ಹೊಸ ವರ್ಷದಲ್ಲಿ ನೆನಪಿಡಬೇಕಾದ 'ಒಬಾಮ ಮಾತುಗಳು'

7

ಹೊಸ ವರ್ಷದಲ್ಲಿ ನೆನಪಿಡಬೇಕಾದ 'ಒಬಾಮ ಮಾತುಗಳು'

Published:
Updated:
ಹೊಸ ವರ್ಷದಲ್ಲಿ ನೆನಪಿಡಬೇಕಾದ 'ಒಬಾಮ ಮಾತುಗಳು'

ನಮ್ಮ ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಂತೆಯೇ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರೂ ವಿಶ್ವವೇ ಗೌರವಿಸುವ ಬುದ್ಧಿಜೀವಿ. ಅವರಲ್ಲಿ ಚರಿಷ್ಮಾ ಇರಲಿಲ್ಲ, ಅವರು ಬಲಾಢ್ಯರಾಗಿರಲಿಲ್ಲ (ಉದಾಹರಣೆ: ಸಿಂಗ್) ಅಥವಾ ಅವರು ಜನಾಂಗೀಯ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ್ದರು (ಉದಾಹರಣೆ: ಒಬಾಮ) ಎಂಬ ಕಾರಣಕ್ಕೆ ಸಿಂಗ್ ಮತ್ತು ಒಬಾಮ 'ವಿಫಲ ನಾಯಕರು' ಎಂದು ಕೆಲವರು ಅಂದುಕೊಂಡಿದ್ದರೂ, ಅದು ಇವರಿಬ್ಬರ ವಿಚಾರದಲ್ಲಿ ಮುಖ್ಯವಲ್ಲ. ಇತರ ಕೆಲವು ನಾಯಕರಷ್ಟು ಮಾತನಾಡದೇ ಇದ್ದರೂ, ಇವರಿಬ್ಬರೂ ಮೇಧಾವಿಗಳು. ಇವರಿಬ್ಬರ ಮಾತುಗಳನ್ನು ಆಲಿಸಿದರೆ ತೃಪ್ತಿ ಎಂಬುದು ಸಹಜವಾಗಿಯೇ ಸಿಗುತ್ತದೆ.

ಒಬಾಮ ಅವರು ಬ್ರಿಟನ್ನಿನ ರಾಜಕುಮಾರ ಹ್ಯಾರಿ ಅವರಿಗೆ ಕೆಲವು ದಿನಗಳ ಹಿಂದೆ ಅದ್ಭುತವಾದ ಒಂದು ಸಂದರ್ಶನ ನೀಡಿದರು. ಸಾಮಾಜಿಕ ಜಾಲತಾಣಗಳು ಮತ್ತು ಅವುಗಳು ಆಧುನಿಕ ಜಗತ್ತಿನ ಮೇಲೆ ಬೀರುವ ಪರಿಣಾಮಗಳ ಕೆಲವು ಆಯಾಮಗಳ ಬಗ್ಗೆ ಒಬಾಮ ಮಾತನಾಡಿದರು. ಸಮಾನ ಆಸಕ್ತಿ ಇರುವವರಿಗೆ ಒಂದೆಡೆ ಸೇರಲು, ಒಬ್ಬರನ್ನು ಇನ್ನೊಬ್ಬರು ತಿಳಿದುಕೊಳ್ಳಲು, ಸಂಪರ್ಕದಲ್ಲಿ ಇರಲು ಸಾಮಾಜಿಕ ತಾಲತಾಣಗಳು ನಿಜವಾಗಿಯೂ ಶಕ್ತಿಶಾಲಿ ಸಾಧನಗಳು ಎಂಬುದನ್ನು ಒಪ್ಪಿಕೊಂಡರು. ಇಷ್ಟನ್ನು ಹೇಳಿದ ಒಬಾಮ, ಇನ್ನೊಂದು ಮಾತನ್ನೂ ಸೇರಿಸಿದರು: 'ಇವೆಲ್ಲ ಏನೇ ಇದ್ದರೂ, ಜನ ಇಂಟರ್ನೆಟ್ ಲೋಕದಿಂದ ಹೊರಗಡೆಯೂ ಬರಬೇಕಾಗುತ್ತದೆ. ಅವರು ಪಬ್ಬಿಗೆ ಹೋಗಿ ಜನರ ಜೊತೆ ಬೆರೆಯಬೇಕು, ಪೂಜಾ ಕೇಂದ್ರಗಳಿಗೆ ತೆರಳಿ ಜನರನ್ನು ಭೇಟಿ ಮಾಡಬೇಕು, ಮನೆಗೆ ಸಮೀಪದ ಸ್ಥಳಗಳಲ್ಲಿ ಭೇಟಿ ಮಾಡಿ, ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳಬೇಕು. ಇವೆಲ್ಲವೂ ಬಹಳ ಮುಖ್ಯ' ಎಂದರು.

ಈ ಮಾತುಗಳಿಗೆ ಒಬಾಮ ನೀಡಿದ ಕಾರಣ: 'ಇಂಟರ್ನೆಟ್ ಜಗತ್ತಿನಲ್ಲಿ ಎಲ್ಲವನ್ನೂ ಸರಳೀಕರಿಸಿ ನೋಡಲಾಗುತ್ತದೆ. ಆದರೆ ಮನುಷ್ಯರು ಸಂಕೀರ್ಣ ಜೀವಿಗಳು ಎಂಬುದು ಅವರನ್ನು ಖುದ್ದಾಗಿ ಭೇಟಿ ಮಾಡಿದಾಗ ಗೊತ್ತಾಗುತ್ತದೆ. ಇಂಟರ್ನೆಟ್‌ನಲ್ಲಿ ಕಾಣುವುದಕ್ಕಿಂತ ಸಂಪೂರ್ಣ ಬೇರೆಯದೇ ಆದ ವ್ಯಕ್ತಿತ್ವವನ್ನು ಜನ ಹೊಂದಿರಬಹುದು. ಇದು ಇಂಟರ್ನೆಟ್‌ನ ಅಪಾಯಗಳಲ್ಲೊಂದು. ಜನರಲ್ಲಿ ಈಗಾಗಲೇ ಇರುವ ಪೂರ್ವಗ್ರಹಗಳನ್ನು ಇನ್ನಷ್ಟು ಗಟ್ಟಿಮಾಡುವ ಮಾಹಿತಿಯ ಹೊದಿಕೆಯನ್ನು ಇಂಟರ್ನೆಟ್ ಜನರ ಮೇಲೆ ಹಾಕಬಹುದು'.

ನಾವು ಇಂಟರ್ನೆಟ್ಟನ್ನು ಬಳಸುತ್ತಿರುವ ಬಗೆಯ ಕುರಿತು ಒಬಾಮ ಅವರು ಮಹತ್ವದ್ದೇನನ್ನೋ ಅರ್ಥಮಾಡಿಕೊಂಡಿದ್ದಾರೆ ಎಂಬುದು ನನ್ನ ಭಾವನೆ. ನಾನು ವೈಯಕ್ತಿಕವಾಗಿ ಸಾಮಾಜಿಕ ಜಾಲತಾಣಗಳನ್ನು ಬಳಸುವುದಿಲ್ಲ. ಏಕೆಂದರೆ ಅವು ನಮ್ಮ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಲು ಬಿಡುವುದಿಲ್ಲ. ಆದರೆ, ವೆಬ್‌ಸೈಟ್‌ಗಳಲ್ಲಿ ಪ್ರಕಟವಾದ ಲೇಖನಗಳಿಗೆ ಬರುವ ಪ್ರತಿಕ್ರಿಯೆಗಳನ್ನು ಓದಿದಾಗಲೆಲ್ಲ ನನ್ನ ಮನಸ್ಸಿಗೆ ಬೇಸರವಾಗುತ್ತದೆ. ಆ ಪ್ರತಿಕ್ರಿಯೆಗಳಲ್ಲಿ ವ್ಯಕ್ತವಾಗಿರುವ ಸಿಟ್ಟು, ವಿಷಕಾರುವಿಕೆ ಮತ್ತು ಭಾಷೆಯ ಬಳಕೆಯಲ್ಲಿ ಸಂಯಮ ಇಲ್ಲದಿರುವುದನ್ನು ಕಂಡಾಗ ಯಾರಿಗಾದರೂ ಬೇಸರ ಆಗುತ್ತದೆ.

ಆದರೆ, ಅಂತರ್ಜಾಲದಲ್ಲಿನ ಪ್ರತಿಕ್ರಿಯೆಗಳಲ್ಲಿ ಕಾಣಿಸುವಂತಹ ಅಸಹ್ಯಗಳನ್ನು ನಾವು ನಮ್ಮ ದೈನಂದಿನ ಜೀವನದಲ್ಲಿ ಕಾಣುವುದಿಲ್ಲ. ಇಬ್ಬರು ವ್ಯಕ್ತಿಗಳು ಮುಖಾಮುಖಿಯಾಗಿ ಕುಳಿತುಕೊಂಡು ಧರ್ಮ ಅಥವಾ ರಾಜಕೀಯದ ಬಗ್ಗೆ ಚರ್ಚೆ ನಡೆಸುವಾಗ, ಆ ಚರ್ಚೆಯು ದೂಷಿಸುವ, ಹೆಸರು ಹೇಳಿ ನಿಂದಿಸುವ ಮಟ್ಟಕ್ಕೆ ಹೋಗುವುದಿಲ್ಲ. ಇಂಟರ್ನೆಟ್ ಲೋಕದಲ್ಲಿ ಅಜ್ಞಾತವಾಗಿಯೇ ಉಳಿದುಬಿಡುವ ಅವಕಾಶ ಜನರಿಗೆ ಇರುವ ಕಾರಣ, ಅಲ್ಲಿ ಕಟು ಪದಗಳನ್ನು ಬಳಸಲು ಧೈರ್ಯ ಬರುತ್ತದೆ. ವೈಯಕ್ತಿಕವಾಗಿ ಭೇಟಿಯಾದಾಗ ನಾವು ಸಮತೋಲನದಿಂದ ಮಾತನಾಡುತ್ತೇವೆ. ಏಕೆಂದರೆ ನಮ್ಮನ್ನು ಇತರರು ಗಮನಿಸುತ್ತಾರೆ ಎಂಬ ಅರಿವು ಇರುತ್ತದೆ.

ಇಂಟರ್ನೆಟ್ ಜಗತ್ತಿನಲ್ಲಿ ಇನ್ನೊಬ್ಬರು ಏನು ಹೇಳುತ್ತಿದ್ದಾರೆ ಎಂಬುದಕ್ಕೆ ಸ್ಪಷ್ಟವಾಗಿ, ನಿರ್ದಿಷ್ಟವಾಗಿ ಗಮನ ಕೊಡದೇ ಇದ್ದರೆ, ಎದುರಿನ ವ್ಯಕ್ತಿಯ ದೃಷ್ಟಿಕೋನ ನಮಗೆ ಗೊತ್ತಾಗುವುದೇ ಇಲ್ಲ ಎಂಬ ಮಹತ್ವದ ಅಂಶವನ್ನೂ ಒಬಾಮ ಹೇಳಿದ್ದಾರೆ. ವಾಸ್ತವ ಜಗತ್ತಿನಲ್ಲಿ ನಾವು ಒಬ್ಬ ವ್ಯಕ್ತಿಯ ಜೊತೆ ಮಾತನಾಡುವಾಗ, ಅವನ ಮಾತುಗಳನ್ನೂ ಆಲಿಸಬೇಕಾಗುತ್ತದೆ. ನಾವು ತೀರಾ ಬಲವಾಗಿ ನಂಬಿಕೊಂಡು ಬಂದಿರುವ ವಿಚಾರಗಳು, ನಮ್ಮಲ್ಲಿನ ಪೂರ್ವಗ್ರಹಗಳು ಆಗ ಅಷ್ಟೊಂದು ತೀವ್ರವಾಗಿ ಇರುವುದಿಲ್ಲ.

ಒಬಾಮ ಅವರು ನಮಗೆ ನೀಡಿರುವ ಈ ಒಳನೋಟದಲ್ಲಿ ಕೆಲವು ಮುಖ್ಯ ಅಂಶಗಳಿವೆ. ಮೊದಲನೆಯದು: ತಮ್ಮ ಕೆಲಸಗಳ ಮೂಲಕ ಬದಲಾವಣೆ ತರುವ ಉದ್ದೇಶ ಇರುವ ಸಾಮಾಜಿಕ ಕಾರ್ಯಕರ್ತರು ಮತ್ತು ರಾಜಕಾರಣಿಗಳು ಜನರನ್ನು ಇಂಟರ್ನೆಟ್‌ನಿಂದ ಆಚೆಯೂ ಭೇಟಿ ಮಾಡುವುದರ ಅಗತ್ಯ ಬಹಳ ಇದೆ.

ನಾನು ಕೆಲಸ ಮಾಡುವ ಸ್ಥಳಕ್ಕೆ ಜಿಗ್ನೇಶ್ ಮೆವಾನಿ ಅವರು ಕೆಲವು ವಾರಗಳ ಹಿಂದೆ ಬಂದಿದ್ದರು, ತಮ್ಮ ವಿಚಾರಗಳ ಬಗ್ಗೆ, ತಮ್ಮಲ್ಲಿನ ಮಹತ್ವಾಕಾಂಕ್ಷೆಗಳ ಬಗ್ಗೆ ಮಾತನಾಡಿದರು. ಚುನಾವಣಾ ರಾಜಕೀಯದ ಬಗ್ಗೆ ಪ್ರಶ್ನಿಸಿದಾಗ, ಅದು ಅಲ್ಪಾವಧಿಯ ಗುರಿಯಲ್ಲ, ಹತ್ತು ಅಥವಾ ಹದಿನೈದು ವರ್ಷಗಳ ನಂತರದಲ್ಲಿ ತಾವು ಚುನಾವಣೆಯಲ್ಲಿ ಜಯ ಸಾಧಿಸಬಹುದು ಎಂದು ಉತ್ತರಿಸಿದ್ದರು. ಆದರೆ ಅದಾದ ಕೆಲವೇ ದಿನಗಳ ನಂತರ, ಭಾರತದಲ್ಲೇ ಅತಿಹೆಚ್ಚು ವಿಭಜನೆಗೆ ಒಳಗಾಗಿರುವ ಒಂದು ರಾಜ್ಯದಲ್ಲಿ ಜಿಗ್ನೇಶ್ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸುಲಭದ ಗೆಲುವು ಸಾಧಿಸಿದರು. ಹೀಗೆ ಗೆಲ್ಲುತ್ತೇನೆ ಎಂಬುದು ಅವರಿಗೂ ಗೊತ್ತಿತ್ತೋ ಇಲ್ಲವೋ! ಎರಡೇ ಪಕ್ಷಗಳು ಇರುವ ರಾಜ್ಯದಲ್ಲಿ, ಒಂದು ಚುನಾವಣಾ ಚಿಹ್ನೆಯೂ ಇಲ್ಲದೆ, ತಾವು ಸಂಪಾದಿಸಿದ ವಿಶ್ವಾಸಾರ್ಹತೆಯನ್ನು ಮಾತ್ರ ನೆಚ್ಚಿಕೊಂಡು ಅವರು ಗೆಲುವು ಸಾಧ್ಯವಾಗಿಸಿಕೊಂಡಿದ್ದು ಹೇಗೆ? ಜನರ ಮನಸ್ಸಿಗೆ ಒಪ್ಪುವಂತೆ ಮಾತನಾಡುವ ಜಿಗ್ನೇಶ್ ಅವರು ಸಹಸ್ರಾರು ಜನರನ್ನು ವೈಯಕ್ತಿಕವಾಗಿ ಭೇಟಿ ಮಾಡುವ ಮೂಲಕ ಇದನ್ನು ಸಾಧ್ಯವಾಗಿಸಿಕೊಂಡರು ಎಂಬುದು ನನ್ನ ಊಹೆ.

ಅದೇ ರೀತಿ, ಮಾನವ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ನನ್ನಂತಹ ಕಾರ್ಯಕರ್ತನಿಗೆ ಕೂಡ ಜನರ ಜೊತೆ ನೇರವಾಗಿ ಭೌತಿಕ ಸಂಪರ್ಕ ಸಾಧಿಸುವುದು ಬಹುಮುಖ್ಯ. ಸಾಮಾಜಿಕ ಕಾರ್ಯಕರ್ತರ ಜಗತ್ತಿನಲ್ಲಿ ಕೂಡ ಸಾಮಾಜಿಕ ಜಾಲತಾಣಗಳಿಗೆ ಒತ್ತು ನೀಡಲಾಗುತ್ತಿದೆ. ಏಕೆಂದರೆ ಜನರನ್ನು ಹೆಚ್ಚಿನ ಪ್ರಮಾಣದಲ್ಲಿ ತಲುಪಲು ಇವು ಅತ್ಯಂತ ಪರಿಣಾಮಕಾರಿ ಸಾಧನಗಳು. ಹೀಗಿದ್ದರೂ, ಒಬಾಮ ಹೇಳಿರುವಂತೆ, ಈ ಮಾಧ್ಯಮಗಳಲ್ಲಿ ಕೃತಕ ಧ್ರುವೀಕರಣಗಳು ಆಗಿಬಿಟ್ಟಿವೆ.

