‘ದಾವೋಸ್‌’ನಲ್ಲಿ ಮತ್ತೆ ಅನುತ್ತೀರ್ಣ

7

‘ದಾವೋಸ್‌’ನಲ್ಲಿ ಮತ್ತೆ ಅನುತ್ತೀರ್ಣ

ಶೇಖರ್‌ ಗುಪ್ತ
Published:
Updated:
‘ದಾವೋಸ್‌’ನಲ್ಲಿ ಮತ್ತೆ ಅನುತ್ತೀರ್ಣ

ಈ ಹಿಂದೆ 2006 ಮತ್ತು 2011ರಲ್ಲಿ ಕ್ರಮವಾಗಿ ‘ಎಲ್ಲೆಡೆ ಭಾರತ’ ಮತ್ತು ‘ಭಾರತ ಸೇರ್ಪಡೆ’ ಘೋಷಣೆಯೊಂದಿಗೆ, ದಾವೋಸ್‌ನಲ್ಲಿ ನಡೆದಿದ್ದ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಮಾವೇಶದಲ್ಲಿ ಭಾಗವಹಿಸಿದ್ದ ಭಾರತ, ಈ ಬಾರಿ ಮೂರನೇ ಬಾರಿಗೆ ಸಾಕಷ್ಟು ಪೂರ್ವ ಸಿದ್ಧತೆಗಳೊಂದಿಗೆ ಪಾಲ್ಗೊಂಡಿತ್ತು. ಹಿಂದಿನ ಎರಡು ಸಮಾವೇಶಗಳಿಗೆ ಹೋಲಿಸಿದರೆ ಈ ಬಾರಿ ಸಮಾವೇಶಕ್ಕೆ ವಿಶೇಷ ಮಹತ್ವ ಪ್ರಾಪ್ತವಾಗಿತ್ತು. ಪ್ರಧಾನಿ ನರೇಂದ್ರ ಮೋದಿ ಅವರು ಭಾಗವಹಿಸಿದ್ದು ಈ ಬಾರಿಯ ವಿಶೇಷತೆಯಾಗಿತ್ತು. 1997ರಲ್ಲಿ ಪ್ರಧಾನಿಯಾಗಿದ್ದ ದೇವೇಗೌಡ ಅವರೂ ಸಮಾವೇಶದಲ್ಲಿ ಭಾಗವಹಿಸಿದ್ದರು. ಆಗ ಅದು ದೊಡ್ಡ ಸುದ್ದಿಯಾಗಿ ಗಮನ ಸೆಳೆದಿರಲಿಲ್ಲ.

ಮೋದಿ ಅವರು ತಮ್ಮ ವ್ಯಕ್ತಿತ್ವ ಮತ್ತು ವಾಕ್ಪಟುತ್ವಗಳ ಮೂಲಕ ವಿಶ್ವದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೋದಿ ಅವರಿಗೆ ಸಂಸತ್‌ನಲ್ಲಿ ದೊಡ್ಡ ಬಹುಮತ ಇದೆ. ಅವರ ಬಿಜೆಪಿ ಮತ್ತು ಮಿತ್ರಪಕ್ಷಗಳು 19 ರಾಜ್ಯಗಳಲ್ಲಿ ಅಧಿಕಾರ ನಡೆಸುತ್ತಿವೆ. ಇಂದಿರಾ ಗಾಂಧಿ ಅವರು ಕಾಂಗ್ರೆಸ್‌ ಪಕ್ಷವನ್ನು ಸಂಪೂರ್ಣವಾಗಿ ಹಿಡಿತದಲ್ಲಿ ಇಟ್ಟುಕೊಂಡಿದ್ದಂತೆ, ಮೋದಿ ಅವರೂ ಬಿಜೆಪಿ ಮೇಲೆ ಬಿಗಿ ನಿಯಂತ್ರಣ ಹೊಂದಿದ್ದಾರೆ. ವಿಶ್ವದಲ್ಲಿನ ಯಾವುದೇ ಪ್ರಜಾಸತ್ತಾತ್ಮಕ ದೇಶದಲ್ಲಿನ ಮುಖಂಡರು ಮೋದಿ ಅವರಂತೆ ಇಷ್ಟು ಪ್ರಭಾವಶಾಲಿಯಾಗಿರುವ ನಿದರ್ಶನಗಳಿಲ್ಲ.

