ಭಾನುವಾರ, ಡಿಸೆಂಬರ್ 8, 2019
20 °C

‘ಗಾಜಿನ ಚಾವಣಿ’ಯಲ್ಲಿ ಮೂಡದ ಬಿರುಕು

Published:
Updated:
‘ಗಾಜಿನ ಚಾವಣಿ’ಯಲ್ಲಿ ಮೂಡದ ಬಿರುಕು

ಮಹಿಳೆಯರು ಬಹುಸಂಖ್ಯಾತರಾಗಿರುವ ರಾಷ್ಟ್ರ ಅಮೆರಿಕ. ಆದರೆ 240 ವರ್ಷಗಳ ಈ ರಾಷ್ಟ್ರದ ಇತಿಹಾಸದಲ್ಲಿ  ಈವರೆಗೆ ಮಹಿಳೆಯೊಬ್ಬರು ಈ ರಾಷ್ಟ್ರದ ಅಧ್ಕ್ಷಕ್ಷ ಪದವಿಗೆ ಏರುವುದು ಸಾಧ್ಯವಾಗಿಲ್ಲ.  ಆದರೆ ಹೊಸ ಇತಿಹಾಸ ನಿರ್ಮಿಸಲು ಅಮೆರಿಕ ಸಿದ್ಧವಾಗುತ್ತಿದೆ ಎಂಬಂಥ ವಾತಾವರಣ ಕಳೆದ ವಾರ ಇತ್ತು. ಅಮೆರಿಕದ ಅತ್ಯುನ್ನತ ಹುದ್ದೆಗೆ ಮಹಿಳೆ ಆಯ್ಕೆಯಾಗುತ್ತಾಳೆ ಎಂದು ನಂಬುವುದಕ್ಕೆ ಕಾರಣಗಳೂ ಇದ್ದವು. ಈ ಆಯ್ಕೆ ಎಷ್ಟೊಂದು ಸುಲಭವಾಗಿರಬಹುದಿತ್ತು! ಏಕೆಂದರೆ, ಒಂದೆಡೆ ಇತ್ತೀಚಿನ ವರ್ಷಗಳಲ್ಲೇ ಡೆಮಾಕ್ರಟಿಕ್ ಪಕ್ಷದ  ಅತ್ಯಂತ ಸ್ಪರ್ಧಾತ್ಮಕ ಅಭ್ಯರ್ಥಿಯಾಗಿ ಅನುಭವಿ ರಾಜಕಾರಣಿ ಹಿಲರಿ ಕ್ಲಿಂಟನ್ ಇದ್ದರು.ಮತ್ತೊಂದೆಡೆ ಮಹಿಳೆಯರು, ಅಲ್ಪಸಂಖ್ಯಾತರ ಬಗ್ಗೆ ಯಾವ ಗೌರವವನ್ನೂ  ತೋರದ  ರಾಜಕೀಯ ಬದುಕಿನ ಅನುಭವವೇ ಇಲ್ಲದ ಡೊನಾಲ್ಡ್ ಟ್ರಂಪ್ ರಿಪಬ್ಲಿಕನ್ ಪಕ್ಷದ ಸ್ಪರ್ಧಿಯಾಗಿದ್ದರು. ಹೀಗಿದ್ದೂ ಹಿಲರಿ ಕ್ಲಿಂಟನ್  ಸೋಲೊಪ್ಪಿಕೊಳ್ಳಬೇಕಾಯಿತು. ಐತಿಹಾಸಿಕ ಅವಕಾಶವೊಂದನ್ನು ಅಮೆರಿಕ ಕಳೆದುಕೊಳ್ಳಬೇಕಾಯಿತು.ಇದಕ್ಕೆ ಏನು ಕಾರಣ? ಅಧ್ಯಕ್ಷೆಯಾಗಿ ಮಹಿಳೆಯನ್ನು ಆಯ್ಕೆ ಮಾಡಲು ಅಮೆರಿಕ ಇನ್ನೂ ಸನ್ನದ್ಧವಾಗಿಲ್ಲವೆ? ಅಮೆರಿಕದ ಅಧ್ಯಕ್ಷರಾಗಿ ಆಯ್ಕೆಯಾಗುವವರು ಅಮೆರಿಕದ ಸಶಸ್ತ್ರಪಡೆಗಳ ಕಮ್ಯಾಂಡರ್ ಇನ್ ಚೀಫ್ ಆಗಿಯೂ ಕಾರ್ಯ ನಿರ್ವಹಿಸುತ್ತಾರೆ. ಅಮೆರಿಕದ ಅಧ್ಯಕ್ಷ ಪದವಿಯ ಸುತ್ತ ಆವರಿಸಿಕೊಂಡಿರುವ  ಪೌರುಷದ ಚೌಕಟ್ಟಿನ ಮಾದರಿಯ ಮಿತಿಯನ್ನು ಒಡೆಯುವುದು ಅಷ್ಟು ಸುಲಭದ ಮಾತಲ್ಲ ಎಂಬುದು ಕಳೆದ ವಾರದ ಚುನಾವಣೆ ಮತ್ತೊಮ್ಮೆ ಸಾಬೀತುಪಡಿಸಿದೆ.2006ರಲ್ಲಿ ಎಬಿಸಿ ಟೆಲಿವಿಷನ್ ಪ್ರಸಾರ ಮಾಡಿದ ‘ಕಮ್ಯಾಂಡರ್ ಇನ್ ಚೀಫ್’ ಧಾರಾವಾಹಿಯಲ್ಲಿ  ನಟಿ ಗೀನಾ ಡೇವಿಸ್ ಅವರು ಅಮೆರಿಕದ ಮೊದಲ ಮಹಿಳಾ ಅಧ್ಯಕ್ಷೆ ಮ್ಯೆಕೆಂಝಿ ಅಲೆನ್ ಪಾತ್ರವನ್ನು ನಿರ್ವಹಿಸಿದ್ದರು. ಈ ಪಾತ್ರದ ಅಭಿನಯಕ್ಕಾಗಿ ಗೀನಾ ಡೇವಿಸ್ ಅವರು ‘ಗೋಲ್ಡನ್ ಗ್ಲೋಬ್’ ಪ್ರಶಸ್ತಿ ಪಡೆದುಕೊಂಡಿದ್ದರು.ಅಲ್ಲದೆ ಈ ಟೆಲಿವಿಷನ್ ಷೊ ಅಮೆರಿಕದಲ್ಲಿ ಅಪಾರ ಜನಪ್ರಿಯತೆಯನ್ನೂ ಗಳಿಸಿಕೊಂಡಿತ್ತು. ಆದರೆ ಇಲ್ಲಿ ನಾವೊಂದು ಪ್ರಶ್ನೆ ಕೇಳಬಹುದು. ಹಾಲಿವುಡ್‌ನ ರಂಗಸಜ್ಜಿಕೆಗಳಲ್ಲಿ  ಮಾತ್ರ ನಾವು ಮಹಿಳಾ ಅಧ್ಯಕ್ಷೆಯ ಆಡಳಿತವನ್ನು  ಕಾಣಬೇಕೆ? ಅಥವಾ  ವಾಷಿಂಗ್ಟನ್‌ನಲ್ಲಿರುವ ಅಧ್ಯಕ್ಷರ ನಿವಾಸ ಶ್ವೇತಭವನಕ್ಕೆ  ಮುಂದಿನ ದಶಕದಲ್ಲಾದರೂ ಮಹಿಳಾ ಅಧ್ಯಕ್ಷರ ಪ್ರವೇಶ  ಸಾಧ್ಯವಾಗಬಹುದೆ?1960ರ ದಶಕದಲ್ಲಿ ಮಹಿಳಾ ಅಧ್ಯಕ್ಷೆ ಎಂಬ ಮಾತನ್ನು ಊಹಿಸಿಕೊಳ್ಳುವುದೂ ಸಾಧ್ಯವಿರಲಿಲ್ಲ. ಅದೊಂದು ಜೋಕ್ ಎಂದೇ ಪರಿಭಾವಿಸಲಾಗುತ್ತಿತ್ತು ಎಂದಿದ್ದಾರೆ  ಸ್ತ್ರೀವಾದಿ ಲೇಖಕಿ ಬೆಟ್ಟಿ ಫ್ರೀಡನ್. ಆ ನಂತರದಲ್ಲೂ ಸ್ಪರ್ಧೆ ನೀಡಬಲ್ಲ ಗಟ್ಟಿಗಿತ್ತಿ ಮಹಿಳೆಯರೂ ಕಂಡುಬಂದಿರಲಿಲ್ಲ. ಹಾಗೆಂದು ಪ್ರಯತ್ನವೇ ನಡೆದಿರಲಿಲ್ಲ ಎಂದೇನಿಲ್ಲ. 1872ರಷ್ಟು ಹಿಂದೆಯೇ, ಮತದಾನ ಹಕ್ಕು ಚಳವಳಿಯ ನಾಯಕಿ ವಿಕ್ಟೋರಿಯಾ ವುಡ್‌ಹಲ್‌  ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಆ ನಂತರ ಸುಮಾರು 200 ಮಹಿಳೆಯರು ಸಣ್ಣಪುಟ್ಟ ಪಕ್ಷಗಳ  ಅಭ್ಯರ್ಥಿಗಳಾಗಿ ಸ್ಪರ್ಧಿಸಿದರೂ  ಛಾಪು ಮೂಡಿಸಲಿಲ್ಲ. ಕಡೆಗೂ 144 ವರ್ಷಗಳ ನಂತರ ಪ್ರಮುಖ ರಾಜಕೀಯ ಪಕ್ಷದ  ಅಧ್ಯಕ್ಷೀಯ ಅಭ್ಯರ್ಥಿಯಾಗಿ ಹಿಲರಿ ಕ್ಲಿಂಟನ್ ನಾಮಕರಣಗೊಂಡು ಹೊಸ ಭರವಸೆ ಮೂಡಿಸಿದ್ದರು.  ಹೀಗಿದ್ದೂ ಇತಿಹಾಸ ಸೃಷ್ಟಿಸಲಾಗಲಿಲ್ಲ.ಜನಾಂಗೀಯ ದ್ವೇಷ ಹಾಗೂ ಲಿಂಗ ತಾರತಮ್ಯದ ಮಾತುಗಳನ್ನು ಬಹಿರಂಗವಾಗಿ ಆಡಿದ ಟ್ರಂಪ್ ಆಯ್ಕೆಯಲ್ಲಿ  ಅಮೆರಿಕ ಜನಸಂಖ್ಯೆಯಲ್ಲಿ ಶೇ 63ರಷ್ಟಿರುವ ಬಿಳಿಯರು ಪ್ರಮುಖ ಪಾತ್ರ ವಹಿಸಿದ್ದಾರೆ. ಜನಪ್ರಿಯ ಮತಗಳನ್ನು  ಟ್ರಂಪ್‌ಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಿಲರಿ ಪಡೆದಿದ್ದಾರೆ. ಆದರೆ ಎಲೆಕ್ಟೊರಲ್ ಕಾಲೇಜ್ ವ್ಯವಸ್ಥೆಯಡಿ ಹೆಚ್ಚಿನ ರಾಜ್ಯಗಳನ್ನು ಗೆಲ್ಲುವ ಮೂಲಕ  ವಿಜಯವನ್ನು ಟ್ರಂಪ್  ತಮ್ಮದಾಗಿಸಿಕೊಂಡಿದ್ದಾರೆ.ಬಹುತ್ವ, ವೈವಿಧ್ಯಕ್ಕೆ  ಪ್ರತೀಕವಾದ ಅಮೆರಿಕದ ಪರಿಕಲ್ಪನೆಗೇ  ಈ ಫಲಿತಾಂಶ ಮಂಕು ಕವಿಸುವಂತಹದ್ದು.  ಉನ್ನತ ಅಧಿಕಾರ ಸ್ಥಾನಕ್ಕೆ ಮಹಿಳೆಯನ್ನು ಆಯ್ಕೆ ಮಾಡಲಾಗದಿರುವಂತಹ ಸ್ಥಿತಿ  ‘ಅನ್ ಅಮೆರಿಕನ್’ (ಅಮೆರಿಕನ್ ಅಲ್ಲ). ಪ್ರಾತಿನಿಧಿಕ ಪ್ರಜಾಸತ್ತೆಗೆ ಕಳಂಕ ಹಚ್ಚುವಂತಹದ್ದು. ಜನರಿಗೆ ಬದಲಾವಣೆ ಬೇಕಿತ್ತು. ಆದರೆ ಹಿಲರಿ ಕ್ಲಿಂಟನ್ ಬದಲಾವಣೆಯ ಮುಖ ಆಗಿರಲಿಲ್ಲ.‘ಬರ್ನಿ ಸ್ಯಾಂಡರ್ಸ್, ಜೋ ಬಿದೆನ್ ಈ ಚುನಾವಣೆಯನ್ನು ಗೆದ್ದಿರಬಹುದಿತ್ತು’ ಎಂದು  ‘ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ  ನಿಕೊಲಸ್ ಕ್ರಿಸ್ಟೊಫ್ ಅಭಿಪ್ರಾಯಪಡುತ್ತಾರೆ.‘ಹಿಲರಿ ಕ್ಲಿಂಟನ್ ರಷ್ಟು ಬಲವಾದ ಅಭ್ಯರ್ಥಿಯಲ್ಲ ಸ್ಯಾಂಡರ್ಸ್ ಎಂದು ವಾದಿಸಿದ್ದೆ. ಆದರೆ ಈಗ ಚುನಾವಣೆಯ ಫಲಿತಾಂಶ  ನೋಡಿದರೆ ನನ್ನ  ಎಣಿಕೆ ತಪ್ಪಾಗಿತ್ತು’ ಎಂದು ಅವರು ಬರೆದಿದ್ದಾರೆ. ಅಪ್ರಜ್ಞಾಪೂರ್ವಕ ಪೂರ್ವಗ್ರಹದಿಂದ ಹಿಲರಿ  ನೋವನುಭವಿಸಬೇಕಾಯಿತು ಎಂಬುದು ಸ್ಪಷ್ಟ.ಅಧ್ಯಕ್ಷನೆಂದರೆ ಪುರುಷ ಎಂಬಂಥ ಮಾನಸಿಕ ತಡೆಗೋಡೆ ಅಥವಾ ಮಾದರಿ ಬಹುತೇಕ ಮತದಾರರಲ್ಲಿ ಪ್ರತಿಷ್ಠಾಪಿತವಾಗಿರುತ್ತದೆ.  ಅಂತಹವರಿಗೆ ಅಧ್ಯಕ್ಷೀಯ  ಅಭ್ಯರ್ಥಿಯಾಗಿ ಟ್ರಂಪ್ ಜೊತೆ ಗುರುತಿಸಿಕೊಳ್ಳುವುದು ಸುಲಭವಾಗುತ್ತದೆ. ಅದರಲ್ಲೂ  ಬಿಳಿಯ ಸಂಪ್ರದಾಯವಾದಿಗಳಿಗೆ ಮಹಿಳಾ ಅಧ್ಯಕ್ಷೆಯನ್ನು ರಾಷ್ಟ್ರ  ಹೊಂದುವುದು ಇರಿಸುಮುರಿಸಿನ ಸಂಗತಿ.2008ರ ಚುನಾವಣೆ ಅಮೆರಿಕದ ಇತಿಹಾಸದಲ್ಲಿ ದೊಡ್ಡ ತಿರುವು ತಂದಿತು. ಮೊದಲ ಆಫ್ರಿಕನ್ – ಅಮೆರಿಕನ್ ಅಧ್ಯಕ್ಷರಾಗಿ ಬರಾಕ್ ಒಬಾಮ ಅಧಿಕಾರ ಗದ್ದುಗೆಗೆ ಏರಿದರು.1967ರಲ್ಲಿ ತೆರೆಕಂಡ ‘ಗೆಸ್ ಹೂ ಈಸ್ ಕಮಿಂಗ್ ಟು ದಿ ಡಿನ್ನರ್’ ಸಿನಿಮಾದಲ್ಲಿ ಕಪ್ಪುವರ್ಣೀಯ ನಟ ಸಿಡ್ನಿ  ಪಾಯ್ಟಿಯರ್, ಕಪ್ಪು ಅಧ್ಯಕ್ಷನನ್ನು ಅಮೆರಿಕ ಕಾಣುವಂತಾಗಬೇಕೆಂದು ಹೇಳಿದ್ದು ನಿಜವಾದ  ಕ್ಷಣವದು. ಅದೂ ಕೂಡ  ಬಿಳಿಯ ಸಂಪ್ರದಾಯವಾದಿ ಅಮೆರಿಕನ್ನರಿಗೆ ಸಹನೆಯಾಗಿರಲಿಲ್ಲ.ಜನಾಂಗೀಯ ಪ್ರತಿಷ್ಠೆಯ ಕುಸಿತ ಎಂಬ ಭಾವನೆ ಅಲ್ಲಿತ್ತು. ಎಂಟು  ವರ್ಷಗಳ ಕಾಲ ಆಫ್ರಿಕನ್ - ಅಮೆರಿಕನ್ ಅಧ್ಯಕ್ಷನನ್ನು ಹೊಂದಿದ ನಂತರ, ಆ ಹೊಣೆಗಾರಿಕೆಯನ್ನು ಇನ್ನು  ಮಹಿಳೆಗೆ ಹೊರಿಸುವುದು ಸಂಪ್ರದಾಯವಾದಿಗಳಿಗಂತೂ ಇಷ್ಟವಿರಲಿಲ್ಲ ಎಂಬುದು ಸ್ಪಷ್ಟ. ಏಕೆಂದರೆ ಇಂತಹದೊಂದು ಆಯ್ಕೆ ಲಿಂಗತ್ವ ಶ್ರೇಣೀಕರಣ ಹಾಗೂ ಪುರುಷ ಪ್ರಧಾನ ಸಮಾಜದ ಪರಿಕಲ್ಪನೆಗೆ ಪೆಟ್ಟು ಕೊಡುತ್ತಿತ್ತು. ಹೀಗಾಗಿ ಇದಕ್ಕೆ ಬದಲಾಗಿ  ಕುಶಲ ಉದ್ಯಮಿ ಹಾಗೂ ಸಿರಿವಂತ ಪುರುಷ ಟ್ರಂಪ್‌ನನ್ನು ಪರಿಪೂರ್ಣ ಆಯ್ಕೆಯಾಗಿ ಜನರು ಪರಿಗಣಿಸಿದರು. ಆದರೆ ಇದನ್ನು ಗ್ರಹಿಸಲು ರಾಜಕೀಯ ಪಂಡಿತರು ಹಾಗೂ ಅಲ್ಲಿನ ಮಾಧ್ಯಮಗಳು ವಿಫಲವಾದದ್ದು ಆಶ್ಚರ್ಯ. ‘ನ್ಯೂಸ್‌ವೀಕ್’ ಮ್ಯಾಗಜೀನ್ ಅಂತೂ ‘ಮೇಡಂ ಪ್ರೆಸಿಡೆಂಟ್’ ಎಂಬ ಮುಖಪುಟ ಲೇಖನ ಮುದ್ರಿಸಿತ್ತು. ನಂತರ ಆ ಪ್ರತಿಗಳನ್ನು ಹಿಂತೆಗೆದುಕೊಳ್ಳಬೇಕಾಯಿತು.ಆರಂಭದಿಂದಲೂ ಈ ಚುನಾವಣೆ ಪ್ರಚಾರಾಂದೋಲನದಲ್ಲಿ  ಲಿಂಗ ತಾರತಮ್ಯದ ಮಾತುಗಳೇ (ಸೆಕ್ಸಿಸಂ)  ಕೇಂದ್ರಬಿಂದುವಾಗಿದ್ದುದು ವಿಪರ್ಯಾಸ.  2015ರ ಏಪ್ರಿಲ್‌ನಲ್ಲಿ ತಮ್ಮ ಪ್ರಚಾರಾದೋಲನವನ್ನು ಟ್ರಂಪ್ ಆರಂಭಿಸಿದ್ದು ಹೀಗೆ:  ‘ತನ್ನ ಗಂಡನನ್ನೇ  ತೃಪ್ತಿಪಡಿಸಲಾಗದ ಹಿಲರಿ ಕ್ಲಿಂಟನ್,  ಅಮೆರಿಕವನ್ನು ತೃಪ್ತಿ ಪಡಿಸುತ್ತೇನೆ ಎಂದು ಭಾವಿಸುವುದಾದರೂ ಹೇಗೆ?’  ಫಾಕ್ಸ್ ಟಿವಿ ಚಾನೆಲ್‌ನ ಪತ್ರಕರ್ತೆ  ಮೆಗಿನ್ ಕೆಲಿ ಅವರನ್ನು  ‘ದಡ್ಡಿ ’ (ಬಿಂಬೊ) ಎಂದು ಕರೆದು ಅವರ  ಜೊತೆ ತಿಂಗಳುಗಟ್ಟಲೆ ಸಮರ ಸಾರಿದ್ದರು ಟ್ರಂಪ್. ನಂತರ  ‘ಬಹುಶಃ ಆಕೆ ನನ್ನನ್ನು  ಹಾಗೆಲ್ಲಾ ಪ್ರಶ್ನಿಸುವುದಕ್ಕೆ ಆಕೆ ಮುಟ್ಟಾಗಿದ್ದದ್ದು ಕಾರಣವಿದ್ದಿರಬೇಕು’ ಎಂಬಂತಹ ಕೀಳು ಅಭಿರುಚಿಯ ಮಾತುಗಳನ್ನಾಡಿದ್ದರು ಅವರು.  ‘ಅಬಾರ್ಷನ್ ಮಾಡಿಸಿಕೊಳ್ಳಲು ಹೋಗುವ ಮಹಿಳೆಯರನ್ನು ಶಿಕ್ಷಿಸಬೇಕು’  ಎಂಬಂಥ ಸಲಹೆಯನ್ನೂ  ನೀಡಿದ್ದರು ಅವರು. ಹಿಲರಿ ಕ್ಲಿಂಟನ್‌ರನ್ನು  ನೀಚ ಹೆಂಗಸು  (ನ್ಯಾಸ್ಟಿ ವುಮನ್)  ಎಂದು ಬಣ್ಣಿಸಿದ್ದರು. ಪ್ಯಾಂಟ್ ಸೂಟ್ ತೊಡುವ ಹಿಲರಿಯನ್ನು ಟೀಕಿಸಿದ್ದರು, ಮಾಜಿ ಭುವನ ಸಂದರಿ  ಅಲಿಸಿಯಾ ಮಾಚಾಡೊ ದೇಹತೂಕದ ಬಗ್ಗೆಯೂ ಕೆಟ್ಟದಾಗಿ ಮಾತನಾಡಿದ್ದ ಟ್ರಂಪ್  ತಮ್ಮ ಲೈಂಗಿಕ ದುರಾಕ್ರಮಣಗಳ ಬಗ್ಗೆ ಕೊಚ್ಚಿಕೊಂಡಿದ್ದರು.  ಆದರೆ ಈ ಯಾವುವೂ ಅವರ ಬೆಂಬಲಿಗರ ಧೃತಿಗೆಡಿಸದಿರುವುದು ಆಘಾತಕಾರಿ. ಅವರ ಟೀಕೆಗಳನ್ನು ಖಂಡಿಸುವ ಬದಲು ಅವರ ಬೆಂಬಲಿಗರೂ ಅವರನ್ನೇ ಅನುಕರಿಸತೊಡಗಿ  ‘ಟ್ರಂಪ್ ದಟ್ ಬಿಚ್’ ಎಂಬ ಘೋಷಣೆಗಳಿರುವ ಟಿ ಷರ್ಟ್ ಗಳನ್ನು ತೊಟ್ಟು  ‘ಹಿಲರಿ ಫಾರ್ ಪ್ರಿಸನ್ 2016’  ನಂತಹ ಮಾತುಗಳನ್ನು ಬಿತ್ತರಿಸತೊಡಗಿದ್ದರು.ಈ ಎಲ್ಲಾ ವರ್ತನೆಗಳನ್ನು  ಅನುಮೋದಿಸುವ ಅಂತಿಮ ಕ್ರಿಯೆಯಾಗಿ ಟ್ರಂಪ್  ಬೆಂಬಲಿಗರು ಅವರಿಗೆ ಮತಹಾಕಿದ್ದಾರೆ. ಲಿಂಗ ತಾರತಮ್ಯ ಹಾಗೂ ಸ್ತ್ರೀದ್ವೇಷಕ್ಕೆ ಟ್ರಂಪ್ ವಿಜಯದಿಂದ ಅನುಮೋದನೆ ಸಿಕ್ಕಂತಾಗಿದೆ. ಈ ವಿಚಾರವನ್ನು ಕಡೆಗಣಿಸುವುದು ಅಪಾಯಕಾರಿ. ಇದನ್ನು ಹಗುರವಾಗಿ ತಳ್ಳಿ ಹಾಕಲಾಗದು. ಸಾಂಸ್ಥಿಕ ಸ್ತ್ರೀದ್ವೇಷದ ವಿಜೃಂಭಣೆಗೆ ಇದು ನಾಂದಿಯಾಗುವುದೆ? ಎಂಬ ಬಗ್ಗೆ ಎಚ್ಚರ ಬೇಕು.ಈ ಎಲ್ಲಾ ಅಲ್ಲೋಲಕಲ್ಲೋಲಗಳ ನಡುವೆ ಸೆನೆಟ್ ಚುನಾವಣೆಯಲ್ಲಿ ಕೆಲವು ಅಸಾಧಾರಣ ಮಹಿಳೆಯರು ಗೆಲುವು ಸಾಧಿಸಿ ಭರವಸೆ ಮೂಡಿಸಿದ್ದಾರೆ. ಕ್ಯಾಲಿಫೋರ್ನಿಯಾದ ಕಮಲಾ ಹ್ಯಾರಿಸ್  ರಾಜಕೀಯವಾಗಿ   ಹೊರಹೊಮ್ಮಿರುವ ಮುಖ್ಯ ಹೆಸರು. ಇಲಿನಾಯ್‌ನ ಟ್ಯಾಮಿ ಡಕ್‌ವರ್ತ್  ಸಹ ರಿಪಬ್ಲಿಕನ್ ಸೆನೆಟರ್‌ನನ್ನು  ಸೋಲಿಸಿ ಗೆಲುವು ಸಾಧಿಸಿದ್ದಾರೆ. ಆಕೆ ಯುದ್ಧಪಟು. ಇರಾಕ್‌ನಲ್ಲಿ ಎರಡೂ ಕಾಲುಗಳನ್ನು ಕಳೆದುಕೊಂಡವರು.ಮಾಜಿ ನಿರಾಶ್ರಿತೆ 34 ವರ್ಷದ  ಇಲ್ಹಾನ್ ಓಮರ್ ಅವರು ಮುಸ್ಲಿಂ ಧರ್ಮದ ಅನುಯಾಯಿ ಹಾಗೂ ಅಮೆರಿಕದ ಮೊದಲ ಸೊಮಾಲಿ ಅಮೆರಿಕನ್   ವಕೀಲೆ.  ತಮ್ಮ ರಿಪಬ್ಲಿಕನ್ ಪ್ರತಿಸ್ಪರ್ಧಿಯನ್ನು ಸದೆಬಡಿದು ಮಿನೆಸೊಟಾದ  ಹೌಸ್ ಆಫ್ ರೆಪ್ರೆಸೆಂಟಟಿವ್ಸ್‌ನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ ಎಂಬುದಷ್ಟೇ ಹೊಸ ಬೆಳಗು.ಅಮೆರಿಕನ್ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಸೆಕ್ಸಿಸಂ ಬಗ್ಗೆ ಅಮೆರಿಕ ಅಧ್ಯಕ್ಷ  ಬರಾಕ್ ಒಬಾಮ ಸಹ  ಎತ್ತಿ ಹೇಳಿದ್ದರು:  ‘ಹಿಲರಿ ಕ್ಲಿಂಟನ್‌ರನ್ನು  ಇತರ ಅಭ್ಯರ್ಥಿಗಳಿಗಿಂತ ನಿರಂತರವಾಗಿ ಬೇರೆ ರೀತಿಯೇ ಪರಿಭಾವಿಸಲಾಗುತ್ತದೆ.  ಆ ಮಹಾಶಯರುಗಳಿಗೆ ನಾನಿಷ್ಟೇ ಹೇಳಲು ಬಯಸುತ್ತೇನೆ. ನಾನು ಪ್ರಾಮಾಣಿಕನಾಗಿರಲು ಬಯಸುತ್ತೇನೆ.ಈ ಮುಂಚೆ ಮಹಿಳಾ ಅಧ್ಯಕ್ಷರನ್ನು ಹೊಂದಲು ಸಾಧ್ಯವಾಗದಿರುವುದಕ್ಕೆ ನಮಗೆ ಕಾರಣಗಳಿವೆ’.  ಆದರೂ ಅಮೆರಿಕದ 45ನೇ ಅಧ್ಯಕ್ಷರ ಆಯ್ಕೆಯ ವೇಳೆಯಲ್ಲೂ ಆ ಗಾಜಿನ ಚಾವಣಿಯನ್ನು  (ಗ್ಲಾಸ್ ಸೀಲಿಂಗ್ ) ಭೇದಿಸಲು ಕಡೆಗೂ ಸಾಧ್ಯವಾಗಲಿಲ್ಲ.   ದುಡಿಮೆಯ ಕ್ಷೇತ್ರದಲ್ಲಿ ಮಹಿಳೆ ಎದುರಿಸುವ ಅಗೋಚರ ಮಿತಿಗಳನ್ನು  ಈ  ಗಾಜಿನ ಚಾವಣಿಯ ಉಪಮೆ  ಪ್ರತಿನಿಧಿಸುತ್ತದೆ.  1980ರ ದಶಕದ ಆರಂಭದಲ್ಲಿ ಬಳಕೆಗೆ ಬಂದ ನುಡಿಗಟ್ಟು ಇದು.ಹಿಲರಿ ಪುರುಷನಾಗಿದ್ದರೆ ಗೆಲುವು ಸಾಧ್ಯವಾಗಿರುತ್ತಿತ್ತು. ಅವರ ಅಭ್ಯರ್ಥಿತನದ ವಿಚಾರದಲ್ಲಿ ಯಾವ ಪ್ರಶ್ನೆಗಳೂ ಇರುತ್ತಿರಲಿಲ್ಲ. ಅವರ ಸಾರ್ವಜನಿಕ ಬದುಕಿನ ಕುರಿತಂತೆ ಅವರ ಸಾಧನೆಗಳ ಮೇಲೆ ಬೆಳಕು ಚೆಲ್ಲಲಾಗುತ್ತಿತ್ತು.  ಹುದ್ದೆಯಲ್ಲಿದ್ದಾಗ ಆದ ಕೆಲವು ತಪ್ಪುಗಳ ಮೇಲೆ ಗಮನ ಕೇಂದ್ರೀಕೃತವಾಗುತ್ತಿರಲಿಲ್ಲ ಎಂಬುದು ಸಮಾಜದೊಳಗಿನ ತಾರತಮ್ಯ ನೀತಿಗಳನ್ನು ನಮಗೆ ಪರೋಕ್ಷವಾಗಿ ನೆನಪಿಸುತ್ತದೆ.‘ಮಹಿಳಾ ಹಕ್ಕುಗಳು ಮಾನವ ಹಕ್ಕುಗಳು’ ಎಂದು ರಾಷ್ಟ್ರಕ್ಕೆ, ವಿಶ್ವಕ್ಕೆ  ಮನದಟ್ಟು ಮಾಡಿಸಲು  ಜೀವನಪರ್ಯಂತ ಯತ್ನಿಸಿದ ಮಹಿಳೆಗಿಂತ  ಲೈಂಗಿಕ ಆಕ್ರಮಣಗಳ ಬಗ್ಗೆ ಕೊಚ್ಚಿಕೊಳ್ಳುವ ವ್ಯಕ್ತಿಯನ್ನೇ ಸಮಾಜ ಆಯ್ಕೆ ಮಾಡಿಕೊಳ್ಳುವಂತಾಗುವುದು ವಿಪರ್ಯಾಸ. ತಮ್ಮ ಸೋಲನ್ನೊಪ್ಪಿಕೊಂಡ ಭಾಷಣದಲ್ಲಿ ಹಿಲರಿ ಕ್ಲಿಂಟನ್ ಹೇಳಿದ ಮಾತುಗಳಿವು: ‘ಆ ಎತ್ತರದ ಹಾಗೂ ಗಟ್ಟಿಯಾದ ಗಾಜಿನ ಚಾವಣಿಯನ್ನು ನಮಗಿನ್ನೂ ಭೇದಿಸಲಾಗಿಲ್ಲ. ಆದರೆ ಮುಂದೊಂದು ದಿನ, ಯಾರಾದರೊಬ್ಬರು ಅದನ್ನು ಭೇದಿಸಿಯೇ ತೀರುತ್ತಾರೆ.’ ಆದರೆ ಆ ಹಾದಿ ಸುಲಭವಾಗಿಲ್ಲ. ಈಗಲೂ ವಿಶ್ವದ ಸಂಸತ್ ಪಟುಗಳಲ್ಲಿ ಕೇವಲ ಶೇ 22.8ರಷ್ಟು ಮಂದಿ ಮಾತ್ರ ಮಹಿಳೆಯರು ಎಂದು ವಿಶ್ವಸಂಸ್ಥೆ ವರದಿ ಹೇಳುವುದನ್ನು ಮರೆಯದಿರೋಣ.

ಪ್ರತಿಕ್ರಿಯಿಸಿ (+)