಜ­ನೆ­­ಯಲ್ಲಿ ನಡೆದ ಕೃಷಿ ಭೂಮಿಯ ಹಗಲು ದರೋಡೆ ಒಳ್ಳೆ ನಿದರ್ಶನ. ಅದು ಯಾರ ಅಭಿವೃದ್ಧಿಗೆ ದಾರಿಯಾಗಿದೆ ಎನ್ನು­ವುದನ್ನು ಬಿಡಿಸಿ ಹೇಳಬೇಕಾಗಿಲ್ಲ. ನಿತ್ಯ ಅಭಿವೃದ್ಧಿಯ ಅಬ್ಬರದ ಭಾಷಣ ಮಾಡುತ್ತಾ ಭಾವಿ ಪ್ರಧಾನಿಯಾಗುವ ಕನಸು ಕಟ್ಟುತ್ತಿರುವ ನರೇಂದ್ರ ಮೋದಿ ಅವರ ಯೋಜನೆಗಳಿಂದಾಗಿ ೩೫ ಹಳ್ಳಿಗಳು  ಮುಳುಗುತ್ತಿವೆ.  ಅವರ ಉಳಿವಿ­ಗಾಗಿ ಜನ ಬೀದಿಗಿಳಿದಿದ್ದಾರೆ. ಪರಿಹಾರ ಯೋಜನೆ ಅವರನ್ನು ಉಳಿಸಬಲ್ಲದೆ? ಬಂಗಾಳದ ನಂದಿ­­­ಗ್ರಾಮದ ಯೋಜನೆಯಿಂದ ರಾಜಕೀಯ ಪೈಪೋಟಿ ಹಲವು ತಿರುವುಗಳೊಂದಿಗೆ ಕಮ್ಯೂ­ನಿಸ್ಟ್‌ ಪಕ್ಷ ಅಧಿಕಾರ ಕಳೆದುಕೊಂಡಿತು.ನೋಡುತ್ತಾ ಹೋದರೆ ಭಾರತದ ಹಳ್ಳಿಗಳು ತಮ್ಮ ಸ್ವರೂಪನ್ನು ಬದಲಾಯಿಸಿಕೊಳ್ಳಬೇಕಾದ ಸಂದರ್ಭ ನಿಜ. ಆದರೆ ಹೀಗೆ ಅಸಹಾ­ಯಕತೆ­ಯಲ್ಲಿ ಕೊನೆಗೊಳ್ಳುವುದು ನೋವಿನ ಸಂಗತಿ. ತಾತ, ಮುತ್ತಾತನ ಕಾಲದಿಂದ  ನೆಲೆಸಿದ್ದ ಸ್ಥಳ, ಆ ಜಾಗದಲ್ಲಿ ಅವರು ಕಟ್ಟಿಕೊಂಡಿದ್ದ ಸಂಸ್ಕೃತಿ, ನೆಲ­­ದೊಂದಿಗಿನ ಕಳ್ಳುಬಳ್ಳಿಯ  ಸಂಬಂಧ ಇದ­ಕ್ಕೆಲ್ಲಾ ಹಣದ ರೂಪದಲ್ಲಿ ಪರಿಹಾರ ಕೊಡ­ಬಲ್ಲರೆ?­ ನೆಲದ ನಂಟನ್ನು ಕಸಿದುಕೊಳ್ಳುವ ಅಭಿ­ವೃದ್ಧಿ ಯೋಜನೆಗಳ ಹುನ್ನಾರವೇ ಪರಿಹಾರ, ಪುನರ್ವಸತಿ.ಆಧುನಿಕ ಮಾನವ, ನಗರಗಳನ್ನು ನಿರ್ಮಿಸು­ವುದ­ರಲ್ಲೇ ‘ಮೋಕ್ಷ’ ಕಂಡುಕೊಂಡಂತಿದೆ.  ನಗರ­ವಾಸಿಗಳ ಅನುಕೂಲಕ್ಕಾಗಿ ಶಾಲೆ, ಕಾಲೇಜು ವಿಶ್ವ­ವಿದ್ಯಾಲಯ ಹೀಗೆ ದೊಡ್ಡ ದೊಡ್ಡ ಹೆಸರಿನ ಸಂಸ್ಥೆ­ಗಳನ್ನು ಕಟ್ಟಲು ಭೂಮಿ ವಶಪಡಿಸಿ­ಕೊಳ್ಳು­ವುದು ಹೇಗೆಂದು ಕಾಯ್ದೆ ರೂಪಿಸಲು ಸಾಧ್ಯ­ವಾಗು­ತ್ತದೆ. ಆದರೆ ಅದೇ ಹಳ್ಳಿ ಅಭಿವೃದ್ಧಿ ಯೋಜನೆಗಳು ಕನಸೇ ಆಗಿ ಉಳಿಯುತ್ತವೆ.ಇಡೀ ಕಾನೂನಿನ ಅಂತರಾಳ ನಗರ ವಿಸ್ತರಿಸಬೇಕು, ಕೈಗಾರಿಕೆ ಹೆಚ್ಚಬೇಕು. ತ್ರಾಸ­ವಿಲ್ಲದಂತೆ ಹಳ್ಳಿಗಳನ್ನು ತೊಡೆದು ಹಾಕಬೇಕು. ರೈತನ ಸ್ವಾಭಿಮಾನವನ್ನು ಕಸಿದು ನಗರದ ಸೇವೆಗೆ ಹಚ್ಚಬೇಕು. ಭೂಮಿ ಒಡೆತನ ಅದು ಬಂಡ­­ವಾಳ­­ಗಾರನ ಕಣ್ಣು ಬೀಳುವವರೆಗೆ ಮಾತ್ರ. ಬಹಳ ನಾಜೂಕಾಗಿ ರೂಪಿಸಿರುವ ಕಾಯ್ದೆ. ವಸಾ­­ಹತು ನೀತಿಗಿಂತಲೂ ನಾಜೂಕಾದ ಭಾಷೆ ಬಳ­ಸಿದ ಕಾಯ್ದೆ. ಒಟ್ಟಿನಲ್ಲಿ ಮನೆಯಂಗಳದಲ್ಲಿ ಆಡುವ ಕೂಸಿನ ಕೈಗೆ ಮಿಠಾಯಿ ಕೊಟ್ಟು ಜೀತಕ್ಕೆ ಬಿಟ್ಟಂತಾಗಿದೆ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.