ಹೊಸ ವರ್ಷದ ಮ್ಯಾಜಿಕ್ ಷೋ

7

ಹೊಸ ವರ್ಷದ ಮ್ಯಾಜಿಕ್ ಷೋ

Published:
Updated:
ಹೊಸ ವರ್ಷದ ಮ್ಯಾಜಿಕ್ ಷೋ

ಪೆಕರ ಮ್ಯಾಜಿಕ್ ಷೋ ಮಾಡು­ತ್ತಾನೆ ಎನ್ನುವುದೇ ‘ಟಾಕ್ ಆಫ್ ದಿ ಟೌನ್’. ಎಲ್ಲರಿಗೂ ಅಚ್ಚರಿ.

‘ಪೆಕರನಿಗ್ಯಾಕಯ್ಯಾ ಈ ರೀತಿ ಹುಚ್ಚು ಹಿಡೀತು. ದೇಶದಲ್ಲಿ ಎಂತೆಂಥ ಜಾದೂ­ಗಾರ­­ರಿ­ದ್ದಾರೆ. ಕೆರೆಗಳನ್ನೇ ಮಾಯ ಮಾಡು­ವವರಿ­ದ್ದಾರೆ, ಸರ್ಕಾರಿ ಜಮೀನು­ಗಳನ್ನೇ ರಾತ್ರೋರಾತ್ರಿ ಮಾಯ ಮಾಡುವವರಿದ್ದಾರೆ, ಸರ್ಕಾರಿ ಕಡತ­­ಗಳೇ ಮ್ಯಾಜಿಕ್‌ಮ್ಯಾನ್‌ಗಳ ಕೈಯ­ಲ್ಲಿ ಸಿಕ್ಕು ಕಣ್ಣಿಗೆ ಕಾಣದಂತಾಗುತ್ತದೆ. ಅಷ್ಟೇ ಏಕೆ, ಸ್ವಲ್ಪ ಯಾಮಾರಿದರೆ ವಿಧಾನಸೌಧವನ್ನೇ ಮಾಯ ಮಾಡುವ ಖದೀಮರಿದ್ದಾರೆ. ಪರಿಸ್ಥಿತಿ ಹೀಗಿರು­ವಾಗ ನಮ್ಮ ಪೆಕರ ಇನ್ನೆಂಥಾ ಮ್ಯಾಜಿಕ್ ಮಾಡ್ತಾ­ನಂತೆ?’ ಎಂದು ಸ್ನೇಹಿತರು ಪರಸ್ಪರ ಮಾತನಾಡಿಕೊಂಡರು.

‘ತಮಾಷೆ ಮಾಡಬೇಡಿ, ನಮ್ಮ ಪೆಕರ ಅಂತಿಂಥ ಆಸಾಮಿಯಲ್ಲ. ಅವ­ನದು ಏನಿದ್ದರೂ ಡಿಫರೆಂಟು. ‘ವರ್ಷದ ವ್ಯಕ್ತಿ’ಯಾದ ಮೇಲೆ ಅವನ ಜವಾಬ್ದಾರಿ ಹೆಚ್ಚಾಗಿದೆಯಂತೆ. ‘ಜನರ ಸೇವೆಯೇ ಜನಾರ್ದನನ ಸೇವೆ’, ನೀರು ಫ್ರೀ, ಬೆಳಕೂ ಫ್ರೀ... ಎಂದೆಲ್ಲಾ ಬಡ­ಬಡಿಸ್ತಾ ಇದ್ದಾನೆ. ಬಹುಶಃ ಆಮ್ ಆದ್ಮಿ ಪಕ್ಷ ಸೇರಿ ಮುಂದೆ ಲೋಕ­ಸಭಾ ಚುನಾ­ವಣೆಯಲ್ಲಿ ಒಂದು ಕೈ ನೋಡೋಣ ಅಂತ ಇದ್ದಾನೋ ಏನೋ, ಆದರೂ ಅದೇನು ಮ್ಯಾಜಿಕ್ ಮಾಡ್ತಾನೆ ನೋಡೋಣ ಬನ್ನಿ’ ಎಂದು ಹೇಳಿ ಸ್ನೇಹಿತರೆಲ್ಲಾ ಮ್ಯಾಜಿಕ್ ಷೋ ನೋಡಲು ಹೊರಟರು.

ಷೋಗೆ ಬಹಳ ಜನ ಸೇರಿರುವುದನ್ನು ಕಂಡು ಪೆಕರನಿಗೆ ಖುಷಿಯಾಯಿತು. ಪೆಟ್ರೋಲ್, ಡೀಸೆಲ್ ಬೆಲೆ ಏರಿದ ಮೇಲೂ, ಆಟೋ ಮುಷ್ಕರ­­ವಿದ್ದರೂ ಆಸಕ್ತರೆಲ್ಲಾ ಮ್ಯಾಜಿಕ್‌ ಷೋ ನೋಡಲು ಬಂದಿದ್ದಾರೆ ಅಂದರೆ ಜನ ಬದ­­ಲಾ­ವಣೆ ಬಯಸ್ತಾ ಇದ್ದಾರೆ ಎನ್ನುವುದರ ಸೂಚನೆ ಎಂದು ಮನ­ದಲ್ಲೇ ಅಂದುಕೊಂಡ. ಇದೇ ಟ್ರೆಂಡ್ ಬಳಸಿಕೊಂಡು ಲೋಕಸಭಾ ಚುನಾವಣೆ­ಯಲ್ಲಿ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಟಿಕೆಟ್ ಪಡೆಯಲೇಬೇಕು ಎಂದು ಚಿಕ್ಕ ವಿಮಾನದ ಕ್ಯಾಪ್ಟನ್ ತರಹ ಮನಸ್ಸಿನಲ್ಲೇ ಮಂಡಿಗೆ ತಿಂದ.

ಷೋ ಆರಂಭವಾಯಿತು. ಪೆಕರ ಜಾದೂ­ಗಾರನ ಹಾಗೆ ವೇಷಧರಿಸಿ ಬಂದು ನಿಂತ. ಕೈಯಲ್ಲಿ ದೊಡ್ಡ ಬ್ಯಾಗು. ಬ್ಯಾಗನ್ನು ಪ್ರೇಕ್ಷಕರಿಗೆ ತೋರಿ­ಸಿದ. ಬ್ಯಾಗಿನ ಎರಡೂ ಬಾಯಿಗಳೂ ಓಪನ್ ಆಗಿದ್ದವು. ಇತ್ತ ಕಡೆಯಿಂದ ಕೈ ಒಳ­ಬಿಟ್ಟು ಬ್ಯಾಗಿನ ಅತ್ತ ಕಡೆ ಕೈ ಬರುವು­ದನ್ನು ತೋರಿಸಿ ಬ್ಯಾಗು ಖುಲ್ಲಂಖುಲ್ಲಾ ಓಪನ್ನಾಗಿರು­ವು­ದನ್ನು ಜನರಿಗೆ ಖಾತ್ರಿ­ಪಡಿಸಿದ. ಜೇಬಿನಿಂದ ನಾಲ್ಕು ಗೊಂಬೆಗಳನ್ನು ತೆಗೆದ. ಟೋಪಿ ಹಾಕಿ­ಕೊಂಡಿದ್ದ ನಾಲ್ಕು ಗೊಂಬೆಗಳು ನಡೆದು­ಕೊಂಡೇ ಬ್ಯಾಗಿನ ಒಂದು ಬಾಯಿಯ ಮೂಲಕ ಒಳ ಪ್ರವೇಶಿ­ಸಿದವು. ಕೆಲವೇ ಕ್ಷಣಗಳಲ್ಲಿ ಮತ್ತೊಂದು ಕಡೆ­ಯಿಂದ ಇನೊವಾ ಕಾರಿನಲ್ಲಿ ಬಂದು ಇಳಿದವು.

ಜನ ಖುಷಿಯಿಂದ ಕರತಾಡನ ಮಾಡಿದರು. ಆಹಾ! ಎಂಥಾ ಬದಲಾವಣೆ! ಜನಸಾಮಾನ್ಯರ ಏಳಿಗೆ ಅಂದರೆ ಇದೇ ಅಲ್ಲವೇ? ಜನ­ಸಾಮಾನ್ಯರ ಕನ­ಸನ್ನೇ ಪೆಕರ ತೋರಿಸು­ತ್ತಿದ್ದಾನೆ ಎಂದು ಪ್ರಶಂಸೆ­ಗಳ ಸುರಿ­ಮಳೆಯೇ ಆಯಿತು.

ಎರಡನೇ ಐಟಂ ಶುರುವಾಯಿತು. ಪೆಕರ ಒಂದು ‘ಲಾಡು’ ಕೈಗೆತ್ತಿಕೊಂಡು ಬ್ಯಾಗಿನ ಒಂದು ತುದಿ­ಯಲ್ಲಿ ಅದನ್ನು ಎಸೆದ. ಮತ್ತೊಂದು ತುದಿ­ಯಿಂದ ಹೊರಬಂದ ‘ಲಾಡು’ ಕಸದ ಬುಟ್ಟಿಯಲ್ಲಿ ಬಿತ್ತು.

ಭಾರೀ ಕರತಾಡನವಾಯಿತು. ‘ಆಹಾ!, ಎಂಥಾ ಪ್ರಾಮಾಣಿಕತೆ, ಸ್ವಚ್ಛ ಆಡಳಿತ ಅಂದರೆ ಇದೇ. ಭಲೇಭಲೇ’ ಎಂದು ಜನ ತಲೆದೂಗಿ­ದರು. ‘ಕಳಂಕಿತ­ರನ್ನು ಜೊತೆಯಲ್ಲಿಟ್ಟುಕೊಳ್ಳು­ವು­ದಿಲ್ಲ ಅಂತ ಖಡಕ್ ಆಗಿ ಹೇಳಿ, ಅದರಂತೇ ನಡೆದು­ಕೊಂಡ ಅಯ್ಯ ಅವರೇ ನಿಜವಾದ ಗಂಡು ಕಣ್ರಿ. ಹೀಗೇ ಸಂಪುಟ­ದಲ್ಲಿ ಕಳಂಕಿತರನ್ನು ದೂರ ಇಟ್ರೆ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್‌­ಸೀಟ್ ಗ್ಯಾರಂಟಿ ಕಣ್ರಿ’ ಎಂದು ಜನ ಅವರ­ವ­ರಲ್ಲೇ ಗುಸುಗುಸು ಮಾತ­ನಾಡಿಕೊಂಡರು.

ಪೆಕರ ಮತ್ತೆರಡು ‘ಲಾಡು’ ಕೈಗೆತ್ತಿ­ಕೊಂಡ. ಬ್ಯಾಗಿನ ಒಂದು ತುದಿಗೆ ಎಸೆದ. ಜನರೆಲ್ಲಾ ಕುತೂ­ಹಲ­ದಿಂದ ಮತ್ತೆ ಏನಾಗುತ್ತೋ ಅಂತ ನೋಡ್ತಾ ಇದ್ದಂತೆಯೇ ಮತ್ತೊಂದು ತುದಿ­ಯಿಂದ ಡಿಕುಶಿಮಾರರೂ, ಬೇಗಸಾಹೇಬರೂ ಬೇಗ­ಬೇಗ ಹೊರಬಂದರು. ಅವರ ಹಿಂದೆ ಜೈಕಾರ ಕೂಗುತ್ತಿದ್ದ ದೊಡ್ಡ ಪಟಾಲಂ, ಪಟಾಕಿ ಸಿಡಿ­ಸುತ್ತಾ ಬಂತು. ಗುಂಪು ಘೋಷಣೆಗಳನ್ನು ಕೂಗುತ್ತಾ ವಿಧಾನಸೌಧ ಪ್ರವೇಶಿಸಿತು.

ಮ್ಯಾಜಿಕ್ ಷೋ ನೋಡುತ್ತಿದ್ದ ಜನ ಅವಾಕ್ಕಾ­ದರು. ‘ಇದೇನ್ರೀ ಇದು, ಹೋದೆಯಾ ಪಿಶಾಚಿ ಅಂದ್ರೆ ಬಂದೇ ಗವಾಕ್ಷೀಲಿ ಅನ್ನೋ ಹಾಗೆ ಆಯ್ತಲ್ಲ. ಇದೇನಾ ‘ಕೈ ಸಂಸ್ಕೃತಿ’? ನಮ್ಮ ದೊಡ್ಡ­ಮಠ ಅವರೂ, ಸ್ವಾತಂತ್ರ್ಯ ಸೇನಾನಿ ರಾಜಾ­­ಸ್ವಾಮಿ ಅವರೂ ಮೇಲಿಂದ ಮೇಲೆ ದಾಖಲೆ ಕೊಟ್ರೂ ಹೀಗಾ­ಯ್ತಲ್ಲ? ಇದ್ಯಾವ ಸೀಮೆ ನ್ಯಾಯಾರೀ? ಒಂದ್‌ರೂಪಾಯಿ ಅಕ್ಕಿ, ಕ್ಷೀರ ಭಾಗ್ಯ, ಆ ಭಾಗ್ಯ, ಈ ಭಾಗ್ಯ ಅಂತ ಬಾಗಿಲಿಗೆ ಬಂದಿದ್ದ ಭಾಗ್ಯಗಳೆಲ್ಲಾ ಹೊಳೇಲಿ ಹುಣಸೇ­ಹಣ್ಣು ತೊಳೆದಂಗೆ ತೊಳೆದು­ಕೊಂಡು ಹೋಯ್ತ­ಲ್ಲರೀ?’ ಎಂದು ಜನ ಲೊಚಗುಟ್ಟಿದರು.

‘ಅದೇನ್ ಸ್ವಾಮಿ ‘ಕೈ’ ಸಂಸ್ಕೃತಿ ಅಂತೀರಾ? ಕಳಂಕಿತ­ರನ್ನು ಒಳಗೆ ಸೇರಿಸಿ­ಕೊಳ್ಳೋದು ಅಲ್ಲಿ ಮಾತ್ರಾನಾ? ಕಮಲ ಸಂಸ್ಕೃತಿಯಲ್ಲಿ ಅದಿಲ್ಲವಾ? ರಪ್ಪ ಅಂಡ್ ಪಾರ್ಟಿ ಕಮಲವಿಲೀನರಾಗಿ, ಕೆಜೆಪಿ ವಿಧಿ­ವಶ­ವಾದದ್ದು ತಮಗೆ ಗೊತ್ತಿಲ್ಲವಾ? ಅದು ಸರಿ ಅಂತೀರಾ?’ ಮ್ಯಾಜಿಕ್ ಷೋನಲ್ಲಿ ಒಂದು ಚರ್ಚೆಯೇ ಆರಂಭವಾಯಿತು.

‘ಹೋಗ್ಲಿ ಬಿಡಿ ಸ್ವಾಮಿ, ದೆಹಲಿ ಯುವ­­ರಾಜರೇ ಕಳಂಕಿತರನ್ನು ಬೇಗ ಸಂಪುಟಕ್ಕೆ ಸೇರಿಸಿ­ಕೊಳ್ಳಿ ಎಂದು ಆದೇಶ ಕೊಟ್ಟಮೇಲೆ ಅಯ್ಯ ಅವರು ಏನು ತಾನೇ ಮಾಡ್ತಾರೆ?’

‘ಯಾವ ಅಪರಾಧ? ಎಲ್ಲಿದೆ ಆಧಾರ?’ ಎಂದು ಅವರೂ, ಡಾಜಿಪ ಅವರೂ ಈಗ ಕೇಳ್ತಾ ಇದ್ದಾರೆ. ಪಾಪ ಅವರಿಗೆ ಡಿಕುಶಿಮಾರ ಅವರ ಬಗೆಗೆ ಇರುವ ಆರೋಪವೇ ಗೊತ್ತಿಲ್ಲವಂತೆ?!’

‘ಇರಲಿ ಬಿಡಿ, ಎಲ್ಲ ಪಕ್ಷದವರೂ ಹೊಸ ವರ್ಷದ ಉಡುಗೊರೆಯನ್ನು ಸಖತ್ತಾಗಿಯೇ ಕೊಟ್ಟಿ­ದ್ದಾರೆ’ ಎಂದು ಸ್ನೇಹಿತರು ಚರ್ಚೆಗೆ ತೇಪೆ ಹಾಕಿದರು.

ಅಷ್ಟರಲ್ಲಿ ಪೆಕರ ‘ಇದು ಇಂದಿನ ಪ್ರದರ್ಶನದ ಲಾಸ್ಟ್ ಐಟಂ’ ಎಂದು ಒಂದು ಗೊಂಬೆ ತೋರಿ­ಸಿದ. ಇದನ್ನು ‘ಮನಮೋಹಕ ಗೊಂಬೆ’ ಎಂದೂ ಕರೆ­ಯುತ್ತಾರೆ ಎಂದ. ಹಿನ್ನೆಲೆಯಲ್ಲಿ ಒಂದು ಹಾಡು ತೇಲಿಬಂತು.ಆಡಿಸಿ ನೋಡು ಬೀಳಿಸಿ ನೋಡು

ಉರುಳಿ ಹೋಗದು

ಏನೇ ಬರಲಿ, ಪ್ರಳಯವಾಗಲಿ

ತುಟಿಯ ಬಿಚ್ಚದು

ದೆಹಲಿ ಮೇಡಂ ಬಂದ ಕೂಡಲೇ

ಎದ್ದು ನಿಲ್ವುದು

ಯವರಾಜರಿಗೆ ಸೀಟು ಬಿಡಲು

ರೆಡಿಯಾಗಿರುವುದು...

‘ಈ ಗೊಂಬೆ ಒಂಬತ್ತೂವರೆ ವರ್ಷದಲ್ಲಿ ಮೂರನೇ ಬಾರಿಗೆ ಓಪನ್ನಾಗಿ ಮಾತನಾಡ್ತಾ ಇದೆ. ಇದೇ ಈ ಗೊಂಬೆಯ ವೈಶಿಷ್ಟ್ಯ...’ ಪೆಕರ ವಿವರಿಸು­ತ್ತಿದ್ದಂತೆಯೇ ಜನ ‘ಲೇಟಾಯ್ತು ಸ್ವಾಮಿ, ಇನ್ನೊಂದು ಸಲ ಮುಂದುವರೆಸಿ’ ಎಂದು ಹೇಳಿ ಎದ್ದು ಹೋಗಲಾರಂಭಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry