‘ಅನ್ನ’ ಬೆಳೆದವನಿಗೆ ‘ಭಾಗ್ಯ’ ಬೇಡವೇ?

7

‘ಅನ್ನ’ ಬೆಳೆದವನಿಗೆ ‘ಭಾಗ್ಯ’ ಬೇಡವೇ?

ಐ.ಎಂ.ವಿಠಲಮೂರ್ತಿ
Published:
Updated:
‘ಅನ್ನ’ ಬೆಳೆದವನಿಗೆ ‘ಭಾಗ್ಯ’ ಬೇಡವೇ?

‘ಕೋಟಿ ವಿದ್ಯೆಗಳಿಗಿಂತ ಮೇಟಿ ವಿದ್ಯೆಯೇ ಮೇಲು’ ಎಂಬುದು ರೈತರ ಕಸುಬು ಮತ್ತು ಬದುಕನ್ನು ಕುರಿತು ಸಾಮಾನ್ಯವಾಗಿ ಹೇಳುವ ಹೆಮ್ಮೆಯ ಮಾತು. ಈ ಮಾತು ರೈತರ ಅಸಾಮಾನ್ಯ ಜ್ಞಾನ, ಪರಿಣತಿ, ಶ್ರಮ, ಸಹನೆ, ದಿನನಿತ್ಯ ಭೂಮಿ–ನಿಸರ್ಗದೊಂದಿಗೆ ಮುಖಾಮುಖಿ ಇವೇ ಮೊದಲಾದ ಅಂಶಗಳನ್ನು ಗಮನಿಸಿ ಆಡಿರುವ ಅನುಭವದ ಮಾತೆಂದು ನಾನು ನಂಬಿದ್ದೇನೆ.ನಾನು 6–7 ವರ್ಷದವನಿದ್ದಾಗಲೇ ಪ್ರತಿದಿನ ನಮ್ಮ ತಂದೆ ನನ್ನನ್ನು ಕಾಫಿ ತೋಟಕ್ಕೆ ಕರೆ­ದೊಯ್ಯು­ತ್ತಿದ್ದರು. ಕಾಫಿ ಬೀಜ ಭೂಮಿಗೆ ಹಾಕಿ ಮೊಳಕೆ ಮಾಡಿ, ಪಾತಿಗೆ ವರ್ಗಾಯಿಸಿ, ನೆಟ್ಟು ಅವು ಗಿಡಗಳಾಗುವವರೆಗೆ ಅವುಗಳನ್ನು ಜೋಪಾನ ಮಾಡಬೇಕಾದ ಎಲ್ಲ ಕ್ರಮಗಳನ್ನು ತಿಳಿ­ಸು­ತ್ತಿದ್ದರು. ಕಾಫಿ ಗಿಡಗಳನ್ನು ನೆಡುವಾಗ ಗಿಡದಿಂದ ಗಿಡಕ್ಕೆ, ಸಾಲಿನಿಂದ ಸಾಲಿಗೆ ಎಷ್ಟು ಅಂತರದಲ್ಲಿ ನೆಡಬೇಕು, ತಾಯಿಬೇರು ಸೊಟ್ಟ­ವಾಗ­ದಂತೆ ಹೇಗೆ ವರ್ಗಾಯಿಸಬೇಕು, ನೆಟ್ಟ ಗಿಡಗಳು ಮಳೆಗಾಳಿಗೆ ಅಲುಗಿ ಬೇರು ಸಡಿಲವಾಗದಂತೆ ಗಿಡದ ಎರಡೂ ಬದಿಗೆ ಹೇಗೆ ‘ಕತ್ರಿಗೂಟ’ ನೆಡಬೇಕು ಇತ್ಯಾದಿ ಕ್ರಮಗಳನ್ನು ನನ್ನಿಂದ ಮಾಡಿಸಿ, ತೋರಿಸಿ ಕಲಿಸಿದರು. ಇದೊಂದು ದಿನಚರಿಯಾಯ್ತು. ಕಾಫಿ ಗಿಡ­ಗಳನ್ನು ಕಸಿ ಮಾಡುವುದು, ಸರಿಯಾದ ಎತ್ತ­ರಕ್ಕೆ ಮಟ್ಟ ಮಾಡುವುದು, ವಿವಿಧ ಹಂಗಾಮುಗಳಲ್ಲಿ ಕಡ್ಡಾಯವಾಗಿ ಮಾಡಬೇಕಾದ ಔಷಧಿ ಸಿಂಪಡಣೆ, ರಸಗೊಬ್ಬರ ಬಳಕೆ ಇನ್ನಿತರ ಚಟುವಟಿಕೆಗಳನ್ನು ಮನಸ್ಸಿಗೆ ನಾಟುವಂತೆ ವಿವರಿಸುತ್ತಿದ್ದರು.ನಮ್ಮ ತಂದೆಯ ಕಾಫಿ ಬೆಳೆಯುವ ಬಗೆಗಿನ ಅನುಭವ ಮತ್ತು ಜ್ಞಾನದ ಬಗೆಗೆ ನನಗೆ ಅಪಾರ ಹೆಮ್ಮೆ­ಯಿತ್ತು. ಕಾಫಿ ಬೋರ್ಡ್‌ನವರು ಹೊರತರುತ್ತಿದ್ದ ಮಾಸಿಕದಲ್ಲಿರುತ್ತಿದ್ದ ಕಾಫಿ ಬೆಳೆಯ ಬಗೆಗಿನ ಮಾಹಿತಿಯನ್ನು ನನ್ನಿಂದ ಓದಿಸು­ತ್ತಿದ್ದರು. ಒಬ್ಬ ಬೆಳೆಗಾರ ತನ್ನ ತೋಟ­ದಲ್ಲಿ ಪ್ರತಿನಿತ್ಯ ತಿರುಗಾಡಬೇಕೆಂದು ತೋಟದ­ಲ್ಲಿರುವ ಗಿಡ–ಮರಗಳು ಅಪೇಕ್ಷಿಸುತ್ತವೆ ಎನ್ನುತ್ತಿದ್ದರು.ಕಾಫಿಯ ಹೂವಿನ ಮಳೆಗೆ ಪ್ರತಿಯೊಬ್ಬ ಬೆಳೆಗಾರ ಚಾತಕ ಪಕ್ಷಿಯಂತೆ ಹಾತೊರೆಯುತ್ತಿ­ರು­ತ್ತಾನೆ. ಮಾರ್ಚ್‌–ಏಪ್ರಿಲ್‌ ತಿಂಗಳಿನ ಹೂವಿನ ಮಳೆ, ಬೆಳೆಗಾರನಿಗೆ ವರದಾನವಿದ್ದಂತೆ. ಈಗಿರು­ವಂತೆ ತುಂತುರು, ಹನಿ ನೀರಾವರಿ ಅನುಕೂಲ­ವಿರದಿದ್ದ ಕಾಲದಲ್ಲಿ ಪ್ರತಿದಿನ ಮಧ್ಯಾಹ್ನ, ಸಂಜೆ, ರಾತ್ರಿ ಆಕಾಶದೆಡೆಗೆ ತದೇಕ­ಚಿತ್ತದಿಂದ ದಿಟ್ಟಿಸಿ ನೋಡುತ್ತಿದ್ದ ಬಗೆ ಕಂಡು ‘ಅವರಿಗೆ ಕುತ್ತಿಗೆ ನೋವು ಬರುವುದಿಲ್ಲವೆ’ ಎನಿಸುತ್ತಿತ್ತು. ಈ ದಿಕ್ಕಿನಲ್ಲಿ ಮೋಡ ಕಟ್ಟಿದರೆ ಮಳೆ ಗ್ಯಾರಂಟಿ ಎನ್ನುತ್ತಿದ್ದರು. ಮಳೆಯಾದರೆ ಸಂಭ್ರಮ, ಸಡಗರ, ಇಲ್ಲವಾದರೆ ನಿರಾಶೆ ಮತ್ತು ಬೇಸರ. ಇದು ಪ್ರತಿಯೊಬ್ಬ ರೈತನ ದಿನಚರಿ. ಹಚ್ಚಹಸಿರಿನ ಗಿಡಗಳ ರೆಕ್ಕೆಗಳ ಮೇಲೆ ಮಲ್ಲಿಗೆ ಮಾಲೆ ಹಾಕಿದಂತೆ ಅರಳಿದ ಕಾಫಿ ಹೂವು­ಗಳನ್ನು ನೋಡುವುದೇ ಒಂದು ಸಡಗರ. ಡಿಸೆಂ­ಬರ್‌–ಜನವರಿ ತಿಂಗಳಲ್ಲಿ ಕಾಫಿಯ ಕೆಂಪು ಚೆರ್ರಿ­ಯಂತಹ ಹಣ್ಣುಗಳನ್ನು ಬಿಡಿಸಿ ಬೇಳೆ­ಯಾಗಿಸು­ವುದು ಮತ್ತೊಂದು ಸಂಭ್ರಮ.ನಮ್ಮ ಮನೆಯ ಸುತ್ತ ಹಣ್ಣು–ತರಕಾರಿಗಳ ಬೆಳೆ ಸದಾ ಇರುತ್ತಿತ್ತು. ನಾನು ಮತ್ತು ನನ್ನ ಅಕ್ಕ ಜಯಕ್ಕ ಈ ತೋಟಗಾರಿಕೆಯಲ್ಲಿ ಸಂಪೂರ್ಣ ಭಾಗಿಯಾಗಬೇಕಿತ್ತು. ಒಮ್ಮೆ ಮನೆಯ ಬಳಿ ಸೊಂಪಾಗಿ ಬೆಳೆದಿದ್ದ ಮೆಣಸಿನ ಗಿಡಗಳಲ್ಲಿ ಕಾಯಿಗಳೇ ಬಿಡುತ್ತಿರಲಿಲ್ಲ. ಆಗಿನ ಕಾಲದಲ್ಲಿ ಹಳ್ಳಿಗಳಿಗೆ ಬರುತ್ತಿದ್ದ ವಿಎಲ್‌ಡಬ್ಲ್ಯು (ವಿಲೇಜ್‌ ಲೆವಲ್‌ ವರ್ಕರ್‌) ಡಿಸೋಜ ಅವರನ್ನು ನಮ್ಮ ತಂದೆ ವಿಚಾರಿಸಿದರು. ಅವರು ನಮ್ಮ ಮನೆಗೆ ಬಂದು ಗಿಡಗಳನ್ನೆಲ್ಲ ಪರಿಶೀಲಿಸಿ ನೋಡಿ ಅವು ಗಂಡು ಗಿಡಗಳು ಹಾಗಾಗಿ ಕಾಯಿ ಬಿಡುತ್ತಿಲ್ಲವೆಂದು ತಮ್ಮ ‘ತಜ್ಞ’ ಅಭಿಪ್ರಾಯ ನೀಡಿದ್ದರು.ಸುಂದರ ಕಾಯದ ಡಿಸೋಜ ಅವರ ಮಾತು ಕೇಳಿ ನಮ್ಮ ತಂದೆಗೆ ಆಶ್ಚರ್ಯ­ವಾಗಿ ಅವರನ್ನು ವಿಚಿತ್ರವಾಗಿ ದಿಟ್ಟಿಸಿ ನೋಡಿ­ದರು. ಜಾಗ ಖಾಲಿ ಮಾಡಿದರೆ ಸಾಕೆಂದು ವಿಎಲ್‌­ಡಬ್ಲ್ಯು ಸಾಹೇಬರು ನಿರ್ಗಮಿಸಿದರು. ಅದಾದ 2–3 ದಿನಗಳ ಕಾಲ ಸೂಕ್ಷ್ಮವಾಗಿ ಗಮನಿಸಿ­ದಾಗ ತಿಳಿಯಿತು. ನಾವು ಸಾಕಿದ್ದ ಕೋಳಿ­ಗಳು ಮತ್ತು ಅವುಗಳ ಮರಿಗಳು ನೆಗೆ ನೆಗೆದು ಮೆಣಸಿನ­ಕಾಯಿ ಗಿಡದ ಮೊಗ್ಗುಗಳನ್ನು ತಿಂದು ಅವು ಎಂದಿಗೂ ಕಾಯಿ ಬಿಡಲು ಸಾಧ್ಯವಾಗದಂತೆ ಮಾಡುತ್ತಿ­ದ್ದ­ವೆಂದು. ಒಂದು ವಾರ ಕೋಳಿಗಳನ್ನು ಗೂಡಿನಲ್ಲಿ ಕೂಡಿ ಹಾಕಿ­ದೆವು. ಮೆಣಸಿನ ಗಿಡದ ಮೊಗ್ಗು, ಹೂವಾಗಿ, ಕಾಯಾಗಲು ಶುರುವಾಯ್ತು. ವಿಎಲ್‌ಡ್ಲ್ಯು ಅವರ ಗಂಡು ಮೆಣಸಿನ ಗಿಡಗಳೆಲ್ಲ ಹೆಣ್ಣಾಗಿ ಪರಿವರ್ತನೆಗೊಂಡಿದ್ದವು. ನಮ್ಮ ತಂದೆ ‘ಪುಸ್ತಕದ ಬದನೆ­ಕಾಯಿ’ ಎಂದರೆ ಇದೇ ನೋಡು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ಕೃಷಿತಜ್ಞರು ಹೇಳಿದ್ದನ್ನೆಲ್ಲ ಅತ್ಯಂತ ಗುಮಾನಿ­ಯಿಂದ ನೋಡುವಂತೆ ಆಯಿತು.ನಮ್ಮ ಚಿಕ್ಕಪ್ಪ ಐ.ಪಿ. ನಿಂಗೇಗೌಡರು ಹೊಲ–ಗದ್ದೆಗಳ ವ್ಯವಸಾಯದಲ್ಲಿ ತುಂಬ ಅನುಭವ­ಸ್ಥರು. ಹೊಲ–ಗದ್ದೆಗಳ ಕೆಲಸಗಳನ್ನು ನನಗೆ ತಿದ್ದಿ–ತೀಡಿ ಕಲಿಸಿದವರು. ನಾನು ಕಾಲೇಜು ಮುಗಿಸುವವರೆಗೂ ರಜಾದಿನಗಳಲ್ಲಿ  ಹೊಲ–ಗದ್ದೆಗಳ ಬೇಸಾಯಕ್ಕೆ ನನ್ನನ್ನು ಕರೆದುಕೊಂಡು ಹೋಗು­ತ್ತಿದ್ದರು. ಬೆಳಗಿನ 6 ಗಂಟೆಗೆ ಗದ್ದೆ­ಗಳನ್ನು ಉಳಲು ಪ್ರಾರಂಭಿಸುತ್ತಿದ್ದೆವು. ಎತ್ತು­ಗಳಿಗೆ ನೊಗ ಹಾಕಿ ಕಟ್ಟಿ, ನೇಗಿಲನ್ನು ನೊಗದ ಮೇಲೆ ಕೂರಿಸಿ ಅವೆರಡಕ್ಕೂ ಹಗ್ಗದ ಕುಣಿಕೆ ಹಾಕಿ ನೇಗಿಲು ನೊಗ ಸೇರಿಸಿ ಕಟ್ಟುವುದೇ ಒಂದು ಕಲೆ. ಬಹಳ ಕಡಿದಾಗದಂತೆ 4–5 ಇಂಚು ಆಳಕ್ಕೆ ಭೂಮಿಯನ್ನು ಉಳುವ ಮಟ್ಟಕ್ಕೆ ಸರಿಯಾಗಿ ಹೊಂದಿಸಿ ಕಟ್ಟಬೇಕು. ನಮ್ಮ ಚಿಕ್ಕಪ್ಪ ಮತ್ತೆ ನಮ್ಮ ಆಳುಗಳು ಮೂರು ನಿಮಿಷದಲ್ಲಿ ಮಾಡುವ ಕೆಲಸಕ್ಕೆ ನಾನು ಹತ್ತು ನಿಮಿಷ ತೆಗೆದು­ಕೊಳ್ಳುತ್ತಿದ್ದೆ. ಇದು ಕಾಲೇಜಿನಲ್ಲಿ ಓದಿಕೊಂಡು ತಿರುಗಿದಷ್ಟು ಸುಲಭವಲ್ಲವೆಂದು ನನ್ನನ್ನು ರೇಗಿಸು­ತ್ತಿದ್ದರು. ಕ್ರಮೇಣ ಪರಿಣತಿ ಪಡೆದೆ. ಬೇಸಾಯ ಮಾಡುವ ಎತ್ತುಗಳು ನನ್ನ ಸಾಧನೆ ಮೆಚ್ಚಿ­ದಂತೆ ತಲೆ ಅಲ್ಲಾಡಿಸುತ್ತಿದ್ದವು. ಹೊಲ–ಗದ್ದೆಗಳಲ್ಲಿ ಕೆಲಸ ಮಾಡುತ್ತಾ ಅಲ್ಲಿ ಕುಳಿತು ಊಟ–ತಿಂಡಿ ಮಾಡುವ ಖುಷಿ ಇಲ್ಲಿಯ ತನಕ ನನಗೆ ಯಾವ ಪಂಚತಾರಾ ಹೋಟೆಲ್‌ನಲ್ಲೂ ಸಿಕ್ಕಿಲ್ಲ.ನಮ್ಮದು ಅವಿಭಕ್ತ ಕುಟುಂಬವಾಗಿತ್ತು. ನಮ್ಮ ತಂದೆ ಮತ್ತು ಚಿಕ್ಕಪ್ಪ ಬಹಳ ವರ್ಷಗಳ ಕಾಲ ಒಟ್ಟಿಗೇ ಇದ್ದರು. ಐರವಳ್ಳಿಯಲ್ಲಿ ನಮ್ಮ ಚಿಕ್ಕಪ್ಪ ಹೊಲ–ಗದ್ದೆಗಳನ್ನು ನೋಡಿಕೊಂಡರೆ, ನಮ್ಮ ತಂದೆ ಕಾಫಿ ತೋಟವಿದ್ದ ಕೀತೂರಿನಲ್ಲಿ ನೆಲೆಸಿ­ದರು. ಒಂದು ಒಟ್ಟುಕುಟುಂಬದಲ್ಲಿ ಸಿಗುವ ಪ್ರೀತಿ–ವಾತ್ಸಲ್ಯಗಳನ್ನು ನಮ್ಮ ಚಿಕ್ಕಪ್ಪ ನನಗೆ ಅಪಾರವಾಗಿ ನೀಡಿದರು. ಎಷ್ಟೇ ವಿದ್ಯಾವಂತ­ರಾದರೂ ವ್ಯವಸಾಯದ ಜ್ಞಾನ

ಹೊಂದಿರ­ಬೇಕು, ಅದು ನಮ್ಮ ಬೇರು ಎಂದು ನಂಬಿದ್ದವರು.ಜಮೀನು ಒಬ್ಬ ವ್ಯಕ್ತಿಗೆ ಸ್ವಾವಲಂಬನೆ ಮತ್ತು ಸ್ವಾಭಿಮಾನ ನೀಡುತ್ತದೆ. ಭೂಮಿಯನ್ನು ಉತ್ತು, ಬಿತ್ತಿದರೆ ಮೊಳಕೆಯೊಡೆಯುವ ಬೀಜ­ಗಳು, ಎಳೆಯ ಸಸಿಗಳಾಗಿ ಬೆಳೆದು, ಎತ್ತರದ ಗಿಡ­ಗಳಾಗಿ, ಹೂಬಿಟ್ಟು, ತೆನೆಯಾಗಿ ಫಸಲು ನೀಡುವ ಪರಿ ಬೆರಗು ಉಂಟು ಮಾಡುವಂಥದ್ದು. ನಿಸರ್ಗ ಮತ್ತು ರೈತನ ಅವಿನಾಭಾವ, ಅವರ್ಣನೀಯ ಸಂಬಂಧ, ಅದರಿಂದ ಉಂಟಾದ ವಿಸ್ಮಯ ಅರಿವಿಲ್ಲ­ದಂತೆಯೇ ಒಂದು ಬಗೆಯ ಉನ್ಮಾದ ಉಂಟು ಮಾಡುತ್ತದೆ. ಲಭಿಸುವ ಫಲದಲ್ಲಿ ರೈತನ ಶ್ರಮದ ಪಾಲು ಎಷ್ಟು, ನಿಸರ್ಗದ ಕೊಡುಗೆ ಎಷ್ಟು ಎಂದು ನಿಷ್ಕರ್ಷೆ ಮಾಡುವುದು ಕಷ್ಟ. ನಾವು ಬೆಳೆಯುತ್ತಿದ್ದ ಬೆಳೆಗಳು ಹಲವಾರು. ಕಾಫಿ, ಭತ್ತ, ರಾಗಿ, ಕಬ್ಬು, ಆಲೂಗಡ್ಡೆ, ಜೋಳ, ಬಾಳೆ, ಶುಂಠಿ, ಮೆಣಸಿನಕಾಯಿ... ಹೀಗೆ ಅನೇಕ ಬೆಳೆಗಳನ್ನು ಬೆಳೆಯುವ ಅನುಭವ ಶಾಲೆಯಾಗಿ ನಮ್ಮ ಜಮೀನುಗಳು ಕೊಟ್ಟ ಪಾಠಗಳು ಬಹು ಅಮೂಲ್ಯವಾದವು.ಗದಗಿನಲ್ಲಿ ಅಸಿಸ್ಟಂಟ್‌ ಕಮಿಷನರ್‌ ಆಗಿ­ದ್ದಾಗ ಅಂದಿನ ಕಾಲಕ್ಕೆ ನೀರಾವರಿ ಸೌಲಭ್ಯ­ವಿರದಿದ್ದ ರೋಣ, ಮುಂಡರಗಿ, ಗದಗ ಪ್ರಾಂತ್ಯದ ರೈತರ ಬರಗಾಲದ ಬದುಕು ದುಸ್ತರ­ವಾಗಿದ್ದನ್ನು ಅತಿ ಸನಿಹದಿಂದ ಗಮನಿಸಿದ್ದೇನೆ. ಮಳೆ ಬಂದರೆ ಬೆಳೆ ಇಲ್ಲವಾದರೆ ಸಂಕಟ. ನೀರಾ­ವರಿ ಜಮೀನಿನ ನಿರ್ವಹಣೆಯ ಅರಿವಿಲ್ಲದೆ ಸಂಕ­ಷ್ಟ­ಕ್ಕೀಡಾದ ನರಗುಂದ, ನವಲಗುಂದ ರೈತರ ಹೋರಾಟ, ಸಾವು–ನೋವುಗಳ ಸನ್ನಿವೇಶಗಳು ಸಹ ಇನ್ನೂ ನೆನಪಿನಲ್ಲಿವೆ.  ಎಂಬತ್ತರ ದಶಕದಲ್ಲಿ ನಾನು ಶಿವಮೊಗ್ಗದಲ್ಲಿ ಕೆಲಸ ಮಾಡುವ ವೇಳೆಗೆ ರೈತಸಂಘ ಬಲಿಷ್ಠವಾಗಿ ರೈತರ ಹಿತರಕ್ಷಣೆಗೆ ಹಲವಾರು ಹೋರಾಟ­ಗಳನ್ನು ನಡೆಸಿತು. ಪ್ರೊ. ಎಂ.ಡಿ. ನಂಜುಂಡ­ಸ್ವಾಮಿ­ಯವರ ನೇತೃತ್ವ ಮುಗಿದ ನಂತರ ಕ್ರಮೇಣ ರೈತ ಸಂಘಟನೆ ದಿಕ್ಕುತಪ್ಪಿ ರೈತರ ವಿಶ್ವಾಸ ಕಳೆದುಕೊಂಡಿತು.ರೈತರ ಸಮಸ್ಯೆಗಳು ಬಹಳ ಕ್ಲಿಷ್ಟ ಮತ್ತು ಸಂಕೀರ್ಣ. ಸಮಸ್ಯೆಗಳು ಸರಳವಲ್ಲದ್ದರಿಂದ ಪರಿ­ಹಾರ­ಗಳು ಸಹ ಸುಲಭವಿಲ್ಲ. ರೈತರ ಹಿತ­ಕಾಯುವುದೇ ತಮ್ಮ ಧ್ಯೇಯವೆಂದು ಅಧಿಕಾರದ ಗದ್ದುಗೆ ಏರಿದ ಸರ್ಕಾರಗಳಿಗೂ ಹೆಚ್ಚಿನ ಪರಿಹಾರ ಒದಗಿಸಲಾಗಲಿಲ್ಲ. ಸಾಲ ಮನ್ನಾ, ಬಡ್ಡಿ ಮನ್ನಾ, ರಿಯಾಯ್ತಿ ಬಡ್ಡಿದರದಲ್ಲಿ ಸಾಲ, ರಿಯಾಯ್ತಿ ದರದಲ್ಲಿ ಬೀಜ, ಕೃಷಿ ಸಲಕರಣೆಗಳ ವಿತರಣೆ –ಇವೆಲ್ಲ ರೈತರಿಗೆ ಅನುಕೂಲ ಮಾಡು­ವು­ದಕ್ಕಿಂತ ಮಧ್ಯವರ್ತಿಗಳು, ನೌಕರರ ಜೇಬು ತುಂಬಿಸಿದ್ದೇ ಹೆಚ್ಚು. ರೈತರ ನೆಪದಲ್ಲಿ ನಡೆಯುವ ಹಗಲು ದರೋಡೆ.

ಕೃಷಿ ಮಾರುಕಟ್ಟೆ ನಿರ್ದೇಶಕನಾಗಿ ಕಾರ್ಯ­ನಿರ್ವಹಿಸುವಾಗ ‘ರೈತ ಸಂಜೀವಿನಿ’ ಎಂಬ ರೈತರ ವಿಮಾ ಯೋಜನೆ ಮತ್ತು ರೈತರ ಹೊಲಗಳಿಂದ ಕೃಷಿ ಮಾರುಕಟ್ಟೆಗೆ ಕೂಡುರಸ್ತೆ ಒದಗಿಸುವ ‘ಕಣದಿಂದ ಪ್ರಾಂಗಣ’ಕ್ಕೆ ಎಂಬ ಕಾರ್ಯಕ್ರಮ ರೂಪಿಸಿದ್ದೆ. ರಾಜಸ್ತಾನದಲ್ಲಿ ಚಾಲ್ತಿಯಲ್ಲಿದ್ದ ಈ ಕಾರ್ಯಕ್ರಮಗಳನ್ನು ಅಭ್ಯಾಸ ಮಾಡಿ ಮುಖ್ಯಮಂತ್ರಿ ಎಚ್‌.ಡಿ. ದೇವೇಗೌಡರಿಂದ ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಲಾಯ್ತು. ಎರಡೂ ಯೋಜನೆಗಳು ಜನಪ್ರಿಯವಾದವು.‘ರೈತ ಸಂಜೀವಿನಿ’ ವಿಮಾ ಯೋಜನೆ ಈಗಲೂ ಜಾರಿಯಲ್ಲಿದೆ. ‘ಕಣದಿಂದ ಪ್ರಾಂಗಣ’ ರಸ್ತೆ ನಿರ್ಮಾಣ ಯೋಜನೆ ಸ್ಥಗಿತಗೊಂಡಿದೆ. ರೈತರು ಬೆಳೆದ ಹಣ್ಣು, ತರಕಾರಿಯನ್ನು ಸರಿ­ಯಾದ ಸಮಯಕ್ಕೆ ಮಾರುಕಟ್ಟೆಗೆ ತಲು­ಪಿಸಲು ಇಂದಿಗೂ ಸರಿಯಾದ ರಸ್ತೆಗಳಿಲ್ಲ. ವಾಹನ ಸೌಲಭ್ಯಗಳಿಲ್ಲ. ಶೀತಲಗೃಹಗಳಿಲ್ಲ. ಕೆಎಸ್‌­ಆರ್‌­ಟಿಸಿ ವಾಹನ­ಗಳಲ್ಲಿ ಜನರ ಜೊತೆಗೆ ಹಣ್ಣು–ತರಕಾರಿ ಸಾಗಿಸುವ ದೃಶ್ಯ ಸಾಮಾನ್ಯ. ಅವುಗಳಿಗೆ ಖರ್ಚು ನೀಗಿಸುವ ಬೆಲೆಯೂ ದೊರೆಯ­ದಿದ್ದಾಗ ಟೊಮಾಟೊ, ಆಲೂಗಡ್ಡೆ, ಈರುಳ್ಳಿ, ಹಸಿ ಮೆಣಸಿನಕಾಯಿ ರಸ್ತೆಗೆ ಸುರಿಯುವ ಸುದ್ದಿ­ಗಳನ್ನು ಓದುತ್ತೇವೆ, ನೋಡುತ್ತೇವೆ. ಅವೆಲ್ಲ ಎಷ್ಟು ಹೃದಯ ವಿದ್ರಾವಕ ಸಂಗತಿಗಳೆಂದರೆ ಆ ಸಂಕಟ, ನೋವು ಅನುಭವಿಸಿದವರಿಗೆ ಮಾತ್ರ ಗೊತ್ತು.ದೇಶದ ಜಿಡಿಪಿ ಎರಡು ಅಂಕಿಗಳನ್ನು ದಾಟಿದೆ. ಭಾರತ ಹೊಳೆಯುತ್ತಿದೆ ಎಂಬ ಅಬ್ಬರ ರೈತರನ್ನು ಕಂಗಾಲಾಗಿಸಿದೆ. ಯಾರ ಜಿಡಿಪಿ ಜಾಸ್ತಿಯಾಗಿದೆ ಎಂಬುದು ಅವರಿಗೆ ತಿಳಿಯುತ್ತಿಲ್ಲ. ರೈತರ ನೋವಿಗೆ ಸಂಕಟಕ್ಕೆ ಧ್ವನಿಯಾಗುವ ನಾಯಕರು ದೇಶದಲ್ಲಿ ಎಲ್ಲಿಯೂ ಕಾಣಸಿಗುತ್ತಿಲ್ಲ. ಎಲ್ಲರೂ ಬಹುರಾಷ್ಟ್ರೀಯ ಬಂಡವಾಳ ಹೂಡಿಕೆ ಗುಂಗಿನಲ್ಲಿದ್ದಾರೆ. ರೈತ ಕೇಂದ್ರಿತವಾದ ಒಂದೇ ಒಂದು ಹೊಸ ಯೋಜನೆಯ ಸುಳಿವು ಎಲ್ಲಿಯೂ ಕಾಣುತ್ತಿಲ್ಲ. ರೈತನ ಹತಾಶೆಗೆ ಇವುಗಳೂ ಕಾರಣವಾಗಿರಬಹುದು.ನಮ್ಮ ರೈತರು ಏಕೆ ಆತ್ಮಹತ್ಯೆ ಮಾಡಿಕೊ­ಳ್ಳು­ತ್ತಾರೆಂಬುದು ಬಹು ಚರ್ಚೆಯ ವಿಷಯವಾಗಿ ಅದಕ್ಕೆ ಸರ್ಕಾರಗಳು ತಲೆಕೆಡಿಸಿಕೊಂಡಿವೆ. ಕೇಂಬ್ರಿಜ್‌ ಮತ್ತು ಲಂಡನ್‌ ವಿಶ್ವವಿದ್ಯಾಲಯ­ಗಳು ಸಹ ಅಧ್ಯಯನ ನಡೆಸಿವೆ. ಕಳೆದ 20 ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವ ರೈತರ ಸಂಖ್ಯೆ ಏರುತ್ತಲೇ ಇದೆ. ಹಲವಾರು ಸರ್ಕಾರಗಳು ಸಮಿತಿಗಳನ್ನು ರಚಿಸಿ ವರದಿ ಪಡೆದಿವೆ. ಜಾಗತೀಕರಣದಿಂದಾಗಿ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ಸಿಗದೆ ಹತಾಶರಾಗಿ ನೇಣಿಗೆ ಶರಣಾಗುತ್ತಿದ್ದಾರೆಂದು ಕೆಲವು ವರದಿಗಳು ಹೇಳಿದರೆ, ತುಟ್ಟಿ ಸಾಲಗಳ ವಿಷಚಕ್ರಗಳಲ್ಲಿ ಸಿಲುಕಿ ಕಂಗಾಲಾಗಿ ರೈತ ಸಾಯುತ್ತಿದ್ದಾನೆಂದು ಮತ್ತೊಂದು ವರದಿ ಹೇಳುತ್ತದೆ. ಅಧಿಕ ವೆಚ್ಚದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆದೂ ಸರಿಯಾದ ಪ್ರತಿಫಲ ಸಿಗದೆ ರೈತ ಸಾವಿನ ಮನೆ ಸೇರುತ್ತಿದ್ದಾನೆಂಬ ಅಭಿಪ್ರಾಯವೂ ಇದೆ. ಇದ್ಯಾವುದೂ ಅಲ್ಲ, ಸಾಂಸಾರಿಕ ಜಗಳಗಳು, ಕುಡಿತದ ವ್ಯಸನಕ್ಕೆ ಬಿದ್ದು ಹೆಚ್ಚು ರೈತರು ಸಾಯುತ್ತಿದ್ದಾರೆ ಎಂಬುದು ಮತ್ತೊಂದು ವರದಿಯ ಅಂಬೋಣ. ಹೀಗೆ ಚಿಂತಕರು, ವಿಶ್ಲೇಷಕರು ರೈತರ ಆತ್ಮಹತ್ಯೆಗೆ ವಿವಾದಾತ್ಮಕ ಕಾರಣ ನೀಡುತ್ತಾರೆ. ಒಂದು ಅಂದಾಜಿನ ಪ್ರಕಾರ 2012ರಲ್ಲಿ ಇಡೀ ದೇಶದಲ್ಲಿ 13,754 ಜನ ರೈತರ ಆತ್ಮಹತ್ಯೆ ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಕರ್ನಾಟಕದ ಪಾಲು 1,875. ದೇಶದಲ್ಲೇ ರಾಜ್ಯ ಎರಡನೇ ಸ್ಥಾನದಲ್ಲಿದೆ.ರೈತರ ಆತ್ಮಹತ್ಯೆ ಪ್ರಕರಣಗಳನ್ನು ಅತಿ ಸರಳೀಕರಿಸಿ ತೀರ್ಮಾನಕ್ಕೆ ಬರುವುದು ರೈತ ಸಮು­ದಾಯಕ್ಕೆ ಮಾಡಿದ ಅನ್ಯಾಯವಾಗುತ್ತದೆ. ಒಬ್ಬ ದುಡಿಯುವ ರೈತ, ಸಾವಿನಂಚಿಗೆ ತನ್ನನ್ನು ಒಡ್ಡಿ­ಕೊಳ್ಳುವ ಸ್ಥಿತಿ ತಲುಪುತ್ತಾನೆಂದರೆ ಅವನನ್ನು ಯಾವ ಅನಾಥಪ್ರಜ್ಞೆ ಕಾಡು­ತ್ತಿರಬೇಕು? ನಿಸ್ಸಹಾಯಕತೆಗೆ, ಹತಾಶೆಗೆ ಕಾರಣವೇನು ಎನ್ನುವುದನ್ನು ಗಂಭೀರವಾಗಿ ಪರಿಗಣಿಸುವುದು ಇಂದಿನ ತುರ್ತು. ಸಣ್ಣ–ಪುಟ್ಟ ಪರಿಹಾರಗಳು, ಪ್ಯಾಕೇಜ್‌ಗಳು, ದೊಡ್ಡ ದೊಡ್ಡ ಭಾಷಣಗಳು ಈ ಜ್ವಲಂತ ಸಮಸ್ಯೆಗೆ ಉತ್ತರ­ವಾಗಲಾರವು. ಸಮಸ್ಯೆಯನ್ನು ಮಾಯ ಮಾಡುವ ಯಾವ ಮಂತ್ರದಂಡವೂ ಇಲ್ಲ.ಮುಖ್ಯಮಂತ್ರಿಯಾದ ತಕ್ಷಣ ಸಂಪುಟ ಸಭಾಂಗಣದಲ್ಲಿ  ಸಿದ್ದರಾಮಯ್ಯನವರು ಒಬ್ಬರೇ ಕುಳಿತು ಬಡವರಿಗೆ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಅನ್ನಭಾಗ್ಯ ಯೋಜನೆ, ಸಾವಿರಾರು ಕೋಟಿಗಳ ಸಾಲ ಪಡೆದು ಬಹುಪಾಲು ದುರ್ವಿನಿಯೋಗ ಮಾಡಿ ಮರು ಪಾವತಿಸದವರ ಸಾಲ ಮನ್ನಾದಂತಹ ದೊಡ್ಡ ನಿರ್ಧಾರಗಳನ್ನು ಕೈಗೊಂಡರು. ಆದರೆ, ಅಧಿಕಾರ ವಹಿಸಿಕೊಂಡು ವರ್ಷ ಕಳೆದರೂ ರೈತರಿಗೆ ಭದ್ರತೆ ಒದಗಿಸಿ, ಅವರ ಬದುಕಿನಲ್ಲೂ ಆತ್ಮ ಗೌರವ ಮತ್ತು ಆತ್ಮ ವಿಶ್ವಾಸ ಮೂಡಿಸಬಹುದಾದ ಒಂದೇ ಒಂದು ದೊಡ್ಡ ನಿರ್ಣಯ ತೆಗೆದುಕೊಳ್ಳಲಾಗದ್ದು ನಿಜವಾಗಿ ನಿರಾಶೆಯ ಸಂಗತಿ. ಪುಟ್ಟ ಗ್ರಾಮದಿಂದ ಜಗತ್ತಿನ ಆಗು–ಹೋಗುಗಳವರೆಗೆ ಎಲ್ಲದಕ್ಕೂ ಪ್ರತಿಕ್ರಿಯಿಸುವ ಪ್ರಧಾನಿ ನರೇಂದ್ರ ಮೋದಿ­ಯವರೂ ರೈತರ ಬಗೆಗೆ ಬಾಯಿಬಿಡುತ್ತಿಲ್ಲ. ನಂಬಿಕೆ ಇಡಬಹುದಾದಂತಹ ಒಬ್ಬನೇ ಒಬ್ಬ ರೈತನಾಯಕನೂ ಕಾಣುತ್ತಿಲ್ಲ. ರೈತ ಬೆಳೆದ ಅನ್ನಕ್ಕೆ ಭಾಗ್ಯ ಬಂತೇ ಹೊರತು ಬೆಳೆದ ರೈತನಿಗೆ ಭಾಗ್ಯ ಬರಲಿಲ್ಲವೆಂಬುದು ವಿಪರ್ಯಾಸ.ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry