ಸೋಮವಾರ, ಫೆಬ್ರವರಿ 24, 2020
19 °C

‘ಅದು ಹಾಗೇ’ ಎನ್ನದೆ ಅರಸಬೇಕಿದೆ ‘ಹೊಸ ಉತ್ತರ’

ಸಿ.ಜಿ. ಮಂಜುಳಾ Updated:

ಅಕ್ಷರ ಗಾತ್ರ : | |

‘ಅದು ಹಾಗೇ’ ಎನ್ನದೆ ಅರಸಬೇಕಿದೆ ‘ಹೊಸ ಉತ್ತರ’

ರಾಷ್ಟ್ರ ಹಾಗೂ ರಾಜ್ಯದ ತುಂಬಾ ಅತ್ಯಾ­ಚಾರ ಹಾಗೂ ಲೈಂಗಿಕ ದೌರ್ಜನ್ಯ   ಸುದ್ದಿ­ಗಳದ್ದೇ ಅಬ್ಬರ. ಈ ಪ್ರಕರಣಗಳನ್ನು ನಿರ್ವಹಿ­ಸುವಲ್ಲಿ  ಆಡಳಿತಶಾಹಿಯ ಅವಾಂತರ­ಗಳು, ಅಸೂಕ್ಷ್ಮತೆಗಳು ಮತ್ತೆ ಮತ್ತೆ ಬಯಲಾ­ದವು. ‘ಅತ್ಯಾಚಾರ ಬಿಟ್ಟರೆ ಬೇರೆ ಸುದ್ದಿ ಇಲ್ಲವೆ’ ಎಂದು ರೋಸಿಹೋದ ಮುಖ್ಯಮಂತ್ರಿಯ ಮಾತುಗಳಲ್ಲಿ ವ್ಯಕ್ತವಾದದ್ದು ಅಸೂಕ್ಷ್ಮತೆಯ ಒಂದು ಮುಖ. ಅತ್ಯಾಚಾರವನ್ನು ಅತಿರಂಜಿತ­ಗೊಳಿಸಿ ರಂಜ­ನೀಯ ಸರಕಾಗಿಸಿ ಪ್ರಸಾರ ಮಾಡಿದ ಮಾಧ್ಯಮ­ಗಳದ್ದು ಮತ್ತೊಂದು ಬಗೆಯ ಅಸೂಕ್ಷ್ಮತೆ. ಮಹಿಳೆ ಕುರಿತಾದ ಈ ಅಸೂಕ್ಷ್ಮತೆ ಸಮಾಜ­ದೊಳಗೆ ಒಪ್ಪಿತ ಮೌಲ್ಯವೇ ಆಗಿ ಹೋಗಿದೆಯೆ?  ಹೆಣ್ಣನ್ನು ಸ್ವತಂತ್ರ ವ್ಯಕ್ತಿತ್ವದ ವ್ಯಕ್ತಿಯಾಗಿ ಪರಿಭಾವಿಸಲು ಸಾಧ್ಯವಾಗದ ಮನಸ್ಥಿತಿ ಇಂತಹ ಅಸೂಕ್ಷ್ಮತೆಗಳಿಗೆ ಕಾರಣ­ವಾಗುತ್ತದೆಯೆ?

ಇಂತಹ ಅಸೂಕ್ಷ್ಮತೆ, ನೆರೆಯ ರಾಜ್ಯದಲ್ಲಿ ಮತ್ತೊಂದು ರೀತಿಯಲ್ಲಿ ವ್ಯಕ್ತವಾಯಿತು.  ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರನ್ನು  ತೆಲಂಗಾಣ ಸರ್ಕಾರ  ಪ್ರಚಾರ ರಾಯಭಾರಿ­ಯಾಗಿ ನೇಮಕ ಮಾಡಿತು. ತೆಲಂಗಾಣದ ಪ್ರಚಾರ ರಾಯಭಾರಿಯಾಗಲು ಸಾನಿಯಾ  ಅವರಿ­ಗಿರುವ ಅರ್ಹತೆಯನ್ನು ಬಿಜೆಪಿ ನಾಯಕ ಕೆ.ಲಕ್ಷ್ಮಣ್ ಪ್ರಶ್ನಿಸಿದರು. ಕಾಂಗ್ರೆಸ್‌ನ ಹನು­ಮಂತಪ್ಪ ಅವರೂ  ದನಿಗೂಡಿಸಿದರು. ಇದಕ್ಕೆ ಅವರು ನೀಡಿದ ಕಾರಣ, ಸಾನಿಯಾ ‘ಪಾಕಿ ಸ್ತಾನದ ಸೊಸೆ’. ‘ಪಾಕಿಸ್ತಾನದ ಸೊಸೆ’ ಎಂದು   ‘ಲಕ್ಷ್ಮಣ ರೇಖೆ’ ಎಳೆಯುವಂತಹ  ಈ  ಅಸೂಕ್ಷ್ಮ ಮನಸ್ಥಿತಿಗೆ ಏನೆನ್ನಬೇಕು?

‘ನಾನು ಭಾರತೀಯಳು’ ಎಂದು ಪದೇ ಪದೇ ಸಾಬೀತು ಮಾಡಬೇಕಾಗಿರುವ ಈ ಸ್ಥಿತಿಗೆ ನಾನು ಹೆಣ್ಣಾಗಿರುವುದೂ ಕಾರಣ’ ಎಂದು ಭಾವು­ಕರಾಗಿ ಎನ್‌ಡಿಟಿವಿ ಸಂದರ್ಶನದಲ್ಲಿ ಕಣ್ಣೀರು ಮಿಡಿದರು ಸಾನಿಯಾ. ಆದರೆ  ತಮ್ಮಲ್ಲಿ ಮೊಂಡುತನ ಅಂತರ್ಗತವಾಗಿದ್ದು ಇವನ್ನೆಲ್ಲಾ ಮೀರಿ ಟೆನಿಸ್ ಕ್ರೀಡೆಗಾಗಿ ಕೆಲಸ ಮಾಡುತ್ತೇನೆ ಎಂಬಂಥ ಬದ್ಧತೆ ಹಾಗೂ ದಿಟ್ಟತನವನ್ನೂ ಅವರು  ಪ್ರದರ್ಶಿಸಿದರು. ಹೆಣ್ಣುಮಕ್ಕಳ ಬದುಕಿನ ಹಾದಿಯಲ್ಲಿ  ಹೀಗೆ ಪದೇಪದೇ ಸೃಷ್ಟಿಸಲಾಗುವ ಎಡರುತೊಡರುಗಳ ಹಿಂದೆ ಇರುವಂತಹದ್ದು ಪುರುಷ ಪ್ರಧಾನ ಮೌಲ್ಯ ವ್ಯವಸ್ಥೆ ಎಂಬುದನ್ನು ಆಧುನಿಕ ಸಮಾಜ ಅರ್ಥೈಸಿಕೊಳ್ಳುವುದು ಅವಶ್ಯ.

ಸರಹದ್ದುಗಳನ್ನು ಸೃಷ್ಟಿಸಿ ಹೆಣ್ಣನ್ನು  ಹದ್ದು­ಬಸ್ತಿನಲ್ಲಿ­ಡುವಂತಹ ಮೌಲ್ಯವ್ಯವಸ್ಥೆ  ಪದೇ ಪದೇ  ತಲೆ ಎತ್ತುತ್ತಲೇ ಇರುತ್ತದೆ. ಅನೇಕ ಸಂದ­ರ್ಭ­ಗಳಲ್ಲಿ ಇದು ನಯವಾಗಿರುತ್ತದೆ, ಸೂಕ್ಷ್ಮ­ವಾ­ಗಿರುತ್ತದೆ. ಮತ್ತೆ ಕೆಲವೆಡೆ, ವಿಧ್ಯುಕ್ತ ಆಚರಣೆಗಳ ನೆಪದಲ್ಲಿ ಹೆಣ್ಣಿನ ಬದುಕನ್ನೇ ಆವರಿಸಿ­ಕೊಳ್ಳು ತ್ತದೆ. ಇಂತಹ ಸಾಂಪ್ರದಾಯಿಕ ಆಚರಣೆಗಳಲ್ಲಿ ಘೋರವಾದದ್ದು ಎಂದರೆ  ಹೆಣ್ಣಿನ ಜನನಾಂಗದ ಛೇದನ (ಫೀಮೇಲ್ ಜೆನೈಟಲ್ ಮ್ಯುಟಿಲೇಷನ್ –ಎಫ್‌ಜಿಎಂ).  ಜುಲೈ 22ರಂದು ಎಫ್‌ಜಿಎಂ ಕುರಿತಂತೆಯೇ ಲಂಡನ್‌ನಲ್ಲಿ ‘ಗರ್ಲ್ ಸಮಿಟ್’ ಏರ್ಪ­ಡಿಸಲಾ­ಗಿತ್ತು.

ಬ್ರಿಟನ್‌ನಲ್ಲಿ ಈ ಸಂಪ್ರದಾಯಕ್ಕೆ ನಿಷೇಧ­ವಿದ್ದರೂ ಅಲ್ಲಿನ ಕಪ್ಪು ಸಮುದಾಯ­ದವರು ತಮ್ಮ ಹೆಣ್ಣುಮಕ್ಕಳನ್ನು ಆಫ್ರಿಕಾಗೆ ಕರೆ­ದೊಯ್ದು ಈ  ವಿಕೃತ ಸಂಪ್ರದಾಯ ಪಾಲಿಸುತ್ತಿ­ರುವುದು ಮಾನವ ಹಕ್ಕುಗಳನ್ನು ದೊಡ್ಡದಾಗಿ ಪ್ರತಿಪಾದಿಸುವ ರಾಷ್ಟ್ರವಾದ ಬ್ರಿಟನ್‌ಗೆ ತಲೆ­ನೋವಾಗಿದೆ. ಈ ಸಮಾ­ವೇಶ ದಲ್ಲಿ ‘ಸ್ಲಮ್ ಡಾಗ್ ಮಿಲಿಯನೇರ್’ ಖ್ಯಾತಿಯ ನಮ್ಮ ನಟಿ ಫ್ರೀಡಾ ಪಿಂಟೊ ಸಹ  ಎಫ್ ಜಿಎಂ ಕುರಿತಂತೆ ಜಾಗೃತಿ ಮೂಡಿಸುವ ಮಾತುಗಳನ್ನಾ ಡಿದ್ದು ವಿಶೇಷ.  ಈ ಸಂದರ್ಭದಲ್ಲಿ ಯೂನಿಸೆಫ್ ಪ್ರಕ­ಟಿಸಿದ ವರದಿಯ ಪ್ರಕಾರ, ಮೂರು ದಶಕಗಳ ಹಿಂದೆ ಇದ್ದದ್ದಕ್ಕಿಂತ ಎಫ್‌ಜಿಎಂ ಪ್ರಮಾಣ­ವೇನೊ ಕಡಿಮೆಯಾಗಿದೆ. ಆದರೆ ಪ್ರತಿ ಒಂದು ನಿಮಿಷಕ್ಕೆ ಈಗಲೂ ಏಳು ಬಾಲೆಯರು  ಈ ವಿಕೃತ ಸಂಪ್ರದಾಯದ ಬಲಿಪಶುಗಳಾಗುತ್ತಿದ್ದಾರೆ.

ಇದೇ ಸಂದರ್ಭದಲ್ಲೇ 11ರಿಂದ 46 ವರ್ಷ ದೊಳಗಿರುವ ಎಲ್ಲ ಬಾಲಕಿಯರು ಹಾಗೂ ಮಹಿಳೆಯರು ಎಫ್‌ಜಿಎಂಗೆ ಒಳಪಡ­ಬೇಕೆಂದು ಇರಾಕ್ ಹಾಗೂ ಸಿರಿಯಾದ ಇಸ್ಲಾಮಿಕ್ ರಾಷ್ಟ್ರದ ( ಐಎಸ್ಐಎಸ್)  ಜಿಹಾದಿ ಉಗ್ರರು ಫತ್ವಾ ಹೊರಡಿಸಿದ್ದಾರೆ. ಇದೇನಾದರೂ ಜಾರಿ ಯಾದಲ್ಲಿ ಈ ಯುದ್ಧ­ಪೀಡಿತ ಪ್ರದೇಶದಲ್ಲಿ 40 ಲಕ್ಷ ಮಹಿಳೆಯರು ಹಾಗೂ ಬಾಲಕಿಯರು ಬರ್ಬರ ಆಚರಣೆ­ಯೊಂದಕ್ಕೆ ಬಲಿಯಾಗಲಿ ದ್ದಾರೆ ಎಂಬುದು ವಿಶ್ವಸಂಸ್ಥೆ ವಕ್ತಾರರ ಹೇಳಿಕೆ. ಆದರೆ ಈ ವರದಿ ಎಷ್ಟರಮಟ್ಟಿಗೆ ಸತ್ಯವಾದುದು ಎಂಬುದರ  ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಕೆಲವು ಸಂಶಯ­ಗಳು ವ್ಯಕ್ತವಾಗಿವೆ. ಏಕೆಂದರೆ ಸ್ತ್ರೀ ಸುನತಿ ಎಂಬುದು ಇರಾಕ್ ಸಂಸ್ಕೃತಿಯಲ್ಲಿಲ್ಲ. ಹೀಗಾಗಿ, ಈ ಕುರಿತಂತೆ ಹೆಚ್ಚಿನ ಸ್ಪಷ್ಟತೆ ಪಡೆದುಕೊಳ್ಳಲು ಯತ್ನಿಸುತ್ತಿರುವುದಾಗಿ ವಿಶ್ವ ಸಂಸ್ಥೆ ಹೇಳಿದೆ.
ಎಫ್‌ಜಿಎಂ ಎಂದರೆ ಭಗಾಂಕುರ (ಕ್ಲಿಟರಿಸ್) ಕತ್ತರಿಸುವುದು. ಭಗಾಂಕುರ– ಹೆಣ್ಣಿನ ದೇಹದಲ್ಲಿ ಹೆಚ್ಚು ಸೂಕ್ಷ್ಮ­ವಾದ ಅಂಗ.

ಲೈಂಗಿಕ ತೃಪ್ತಿ ತಲುಪಲು (ಆರ್ಗ್ಯಾಸಮ್) ಸಹಾಯಕ­ವಾಗುವ ಅಂಗ. ಆಫ್ರಿಕಾದ ಅನೇಕ ರಾಷ್ಟ್ರಗಳಲ್ಲಿ ಪುಟ್ಟ ಬಾಲೆಯರ ಮೇಲೆ ಶಸ್ತ್ರಚಿಕಿತ್ಸೆ ನಡೆಸಿ  ಭಗಾಂಕು­ರ­ವನ್ನು ಕತ್ತರಿಸಲಾಗುತ್ತದೆ. ಭಗಾಂ­ಕುರ­­­­ವಷ್ಟೇ ಅಲ್ಲ, ಹೆಣ್ಣಿನ ಜನನಾಂಗದ ಇತರ ಭಾಗಗಳಿಗೂ ಈ ಛೇದನ ಪ್ರಕ್ರಿಯೆ ವಿಸ್ತರಿಸಬಹುದು. ಆಫ್ರಿಕಾದ ಬೇರೆ ಬೇರೆ ರಾಷ್ಟ್ರಗಳಲ್ಲಿ ಬೇರೆ ಬೇರೆ ರೀತಿಯ ಛೇದನ ಪ್ರಕ್ರಿಯೆಯನ್ನು ಸಂಪ್ರದಾ­ಯವಾಗಿ ಆಚರಿಸಿ­ಕೊಂಡು ಬರಲಾಗುತ್ತಿದೆ. ಇದು ತರುವಂತಹ ನೋವು ಅಪಾರ. ಮೂತ್ರ­ವಿಸರ್ಜನೆಯೂ ನೋವಿನ ಧಾರೆಯಾ­ಗುತ್ತದೆ. ಸೋಂಕು, ಬಂಜೆತನ ಹಾಗೂ ಕೆಲವೊಮ್ಮೆ ಸಾವಿಗೂ ಕಾರಣವಾಗಬಹುದು.

ಆಫ್ರಿಕಾದಲ್ಲಿ ಇದನ್ನು ಸುನತಿ (ಸರ್ಕಂಸಿ­ಷನ್)  ಎಂದು ಹೇಳಲಾಗುತ್ತದೆ. ಆದರೆ ಹುಡು­­ಗರ ಜನನಾಂಗದ ಮುಂದೊಗಲ ಭಾಗವನ್ನು ಕತ್ತರಿಸಿ ಹಾಕುವ ಮತಸಂಸ್ಕಾರದ ವಿಧಿಗಿಂತ ಇದು  ತೀರಾ ಬೇರೆಯಾಗಿರುತ್ತದೆ ಎಂಬುದನ್ನು  ಈಗಾಗಲೇ ಪ್ರತ್ಯಕ್ಷ ಅನುಭವಗಳನ್ನಾಧರಿಸಿದ ವಿವಿಧ ಸಂಶೋಧನಾ ವರದಿಗಳು ಹಾಗೂ  ಆತ್ಮಕಥೆಗಳು ದಾಖಲಿಸುತ್ತವೆ.  ಇಂತಹದೊಂದು ಪದ್ಧತಿ ಇದೆ ಎಂಬುದನ್ನು ನಂಬುವುದೇ  ಕಷ್ಟ ಎನಿಸುವ ರೀತಿಯ ಭೀಕರ ಅನುಭವಗಳು ಈ ಆತ್ಮಕಥನಗಳಲ್ಲಿ ದಾಖಲಾಗಿವೆ.

ಮಧು ಕಿಶ್ವರ್ ಸಂಪಾದಕತ್ವದ ‘ಮಾನುಷಿ’ ಪತ್ರಿಕೆ, 1981ರಷ್ಟು ಹಿಂದೆಯೇ ತನ್ನ  8ನೇ ಸಂಚಿಕೆಯಲ್ಲಿ ಪ್ರಕಟಿಸಿದ್ದ ಅಧ್ಯಯನ ಆಧರಿತ ಲೇಖನವೊಂದರಲ್ಲಿ, ಜನನಾಂಗದಲ್ಲಿ ರಂಧ್ರ­ವನ್ನಷ್ಟೇ ಉಳಿಸಲಾಗುವ ಈ ಕೆಟ್ಟ ಸಂಪ್ರ­ದಾಯದಿಂದ ಹೆಣ್ಣು ಅನುಭವಿಸುವ ಅಪರಿಮಿತ ನೋವುಗಳನ್ನು  ಸುದೀರ್ಘವಾಗಿ ವಿವರಿಸಲಾಗಿತ್ತು. ವಿವಾಹವಾದಾಗ, ಎಫ್‌ಜಿಎಂಗೊಳಗಾದ ಹೆಣ್ಣಿನ ರಂಧ್ರವನ್ನು ಚಾಕು ಅಥವಾ ರೇಜರ್‌ನಿಂದ ಪದೇ ಪದೇ ತೆರೆಯಬೇಕಾ­ಗುತ್ತದೆ. ನಂತರ ಈ ರಂಧ್ರ ಮುಚ್ಚಿ ಹೋಗದಂತೆ ವಿವಾಹವಾದ ಮೊದಲ ದಿನಗಳಲ್ಲಿ ಆಕೆಯನ್ನು ಸಾಧ್ಯವಾದಷ್ಟು ಹೆಚ್ಚು ‘ಬಳಸಬೇಕೆಂದು’ ಆಕೆಯ ಪತಿಗೆ ಬೋಧನೆ ನೀಡಲಾಗುತ್ತದಂತೆ. ಹೆರಿಗೆಯ ನಂತರ ಮತ್ತೆ ತನ್ನ ‘ಯಜಮಾನ’ನಿಗೆ ಆರಾಮದಾಯಕ ಬಿಗಿ ಸೃಷ್ಟಿಸುವುದಕ್ಕಾಗಿ ಆಕೆಗೆ ಮತ್ತೆ ಹೊಲಿಗೆಗಳನ್ನು ಹಾಕಲಾಗುತ್ತದೆ ಎಂದು ಈ ಲೇಖನ ವಿವರಿಸಿದೆ. ತನ್ನ ನೆರೆಮನೆಯವಳ 17 ಹೆರಿಗೆಗಳ ಕುರಿತಾಗಿ ಸೂಡಾನ್‌ನ ಮಹಿಳೆ ಯೊಬ್ಬಳು ಹೇಳಿದ ಮಾತುಗಳು ಹೀಗಿವೆ: ‘ಏನೋ ಒಂದು ಬಟ್ಟೆಯ ತುಂಡು ಎಂಬಂತೆ ಅವರು ಅದನ್ನು ಕತ್ತರಿಸುತ್ತಾರೆ, ಮತ್ತೆ ಹೊಲಿಯುತ್ತಾರೆ. ಕತ್ತರಿಸುತ್ತಾರೆ, ಮತ್ತೆ ಹೊಲಿಯುತ್ತಾರೆ’.

ಇಂತಹದೊಂದು ವಿಕೃತ ಆಚರಣೆಗೆ ಕಾರಣವಾದರೂ ಏನು? ಇದಕ್ಕೆ ಉತ್ತರ:  ಹೆಣ್ಣಿನ ಲೈಂಗಿಕತೆಯ ನಿಯಂತ್ರಣ. ಹೆಣ್ಣಿನ ಲೈಂಗಿಕ ಆಸಕ್ತಿಯನ್ನು ಕುಂದಿಸುವುದಕ್ಕಾಗಿ ಆಕೆಯ ನೈಸರ್ಗಿಕ ಸಂವೇದನೆಯನ್ನೇ ಹತ್ತಿಕ್ಕುವ ಉದ್ದೇಶ ಇಲ್ಲಿದೆ. ಇದು ಹೆಣ್ಣಿನ ಮೇಲೆ ಒಡೆತನ ಸಾಧಿಸುವ ಕ್ರೌರ್ಯದ ಪಾರಮ್ಯ. ಇಂತಹ ಹೀನ ಸಂಪ್ರದಾಯವನ್ನು ಕಿತ್ತೊಗೆಯಲು ದಶಕ­ಗಳಿಂದ ಚರ್ಚೆಗಳು, ಜಾಗೃತಿ ಆಂದೋಲ­ನಗಳು ನಡೆಯುತ್ತಲೇ ಇವೆ. ಮಹಿಳೆಯರ ಆರೋಗ್ಯಕ್ಕೆ ಮಾರಕವಾಗುವ ಇಂತಹ ಸಂಪ್ರದಾಯಗಳ ಮೂಲೋತ್ಪಾಟನೆಗೆಂದೇ 1979ರಷ್ಟು ಹಿಂದೆಯೇ ನಡೆಸಲಾದ ವಿಶ್ವಸಂಸ್ಥೆ ಸಮ್ಮೇಳನ ಈ ಪಿಡುಗಿನ ಬಗ್ಗೆ ವಿಶೇಷವಾಗಿ ಚರ್ಚಿಸಿತ್ತು. ಆಗ ಈ ಪಿಡುಗಿನ ಮೂಲೋತ್ಪಾ­ಟನೆಯ ಬದಲಿಗೆ ಇದರ ಸಾಂಸ್ಥೀಕರಣ ವ್ಯವಸ್ಥೆಯ ಪರವಾಗಿ ಪುರುಷ ಪ್ರತಿನಿಧಿಗಳು ವಾದಿಸಿದ್ದರು. ಎಂದರೆ, ಮನೆಗಳಲ್ಲಿ ಈ ಆಚರಣೆ ನಡೆಸುವ ಬದಲು ಆಸ್ಪತ್ರೆ, ಕ್ಲಿನಿಕ್‌ ಗಳಲ್ಲಿ ಇದನ್ನು ನಡೆಸಬೇಕೆಂಬ ವಾದ ಮಂಡನೆ ಯಾಗಿತ್ತು.

ಅನೇಕ ಪ್ರಮುಖ ನಗರಗಳ ಆಸ್ಪತ್ರೆಗಳಲ್ಲಿ ಇದು ಈಗ ಚಾಲ್ತಿಗೂ ಬಂದಿದೆ. ಆದರೆ ‘ಪರಂಪರೆ ಎಂಬುದು ಸ್ವರ್ಗದಿಂದ ಧರೆಗಿಳಿದಿರುವುದಿಲ್ಲ.  ದೇವರೂ ಕಳಿಸಿರುವುದಿಲ್ಲ. ಸಂಸ್ಕೃತಿ ರೂಪಿಸು­ವವರು ನಾವು. ಅದನ್ನು ಬದಲಾಯಿಸುವ ಹಕ್ಕು ನಮಗಿದೆ. ಹೆಣ್ಣುಮಕ್ಕಳ ಆರೋಗ್ಯಕ್ಕೆ ಮಾರ­ಕವಾ­ಗು­ವಂತಹ ಪರಂಪರೆ ಯನ್ನು ನಾವು ನಿಲ್ಲಿಸ­ಬೇಕು’ ಎಂಬಂತಹ ಮಕ್ಕಳ ಹಕ್ಕುಗಳ ಹದಿ­ಹರೆಯದ ಕಾರ್ಯಕರ್ತೆ ಮಲೈಲಾ ಯೂಸಫ್‌ಜೈ ಅವರ ಮಾತುಗಳು ಇಲ್ಲಿ ಮುಖ್ಯ. ಆಫ್ರಿಕಾದ 29 ರಾಷ್ಟ್ರಗಳು ಹಾಗೂ ಏಷ್ಯಾ, ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳಲ್ಲಿ ಎಫ್‌ಜಿಎಂ ಈಗಲೂ ಚಾಲ್ತಿಯಲ್ಲಿರುವುದು ದುರ­ದೃಷ್ಟಕರ. ಪ್ರತಿವರ್ಷ ಅಂದಾಜು 30 ಲಕ್ಷ  ಬಾಲ­ಕಿ­ಯರು ಹಾಗೂ ಮಹಿಳೆಯರು ಈ ಅಪಾಯ ಎದುರಿಸ ಬೇಕಾಗಿದೆ. ಜೊತೆಗೆ 13 ಕೋಟಿ ಎಫ್‌ಜಿಎಂಗೆ ಒಳಗಾದ ಸಂತ್ರಸ್ತರು ಅದರ ಪರಿಣಾಮ ಅನುಭವಿಸುತ್ತಾ ಬದುಕುತ್ತಿ­ದ್ದಾರೆ.

ಮುಸ್ಲಿಮರಲ್ಲಿ ಈ ಸಂಪ್ರದಾಯ ವ್ಯಾಪಕವಾ­ಗಿದ್ದರೂ, ಕ್ರೈಸ್ತರು ಹಾಗೂ ಯಹೂದಿಗಳಲ್ಲೂ ಇದು ಪ್ರಚಲಿತವಿದೆ. ಭಾರತದಲ್ಲೂ  ಷಿಯಾ ಉಪ ಪಂಗಡವಾದ ದಾವೂಡಿ ಬೊಹ್ರಾ ಸಮುದಾಯದಲ್ಲಿ ಈ ಆಚರಣೆ ಚಾಲ್ತಿಯಲ್ಲಿದೆ ಎನ್ನಲಾಗುತ್ತದೆ. ‘ಸ್ತ್ರೀ ಸುನತಿಯ ಬಗ್ಗೆ ಎಲ್ಲರಿಗೂ ಅರಿವು ಮೂಡಬೇಕು. ಇದು ಕಲ್ಚರ್ ಅಲ್ಲ ಟಾರ್ಚರ್’ ಎನ್ನುತ್ತದೆ ವಾರಿಸ್ ಡೀರಿ  ಪ್ರತಿಷ್ಠಾನದ ಪ್ರಣಾಳಿಕೆ. ಪ್ರಖ್ಯಾತ ಕಪ್ಪು ರೂಪದರ್ಶಿಯಾಗಿರುವ ವಾರಿಸ್ ಡೀರಿ 1997ರಿಂದ  ಎಫ್ ಜಿ ಎಂ ವಿರುದ್ಧ ದೊಡ್ಡ ಹೋರಾಟವನ್ನೇ ನಡೆಸು­ತ್ತಿದ್ದಾರೆ. ತಮ್ಮ ಬದುಕಿನಲ್ಲಿ   ಘಟಿಸಿದ ಅತ್ಯಂತ ಕ್ರೌರ್ಯದ ದಿನದ ಬಗ್ಗೆ ವಿಶ್ವದಾದ್ಯಂತ ಅವರು ಭಾಷಣಗಳನ್ನು ಮಾಡಿದ್ದಾರೆ.  ಆ ಕ್ರೌರ್ಯ­ದಿಂದಾದ ದೈಹಿಕ ಹಾಗೂ ಮಾನಸಿಕ ಗಾಯಗಳ ಬಗ್ಗೆ ಬೆಳಕು ಚೆಲ್ಲಿದ್ದಾರೆ.

ವಾರಿಸ್ ಡೀರಿ ಹುಟ್ಟಿದ್ದು  ಸೊಮಾಲಿ ಮರು ಭೂಮಿಯಲ್ಲಿನ ಅಲೆಮಾರಿ ಕುಟುಂಬ­ದಲ್ಲಿ  1965ರಲ್ಲಿ.  ಐದನೇ ವಯಸ್ಸಿನಲ್ಲಿ ಆಕೆ  ಎಫ್‌ಜಿಎಂಗೆ ಒಳಗಾದಳು. 13ನೇ ವಯಸ್ಸಿನಲ್ಲಿ  ತನ್ನ ಅಜ್ಜನ ವಯಸ್ಸಿನವನನ್ನು ಮದುವೆಯಾ­ಗಬೇಕಾದ ವಾರಿಸ್ ಡೀರಿ  ತನ್ನ ದೇಶದಿಂದಲೇ ಪಲಾಯನಗೈದಳು.   ಅನೇಕ ಕಷ್ಟ ಕಾರ್ಪಣ್ಯ­ಅನುಭವಿಸಿ ಲಂಡನ್‌ಗೆ  ಬಂದು ಮನೆಗೆಲಸದ­ವಳಾಗಿ ಕೆಲಸ ಪಡೆದುಕೊಂಡಳು. ನಂತರ ಮ್ಯಾಕ್ ಡೊನಾಲ್ಡ್‌ನಲ್ಲಿ ಉದ್ಯೋಗ ಪಡೆದು­ಕೊಂಡಳು. 18ನೇ ವಯಸ್ಸಿನಲ್ಲಿ  ಬ್ರಿಟನ್‌ನ ಪ್ರಮುಖ ಫ್ಯಾಷನ್ ಫೊಟೊಗ್ರಾಫರ್  ಟೆರೆನ್ಸ್ ಡೊನೊವನ್ ಕಣ್ಣಿಗೆ ಬಿದ್ದ  ನಂತರ ಅವಳ ಬದುಕಿನ ಗತಿ ಬದಲಾಯಿತು.  ಸ್ವಲ್ಪ ದಿನಗಳಲ್ಲೇ ಆಕೆ ಅಂತರರಾಷ್ಟ್ರೀಯ ಖ್ಯಾತಿಯ ರೂಪದರ್ಶಿ­ಯಾದಳು. ಎಫ್‌ಜಿಎಂ ವಿರುದ್ಧ ಜಾಗೃತಿಗೆ  ವಿಶ್ವಸಂಸ್ಥೆ ವಿಶೇಷ ರಾಯಭಾರಿಯಾಗಿಯೂ 1996ರಲ್ಲಿ  ನೇಮಕಗೊಂಡಿದ್ದಳು.

1997ರಲ್ಲಿ  ನ್ಯೂಯಾರ್ಕ್ ನ ಹಾರ್ಪರ್ ಕಾಲಿನ್ಸ್ ವಾರಿಸ್ ಡೀರಿಯ ಆತ್ಮಕಥೆ  ‘ಡೆಸೆರ್ಟ್ ಫ್ಲವರ್’ ಪ್ರಕಟಿಸಿತು. ಈ ಪುಸ್ತಕ­ದಲ್ಲಿನ ದಿಗ್ಭ್ರಮೆ ಮೂಡಿಸುವ ವಿವರಗಳಿಂದಾಗಿ ವಿಶ್ವದಾದ್ಯಂತ ‘ಬೆಸ್ಟ್  ಸೆಲ್ಲರ್’ ಆಯಿತು. ‘ಮರುಳುಗಾಡಿನ ಕುಸುಮ’ ಎನ್ನುವ  ಹೆಸರಲ್ಲಿ ವಾರಿಸ್ ಡೀರಿಯ ಆತ್ಮಕತೆ ಜೊತೆಗೇ ಇತರ ಆರು ಮಹಿಳೆಯರ ಆತ್ಮಚರಿತ್ರೆಗಳನ್ನೂ ಸೇರಿಸಿ ಕನ್ನಡದಲ್ಲಿ 2002ರಷ್ಟು ಹಿಂದೆಯೇ ಭಾರತಿ ಮೋಹನ ಕೋಟಿ ಪುಸ್ತಕ ಪ್ರಕಟಿಸಿದ್ದಾರೆ.
ಈಜಿಪ್ಟ್‌ನ ಪ್ರಖ್ಯಾತ ಕಾದಂಬರಿಕಾರ್ತಿ, ವೈದ್ಯೆ  ನವಾಲ್ ಎಲ್ ಸದಾವಿ ಅವರು ‘ಹಿಡನ್ ಫೇಸ್ ಆಫ್ ಈವ್– ವಿಮೆನ್ ಇನ್ ದಿ ಅರಬ್ ವರ್ಲ್ಡ್’ ಪುಸ್ತಕದಲ್ಲಿ ಎಫ್‌ಜಿಎಂಗೆ ಒಳಗಾಗುವ ತಮ್ಮ ದಾರುಣ ಅನುಭವದ ಜೊತೆಗೇ ಮಧ್ಯ ಪ್ರಾಚ್ಯದಲ್ಲಿ ಮಹಿಳೆಯಾ­ಗಿರು­ವು­ದರ ಅಂತ ರಂಗದ ಕಥೆ ಕಟ್ಟಿಕೊಟ್ಟಿದ್ದಾರೆ.

ಅವರು ಬರೆಯುತ್ತಾರೆ: ‘‘ನಾನು ಶಾಲೆಗೆ ಹೋಗುವಾಗ, ನನ್ನ ನೋಟ್ ಬುಕ್ ಗಳ ಮೇಲೆ ನನ್ನ ತಂದೆಯ ಹೆಸರನ್ನು ಶಿಕ್ಷಕರು ಬರೆ­ಯು­ತ್ತಿದ್ದರು. ತಾಯಿಯ ಹೆಸರನ್ನು ಬರೆಯುತ್ತಿ­ರಲಿಲ್ಲ. ‘ಏಕೆ’ ಎಂದು ಅಮ್ಮನನ್ನು ಪ್ರಶ್ನಿಸಿದರೆ ‘ಅದು ಹಾಗೇ’ ಎಂದು ಉತ್ತರಿಸಿದ್ದರು.  ಮಕ್ಕಳಿಗೆ ತಂದೆ ಹೆಸರು ನೀಡಲಾಗುತ್ತದೆ ಎಂದು ಅಪ್ಪ ಹೇಳಿದರು. ‘ಏಕೆ ’ ಎಂದರೆ ‘ಅದು ಹಾಗೇ’  ಎಂಬಂತಹ ಉತ್ತರವೇ ಬಂತು. ಆಗ ನಾನು ಧೈರ್ಯ ಮಾಡಿ ‘ಅದು ಹಾಗೇ ಏಕೆ’ ಎಂದು ಪ್ರಶ್ನಿಸಿದ್ದೆ. ಇಷ್ಟರೊಳಗೆ ನಿಜಕ್ಕೂ ಅಪ್ಪನಿಗೂ ಉತ್ತರ ಗೊತ್ತಿಲ್ಲ ಎಂಬುದು ಅರಿವಾಗಿತ್ತು. ಆ ನಂತರದಿಂದ ನನ್ನ ಉತ್ತರಗಳನ್ನು ಕಂಡು­ಕೊ ಳ್ಳಲು ಹೊರಟೆ.” ಮೌಲ್ಯವ್ಯವಸ್ಥೆಗಳ ಬದಲಾವಣೆ­ಗಾಗಿ ನಾವೂ ‘ಅದು ಹಾಗೇ’ ಎನ್ನದೆ ಹೊಸ ಉತ್ತರಗಳನ್ನು ಕಂಡುಕೊಳ್ಳಬೇಕಲ್ಲವೆ?

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)