ವಿದೇಶ ಪ್ರವಾಸಗಳನ್ನು ಇಷ್ಟಪಡುವ ಮೋದಿ, ಜಾಗತಿಕ ಗಣ್ಯರ ಜೊತೆ ಅಸಾಧಾರಣ ರೀತಿಯಲ್ಲಿ ಬಾಂಧವ್ಯ ವೃದ್ಧಿಸಿಕೊಂಡಿದ್ದಾರೆ. ಸರ್ಕಾರಿ ಮುಖ್ಯಸ್ಥರು ಭಾಗವಹಿಸುವ ಶೃಂಗಸಭೆಗಳಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ವಿಶ್ವ ಆರ್ಥಿಕ ವೇದಿಕೆಯ ಸಮಾವೇಶದಲ್ಲಿ ಇವರ ಉಪಸ್ಥಿತಿಯು ಜಾಗತಿಕ ಮುಖಂಡರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

ಗುಜರಾತ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿಯೂ ಮೋದಿ ಅವರು ಈ ಸಮಾವೇಶದಲ್ಲಿ ಮತ್ತು ‘ಬೇಸಿಗೆಯ ದಾವೋಸ್ ಸಮಾವೇಶ’ ಎಂದೇ ಕರೆಯಲಾಗುವ ಡಾಲಿಯನ್‌ ಸಮಾವೇಶದಲ್ಲಿಯೂ (2007) ಭಾಗವಹಿಸಿದ್ದರು. ಆ ಸಮಾವೇಶದಲ್ಲಿ ವಿಚಾರಗೋಷ್ಠಿಯೊಂದನ್ನು ನಿರ್ವಹಿಸುವ ಹೊಣೆಗಾರಿಕೆ ನನ್ನ ಪಾಲಿಗೆ ಒದಗಿ ಬಂದಿತ್ತು. ದೇಶದಲ್ಲಿನ ರಾಜಕೀಯ ವಿದ್ಯಮಾನಗಳ ಬಗ್ಗೆ ಕೇಳಿದ ಹಲವಾರು ಪ್ರಶ್ನೆಗಳಿಗೆ ಅವರು ನೀಡಿದ್ದ ಉತ್ತರ ಎಲ್ಲರ ಗಮನ ಸೆಳೆದಿತ್ತು. ‘ನಾನು ಯಾವುದೇ ಪಕ್ಷದ ಪರವಾಗಿ ಇಲ್ಲಿ ಭಾಗವಹಿಸಿಲ್ಲ. ಆಂತರಿಕ ವಿಷಯಗಳನ್ನು ಈ ಸಮಾವೇಶಕ್ಕೆ ಎಳೆದು ತಂದಿಲ್ಲ’ ಎಂದು ಸ್ಪಷ್ಟಪಡಿಸಿದ್ದರು. ಅವರ ಈ ನಿಲುವು ಅನೇಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ದೇಶಿ ಉದ್ದಿಮೆ ವಲಯದಲ್ಲಿ ಇವರ ಜನಪ್ರಿಯತೆ ಉತ್ತುಂಗದಲ್ಲಿ ಇದ್ದಾಗ, ಜಾಗತಿಕ ಸಮಾವೇಶಗಳಲ್ಲಿ ಭಾಗವಹಿಸಿ ವಿಶ್ವದ ಗಮನ ಸೆಳೆಯುವ ಇರಾದೆ ಮೋದಿ ಅವರಿಗೂ ಇತ್ತು. ಆದರೆ, ಆಂತರಿಕ ರಾಜಕೀಯವು ಮೋದಿ ಅವರ ದಾವೋಸ್‌ ಭೇಟಿ ಮೇಲೆ ಕರಿನೆರಳು ಬೀರಿತ್ತು. ವಿಶ್ವ ಆರ್ಥಿಕ ವೇದಿಕೆಯು ಮೋದಿ ಅವರಿಗೆ ಆಹ್ವಾನ ನೀಡುವುದು ಅಂದು ಕೇಂದ್ರದಲ್ಲಿ ಅಧಿಕಾರದಲ್ಲಿದ್ದ ಯುಪಿಎ ಸರ್ಕಾರಕ್ಕೆ ಅಪಥ್ಯವಾಗಿತ್ತು. ರಾಜಕೀಯ ಒತ್ತಡದ ಕಾರಣಕ್ಕೇನೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಮೋದಿ ಅವರು ನಂಬಲು ಸಕಾರಣಗಳಿದ್ದವು. ಇದೇ ಕಾರಣಕ್ಕೆ ಕಳೆದ ಮೂರು ವರ್ಷಗಳಿಂದ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರವು ದಾವೋಸ್‌ ಸಮಾವೇಶವನ್ನು ಉಪೇಕ್ಷಿಸುತ್ತಲೇ ಬಂದಿತ್ತು.

ಈ ಬಾರಿ ತನ್ನ ತಪ್ಪನ್ನು ತಿದ್ದಿಕೊಳ್ಳಲು ‘ಡಬ್ಲ್ಯುಇಎಎಫ್‌’ ಮುಂದಾಗಿತ್ತು. ಅದೇ ಕಾರಣಕ್ಕೆ ಈ ಬಾರಿ ಅವರನ್ನು ಸಮಾವೇಶಕ್ಕೆ ಆಹ್ವಾನಿಸಲಾಗಿತ್ತು. ಜಾಗತಿಕ ಮುಖಂಡರ ಅಪೇಕ್ಷೆಯೂ ಅದಾಗಿತ್ತು. ಕಳೆದ ವರ್ಷ ಚೀನಾ ಅಧ್ಯಕ್ಷ ಕ್ಸಿ ಜಿನ್‌ ಪಿಂಗ್‌ ಅವರು ಉದ್ಘಾಟನಾ ಭಾಷಣ ನೆರವೇರಿಸಿದ್ದರು. ಐದು ದಿನಗಳ ಅಧಿವೇಶನದಲ್ಲಿ ಈ ಬಾರಿ ಟ್ರಂಪ್‌, ತೆರೆಸಾ ಮೇ, ನೆತನ್ಯಾಹು ಮತ್ತು ಏಂಜೆಲಾ ಮರ್ಕೆಲ್‌ ಒಳಗೊಂಡಂತೆ ಜಾಗತಿಕ ಗಣ್ಯರ ದೊಡ್ಡ ದಂಡೇ ಭಾಗವಹಿಸಿತ್ತು.

ಮೋದಿ ಅವರ ಭಾಷಣ ಆಲಿಸಲು ಸಮಾವೇಶದ ಸಭಾಂಗಣ ಭರ್ತಿಯಾಗಿತ್ತು. ಡೊನಾಲ್ಡ್ ಟ್ರಂಪ್‌ ಅವರ ‘ಅಮೆರಿಕ ಮೊದಲು’ ನೀತಿ, ಕ್ಸಿ ಅವರ ಚೀನಾದ ಧೋರಣೆ ಮತ್ತು ಡೇಟಾದ ಮಹತ್ವ ಹೆಚ್ಚುತ್ತಿರುವ ಬಗ್ಗೆ ಮೋದಿ ಅವರು ಮಹತ್ವದ ವಿಷಯಗಳನ್ನು ಪ್ರಸ್ತಾಪಿಸಿದ್ದರು. ಜೊತೆಗೆ, ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ಜ್ಞಾನ ಭಂಡಾರ ಕುರಿತು ವಿಶ್ವ ಸಮುದಾಯಕ್ಕೆ ಉಪದೇಶವನ್ನೂ ನೀಡಿದ್ದರು.

ಮೋದಿ ಭಾಷಣವು ಸಮಾವೇಶದ ಉದ್ದಕ್ಕೂ ಚರ್ಚೆಯ ವಿಷಯವಾಗಿತ್ತು. ಅವರ ಭಾಷಣದ ಆಶಯವನ್ನು ಕೆಲಮಟ್ಟಿಗೆ ತಿರುಚಲಾಗಿತ್ತು. ಸಮಾವೇಶಕ್ಕೆ ಚಾಲನೆ ನೀಡಿದ ಅವರ ಭಾಷಣವು ದಾವೋಸ್‌ನಲ್ಲಿದ್ದ ಪ್ರತಿಯೊಬ್ಬ ಭಾರತೀಯನಲ್ಲೂ ಆಸಕ್ತಿ ಮೂಡಿಸಿತ್ತು. ಉತ್ತರಿಸುವ ಮುನ್ನವೇ ಪ್ರಶ್ನೆ ಕೇಳಿದವರೇ ತಮ್ಮ ಅಭಿಪ್ರಾಯ ಮಂಡಿಸುತ್ತಿದ್ದರು.

‘ಪಾಶ್ಚಿಮಾತ್ಯ ಮಾಧ್ಯಮಗಳು ಮೋದಿ ಭಾಷಣಕ್ಕೆ ನೀಡಬೇಕಾದ ಆದ್ಯತೆ ನೀಡಿಲ್ಲ. ಪಕ್ಷಪಾತ ಧೋರಣೆ ತಳೆದಿವೆ’ ಎಂದೂ ಕೆಲ ಭಾರತೀಯರು ದೂರುತ್ತಿದ್ದರು. ಆದರೆ, ವಾಸ್ತವ ಸಂಗತಿ ಬೇರೆಯೇ ಆಗಿತ್ತು. ಜಾಗತಿಕವಾಗಿ ಅತಿದೊಡ್ಡ ಉದ್ದಿಮೆ ಸಮುದಾಯವಾಗಿರುವ ಚೀನಾದ ಬಗ್ಗೆ ಪಶ್ಚಿಮದ ದೇಶಗಳು ಮಮಕಾರದ ನಿಲುವನ್ನೇನೂ ತಳೆದಿಲ್ಲ. ಚೀನಾದ ಮುನ್ನಡೆಗೆ ಭಾರತ ಯಶಸ್ವಿಯಾಗಿ ಸ್ಪರ್ಧೆ ನೀಡಬೇಕು ಮತ್ತು ತಮ್ಮ ಬಂಡವಾಳ ಹೂಡಿಕೆಗೆ ಅವಕಾಶ ಮಾಡಿಕೊಡಬೇಕು ಎನ್ನುವುದು ಅವುಗಳ ನಿಜವಾದ ಧೋರಣೆಯಾಗಿದೆ.

ಇತ್ತೀಚಿನ ಕೆಲ ವರ್ಷಗಳಲ್ಲಿ ಭಾರತ ಕುರಿತ ಅವುಗಳ ಪ್ರೀತಿ ಹೆಚ್ಚಿದೆ. ಅದರಲ್ಲೂ ವಿಶೇಷವಾಗಿ, ಬಹುರಾಷ್ಟ್ರೀಯ ಸಂಸ್ಥೆಗಳು ಚೀನಾದಲ್ಲಿ ನಷ್ಟಕ್ಕೆ ಗುರಿಯಾದ ನಂತರ ಭಾರತ ಕುರಿತು ಪಶ್ಚಿಮದ ದೇಶಗಳ ಧೋರಣೆಯಲ್ಲಿ ಗಮನಾರ್ಹ ಬದಲಾವಣೆ ಕಂಡು ಬಂದಿದೆ. ಹೀಗಾಗಿ ಅವುಗಳ ನಿರೀಕ್ಷೆಯೂ ಹೆಚ್ಚಿದೆ. ಭಾರತವು ಯಶಸ್ಸಿನ ದಾಪುಗಾಲು ಹಾಕಬೇಕು ಎನ್ನುವುದು ಅವುಗಳ ಇಚ್ಛೆಯಾಗಿದೆ.

ಭಾರತವು ಅತಿಯಾದ ಭರವಸೆ ನೀಡುತ್ತಿದೆ, ಆದರೆ ಅದರ ಸಾಧನೆ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿರುವುದು ಜಾಗತಿಕ ಸಮುದಾಯದ ಚಿಂತೆಗೆ ಕಾರಣವಾಗಿದೆ. ಮೋದಿ ಅವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುತ್ತಿದ್ದಂತೆ ಆರ್ಥಿಕ ಸುಧಾರಣಾ ಕ್ರಮಗಳು ವೇಗ ಪಡೆಯಲಿವೆ ಎಂದು ನಿರೀಕ್ಷಿಸಲಾಗಿತ್ತು. ಆರ್ಥಿಕತೆ ಸ್ಥಿರಗೊಳ್ಳಲಿದೆ ಎಂದೂ ಭಾವಿಸಲಾಗಿತ್ತು.

ದಾವೋಸ್‌ನಲ್ಲಿ ಈ ಬಾರಿ ಇತ್ತೀಚಿನ ದಿನಗಳಲ್ಲಿಯೇ ಕಾಣದ ಸಂಭ್ರಮ ಮತ್ತು ಆಶಾವಾದ ಹೆಚ್ಚಿನ ಮಟ್ಟದಲ್ಲಿ ಕಂಡುಬಂದಿತ್ತು. ಜಾಗತಿಕ ಆರ್ಥಿಕ ವೃದ್ಧಿ ದರವು ಮತ್ತೆ ಉತ್ಕರ್ಷದ ಹಾದಿಗೆ (ಶೇ 3.9) ಮರಳಿರುವುದು ಉತ್ಸಾಹ ಹೆಚ್ಚಿಸಿದೆ. ಅನೇಕ ಒಪ್ಪಂದಗಳಿಗೂ ಸಮಾವೇಶವು ಸಾಕ್ಷಿಯಾಗಿತ್ತು. ವಿಶ್ವದ ಒಟ್ಟಾರೆ ಪರಿಸ್ಥಿತಿ ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಅಲ್ಲಿ ವಿಚಾರ ಮಂಥನ ನಡೆದಿತ್ತು. ಆದರೆ, ನಮ್ಮ ಸಂಸ್ಕೃತಿ, ಪ್ರಾಚೀನ ಜ್ಞಾನದ ಬಗ್ಗೆ ವಿಶ್ವಕ್ಕೆ ಉಪದೇಶ ನೀಡಲು ಅದು ಸೂಕ್ತ ವೇದಿಕೆಯಾಗಿರಲಿಲ್ಲ.

ಸಮಾವೇಶದಲ್ಲಿ ಭಾರತೀಯರ ಉಪಸ್ಥಿತಿಯೂ ಗರಿಷ್ಠ ಪ್ರಮಾಣದಲ್ಲಿತ್ತು. ಕೇಂದ್ರ ಸರ್ಕಾರ, ಭಾರತೀಯ ವಾಣಿಜ್ಯೋದ್ಯಮ ಒಕ್ಕೂಟ (ಸಿಐಐ), ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಮಹಾರಾಷ್ಟ್ರದ ದೇವೇಂದ್ರ ಫಡಣವೀಸ್‌, ಟಿಸಿಎಸ್, ಇನ್ಫೊಸಿಸ್‌ ಮತ್ತು ವಿಪ್ರೊದ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

ಮೋದಿ ಅವರ ಭಾಷಣಕ್ಕೆ ಸಂಬಂಧಿಸಿ ಹೇಳುವುದಾದರೆ, ಉತ್ತಮ ಸಂದೇಶವನ್ನೇನೋ ಅವರು ನೀಡಿದರು. ಆದರೆ, ಸರಕಿನ ಬಗ್ಗೆ ಹೇಳಿಕೊಳ್ಳುವುದಕ್ಕಿಂತ ಅದನ್ನು ಮಾರಾಟ ಮಾಡುವುದು ಮುಖ್ಯವಾಗಿರುತ್ತದೆ. ಶೇ 7 ಅಥವಾ ಅದಕ್ಕಿಂತ ಹೆಚ್ಚಿನ ಆರ್ಥಿಕ ವೃದ್ಧಿ ದರ ಸಾಧಿಸುವುದು ಉತ್ತಮ ಬೆಳವಣಿಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಭಾರತವು ಚೀನಾದ ಆರ್ಥಿಕತೆಗೆ ಹೋಲಿಸಿದರೆ ಅದರ ಐದನೇ ಒಂದು ಅಂಶದಷ್ಟು (1/5) ಮತ್ತು ಜನಸಂಖ್ಯೆ ಹೆಚ್ಚುಕಡಿಮೆ ಸಮಾನವಾಗಿರುವಾಗ, ಅದಕ್ಕೆ ಅದರದ್ದೇ ಆದ ಇತಿಮಿತಿಗಳಿವೆ. ಈ ಜಗತ್ತು ತುಂಬ ಕ್ರೂರವಾಗಿದೆ. ಅದು ತುಂಬ ಕಠಿಣ ಪ್ರಶ್ನೆಗಳನ್ನೂ ಕೇಳುತ್ತದೆ. ಮೋದಿ ಸರ್ಕಾರವು ತುಂಬ ಬಲಿಷ್ಠವಾಗಿದ್ದರೆ, ವೊಡಾಫೋನ್‌ಗೆ ಸಂಬಂಧಿಸಿದಂತೆ ಪೂರ್ವಾನ್ವಯಗೊಳಿಸಿ ಜಾರಿಗೆ ತಂದಿದ್ದ ತೆರಿಗೆ ಕಾಯ್ದೆ ತಿದ್ದುಪಡಿ ರದ್ದುಪಡಿಸಲು ಇದುವರೆಗೂ ಏಕೆ ಸಾಧ್ಯವಾಗಿಲ್ಲ ಎನ್ನುವ ಪ್ರಶ್ನೆಯೂ ಇಲ್ಲಿ ಉದ್ಭವವಾಗುತ್ತದೆ.

ಒಂದು ದಶಕದ ಹಿಂದೆ ಭಾರತವು ಇಲ್ಲಿ ದೊಡ್ಡದಾಗಿ ಸದ್ದು ಮಾಡಿದಾಗ ದೇಶದ ಆರ್ಥಿಕ ವೃದ್ಧಿ ದರ ಶೇ 9ಕ್ಕಿಂತ (ಹಳೆಯ ಸೂತ್ರದಡಿ ಲೆಕ್ಕ ಹಾಕಿದ್ದು) ಹೆಚ್ಚಿಗೆ ಇತ್ತು. ತಂತ್ರಜ್ಞಾನ ಸಂಸ್ಥೆಗಳ ಉತ್ಕರ್ಷ ಪರಾಕಾಷ್ಠೆಯಲ್ಲಿತ್ತು. ಹೊರಗುತ್ತಿಗೆಯು ಬೆಂಗಳೂರಿಗೆ ‘ಸಿಲಿಕಾನ್‌ ವ್ಯಾಲಿ’ ಖ್ಯಾತಿಯನ್ನು ತಂದುಕೊಟ್ಟಿತ್ತು.

‘ನೇಮಕಗೊಂಡ ಪ್ರಧಾನಿ’ಯಾಗಿದ್ದ ಮನಮೋಹನ್‌ ಸಿಂಗ್‌ ಅವರಲ್ಲಿ ಮೋದಿ ಅವರ ವಾಕ್ಪಟುತ್ವದ ಒಂದಂಶವೂ ಇದ್ದಿರಲಿಲ್ಲ. ಆದರೂ ಅವರು ಕೆಲಮಟ್ಟಿಗೆ ಸುದ್ದಿ ಮಾಡಲು ಇಷ್ಟಪಟ್ಟಿದ್ದರು. ಆದರೆ, ಜಾಗತೀಕರಣ ವಿರೋಧಿ ಎಡಪಕ್ಷಗಳು ಅವರ ಕೈ ಕಟ್ಟಿಹಾಕಿದ್ದವು. ಹಾಗೊಂದು ವೇಳೆ ಸರ್ಕಾರ ದಿಟ್ಟ ಆರ್ಥಿಕ ಸುಧಾರಣಾ ಕ್ರಮಗಳನ್ನು ಕೈಗೊಳ್ಳಲು ಮುಂದಾದರೆ ಸರ್ಕಾರಕ್ಕೆ ನೀಡಿದ್ದ ಬೆಂಬಲ ಹಿಂತೆಗೆದುಕೊಳ್ಳುವುದಾಗಿಯೂ ಎಡಪಕ್ಷಗಳು ಬೆದರಿಸಿದ್ದವು ಎಂದು ರಾಹುಲ್‌ ಬಜಾಜ್‌ ಅವರು ದಾವೋಸ್‌ನಲ್ಲಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ಎಡಪಕ್ಷಗಳು ತಳೆದಿದ್ದ ನಿಲುವು ನಿಜಕ್ಕೂ ದುರಂತವೇ ಸೈ.

ಸದ್ಯಕ್ಕೆ ನಾವು ವರ್ಚಸ್ವಿ ವ್ಯಕ್ತಿತ್ವದ ಮತ್ತು ಜಾಗತಿಕ ಮನ್ನಣೆಗೆ ಪಾತ್ರನಾಗಿರುವ ಮುಖಂಡನನ್ನು ಹೊಂದಿದ್ದೇವೆ. ಯಾವ ಸಂದೇಶವನ್ನು ಯಾವಾಗ ಮತ್ತು ಹೇಗೆ ನೀಡಬೇಕು ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ, ಅವರು ಮಾರಾಟ ಮಾಡಲು ಹೊರಟಿರುವ ಉತ್ಪನ್ನವು ಜಾಗತಿಕ ಮಾರುಕಟ್ಟೆಯಲ್ಲಿ ಅಷ್ಟೇನೂ ಗಮನ ಸೆಳೆಯುತ್ತಿಲ್ಲ.

2006 ರಿಂದ 2011 ಮತ್ತು 2018ರವರೆಗೆ ಭಾರತದ ಔನ್ನತ್ಯವು ಸಮೃದ್ಧ ಆಹಾರ ಉತ್ಪಾದನೆ, ಬಾಲಿವುಡ್‌ನ ಜನಪ್ರಿಯತೆ, ಕರಕುಶಲ ಸರಕು, ಧಾರ್ಮಿಕತೆ ಮತ್ತು ಈಗ ಯೋಗದ ಸುತ್ತ ಗಿರಕಿ ಹೊಡೆಯುತ್ತಿದೆ. ಅಂತರ್‌ರಾಷ್ಟ್ರೀಯ ಬಾಂಧವ್ಯದ ವಿಷಯದಲ್ಲಿ ಒಲಿಸುವ ಮತ್ತು ಒಪ್ಪಿಸಬಹುದಾದ ಧೋರಣೆಗೆ ಅದರದ್ದೇ ಆದ ಮಿತಿಗಳಿವೆ. ಇದರಿಂದ ದೇಶವೊಂದನ್ನು ಮಹತ್ವಾಕಾಂಕ್ಷೆಯ ಮಟ್ಟಕ್ಕೆ ಕೊಂಡೊಯ್ಯುವುದಕ್ಕೆ ಅಡಚಣೆಗಳು ಎದುರಾಗುತ್ತವೆ.

ಇಂತಹ ನಿಲುವು ಥಾಯ್ಲೆಂಡ್‌ನಂತಹ ದೇಶಗಳಿಗೆ ಹೆಚ್ಚು ಪ್ರಯೋಜನಕ್ಕೆ ಬರುತ್ತವೆ. ಕಳೆದ ವರ್ಷ ಭಾರತಕ್ಕೆ 1.2 ಕೋಟಿ ವಿದೇಶಿಯರು ಭೇಟಿ ನೀಡಿದ್ದರೆ, ಥಾಯ್ಲೆಂಡ್‌ಗೆ ಭೇಟಿ ನೀಡಿದವರ ಸಂಖ್ಯೆ 3.6 ಕೋಟಿಗಳಷ್ಟಿದೆ. ವೈದ್ಯಕೀಯ ಪ್ರವಾಸೋದ್ಯಮದ ಜಾಗತಿಕ ಕೇಂದ್ರವಾಗಿ ಥಾಯ್ಲೆಂಡ್‌ ಬೆಳೆಯುತ್ತಿದೆ. ಬೈಪಾಸ್‌, ಅಂಗಾಂಗ ಜೋಡಣೆ ಮತ್ತು ವ್ಯಸನ ಮುಕ್ತಗೊಳಿಸುವ ಕ್ಷೇತ್ರಗಳಲ್ಲಿ ಥಾಯ್ಲೆಂಡ್‌ ಸಾಧನೆ ಭಾರತಕ್ಕಿಂತ ಹೆಚ್ಚಾಗಿದೆ. ಈ ಮಧ್ಯೆ, ಭಾರತವು ಬಲವಂತದಿಂದ ತಾನಾಗಿ ಹೇರಿಕೊಂಡ ಸಾಮಾಜಿಕ ವೈಷಮ್ಯಗಳ ವಿರೋಧಾಭಾಸಗಳ ಮಧ್ಯೆ ಸಿಲುಕಿ ಒದ್ದಾಡುತ್ತಿದೆ.

ಭಾರತವು ಈಗ ಶಕ್ತಿಯುತ ಅಧಿಕಾರದ ದನಿಯಲ್ಲಿ ಮಾತನಾಡಬೇಕು ಎಂದು ವಿಶ್ವ ಸಮುದಾಯ ಬಯಸುತ್ತಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ತನಗೆ ಶಾಶ್ವತ ಸ್ಥಾನ ನೀಡಬೇಕು ಎಂದು ಕೇಳುತ್ತಿರುವ ಭಾರತವು, ಇಂತಹ ಜಾಗತಿಕ ವೇದಿಕೆಗಳಲ್ಲಿ ತನ್ನ ಇಚ್ಛೆಯನ್ನು ಒತ್ತಿ ಹೇಳಲು ಮಾತ್ರ ಹಿಂಜರಿಯುತ್ತಿದೆ. ಸಾರ್ವಭೌಮ ದೇಶಗಳ ಜಲ ಗಡಿ ಗೌರವಿಸುವ, ನೌಕೆಗಳ ಸಂಚಾರ ಸ್ವಾತಂತ್ರ್ಯ, ಪ್ರಾದೇಶಿಕ ಹಕ್ಕುಗಳು, ಜಾಗತಿಕ ನ್ಯಾಯಾಂಗದಲ್ಲಿ ನಿಯಮಗಳನ್ನು ಆಧರಿಸಿದ ವ್ಯವಸ್ಥೆ – ಹೀಗೆ ವಿವಿಧ ವಿಷಯಗಳ ಬಗ್ಗೆ ತನ್ನ ನಿಲುವನ್ನು ಗಟ್ಟಿ ದನಿಯಲ್ಲಿ ಹೇಳಲು ಭಾರತ ಹಿಂಜರಿಯಬಾರದು. ಈ ವಿಷಯಗಳ ಬಗ್ಗೆ ಮೋದಿ ಅವರು ದೊಡ್ಡದನಿಯಲ್ಲಿ ಮಾತನಾಡಿದ್ದರೆ ಭಾರತವು ಖಂಡಿತವಾಗಿಯೂ ವಿಶ್ವದ ಗಮನವನ್ನು ಇನ್ನೂ ಹೆಚ್ಚಾಗಿ ಸೆಳೆಯುತ್ತಿತ್ತು. ಅದಕ್ಕೆ ಮೋದಿ ಅವರು ಅರ್ಹರಾಗಿದ್ದರು ಕೂಡ.

ಈ ವಾರದ ಇನ್ನೊಂದು ವಿಶೇಷತೆ ಏನೆಂದರೆ, ಭಾರತವು ದಾವೋಸ್‌ನಲ್ಲಿ ಮೃದು ಧೋರಣೆ ಮತ್ತು ಇತ್ತ ಸ್ವದೇಶದಲ್ಲಿ ಗಣರಾಜ್ಯೋತ್ಸವ ಸಮಾರಂಭದಲ್ಲಿ 10 ಆಸಿಯಾನ್‌ ದೇಶಗಳ ಮುಖಂಡರ ಜತೆಗಿನ ಭೇಟಿಯಲ್ಲಿ ರಾಜತಾಂತ್ರಿಕ ಕೌಶಲ್ಯ ಮೆರೆದಿದೆ. ಪೂರ್ವದ ಪ್ರಭಾವಿ 10 ದೇಶಗಳ ಜೊತೆಗೆ ಬಾಂಧವ್ಯ ವೃದ್ಧಿಸಲು ಮುಂದಾಗಿದೆ. ಜಲಗಡಿ ಕುರಿತು ಅಂತರ್‌ರಾಷ್ಟ್ರೀಯ ನಿಯಮಗಳ ಪಾಲನೆ, ಸಾರ್ವಭೌಮತ್ವ ಗೌರವಿಸುವ ನೀತಿಯು ಭಾರತವು ಪೂರ್ವದತ್ತ ನೋಡಲು ನೆರವಾಗಲಿದೆ.

ಕಳೆದ ಒಂದು ದಶಕದಲ್ಲಿ ಭಾರತವು ವಿಶ್ವ ಸಮುದಾಯಕ್ಕೆ ಅತಿಯಾದ ಭರವಸೆ ನೀಡಿ, ನಿರೀಕ್ಷೆಗಿಂತ ಕಡಿಮೆ ಮಟ್ಟದ ಸಾಧನೆ ತೋರುತ್ತ ಬಂದಿದೆ. ಈ ಬಾರಿಯೂ ದಾವೋಸ್‌ನಲ್ಲಿ ಅಂತಹ ದೋರಣೆಯೇ ಕಂಡು ಬಂದಿದೆ. ಹೀಗಾಗಿ ದಾವೋಸ್‌ ಪರೀಕ್ಷೆಯಲ್ಲಿ ಮತ್ತೊಮ್ಮೆ ಅನುತ್ತೀರ್ಣಗೊಂಡಿದೆ. ಭಾರತಕ್ಕೆ ಸಂಬಂಧಿಸಿದ ಅಧಿವೇಶನಗಳಲ್ಲಿ ಭಾಗವಹಿಸಿದವರ ಚಿಂತನೆಗಳು ಈಗಲೂ 10 ವರ್ಷಗಳಷ್ಟು ಹಳೆಯದಾಗಿವೆ. ಹೊಸ ಚಿಂತನೆಗಳ ಹಾದಿಗೆ ಮರಳುವವರೆಗೆ ಭಾರತವು, ತನ್ನ ಬೆನ್ನನ್ನು ತಾನೇ ತಟ್ಟಿಕೊಳ್ಳುವ ಹಳೆಯ ಚಾಳಿಯಿಂದ ಹೊರ ಬರಲು ಸಾಧ್ಯವಾಗುವುದಿಲ್ಲ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry