ಗುರುವಾರ , ಮೇ 28, 2020
27 °C

ಹೊಸ ವರುಷವಾದರೂ ಆಗುವುದೇ ಹಗರಣ ಮುಕ್ತ?

ಆರ್. ಇಂದಿರಾ Updated:

ಅಕ್ಷರ ಗಾತ್ರ : | |

ಇನ್ನೇನು ಮತ್ತೊಂದು ವರುಷ ಇತಿಹಾಸದ ಕಾಲಗರ್ಭದಲ್ಲಿ ಸೇರಿ ಹೋಗಲಿದೆ. ಇದರಲ್ಲೇನಿದೆ ವಿಶೇಷ, 365 ದಿನಗಳು ಕಳೆದು ಹೋಗುತ್ತಿದ್ದ ಹಾಗೆ ಹಳೆಯ ವರುಷ ಹೋಗಿ, ಹೊಸ ವರುಷವೊಂದು ಉದಯವಾಗುತ್ತದೆ, ಇದು ಕಾಲ ನಿಯಮ ಎಂದು ಈ ವಿಚಾರವನ್ನು ತಳ್ಳಿಹಾಕಿಬಿಡಬಹುದು. ಆದರೆ 2010ನ್ನು ಕುರಿತು ಹಾಗೆ ಹೇಳಲು ಸಾಧ್ಯವೇ ಇಲ್ಲ. ಏಕೆಂದರೆ ರಾಷ್ಟ್ರ ಮತ್ತು ರಾಜ್ಯ ಕಂಡ ಅತ್ಯಂತ ಆಘಾತಕಾರಿ ಘಟನೆಗಳಿಗೆ ಈ ವರ್ಷ ಸಾಕ್ಷಿ  ಯಾಗಿತ್ತು. ಭಾರತೀಯ ಪ್ರಜಾಸತ್ತೆಯ    ಬುಡಗಳನ್ನು ಅಲುಗಾಡಿಸುವಂಥ ಹಗರಣಗಳು ಹಾಗೂ ಲಜ್ಜಾಹೀನ ವ್ಯವಹಾರಗಳು ಒಂದೆಡೆ ನಡೆದರೆ, ಮತ್ತೊಂದೆಡೆ ಸಾರ್ವಜನಿಕ  ‘ಪ್ರಶ್ನೆ’,  ‘ಪ್ರತಿರೋಧ’ ಹಾಗೂ  ‘ಪ್ರತಿಭಟನೆ’ಗಳು ಹೆಚ್ಚು -ಕಡಿಮೆ ಸತ್ತೇಹೋಗಿದ್ದನ್ನೂ ನಾವು ಈ ಕಾಲಘಟ್ಟದಲ್ಲಿ ಕಾಣಬೇಕಾಯ್ತು.


 


ಬರ್ತಾ ಬರ್ತಾ ನಮ್ಮ ಸಾಮಾಜಿಕ ವ್ಯವಸ್ಥೆ ನಾಚಿಕೆ ಹಾಗೂ ಬದ್ಧತೆಗಳೆಡರನ್ನೂ ಒಟ್ಟಿಗೆ ಕಳೆದು ಕೊಳ್ತಾ ಇದೆ. ಒಂದೆಡೆ ಅನಿಯಂತ್ರಿತವಾಗಿ ವೃದ್ಧಿಸುತ್ತಿರುವ ಲೌಕಿಕ ಸಂಪತ್ತು ಹಾಗೂ ಅದರ ಅಸಹ್ಯಕರ ಪ್ರದರ್ಶನ, ಮತ್ತೊಂದೆಡೆ ಹೆಚ್ಚುತ್ತಿರುವ ಸಾಮಾನ್ಯ ಜನರ ಸೀಮಾಂತೀಕರಣ, ಇದರ ನಡುವೆ ಇದ್ಯಾವುದೂ ತಮಗೆ ಸಂಬಂಧವೇ ಇಲ್ಲವೇನೋ ಎಂಬಂತೆ ತಮ್ಮ-ತಮ್ಮ ಬದುಕಿನ ಗುರಿಗಳ ಬೆನ್ನಟ್ಟಿ ಅವುಗಳ ಸಾಧನೆಯೊಂದೇ ಏಕೈಕ ಗುರಿ ಎಂಬಂತೆ ನಡೆದುಕೊಳ್ಳುತ್ತಿರುವ ಮಧ್ಯಮ ವರ್ಗ (ಈ ವರ್ಗ ಇಂದು ಭಾರತದ ಜನ ಸಂಖ್ಯೆಯಲ್ಲಿ ಶೇಕಡ 30ರಷ್ಟಿದೆ)- ಇವು  ಗಳನ್ನೆಲ್ಲಾ ನೋಡುತ್ತಾ ಹೋದರೆ ಮುಂಬರುವ ದಿನಗಳಲ್ಲಿ ಈ ಸಮಾಜಕ್ಕೆ ಎಂಥ ಭವಿಷ್ಯ ಕಾದಿರಬಹುದು ಎಂಬ ಭಯ ಕಾಡುತ್ತಿದೆ.2010 ಬಹುಕಾಲ ನೆನಪಿನಲ್ಲಿರುವುದು ಈ ವರ್ಷ ಸುರುಳಿ ಸುರುಳಿಯಾಗಿ ಬಿಚ್ಚಿಕೊಂಡ ಹಗರಣಗಳ ಸರಮಾಲೆಯ ಕಾರಣದಿಂದಾಗಿ. ಸಾರ್ವಜನಿಕ ಜೀವನದ ಪದರಪದರಗಳಲ್ಲೂ ಭ್ರಷ್ಟಾಚಾರ ಹಾಸುಹೊಕ್ಕಾಗಿದೆ ಎನ್ನುವುದಕ್ಕೆ ಈಗ ದೇಶದಲ್ಲಿ ದಿನಕ್ಕೊಂದು ಹೊಸ ಹಗರಣವನ್ನು ಹೊರ ಚೆಲ್ಲುತ್ತಿರುವ 2ಜಿ ಸ್ಪೆಕ್ಟ್ರಮ್   ಪ್ರಕರಣಕ್ಕಿಂತ ಮತ್ತೊಂದು ನಿದರ್ಶನ ಬೇಕೆ? ಪ್ರಭಾವಿ ಮಂತ್ರಿ ಹಾಗೂ ಆತನನ್ನು ಸುತ್ತುವರೆದಿದ್ದ ಅಧಿಕಾರ ವಲಯ ದೇಶದ ಕಾಯಿದೆಗಳಿಗೆ ತೋರಿದ ದಿವ್ಯ ನಿರ್ಲಕ್ಷ್ಯದಿಂದ ಸಂಭ   ವಿಸಿದ ಈ ರಾಷ್ಟ್ರೀಯ ದುರಂತದಿಂದ ದೇಶದ ಖಜಾನೆಗೆ ಸಂಭವಿಸಿದ ನಷ್ಟ 1.76 ಲಕ್ಷ ಕೋಟಿಗಳು ಎಂದು ಹೇಳಲಾಗುತ್ತಿದೆ. ದಿನಗಳು ಕಳೆಯುತ್ತಾ ಹೋದಂತೆ ಈ ಮೊತ್ತ ಮತ್ತೆಷ್ಟು ಏರುತ್ತಾ ಹೋಗುತ್ತದೋ ತಿಳಿಯದು.ದೇಶದ ಕ್ರೀಡಾ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬಹುದಾಗಿದ್ದಂತಹ         2010ರ ಕಾಮನ್‌ವೆಲ್ತ್ ಕ್ರೀಡೆಗಳ ಆಯೋಜನೆಯಲ್ಲಿ  ನಡೆದ ವ್ಯಾಪಕ ಭ್ರಷ್ಟಾಚಾರ ಹಾಗೂ ಸ್ವಜನ ಪಕ್ಷಪಾತಗಳ ಕಾರಣದಿಂದಾಗಿ ಕುಖ್ಯಾತಿಯನ್ನು ಪಡೆದದ್ದು ನಮ್ಮ ರಾಷ್ಟ್ರ ಪ್ರಜ್ಞೆಗೆ ತಗುಲಿದ ದೊಡ್ಡ ಕಳಂಕ. ಕಾಮನ್‌ವೆಲ್ತ್ ಕ್ರೀಡೆಗಳಿಗೆ ಸಂಬಂಧಿಸಿದ ಅವ್ಯವಹಾರಗಳಿಂದ ದೇಶಕ್ಕೆ ತಗಲಿದ ನಷ್ಟ 27,000 ಕೋಟಿ ರೂಪಾಯಿಗಳು.ಈ ವರುಷ ಕಂಡ ಮತ್ತೊಂದು ಕಳವಳಕಾರಿ ಹಾಗೂ ಕಳಂಕ ಲೇಪಿತ ಹಗರಣ ಮುಂಬೈ ನಗರದ ಆದರ್ಶ ಹೌಸಿಂಗ್ ಸೊಸೈಟಿ ಎಂಬ ಬಹುಮಹಡಿ ಕಟ್ಟಡಕ್ಕೆ ಸಂಬಂಧಿಸಿದ್ದು. ದೇಶಕ್ಕಾಗಿ ದುಡಿದು - ಮಡಿದ ಹುತಾತ್ಮರ ಕುಟುಂಬಗಳು ಹಾಗೂ ದೇಶದ ರಕ್ಷಣೆಗಾಗಿ ತಮ್ಮ   ಜೀವನವನ್ನು ಮುಡಿಪಾಗಿಟ್ಟ ಹಿರಿಯರಿಗಾಗಿ ಮನೆಗಳನ್ನು ನಿರ್ಮಾಣ ಮಾಡಿಕೊಡಲು ಮಂಜೂರಾಗಿದ್ದ ಕಟ್ಟಡ ಸಂಕೀರ್ಣವನ್ನು ನಿಯಮಬಾಹಿರವಾಗಿ 6,450 ಚದರ ಮೀಟರ್ ಪ್ರದೇಶದಲ್ಲಿ 31 ಮಹಡಿಗಳಲ್ಲಿ ನಿರ್ಮಿಸಿದ್ದೇ ಅಲ್ಲದೆ, ಈ ಕಟ್ಟಡದಲ್ಲಿ ಮನೆಗಳನ್ನು ರಾಜಕಾರಣಿಗಳು ಅಥವಾ ಅವರ ಬಂಧುಗಳು, ರಕ್ಷಣಾಪಡೆಗಳ ಹಿರಿಯ ಅಧಿ  ಕಾರಿಗಳು ಹಾಗೂ ಅಧಿಕಾರಶಾಹಿ ವರ್ಗ ತಮ್ಮ ಮನಸೋಇಚ್ಛೆ ಹಂಚಿಕೊಂಡಿದ್ದು ಇಡೀ ದೇಶವೇ ತಲೆ ತಗ್ಗಿಸುವಂತಾಯ್ತು.ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದವರ ಕುಟುಂಬಗಳಿಗೆ ಆಶ್ರಯವನ್ನೊದಗಿಸಲು ಕೇವಲ 6 ಮಹಡಿಗಳ ಕಟ್ಟಡಕ್ಕೆ ಮಂಜೂರಾತಿ ನೀಡಿದ್ದಾಗ್ಯೂ 31 ಮಹಡಿಗಳು ಎದ್ದಿದ್ದು ಹೇಗೆ? ಪರಿಸರ ಸಂರಕ್ಷಣೆ ಹಾಗೂ ದೇಶ ರಕ್ಷಣೆ - ಇವೆರಡಕ್ಕೂ ಧಕ್ಕೆ ತರಬಹುದಾದ ಈ ಎತ್ತರದ ಕಟ್ಟಡದ ನಿರ್ಮಾಣಕ್ಕೆ ಸಂಬಂಧಿಸಿದ ಅಧಿಕಾರಿಗಳು ಅನುಮತಿ ನೀಡಿದ್ದಾದರೂ ಹೇಗೆ? ಕೆಲವು ಕೋಟಿಗಳ ಬೆಲೆಬಾಳುವ ಈ ಮನೆಗಳು ಕೇವಲ ಕೆಲವು ಲಕ್ಷಗಳಿಗೆ ಶ್ರೀಮಂತ, ಪ್ರಭಾವಿ ಹಾಗೂ ಆ ವೇಳೆಗಾಗಲೇ ಇತರ ಮನೆಗಳು ಅಥವಾ ನಿವೇಶನಗಳನ್ನು ಹೊಂದಿದ್ದಂಥ ವ್ಯಕ್ತಿಗಳಿಗೆ ದೊರೆತಿದ್ದಾದರೂ ಹೇಗೆ? ದೇಶ ಕಂಡಿರುವ ಅತ್ಯಂತ ಹೀನಾಯವಾದ ಭೂ ಕಬಳಿಕೆ ಪ್ರಕರಣಗಳ ಸಾಲಿಗೆ ಸೇರಬಹುದಾದ ಈ ಆದರ್ಶ ಹೌಸಿಂಗ್ ಸೊಸೈಟಿಯ ಅವ್ಯವಹಾರಗಳಿಗೆ ಸಂಬಂಧಿಸಿದ ಅನೇಕ ಕಡತಗಳೇ ಮಾಯವಾಗಿದ್ದು ನಷ್ಟದ ಪ್ರಮಾಣವನ್ನೇ ಅಳೆಯಲಾಗದಂಥ ಸ್ಥಿತಿಗೆ ಈ ವ್ಯವಸ್ಥೆ ತಲುಪಿದ್ದಾದರೂ ಹೇಗೆ?ಈ ದೇಶದಲ್ಲಿ ಒಂದೇ ವರ್ಷದಲ್ಲಿ ಭ್ರಷ್ಟರ ಪಾಲದ ಹಣ ಎಷ್ಟೆಂಬುದನ್ನು ಲೆಕ್ಕಾಚಾರ ಮಾಡುವುದು ಕೂಡ ಜನಸಾಮಾನ್ಯರ ಊಹೆಗೆ ನಿಲುಕಲಾರದಂಥದು. ಹಗರಣಗಳನ್ನು ರಾಜಕೀಯ ಬಂಡವಾಳವನ್ನಾಗಿ ಮಾಡಿಕೊಂಡು ಪರಸ್ಪರ ದೋಷಾರೋಪಗಳಲ್ಲಿ ತೊಡಗಿರುವ ರಾಜಕೀಯ-ಅಧಿಕಾರಿ ವಲಯಗಳು ಜನಸಾಮಾನ್ಯರ ಬದುಕಿನ ನೈಜಸ್ಥಿತಿಗಳ ಬಗ್ಗೆ ಚಿಂತನೆ ಮಾಡಿದ್ದರೆ ಅವರಿಗೆ ತಿಳಿಯುತ್ತಿತ್ತು ಈಗ ಪೋಲಾಗಿ ಹೋಗಿರುವ ಕೋಟಿ ಕೋಟಿ ಸಾರ್ವಜನಿಕ ಹಣದ ಸದ್ಬಳಕೆಯಾಗಿದ್ದರೆ ಎಷ್ಟು ಜೀವಗಳನ್ನು ಬಡತನ, ದಾರಿದ್ರ್ಯ, ಹಸಿವು, ವಸತಿ-ಹೀನತೆ, ಅನಕ್ಷರತೆ ಮುಂತಾದ ಬವಣೆಗಳಿಂದ ರಕ್ಷಿಸಬಹುದಾಗಿತ್ತು ಎಂಬುದು.ಇಂದಿಗೂ ಈ ದೇಶದ ಶೇ 37ರಷ್ಟು ಜನಸಂಖ್ಯೆ ಬಡತನದ ರೇಖೆಯ ಕೆಳಗೆ ಬದುಕುತ್ತಿದ್ದಾರೆ. ಎಷ್ಟಿದ್ದರೂ ಸಾಲದು ಎಂದು ಸಾರ್ವಜನಿಕ ಸಂಪನ್ಮೂಲಗಳನ್ನು ಕೊಳ್ಳೆ ಹೊಡೆಯುತ್ತಿರುವ ವರ್ಗ ಒಂದೆಡೆಯಾದರೆ ದಿನಕ್ಕೆ 60 ರೂಪಾಯಿಗಳನ್ನೂ ಗಳಿಸಲಾಗದಂಥ ಪರಿಸ್ಥಿತಿಯಲ್ಲಿರುವ ಶೇ 40ರಷ್ಟು ಜನಸಂಖ್ಯೆ ಮತ್ತೊಂದೆಡೆ. ತಮ್ಮ ಅಧಿಕಾರ-ಪ್ರಭಾವ-ಅಂತಸ್ತುಗಳನ್ನು ಬಳಸಿ ಒಂದರ ನಂತರ ಮತ್ತೊಂದು ಮನೆಗಳನ್ನೂ ನಿವೇಶನಗಳನ್ನೂ ತಮ್ಮದಾಗಿಸಿಕೊಳ್ಳುತ್ತಿರುವ ಭೂಗಳ್ಳರು ಒಂದೆಡೆ ತಮ್ಮ ಪ್ರಾಬಲ್ಯವನ್ನು ಮೆರೆಸುತ್ತಿದ್ದರೆ, ಮತ್ತೊಂದೆಡೆ ವರ್ಷದಿಂದ ವರ್ಷಕ್ಕೆ ಬೀದಿ ಬದಿಗಳಲ್ಲೇ ತಮ್ಮ ಬದುಕನ್ನು ಸವೆಸುವವರ ಸಂಖ್ಯೆ ಹೆಚ್ಚಾಗುತ್ತಿದೆ ಎಂದು ವರದಿಗಳು ತಿಳಿಸುತ್ತಿವೆ.ಆದರ್ಶ ಹಗರಣಕ್ಕೆ ಸಾಕ್ಷಿಯಾದ ಮುಂಬೈ ನಗರದ ಜನಸಂಖ್ಯೆಯಲ್ಲಿ ಶೇ 60ರಷ್ಟು ವಾಸಿಸುತ್ತಿರುವುದು ಕೊಳಚೆ ಪ್ರದೇಶಗಳಲ್ಲಿ! ಇದೇ ನಗರದಲ್ಲಿ ಸುಮಾರು 10ಲಕ್ಷ ಜನರಿಗೆ ತಲೆಯ ಮೇಲೆ ಸೂರೇ ಇಲ್ಲ. 2010ರ ಹಗರಣಗಳಲ್ಲಿ ಕರಗಿಹೋದ ಹಣದ  ‘ಸಾಮಾಜಿಕ ಲೆಕ್ಕ ಪರಿ    ಶೋಧ’ ವನ್ನೇನಾದರೂ ನಾವು ಮಾಡುತ್ತಾ ಹೊರಟರೆ ಸಾರ್ವಜನಿಕ ಬೊಕ್ಕಸಕ್ಕೆ ಸಂಭ    ವಿಸಿರುವ ಅಪಾರ ಪ್ರಮಾಣದ ನಷ್ಟದ ಒಂದು ಇಣುಕುನೋಟವಾದರೂ ನಮಗೆ ದೊರೆಯಬಹುದೇನೋ?ದೇಶದ ವಿವಿಧೆಡೆಗಳಲ್ಲಿ ನಡೆಯುತ್ತಿರುವ ಹಗರಣಗಳಿಗೆ ಕರ್ನಾಟಕದ ಕೊಡುಗೆಯೇನೂ ಕಡಿಮೆಯಿರಲಿಲ್ಲ. ಅಧಿಕಾರವನ್ನು ಗಳಿಸಲು, ಗಳಿಸಿದ ಅಧಿಕಾರವನ್ನು ಉಳಿಸಿಕೊಳ್ಳಲು ಹಾಗೂ ತಮ್ಮ ದಾರಿಗೆ ಅಡ್ಡಿಯಾದವರನ್ನು ಅಧಿಕಾರದಿಂದ ಕೆಳಗಿಳಿಸಲು ಅಧಿಕಾರಾರೂಢ ವ್ಯವಸ್ಥೆ ಎಷ್ಟು ತಳಮಟ್ಟಕ್ಕೆ ಇಳಿಯಬಹುದು ಎಂಬುದನ್ನು ತೋರಿಸಿದ ರಾಜಕೀಯ ವಲಯ ಹೆಚ್ಚು ಕಡಿಮೆ ಇಡೀ ವರ್ಷವನ್ನು ಕಳೆದದ್ದು ಪರಸ್ಪರ ಕೆಸರೆರಚಾಟದಲ್ಲಿ. ಜನರ ಬದುಕಿನ ಬವಣೆಗಳ ಬಗ್ಗೆ ಘೋರ ಉದಾಸೀನತೆಯನ್ನು ಪ್ರದರ್ಶಿಸಿದ ಅಧಿಕಾರವಲಯ ಅಮೂಲ್ಯ    ‘ಆಡಳಿತ ಸಮಯದ’ ಬಹು ಭಾಗವನ್ನು ಕಳೆದದ್ದು ಇತರರು ಭಾಗಿಗಳಾಗಿದ್ದ ಹಗರಣಗಳನ್ನು ಕೆದಕಿ ತೆಗೆಯುವುದರಲ್ಲಿ. ಬಹಳ ಕಡೆಗಳಲ್ಲಿ ಆಡಳಿತ ಯಂತ್ರ ಹೆಚ್ಚು ಕಡಿಮೆ ಸ್ಥಗಿತವಾಗಿರುವುದು ಇದಕ್ಕೆ ಸಾಕ್ಷಿ.ಗಣಿಗಾರಿಕೆಯಿರಬಹುದು, ಬಂಡವಾಳ ಹೂಡಿಕೆ ಸಮಾವೇಶವಿರಬಹುದು. ಭೂ ಕಬಳಿಕೆಯಿರಬಹುದು, ಸೀರೆ ಹಂಚಿಕೆಯಿರಬಹುದು, ಚುನಾವಣಾ ಪ್ರಚಾರಗಳಿರಬಹುದು, ರೆಸಾರ್ಟ್ ವಾಸ್ತವ್ಯ ಹಾಗೂ ತತ್ಸಂಬಂಧಿ ಓಡಾಟಗಳಿರಬಹುದು. ಸಾಧನಾ ಸಮಾವೇಶಗಳಿರಬಹುದು - ಇವುಗಳಿಗೆಲ್ಲಾ ವೆಚ್ಚವಾಗಿರುವ ರಾಜ್ಯದ ಸಾರ್ವಜನಿಕ ಸಂಪನ್ಮೂಲಗಳ ಪ್ರಮಾಣವನ್ನು ಅಳೆಯಲು ಸಾಧ್ಯವೇ? ದಿನಕ್ಕೊಂದು ಹೊಸ ತಿರುವನ್ನು ಪಡೆದುಕೊಳ್ಳುತ್ತಿರುವಂಥ ಹಗರಣಗಳು ಜಗತ್ತಿನ ಕಣ್ಣಲ್ಲಿ ರಾಜ್ಯದ ಸ್ಥಾನವನ್ನು ಎಷ್ಟು ತಳ ಮಟ್ಟಕ್ಕೆ     ಇಳಿಸಿವೆ ಎಂದರೆ ಈ ವರ್ಷ ‘ಅತ್ಯಂತ ಭ್ರಷ್ಟ ರಾಜ್ಯ’,  ‘ಆಡಳಿತ ವಿಹೀನ ರಾಜ್ಯ’ ಮುಂತಾದ ಅವಮಾನಕಾರಿ ಬಿರುದುಗಳಿಗೆ ಕರ್ನಾಟಕ ಭಾಜನವಾಗಬೇಕಾದಂಥ ಪರಿಸ್ಥಿತಿ  ಸೃಷ್ಟಿಯಾಯಿತು.ಇಷ್ಟೆಲ್ಲಾ ನಕಾರಾತ್ಮಕ ಬೆಳವಣಿಗೆಗಳಿಂದ ನಾವು ಪಾಠ ಕಲಿತ ಹಾಗಿಲ್ಲ. ವರ್ಷಾಂತ್ಯದಲ್ಲಿ ನಡೆಯಲಿರುವ ಪಂಚಾಯತಿ ಚುನಾವಣೆಗಳನ್ನು ಈಗಾಗಲೇ ಸುತ್ತುವರೆದಿರುವ ವಿವಾದಗಳು ಮತ್ತೊಂದು ಹಗರಣದ ಪ್ರಕರಣ ಸನ್ನಿ  ಹಿತವಾಗುತ್ತಿರುವ ಎಲ್ಲ ಸೂಚನೆಗಳನ್ನೂ ನೀಡುತ್ತಿದೆ. ಈಗಾಗಲೇ ಮತದಾರರನ್ನು ಓಲೈಸಲು ಮದ್ಯದ ಸರಬರಾಜಿನಿಂದ ಹಿಡಿದು ಅವರ ಮಕ್ಕಳಿಗೆ ಕೈಗಡಿಯಾರಗಳನ್ನು ವಿತರಿ  ಸುವವರೆಗೂ ನೇರವಾಗಿಯೇ ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡುತ್ತಿರುವ ರಾಜಕೀಯ ಪಕ್ಷಗಳು ಚುನಾವಣಾ ನೀತಿ ಸಂಹಿತೆಯ ಮರ್ಯಾದೆಯನ್ನಷ್ಟೇ ಅಲ್ಲ, ಜವಾಬ್ದಾರಿಯುತ ಸಾರ್ವ  ಜನಿಕ ಸ್ಥಾನಗಳ ಗೌರವವನ್ನೂ ಗಾಳಿಗೆ ತೂರುತ್ತಿವೆ. ಮಾಧ್ಯಮಗಳಲ್ಲಿ ಮೂಡಿ ಬರುತ್ತಿರುವ ಸಚಿತ್ರ ವರದಿಗಳು, ವಿರೋಧ ಪಕ್ಷಗಳ ಪ್ರತಿ    ಭಟನೆಗಳು ಹಾಗೂ ಜನರಿಂದ ಬರುತ್ತಿರುವ ಚುನಾವಣೆಯ ಬಹಿಷ್ಕಾರದ ಬೆದರಿಕೆಗಳ ನಡುವೆಯೂ ರಾಜಕೀಯ ಬಲಾಬಲ ಪ್ರದರ್ಶನಕ್ಕೆ ನಿಂತಿರುವ ಜನನಾಯಕರ ಧೋರಣೆಗಳನ್ನು ನೋಡಿದರೆ ಈ ರಾಜ್ಯ ಎತ್ತ ಸಾಗುತ್ತಿದೆ ಎನ್ನುವುದಕ್ಕೆ ಸ್ಪಷ್ಟ ಸೂಚನೆಗಳು  ದೊರೆಯುತ್ತವೆ.ಹಿಂದೆಂದಿಗಿಂತ ಇಂದು ಪ್ರಜಾಪ್ರಭುತ್ವದ ಮೌಲ್ಯಗಳು ಅಪಾಯದಲ್ಲಿರುವುದನ್ನು ಸೂಚಿಸುವ ಕರೆಗಂಟೆಗಳು ಬಹಳ ಗಟ್ಟಿಯಾಗಿ ಬಾರಿಸುತ್ತಿವೆ. ಈಗಲಾದರೂ ನಾಗರಿಕ ಸಮಾಜ ಎಚ್ಚೆತ್ತುಕೊಂಡು ಭ್ರಷ್ಟ ಶಕ್ತಿಗಳನ್ನೂ ಸಮಯ ಸಾಧಕರನ್ನೂ ಎದುರಿಸಿ ಎಚ್ಚರಿಸದಿದ್ದರೆ ಅವರ ಆಟಾಟೋಪಗಳು ಹೀಗೆಯೇ ಮುಂದುವರೆಯುವುದಷ್ಟೇ ಅಲ್ಲ, ಒಂದು ದಿನ ನಮ್ಮ ಸಾಮಾಜಿಕ ವ್ಯವಸ್ಥೆ ಹರಿದು ಚೂರಾಗುತ್ತದೆ, ಭವಿಷ್ಯದ ತಲೆಮಾರು ನಮ್ಮನ್ನು ಅಗೌರವದಿಂದ ನೋಡುತ್ತದೆ ಹಾಗೂ ಇಡೀ ದೇಶದಲ್ಲಿ ನಾವು ನಗೆಪಾಟಲಿಗೆ ಗುರಿಯಾಗುತ್ತೇವೆ.ಮುಂಬರಲಿರುವ ವರ್ಷದಲ್ಲಾದರೂ ಈ ಹಗರಣಗಳು ಮತ್ತೆ ಮರುಕಳಿಸದಿರುವಂತೆ ಸಾರ್ವಜನಿಕ ಪ್ರಜ್ಞೆ ಜಾಗೃತವಾಗಿ ಕಾರ್ಯಪ್ರವೃತ್ತವಾಗಬೇಕು. ಮನೆ-ಮನೆಗಳಲ್ಲಿ, ನೆರೆಹೊರೆಗಳಲ್ಲಿ ಉದ್ಯೋಗ ಸ್ಥಳಗಳಲ್ಲಿ, ಚಾವಡಿ-ಕಟ್ಟೆಗಳಲ್ಲಿ, ಮಾಧ್ಯಮಗಳಲ್ಲಿ, ಶೈಕ್ಷಣಿಕ ಹಾಗೂ ಇತರ ನಾಗರಿಕ ವೇದಿಕೆಗಳಲ್ಲಿ ಹೆಚ್ಚು ಹೆಚ್ಚು ಜನರು ಧೈರ್ಯದಿಂದ ಸಮಾಜ ಘಾತುಕ ಶಕ್ತಿಗಳನ್ನು ಕಿತ್ತೊಗೆಯುವ ಬಗ್ಗೆ ಚರ್ಚೆಯಲ್ಲಿ ತೊಡಗಬೇಕು, ಕಾರ್ಯಪ್ರವೃತ್ತರಾಗಬೇಕು. ಈ ಪ್ರಮಾಣದ ಜನಾಂದೋಲನದಿಂದ ಮಾತ್ರ ಹೊಸ ದಾರಿಯ ಅನ್ವೇಷಣೆ ಸಾಧ್ಯ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.