ಅಂಚಿನ ಸಮುದಾಯಗಳಾದ ಮುಸ್ಲಿಮರು, ದಲಿತರು, ಆದಿವಾಸಿಗಳು, ಕಾಶ್ಮೀರಿಗಳು ಅಥವಾ ಈಶಾನ್ಯ ರಾಜ್ಯಗಳ ಜನರ ಹಕ್ಕುಗಳ ಪರ ಕೆಲಸ ಮಾಡುತ್ತಿರುವವರಿಗೆ ತಕ್ಷಣಕ್ಕೆ ಎದುರಾಗುವುದು 'ಇಂತಹ ಪ್ರಜೆಗಳ ಹಕ್ಕುಗಳಿಗಿಂತಲೂ, ಸೇನೆಯ ಹಕ್ಕುಗಳು ಹೆಚ್ಚು ಮುಖ್ಯ' ಎಂಬಂತಹ ಪ್ರತಿಕ್ರಿಯೆಗಳು. ಇಂತಹ ದೃಷ್ಟಿಕೋನವನ್ನು ಇಂಟರ್ನೆಟ್ ಮೂಲಕ ಬಹಳ ಸುಲಭವಾಗಿ ಹರಡಬಹುದು. ಆದರೆ ಇನ್ನೊಬ್ಬ ವ್ಯಕ್ತಿಯ ಜೊತೆ ಖುದ್ದಾಗಿ ಮಾತನಾಡುವಾಗ ಹೀಗೆ ಮಾಡುವುದು, ಎದುರಿನ ವ್ಯಕ್ತಿಯ ಕಳಕಳಿಯನ್ನು ತಳ್ಳಿಹಾಕುವುದು ಅಷ್ಟು ಸುಲಭವಲ್ಲ.

ಈಗ ನಡೆಯುತ್ತಿರುವ ವಿದ್ಯಮಾನಗಳನ್ನು ಕಂಡು ಭರವಸೆ ಕಳೆದುಕೊಳ್ಳಬಾರದು ಎಂಬುದು ಒಬಾಮ ಅವರ ಒಳನೋಟಗಳು ಹೇಳುವ ಇನ್ನೊಂದು ವಿಚಾರ. ಸಾಮಾಜಿಕ ಜಾಲತಾಣಗಳು ಸಂಪೂರ್ಣವಾಗಿ ಕೆಟ್ಟವು ಎಂಬ ಮಾತನ್ನು ಒಬಾಮ ಆಡಿಲ್ಲ. 'ಬಹುಬಗೆಯ ದನಿಗಳಿಗೆ ಅವಕಾಶ ಕಲ್ಪಿಸುವ, ವಿಭಿನ್ನ ದೃಷ್ಟಿಕೋನಗಳಿಗೆ ಜಾಗ ನೀಡುವ, ಪರಸ್ಪರರನ್ನು ದ್ವೇಷಿಸುವ ಗುಂಪುಗಳನ್ನಾಗಿ ಸಮಾಜವನ್ನು ಒಡೆಯದ ಮತ್ತು ಎಲ್ಲರಿಗೂ ಸಮಾನ ನೆಲೆಯನ್ನು ಕಲ್ಪಿಸುವ ರೀತಿಯಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಳ್ಳುವುದು ಹೇಗೆ ಎಂಬುದು ಈಗಿರುವ ಪ್ರಶ್ನೆ' ಎಂದು ಅವರು ಹೇಳಿದ್ದಾರೆ.

2018ನೆಯ ಇಸವಿಯು ಭಾರತಕ್ಕೆ ಬಹಳ ಮಹತ್ವದ್ದು. ಈ ವರ್ಷದಲ್ಲಿ ನಾವು ಒಬಾಮ ಆಡಿರುವ ಈ ನಾಲ್ಕು ಒಳ್ಳೆಯ ಮಾತುಗಳನ್ನು ನೆನಪಿನಲ್ಲಿ ಇರಿಸಿಕೊಳ್ಳಬೇಕು.

ಲೇಖಕ ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry