ಸೋಮವಾರ, ಅಕ್ಟೋಬರ್ 14, 2019
28 °C

ಹೊಸ ವರ್ಷ; ಹೊಸ ನಿರೀಕ್ಷೆ..!

ಕೆ. ಜಿ. ಕೃಪಾಲ್
Published:
Updated:

ಎಲ್ಲಾ ಓದುಗರಿಗೂ ಹೊಸ ವರ್ಷದ ಶುಭಾಶಯಗಳು. ಭಾರಿ ಒತ್ತಡಗಳಲ್ಲಿ ಇರುವ ಜಾಗತಿಕ ಆರ್ಥಿಕತೆಗಳು ಸುಧಾರಿಸಿ ಸಹಜ ಸ್ಥಿತಿಗೆ ಮರುಳಲು ಇನ್ನೂ ಹೆಚ್ಚಿನ ಸಮಯದ ಅವಶ್ಯಕತೆ ಇದೆ.ಆದರೂ ನಮ್ಮ ದೇಶದ ಹಣದುಬ್ಬರದ ಪ್ರಮಾಣವು ಸ್ವಲ್ಪಮಟ್ಟಿನ ನಿಯಂತ್ರಣ ಕಂಡಿದ್ದು ಮುಂದಿನ ದಿನಗಳಲ್ಲಿ ಬ್ಯಾಂಕ್ ಬಡ್ಡಿ ದರ ಇಳಿಯಬಹುದೆಂಬ ಸೂಚನೆಗಳು ಕಂಡುಬಂದಿವೆ. ಯೂನಿಯನ್ ಬ್ಯಾಂಕ್ ಬಡ್ಡಿ ದರವನ್ನು ಅಲ್ಪಮಟ್ಟಿಗೆ ಇಳಿಸುವುದರ ಮೂಲಕ ಈ ಸೂಚನೆಗೆ ಮುನ್ನುಡಿ ಬರೆದಿದೆ.

 

2011ರಲ್ಲಿ ಸಂವೇದಿ ಸೂಚ್ಯಂಕವು ಶೇ 225 ರಷ್ಟು ಹಾನಿ ಕಂಡಿದೆ. ಆದರೆ ವೈಯಕ್ತಿಕವಾಗಿ ಷೇರಿನ ಬೆಲೆಗಳು ಭಾರಿ ಕುಸಿತ ಕಂಡು ಗಾಬರಿ ಹುಟ್ಟಿಸಿವೆ.

 

ಎಲ್ಲ ವಿಶ್ಲೇಷಣೆಗಳು ಪೇಟೆಗಳು ಮತ್ತಷ್ಟು ಕುಸಿಯುವ ಸಾಧ್ಯತೆ ಇದೆ ಎನ್ನುತ್ತಿವೆ. ಆದರೆ, ಈಗಾಗಲೇ ಹೆಚ್ಚಿನ ಕುಸಿತ ಕಂಡಿರುವ ಷೇರುಗಳನ್ನು ಹಂತ ಹಂತವಾಗಿ ಆಯ್ಕೆ ಮಾಡಿಕೊಳ್ಳಲು ಇದು ಸುಸಂದರ್ಭವೆನ್ನಬಹು.ಕುಸಿಯುತ್ತಿರುವ ರೂಪಾಯಿ ಮೌಲ್ಯ ಆತಂಕಕಾರಿಯಾಗಿದೆ. ಡಾಲರ್ ಏರಿಕೆಯಲ್ಲಿದ್ದರೆ ಚಿನ್ನ - ಬೆಳ್ಳಿಗಳು ಹಿಂದಿನವಾರ ಮಾರಾಟದ ಒತ್ತಡದ ಕಾರಣ ಕುಸಿತ ಕಂಡವು. ಚಿನಿವಾರ ಪೇಟೆಯ ವಹಿವಾಟಿನ ಗಾತ್ರವೂ ಕ್ಷೀಣಿತವಾಗಿದೆ.ಕಳೆದ ವಾರ ವಿದೇಶೀ ವಿತ್ತೀಯ ಸಂಸ್ಥೆಗಳು ಮೊದಲ ಮೂರು ದಿನಗಳು ಕೊಳ್ಳುವಂತೆ ತೋರಿದರೂ ಗುರುವಾರ ಸುಮಾರು ಒಂದು ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಷೇರುಗಳನ್ನು ಮಾರಾಟ ಮಾಡಿದವು.ಒಟ್ಟಾರೆ ರೂ.784 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿವೆ. ಸ್ಥಳೀಯ ವಿತ್ತೀಯ ಸಂಸ್ಥೆಗಳು ಚುರುಕು ವಹಿವಾಟು ದಾಖಲಿಸಿಲ್ಲವಾದರೂ ರೂ. 279 ಕೋಟಿ ಮೌಲ್ಯದ ಷೇರು ಖರೀದಿಸಿವೆ.

 

ಒಟ್ಟಾರೆ 283 ಅಂಶಗಳಷ್ಟು ಕುಸಿತ ಕಂಡ ಸಂವೇದಿ ಸೂಚ್ಯಂಕವು ಮಧ್ಯಮ ಶ್ರೇಣಿ ಸೂಚ್ಯಂಕವನ್ನು50 ಅಂಶಗಳಷ್ಟು, ಕೆಳ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 64 ಅಂಶಗಳಷ್ಟು ಕುಸಿಯುವಂತೆ ಮಾಡಿತು. ಪೇಟೆಯ ಬಂಡವಾಳೀಕರಣ ಮೌಲ್ಯವು ರೂ.54.14 ಲಕ್ಷ ಕೋಟಿಯಿಂದ ರೂ.53.48 ಲಕ್ಷ ಕೋಟಿಗೆ ಕುಸಿದಿದೆ.  ಸರಿಯಾದ ಕ್ರಮ: ಇತ್ತೀಚೆಗೆ ಆರಂಭಿಕ ಷೇರು ವಿತರಣೆಯ (ಐಪಿಒ) ಮೂಲಕ ಪೇಟೆ ಪ್ರವೇಶಿಸಿ ಆರಂಭದಲ್ಲಿ ಭಾರಿ ವಿಜೃಂಭಣೆಯ ಏರಿಕೆ ಪ್ರದರ್ಶಿಸಿ ನಂತರದ ದಿನಗಳಲ್ಲಿ ಪ್ರಪಾತಕ್ಕೆ ಕುಸಿದು ಹೂಡಿಕೆದಾರರ ಸ್ವತ್ತನ್ನು ಕರಗಿಸಿದ ಕಂಪೆನಿಗಳಲ್ಲಿ ಏಳು ಕಂಪೆನಿಗಳನ್ನು ಪೇಟೆಯ ನಿಯಂತ್ರಕ    `ಸೆಬಿ~ ಮುಂದಿನ ನಿರ್ಧಾರ ದವರೆಗೂ ಪೇಟೆಯಲ್ಲಿ, ಕಂಪೆನಿ ಮತ್ತು ಪ್ರವರ್ತಕರು ಸಂಪನ್ಮೂಲ ಸಂಗ್ರಹಣೆ ಮಾಡದಂತೆ ನಿರ್ಬಂಧ ವಿಧಿಸಿದೆ.ಆ ಕಂಪೆನಿಗಳೆಂದರೆ ಭಾರತೀಯ ಗ್ಲೋಬಲ್ ಇನ್ಫೋಮೀಡಿಯಾ ಲಿ., ಬ್ರೂಕ್ಸ್ ಲ್ಯಾಬೊರೆಟರೀಸ್ ಲಿ., ಪಿ. ಜಿ. ಎಲೆಕ್ಟ್ರೊಪ್ಲಾ  ಸ್ಟ್ ಲಿ., ತಕ್ವೀಲ್ ಸೊಲೂಷನ್ಸ್ ಲಿ., ಆರ್‌ಡಿಬಿ ರಸಾಯನ್ಸ್ ಲಿ., ತಿಜಾರಿಯಾ ಪೊಲಿಪೈಪ್ಸ್ ಲಿ., ಒನ್ ಲೈಫ್ ಕ್ಯಾಪಿಟಲ್ ಅಡ್ವೈಸರ್ಸ್‌ ಲಿ. ಗಳಾಗಿವೆ.ಅಲ್ಲದೆ ಮೂರು ಮರ್ಚಂಟ್ ಬ್ಯಾಂಕಿಂಗ್ ಸಂಸ್ಥೆಗಳಾದ ಪಿ.ಎನ್.ಬಿ. ಇನ್ವೆಸ್ಟ್‌ಮೆಂಟ್ಸ್ ಸರ್ವಿಸಸ್, ಆಲ್‌ಮಂಡ್ ಗ್ಲೊಬಲ್ ಸೆಕ್ಯುರಿಟೀಸ್ ಮತ್ತು ಅಥರ್ ಸ್ಟೋನ್ ಕ್ಯಾಪಿಟಲ್ಸ್‌ಗಳ ಮೇಲೆ ನಿಷೇಧ ಹೇರುವ ನಿರೀಕ್ಷೆ ಇದೆ.ಆರ್ಥಿಕ ಸುಧಾರಣಾ ಕ್ರಮವಾಗಿ ಕೈಗೊಳ್ಳಬೇಕಾದಂತಹ ಬಂಡವಾಳ ಹಿಂತೆಗೆತಕ್ಕೆ ಇಂದಿನ ಷೇರುಪೇಟೆ ದುಸ್ಥಿತಿಯು ಹಿನ್ನಡೆ ಉಂಟು ಮಾಡಿದ್ದು ಈ ಆರ್ಥಿಕ ಸಂಪನ್ಮೂಲಗಳ ಅವಶ್ಯಕತೆಯನ್ನು ಸರಿದೂಗಿಸಲು ವಿವಿಧ ನಮೂನೆಗಳು ಪರಿಶೀಲನೆಯಲ್ಲಿವೆ.ಷೇರು ವಿನಿಮಯ ಕೇಂದ್ರಗಳ ಮೂಲಕ ಹರಾಜಿನಲ್ಲಿ ಷೇರುಗಳ ಮಾರಾಟಕ್ಕೆ ಅವಕಾಶ ಕಲ್ಪಿಸುವ ಚಿಂತನೆ ನಿಯಂತ್ರಕರಲ್ಲಿದೆ. ಸರ್ಕಾರದ ಬಂಡವಾಳ ಹಿಂತೆಗೆತದ ಜತೆಗೆ ಪ್ರವರ್ತಕರಿಗೂ ತಮ್ಮ ಭಾಗಿತ್ವವನ್ನು ಮಾರಾಟ ಮಾಡಲು ಅವಕಾಶ ಕಲ್ಪಿಸಿ ಕೊಡುವ ಸಾಧ್ಯತೆ ಇದೆ.ಇದು ಸುಧಾರಣಾ ಕಾರ್ಯಕ್ರಮಕ್ಕೆ ಮರುಚಾಲನೆ ನೀಡಿದಂತಾಗಿ ನಿರ್ಲಕ್ಷಕ್ಕೊಳಗಾಗಿರುವ ಪೇಟೆಗಳನ್ನು ಚುರುಕುಗೊಳಿಲು ಸಹಕಾರಿಯಾಗಬಹುದು. ಸದ್ಯ ಷೇರುಪೇಟೆಗಳು ಹೆಚ್ಚಿನ ಒತ್ತಡದಲ್ಲಿದ್ದು ಸೂಚ್ಯಂಕಗಳನ್ನು ಮೀರಿ ಹಲವು ಉತ್ತಮ ಕಂಪೆನಿಗಳು, ಷೇರಿನ ದರಗಳು ಕುಸಿದಿವೆ. ಹೊಸದಾಗಿ ಷೇರುಪೇಟೆ ಪ್ರವೇಶಿಸುವವರಿಗೆ ಇದು ಸುವರ್ಣಾವಕಾಶವೇ ಸರಿ.ಕಂಪೆನಿ ವಿಲೀನ ವಿಚಾರ

ಶ್ರೀ ವಾಣಿ ಶುಗರ್ಸ್‌ ಅಂಡ್ ಇಂಡಸ್ಟ್ರೀಸ್ ಲಿ. ಕಂಪೆನಿಯನ್ನು ಕರ್ನಾಟಕ ಬ್ರುವರೀಸ್ ಅಂಡ್ ಡಿಸ್ಟಲ್ಲರೀಸ್‌ನಲ್ಲಿ ವಿಲೀನಗೊಳಿಸಿದ್ದು 30ನೇ ಡಿಸೆಂಬರ್ ನಿಗದಿತ ದಿನವಾಗಿತ್ತು. ಪ್ರತಿ 50 ವಾಣಿ ಶುಗರ್ಸ್ ಷೇರಿಗೆ ಒಂದು ಕರ್ನಾಟಕ ಬ್ರುವರೀಸ್ ಅಂಡ್ ಡಿಸ್ಟಿಲ್ಲರೀಸ್ ಷೇರು ನೀಡಲಾಗುವುದು.ಅಮಾನತು ತೆರವು

ಮಹಾನ್ ಫುಡ್ಸ್ ಲಿ. ಕಂಪೆನಿಯು 2010ರ ಅಕ್ಟೋಬರ್‌ನಿಂದಲೂ ಅಮಾನತ್ತಿನಲ್ಲಿದ್ದು ಈಗ ಅಮಾನತು ತೆರವುಗೊಳಿಸಿಕೊಂಡು, ಜನವರಿ 2012ರಿಂದ `ಟಿ~ ಗುಂಪಿನಲ್ಲಿ ವಹಿವಾಟಾಗಲು ಅನುಮತಿಪಡೆದಿದೆ.ಮುಖ ಬೆಲೆ ಕ್ರೋಡೀಕರಣ

ಮಹನ್ ಇಂಡಸ್ಟ್ರೀಸ್ ಲಿ. ಕಂಪೆನಿಯ ಷೇರಿನ ಮುಖಬೆಲೆಯನ್ನು ಸದ್ಯದ ರೂ.1 ರಿಂದ ರೂ.1ಕ್ಕೆ ಕ್ರೋಡೀಕರಿಸಲು ನಿರ್ಧರಿಸಿದೆ. ಷೇರುದಾರರ ಒಪ್ಪಿಗೆಗೆ ಕ್ರಮ ಕೈಗೊಳ್ಳಲಿದೆ.ಪೇಟೆಯಿಂದ ಹೊರಕ್ಕೆ

3 ಐ - ಇನ್ಫೋಟೆಕ್, ಹೋಟೆಲ್ ಲೀಲಾವೆಂಚರ್ಸ್ ನೈವೇಲಿ ಲಿಗ್ನೈಟ್ ಕಾರ್ಪೊರೇಷನ್, ಟುಲಿಷ್ ಟೆಲಿಕಾಂ ಕಂಪೆನಿಗಳನ್ನು ಮೂಲಾಧಾರಿತ ಪೇಟೆಯಿಂದ ಹೊರಹಾಕಲಾಗಿದೆ. ಜನವರಿ 2012ಮತ್ತು ಫೆಬ್ರುವರಿ 2012ರ ಗುತ್ತಿಗೆಗಳು ಮುಗಿದ ನಂತರ ಹೊಸ ಒಪ್ಪಂದಗಳಿಗೆ ಅವಕಾಶವಿರುವುದಿಲ್ಲ. ಇದು ಮುಂಬೈ ಷೇರು ವಿನಿಮಯ ಕೇಂದ್ರದ ಕ್ರಮ.ಬಂಡವಾಳ ಕಡಿತದ ವಿಚಾರ

ಮೆಟ್ರೊ ಗ್ಲೋಬಲ್ ಲಿ (ಈ ಹಿಂದೆ ಗ್ಲೋಬಲ್ ಬೋರ್ಡ್ಸ್ ಲಿ. ಎಂಬ ಹೆಸರಿನಲ್ಲಿದ್ದ ಕಂಪೆನಿ) ಕಂಪೆನಿಯು ಹೆಚ್ಚಿನ ಹಾನಿ ಹೊಂದಿದ್ದು, ಇದರ ಪ್ರಭಾವವನ್ನು ಮೊಟಕುಗೊಳಿಸಿ ಕಂಪೆನಿಯನ್ನು ಚುರುಕುಗೊಳಿಸಲು ಪ್ರತಿ 100 ಷೇರುಗಳನ್ನು 10 ಷೇರುಗಳಾಗಿ ಪರಿವರ್ತಿಸುವ ಮೂಲಕ ಶೇ 90 ರಷ್ಟು ಬಂಡವಾಳದ ಹೊರೆಯನ್ನು ಇಳಿಸಲಿದೆ. ಈ ಕ್ರಮಕ್ಕೆ ಫೆಬ್ರುವರಿ 2 ನಿಗದಿತ ದಿನ.ಚಿನ್ನದ ಮೆರಗು

ಷೇರು ಪೇಟೆಗಳು ಅಧಿಕ ಒತ್ತಡವನ್ನೆದುರಿಸಿದ 2011 ರಲ್ಲಿ ಅತ್ಯಂತ ಆಕರ್ಷಣೀಯವಾದ ಲಾಭಗಳಿಸಿಕೊಟ್ಟ ವಲಯವೆಂದರೆ ಚಿನಿವಾರ ಪೇಟೆ. ಚಿನ್ನವು 2011 ರಲ್ಲಿ ಸುಮಾರು ಶೇ 30 ರಷ್ಟು ಏರಿಕೆ ಕಂಡಿದೆ.

 

ಆದರೆ, ಬೆಳ್ಳಿಯ ಬೆಲೆಯು ಶೇ 8 ರಷ್ಟು ಮಾತ್ರ ಏರಿಕೆಯಾಗಿದೆ ಎಂದು ಹೊರನೋಟಕ್ಕೆ ಕಂಡರೂ ವರ್ಷದ ಮಧ್ಯಂತರದಲ್ಲಿ ಬೆಳ್ಳಿಯ ಬೆಲೆಯು, ಅಕ್ಷಯ ತೃತೀಯಾ ಸಮಯದಲ್ಲಿ ರೂ.75 ಸಾವಿರ ದಾಟಿ ಮಿಂಚಿನ ವೇಗದಲ್ಲಿ ಕುಸಿಯಿತು.ಆದರೆ ಇತರೆ ಲೋಹಗಳ ವಲಯವು ಅಗಾಧವಾದ ಹಾನಿಗೊಳಗಾಗಿ ಶೇ 40ಕ್ಕೂ ಹೆಚ್ಚಿನ ಕುಸಿತ ಕಂಡಿತು. ಬ್ಯಾಂಕ್ ಬಡ್ಡಿ ದರ ಏರಿಕೆ, ಇಂದನ ಬೆಲೆ ಏರಿಕೆ ಮತ್ತು ಡಾಲರ್ ಬೆಲೆ ಶೇ 19ಕ್ಕೂ ಹೆಚ್ಚಿನ ಏರಿಕೆ ಉದ್ಯಮಗಳ ಹಿನ್ನಡೆ ಕಾರಣವಾಗಿದ್ದು ನಂಬಿಕೆ ಶೂನ್ಯವನ್ನಾಗಿಸಿದೆ. ಸಣ್ಣ ಹೂಡಿಕೆದಾರರನ್ನೂ ನಿರಾಶೆಗೊಳಿಸಿದೆ.ವಾರದ ವಿಶೇಷ

2011ನ್ನು ಹೊರದೂಡಿ 2012ಕ್ಕೆ ಸ್ವಾಗತ ಬಯಸುತ್ತಿರುವ ಈಗಿನ ವಾತಾವರಣದಲ್ಲಿ ಎಲ್ಲರ ಮನಗಳಲ್ಲಿ ಆತಂಕ, ಅನಿಶ್ಚತೆ, ಅಸ್ಥಿರತೆಗಳು ಮನೆ ಮಾಡಿವೆ. ಜಾಗತಿಕ ಮಟ್ಟದಲ್ಲಾಗುತ್ತಿರುವ ಬೆಳವಣಿಗೆಗಳು, ರಾಜಕೀಯ ಬೆಳವಣಿಗೆಗಳು, ಸರ್ಕಾರಿ ಕ್ರಮಗಳು, ಹದಗೆಡುತ್ತಿರುವ ಅರ್ಥ ವ್ಯವಸ್ಥೆಯನ್ನು ಸುಧಾರಿಸುವತ್ತ ಸಾಗುತ್ತಿಲ್ಲ ಎಂಬ ಭಾವನೆ ಮೂಡಿಸಿವೆ.

 

ನಂಬಿಕೆ ಎಂಬುದು ಕೇವಲ ಭಾಷಣಕ್ಕೆ ಭೂಷಣವಾಗಿ ವಾಸ್ತವವಾಗಿ ಇಲ್ಲದಿರುವುದಾಗಿದೆ. ಕುಸಿಯುತ್ತಿರುವ ರೂಪಾಯಿ ಮೌಲ್ಯ ಅತ್ಯಂತ ಕ್ರೂರವಾದ ಪರಿಣಾಮ ಬೀರುತ್ತಿದ್ದು ಆರೋಗ್ಯಕರವಾಗಿರುವ ವ್ಯವಸ್ಥೆಯನ್ನು ನಲುಗುವಂತೆ ಮಾಡುತ್ತಿದೆ.ಈ ಹಿಂದೆ ಪೇಟೆಗಳು ಉತ್ತುಂಗದಲ್ಲಿದ್ದಾಗ ಮಾಡಿಕೊಂಡ ಒಪ್ಪಂದಗಳು, ಜಾರಿಗೊಳಿಸಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವೂ ಆಗಿನ ಪರಿಸ್ಥಿತಿ ಲಾಭ ಪಡೆಯಲು ಹವಣಿಸಿದ್ದಕ್ಕೆ ಈಗ ಬಲಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದೆ.ಹಣದುಬ್ಬರದ ಪ್ರಮಾಣ ಇಳಿಮುಖವಾಗುತ್ತಿರುವುದು, ಬ್ಯಾಂಕ್ ಬಡ್ಡಿ ದರ ಇಳಿಕೆಗೆ ಕಾರಣವಾಗಿ ಉದ್ಯಮ ಚೇತರಿಕೆಗೆ ಕಾರಣವಾಗಬಹುದು. ಇದು ಅರ್ಥವ್ಯವಸ್ಥೆ ಚುರುಕಾಗುವಂತೆ ಮಾಡಬಹುದು ಎಂದು ಭಾವಿಸೋಣ.ಕಂಪೆನಿಗಳಾದ, ಐಟಿಸಿ ಹಿಂದೂಸ್ತಾನ್ ಯೂನಿಲೀವರ್, ಕೋಲ್ಗೇಟ್ ಪಾಲ್ಮೊಲೀವ್‌ಗಳು ಇಂದಿಗೂ ತಮ್ಮ ಷೇರಿನ ದರಗಳನ್ನು ಸ್ಥಿರವಾಗಿರುವುದನ್ನು ಕಾಣುತ್ತಿವೆ. ಇದಕ್ಕೆ ಕಾರಣ ಅವುಗಳ ಸಾಧನೆಯು ಉತ್ತಮವಾಗಿದೆ. ಏಕೆಂದರೆ ಅವು ಸ್ಥಳೀಯ ಗ್ರಾಹಕ ಬೇಡಿಕೆಯ ಕಾರಣ ಮುಖ್ಯವಾಗಿದೆ.ಕಂಪೆನಿಗಳಾಗಲಿ, ಸಂಸ್ಥೆಗಳಾಗಲಿ, ನಿಯಂತ್ರಕರಾಗಲಿ ಅಗಾಧ ಸ್ಥಳೀಯ ಗ್ರಾಹಕ ಸಂಪತ್ತಿನ ಹಿತವನ್ನು ಆಧರಿಸಿ ಕಾರ್ಯ ನಿರ್ವಹಿಸಿದರೆ ಫಲಿತಾಂಶ ಉತ್ತಮ ವಾಗಿರುತ್ತವೆ. 2012 ಶುಭವಾಗಲೆಂದು ಹಾರೈಸೋಣ.

Post Comments (+)